ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೩

ಜಯಂತ ಕಾಯ್ಕಿಣಿ ಕುವೆಂಪು-ಬೇಂದ್ರೆ ಅವರನ್ನು ಮಾನವೀಯ ನೆಲೆಯಲ್ಲಿ ಅನಾವರಣಗೊಳಿಸಿದಾಗ..ಭಾಗ ೩

ಬರಹ

ಬದುಕಿನ ಬಗ್ಗೆ ಬೇಂದ್ರೆ ಅವರು ಇಟ್ಟುಕೊಂಡಿದ್ದು ಅನನ್ಯವಾದ ಪ್ರೀತಿ. ಜೀವನದ ಆಭಾರ ಸಹಿಸಲು ಅಸಾಧ್ಯವಾದರೂ ಸಿಹಿ-ಕಹಿಯ ಸಮತೂಕದ ರಸಪಾಕದಂತೆ ಬೇಂದ್ರೆ ಇದ್ದರು. ಬೇಂದ್ರೆ ಮಾತಿನಲ್ಲಿ ವಿವರಿಸುವುದಾದರೆ.."ಇದ್ದಕ್ಕಿದ್ದಂತೆ ಮಗ ತೀರಿಹೋದ. ಈ ಆಘಾತದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಮತ್ತೊಬ್ಬ ಮಗ ವಿಧಿ ವಿಲಾಸಕ್ಕೆ ಬಲಿಯಾದ. ವಾಮನನ ಮೇಲೆ ದೊಡ್ಡದಾದ ಫರಸಿಕಲ್ಲು ಬಿತ್ತು. ತಲಿ ಮ್ಯಾಲೆ ಬಿದ್ದ್ರೂ ಪ್ರಾಣಾಪಾಯ ಆಗ್ದ ಬದುಕಿ ಉಳಿದ. ಸ್ಕೂಟರ್ ಮ್ಯಾಲೆ ಮಗನ ಹಿಂದ ಕುಂತು ಹೊಂಟಾಗ ನನ್ನ ಕಾಲು ಮುರಿತು. ಇತ್ತ ಎಲ್ಲವೂ ದುರಂತಮಯ. ಆದರೂ ಬದುಕಿ ಉಳಿದೆ. ದತ್ತ ಕೃಪೆಯಿಂದ. ಸದ್ಯ ಇಷ್ಟಕ್ಕ ಮುಗೀತು". ‘ಇಷ್ಟಕ್ಕ ಮುಗೀತು’ ಇದು ಗಮನಿಸಬೇಕಾಗಿದ್ದು.
*ಬೇಂದ್ರೆ ಗೋಕರ್ಣಕ್ಕೆ ಬಂದಾಗಲೊಮ್ಮೆ ಉಳಿದು ಕೊಳ್ಳುತ್ತಿದ್ದುದು ಹಿರಿಯ ಸಾಹಿತಿ, ಮಿತ್ರ ಡಾ.ಗೌರೀಶ ಕಾಯ್ಕಿಣಿ ಅವರ ಮನೆಯಲ್ಲಿ. ಬಂದು ನಾಲ್ಕಾರು ದಿನ ಇದ್ದು, ವಿಶ್ರಾಂತಿ ಪಡೆದು ಮರಳುವಾಗ "ಗೌರೀಶ್..ನಿನಗೆ ಗಂಡು ಮಕ್ಕಳಾಗಿರಲಿಲ್ಲ. ನಾನು ಬಂದು ಹೋದ ಮೇಲೆ ನಿನಗೆ ಗಂಡು ಮಗು (ಜಯಂತ್ ಕಾಯ್ಕಿಣಿ) ಹುಟ್ಟಿದ"..ಅಂದ್ರು. ಇದನ್ನು ಕೇಳಿ ಕೇಳಿ ಸುಸ್ತಾಗಿದ್ದ ಗೌರೀಶ್ ಅವರಿಗೆ ಏನು ಹೇಳಬೇಕು? ಹೇಗೆ ಹೇಳಬೇಕು? ಎಂದು ತೋಚದೇ ತಲೆ ಮೇಲೆ ಕೈಹೊತ್ತಿದ್ದರು!
*ಧಾರವಾಡದಲ್ಲಿ ಒಮ್ಮೆ ಸಾಹಿತ್ಯ ಸಮಾಲೋಚನಾ ಸಭೆ ಜರುಗಿತು. ಕೊನೆಯಲ್ಲಿ ಗ್ರುಪ್ ಫೊಟೋ ಕಾರ್ಯಕ್ರಮ ನಿಗದಿಯಾಗಿತ್ತು. ಬೇಂದ್ರೆ, ಕುವೆಂಪು ಹಾಗು ಅನಕೃ ಪಾಲ್ಗೊಂಡಿದ್ದರು. ಈ ದಿಗ್ಗಜರು ತುಸು ದೂರ-ದೂರ ನಿಂತಿದ್ದನ್ನು ಗಮನಿಸಿದ ಫೊಟೋಗ್ರಾಫರ್ ‘ತುಸು ಹತ್ತಿರ ಬನ್ನಿ ನೀವೆಲ್ಲ’ ಎಂದ. ಕೇಳಿಸಿಕೊಂಡ ಬೇಂದ್ರೆ ಅವರು ಸುಮ್ಮನೆ ಇರುವ ಜಾಯಮಾನದವರಂತೂ ಅಲ್ಲ. ಥಟ್ಟನೇ ಅಂದ್ರು. ‘ನಾವೆಲ್ಲಾ..ಹತ್ರನ ಇದ್ದೀವಿ. ನಡುವ ನಮ್ಮ ಅಭಿಮಾನಿಗಳು ತೂರಿಕೊಂಡು ಗದ್ದಲ ಹಚ್ಯಾರ. ಅವರು ಸರದ್ರ ನಾವು ಹತ್ರ!’
*ಕುವೆಂಪು ತಮ್ಮ ‘ಬೆರೆಳ್ ಗೆ ಕೊರಳ್’ ಕೃತಿಯನ್ನು ವಿದ್ಯಾಗುರುಗಳಾದ ಬಿ.ಎಂ.ಶ್ರೀಕಂಠಯ್ಯ ನವರಿಗೆ ಅರ್ಪಿಸಿದ್ದಾರೆ. ಅವರ ಗುರು ಭಕ್ತಿ ಅನನ್ಯವಾದದ್ದು. ‘ಬೆರೆಳು’ ಹಿಡಿದು ನಡೆಸಿದ ಗುರುವಿಗೆ ಅಂಧಕ್ಕಾರದಿಂದ ಬೆಳಕಿನೆಡೆಗೆ ಕೊಂಡೊಯ್ದ ಬಿ.ಎಂ.ಶ್ರೀ.ಗೆ ‘ಕೊರಳ್’ ಅಂದರೆಕ ಕಂಠವನ್ನೇ ಕುವೆಂಪು ಅರ್ಪಿಸಿದ್ದಾರೆ.
ಇತ್ತ ಬೇಂದ್ರೆ ಅವರು ತಾಯಿ ಅಂಬಿಕೆಯನ್ನೇ ತಮ್ಮ ಪಾಲಿನ ಗುರುವಾಗಿ ಕಂಡು ಅಂಬಿಕಾತನಯದತ್ತರಾಗಿ ತಮ್ಮನ್ನು ಸಮೀಕರಿಸಿಕೊಂಡರು.
*ಬೇಂದ್ಸ್ರೆ ಯಾವುದೇ ಕಾರ್ಯಕ್ರಮಕ್ಕೆ ಬರಲಿ ತಮ್ಮ ಕೈ ಚೀಲದ ತುಂಬ ಪುಸ್ತಕಗಳನ್ನು ಹೊತ್ತುಕೊಂಡು ಬರುವುದು ವಾಡಿಕೆ. ತಮ್ಮ ಭಾಷಣದ ಮಧ್ಯೆ ಒಂದೊಂದೇ ಪುಸ್ತಕವನ್ನು ಕೈಯಲ್ಲಿ ಹಿಡಿದು ಸಭಿಕರಿಗೆ ತೋರಿಸುತ್ತ ವಾಚಿಸುವುದು, ಆಂಗಿಕ ಅಭಿನಯ ಮಾಡಿ ಸಭಿಕರನ್ನು ಸಮ್ಮೋಹಿತರನ್ನಾಗಿಸುವ ಕಲೆ ಅನನ್ಯವಾಗಿತ್ತು. ವಿದ್ಯಾರ್ಥಿಯಾಗಿದ್ದ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರಿಗೆ ಇದು ದುರ್ಗ ಮುರುಗಿ ಕುಣಿತವನ್ನು ನೆನಪಿಸುತ್ತಿತ್ತಂತೆ. ಸದ್ಯ ಕಾಣಸಿಗದ ಈ ಬುಡಕಟ್ಟು ಜನಾಂಗದ ದುರ್ಗ ಮುರುಗಿಯರು ಒಂದೊಂದೇ ದೇವರನ್ನು ಕೈಯಿಂದ ಎತ್ತಿ ಹಿಡಿದು ಅವರ ಕುರಿತಾದ ಲೀಲೆ, ಪುರಾಣ, ವರ್ಣಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅವರು ಜನಪರ/ಜನಪದ ಕವಿಯಾಗಿದ್ದಕ್ಕೆ ಇದು ಉದಾಹರಣೆ.
*ಶಬ್ದದೊಂದಿಗೆ ಸರಸವಾಡುವ ವಿಶಿಷ್ಟ ಕಲೆ ಬೇಂದ್ರೆ ಅವರಿಗೆ ಸಿದ್ಧಿಸಿತ್ತು. ಒಂದೇ ಶಬ್ದ ಹಲವಾರು ಅರ್ಥದಲ್ಲಿ ಅವರಿಂದ ಬೆಳಕಿಗೆ ಬಂದು ಬೆರಗು ಹುಟ್ಟಿಸುತ್ತಿತ್ತು. ಒಮ್ಮೆ ಕವಿ ಕಣವಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೇಂದ್ರೆ ಅವರ ಕುಶಲ ವಿಚಾರಿಸಲು ಸ್ವತ: ಮನೆಗೆ ಬಂದರು. ಶ್ರೀಮತಿ ಶಾಂತಾದೇವಿ ಕಣವಿ ಅವರನ್ನು ವರಕವಿ ನೋಡುತ್ತಲೇ.."ಪ್ರಕೃತಿ ಕಾಯ್ದುಕೊಳ್ಳಲಾಗದ ಅದೆಂತಹ ಪುರುಷನನ್ನು ಮದುವೆಯಾಗಿದ್ದೀರಿ?" ಎಂದು ಕಿಚಾಯಿಸಿದ್ದರಂತೆ.
*ಕಾರ್ಯ ನಿಮಿತ್ತವಾಗಿ ಒಮ್ಮೆ ಕವಿ ಕಣವಿ ವರಕವಿಯ ಸಾಧನಕೇರಿಯ ‘ಶ್ರೀ ಮಾತಾ’ಕ್ಕೆ ಭೇಟಿ ನೀಡಿದ್ದರು. ವರಾಂಡದಲ್ಲಿ ಕವಿ ಅಧ್ಯಯನ ನಿರತರಾಗಿದ್ದರು. ಮುಂದಿನ ಮೇಜಿನ ಮೇಲೆ ಹಲವಾರು ಪುಸ್ತಿಕೆಗಳು. ಆದರೆ ಗಂಭೀರವಾಗಿ ಕವಿ ಬೇಂದ್ರೆ "ಶ್ರೀ ರಾಮಾಯಣ ದರ್ಶನಂ" ಓದುತ್ತಿದ್ದರು. ಕಣವಿ ಅವರನ್ನು ನೋಡುತ್ತಿದ್ದಂತೆ "ನೋಡ್ರಿ..ಕಣವಿ, ಈ ಪುಟ್ಟಪ್ಪ ಅದೆಷ್ಟು ಓದಿ, ಆಳವಾಗಿ ಅಭ್ಯಾಸ ಮಾಡಿ ಬರದಾರ. ಮೆಚ್ಚಬೇಕ್ರಿ ಅವರ ವಿದ್ವತ್ತು!" ಅಂದರಂತೆ.
ಹಲವಾರು ಪರ-ವಿರೋಧ, ಗಾಳಿ ಮಾತು ಕೇಳಿದ್ದ ಕಣವಿ ಅವರಿಗೆ ನವೋದಯ ಸಾಹಿತ್ಯದ ಇಬ್ಬರು ಸೀಮಾಪುರುಷರು ತಮ್ಮಗಳ ಬಗ್ಗೆ ಇಟ್ಟುಕೊಂಡಿದ್ದ ಅಪಾರವಾದ ಗೌರವ ಹೀಗೆ ವ್ಯಕ್ತವಾಗಿತ್ತು.
*ವರಕವಿ ಬೇಂದ್ರೆ ಹಾಗು ರಾಷ್ಟ್ರಕವಿ ಕುವೆಂಪು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ಪರಸ್ಪರ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡವರು. ಉಭಯ ಅಧ್ವೈರ್ಯರುಗಳು ಕಣವಿಯವರ ಕೃತಿಗಳಿಗೆ ಮುನ್ನುಡಿ ಬರೆದು ಹರಸಿದ್ದಾರೆ. ಯಾವತ್ತೂ ಒಬ್ಬರೂ ಇನ್ನೊಬ್ಬರ ಬಗ್ಗೆ ಅನಾದರಪೂರ್ವಕ, ಔಚಿತ್ಯಮೀರಿ ಮಾತನಾಡಿದ್ದು ಕೇಳಿಲ್ಲ. ಅವರ ‘ಸೊ-ಕಾಲ್ಡ್’ ಅಭಿಮಾನಿಗಳು ತಾವು-ತಾವೇ ದಂತ ಗೋಪುರ ನಿರ್ಮಿಸಿಕೊಂಡು, ಪ್ರಾದೇಶಿಕ ತಾರತಮ್ಯತೆ ಜೀವಂತವಾಗಿಡಲು ಈ ವಿವಾದ, ಗಾಳಿ ಸುದ್ದಿ ಹುಟ್ಟು ಹಾಕಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೇಂದ್ರೆ-ಕುವೆಂಪು ಪರಸ್ಪರ ಆದರ-ಗೌರವ, ಪ್ರೇಮ ಇಟ್ಟುಕೊಂಡಿದ್ದರು. ಮುಕ್ತತೆ ಅವರಲ್ಲಿ ಮನೆಮಾಡಿತ್ತು.
ಧಾರವಾಡದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುವೆಂಪು ಅಧ್ಯಕ್ಷರಾಗಿದ್ದರೆ, ಶಿವಮೊಗ್ಗೆಯಲ್ಲಿ ಜರುಗಿದ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವ ಬೇಂದ್ರೆ ಅವರಿಗೆ ಸಂದಿತ್ತು!
******************॑॑॑॑॑॑॑॑॑॑॑॑॑॑॑॑॑॑॑॑****************