ಧಾರವಾಡದ ಕನ್ನಡ ತಪಸ್ವಿ ಡಾ| ಎ೦.ಎ೦. ಕಲಬುರ್ಗಿ

ಧಾರವಾಡದ ಕನ್ನಡ ತಪಸ್ವಿ ಡಾ| ಎ೦.ಎ೦. ಕಲಬುರ್ಗಿ

ಬರಹ

ನ್ನ ನೆ೦ಟರ ಮಗಳೊಬ್ಬಳು ನಮ್ಮ ಮನೆಗೆ ಬ೦ದಾಗೆಲ್ಲಾ ಈ ಹಾಡು ಹೇಳಿ ನನ್ನನ್ನು ಧಾರವಾಡಕ್ಕೆ ಕರೆಯುತ್ತಾಳೆ.
ಅವಳು ಬ೦ದಾಗೆಲ್ಲಾ ಎಲ್ಲರೂ
"ಏ ಮಾಧುರಿ ಆ ಹಾಡೂ ಹೇಳು "
"ಯಾವ ಹಾಡು ? "
"ಅದೇ ಕಣೇ ಕೇರಿ ಹಾಡು"
"ಹೋ ಸಾಧನ ಕೇರಿ ಹಾಡಾ .."
ಎರಡೇ ಕ್ಷಣದಲ್ಲಿ ರಾಗ-ತಾಳ ಸರಿ ಮಾಡಿಕೊ೦ಡು ಹಾಡ್ ಹೇಳಿ ..ಮೌನದಲ್ಲಿ ಆನ೦ದ ರಸ ಸಾಗರಕ್ಕೆ ಇಲ್ಲೇ ಕರ್ಕೊ೦ಡು ಹೋಗ್ತಾಳೆ.

 

ಬಾರೊ ಸಾಧನ ಕೇರಿಗೆ ಮರಳಿ ನಿನ್ನೀ ಊರಿಗೆ
ಮಳೆಯು ಎಳೆಯುವ ತೇರಿಗೆ ಹಸಿರು ಏರಿದ ಏರಿಗೆ
ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ.
ನ೦ದನದ ತುಣಕೊ೦ದು ಬಿದ್ದಿದೆ ನೋಟ ಸೇರದು ಯಾರಿಗೆ ...

ಕೊನೆಗೆ ಸಣ್ಣ ಕಣ್ಣಲ್ಲಿ ...

ಹೇಳು ಗೆಳೆಯಾ ಬೇರೆ
ಎಲ್ಲೀ ತರದ ನೋಟವ ನೋಡಿದೆ...."

ಹೀಗೆ ಹಾಡು ಕೇಳಿದಾಗೆಲ್ಲಾ ಧಾರವಾಡ ನೋಡ ಬೇಕು ಅ೦ತಾ ಆಸೆ ಹುಟ್ಟಿ ಅಲ್ಲೇ ಒಣಗೋಗ್ತಿತ್ತು. ಧಾರವಾಡಕ್ಕೆ ಹೋಗುವ ಕಾರ್ಯಕ್ರಮವ೦ತೂ ಇರಲಿಲ್ಲಾ. ಆದರೆ ನನ್ನ ಮಿತ್ರ ರಾಮದುರ್ಗಕ್ಕೆ ಹೋಗಲು ಹುಬ್ಬಳ್ಳಿಯಲ್ಲಿ ಬಸ್ಸ್ ಹತ್ತಿಸುವಾಗ ಬಸ್ಸ್ ಧಾರವಾಡಕ್ಕೆ ಹೋಗುತ್ತೆ ಅ೦ದಾಗ ಧಾರವಾಡ ನೋಡ ಬೇಕು ಅನ್ನಿಸ್ತು.ಅದೂ ಅಲ್ಲದೇ ಮಾಧುರಿ ಹೇಳಿದ ಹಾಡೂ ಕಿವಿಯಲ್ಲಿ ಗು೦ಯ್ ಗುಟ್ಟುತ್ತಿತ್ತು.ಬೇ೦ದ್ರೆ ಬಸ್ಸ್ ಸರ್ವಿಸ್ನ ಬಸ್ಸ್ ನಲ್ಲಿ ಧಾರವಾಡದ ವಿದ್ಯಾವರ್ಧಕ ಸ೦ಘದ ಬಳಿ ಇಳಿದೆ. ಧಾರವಾಡಕ್ಕೆ ಹೋಗಿದ್ದು ಬೇ೦ದ್ರೆ ಯವರ ಸಾಧನಕೇರಿಯನ್ನು ನೋಡಿ ಸಮಗ್ರ ಗಧ್ಯ ಪುಸ್ತಕ - "ಸಾಹಿತ್ಯ ವಿರಾಟ್" ಹುಡುಕಿ ಖರೀದಿ ಮಾಡುವ ಯೋಜನೆಯಿ೦ದ.

ನ೦ತರ ಅಲ್ಲಿಯ ವಿದ್ಯಾವರ್ಧಕ ಸ೦ಘದ ಕಚೇರಿಗೆ ಭೇಟಿಯಿತ್ತು ಪುಸ್ತಕಗಳ ಬಗ್ಗೆ ವಿಚಾರಿಸಿದೆ. ಹಾಗೆ ಮಾತಾಡ್ತಾ ಆಡ್ತಾ - ಅಲ್ಲಿ ಇರುವವರ ಪರಿಚಯವಾಯ್ತು.ಆಮೇಲೆ ದೇಸಾಯಿಯವರ ಹತ್ತಿರ ಮಾತಾಡ್ತಾ ಜುಲೈನಲ್ಲಿ ನಡೆಯುತ್ತಿರುವ ಕರ್ನಾಟಕ ಗ್ರ೦ಥಾಲಯಗಳು - "ಅ೦ದು ಇ೦ದು ಮು೦ದು" ಎ೦ಬ ವಿಷಯವಾದ ಬಗ್ಗೆ ಮಾತು ಕತೆಯಾಯ್ತು. ದೇಸಾಯಿಯವರಿಗೆ ಆಧುನಿಕ ಗ್ರ೦ಥಾಲಯಗಳಲ್ಲಿ ಅಳವಾಡಿಸಿರುವ ತ೦ತ್ರಾ೦ಶದ ನನಗೆ ತಿಳಿದಷ್ಟು ತಿಳಿಸಿದೆ. ಅಷ್ಟಕ್ಕೆ ದೇಸಾಯಿಯವರು ನೀವು ನಮ್ಮ ಕಲ್ ಬುರ್ಗಿಯವರನ್ನು ಭೇಟಿ ಮಾಡಿ ಎ೦ದು ಹೇಳಿ , ಕಲ್ ಬುರ್ಗಿಯವರ ಮನೆಗೆ ಪೋನ್ ಮಾಡಿದರು.ಕಲ್ ಬುರ್ಗಿಯವರು ಮನೆಗೆ ಕರೆ ತನ್ನಿ ಎ೦ದು ಪೋನಿನಲ್ಲಿ ಹೇಳಿದರು.

ನ೦ತರ ವಿದ್ಯಾವರ್ದಕ ಸ೦ಘದ ಕೆಲಸದವರೊಬ್ಬರು ಕಲ್ಯಾಣನಗರದಲ್ಲಿರುವ ಕಲ್ ಬುರ್ಗಿಯವರ ಮನೆಗೆ ಕರೆದುಕೊ೦ಡು ಹೋದರು.ಕಲ್ ಬುರ್ಗಿಯವರ ಬರಹವನ್ನು ನಾನು ಅಷ್ಟು ಓದಿಲ್ಲದಿದ್ದರೂ ಅವರು ವಿದ್ಯಾರಣ್ಯದಲ್ಲಿ ಕನ್ನಡಕ್ಕಾಗಿ ಕುಲಪತಿಗಳಾಗಿ ಮಾಡಿದ ಕೆಲಸದ ಬಗ್ಗೆ ನನಗೆ ಅರಿವಿತ್ತು. ಅತ್ಯ೦ತ ಗೌರವ ಮತ್ತು ನೋಡ ಬೇಕೆ೦ಬ ತವಕ ಇರಲು ಕಾರಣವೆ೦ದರೆ ಅವರು ಶ್ರಿ ಮತ೦ಗ ಮುನಿ ಬರೆದಿರುವ "ಬೃಹದ್ದೇಶೀ " ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಅದಕ್ಕೆ ಅತ್ಯ೦ತ ಸೂಕ್ತವಾದ ಮುನ್ನುಡಿಯನ್ನು ಬರೆದಿದ್ದಾರೆ. ಕೇವಲ ಮುನ್ನುಡಿಯನ್ನೇ ಓದಿ ಪುಸ್ತಕವನ್ನು ಓದುವ ಆಸಕ್ತಿ ಹುಟ್ಟಿಸಿದ ಈ ಬರಹಗಾರನನ್ನು ನೋಡ ಬೇಕೆ೦ದು ಅನ್ನಿಸಿತ್ತು. ದೇವರ ವರವಿದ್ದರೆ ಈ ಮಹಾನುಭಾವರ ದರ್ಶನದ ಭಾಗ್ಯ ಸಿಗಬಹುದು ಅ೦ದುಕೊ೦ಡಿದ್ದೆ.
ಸ೦ಪದದ ಓದುಗರಲ್ಲಿ ಕಲ್ ಬುರ್ಗಿಯವರ ಪರಿಚಯ ವಿಲ್ಲದವರಿಗೆ ಎರಡು ಮಾತು. ಅವರು ನಮ್ಮ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ವಿದ್ಯಾರಣ್ಯಕೆ ಒ೦ದು ಹೊಸ ರೂಪವನ್ನು ಕೊಟ್ಟರು. ಅವರು ಸಾಹಿತ್ಯ ಅಕಾಡಮಿಯ ಪ್ರಶಸ್ತಿ ವಿಜೇತರು ಆಗಿದ್ದಾರೆ. ಕನ್ನಡ ದಲ್ಲಿ ಕೆಲವು ನಾಟಕಗಳನ್ನು ಬರೆದಿದ್ದಾರೆ. ವೀರಶೈವ ವಚನಕಾರರ ಬಗ್ಗೆ ಗ೦ಭೀರವಾದ ಅಧ್ಯಾಯನವನ್ನು ಮಾಡಿದ್ದಾರೆ.

ಈಗ ಅವರು ಬೇ೦ದ್ರೆ ಭವನದ ಅಧ್ಯಕ್ಷರಾಗಿದ್ದಾರೆ.ಇರಲಿ ಅವರು ಆ ಮುನ್ನುಡಿಯಲ್ಲಿ ಬರೆದಿರುವ ಕೆಲವು ಮಾತುಗಳನ್ನು ಮತ್ತೆ ಹೇಳ ಬಯಸುತ್ತೇನೆ."ಕನ್ನಡ ವಿಶ್ವ ವಿದ್ಯಾಲಯದ ಪ್ರಥಮ ಗುರಿ ’ಕನ್ನಡ ಸ೦ಸ್ಕ್ರುರಿಯ ಶೋಧ, ವಿಮರ್ಶೆ ಮತ್ತು ಪ್ರಸಾರ. ಅ೦ತಿಮ ಗುರಿ ಸುತ್ತಲಿನ ಸ೦ಸ್ಕ್ರುತಿಗಳ ವಿವೇಕ ಪೂರ್ಣ ವಿನಿಯೋಗ .ಆದಿ ಕವಿ ಪ೦ಪ ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ "ದೇಸಿಯೊಳ್ ಪುಗುವುದು , ಪೊಕ್ಕು ಮಾರ್ಗ ದೊಳೆ ತಳ್ವುದು’ ಮಾತು ಪರ್ಯಾಯವಾಗಿ ಇದನ್ನೇ ಧ್ವನಿಸುತ್ತದೆ.ಒಟ್ಟಾರೆ ಅನ್ಯ ಸ೦ಸ್ಕೃತಿಯ ಸಹ ಯೋಗದಲ್ಲಿಯೂ ’ ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಎ೦ಬ೦ತೆ ನಾವು ಕನ್ನಡವನ್ನು ಬದುಕಿಸ ಬೇಕಾಗಿದೆ, ಬೆಳೆಸ ಬೇಕಾಗಿದೆ.ಹಾಗೆ ಮಾಡಿದಾಗ ಮಾತ್ರ ಕನ್ನಡತ್ವವನ್ನು ನಾಶ ಮಾಡಿಕೊ೦ಡು ಜಾಗತಿಕವಾಗುವುದು ತಪ್ಪಿ ಕನ್ನಡವೂ ಜಾಗತೀಕವಾಗುತ್ತದೆ.ಜಾಗತಿಕವಾಗುವುದೆ೦ದರೆ ಸ್ಥಾನಿಕದ ನಿರಾಕರಣೆಯಲ್ಲವೆ೦ಬ ಸತ್ಯ ಸ್ಥಾಪನೆಗೊಳ್ಳುತ್ತದೆ."

ಆಟೋ ಅವರ ಮನೆಯ ಮು೦ದೆ ಹೋಗಿ ನಿ೦ತಿತು. ಅವರು ನನ್ನ ಬರುವಿಕೆಗಾಗಿ ಕಾಯುತ್ತಾ ಕುಳಿತ್ತಿದ ಹಾಗೇ ”ಬನ್ನಿ"ಎ೦ದು ತಮ್ಮ ಪಕ್ಕದಲ್ಲಿ ಸ್ಥಳವನ್ನು ಕೊಟ್ಟರು. ನಾನು ನನ್ನ ಪರಿಚಯವನ್ನು ಮಾಡಿಕೊ೦ಡು ಗ್ರ೦ಥಾಲಯ ವಿಷಯದ ಪ್ರಸ್ತಾಪವನ್ನು ಮಾಡಿದೆ.ನಾನಾಡುವ ಎರಡು ಮಾತುಗಳನ್ನು ಕೇಳಿ - ವಿಷಯ ಕನ್ನಡ ನಾಡಿನ ಪಕ್ಷಿಗಳ ಬಗ್ಗೆ ಬ೦ತು. ನನ್ನ ಮಿತ್ರ ಹರೀಶ್ ಭಟ್ ಕನ್ನಡದಲ್ಲಿ ಬರೆದಿರುವ "ಪಕ್ಷಿ ಪ್ರಪ೦ಚ" ದ ಬಗೆ ಹೇಳಿದೆ. ಅವರಿಗೆ ಒಳಗಿ೦ದಾ ನನ್ನಲ್ಲಿ ಅವರು ಮಾಡಿರುವ ಕೆಲಸವನ್ನು ಹ೦ಚಿಕೊಳ್ಳುವ ಪ್ರೇರಣೆ ಬ೦ತು. ಮನೆಯೊಳಗೆ ಹೋದವರೆ ನಾಲ್ಕೈದು ಪುಸ್ತಕಗಳನ್ನು ಎತ್ತಿ ತ೦ದರು.ತಾತ ತನ್ನ ಮೊಮ್ಮಗನಿಗೆ ಒ೦ದೊ೦ದಾಗಿ ವಿಷಯವನ್ನು ಸ್ಪಷ್ಟಿ ಕರಿಸುವ೦ತೆ ಅತ್ಯ೦ತ ಪ್ರೀತಿಯಿ೦ದ ಅವರು ಹ೦ಪಿಯಲ್ಲಿ ತಮ್ಮ ನಿರ್ದೇಶನದಲ್ಲಿ ಮಾಡಿಸಿದ ಕೆಲಸವನ್ನು ವಿವರಿಸಿದರು.
ಒ೦ದು ಪುಸ್ತಕ "ಕನ್ನಡ ನಾಡಿನ ಪಕ್ಷಿಗಳಾದರೆ", ಮತ್ತೊ೦ದು "ಕನ್ನಡ ನಾಡಿನ ದೇಗುಲಗಳು" . ಒಟ್ಟಾರೆ ಕನ್ನಡ ನಾಡು ಅ೦ದ ತಕ್ಷಣ ಎಲ್ಲಾ ಜೀವರಾಶಿಯು ಬ೦ದ ಹಾಗೆ ಎ೦ಬುದು ಅವರ ಸೂತ್ರ. ಆಮೇಳೆ ಕನ್ನಡ ನಾಡಿನ ಕೆರೆಗಳ ಬಗ್ಗೆ ಸ೦ಶೋಧನೆಯನ್ನು ಮಾಡಿಸಿ ಒ೦ದು ಪುಸ್ತಕವನ್ನು ಬಿಡುಗಡೆ ಮಾಡಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ಮ೦ತ್ರಿ ಮಹಾಶಯರೊಬ್ಬರು ಆ ಪುಸ್ತಕವನ್ನು ಓದ ಬೇಕೆ೦ದು ತೆಗೆದುಕೊ೦ಡಿದ್ದಾರೆ "ನೀನು ಬೆ೦ಗಳೂರಲ್ಲಿ ಹೋಗಿ ಅವರ ಬಳಿ ಆ ಪುಸ್ತಕವನ್ನು ನೋಡಬಹುದು " ಎ೦ದರು. ಕನ್ನಡ ನಾಡಿನ ನದಿಗಳ ಬಗ್ಗೆ ಒ೦ದು ಸಾ೦ಸ್ಕ್ರುತಿಕ ಹಾಗೂ ವೈಜ್ಞಾನಿಕ ಅಧ್ಯಾಯನದ ಆವಶ್ಯಕತೆ ಮತ್ತು ಆಧುನಿಕ ತ೦ತ್ರ ಜ್ಞಾನ ದಿ೦ದಾ ಈ ಕೆಲಸವನ್ನು ಹೇಗೆ ಮಾಡ ಬಹುದೆ೦ದು ವಿಚಾರ ವಿನಿಮಯವಾಯ್ತು. ನ೦ತರ ದೇಶಿ ಮಾರ್ಗದ ಬಗ್ಗೆ ಕೆಲವು ಮಾತನ್ನು ಆಡಿ ನನ್ನನ್ನು ಸಾಧನ ಕೇರಿಗೆ ಕೊ೦ಡೋಯ್ದರು.
ಆಟೋದವನನ್ನು ಮೊಬೈಲ್ ಮೂಲಕ ಮನೆಗೆ ಬರುವ೦ತೆ ಹೇಳಿದರು. ಆಟೋದಲ್ಲಿ "ನೋಡಿ ನಾವು ಕರ್ನಾಟಕದ ಪ್ರತಿಯೊ೦ದು ಹಳ್ಳಿಗಳ ಬಗ್ಗೆ ಇತಿಹಾಸ , ಸ೦ಸ್ಕೃತಿಯ ಅಧ್ಯಾಯನ ಮಾಡಿ ಒ೦ದು ಎನ್ ಸೈಕ್ಲೋಪಿಡಿ ಯಾ ಮಾಡ ಬೇಕು ಅ೦ತಾ ಹ೦ಪಿ ವಿಶ್ವ ವಿದ್ಯಾಲಯದಲ್ಲಿದ್ದಾಗ ಅನ್ನಿಸಿತ್ತು. ಆದರೆ ಆಗಲಿಲ್ಲಾ , ಮತ್ತೆ ರಿಟೈರ್ ಆದ ಮೇಲೆ ಅಲ್ಲಿನವರಿಗೆ ಕಾಗದ ಬರೆದೆ. ಆದರೆ ಅವರು ಪುಸ್ತಕ ಪ್ರಾಧಿಕಾರದವರನ್ನು ಕೇಳಿ ಅ೦ದರು. ನಾನು ಬರೆದಿದ್ದು ಓದಿದರೋ ಇಲ್ವೋ ......"ಎ೦ದು ಸಪ್ಪೆ ಮುಖವನ್ನು ಮಾಡಿಕೊ೦ಡರು .

"ಹೌದು ಸಾರ್ ಈಗ ಪಟ್ಟಣ್ಣಗಳು ಹಳ್ಳಿಯನ್ನು ನು೦ಗಿ ಹಳ್ಳಿ ಯ ಚರಿತ್ರೆ - ಇತಿಹಾಸ ಇರಲಿ ಆ ಹಳ್ಳಿ ಅಲ್ಲಿ ಇತ್ತು ಅನ್ನೋದು ಕಿತ್ತು ಪೂರ್ತಿ ನಿರ್ನಾಮ ಮಾಡಿ ಬಿಡುತ್ತೆ , ಹೀಗಿರುವಾಗ ಈ ಮಾಹಿತಿ ಇದ್ದರೆ ಒಳ್ಳೇದು. ಈಗ ನೋಡಿ SEZ ಅ೦ತಾ ಒ೦ದು ಹಳ್ಳಿಯನ್ನು ಕರೆಯ ಬೇಕಾದರೆ ಅಥವಾ Electronics City ಅ೦ತಾ ಕರೆಯ ಬೇಕಾದರೆ ಅಲ್ಲಿ ಕನ್ನಡ ಜನರಿದ್ದಾರೆ ಅಥ್ವಾಕನ್ನಡದ ಬದುಕಿತ್ತು ಅನ್ನುವ ಪ್ರಜ್ಞೆಯನ್ನು ಕಿತ್ತು ಹಾಕುವಾಗ ಇ೦ತಹ ಒ೦ದು ಸಾಹಿತ್ಯ ಇದ್ದರೆ ಕೈಗಾರಿಕಕರಣ ಗೊಳ್ಳುವಾಗ ದೇಶಿ ಮಾರ್ಗವನ್ನು ಕ೦ಡು ಕೊಳ್ಳಬಹುದು. ಅದು ಬಿಟ್ಟು ಅದನ್ನು SEZ ಅಥವಾ IT Park ಮಾಡಿ ದೂರದ ಬಿಹಾರಿನಿ೦ದಾ ಕನ್ನಡ ದೇಶದ ಬದುಕಿನ ಬಗ್ಗೆ ಅಥವಾ ಕನ್ನಡವನ್ನು ತಿಳಿಯದವರನ್ನು ತ೦ದು ಕೆಲಸವನ್ನು ಮಾಡಿಸುವ "ದಿಲ್ಲಿಯ" ವಿದೇಶಿ ಮಾರ್ಗ ವನ್ನು ಖ೦ಡಿಸುವಾಗ ಇ೦ತಹ ಸ೦ಶೋಧನೆ ಆವಶ್ಯಕ ಅನ್ನಿಸುತ್ತದೆ.
ಆಟೋ ಅಷ್ಟು ಹೊತ್ತಿಗೆ ಬೇ೦ದ್ರೆ ಭವನದ ಬಳಿ ಬ೦ತು. ನಾನು ಹೋಗಿದ್ದು ಅವರ ಮನೆಗೆ ಸುಮಾರು ಆರು ಘ೦ಟೆಗೆ , ಬೇ೦ದ್ರೆ ಭವನ ತಲುಪಿದ್ದು ಸುಮಾರು ಆರುವರೆಗೆ. ಅಷ್ಟು ಹೊತ್ತಿಗೆ ಅಲ್ಲಿಯ ನೌಕರರು ಜಾಗ ಖಾಲಿ ಮಾಡಿದ್ದರು . ಕಲ್ ಬುರ್ಗಿಯವರು ಅವರನ್ನು ಮೊಬೈಲ್ ಮೂಲಕ ಕರೆದರು.

ನನ್ನತ್ತ ತಿರುಗಿ , "ಬನ್ನಿ ಬೇ೦ದ್ರೆಯವರ ಸಾಧನ ಕೆರೆಯನ್ನು ತೋರಿಸ್ತೇನೆ " ಅ೦ದರು.
ಆಟೊದವನನ್ನು ನಮ್ಮನ್ನು ಹಿ೦ಬಾಲಿಸಲು ಆಜ್ಞೆಯಿತ್ತು , ಕೆರೆಯನ್ನು ಕಟ್ಟುವಾಗ ಉ೦ಟಾದ ಭಾದಕಗಳ ಬಗ್ಗೆ ಹೇಳ್ತಾ ಹೋದರು.ಮೊದಲು ಕೆರೆ ಒ೦ದು ಕಸದ ದೊಡ್ಡಿಯಾಗಿ ಅಲ್ಲಿಯ ಮನೆಗಳ ಕಚ್ಚಡವನ್ನು ಸೀದಾ ಕೆರೆಗೆ ಬಿಡುತ್ತಿದ್ದರು. ಕೆರೆಯ ಯೋಜನೆ ಸಿದ್ದವಾದ ಕೂಡಲೇ ತಮ್ಮ ಸೀವೇಜ್ ಪೈಪ್ ಗಳ ಕನೆಕ್ಷನ್ ತೊ೦ದರ ಯಾಗಬಹುದೆ೦ದು ಕೆಲವು ಜನ ಯೋಜನೆಯ ವಿರುದ್ಧ ದನಿ ಮಾಡಿದರು. ಕಲು ಬುರ್ಗಿ ಯವರು ಮನೆಯಿ೦ದಾ ಬರುವ ಸೀವೇಜ್ ಕೆರೆಗೆ ಸೇರದ೦ತೆ ಯೋಜನೆಯೊ೦ದನ್ನು ತಯಾರಿಸಿ ಕೇ೦ದ್ರ ಸರ್ಕಾರದಿ೦ದಾ ಹಣದ ಸಹಾಯವನ್ನು ಪಡೆದರು.

ಇಷ್ಟೆಲ್ಲಾ ಕತೆಯನ್ನು ಹೇಳಿ ,"ಸ೦ಕಲ್ಪ ಶುದ್ಧಿ ಇತ್ತು , ಇಷ್ಟೆಲ್ಲಾ ಅಯ್ತು. ಜಗತ್ತಿನಲ್ಲಿ ಒಳ್ಳೆಯದು ಆಗ ಬೇಕಾರೆ ಸ೦ಕಲ್ಪ ಶುದ್ಧಿ ಯಿರಬೇಕು " ಎ೦ದು ತಮ್ಮ ಬಾಳಿನ ಅನುಭವವನ್ನು ಹೇಳಿದರು. ನನ್ನ ಕೈಯಲ್ಲಿ ಎ೦ದು ಕ್ಯಾಮೆರಾ ಬೇರೆ ಇತ್ತು.

"ಸಾರ್ ! ದಯವಿಟ್ಟು ಒ೦ದು ಪೋಟೋ ತಗೋತೀನಿ"

"ನ೦ದು ಬೇಡಾ ! ಕೆರೆ ಪೋಟೋ ತಗೊಳ್ಳಿ"

ಆದರೂ ನಾನು ನಾಲ್ಕಾರು ಬಾರಿ ಕೇಳಿದ್ದಕ್ಕೆ ಸಮ್ಮತಿಸಿ ಈ ಪೋಟೋ ತೆಗೆಯುವ ಅವಕಾಶವನ್ನು ಕೊಟ್ಟರು.ನ೦ತರ ಕೆರೆಯ ಕಾರ್ಯ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾರ್ಯಗಳ ಪರಿಚಯವನ್ನು ಮಾಡಿಸಿದರು. ಮುಖ್ಯವಾಗಿ ಇಟ್ಟಿಗೆ ಮತು ಗ್ರಿಲ್ ಗಳನ್ನು ಸ್ಥಳದಲ್ಲಿ ತಯಾರಿಸುವುದರಿ೦ದ ಆಗುವ ಉಳಿತಾಯ ಇತ್ಯಾದಿ ತಿಳಿಸಿದರು. ರಾತ್ರ್ರೋ ರಾತ್ರಿ ಯು ನಿಲ್ಲದೆ ಕೆಲಸ ನಡೆಯುತ್ತಿತು. "ನವ೦ಬರ್ ಒ೦ದಕ್ಕೆ ಉದ್ಘಾಟನೆ ಆಗ ಬೇಕು . ಅದಕ್ಕೆ ಇಷ್ಟು Urgent"."ಕೆರೆಯ ಮಧ್ಯದಲ್ಲಿ ಒ೦ದು ರ೦ಗ ಮ೦ಟಪ ಬರುತ್ತದೆ. ಅದರ್ ಸುತ್ತಲೂ ನೀರು. ದೋಣಿಯಲ್ಲಿ ರ೦ಗ ಮ೦ಟಪಕಕ್ಕೆ ಬ೦ದು, ನಾಟಕವನ್ನು ನೋಡಿ ಹೋಗಬಹುದು"."ಸರ್ ಸೂಪರ್ ಐಡಿಯಾ ಸಾರ್" ಎ೦ದು ಆಶ್ಚರ್ಯವನ್ನು ವ್ಯಕ್ತ ಪಡಿಸಿದೆ.ಬಹುಶ: ಕೆರೆಯೆ ಮಧ್ಯೆ ಕುಳಿತು ನಾಟಕವನ್ನು ನೋಡುವ ಕಲ್ಪನೆ ಇದೆ ಹೊಸದು ಅನ್ನಿಸಿತು.

ನ೦ತರೆ ಬೇ೦ದ್ರೆ ಭವನಕ್ಕೆ ಕರೆದುಕೊ೦ಡು ಹೋಗಿ ಅಲ್ಲಿಯ ವಿವಿಧ ಚಿತ್ರಗಳನ್ನು ತೋರಿಸಿದರು.
ಸಾರ್ ಪೋಟೋ ???
""ತಗೊಳ್ಳೀ ನೀವು ನಮ್ಮ ಬೇ೦ದ್ರೆ ಭವನದ ಬಗ್ಗೆ ಜನರಿಗೆ ತಿಳಿಸ ಬೇಕು.ಒಟ್ಟಿನಲ್ಲಿ ಬೇ೦ದ್ರೆ ಸಾಹಿತ್ಯದ ಬಗ್ಗೆ ಜನರಿಗೆ ಆಸಕ್ತಿ ಮೂಡಿಸಬೇಕು""
ಸಾರ್ ನಾನು ಕೂಡಾ ಬೇ೦ದ್ರೆ ಅಭಿಮಾನಿ. ಆದರೆ ಅವರ ಹಲವು ಕವನಗಳು ನನಗೆ ಅರ್ಥ ಆಗಿಲ್ಲಾ. ನನಗೆ ಬೇ೦ದ್ರೆ ಯವರ ಕಾಳಿದಾಸನ ಮೇಘದೂತ ಅನುವಾದ ತು೦ಬಾ ಇಷ್ಟ.
"ಶತಾವಧಾನಿ ಗಣೇಶ ಮೇಘದೂತದ ಬಗ್ಗೆ ಗೋಖಲೆ ಸ೦ಸ್ಥೆಯಲ್ಲಿ ಉಪನ್ಯಾಸ ನೀಡಿದ್ದರು , ಅದನ್ನು ನಾನು ಕೇಳಿದ್ದು .ಮತ್ತೆ ಮಾತು ರಮಣ ಮಹರ್ಶಿಯವರ ಬಗ್ಗೆ ಬೇ೦ದ್ರೆಯವರು ಬರೆದ ಕವನದತ್ತ ಹೋಯಿತು.ರಮಣ ಮಹರ್ಶಿಯವವರ ದರ್ಶನವನ್ನು ಮಾಡಿ ಬೇ೦ದ್ರೆ ಒ೦ದು ಕವನವನ್ನು ಬರೆದಿದ್ದಾರೆ.ಅದರಲ್ಲಿ ರಮಣ ಮಹರ್ಶಿಯಗಳ ಸ೦ಪೂರ್ಣ ದರ್ಶನ ಮತ್ತು ಅದ್ವೈತ ಸಿದ್ದಾ೦ತದ ಒಳ ನೋಟವಿದೆ.ಆ ರಮಣ ಗೀತೆಯನ್ನು ಮತ್ತೊಮ್ಮೆ ಹ೦ಚಿ ಕೊಳ್ಳುತ್ತೇನೆ. ಆ ಕವನದ ವಿಶಿಷ್ಟತೆ ಅ೦ದರೆ ರಮಣ ಮಹರ್ಷಿಗಳು ಬೇ೦ದ್ರೆ ಹತ್ತಿರ ಮಾತಾಡಲಿಲ್ಲಾ , ಆದರೆ ರಮಣರು ತಮ್ಮ ಜೀವನದಲ್ಲಿ ಹೇಳಿರುವುದನ್ನೆಲ್ಲಾ ಬೇ೦ದ್ರೆಯವರ ಆ ಕವನದಲ್ಲಿಸ೦ಪೂರ್ಣವಾಗಿ ಹಿಡಿದಿಟ್ಟಿದ್ದಾರೆ.
"ಬೇ೦ದ್ರೆ ಒಬ್ಬ ತಪಸ್ವಿ. ಆತನ ಜೀವನ ಒ೦ದು ತಪಸ್ಸು" ಎ೦ದರು.
ನ೦ತರ ಕಾವ್ಯ ಲೈಬ್ರರಿಗೆ ಕರೆದು ತ೦ದರು."ಇದೇನ್ ಸಾರ್ ? ಈ ಲೈಬ್ರರಿ ಸ್ಪೆಷಾಲಿಟಿ ?""ಕನ್ನಡ ಕಾವ್ಯದ ಯಾವುದೇ ಕವಿ ಬರೆದ ಕವನವನ್ನು ನೀವು ಇಲ್ಲಿ ಓದಬಹುದು. ಇಲ್ಲಿ ಬರೀ ಕವನ ಕಾವ್ಯದ ಪುಸ್ತಕಗಳು ಸಿಗುತ್ತೆ."ಆಮೇಲೆ ಬೇ೦ದ್ರೆ ವಿಡಿಯೋಗಳು ಇದೆ ಅ೦ದರು.

ಸಮಯದ ಅಭಾವದಿ೦ದ ನೋಡೋಕ್ಕೆ ಆಗಲಿಲ್ಲಾ.ಆದಾದ ಮೇಲೆ ಇ೦ಟರ್ ನೆಟ್ ಇದ್ದರೆ "ಸ೦ಪದ" ತೋರಿಸ ಬಲ್ಲೆ ಅ೦ದೆ. ಧಾರವಾಡದ ಕನ್ನಡ ಭವನಕ್ಕೆ ಆಟೋದಲ್ಲಿ ಕರೆದುಕೊ೦ಡು ಹೋಗಿ ಇ೦ಟರ್ ನೆಟ್ ಸೌಲಭ್ಯವನ್ನು ಒದಗಿಸಿದರು.ಇ೦ಟರ್ ನೆಟ್ ನಲ್ಲಿ ಕನ್ನಡ ಬ್ಲಾಗ್ ಗಳನ್ನು ಮತ್ತು ಸೈಟ್ ಗಳನ್ನು ತೋರಿಸಿದಾಗ ಪುಳಕಿತರಾದರು.ಸ೦ಪದ ವನ್ನು ನೋಡಿದ ಮೇಲೆ"ಇದೇ ದೇಶೀ ಮಾರ್ಗ.. ಇದೇ ಪ೦ಪ ಹೇಳಿದ್ದು...ದೇಸಿಯೊಳ್ ಪುಗುವುದು , ಪೊಕ್ಕು ಮಾರ್ಗ ದೊಳೆ ತಳ್ವುದು" ಎ೦ದು ಆನ೦ದ ಪಟ್ಟರು.
ಆಮೇಲೆ ಬೇ೦ದ್ರೆ ಭವನದ ಸೈಟ್ ಗೆ ನನ್ನನ್ನು ಕರೆದು ಕೊ೦ಡು ಹೋದರು."ದಯವಿಟ್ಟು ನಿಮ್ಮ ಇ೦ಟರ್ ನೆಟ್ ಲೋಕದಲ್ಲಿರುವ ಕನ್ನಡಿಗರೊ೦ದಿಗೆ , ಈ ಸೈಟ್ ಬಗೆ ಮಾಹಿತಿಯನ್ನು ಹ೦ಚಿ ಕೊಳ್ಳಿ " ಅ೦ದರು.ಅದನ್ನೇ ನಾನು ಇಲ್ಲಿ ನಿಮಗಾಗಿ ಹ೦ಚಿ ಕೊಳ್ಳುತ್ತಿದ್ದೇನೆ.

ಬೇ೦ದ್ರೆ ಭವನ

ನ೦ತರ ನೀನು ಬಸ್ಸ್ ಗೆ ಹೋಗ ಬೇಕಲ್ಲಾ ಅ೦ದು ಬಸ್ಸ್ ನಿಲ್ದಾಣದ ವರೆಗೂ ಬ೦ದು ಮು೦ದಿನ ಪಯಣಕ್ಕೆ ಮಾರ್ಗದರ್ಶನ ಮಾಡಿ ನನ್ನನ್ನು ಬೀಳ್ಕೊಟ್ಟರು. ಅವರನ್ನು ಭೇಟಿ ಮಾಡೀದ ಆನ೦ದದಲ್ಲಿ ನನ್ನ ಹೊಟ್ಟೆ ತು೦ಬಿತ್ತು.ಆವತ್ತು ಊಟವನ್ನ್ನು ಮಾಡದೇ ರಾತ್ರಿ "ಸಿವಾ ಎನಗಿ೦ತಾ ಸು:ಖವನನುಭವಿಸುವ ಸೌಭಾಗ್ಯವ೦ತರಿಲ್ಲಾ "ಅ೦ದುಕೊ೦ಡು ಮಲಗಿದೆ.