POK ಕಾಣದ ರೇಖೆಯ ಕಥನ

POK ಕಾಣದ ರೇಖೆಯ ಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೫

“ಪ್ರಧಾನಿ ನೆಹರೂ ಆಗ ಮಾಡಿದ ಎರಡು ತಪ್ಪುಗಳು ಐತಿಹಾಸಿಕ ಪ್ರಮಾದಕ್ಕೆ ಕಾರಣವಾದವು. ಝೀಲಂ ನದಿಯನ್ನು ದಾಟಿ ಮುಂದೆ ಹೋಗದಂತೆ ನೆಹರೂ ಮಿಲಿಟರಿಗೆ ಆದೇಶಿಸಿದರು. ನುಸುಳುಕೋರರನ್ನು ಹೊಡೆದು ಓಡಿಸುವ ಬದಲು ವಿಶ್ವಸಂಸ್ಥೆಯನ್ನು ಮಧ್ಯಸ್ಥಿಕೆಗೆ ಕರೆದರು. ಸಂಚುಕೋರರು ತೋಡಿದ ಹಳ್ಳಕ್ಕೆ ನೆಹರೂ ಬಿದ್ದರು, ದೇಶವೂ ಬಿತ್ತು. ಯಾವತ್ತೂ LoC is not a legally recognised border. ಮೂರುಮೂರು ಬಾರಿ ಯುದ್ಧಗಳಾದವು, ಮೂರು ಮೂರು ಬಾರಿ ದೇಶ ವಿಭಜನೆಯಾಯಿತು. ತಾಷ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ ಅಂತ ಸಹಿಯ ಮೇಲೆ ಸಹಿ ಹಾಕಲಾಯಿತು. ಎಲ್ ಒ ಸಿ ವಿಚಾರ ಹಾಗೇ ಉಳಿಯಿತು. ಪಿಒಕೆ ಅಲ್ಲೇ ಉಳಿಯಿತು. ಭಯೋತ್ಪಾದಕರ ಹೆಬ್ಬಾಗಿಲು ಇನ್ನೂ ಈಗಲೂ ತೆರೆದೇ ಇದೆ.” ಈ ಕೃತಿಯ ಬೆನ್ನುಡಿಯಲ್ಲಿ ಕಂಡ ಸಾಲುಗಳಿವು.

ಕಾಶ್ಮೀರ, ಭಾರತದ ಸ್ವರ್ಗದಂತಹ ರಮಣೀಯ ಭೂಮಿ, ಆದರೆ ರಕ್ತದ ಕಲೆಗಳಿಂದ ಗಾಯಗೊಂಡ ಒಂದು ದುರಂತದ ಕಣಿವೆ. ಸಾವಿರಾರು ವರ್ಷಗಳ ಇತಿಹಾಸದ ತವರೂರು, ಭಾರತಮಾತೆಯ ಅಂಗವಾಗಿಯೇ ಉಸಿರಾಡಿದ ಈ ಭೂಮಿಯ ಪ್ರತಿಯೊಂದು ಕಲ್ಲೂ, ಮರವೂ, ಗಾಳಿಯೂ ಹಿಂದೂ ಸಂಸ್ಕೃತಿಯ ಗೀತೆಯನ್ನೇ ಹಾಡುತ್ತಿತ್ತು. ಆದರೂ, ಇಂದು ಆ ಭೂಮಿಯನ್ನು ನಾವು ಕಳೆದುಕೊಂಡಂತಾಗಿದೆ. ಏಕೆ? ಈ ಪುಸ್ತಕವು ಆ ಕಾರಣಗಳನ್ನು ಒಂದೊಂದೇ ಬಿಚ್ಚಿಡುತ್ತದೆ, ಮನಸ್ಸನ್ನು ಕಾಡುವಂತೆ ಮಾಡುತ್ತದೆ.

ನಮ್ಮ ಮನೆಗೆ ಒಡ್ಡೊಡ್ಡಿಯಾಗಿ ಯಾರಾದರೂ ಕಾಲಿಟ್ಟರೆ, ರಕ್ತದಾಸೆಯಿಂದ ಹೋರಾಡುವ ನಾವು, ಆ ಮನೆಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ. ಕಾನೂನಿನ ಕದನವೇ ಆಗಲಿ, ಜೀವದ ಒಡ್ಡೋಲಗವೇ ಆಗಲಿ, ಹೋರಾಟ ನಿಲ್ಲಿಸುವುದಿಲ್ಲ. ಆದರೆ, ಕಾಲ ಕಳೆದಂತೆ, ಆ ಮನೆಯ ಸ್ಮೃತಿಗಳು, ಪ್ರೀತಿಯ ಗೋಡೆಗಳು, ಚಿತ್ರಗಳು ಒಂದೊಂದೇ ಮಾಸುತ್ತವೆ. ಮೂರನೇ ತಲೆಮಾರಿಗೆ ಬಂದಾಗ, ಆ ಮನೆಯ ಗತವೈಭವ ಕೇವಲ ಕತೆಯಾಗಿ ಉಳಿಯುತ್ತದೆ. ಆದರೂ, ಏಕೆ ಹೋರಾಡುತ್ತೇವೆ? ಏಕೆಂದರೆ, ಆ ಮನೆಯೆಂಬ ಅಸ್ಮಿತೆ, ನಮ್ಮ ಮುಂದಿನ ಪೀಳಿಗೆಗೆ ಸೇರಬೇಕೆಂಬ ಕಾಳಜಿಯೇ ಆ ಹೋರಾಟದ ಬೇರಿನ ಶಕ್ತಿ.

ಆದರೆ, ದೇಶದ ವಿಷಯಕ್ಕೆ ಬಂದಾಗ, ಆ ಕಾಳಜಿಯನ್ನು ಮರೆತು, “ನಮಗೇಕೆ?” ಎಂದು ಹಿಂದೇಟು ಹಾಕುವವರೇ ಹೆಚ್ಚು. ದೇಶದ ಅಸ್ಮಿತೆಯ ಒಗಟು ಕಾಲದ ಧೂಳಿನಲ್ಲಿ ಕಳೆದುಹೋಗುತ್ತದೆ. ಕೆಲವರು ಬಾಯಿಗೆ ಬಂದಂತೆ ಮಾತಾಡಿ, ಒಳಗೊಳಗೇ ದೇಶದ ಏಕತೆಯನ್ನು ಒಡೆಯುವ ಕಿಡಿಯನ್ನು ಉರಿಸುತ್ತಾರೆ. ಆದರೆ, ಈ ಎಲ್ಲದರ ನಡುವೆಯೂ, ಎದೆಯಲ್ಲಿ ದೇಶದ ಕಾಳಜಿಯನ್ನು ಹೊತ್ತು, ರಕ್ತವನ್ನೇ ಸುರಿಸಿ ಹೋರಾಡುವವರು ಯಾರೆಂದರೆ – ನಮ್ಮ ಸೈನಿಕರು ಮಾತ್ರ.

ಈ ಪುಸ್ತಕವು ಸಾವಿರಾರು ಸೈನಿಕರ ರಕ್ತದಾಸೆಯ, ಕಣ್ಣೀರಿನ, ತ್ಯಾಗದ ಕತೆಯನ್ನು ಒಡಮೂಡಿಸುತ್ತದೆ. ನಾವು ಕಾಲಿಡುವ ಈ ಭೂಮಿ, ಗಾಳಿ, ಆಹಾರ – ಇವೆಲ್ಲವೂ ಪ್ರಕೃತಿಯ ಕೊಡುಗೆ. ಆದರೆ, ಈ ಕೊಡುಗೆಯನ್ನು ಕಾಪಾಡಿಕೊಳ್ಳಲು ಒಂದು ಅಸ್ಮಿತೆ ಬೇಕು, ಒಂದು ದೇಶಪ್ರೇಮದ ಬಾಂಧವ್ಯ ಬೇಕು. “ಇದು ನಮ್ಮದು, ನಮ್ಮ ದೇಶ, ನಮ್ಮ ನಾಡು” ಎಂಬ ಅಭಿಮಾನವೇ ಆ ಶಕ್ತಿಯ ಮೂಲ. ನಾವು ಬಾಳಿದ ಮನೆಯ ಹೆಜ್ಜೆಗುರುತುಗಳು, ಯಾರೇ ಬಂದರೂ ಅವರಿಗೆ ಆ ಭೂಮಿಯ ಗತವೈಭವವನ್ನು ತಿಳಿಸುವಂತಿರಬೇಕು. ಆಗ ಮಾತ್ರ, ಸಾವಿರಾರು ವರ್ಷಗಳ ನಂತರವೂ ಆ ಗುರುತುಗಳು ಅಳಿಯದೇ ಉಳಿಯುತ್ತವೆ. ಆದರೆ, ಅಖಂಡ ಭಾರತದ ಗುರುತುಗಳನ್ನು ಕಾಲಕಾಲಕ್ಕೆ ಕ್ರಮಬದ್ಧವಾಗಿ ಅಳಿಸಲಾಗಿದೆ. ಯಾರು ಇದಕ್ಕೆ ಕಾರಣ? ಆವತ್ತಿನಿಂದ ಇವತ್ತಿನವರೆಗಿನ ಆಳುವ ಕೈಗಳೇ ಎಂದು ಈ ಪುಸ್ತಕವು ನಿಷ್ಪಕ್ಷಪಾತವಾಗಿ ತೋರಿಸುತ್ತದೆ.

ಭಾರತದ ಮೇಲೆ ಎಷ್ಟೊಂದು ದಾಳಿಗಳು, ಆಕ್ರಮಣಗಳು! ಆದರೂ, ಭಾರತ ಮತ್ತೆ ಮತ್ತೆ ತಲೆಯೆತ್ತಿದೆ. ಕಾಶಿ, ಕಾಶ್ಮೀರ, ನಳಂದಾ – ಇವೆಲ್ಲವೂ ಭಾರತೀಯ ಸಂಸ್ಕೃತಿಯ ವಿದ್ಯಾಕೇಂದ್ರಗಳಾಗಿದ್ದವು. ಆದರೆ, ಕಾಶಿಯನ್ನು ನಾಶಮಾಡಲಾಯಿತು, ಶಾರದಾಮಂದಿರವನ್ನು ಕೆಡವಲಾಯಿತು. ಈ ದಾಳಿಗಳ ಕತೆಯನ್ನು ತಿಳಿದಿದ್ದರೂ, ಈ ಪುಸ್ತಕವನ್ನು ಓದುವಾಗ ಮನಸ್ಸು ತಳಮಳಿಸುತ್ತದೆ. “ನಮ್ಮ ದೇಶಕ್ಕೆ ಇನ್ನು ಏನಾಗುವುದೋ?” ಎಂಬ ಆತಂಕ ಕಾಡುತ್ತದೆ.

ಈ ಎಲ್ಲದರ ಹಿಂದೆ ಕಾಣದ ಕೈಗಳ ಕುತಂತ್ರವಿದೆ. ಆದರೆ, ಅಮಾಯಕ ಸೈನಿಕರ ತ್ಯಾಗ, ಅವರ ರಕ್ತದಾಸೆ – ಇವೆಲ್ಲವೂ ಲೆಕ್ಕಕ್ಕೆ ಸಿಗದೇ, ರಾಜಕೀಯ ಆಟದಲ್ಲಿ ಮರೆಯಾಗಿವೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಏಕೆ ಇವೆ ಎಂದು ಈ ಪುಸ್ತಕ ಓದಿದ ನಂತರ ಪ್ರಶ್ನೆ ಎದ್ದು ಕಾಡುತ್ತದೆ. ಏಳು ದಶಕಗಳಾದರೂ ಒಂದು ಗಂಭೀರ ವಿಷಯವನ್ನು ಬಗೆಹರಿಸದ ಸಂಸ್ಥೆಯಿದ್ದೂ ಇಲ್ಲದಂತೆಯೇ ಅಲ್ಲವೇ?

ಈ ಪುಸ್ತಕವು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ, ತಿಳಿದುಕೊಳ್ಳಲೇಬೇಕಾದ ಸತ್ಯದ ಕತೆ. ನಮ್ಮ ಇತಿಹಾಸದ ಗುರುತುಗಳು ಎಂದಿಗೂ ಅಳಿಯದಂತೆ ಕಾಪಾಡುವುದು ನಮ್ಮ ಕರ್ತವ್ಯ. ಸರಳವಾಗಿ, ಆಧಾರಸಮೇತವಾಗಿ, ಈ ಪುಸ್ತಕವು ಭಾರತದ ವಾಸ್ತವವನ್ನು ಚಿತ್ರಿಸುತ್ತದೆ. ಚಿಕ್ಕದಾದರೂ, ಇದರ ಭಾವದ ಆಳ ಅಗಾಧ.