Organic ಬೋಂಡ ಮಾಡುವ ವಿಧಾನ !

Organic ಬೋಂಡ ಮಾಡುವ ವಿಧಾನ !

೧. ಮೊದಲಿಗೆ ಸಿಪ್ಪೆ ಸುಲಿದ ಅಲೂಗಡ್ಡೆ ಬೇಯಿಸಿಕೊಳ್ಳಿ. ಬೆಂದ ಅಲೂಗಡ್ಡೆಯನ್ನು ’ಕೈಯಲ್ಲಿ’ ಹದವಾಗಿ ಮ್ಯಾಶ್ ಮಾಡಿಕೊಳ್ಳಿ. (ನರಕದಲ್ಲೂ ನಮ್ಮನ್ನು ಹೀಗೇ ಶಿಕ್ಷಿಸುತ್ತಾರೆ ಎಂದು ಮೊನ್ನೆ ಅಲ್ಲಿಂದ ಬಂದ ಒಬ್ಬರು ಹೇಳಿದರು)

೨. ಮೊದಲೇ ಸಿದ್ದಪಡಿಸಿಕೊಂಡ ಒಗ್ಗರಣೆ, ಮತ್ತು ರುಚಿಗೆ ತಕ್ಕಂತೆ ಉಪ್ಪುನ್ನು ಹಾಕಿ ’ಕೈಯಾರೆ’ ಹದವಾಗಿ ಕಲಸಿ, ಉಂಡೆ ಮಾಡಿಟ್ಟುಕೊಳ್ಳಿ. (ಮೊದಲು ಒಡೆಯುವುದು ಮತ್ತೆ ಕಟ್ಟುವುದು ... ಯಾಕೆ, ಏನು ಅಂತೆಲ್ಲ ಪ್ರಶ್ನೆ ಬೇಡ)

೩. ಒಂದು ಸಣ್ಣ ಪಾತ್ರೆಯಲ್ಲಿ ಒಂದು ಕಪ್ ಬೇಸನ್ ಹಿಟ್ಟು ಹಾಕಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಅಚ್ಚಮೆಣಸಿನಕಾಯಿ ಪುಡಿಯನ್ನು ಹಾಕಿ.

೪. ಸ್ವಲ್ಪ ನೀರನ್ನು ಹಾಕಿ, ಅತಿ ಗಟ್ಟಿಯೂ ಆಗದಂತೆ, ಅತಿ ಅಳಕವೂ ಆಗದಂತೆ, ಗಂಟಾಗದಂತೆ, ಕೈಯ್ಯಾರೆ ಕಲಿಸಿ (ಪಾತ್ರೆಯಲ್ಲಿನ ವಸ್ತುಗಳು ಯಾವ ಯಾವ ಗುಣವಿದ್ದರೇನು, ನೀರು ಎಲ್ಲವನ್ನು ಒಟ್ಟಿಗೆ ಹಿಡಿದಿಟ್ಟಿರುತ್ತದೆ. ಹೆತ್ತ ತಾಯಿ’ಯಂತೆ)

೫. ಒಂದು ಬಾಂಡ್ಲೆಯಲ್ಲಿ ಕಡಲೇಕಾಯಿ ಎಣ್ಣೆ ಅಥವಾ ನೀವು ಬಳಸುವ ಯಾವುದೇ ಖಾದ್ಯ’ಬಲ್ ಎಣ್ಣೆಯನ್ನು ಬಿಸಿಗೆ ಇಡಿ. (ಸ್ಟೋವ್ ಹಚ್ಚಲು ಮರೆಯಬೇಡಿ)

೬. ಉಂಡೆ ಮಾಡಿಟ್ಟುಕೊಂಡಿರುವ ಪಲ್ಯವನ್ನು ಕಲಿಸಿರುವ ಹಿಟ್ಟಿನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ’ಕೈಯ್ಯಾರೆ’ ಅದ್ದಿ, ಹುಷಾರಾಗಿ ಎಣ್ಣೆಯಲ್ಲಿ ಬಿಡಿ. (ತಣ್ಣೀರಿನಲ್ಲಿ ಕಲಿಸಿರುವ ಹಿಟ್ಟಿನ ಹೊದಿಕೆ ಹೊತ್ತ ಪಲ್ಯಕ್ಕೆ ಮೊದಲು ಅತೀ ಬಿಸಿ ಎನ್ನಿಸಿದರು, ಅದು ಆಮೇಲೆ ಅಡ್ಜಸ್ಟ್ ಮಾಡಿಕೊಳ್ಳುತ್ತದೆ)

೭. ಎತ್ತರದಿಂದ ಎಣ್ಣೆಯಲ್ಲಿ ಬಿಟ್ಟಲ್ಲಿ ಎಣ್ಣೆ ಹಾರಿ ಅಪಘಾತವಾದೀತು. ಎಚ್ಚರ ! (ಹಾಗೆಂದುಕೊಂಡು ನಿಮ್ಮ ಕೈಯನ್ನೇ ಎಣ್ಣೆಯಲ್ಲಿ ಅದ್ದದಿರಿ)

೮. ಎಣ್ಣೆಯಲ್ಲಿ ಸ್ನಾನ ಮಾಡುತ್ತಿರುವ ಬೋಂಡವನ್ನು ಆಗಾಗ ತಿರುಗಿಸಿ ಎಲ್ಲೆಡೆ ಬೇಯುವಂತೆ ನೋಡಿಕೊಳ್ಳಿ. (ಪೂರ್ತಿ ಸರಿಯಾಗಿ ಬೇಯದ ಬೋಂಡ ತಿಂದರೆ ಏನಾಗುತ್ತದೆ ಎಂಬುದನ್ನು ಹೇಳಲಾರೆ)

೯. ಬೊಂಬಾಯಿ ಬೋಂಡ ಆಲಿಯಾಸ್ ಆರ್ಗಾನಿಕ್ ಬೋಂಡ ತಿನ್ನಲು ರೆಡಿ. (ಮೊದಲು ಅತಿಥಿಗಳಿಗೆ ನೀಡಿ. ಅವರಿಗೇನು ಆಗದಿದ್ದರೆ ನೀವೂ ತಿನ್ನಿ)

ಅಲ್ರೀ ಸ್ವಾಮಿ ! ಏನು ನಮ್ ಜೊತೆ ಆಟ ಆಡ್ತೀರ? ಎಲ್ಲರೂ ಬೋಂಡಾ ಮಾಡೋ ವಿಧಾನವನ್ನೇ ಮೆಗಾ ಸೀರಿಯಲ್’ನಂತೆ ಎಳೆದೂ ಎಳೆದೂ, ಹಳೇ ಕಥೆ ಇರೋ ಹೊಸಾ ಸಿನಿಮಾದ ಹಾಗೆ ಹೇಳಿ ಕೊನೆಯಲ್ಲಿ ಆರ್ಗಾನಿಕ್ ಬೋಂಡ ಅಂತೀರಾ?

ತಪ್ಪಾಗಿದ್ರೆ ಕ್ಷಮಿಸಿ ... ನಮ್ ಇಸ್ಕೂಲಿನಲ್ಲಿ ನಮ್ ಮೇಷ್ಟ್ರು ಹೇಳಿಕೊಟ್ಟಿದ್ರು. "ಕೈ" ಅಂದರೆ ದೇಹದ ಒಂದು ಅಂಗ. ಆಂಗ್ಲದಲ್ಲಿ ’ಅಂಗ’ವನ್ನು Organ ಎನ್ನುತ್ತಾರೆ ಅಂತ.

ಅಂದ ಮೇಲೆ ಕೈಯಾರೆ ಮಾಡಿದ ಬೋಂಡ Organic ಬೋಂಡ ತಾನೇ?

ಚಿತ್ರ ಕೃಪೆ: ನಾನೇ ತೆಗೆದ ಚಿತ್ರ

Comments

Submitted by partha1059 Mon, 09/24/2012 - 08:36

In reply to by partha1059

ಮೊದಲ ಸಾಲು 'ಸಿಪ್ಪೆ ಸುಲಿದ ಆಲುಗೆಡ್ಡೆ ಬೇಯಿಸಿಕೊಳ್ಳೀ'
ನಿಮಗೆ ಬೊಂಡ ಮಾಡಕ್ಕೆ ಬರಲ್ಲ ಅಂತ ಗೊತ್ತಾಯುತು ಬಿಡಿ :))))

ಬೇಯಿಸಿದ ಆಲುಗೆಡ್ಡೆಯ ಸಿಪ್ಪೆ ಸುಲಿದು ಇಟ್ಟುಕೊಳ್ಳೀ ಎಂದು ಇರಬೇಕಾಗಿತ್ತು :))

Submitted by bhalle Mon, 09/24/2012 - 17:05

In reply to by partha1059

೧. ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿಯುವುದು ಸ್ವಲ್ಪ ಕಷ್ಟದ ಕೆಲಸ. ಒಂದು ಬಿಸಿ ಇರುತ್ತದೆ ಕೈ ಸುಡುತ್ತೆ ಇನ್ನೊಂದು ವಿಚಾರ ಬೇಯಿಸಿದ ಆಲೂಗಡ್ಡೆ ವೇಸ್ಟ್ ಆಗುವ ಸಂಭವವೂ ಹೆಚ್ಚು ೨. ಆಲೂ ಗಡ್ಡೆಯ ಸಿಪ್ಪೆಯನ್ನು ತೆಗೆದು ಬೇಯಿಸಿದರೆ, ಬರೀ ಮ್ಯಾಶ್ ಮಾಡುವ ಕೆಲಸವಷ್ಟೇ ಉಳಿಯುತ್ತದೆ. ಖಂಡಿತ ನನಗೆ ಪಲ್ಯ ಮಾಡಲು ಗೊತ್ತು ಮಾರಾಯ್ರೇ :-))))
Submitted by bhalle Mon, 09/24/2012 - 17:02

In reply to by partha1059

ಅಂದರೇ, ಬೇಯಿಸಿದ ಅಲ್ಲೂಗಡ್ಡೆಯನ್ನು ಹೋಟೆಲ್’ನವರಂತೆ ಕಾಲಲ್ಲಿ ತುಳಿಯದಿರಿ ... ಪಲ್ಯವೇ ಬೇಕಾದಲ್ಲಿ ಕೈಯಲ್ಲಿ ಮಾಡಿ ... ಆರ್ಗ್ಯಾನಿಕ್ ಬೇಕಿದ್ದಲ್ಲಿ ಕಾಲೂ ನೆಡೆಯುತ್ತದೆ ... ಅದೂ ಒಂದು ಆರ್ಗನ್ ತಾನೇ?
Submitted by gopaljsr Mon, 09/24/2012 - 16:04

:))))

Submitted by venkatb83 Mon, 09/24/2012 - 16:58

ಭಲ್ಲೆ ಅವ್ರೆ ಮೊದಲಿಗೆ ಈ ಬರಹ ಬರೆದದ್ದು ನಮ್ ಗಣೇಶ್ ಅಣ್ಣ ಅಂದುಕೊಂಡಿದ್ದೆ...(ನವನವೀನ ಸಂಪದ ಬರಹಗಾರರ ಹೆಸರನ್ನು ಚಿಕ್ಕದಾಗಿ ಪ್ರಕಟಿಸುತ್ತಿದೆ..) ಕಾರಣ ಈ ತಿಂಡಿ ತೀರ್ಥ (ಛೆ ಛೆ ಎನ್ನದಿರಿ)ಬಗ್ಗೆ ಹೆಚ್ಚಿಗೆ ಅವ್ರೆ ಅಲ್ವ ಬರೆಯೋದು ಅದ್ಕೆ... ನೀವು ಹೇಳಿದ ಹಾಗೆ ನಾ ಅಂತು ಪ್ರಯತ್ನಿಸೋಲ್ಲ.. ಆ ತಾಪತ್ರಯಕ್ಕಿಂತ ಯಾವ್ದಾರ ಉಡುಪಿ ಹೋಟೆಲ್ ಗೆ ಹೋಗಿ ತಿನ್ನುವೆ..!! ಅದು 'ಅನರೋಗ್ಯಾನಿಕ್' ಆದರು ಅಡ್ಡಿಯಿಲ್ಲ ಮಾರಾಯ್ರೇ..!! ಮುಸ್ಸ0ಜೆಲಿ ನಿಮ್ ಬರಹ ಓದಿ ಭಲೇ ಮಜವಾಯ್ತು.. ಶುಭವಾಗಲಿ.. ಅಂದ್ ಹಾಗೆ ನಮಗೆ ನಿಮ್ಮ ಯಾವ ಚಿತ್ರವೂ ಕಾಣ ಸಿಗಲಿಲ್ಲ..!! ನನ್ನಿ \|
Submitted by bhalle Mon, 09/24/2012 - 17:08

In reply to by venkatb83

ಒಂದು ಒಳ್ಳೆಯ ಚಿತ್ರ ಹಾಕಿದ್ದೆ.. ನಾನು ’ಮುನ್ನೋಟ’ / ’ಸೇವ್’ ಮಾಡಿದಾಗ ಕಾಣದಿದ್ದರೂ ಫೈಲ್ ಅಟ್ಯಾಚ್ ಆಗಿದೆ ಎಂದು ತೋರಿಸಿತು. ನನಗೆ ಗೊತ್ತಿಲ್ಲ :-( ಗಣೇಶ್’ರು ಸದ್ಯಕ್ಕೆ ಗುಜರಿ ಕ್ಲೀನ್ ಮಾಡುವುದರಲ್ಲಿ ಬಿಜಿ ಇರುವುದರಿಂದ ಅವರ ಕೆಲಸವನ್ನು ಇಲಿ’ಯಾದ ನನಗೆ ಹೇಳಿದ್ದರು :-))) ಉಡುಪಿ ಹೋಟೆಲ್’ನವರದು ಭಯಂಕರ ಆರ್ಗ್ಯಾನಿಕ್ :-))))
Submitted by partha1059 Mon, 09/24/2012 - 18:15

In reply to by bhalle

>>> ಗಣೇಶ್’ರು ಸದ್ಯಕ್ಕೆ ಗುಜರಿ ಕ್ಲೀನ್ ಮಾಡುವುದರಲ್ಲಿ ಬಿಜಿ ಇರುವುದರಿಂದ ಅವರ ಕೆಲಸವನ್ನು ಇಲಿ’ಯಾದ ನನಗೆ ಹೇಳಿದ್ದರು :-))) ಅಯ್ಯಯ್ಯೊ ಇಲಿ ತಿನ್ನುವ‌ ಬೊ0ಡವೆ ನನಗೆ ಬೇಡ‌ ನನಗೆ ಬೇಡ‌ ನನಗೆ ಬೇಡ‌ !
Submitted by ಗಣೇಶ Mon, 09/24/2012 - 23:09

In reply to by partha1059

:) :) ಭಲ್ಲೇಜಿ, ನೇರ ನಮ್ಮ ಡಿಪಾರ್ಟ್‌ಮೆಂಟ್‌‍ಗೇ ಲಗ್ಗೆ ಇಟ್ಟಿದ್ದೀರಿ! ಅದೂ ಭರ್ಜರಿಯಾಗೇ..ಸುಸ್ವಾಗತ :) ಪ್ರತೀ ಸಾಲಲ್ಲೂ "ಏನಪ್ಪಾ ಇದು ಆರ್ಗನಿಕ್"ಎಂದು ಹುಡುಕಾಡಿ,ಹುಡುಕಾಡಿ...ಕೊನೆಗೆ ಆರ್ಗನಿಕ್ ತಲುಪಿದಾಗ "ಸಿಕ್ಕಿಲ್ಲ"ದಷ್ಟೇ ಖುಷಿಯಾಯಿತು. :) ಇನ್ನೊಂದು ಅಡುಗೆ ವಿಷಯದಲ್ಲಿ ನೆನಪಿಡಲೇಬೇಕಾದ ಮಾತು : ಸೀನಿಯರ್‌ಗಳಾದ(ಅಡುಗೆ ವಿಷಯದಲ್ಲಿ) ನಾವು ಹೇಳಿದ್ದೇ ಸರಿ. ಪಾರ್ಥರು ಹೇಳಿದ್ದಾರೆ..ಬೇಯಿಸಿದ ಮೇಲೇ ಸಿಪ್ಪೆ ಸುಲಿಯಿರಿ.. ಅಂದ ಮೇಲೆ ಮುಗಿಯಿತು- ಹಾಗೇ ಮಾಡಿ. ಇಲ್ಲದಿದ್ದರೆ "ನನಗೆ ಬೇಡ‌ ನನಗೆ ಬೇಡ‌ ನನಗೆ ಬೇಡ‌ !"
Submitted by bhalle Mon, 09/24/2012 - 23:21

In reply to by ಗಣೇಶ

ಗಣೇಶ'ರು ಬರೆದಿದ್ದು ಮಹಾಭಾರತ .... ಪಾರ್ಥಸಾರಥಿ ನುಡಿದಿದ್ದು ಭಗವದ್ಗೀತೆ ... ಇಂತಹ ಮಹಾಮಹಿಮರು ಹೇಳಿದ ಮೇಲೆ ಆಯ್ತು ಬಿಡಿ ... ದೂಸ್ರಾ ಮಾತಿಲ್ಲ ... ಸುಲಿಸಿ ಬೆಂದರೂ ಬೆಂದು ಸುಲಿಸಿಕೊಂಡರೂ ಕೊನೆಗೆ ನಿಲ್ಲುವುದು ಆಲೂಗಡ್ಡೆ ನಗ್ನ
Submitted by ಗಣೇಶ Mon, 09/24/2012 - 23:46

In reply to by bhalle

>>ಆಲೂಗಡ್ಡೆ ನಗ್ನ ಹಾಗಿದ್ದರೆ ಸಿಪ್ಪೆ ಸುಲಿಯದೇ ಮ್ಯಾಶ್ ಮಾಡಲು ಪಾರ್ಥಸಾರಥಿಯವರು ಗೀತಿಸಿದ್ದಾರೆ. ಅನರೋಗ್ಯಾನಿಕ್ ತಿಂದು ಅಭ್ಯಾಸವಿರುವ ಸಪ್ತಗಿರಿವಾಸಿಗೇ ಮೊದಲು ತಿನ್ನಿಸಿ.. :)
Submitted by bhalle Mon, 09/24/2012 - 17:00

ಅಂದರೇ, ಬೇಯಿಸಿದ ಅಲ್ಲೂಗಡ್ಡೆಯನ್ನು ಹೋಟೆಲ್’ನವರಂತೆ ಕಾಲಲ್ಲಿ ತುಳಿಯದಿರಿ ... ಪಲ್ಯವೇ ಬೇಕಾದಲ್ಲಿ ಕೈಯಲ್ಲಿ ಮಾಡಿ ... ಆರ್ಗ್ಯಾನಿಕ್ ಬೇಕಿದ್ದಲ್ಲಿ ಕಾಲೂ ನೆಡೆಯುತ್ತದೆ ... ಅದೂ ಒಂದು ಆರ್ಗನ್ ತಾನೇ? :-)))))
Submitted by bhalle Mon, 09/24/2012 - 19:03

ಈ ಪ್ರಶ್ನೆ ಬರಬಹುದು ಎಂದನಿಸಿಯೇ ನಾನು ಮುಂಚೆ ಹೇಳಿದ್ದು "ಮೊದಲು ಅತಿಥಿಗೆ ಕೊಡಿ ಆಮೇಲೆ ನೀವು ತಿನ್ನಿ ಅಂತ" ಅಂದರೆ ಇದು ಇಲಿ ಮಾಡಿದ ಬೋಂಡ ತಿಂದ ಬೋಂಡ ಅಲ್ಲ :-)) ಅಂದ ಹಾಗೆ ratatouille ಚಿತ್ರ ನೋಡಿದ್ದೀರಾ?
Submitted by makara Mon, 09/24/2012 - 20:09

ಭಲ್ಲೇಜಿ, ಎಲ್ಲರೂ ಗಣೇಶನಿಗೆ ಪ್ರಿಯವಾದ ಕಡುಬು ಮಾಡುವ ತರಾತುರಿಯಲ್ಲಿದ್ದರೆ ನೀವೊಬ್ಬರು ಮಾತ್ರ ಇಲಿಯನ್ನು ಜ್ಞಾಪಿಸಿಕೊಂಡು ಅದಕ್ಕೆ ಪ್ರಿಯವಾದ ಬೋಂಡ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದೀರ. ಎಷ್ಟೇ ಆಗಲಿ ನೀವು ಪ್ರತಿನಿತ್ಯವೂ ಮೂಷಿಕದೊಂದಿಗೆ ಒಡನಾಟವಿಟ್ಟುಕೊಂಡಿರುವವರಲ್ಲವೆ? :)) ಅಂದ ಹಾಗೆ ನೀವು ಸಂಪದದಲ್ಲಿ ಸೇರಿಸಿದ ಬೋಂಡಾವನ್ನು ಯಾವ ಇಲಿ ಕಚ್ಚಿಕೊಂಡು ಹೋಯಿತೋ ಏನೋ ಪಾಪ! ಒಟ್ಟಾರೆಯಾಗಿ ಈ ಆರ್ಗಾನಿಕ್ ಬೋಂಡಾ ಭಲೇ ಭಲ್ಲೇ ಆಗಿದೆ :))
Submitted by bhalle Mon, 09/24/2012 - 21:17

In reply to by makara

ಶ್ರೀಧರ್ ಅವರಿಗೆ ನಮಸ್ಕಾರಗಳು ನಿಜ ಗಣಪನನ್ನೇನೂ ಎಲ್ಲರೂ ನೋಡೀಕೊಳ್ಳುತ್ತಾರೆ ... ಅವನನ್ನು ಹೊರಲು ಇಲಿಗೆ ಶಕ್ತಿಬೇಡವೇ ? ಬರೀ ಸಿಹಿ ತಿಂದರೆ ಸರಿಹೋಗೋಲ್ಲ ಎಂದೆನಿಸಿ ಖಾರವಾಗಿ ಏನು ಮಾಡಬಹುದು ಎಂದುಕೊಂಡೆ ... ಮನಕ್ಕೆ ಬಂದಿದ್ದು ಆಂಬೋಡೆ ಮತ್ತು ಬೋಂಡ ... ಬೋಂಡಕ್ಕೆ ಹೋಲಿಸಿದರೆ ಆಂಬೋಡೆ ಸ್ವಲ್ಪ ಹೆಚ್ಚೇ ಆರ್ಗಾನಿಕ್ ಅದಕ್ಕೇ ಕೆಲಸ ಸಲೀಸಾಗಲಿ ಎಂದುಕೊಂಡೂ ಬೋಂಡ ಮಾಡಿದ್ದು ... ಯಾವ ಪರಿ ಡಿಮ್ಯಾಂಡು ಎಂದರೆ ಚಿತ್ರವನ್ನೂ ತಿಂದು ಬಿಟ್ಟರು ನಮ್ಮ ಮೂಷಿಕ ಮಂದಿ :-))))
Submitted by Aravind M.S Tue, 09/25/2012 - 12:43

ಭಲ್ಲೆಯವರೆ, ಚೆನ್ನಾಗಿ ಬರ್ದಿದೀರ. ನೀವು ಎಲ್ಲಾ ಕಡೆ ಕೈಯಾರೆ ಕೈಯಾರೆ ಅನ್ನೋದು ನೋಡಿದ್ರೆ ನಿಮ್ಮ ನೆಚ್ಚಿನ ಲೇಖಕ ಕೈಯ್ಯಾರ ಕಿ~ಇಣ್ಣ ರೈ ಇರಬಹುದಾ ಅನಿಸ್ತಿದೆ :). - ಅರವಿಂದ
Submitted by bhalle Tue, 09/25/2012 - 20:31

In reply to by Aravind M.S

ಹ ಹ ಹ ಧನ್ಯವಾದಗಳು ಅರವಿಂದ 'ಕೈಯ್ಯಾರೆ' ಎಂದು ಹೇಳುತ್ತ ಕಾಲು ಬಳಸಿದಿರಿ ಅನ್ನೋದು ಉದ್ದೇಶ ... ಎಷ್ಟು ನಿಜವೋ ಗೊತ್ತಿಲ್ಲ, ಹೋಟೆಲ್'ನವರು ಅಲೂಗಡ್ಡೆಯನ್ನು ಕಾಲಲ್ಲಿ ತುಳಿಯುತ್ತಾರೆ ಎಂದು ಚಿಕ್ಕಂದಿನಲ್ಲಿ ನನಗೆ ಹೇಳಿದ್ದರು ! ಕಾಲು ಮತ್ತು ಆಲೂ ನಡೂವೆ ಗೋಣಿಚೀಲ ಇರುತ್ತಂತೆ?
Submitted by Chikku123 Wed, 09/26/2012 - 11:49

:) :) :) ಅಂತೂ ಸಂಪದಿಗರು ಅಡಿಗೆ ಮಾಡೋದ್ರಲ್ಲಿ ಎತ್ತಿದ ಆರ್ಗನ್ (ಕೈ)!!!
Submitted by bhalle Wed, 09/26/2012 - 17:52

In reply to by Chikku123

ಹ ಹ ಹ ಹ ಸಂಪದಗಿತ್ತಿಯರ ಅಭಾವ ಇರುವುದರಿಂದ ಸಂಪದಿಗರು ಲೇಖನಿ (ಕೀಬೋರ್ಡ್) ಹಿಡಿಯಲೂ ರೆಡಿ, ಅಡುಗೆ ಮಾಡುವುದಕ್ಕೂ ರೆಡಿ
Submitted by venkatb83 Wed, 09/26/2012 - 18:09

In reply to by bhalle

ಅಡುಗೆ ಮಾಡುವುದಕ್ಕೆ ರೆಡಿ -ಚಿತ್ರ ಹಾಕಲಿಕ್ಕೂ ರೆಡಿ- ಆದ್ರೆ ತಿನ್ನೋಕೆ ಮಾತ್ರ ಯಾರೂ ಕೊಡಲ್ಲ...!! ನಮ್ ನಾಲಿಗೆಲಿ ನೀರೂರುತ್ತಿದ್ರೆ ನಾವ್ ಕೂಲ್ ಕೂಲ್ ಅಂತ ಹೇಳಿ ಸಮಾಧಾನ ಮಾಡ್ಕೊಬೇಕು.. ಇದ್ ನ್ಯಾಯವೇ?
Submitted by venkatb83 Thu, 09/27/2012 - 14:29

ನಿಮ್ಮ ಉತ್ತರ‌ ಗಮನಿಸಿದ‌ ಮೇಲೆ ಬೋ0ಡ‌ ತಿನಲಿಕ್ಕೆ ಬರಲು ಭಯವಾಗುತ್ತಿದೆ.... ಆ ಸ0ಪ್ರದಾಯ‌ (ಅತಿಥಿಗಳಿಗೆ ಮೊದಲು) ಬದಲಿಸುವ‌... ಈ ಸಾರಿ ನೀವೆ ತಿನ್ನಿ ಒ)ದು ಘ0ಟೆ ನನ್ತರ‌ ನಾ ತಿನ್ನುವೆ.....!!