Red ವೈನ್

Red ವೈನ್

ಪುಸ್ತಕದ ಲೇಖಕ/ಕವಿಯ ಹೆಸರು
ವಿ. ನಿಶಾ ಗೋಪಿನಾಥ್
ಪ್ರಕಾಶಕರು
ಚಾರುಮತಿ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೨

‘Red ವೈನ್ ‘ ಎಂಬ ೧೭೨ ಪುಟಗಳ ಕವನ ಸಂಕಲನವನ್ನು ಹೊರತಂದಿದ್ದಾರೆ ಭರವಸೆಯ ಕವಯತ್ರಿ ವಿ ನಿಶಾ ಗೋಪಿನಾಥ್ ಅವರು. ಅವರ ಕವನ ಸಂಕಲನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಡಿ ಎಸ್ ಚೌಗಲೆ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ...

“ನೀಲಿನಕ್ಷತ್ರ' ಕವನ ಸಂಕಲನದ ಮೂಲಕ ಭರವಸೆ ಮೂಡಿಸಿದ ಕವಿ ವಿ.ನಿಶಾ ಗೋಪಿನಾಥ್ ಅರವತ್ತು ಪ್ರೇಮ ಕವಿತೆಗಳ 'ರೆಡ್ ವೈನ್' ಕೃತಿ ಮೂಲಕ ಕಾವ್ಯ ಕ್ಷೇತ್ರದಲ್ಲಿ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರಿದ್ದಾರೆ. ಖರೇ ಅರ್ಥದ ಭಾವ ಜಗತ್ತು ಅಭಿವ್ಯಕ್ತಗೊಳ್ಳುವುದು ಮನುಷ್ಯನ ಅಮೂರ್ತರೂಪದ ವಿಕ್ಷಿಪ್ತ, ಪ್ರೇಮ, ವಿರಹ, ತಳಮಳ, ಖಿನ್ನತೆ, ಸೂಕ್ಷ್ಮ- ಇಂಥ ಉತ್ಕರ್ಷಗಳ ಮಧ್ಯೆ ಇಲ್ಲಿ ಹುಟ್ಟುವ ಸ್ತ್ರೀ-ಪುರುಷ ಸಂಘರ್ಷ, ಚಿಂತನೆ, ಸಂವೇದನೆ ದ್ರವಿಸುವುದು ನಿರ್ದಿಷ್ಟ ರೂಪದಲ್ಲಿ ಧೇನಿಸುವುದರಿಂದ ಮಾತ್ರ ನಿಶಾ ಅವರು ಕಾವ್ಯ ಸೃಷ್ಟಿಯಲ್ಲಿ ತನ್ನ ಸ್ವಂತಿಕೆ ಬಿಡದೇ ಬೋದಿಲೇರ್, ನೆರೂಡ ಮತ್ತು ರಿಲ್ಕ್ ಪ್ರಭಾವವನ್ನು ಅರಗಿಸಿಕೊಂಡು ಈ ಮಣ್ಣಿನ ಘಾಟಿಗೆ ಒಗ್ಗಿಸಿ ಭಟ್ಟಿ ಇಳಿಸಿ ರಚಿಸಿದಂತೆ ಕಾಣುತ್ತದೆ.

ನಿಶಾ ಗೋಪಿನಾಥ್ ಈ ಕಾಲದ ಅತ್ಯಂತ ಮಹತ್ವದ ಕವಿ. ಇವರ ಪ್ರೇಮ ಕವಿತೆಗಳನ್ನು ಓದಿದಾಗ ನನಗನ್ನಿಸಿದ್ದು, ಸಮಕಾಲೀನ ಕನ್ನಡ ಕಾವ್ಯಕ್ಕೆ ಸಂಬಂಧಿಸಿದಂತೆ ಪ್ರೀತಿಯ ಅಭಿವ್ಯಕ್ತಿಯನ್ನು ಇಷ್ಟು ದಟ್ಟವಾಗಿ ನೀಡುವವರನ್ನು ನಾನು ಕಂಡಿಲ್ಲ. ನಲ್ಲ ನಲ್ಲೆಯರ ಪ್ರೇಮ ಕಾಮದ ಪಿಸುನುಡಿಯ ಸಲ್ಲಾಪಗಳು, ಹುಸಿಮುನಿಸು, ಅನುರಾಗದ ಉತ್ಕಟತೆ, ಎರಡು ಆತ್ಮಗಳು ಏಕೀಭವಿಸಿ ಸೃಷ್ಟಿಗೊಳ್ಳುವ ಕಾಮದ ತುತ್ತ ತುದಿಯ ಅನುಭೂತಿ. ಅವನ ಆಗಮನ ನಿರ್ಗಮನಗಳ ಮಧ್ಯ ರಸಗಟ್ಟುವ ವಿರಹ, ತೋಳ ತೆಕ್ಕೆಯಲ್ಲಿ ಒಸರುವ ಬೆಚ್ಚಗಿನ ಅನುಭವ-ಹೀಗೆ ಎಲ್ಲವೂ ಸಂವೇದನೆ ಪಡೆದು ರೂಪಕ, ಪ್ರತಿಮೆಗಳಲ್ಲಿ ಮಡುಗಟ್ಟಿ ನಿಂತಿದೆ.

ಇವರ ಕವಿತೆಗಳು ಮರಾಠಿಯ ಸುಪ್ರಸಿದ್ಧ ಕತೆಗಾರ್ತಿ ಮತ್ತು ಕವಿ ಪ್ರಜ್ಞಾ ದಯಾ ಪವಾರ ಅವರನ್ನು ನೆನಪಿಸುವಷ್ಟು ಕಾಡುತ್ತವೆ. ಪ್ರಜ್ಞಾದಯಾ ಪವಾರ ಪುರುಷ ಕೇಂದ್ರಿತ ಕಾಮದ ಸ್ವರೂಪಗಳನ್ನು ಕತೆಗಳಲ್ಲಿ ನವರೂಪಕಗಳ ಮೂಲಕ ಸೃಷ್ಟಿಸಿ ಬೆಚ್ಚಿ ಬೀಳಿಸುವಂತೆ, ನಿಶಾ ತಮ್ಮ ಕವಿತೆಗಳಲ್ಲಿ ಹೊಸ ಹೊಸ ರೂಪಕಗಳನ್ನು ಕಾವ್ಯದಲ್ಲಿ ಕಟ್ಟಿ ಕಾವ್ಯರಸಿಕರನ್ನು ಬೆಚ್ಚಿ ಬೀಳಿಸುತ್ತಾರೆ. ನಿಶಾ ಅವರ ಈ ಅರವತ್ತು ಪ್ರೇಮಕವಿತೆಗಳ ಗುಚ್ಚ 'ರೆಡ್ ವೈನ್' ಕನ್ನಡ ಕಾವ್ಯದಲ್ಲಿ ನಿಸ್ಸಂಕೋಚವಾಗಿ ಒಂದು ಮೈಲಿಗಲ್ಲು,

ಮತ್ತದೇ ಅನುಭವಕೆ
ಮತ್ತದೇ ಲಜ್ಜೆಗೆ
ಹಾತೊರೆದಿದೆ ಅವಳ ಮನ
ಅದೆಂತಹ ಹಿತವಿತ್ತು
ಅವನ ಅಪ್ಪುಗೆಯಲಿ
ಬೆಚ್ಚಗಿನ ನೋವಿನಲ್ಲೂ
ನಲಿವಿನ ಉತ್ತುಂಗವಿತ್ತು (ರೂಹು ಅರಳಿದ ಕಾಲ)

ಈ ಸಾಲುಗಳ ಅಡಿಪಾಯದ ಸತ್ವದಲ್ಲಿಯೇ ಇಡೀ ಕವಿತೆಯ ಪ್ರೇಮದಿವ್ಯದ ವಾಸ್ತು ನೆಲೆಕಂಡಿದೆ. ನಲ್ಲನಲ್ಲೆಯರ ಗಾಢ ಬಿಸಿಯುಸಿರು, ಅಪ್ಪುಗೆ, ಪಿಸುನುಡಿ- ಹನಿದ ಮಳೆಯು ನೆನೆದ ಇಳೆಯು-ಇವರಿಬ್ಬರ ಕೂಟವು. ಕವಿತೆ ಹರಳುಗಟ್ಟಿದೆ. ಅಕ್ಕಮಹಾದೇವಿ ಅಮೂರ್ತಗೊಂಡ ರೂಹಿಲ್ಲದ ಕೇಡಿಲ್ಲದ ಚೆಲುವಂಗೆ ಒಲಿದರೆ ನಿಶಾ ಅವರು ಮೂರ್ತ ಸ್ವರೂಪದ ರೂಪವಿರುವ ಚೆಲುವನಿಗೆ ಕವಿತೆಯಲ್ಲಿ ತನ್ನನ್ನು ಆತ್ಮಿಕವಾಗಿ ಅರ್ಪಿಸಿದ್ದಾರೆ. ಒಂದು ಗಂಡು ಒಂದು ಹೆಣ್ಣುಗಳ ನಡುವಿನ ಕೂಟದ ಆ ಧ್ಯಾನಸ್ಥ ಸ್ಥಿತಿಯು ಅಭಿನ್ನರೂಪಿ ದೇಹಾತ್ಮಗಳ ಏಕೀಭವಿಸುವಿಕೆಯೇ ಹೌದು. ಒಂದು ತರದ ದೈತ-ಅದೈತ ನಿಲುವು. ಇಂಥವೊಂದು ತಾತ್ವಿಕ ದರ್ಶನವನ್ನು ಈ ಪದ್ಯ ನೀಡುತ್ತದೆ.

ಧೂಳು ಹೊತ್ತ ಪುಸ್ತಕದ
ಗಂಟು ಬಿಚ್ಚಿದೆ
ಝಗ್ಗನೆ ಹಳೆಯ ನೆನಪುಗಳ
ಪುಟಗಳು ತೆರೆದವು
ತಿರುವಿ ಓದಲು ಪುಟಗಳೆಲ್ಲವೂ
ಖಾಲಿ ಖಾಲಿ (ನಿನ್ನ ಜಾಡನು ಹಿಡಿದು)

ಬದುಕಿನ ಹೊತ್ತಿಗೆಗಳನ್ನು ಹೊತ್ತವರು ಆಗಾಗ ಮತ್ತೆ ಮತ್ತೆ ಒಂದು ಹಿನ್ನೋಟವನ್ನು ಬೀರಿದಾಗ ಫಳಫಳನೆ ಹೊಳೆಯುವವು ಆ ಮಧುರ ಕ್ಷಣಗಳು. ಧೂಳು ಹೊತ್ತ ಪುಸ್ತಕವೆಂಬ ಪ್ರತಿಮೆ. ಅದನ್ನು ಬಿಚ್ಚಿದಾಗ ವಿದ್ಯುತ್ ದೀಪಗಳಂತೆ ಬೆಳಗೋ ನೆನಪುಗಳು. ಆದರೆ ಓದಲು ತೊಡಗಿದಾಗ ಪುಟಗಳಲ್ಲಿಯ ಅಕ್ಷರಗಳೇ ಮಾಯ. ಖಾಲಿ ಪುಟ. ಇಲ್ಲಿ ಕವಿ ನೀಡಿದ ಇಂಥವೊಂದು ರೂಪಕ ಅಗಣಿತ ಅನುಭವ ಪ್ರಪಂಚಗಳನ್ನು ಓದುಗನೆದುರು ತೆರೆದಿಡುತ್ತದೆ. ಈ ಉಲ್ಲೇಖಗೊಂಡ ಪದ್ಯದ ಭಾಗ ಭೌತಿಕ ಮತ್ತು ಭೌತಿಕವಲ್ಲದ ಶೃಂಗಾರಿಕ ಭಾವಗಳ ಬಣ್ಣನೆಯಾಗಿದೆ.

ಹೆಜ್ಜೆ ಗುರುತುಗಳ ಅಳಿಸುವುದು ಸುಲಭವಲ್ಲ
ನೆನಪುಗಳ ಕೊಂದು ದಫನ ಮಾಡುವುದು ಹೇಗೆ?
ಮತ್ತೊಮ್ಮೆ ಹೆಜ್ಜೆ ಕುರುಹುಗಳ ಎಣಿಕೆಯಲಿ
ಸತ್ತು ಬಿಡುತ್ತೇನೆ
ನಿನ್ನ ಒಟ್ಟಿಗಿರಲಾರದೆ ಮತ್ತೂ ಬದುಕಲೂಬಾರದೆ
(ಕಲ್ಲುಮುಳ್ಳಿನ ದಾರಿಯಲಿ)

ಬದುಕಿನಲ್ಲಿ ಘಟಿಸುವ ಸ್ಥಿತ್ಯಂತರಗಳು ಒಲವನ್ನು ತೆಳುವಾಗಿರುಸುತ್ತವೆಯೇ? ಹುಸಿಯಾಗುವ ಆತಂಕವು ಢಾಳವಾಗಿ ಕಾಣುತ್ತದೆ. ಪರಸ್ಪರರ ನಂಬಿಕೆಯ ಆಂತರ್ಯವು ಕುಸಿದು ಇವರ ಸಂಬಂಧಗಳನ್ನು ಸಂಕೀರ್ಣ ಅವಸ್ಥೆಗೆ ಕೊಂಡೊಯ್ಯುತ್ತವೆ.

ಕವಿಯು ಹೇಳಹೊರಟ ನುಡಿಯು ಕಲ್ಪನಾಲೋಕವಾಗಿ ಸ್ತ್ರೀ ಸಂಬಂಧಿ ತಲ್ಲಣಗಳು- 'ಇನಿಯನ ಮಾತು ಗಾಜಿನ ಚೂರಾಗಿ ಮೈಯೆಲ್ಲ ಇರಿವ ಯಾತನೆಯ ಸಂಗತಿಯನ್ನು ಅರುಹುತ್ತಾಳೆ. ಮನುಷ್ಯ ಸಹಜವಾದ ಮನೋಚಿಕಿತ್ಸಕ ಪ್ರಸಂಗಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಕವನ ಧ್ವನಿಸುತ್ತದೆ.

ವಿಧಿಯಾಟವೋ ಯಾವನಿಗೆ ಗೊತ್ತು
ಕೊಡಲಿ ಏಟಿಗೆ ಆಲದ ಬಿಳಲುಗಳು ಆಕ್ರಂದಿಸುತ್ತಿದ್ದವು
ಪ್ರೀತಿಯ ಕೊಚ್ಚಿ ಕೊಂದು ಕಾಲದ ಚಕ್ರಗಳಿಗೆ ಸಿಲುಕಿ
ಕಪ್ಪು ಕತ್ತಲುಗಳು ಉರುಳುತ್ತಿದ್ದವು
ಮರದ ಟೊಂಗೆಗೆ ಕೊರಳೊಡ್ಡಿ ಜೋತುಬಿದ್ದ
ಭಗ್ನಪ್ರೇಮಿಗಳನಾತ್ಮಗಳು ಪಿಸುಗುಡುತ್ತಿದ್ದವು
(ಶಬ್ದ ನಿಶ್ಯಬ್ದಗಳಲಿ ಕಂಡದ್ದೇನು?)

ಸಾವು ಮತ್ತು ಪ್ರೀತಿಯ ಮುಖಾಮುಖಿ. ಸಖನ ನೆನಪು ಮರುಕಳಿಸುತ್ತ ಸಾವ ಭಯವನ್ನು ಒದ್ದೋಡಿಸಿ ಗೆಲ್ಲುವುದು. ಪ್ರೀತಿಗೆ ಆ ಶಕ್ತಿಯಿದೆ. ಆಲದ ಮರದ ಆಕ್ರಂದನ, ಒಲವನ್ನು ಕೊಚ್ಚಿ ಕೊಲ್ಲುವ ಕಾಲ. ಮರದ ಟೊಂಗೆಗಳಿಗೆ ಜೋತುಬಿದ್ದ ಭಗ್ನಪ್ರೇಮಿಗಳ ಆತ್ಮಗಳು-ಅದ್ಭುತ ರೂಪಕದ ಗೊಂಚಲುಗಳು. ಕವಿತೆ ಒಂದು ಸುಖದ ಅನುಭೂತಿ ಕೊಡುವಷ್ಟರಲ್ಲಿಯೇ ನೀರಿನ ಗುಳ್ಳೆಯು ಒಡೆದಂತೆ ಇದೊಂದು ಬಿದ್ದ ಕನಸು ಎಂಬಲ್ಲಿ ನಿಶ್ಯಬ್ದಗೊಳ್ಳುತ್ತದೆ.

ವಿ. ನಿಶಾ ಗೋಪಿನಾಥ್ ಅಕಾಡೆಮಿಕ್ ಹಿನ್ನೆಲೆ ಇರದ ಒಬ್ಬ ಗೃಹಿಣಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದು ವಿವಿಧ ವಾಹಿನಿಗಳಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದವರು. ಅವರಿಗೆ ಕಾವ್ಯ ಒಂದು ಉಸಿರಾಟದಂತೆ ನೈಜವಾಗಿದೆಯೆಂದು ಎನಿಸುತ್ತದೆ. ಯಾವ ಸಿದ್ಧಾಂತಗಳಿಗೆ ಜೋತು ಬೀಳದೆ ತನ್ನ ಪಾಡಿಗೆ ತಾನು ಒಲವ ಬೆನ್ನತ್ತಿ ಪ್ರೇಮ ಕಾವ್ಯದ ರಸಧಾರೆಯನ್ನು ಉಣಬಡಿಸುವ ಅಪರೂಪದ ಕವಿ. ಪ್ರೇಮರಸಾಭಿವ್ಯಕ್ತಿಯ ಹಲವಾರು ಬಗೆಯ ಮಜಲುಗಳನ್ನು ಇಲ್ಲಿ ಕಾಣಬಹುದು. ಅದನ್ನು ನಿಸರ್ಗದೊಟ್ಟಿಗೆ ಸಮೀಕರಿಸುವ ಯತ್ನದ ರೀತಿಯೂ ಸಹ ಅಪ್ಯಾಯಮಾನ, ಪ್ರೇಮ, ಕಾಮಗಳು ಹುಟ್ಟುವುದಕ್ಕೆ ಕೇವಲ ದೇಹಾಕರ್ಷಣೆಯೇ ಕಾರಣ ಅಥವಾ ಮೂಲವೆಂಬುದನ್ನು ಹುಸಿಗೊಳಿಸಿ ಅದರಾಚೆಯ ಗುಣಗ್ರಾಹಿತ್ವವನ್ನು ತಮ್ಮ ಪ್ರಜ್ಞೆಯಲ್ಲಿ ಸೆರೆಹಿಡಿದು ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿ. ನಿಶಾ ಗೋಪಿನಾಥ್ ಅವರ ಈ ಕಾವ್ಯಪಯಣ ನಿರಂತರ ಸಾಗಲಿ ಮತ್ತು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಸಲ್ಲಲೆಂದು ಹಾರೈಸುತ್ತೇನೆ.”