ಸಂಚಿ ನಾಗಿ ಮತ್ತು ಮೂರು ತಲೆಮಾರು

ಸಂಚಿ ನಾಗಿ ಮತ್ತು ಮೂರು ತಲೆಮಾರು

ಸಂಚಿ ನಾಗಿ ಅಂತಾನೇ ಆಕೆ ನಮಗೆಲ್ಲಾ ಪರಿಚಿತೆ. ರಾಮ ಭಟ್ರ ಮನೆಯ ಕೆಸದಾಕೆ ಅವಳು. ಅವಳ ಕಥೆ ಮಗಳ ಕಥೆಗಿಂತಲೂ ದೊಡ್ಡದು. ಆದ್ರೂ ಮಗಳ ಕಥೆ ಅವಳಗಿಂತಲೂ ದೊಡ್ಡದು! ಕುಂದಾಪುರದ ಕಡೆಯವಳು, ಬಾಬು ಸೇರಿಗಾರನ ಜೊತೆ ಓಡಿಬಂದವಳು ಅಂತಾರೆ ಕೆಲವರು. ಇನ್ನೂ ಕೆಲವರು ನಾಗಿ ಅಂದ್ರೆ ಹುಟ್ಟಾ ಸೂಳೆ ಅಂತಾ ಮೂಗು ಮುರಿತಾರೆ. ಹಾಗಾಗಿ ನಮಗೆಲ್ಲಾ ನಾಗಿ ಅಂದ್ರೆ ಮೊದಲಿಂದಲೂ ಕೂತುಹಲ. ನಾಗಿ ಮ್ಯಾಲೆ ಎಂತಹದೋ ಒಂತರಹ ಗುಮಾನಿ! ಊರಿನ ಜನ ಏನೇ ಆಡಿಕೊಂಡರು ಎಲ್ಲರಿಗೂ ನಾಗಿ ಬೇಕು. ಚಿಕ್ಕ ಪುಟ್ಟ ಕೆಲಸಗಳು ಬಂದಾಗ ಊರ ಜನರ ಬಾಯಲ್ಲಿ ಮೊದಲು ಬರೋ ಹೆಸರು ನಾಗಿಯದ್ದು. ನಿತ್ಯ ಕೆಲಸ ರಾಮ ಭಟ್ರ ಮನೆಯಲ್ಲೇ ಆದರೂ ನಾಗಿ ಯಾವತ್ತು ಯಾರು ಹೇಳಿದ ಕೆಲಸ ನಿರಾಕರಿಸಿದವಳಲ್ಲ. ಮಾಡಿದ ಕೆಲಸಕ್ಕೆ ದುಡ್ಡು ಕೇಳಿದವಳೂ ಅಲ್ಲ. ಬಾಯಿ ತುಂಬಾ ತುಂಬುವ ಹೊಗೆಸೊಪ್ಪಿನ ಒಂದು ಎಲೆ ಅಡಿಕೆ ಕೊಟ್ಟು ಬಿಟ್ಟರೆ ಮುಗೀತು. ಮತ್ತೆ ನಾಗಿಗೆ ದುಡ್ಡು, ಕಾಸು ಏನೂ ಬ್ಯಾಡ. ಹಾಗಾಗಿಯೇ ಇರಬೇಕು ಅವಳಿಗೆ ಸಂಚಿ ನಾಗಿ ಅಂತಾ ಹೆಸರು ಬಂದಿದ್ದು!
ಬೊಮ್ಮನ ಗುಡ್ಡ. ಅದರ ಕೆಳಗೆ ಸೇರಿಗಾರರ ಕೇರಿ. ಅಲ್ಲೆ ಪುಟ್ಟದೊಂದು ಸೋಗೆ ಗುಡಿಸಲು. ನಾಗಿಗೂ ಒಂದು ಗುಡಿಸಲು ಇದೆ ಅಂತಾ ನಮಗೆಲ್ಲಾ ಗೊತ್ತಾಗಿದ್ದು ಆಕೆ ಮನೆ ಹೊದಿಕೆಗೆ ಅಂತಾ ಸೋಗೆ ಕೇಳಲು ಬರುತ್ತಿದ್ದರಿಂದ. ನಾಗಿ ಊರಿನ ಮಂದಿಗೆಲ್ಲಾ ಬೇಕಾದವಳು ಅನ್ನೋದೇನೋ ನಿಜ. ಆದರೆ ಊರಿನ ಮಕ್ಕಳ್ಯಾರೂ ನಾಗಿ ಮನೆ ಕಡೆ ಸುಳಿಯುವ ಹಾಗಿಲ್ಲ! ನಾಗಿ ಮನೆ ಊರಿನ ನಿಷೇಧಿತ ಪ್ರದೇಶ ಅಂದ್ರೂ ತಪ್ಪಗಲಾರದು. ನಾವೆಲ್ಲಾ ಶಾಲೆಗೆ ಹೋಗುವಾಗ ನಾಗಿ ಮನೆ ಇಲ್ಲೆಲ್ಲೋ ಬರತ್ತಂತೆ ಅಂದುಕೊಂಡು ಹೋಗುತ್ತಿದ್ದೇವು. ನಮ್ಮಂತ ಹುಡುಗರಿಗೆಲ್ಲಾ ನಾಗಿ ಜತೆ ನಾಗಿ ಮನೆಯೂ ಒಂದು ಕುತೂಹಲದ ವಸ್ತು.
ನಮ್ಮ ಜತೆಯೇ ಓದಿದ ಹುಡುಗಿ ಸುಮ. ನಾಗಿ ಮಗಳು ಅಂತಾ ನಮಗೆಲ್ಲಾ ಅವಳ ಮೇಲೆ ಒಂಚೂರು ಕರುಣೆ, ಹಿಡಿಯಷ್ಟು ಪ್ರೀತಿ. ನಾಗಿಗೆ ತದ್ವಿರುದ್ದದ ಸ್ವಭಾವ ಅವಳದ್ದು. ಬಜಾರಿ ಹೆಣ್ಣು. ಮೇಷ್ಟ್ರಿಗೆಲ್ಲಾ ಎದುರುತ್ತರ ಕೊಡುತ್ತಿದ್ದಳು. ಅಪ್ಪಾ ಗೊತ್ತಿಲ್ಲದ ಮಗಳೇ ಎಷ್ಟು ಸೊಕ್ಕು ನಿನಗೆ ಅಂತಾ ಮೇಷ್ಟ್ರು ಅವಳಿಗೆ ಹೊಡೆಯುತ್ತಿದ್ದರು. ಆವಾಗೆಲ್ಲಾ ನಮಗೆ ಆ ಭಾಷೆಯ ಅರ್ಥ ತಿಳಿತಾ ಇರ್ಲಿಲ್ಲ. ನಾಗಿ ಮಗಳಿಗೆ ಹೊಡೆದರು ಅನ್ನೋದೆ ನಮಗೆ ಖುಷಿ! ಆದ್ರೂ ಒಂದೊಂದ್ಸಾರಿ ಅಯ್ಯೋ ಪಾಪ ಅನ್ನಿಸುತ್ತಿತ್ತು. ಹೆಗಡೆ ಮಗಳು ಏನೂ ಮಾಡಿದರೂ ಹೊಡೆಯದ ಮೇಷ್ಟ್ರು, ನಾಗಿ ಮಗಳಿಗೆ ಮಾತ್ರ ಹೊಡಿತಾರೆ ಅಂತಾ ಸಿಟ್ಟು ಬರುತ್ತಿತ್ತು. ಆದ್ರೆ ಅವಳಿಗೆ ಮಾತ್ರ ಅದ್ಯಾವುದೂ ತಿಳಿಯುತ್ತಲೇ ಇರಲಿಲ್ಲ. ಅದೇ ತುಂಟುತನ, ಅದೇ ಪೆದ್ದುತನ ಅವಳದ್ದು.
ನಿತ್ಯ ಹುಣಸೆ ಬೀಜ, ಪೆರಲೆ ಹಣ್ಣು ತಂದು ಕೊಡುತ್ತಿದ್ದರಿಂದ ನನಗೆ ಸುಮಿ ಬಹಳ ಕೋಸ್ಲ್‌ ಫ್ರೆಂಡ್‌ ಆಗಿಬಿಟ್ಟಿದ್ದಳು! ಆದ್ರೂ ಅವಳ ಜತೆ ಹೆಚ್ಚು ಮಾತಾಡಲು ಹೆದರಿಕೆ. ಯಾರಾದ್ರೂ ನೋಡಿದರೆ ಬೈಯ್ಯುತಾರೆ ಅನ್ನೋ ಭಯ. ಸುಮಾರು ಎಸ್ಸೆಸ್ಸಲ್ಸಿ ಮುಗಿಯುವವರೆಗೂ ಅವಳು ನನ್ನ ಕ್ಲಾಸ್‌ಮೇಟು ಆಗಿದ್ದಳು. ನಾನು ಅಂದ್ರೆ ಅವಳಿಗೆ ತುಂಬಾ ಇಷ್ಟ. ಅವಳ ಮನಸಿನ ನೋವು ನಲಿವು ಎಲ್ಲವನ್ನು ಮುಚ್ಚುಮರೆ ಇಲ್ಲದೆ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ಹಾಗೇ ಕಥೆ ಹೇಳಬೇಕು ಅನ್ನಿಸಿದಾಗಲೆಲ್ಲಾ ಹುಣಸೆ ಬೀಜದ ನೆವದಲ್ಲಿ ನನ್ನ ಹತ್ತಿರ ಬರುತ್ತಿದ್ದಳು! ಹಾಗೇ ಒಂದು ದಿನ ಸುಮಿ, ನಾಗಿ ಹೇಳಿದ ಕಥೆ ಹೇಳಿದ್ದಳು.
ನಾಗಿ ತಾಯಿ ಕುಂದಾಪುರದಲ್ಲಿ ಸೂಳೆಗಾರಿಕೆ ಮಾಡಿಕೊಂಡು ಬದುಕುತ್ತಿದ್ದವಳಂತೆ. ಒಂದು ಮಗು ಆಗುತ್ತಿದ್ದ ಹಾಗೆ ಮಗಳಿಗೂ ಆ ಸುಳೇಗಾರಿಕೆ ಸೋಂಕು ತಾಗಬಾರದು ಅಂತಾ ಘಟ್ಟ ಹತ್ತಿ ಬಂದವಳು ನಾಗಿ ತಾಯಿ ಅಲಿಯಾಸ್‌ ಐಗಿನ ಮನೆ ಸುಬ್ಬಿ! ಐಗಿನ ಮನೆಯ ಐಯ್ಯನವರ ಮನೆ ಆಳಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ನಾಗಿ ಓದಬೇಕು, ಒಳ್ಳೆ ಹುಡುಗನ್ನ ಹುಡುಕಿ ನಾಗಿಗೊಂದು ಮದ್ವೆ ಮಾಡಬೇಕೆಂಬ ಆಸೆಯಿತ್ತು. ನಾಗಿ ಯಾವುದೇ ಕಾರಣಕ್ಕೂ ತನ್ನಂತೆ ಸೂಳೆ ಅನ್ನಿಸಿಕೊಳ್ಳಬಾರದೆಂಬ ಹಂಬಲವಿತ್ತು. ಹಾಗಾಗಿ ಮಗುವನ್ನು ಇಸ್ಕುಲಿಗೂ ಕಳುಹಿಸಿದಳು. ನಾಗಿ ಆಗೆಲ್ಲಾ ಚೆಂದದ ಚೆಂದನದ ಗೊಂಬೆಯಂತ ಹುಡುಗಿ. ತಾಯಿಗೆ ಮಗಳ ರೂಪದ್ದೇ ಚಿಂತೆ. ಯಾರ ಕಾಮುಕ ಕಣ್ಣಿಗೆ ಮಗಳು ಬೀಳುತ್ತಾಳೋ ಎಂಬುದೇ ಯೋಚನೆಯಾಗಿತ್ತು. ನಿತ್ಯ ಒಲೆ ಬುಡದಲ್ಲಿ ಕೂತು ಬೆಂಕಿ ಹಚ್ಚಿಸುವಾಗ ಮಗಳಿಗೆ ಬುದ್ದಿವಾದ ಹೇಳುತ್ತಿದ್ದಳು. ಬದುಕಿನ ಕುರಿತಾಗಿ ಕನಸು ಕಟ್ಟಿಕೊಡುತ್ತಿದ್ದಳು.
ನಾಗಿ ಆಗಿನ್ನು ಹೈಸ್ಕುಲ್‌ ಮೆಟ್ಟಿಲು ಹತ್ತಿದ್ದಳು. ಅದಾಗಲೇ ಒಂದೆರಡು ಮಂದಿ ನಾಗಿ ಹಿಂದೆ ಬಿದ್ದರು. ಹಾಗೆ ಬಿದ್ದವರಲ್ಲಿ ಐಯ್ಯನವರ ಮಗ ರಾಮು, ಹೆಗಡೆಯವರ ಮಗ ಸೋಮು ಇಬ್ಬರು ಅಗ್ರಗಣ್ಯರು. ಆಗತಾನೇ ಯೌವ್ವನ ಮೊಳಕೆಯೊಡೆದಿದ್ದ ನಾಗಿಗೆ ತಾಯಿ ಬಿಟ್ಟು ಮತ್ತೊಬ್ಬ ಸಂಗಾತಿ ಬೇಕಿತ್ತು. ಆ ಇಬ್ಬರು ಕುಬೇರ ಕುವರರು ನಾಗಿಯನ್ನು ಇಂದ್ರಲೋಕದಲ್ಲಿಯೇ ತೇಲಾಡಿಸಿದರು. ಪಟ್ಟಣಕ್ಕೆ ಕರೆದುಕೊಂಡು ಹೋಗಿ ಐಸ್‌ಕ್ರೀಂ ಕೊಡಿಸಿದರು. ಪಿಚ್ಚರ್ ತೋರಿಸಿದರು. ನಾನು ನಿನ್ನನ್ನು ಮದ್ವೆ ಆಗುತ್ತೇನೆ ಅಂತಲೂ ನಂಬಿಸಿದರು. ಕಷ್ಟದಲ್ಲಿ ಬದುಕಿದ ನಾಗಿಗೆ ಆ ಕ್ಷಣಿಕ ಸುಖಗಳೆಲ್ಲಾ ಮೈ ಮರೆಸಿತು. ಬದುಕು ಅಂದ್ರೆ ಇದೆ ಅನ್ನಿಸಿಬಿಟ್ಟಿತ್ತು.
ಆ ಗಳಿಗೆಯನ್ನು ರಾಮು, ಸೋಮು ಇಬ್ಬರೂ ಚೆನ್ನಾಗಿ ಉಪಯೋಗಿಸಿಕೊಂಡರು. ನಾಗಿಯಿಂದ ಪಡೆಯಬೇಕಾದ ಸುಖವನ್ನೆಲ್ಲಾ ಪಡೆದರು. ಹೀಗೆ ದಿನಗಳುರುಳುವಾಗ ಒಂದು ದಿನ ಹೊಟ್ಟೆ ಮುಂದುಬರುತ್ತಿರುವುದರ ಅರಿವು ನಾಗಿಗಾಯಿತು. ಭಯದಿಂದ ನಾಗಿ ಸೋಮು ಬಳಿ ಹೋದರೆ ಅವ ರಾಮುವಿನತ್ತ ಕೈ ತೋರಿದ. ರಾಮು ಸೋಮುವಿನತ್ತ ಕೈ ತೋರಿಸಿದ. ಇಷ್ಟಾಗುವಾಗ ವಿಚಾರ ಸುಬ್ಬಿ ಬಳಿ ಹೋಯಿತು. ಆದರೆ ಅದಾಗಲೇ ನಾಗಿಗೆ ಸೂಳೆ ಪಟ್ಟ ಸಿಕ್ಕಿತ್ತು. ಪಂಚಾಯಿತಿ ಕಟ್ಟೆ ನಾಗಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು. ಅವಳು ಸುಬ್ಬಿ ಮಗಳು ಎಂಬುದನ್ನು ಊರಿಗೂರೇ ಒತ್ತಿ ಒತ್ತಿ ಹೇಳಿತು. ಇದೇ ಕೊರಗಿನಲ್ಲಿ ಸುಬ್ಬಿ ಸತ್ತಳು. ನಂತರ ಬೇಸತ್ತ ನಾಗಿ ಊರು ತ್ಯಜಿಸಿ ನಮ್ಮೂರಿಗೆ ಬಂದಳು ಅಂತಾ ಸುಮಿ ನನಗೆ ಹೇಳಿದಳು. ನಾನು ಎಸ್ಸೆಸ್ಸಲ್ಸಿ ಮುಗಿಸಿ ಮುಂದಿನ ಓದಿಗೋಸ್ಕರ ಊರು ಬಿಟ್ಟೆ. ನಾನು ಊರಿಗೆ ಹೋದಾಗ ಸುಮಿ ಸಿಗಲಿಲ್ಲ. ಸುಮಿ ಊರಲ್ಲಿ ಇದ್ದಾಗ ನಾನು ಹೋಗಲಿಲ್ಲ! ಒಟ್ಟಾರೆ ಆ ಕಥೆ ಹೇಳಿದ ನಂತರ ಸುಮಿ ನನಗೆ ಸರಿಯಾಗಿ ಮಾತಿಗೆ ಸಿಗಲಿಲ್ಲ.
ಶಿವಮೊಗ್ಗದಲ್ಲಿ ಎಂ.ಎ ಓದುತ್ತಿರುವ ನಿಮ್ಮೂರಿನ ಹುಡುಗಿ ಸುಮಾ ನಕ್ಸಲ್‌ ಪಡೆ ಸೇರಿದ್ದಾಳಂತೆ ಎಂಬ ಸುದ್ದಿ ಕಿವಿಗೆ ಬಿದ್ದಿದ್ದನ್ನು ಖಚಿತಪಡಿಸಿಕೊಳ್ಳಲು ಗಡಿಬಿಡಿಯಿಂದ ಊರಿಗೆ ಓಡಿದ್ದೆ. ಅಷ್ಟು ಕಷ್ಟ ಅನುಭವಿಸಿದರೂ ಎಂದೂ ಸುಮಿ ಕೊಲೆ, ರಕ್ತಪಾತದ ಮಾತಾಡಿದವಳಲ್ಲ. ಬಂದೂಕು ಕಂಡವಳಲ್ಲ. ಆದ್ರೂ ಈಕೆ ಹೇಗೆ ನಕ್ಸಲ್ ಆದಳು ಎಂಬ ಪ್ರಶ್ನೆ ಬಸ್ಸಿನುದ್ದಕ್ಕೂ ನನ್ನನ್ನು ಕಾಡುತ್ತಲೇ ಇತ್ತು. ಇದೇ ಗುಂಗಿನಲ್ಲೇ ಊರು ತಲುಪಿದರೆ, ಊರಲ್ಲಿ ಸೂರ್ಯ ಮೂಡುತ್ತಿರುವಾಗಲೇ ಸ್ಮಶಾನ ಮೌನ ಆವರಿಸಿತ್ತು. ನನ್ನಂತೆ ಸೂಳೆಗಾರಿಕೆ ಮಾಡಿಕೊಂಡು ಬದುಕಿದ್ದರೂ ಒಂಚೂರು ಗೌರವ ಉಳಿಯುತ್ತಿತ್ತು. ಯಾರನ್ನೋ ಕೊಲ್ಲುವ ಹೆಣ್ಣಾಗಲು ಹೋಗಿ ಕೊನೆಗೂ ಜೀವ ತೆತ್ತಳಲ್ಲ ಎಂದು ನಾಗಿ ಒಂದೇ ಸಮನೆ ಕಿರುಚುತ್ತಿದ್ದಳು.
ಆ ದರಿದ್ರಾ ಪ್ರಾಧ್ಯಾಪಕನಿಂದಲೇ ಇವಳ ಬದುಕು ಹಾಳಾಗಿದ್ದು, ಅವನ ಮಗಳು ಮದ್ವೆಯಾಗಿ ಅಮೆರಿಕಾಗೆ ಹೋದಳು. ಅವನ ಮಾತು ಕಟ್ಟಿಕೊಂಡು ಕ್ರಾಂತಿ ಮಾಡಲು ಹೊರಟ ಇವಳು ಸ್ಮಶಾನ ಸೇರಿದಳು. ಈ ಮುಂಡೆವು ಇನ್ನೂ ಎಷ್ಟು ಮಕ್ಕಳನ್ನು ಹಾಳು ಮಾಡುತ್ತಾವೋ. ಇನ್ಮೇಲೆ ಮಕ್ಕಳನ್ನು ಇಸ್ಕೂಲಿಗೆ ಕಳುಹಿಸಬಾರದು ಎಂದು ಪಕ್ಕದಲ್ಲಿ ಯಾರೋ ಗುನುಗುತ್ತಿದ್ದರೆ, ನನಗೆ ಸುಬ್ಬಿ ಒಲೆ ಮುಂದೆ ಕುಳಿತು ನಾಗಿಗೆ ಮಾಡುತ್ತಿದ್ದ ಉಪದೇಶವನ್ನು ಸುಮಿ ವಿವರಿಸುತ್ತಿದ್ದದ್ದು ನೆನಪಾಗುತ್ತಿತ್ತು.

Rating
No votes yet