NSS ಕ್ಯಾಂಪ್ ನಲ್ಲಿ ಜೇನು ! (ಭಾಗ 1)

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 1)

ನಮ್ಮದು ತೋಟದಲ್ಲಿ ಮನೆ ಆದುದರಿಂದ ನಮ್ಮ ಊರೊಳಗೆ ಹೋಗಿಬರಲು ಸದಾ ನಾನು ಸೈಕಲನ್ನೇ ಬಳಸುತ್ತಿದ್ದೆ. ನನ್ನ ಸೈಕಲ್ ಊರೊಳಗೆ ಬರುವಿಕೆಗಾಗಿ ನನ್ನ ಹಿರಿಯ ಸೀನಿಯರ್ ಬ್ರದರ್ಸ್ ಗಳು ನನ್ನ ಸಹಪಾಠಿಗಳು ಸದಾ ಕಾದಿರುತ್ತಿದ್ದರು. ನನ್ನ ಸ್ನೇಹಿತರು ರವಿಕಿರಣ, ವೆಂಕಟೇಶ, ಶಿವರಾಜ, ಜಾನಮದ್ದಿ, ಈರಣ್ಣ, ಕಟ್ಟಾ, ಹಾಗೂ ಸೀನಿಯರ್ ಗಳಾದ ಸಂತೋಷ, ತಿರುಮಲೇಶ.. ಇತರರು ನಾನು ಊರೊಳಗೆ ಬಂದೊಡೊನೆಯೇ ನನ್ನ ಜೊತೆಯಾಗುತ್ತಿದ್ದರು. ನಾನೂ ಕೂಡ ಹೋದಾಗ ಇವರ ಮನೆಯ ಮುಂದೆ ಒಂದು ರೌಂಡ್ ಹೋಗಿ ಬರುತ್ತಿದ್ದುದರಿಂದ ಅವರೂ ಓಡಿ ಬಂದು ನನ್ನ ಜೊತೆಗೆ ಸೇರಿಕೊಳ್ಳುತ್ತಿದ್ದರು. ನನಗಿಂತಲೂ ಮೂರು ವರ್ಷ ಸೀನಿಯರ್ ಆದ ತಿರುಮಲೇಶನು ನಾನು ಎಂಟನೇ ತರಗತಿಗೆ ಹಾಸ್ಟೆಲ್ ಸೇರಿದಾಗ ಅವರು ಅದೇ ಹಾಸ್ಟೆಲ್ ನಿಂದ ನಿರ್ಗಮಿತವಾಗಿದ್ದರು. ನಾನು ಹಾಸ್ಟೆಲ್ ನಲ್ಲಿ ಸೀನಿಯರ್ಸ್ ಎದುರು ಬಹುಬೇಗ ನೆಲೆ ನಿಲ್ಲಲು ಈ ಬಂಜಗೆರೆ ತಿರುಮಲೇಶ ಹಾಸ್ಟೆಲ್ ನಲ್ಲಿ ಮಾಡಿದ್ದ ಹವಾ ಕೂಡ ಕಾರಣ. ನಮ್ಮ ಊರಿನ ಹೆಸರನ್ನು ಕೇಳಿದ ತಕ್ಷಣ ನನ್ನಿಂದ ಸೇವೆ ತೆಗೆದುಕೊಳ್ಳಲು ಬಯಸಿದ ಒಂಭತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ತಿರುಮಲೇಶನೇ ಇವರುಗಳಿಂದ full ಸರ್ವೀಸ್ ತೆಗೆದುಕೊಂಡಿದ್ದ ಕಾರಣ ಯಾರೂ ನನ್ನನ್ನು ಹುರಿದು ಮುಕ್ಕಲಿಲ್ಲ. 

ಹಾಸ್ಟೆಲ್ ನಲ್ಲಿ ಹತ್ತನೇ ತರಗತಿಯ ಮುಗಿಸಿ ಚಿತ್ರದುರ್ಗದ ಎಸ್ ಜೆ ಎಂ ಕಾಲೇಜಿನಲ್ಲಿ ನಾನು ಸೇರಿದಾಗ ಅದೇ ಕಾಲೇಜಿನಲ್ಲಿ ಇದೇ ತಿರುಮಲೇಶ ಕಾಲೇಜಿನಿಂದ ಹೊರಹೋಗಿದ್ದ. ನಾನು ಕಾಲೇಜಿಗೆ ಸೇರಿ ಐದಾರು ತಿಂಗಳಾಗಿತ್ತು. ಅದಗಾಲೇ ನನಗೆ ಕಾಲೇಜಿಗೆ ಹೋಗಿಬರುವುದು ಬೋರಾಗುತ್ತಾ ಬಂದಿತ್ತು. ಅದೇ ಶಿವರಾಮ ಶಶಿ ಮೂರು ನಾಲ್ಕು ಜನ ಗಂಡು ಸ್ನೇಹಿತರು. ಕಾಲೇಜಿಗೆ ಬಂದು ಪಾಠ ಕೇಳಲು ಅಷ್ಟಾಗಿ ಮನಸ್ಸಿರಲಿಲ್ಲ. ಏನೇನೋ ಚಂಚಲತೆ, ಓದಬೇಕು ಬರೀಬೇಕು ಯಾವುದಕ್ಕೂ ಆಸಕ್ತಿ ಹೆಚ್ಚುಕಾಲ ಉಳಿಯುತ್ತಿರಲಿಲ್ಲ. ಪುಸ್ತಕ ಕೊಂಡುಕೊಳ್ಳಲಾಗದೇ ಪುಸ್ತಕಕ್ಕಾಗಿ ಕಾಲೇಜು library ಯಲ್ಲಿ ಒಂದು ಅಕೌಂಟ್ ಇರಲೆಂದು ಅದನ್ನು ಚಾಲ್ತಿಯಲ್ಲಿಟ್ಟುಕೊಳ್ಳಲು ಮಾತ್ರ ಪ್ರತಿವಾರ ಪುಸ್ತಕಗಳನ್ನು ಬದಲಾಯಿಸಿಕೊಂಡು ಬಂದು ಇಡುತ್ತಿದ್ದೆವು. ಹೀಗೆ ಮಾಡುತ್ತಿದ್ದಾಗ ಒಂದು ದಿನ ಲೈಬ್ರರಿಯ ಪುಸ್ತಕ ಬದಲಾಯಿಸಲು ಹೋದಾಗ ಈ ತಿರುಮಲೇಶ ಆಕಸ್ಮಿಕವಾಗಿ ಕಾಲೇಜಿನ ಮುಖ್ಯದ್ವಾರದಲ್ಲಿ ನನಗೆ ಕಂಡು "ಹೇಯ್ ಬಾ ಇಲ್ಲಿ.. ನಿನಗೊಂದು ಒಳ್ಳೆಯ ಚಾನ್ಸ್ ಕೊಡುಸುವೆ" ಅಂತ ಕಾಲೇಜಿನ ಎನ್ ಎಸ್ ಎಸ್ ಕಚೇರಿಗೆ ಕರೆದುಕೊಂಡು ಹೋದ.. ನನಗೆ ಯಾವ ಚಾನ್ಸ್ ?? ಏನು ಕತೆ ಅಂತ ಕೇಳುವ ಹೊತ್ತಿಗೆ "ಸಾರ್ ಇವನು ನಮ್ಮ ಬ್ರದರ್... ನಾಳೆ ಕ್ಯಾಂಪಿಗೆ ಬರುತ್ತಾನೆ ಕರೆದುಕೊಂಡು ಹೋಗಿ" ಎಂದು NSS ಅಧಿಕಾರಿಗಳಿಗೆ ಶಿಫಾರಸು ಮಾಡಿದ. ಅವರೋ ಕ್ಯಾಂಪಿನ Strength of attendance ಗಾಗಿಯೋ ಅಥವಾ ಈ ತಿರುಮಲ ಹೇಳಿದ ಎಂಬ ಕಾರಣಕ್ಕೋ "ಸರಿ ತಿರುಮಲ... ಬರಲಿ ಬಿಡು" ಎಂದು ತಿರುಮಲೇಶ ಹೇಳಿದ ಒಂದೇ ಮಾತಿಗೆ ಒಪ್ಪಿಕೊಂಡು ನಾಳೆ ಹನ್ನೊಂದು ಗಂಟೆಗೆ ಲಗೇಜ್ ತೆಗೆದುಕೊಂಡು ಬಂದು ಹಾಜರಿರಲು ತಿಳಿಸಿಯೇ ಬಿಟ್ಟರು. 

ಕಾಲೇಜಿಗೆ ಸರಿಯಾಗಿ ಹೋಗದ ನಾನು Ncc ಬಗ್ಗೆ ಕೇಳಿದ್ದೆ. ಆದರೆ ಈ NSS ಬಗ್ಗೆ ಆಗಲೀ NSS ಕ್ಯಾಂಪಿನ ಬಗ್ಗೆ ಆಗಲೀ ಯಾವ IDEAನೂ ಇಲ್ಲದಿದ್ದ ನನಗೆ ಕ್ಯಾಂಪಿಗೆ ಹೋಗಲು ಹಿಂಜರಿದೆನಾದರೂ ಕಾಲೇಜಿಗೂ ಹೋಗದೇ ದುರ್ಗದ ಕೋಟೆಯ ಮೇಲೆಲ್ಲಾ ಅಲೆಯುತ್ತಾ ಇದ್ದ ನನಗೆ ಏನೋ NSS ಕ್ಯಾಂಪ್ ಗೆ ಹೋಗಿ ನೋಡೋಣ ಎಂದೆನಿಸಿ ಇರುವ ಒಂದೆರಡು ಬಟ್ಟೆಗಳನ್ನು ಯಾವುದೋ ಬ್ಯಾಗಿಗೆ ತುಂಬಿ ಹೊರಟೆ. ನಮ್ಮ ಕಾಲೇಜಿನದೇ ಒಂದು ಬಸ್ಸು ಚಿತ್ರದುರ್ಗದ ಹತ್ತಿರದ ಸೊಂಡೆಕೆರೆ ಎಂಬ ಗ್ರಾಮಕ್ಕೆ ಹೊರಟಿತು. ಆ ಕ್ಯಾಂಪಿನಲ್ಲಿ ನಾನೊಬ್ಬನೇ ಪಿಯು ಹುಡುಗ ಉಳಿದವರೆಲ್ಲರೂ BA ಮತ್ತು BSc ಹುಡುಗರು. ಹುಡುಗರು ಹುಡುಗಿಯರು ಸಮ ಪ್ರಮಾಣದಲ್ಲಿ ಇದ್ದರು. ನಾನು ಮಾತ್ರ ಸಣ್ಣವನು ಪಿಯುಸಿ ಯವರು ಯಾರೂ ಬರದೇ ಇದ್ದುದರಿಂದ ಬರೀ ಹಿರಿಯರೇ ಇದ್ದುದಕ್ಕೆ ಕೊಂಚಮಟ್ಟಿಗೆ ನನಗೇ ಕೀಳರಿಮೆ ಉಂಟಾಯಿತು. ತಪ್ಪಿಸಿಕೊಂಡು ಬರಲು ಅವಕಾಶ ಇದ್ದರೂ ಆ ಊರಿನಿಂದ ಚಿತ್ರದುರ್ಗಕ್ಕೆ ಬರಲು ನನ್ನ ಬಳಿ ಒಂದು ಪೈಸೆಯೂ ಹಣ ಇರದೇ ಇದ್ದುದರಿಂದ ನಾನು ಕ್ಯಾಂಪಿನಲ್ಲೇ ಮುಂದುವರೆಯುವುದು ಅನಿವಾರ್ಯ ಆಯಿತು. ಅಷ್ಟಾಗಿ ಹೊಸಬರ ಪರಿಚಯದ ಸನಿಹಕ್ಕೂ ಹೋಗದ ನಾನು ಅನಿವಾರ್ಯವಾಗಿ ಹೊಸಬರ ಸ್ನೇಹ ಮಾಡಬೇಕಾಯಿತು. ಕ್ಯಾಂಪಿನ ಮೊದಲನೇ ದಿನ ಸೊಂಡೆಕೆರೆ ಗ್ರಾಮದ ಶಾಲೆ, ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ನಾವು ಸಂಜೆಯ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನೋಡಿ ಭಾಗವಹಿಸಿದ ಕೆಲವರು ಕನಿಷ್ಠ ಸಾಧನೆ ಮಾಡಿದ್ದನ್ನು ನೋಡಿ ಇವರಿಗಿಂತ ನಾನು ಭಾಗವಹಿಸಿದರೆ ಉತ್ತಮ ಎಂದು ತಿಳಿದು ನಾನು ನಾಳೆ ಭಾಗವಹಿಸಬೇಕು ಎಂದು ನಿರ್ಧಾರ ಮಾಡಿದೆ. ಎರಡನೆಯ ದಿನ ಪಕ್ಕದ ಹಳ್ಳಿ ಜೆ ಎನ್ ಕೋಟೆ ಎಂಬ ಊರಿನಲ್ಲಿ ಒಂದು ಹಳೆಯ ಬಳಕೆಯಲ್ಲಿಲ್ಲದ ಕಲ್ಯಾಣಿಯೊಂದರ ಸ್ವಚ್ಚತೆ ಮಾಡಬೇಕಾಗಿತ್ತು. ಎಲ್ಲರೂ ಉಪಹಾರ ಸೇವಿಸಿ ಗ್ರಾಮಸ್ಥರ ಪ್ರಾಯೋಜಕತ್ವದ ಟ್ರಾಕ್ಟರ್ ನಲ್ಲಿ ಆ ಹಳ್ಳಿಗೆ ಒಂಭತ್ತು ಒಂಭತ್ತುವರೆ ಸುಮಾರಿಗೆ ಗುದ್ದಲಿ, ಸಲಿಕೆ, ಪುಟ್ಟಿ, ಹಾರೆ, ಕೊಡಲಿ ಮಚ್ಚುಗಳನ್ನು ಹಿಡಿದು ಹೊರಟೆವು.

ಸಾರ್ವಜನಿಕ ಕಲ್ಯಾಣಿಯಲ್ಲಿ ಸರ್ಕಾರಿ ಜಾಲಿ ಗಿಡಗಳು, ಅಂಟ್ರಿಕೆ, ಉತ್ತರಾಣಿ ಕಡ್ಡಿಯ ಗಿಡಗಳು, ನಾನಾ ಗಿಡಗಂಟೆಗಳೆಲ್ಲವೂ ಬೆಳೆದು ಅಲ್ಲಿ ಕಲ್ಯಾಣಿಯೇ ಇಲ್ಲವೇನೋ ಎಂಬಂತೆ ಆಗಿತ್ತು. ಗ್ರಾಮದ ಹಿರಿಯರ ಸೂಚನೆ ಮೇರೆಗೆ ಅದನ್ನು ಸ್ವಚ್ಛಗೊಳಿಸಲು ಅಣಿಯಾಗಿ ಮೊದಲು ಗಿಡಗಳು, ಸೊಪ್ಪು ಸೆದೆ ಸವರಿ ಆಮೇಲೆ ಬಾವಿಯಲ್ಲಿ ಮುಚ್ಚಿದ್ದ ಹೂಳು ತೆಗೆಯುವುದು ಅಂದಿನ plan of work ಆಗಿತ್ತು. ಅದರಂತೆ ಮೊದಲು ಸರ್ಕಾರಿ ಜಾಲಿಗಿಡಗಳನ್ನು ಸವರುವ ಕೆಲಸಕ್ಕೆ ಅಡಿಯಿಟ್ಟೆವು. ನಾಲ್ಕು ತಂಡವಾಗಿ ಕಲ್ಯಾಣಿಯ ನಾಲ್ಕೂ ಮೂಲೆಗಳಿಂದ ಕೆಲಸ ಆರಂಭ ಮಾಡಿದೆವು. ಒಂದೆರಡು ಗಿಡಗಳನ್ನು ಕಡಿಯುವಾಗ ಅದರೊಳಗೆ ಪೊದೆಯಲ್ಲಿ ಕಟ್ಟಿದ ಜೇನುಗೂಡಿನಿಂದ ಜೇನುಹುಳುಗಳು ಎದ್ದು ಬಂದು ಗಿಡ ಕಡಿಯುತ್ತಿದ್ದ ದೀಪಕ್ ಎಂಬುವವನ ಬಲಗಣ್ಣಿನ ಹುಬ್ಬಿಗೆ ಕಚ್ಚಿತ್ತು. ನಂತರ ಹುಳಗಳು ಗುಂಯ್ ಎನ್ನುತ್ತಾ ಎದ್ದವು. ಸಿಟಿಯ ಹುಡುಗನಾದ ದೀಪಕ್ ಜೇನಿನ ಧಾಳಿಗೆ ಕಕ್ಕಾಬಿಕ್ಕಿಯಾಗಿ ಓಡಿದ. ಕ್ಯಾಂಪಿನ ಬಹುತೇಕ ಶಿಬಿರಾರ್ಥಿಗಳು ನಗರದವರೇ ಆದ್ದರಿಂದ ಅವರಿಗೆ ಈ ಜೇನುಹುಳಗಳ ಹೆದರಿಸಿ ಕೆಲಸ ಮಾಡುವ ಧೈರ್ಯ ಇರಲಿಲ್ಲ. ಇನ್ನು ಉಳಿದ ಕೆಲವರು ಹಳ್ಳಿಹುಡುಗರು ಇದ್ದರಾದರೂ ಜೇನು ಹುಳಗಳನ್ನು ಎದುರಿಸುವ ಸಮರ್ಥರು ಇರಲಿಲ್ಲ. ಜೇನು ಕಚ್ಚಿಸಿಕೊಂಡವನು ಬಾವಿಯಿಂದ ಮೇಲಕ್ಕೆ ಬಂದು "ಸಾರ್ ಜೇನು ಹುಳುಗಳು... ಜೇನುಹುಳುಗಳು... ಕಚ್ಚಿ ಬಿಡ್ತು ಸಾರ್..." ಎಂದು ಬೊಬ್ಬೆ ಹೊಡೆಯುತ್ತಿದ್ದ. 

ಅಲ್ಲಿಯೇ ಎಲ್ಲೋ ಕೆಲಸ ಮಾಡುತ್ತಿದ್ದ ನಾನು ಅವನ ಮಾತನ್ನು ಕೇಳಿ ಅವನತ್ರ ಧಾವಿಸಿದೆ. ಅವನ ಬಲಗಣ್ಣ ಉಬ್ಬಿನ ಮೇಲೆ ಹಣೆಯ ಭಾಗದಲ್ಲಿ ಜೇನು ಕಚ್ಚಿದ್ದರಿಂದ ಜೇನಿನ ಕೊಂಡಿಯ ಮುಳ್ಳೊಂದನ್ನು ಕಚ್ಚಿದ ಜಾಗದಲ್ಲಿ ಚುಚ್ಚಿತ್ತು. ಅದನ್ನು ಉಗುರಿನಿಂದ ಕಿತ್ತು ತೆಗೆದು ಮತ್ತೆಲ್ಲಿ ಕಚ್ಚಿದೆ ಎಂದದ್ದಕ್ಕೆ ಮತ್ತೆ ಎಲ್ಲಿ ಇಲ್ಲ ಎಂದ ದೀಪಕ್... ನಂತರ ಜೇನುಗೂಡು ಕಟ್ಟಿದ್ದ ಸ್ಥಳಕ್ಕೆ ಬಂದ ನಾನು ಮಚ್ಚೊಂದನ್ನು ತೆಗೆದುಕೊಂಡು ಜೇನು ಕೀಳಲು ಮುಂದಾದೆ. ಜೇನು ಗೂಡು ಕಟ್ಟಿದ ಗಿಡವನ್ನು ಕಡಿಯುವುದು ಬೇಡವೆಂದೂ, ಇನ್ನೂ ಕೆಲವರು ಶಿಬಿರಾರ್ಥಿಗಳು ಎಲ್ಲರೂ ಇಲ್ಲೇ ಇರುವುದರಿಂದಾಗಿ ಈಗ ಜೇನು ಹುಳುಗಳನ್ನು ಎಬ್ಬಿಸಿದರೆ ಎಲ್ಲರಿಗೂ ಕಚ್ಚುವವೆಂದೂ. ಈಗ ಅದರ ಸುದ್ದಿಗೆ ಹೋಗುವುದು ಬೇಡ ಎಂದು ತಲೆಗೊಂದು ಮಾತನ್ನು ಹೇಳುತ್ತಿದ್ದರು. ಅವರೆಲ್ಲರೂ ಹೇಳಿದ ಮಾತನ್ನು ಕೇಳದೆ ಅವರಿನ್ನೂ ಬೇಡ ಬೇಡ ಎಂದು ಹೇಳುತ್ತಿರುವಾಗಲೇ ಜೇನು ಕತ್ತರಿಸಿ ಹೊರಗೆಳೆದು ತಂದೆ. ಅದಾಗಲೇ ನಾನು ಜೇನು ತೆಗೆಯುವ ವಿಷಯದಲ್ಲಿ ಬಹು ನಿಪುಣನೂ ಆಗಿದ್ದರಿಂದ ನನಗೂ ಕಚ್ಚಿಸಿಕೊಳ್ಳದೇ, ಜೇನುತುಪ್ಪಕ್ಕೂ ಹಾನಿ ಮಾಡಿಕೊಳ್ಳದೇ ಕಿತ್ತು ತಂದೆ. ಕಿತ್ತ ಜೇನನ್ನು NSS ಅಧಿಕಾರಿಗಳಿಗೂ ಶಿಭಿರಾರ್ಥಿಗಳಾಗಿ ಬಂದಿದ್ದ ಕೆಲವು 'ರಾಣಿಜೇನುಗಳಿಗೂ', ಅನೇಕ ಅಕ್ಕ, ಅಣ್ಣಂದಿರುಗಳಿಗೆ ಜೇನನ್ನು ಕಿತ್ತು ಹಂಚಿದ್ದೆ. ಜೇನುಹುಳುಗಳು ಪುನಃ ಅಲ್ಲೇ ಕೂರಬಾರದೆಂದು ಜೇನಿನ ರೊಟ್ಟಿಯನ್ನು ಬಾವಿಯಿಂದ ಎಂಟತ್ತು ಅಡಿ ದೂರದ ಕೊನೆಗೆ ಸಿಕ್ಕಿಸಿದ್ದೆ. ಆ ಹುಳುಗಳು ನಾನು ಸಿಕ್ಕಿಸಿದ ರೊಟ್ಟಿಯ ಮೇಲೆ ಅರ್ಧ ಭಾಗದಷ್ಟು ಮತ್ತು ಇನ್ನರ್ಧ ತಾವು ಗೂಡು ಕಟ್ಟಿದ್ದ ಜಾಗದಲ್ಲೇ ಯಾವುದೋ ಕೊನೆಗೆ ಕೂತವು. ಆದರೆ ಕೆಲಸ ಮಾಡಲು ಅಡ್ಡಿಯಾಗಬಾರದೆಂದು ಪುನಃ ಅವು ಕೂತಿದ್ದ ರೆಂಬೆಯನ್ನೆ ಕತ್ತರಿಸಿ ಎಸೆದುದರಿಂದ ಎಲ್ಲಾ ಹುಳುಗಳು ರೊಟ್ಟಿಯ ಮೇಲೆ ಹೋಗಿ ಕೂತವು. ಮನುಷ್ಯನ ಹಸ್ತಕ್ಷೇಪ ಈ ಜೇನುಹುಳುಗಳ ಕುಟುಂಬ ಮತ್ತು ಸಂತಾನಕ್ಕೆ ಸಂಚಕಾರವೆಂದು ಬಿಸಿಲಿಗೆ ರೊಟ್ಟಿಯ ಮೇಲೆ ಕೂತ ಆ ಹುಳುಗಳು ಬೆಂಕಿ ಇಟ್ಟು ಸುಟ್ಟಾರು ಎಂಬ ತಳಮಳದಿ ಕಾಲ ಕಳೆಯುತ್ತಿದ್ದವು. 

ಈ ಒಂದು ಘಟನೆ ಅಲ್ಲಿ ಅಂದು ನೆರೆದಿದ್ದ ಕ್ಯಾಂಪಿನವರೆಲ್ಲರಿಗೂ ಕೆಲವೇ ನಿಮಿಷಗಳಲ್ಲಿ ನಾನು ಚಿರಪರಿಚಿತನಾಗಿಬಿಟ್ಟೆ. ನನ್ನನ್ನು ಕಂಡ ಪ್ರತಿಯೊಬ್ಬರೂ ಗುಣಗಾನ ಮಾಡಿದ್ದೇ ಮಾಡಿದ್ದು. ನಿನಗೆ ಜೇನುಹುಳುಗಳು ಎಂದರೇ ಭಯವಿಲ್ಲವೇ? ನಿನಗೆ ಮೊದಲೇ ಜೇನು ತೆಗೆಯುವ ಕಲೆ ಗೊತ್ತಿತ್ತ? ನಿನಗೆ ಕಚ್ಚುವುದಿಲ್ಲವೇ? ಹಾಗೆ ಹೀಗೆ ಎಂದು ಹತ್ತಾರು ಪ್ರಶ್ನೆಗಳ ಸುರಿಮಳೆ ಬಂದವು. ನಾನೂ ಕೂಡ ಅದರಲ್ಲಿ ಏನೋ ಮಹಾ ಪಂಡಿತನೆಂಬಂತೆ ನನಗೆ ಗೊತ್ತಿದ್ದ ಎಲ್ಲಾ ರೀತಿಯ ಮಾಹಿತಿಗಳನ್ನು ಕೇಳಿದವರಿಗೆಲ್ಲಾ ದೊಡ್ಡದಾಗಿ ಲೆಕ್ಚರಿಂಗ್ ಕೊಡುತ್ತಿದ್ದೆ. ಅದೊಂದು ತೆರನಾಗಿ ನನಗೆ ಗೊತ್ತಿರುವಷ್ಟು ಜೇನಿನ ಬಗ್ಗೆ ಬಹಳಷ್ಟು ಜನಗಳಿಗೆ ಗೊತ್ತಿಲ್ಲ... ನನಗೇ ಗೊತ್ತಿರುವುದು ಎಂಬ ಭ್ರಮೆ ನನಗಿತ್ತು ಎಂದು ನನಗೆ ಈಗ ಅನಿಸುತ್ತಿದೆ. ಆ ದಿನಾ ಪೂರಾ ಜೇನಿನ ಚರ್ಚೆಯಲ್ಲಿ ಕಳೆದು ಇತ್ತ ಕಲ್ಯಾಣಿಯ ಸ್ವಚ್ಚತಾ ಕಾರ್ಯಕ್ರಮ ನಮ್ಮೆಲ್ಲರ ಶ್ರಮದಾನ ದಿಂದ ನೆರವೇರಿತು.

ಆ ದಿನದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಕನ್ನಡ ನಾಡಿನ ರನ್ನದ ರತುನ ಕೇಳೋ ಕತೆಯನ್ನಾ... ನಾ ಹೇಳೋ ಕತೆಯನ್ನಾ... ಎಂಬ ಹಾಡನ್ನು ಜೋರಾಗಿ ಹಾಡಿದ್ದಕ್ಕೆ ಸಾರ್ವಜನಿಕರು ಮತ್ತು ಶಿಭಿರಾರ್ಥಿಗಳು ಹಾಡು ಮುಗಿಯುವವರೆಗೂ ಮಂತ್ರ ಮುಗ್ಧರಾಗಿದ್ದರು. ಮುಗಿದ ಮೇಲೆ ಅಭಿಮಾನದಿ ಗೌರವ ಪೂರಕ ಚಪ್ಪಾಳೆ ತಟ್ಟಿದ್ದರು. ಅಂದು ಗಾಯನ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದೆ. ಅಭಿನಂದನೆಗಾಗಿ ಅಂದು ಬಾರಿಸಿದ ಆ ಚಪ್ಪಾಳೆಗಳೇ ಇಂದಿಗೂ ನಾನು ಹಾಡುವ ಗೀಳು ಇಟ್ಟುಕೊಂಡಿರುವುದು.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ