ಬೆಂಕಿ ಬಿದ್ದ ಹುಲ್ಲಿನ ದಾರಿಯಲ್ಲಿ: ಕುಂತಿಬೆಟ್ಟ

ಬೆಂಕಿ ಬಿದ್ದ ಹುಲ್ಲಿನ ದಾರಿಯಲ್ಲಿ: ಕುಂತಿಬೆಟ್ಟ

[೧೩ ಚಿತ್ರ ಮತ್ತು ಎರಡು ವೀಡಿಯೋ ಇವೆ. ನೋಡಿ. ಇವನ್ನು ನಾನೇ ಸೇರಿಸುವಷ್ಟು ಕೌಶಲ ಇಲ್ಲ. ಗೆಳೆಯ ನಾಡಿಗ್ ಅವನ್ನೆಲ್ಲ ಸೇರಿಸುತ್ತೇನೆ ಅಂದಿದ್ದಾರೆ.]

ನಿನ್ನೆ, ೧೫ ಜನವರಿ ೨೦೦೬, ಕುಂತಿ ಬೆಟ್ಟಕ್ಕೆ ಹೋಗಿದ್ದೆ.

ಕುಂತಿ ಬೆಟ್ಟ ಪಾಂಡವಪುರದ ಹತ್ತಿರ ಇದೆ. ಮೈಸೂರಿನಿಂದ ಹೋಗುವುದಾದರೆ ಶ್ರೀರಂಗಪಟ್ಟಣ ದಾಟಿದ ಕೂಡಲೆ ಎಡಕ್ಕೆ ತಿರುಗಿ, ಬೆಂಗಳೂರಿನ ಕಡೆಯಿಂದ ಹೋಗುವುದಾದರೆ ಶ್ರೀರಂಗಪಟ್ಟಣಕ್ಕೆ ಮೊದಲೇ ಬಲಕ್ಕೆ ತಿರುಗಿ, ಪಾಂಡವಪುರ ರೇಲ್ವೇ ಸ್ಟೇಶನ್ನಿನ ಮುಂದಿನ ರಸ್ತೆಯಲ್ಲಿ ಸಾಗಿ, ಪಾಂಡವಪುರ ಊರು ಸೇರಿ, ಅಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂದಿನ ಸರ್ಕಲಿನಲ್ಲಿ ಬಲಕ್ಕೆ ತಿರುಗಿ ಎರಡು ಕಿಮೀ ಸಾಗಿದರೆ ನಿಮ್ಮ ಎಡ ಬದಿಗೆ ಒಂದು ಕಮಾನು ಗೇಟು, ಮತ್ತು ಅದರ ಮೇಲೆ ಕುಂತಿ ಬೆಟ್ಟ ಎಂದು ಬರೆದಿರುವುದು ಕಾಣುತ್ತದೆ. ಸುಮಾರು ಒಂದು ಕಿಮೀ ಸಾಗಿದರೆ ನಿಮ್ಮ ಎಡಗಡೆ ಒಂದು ಜೂನಿಯರ್ ಕಾಲೇಜಿನ ಬಿಲ್ಡಿಂಗ್, ಅಲ್ಲೇ ಮುಂದೆ ಮೆಟ್ಟಿಲುಗಳು.

ಕುಂತಿಬೆಟ್ಟದಲ್ಲಿ ನಂದಿ
 

ಮೆಟ್ಟಿಲುಗಳು ಒಂದು ನೂರು ಹತ್ತಿದರೆ ಸಮತಟ್ಟಾದ ಜಾಗ. ಮರಗಳ ಗುಂಪು, ಒಂದು ನೀರಿನ ಹೊಂಡ, ಒಂದೆರಡು ಹಳೆಯ ದೇವಾಲಯಗಳು, ಒಂದು ಕಲ್ಯಾಣ ಮಂಟಪ ಕಾಣುತ್ತವೆ. ಸುದಾರಿಸಿಕೊಳ್ಳಲು, ಸುಮ್ಮನೆ ಕೂರಲು ಒಳ್ಳೆಯ ಜಾಗ. ಅಲ್ಲೇ ದೊಡ್ಡ ಬಂಡೆಯ ಮೇಲೆ ಗಣೇಶನನ್ನು ಕೆತ್ತಿದ್ದಾರೆ. ಗಣೇಶನ ಎಡ ಬದಿಗೆ ಒಂದು ಪುಟ್ಟ ಆವರಣದಲ್ಲಿ ದೊಡ್ಡ ನಂದಿಯ ವಿಗ್ರಹ ಇದೆ.

 

ಒನಕೆ ಬೆಟ್ಟದ ಇಳಿಜಾರು

ದೇವಾಲಯಗಳ ಹಿಂದೆ ಇರುವುದೇ ಕುಂತಿ ಬೆಟ್ಟ. ಬೆಟ್ಟ ಅನ್ನುವ ಹೆಸರು ಕೊಡುವಷ್ಟು ದೊಡ್ಡದಲ್ಲ, ಗುಡ್ಡದ ಹಾಗೆ ಇದೆ. ಕುಂತಿ ಬೆಟ್ಟಕ್ಕೆ ಮುಖ ಮಾಡಿ ನಿಂತರೆ ನಮ್ಮ ಬೆನ್ನ ಹಿಂದೆ ಇನ್ನೊಂದು ಸ್ವಲ್ಪ ದೊಡ್ಡ ಗುಡ್ಡ. ಅದನ್ನು ಒನಕೆ ಬೆಟ್ಟ ಅನ್ನುತ್ತಾರಂತೆ. ಇವಕ್ಕೆ ಯಾಕೆ ಆ ಹೆಸರು ಬಂತೋ ಗೊತ್ತಿಲ್ಲ. ಕುಂತಿ ಬೆಟ್ಟ, ಪಾಂಡವ ಪುರ ಇವುಗಳನ್ನು ನೋಡಿದರೆ ನಮ್ಮ ಜನ ಮಹಾಭಾರತ ಇಲ್ಲೂ ನಡೆದಿತ್ತು ಅನ್ನುವ ಭಾವನಾತ್ಮಕತೆಯಿಂದ ಆ ಹೆಸರುಗಳನ್ನು ಕೊಟ್ಟಿರಬಹುದು ಅನ್ನಿಸುತ್ತದೆ. ಆದರೆ ನೆನಪು ಬೇರೆ ಇನ್ನೂ ಕತೆಗಳನ್ನು ಹೇಳುತ್ತದೆ. ಪಾಂದವ ಪುರ ಮೊದಲಿಗೆ ಈರೋಡು ಎಂದು ಕರೆಸಿಕೊಳ್ಳುತ್ತಿತ್ತು ಎಂದು ನಮ್ಮ ಅಪ್ಪ ಹೇಳುತ್ತಿದ್ದರು. ಆಮೇಲೆ ಟಿಪ್ಪೂನ ಕಾಲದಲ್ಲಿ ಇಂಗ್ಲಿಷರ ವಿರುದ್ಧ ಅವನ ಯುದ್ಧಕ್ಕೆ ನೆರವು ನೀಡಲು ಬಂದ ಫ್ರೆಂಚ್ ಸೈನ್ಯ ಬೀಡು ಬಿಟ್ಟ ಜಾಗವೂ ಇದೇ. ಅದನ್ನು ಫ್ರೆಂಚ್ ರಾಕ್ಸ್ ಅನ್ನುತ್ತಿದ್ದರು. ಎಂಎ ಓದುವ ಕಾಲಕ್ಕೆ, ೧೯೭೩ರ ಸುಮಾರಿನಲ್ಲಿ ಪಾಂಡವ ಪುರ ಸಕ್ಕರೆ ಕಾರ್ಖಾನೆಯ ಹಿಂಭಾಗದಲ್ಲಿ, ರೇಲು ರಸ್ತೆಯ ಪಕ್ಕ ಇಗೋ ಇಲ್ಲಿ ಫ್ರೆಂಚ್ ಸೈನ್ಯ ಇತ್ತು, ಇಲ್ಲಿ ಬ್ರಿಟಿಷ್ ಸೈನ್ಯ ಇತ್ತು ಎಂಬ ಬೋರ್ಡುಗಳಿದ್ದವು. ರೈಲಿನಲ್ಲಿ ಓಡಾಡುವಾಗೆಲ್ಲ ಅದನ್ನು ನೋಡುತ್ತಿದ್ದ ನೆನಪು ಇದೆ. ಈಗ ಆ ಬೋರ್ಡುಗಳು ಇಲ್ಲ.
ಇರಲಿ, ಕುಂತಿ ಬೆಟ್ಟ ಸಮುದ್ರ ಮಟ್ಟದಿಂದ ೨೨೦೦ ಅಡಿ ಎತ್ತರ ಎಂದು ಕೆಲವೆಡೆಗಳಲ್ಲಿ ಓದಿದ್ದೇನೆ. ಆದರೆ ಪಾಂಡವ ಪುರ, ಮತ್ತು ಏರಿ ಬಂದ ಮೆಟ್ಟಿಲುಗಳನ್ನು ಬಿಟ್ಟರೆ ದೇವಾಲಯದ ಹಿಂದೆ ಸುಮಾರು ೨೫೦-೩೦೦ ಅಡಿ ಎತ್ತರದ ಗುಡ್ಡ. 

ಇಲ್ಲಿ ಚೆಲುವು ಇರುವುದು ಗುಡ್ಡದ ಬಂಡೆಗಳ ಆಕಾರಗಳಲ್ಲಿ. ನಿಮ್ಮ ನಿಮ್ಮ ಕಲ್ಪನೆಗೆ ಅನುಗುಣವಾಗಿ ಯಾವ ಯಾವ ಆಕಾರದ ಕಲ್ಲುಗಳೆಲ್ಲ ಇವೆ!
ಹತ್ತಿದೆವು ನಾವು ಎಂಟು ಜನ. ತಂಡದ ಚಿಕ್ಕ ಸದಸ್ಯೆ ೧೨ ವರ್ಷದ ಶಿವಗಂಗಾ. ಜಾಂಬವಂತ ನಾನೇ. ನನ್ನ ಜೊತೆ ನನ್ನ ಶ್ರೀಮತಿ. ಆಕೆ ಅರ್ಧ ಹತ್ತಿ ಸುಸ್ತಾಗಿ ಕುಳಿತಳು. ಅವಳೊಡನೆ ಇನ್ನೊಬ್ಬ ಹದಿ ಹರೆಯದ ನಾಗರಿಕ ಹುಡುಗ ಕೂಡ ಹತ್ತಲಾರದೆ ಉಳಿದ. ಉಳಿದಂತೆ ನಾನು, ನನ್ನೊಡನೆ ಹದಿ ಹರೆಯದ ನಮ್ಮ ಕುಟುಂಬದ ಸದಸ್ಯರು.

ದೇವಾಲಯದ ಎದುರು, ಕಲ್ಲಿನ ಗಣೇಶ

ನಾನು ಬೆಟ್ಟ ಹತ್ತಿ ಸುಮಾರು ಹತ್ತು ವರ್ಷಗಳೇ ಕಳೆದಿವೆ. ಹಂಪಿಯ ವಿವಿಯಲ್ಲಿದ್ದಾಗ ಅಲ್ಲಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರತಿವಾರವೂ ಸುತ್ತ ಮುತ್ತಲ ಗುಡ್ಡಗಳನ್ನು ಹತ್ತಿ ಇಳಿಯುತ್ತಿದ್ದೆ. ಪರವಾಗಿಲ್ಲ, ಈಗಲೂ ನನ್ನ ದೇಹ ನನ್ನ ಮನಸ್ಸಿನ ಮಾತು ಕೇಳುತ್ತದೆ, ಕಿರುಗುಟ್ಟದೆ ಆಜ್ಞೆಗಳನ್ನು ಪಾಲಿಸುತ್ತದೆ ಅಂತ ಜಂಬ, ಹೆಮ್ಮ ಕೂಡ ಆಯಿತು.
ಹತ್ತುವುದು ಛಾಲೆಂಜು ಯಾಕೆಂದರೆ ದಾರಿ ಅಂತ ಯಾವುದೂ ಇಲ್ಲ. ನಾನು ಮತ್ತು ಇನ್ನೊಬ್ಬಾತ ದೇವಾಲಯದ ಹಿಂದೆ ಎಡ ಬದಿಯಿಂದ ಅರ್ಧ ಗುಡ್ಡ ಏರಿ ಮುಂದ ಸಾಗಲಾರದೆ ಅಲ್ಲೇ ಬಲಕ್ಕೆ ತಿರುಗಿ ಬೆಟ್ಟವನ್ನು ಅರ್ಧ ಬಳಸಿ, ಇನ್ನೊಂದು ದಿಕ್ಕಿನಿಂದ ಏರುತ್ತಿದ್ದವರನ್ನು ಸೇರಿ ಮತ್ತೆ ಮೇಲೆ ಸಾಗಿದೆವು.

ದೇವಾಲಯ

ನಮಗೆ ಇದ್ದದ್ದು ಒಂದೇ ಗುರುತು. ಅದೂ ನಾವಾಗಿಯೇ ಕಂಡುಕೊಂಡದ್ದು. ದಟ್ಟವಾಗಿ ಬೆಳೆದಿದ್ದ ಹುಲ್ಲನ್ನು ಅಲ್ಲಲ್ಲಿ ಸುಟ್ಟಿದ್ದರು. ಆ ಸುಟ್ಟ ಜಾಡನ್ನೇ ಹಿಡಿದು ಹೊರಟರೆ ತುದಿ ತಲುಪಬಹುದು ಅನ್ನಿಸಿತು. ಹಾಗೇ ಮಾಡಿದೆವು.

ನಿಶ್ಶಬ್ದ. ನಾವು ಆಡುವ ಮಾತುಗಳನ್ನು ಬಿಟ್ಟರೆ ಬೇರೆ ಸದ್ದಿಲ್ಲ. ಆಡುವ ಮಾತು ಕೂಡ ದಾರಿಯನ್ನು ಕುರಿತದದ್ದೇ. ಪ್ರತಿ ಕ್ಷಣವೂ ಕಾಲಿಡುವ ಜಾಗದ ಬಗ್ಗೆ ಎಚ್ಚರ, ಪ್ರತಿಕ್ಷಣವೂ ತಗ್ಗಿದ ತಲೆಗೆ ಕಾಣುವ ಹೆಜ್ಜಯಗಲದ ನೆಲವೇ ಇಡೀ ಜಗತ್ತು. ವರ್ತಮಾನದಲ್ಲಿ ಮಗ್ನವಾಗುವುದು ಎಂದರೇನು ಅಂತ ತಿಳಿಯಲು ಹೀಗೆ ಆಗಾಗ ಬೆಟ್ಟ ಹತ್ತಿ ನೋಡಬೇಕು. ಗೊತ್ತಿರದ ಜಾಗದಲ್ಲಿ, ರಸ್ತೆ ಇಲ್ಲದ ಬೆಟ್ಟ ಹತ್ತಿ ನೋಡಬೇಕು.

ಆಗಾಗ ಹಿಂದಿರುಗಿ ನೋಡಿದರೆ ಮರಕ್ಕಿಂತ ಎತ್ತರ, ತೆಂಗಿಗಿಂತ ಎತ್ತರ; ಆಕಾಶಕ್ಕೆ ಹತ್ತಿರ ಹತ್ತಿರ, ಬೆವರುವ ಮೈಗೆ ಹಿತವೆನಿಸುವ ಗಾಳಿ, ನೋಯುವ ಮೈ, ತರಚಿದ ಕಾಲು ಕೈ, ಒಣಗಿದ ಬಾಯಿ, ಇನ್ನೂ ಎಷ್ಟಿದೆ ಹತ್ತುವುದು ಎಂಬ ಯೋಚೆನೆ, ಗಡಿಯಾರ ನೋಡಿದರೆ ಶುರುಮಾಡಿ ಇನ್ನೂ ಮೂಕ್ಕಾಲೇ ಗಂಟೆ! ಕಾಲ ಹೇಗೆ ಸ್ಥಗಿತವಾಗಿಬಿಡುತ್ತದೆ, ಅಥವಾ ನಲವತ್ತೈದು ನಿಮಿಷ ಎಷ್ಟು ದೊಡ್ಡದು ಅನಿಸುವುದು ಹೀಗೆ ಬೆಟ್ಟ ಹತ್ತುವಾಗಲೇ.
ಅಲ್ಲಿ ಆಗಾಗ ಹಳ್ಳಿಯ ಜನ ಕಾಣಸಿಗುತ್ತಾರೆ. ಆದರೆ ಕುಂತಿ ಬೆಟ್ಟ ಇತ್ಯಾದಿಗಳ ಬಗ್ಗೆ ಅವರಿಗೆ ಅಂಥ ಆಸಕ್ತಿ ಏನೂ ಇಲ್ಲ. ಅಷ್ಟಷ್ಟು ಜಾಗಕ್ಕೆ ಬೇಲಿ ಹಾಕಿಕೊಂಡು ತಮ್ಮ ಹೊಲ, ತಮ್ಮ ತೋಟ ಅಂತ ತಲೆ ತಗ್ಗಿಸಿ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ಬಂದು ಇದ್ದಿರಬಹುದಾದ ಕುಂತಿ ಮತ್ತು ಅವರ ಮಕ್ಕಳು ಕೂಡ ಹಾಗೆ ತಮ್ಮ ನೆಲದ ಯೋಚನೆಗೆ ಸಿಲುಕಿದವರೇ ಅಲ್ಲವೇ! ನಮ್ಮಂಥವರಿಗೆ ಮಾತ್ರ ಇದು ವಿಹಾರಸ್ಥಳ. ಪ್ರವಾಸಕ್ಕೆ, ನಿವಾಸಕ್ಕಲ್ಲ.
ನಮ್ಮ ಮೈ, ನಮ್ಮ ಎಚ್ಚರ, ನಮ್ಮ ಮನಸ್ಸು ಬಿಟ್ಟರೆ ಬೇರೆ ಎಲ್ಲವೂ ಎಷ್ಟು ಅನಗತ್ಯ ಅನ್ನುವುದು ಇಂಥ ಚಾರಣದಲ್ಲಿ ತಿಳಿಯುತ್ತದೆ. ನಮ್ಮ ಮೈಯ ಮಿತಿ, ಮನಸ್ಸಿನ ಮಿತಿ ತಿಳಿಯುತ್ತದೆ. ನಿಶ್ಶಬ್ದ ದೊರೆಯುತ್ತದೆ. ತುಂಬ ಫ್ರೆಶ್ ಆಗುತ್ತೇವೆ.
ನೆನಪಿರಲಿ, ನೀವು ಅಲ್ಲಿಗೆ ಹೋಗುವುದಿದ್ದರೆ ಪಾಂಡವ ಪುರ ಬಿಟ್ಟ ನಂತರ ನಿಮಗೆ ಯಾವ ನಾಗರಿಕ ಸೌಲಭ್ಯವೂ ಸಿಗದು. ನೀವೇ ಹೊತ್ತು ಹೋಗಬೇಕು, ಬೇಕಿದ್ದರೆ. ಅಲ್ಲಿರುವ ಹೊಂಡದ ನೀರು ಕೈಕಾಲು ತೊಳೆಯಲಷ್ಟೇ ಯೋಗ್ಯ,

Rating
No votes yet

Comments