ದಾರಿ ಸಿಕ್ಕ ಮಾತ್ರಕ್ಕೆ ಊರು ಸಿಗಲ್ಲಾ!

ದಾರಿ ಸಿಕ್ಕ ಮಾತ್ರಕ್ಕೆ ಊರು ಸಿಗಲ್ಲಾ!

ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂಚ್ ಮೇಲೆ ಸ್ವಾಮಿಗಳು ಕುಳಿತಿದ್ದು ಆಯ್ತು. " ನಿನ್ನ ಪಾಡಿಗೆ ನೀನು ಪಾಠ ಮಾಡು " ಸ್ವಾಮಿಜಿ ಅಪ್ಪಣೆ ಕೊಡಿಸಿದರು. ತೂಗಿ ಹಾಕಿದ್ದ ಭೂಪಟದಲ್ಲಿ ಬಂಗಾಳಕೊಲ್ಲಿ,ಅರಬ್ಬೀ ಸಮುದ್ರ, ಕಲ್ಕತ್ತಾ, ಬೊಂಬಾಯಿ, ಎಲ್ಲಾ ತೋರಿಸಿ ಪಾಠ ಮಾಡಿ ಮುಗಿಸಿದ್ದಾಯ್ತು. ಸ್ವಾಮೀಜಿ ಜೊತೆ ಶಾಸ್ತ್ರಿಗಳು ಹೊರಗೆ ಹೊರಟರು. ಸ್ವಾಮೀಜಿ " ಚೆನ್ನಾಗಿ ಪಾಠ ಮಾಡ್ತೀಯ." ಎಂದಾಗ ಶಾಸ್ತ್ರಿಗಳು" ಚೆನ್ನಾಗಿ ಮಾಡ್ತೀನಾ? ಸ್ವಾಮಿ ಎಂದು ಮತ್ತೆ ಕೇಳಿದರು. " ಹೌದು, ಸಮುದ್ರ ನೋಡಿದ್ದೀಯಾ? ಅಂತ ಮಕ್ಕಳನ್ನು ಯಾರಾದ್ರೂ ಕೇಳಿದ್ರೆ, ಅವರು ಏನ್ ಹೇಳತಾರೆ? ಇಸ್ಕೂಲಲ್ಲಿ ಪಟ ಹಾಕಿದ್ರು ಅದರಲ್ಲಿ ನೋಡಿದ್ದೀನಿ, ನೀವೂ ಪಟ ಹಾಕಿ, ಅದರಲ್ಲಿ ತೋರಿಸ್ತೀನಿ,ಅಂತಾವೆ ಅಲ್ವಾ? "ಅಂಗೇನೆ ಸನ್ಯಾಸೀನ "ದೇವರು ತೋರಿಸಿ" ಅಂದ್ರೆ ಗುಡಿಬಾಗಿಲು ತೆಗಿ" ಅಂತಾನೆ. ಗುಡಿ ವಿಗ್ರಹದಲ್ಲಿ ದೇವರು ಐತಾ? " ಸ್ವಾಮೀಜಿ ಮಾತಿನ ಅಂತರಾಳ ಅರ್ಥಮಾಡಿಕೊಂಡು ಶಾಸ್ತ್ರಿಗಳು ಬೆಪ್ಪಾಗಿ ನಿಲ್ತಾರೆ. ಮುಂದೆ ಸ್ವಲ್ಪ ದೂರದಲ್ಲಿ ಹೆದ್ದಾರಿ ಕಾಣುತ್ತೆ. " ನೋಡು ನಾವೀಗ ಸಣ್ಣ ದಾರಿಯಿಂದ ದೊಡ್ಡ ರಸ್ತೆ ಸೇರ್ತೀವಿ.ದೊಡ್ಡರಸ್ತೆ ಸಿಕ್ಕಿದ ಕೂಡ್ಲೆ ನಮಗೆ ಊರೇ ಸಿಕ್ತು ಅಂತಾ ಹೇಳಕ್ಕಾಯ್ತದ? ಸರಿಯಾಗಿ ಹೋಗಿಲ್ಲಾ ಅಂದ್ರೆ ಊರು ಸಿಕ್ದೆ ಇನ್ನೆಲ್ಲೋ ಹೋಗ್ ಬಹುದು ಅಲ್ವಾ? ಎಚ್ಚರ ಇರ್ಬೇಕಪ್ಪಾ!! ಸ್ವಾಮೀಜಿ ಮಾತು ಎಷ್ಟು ಅರ್ಥ ಗರ್ಬಿತ ಅಲ್ವಾ? ಇದಕ್ಕೆ ವಿವರಣೆ ಬೇಕಾಗಿಲ್ಲಾ, ಅಲ್ವಾ?