red light

red light

ಬರಹ

ಮನೆಯಿಂದ ಆಫೀಸಿಗೆ ಕೇವಲ ೧೦ ನಿಮಿಷಗಳ drive ಮತ್ತು ಒಂದೇ ಒಂದು ಸಿಗ್ನಲ್ ನ ಭೆಟ್ಟಿ. ಆದರೆ ಕೆಲಸ ನಿಮಿತ್ತ ಪ್ರತಿದಿನ ಕನಿಷ್ಠ ೧೦೦ ಕಿಲೋಮೀಟರು ಓಡಾಟ ನಗರದ ಪರಿಮಿತಿಯೊಳಗೆ. ಜನನಿಬಿಡವಲ್ಲದಿದ್ದರೂ "ಜೆಡ್ಡಾ" ನಗರದಲ್ಲಿ ವಾಹನಗಳ ಸಂಖ್ಯೆ ಅತ್ಯಧಿಕ. ಸಿಗ್ನಲ್ನ ಸಮೀಪ ಬಂದರೂ ವಾಹನಗಳು ಮುಂದಕ್ಕೆ ಹರಿಯುವುದಿಲ್ಲ. ಕೆಲವೊಮ್ಮೆ ೩-೪ ಸಿಗ್ನಲ್ ಕಾಯಬೇಕು. ಹೀಗೆ ಸಿಗ್ನಲ್ಲುಗಳು ಗೋಸುಂಬೆಯ ಹಾಗೆ ಬಣ್ಣ ಬದಲಿಸುವುದನ್ನು ನೋಡುತ್ತಾ ಕೂತಾಗ ಹಲವು ಚಟುವಟಿಕೆಗಳು ಸಿಗ್ನಲ್ ಕಂಬದ ಸುತ್ತ ನಡೆಯುತ್ತಿರುತ್ತದೆ. ಕೆಂಪು ಬಣಕ್ಕೆ ತಲೆಬಾಗಿ ವಾಹನಗು ನಿಲ್ಲುತ್ತಿದ್ದಂತೆಯೇ ಒಂದು ಚಿಕ್ಕ shopping arena ತೆರೆದು ಕೊಳ್ಳುತ್ತದೆ, a floating shopping arena. ಸುಮಾರು ೬೫ ರ ವೃದ್ಧ ( ಯೆಮನ್ ದೇಶದವನ ಥರ ಕಾಣುತ್ತಾನೆ) ಮೋಯಾ, ಮೋಯಾ(ನೀರು, ಅರಬ್ಬೀ ಭಾಷೆಯಲ್ಲಿ) ಎಂದು ಕೂಗುತ್ತಾ ವಾಹನಗಳ ಸುತ್ತಾ ಸುತ್ತುತ್ತಿರುತ್ತಾನೆ. ಮತ್ತೊಂದೆಡೆ ಒಬ್ಬ ಯುವಕ ಮಲ್ಲಿಗೆ ಹೂವನ್ನು ಮಾರುವ ಆತುರದಲ್ಲಿರುತ್ತಾನೆ. ಪ್ರಖರ ಬಿಸಿಲಿಗೆ, ವಾಹನಗಳ ಹೊಗೆಗೆ ಸಿಕ್ಕ ಹೂವುಗಳನ್ನು ಯಾವ ರೋಮಿಯೋ ತನ್ನ ಪ್ರೇಯಸಿಗೆ ಕೊಡುತ್ತಾನೋ?

ನನ್ನ ಈ "short errands" ನ ಸಂಗಾತಿ ಅಮೆರಿಕೆಯ NPR (national public radio). washington D.C. ಇಂದ ಬಿತ್ತರವಾಗುವ ಸುದ್ದಿ ಮತ್ತು ಚರ್ಚೆಗಳನ್ನು ಕೇಳುತ್ತಾ ಹೋದರೆ ಸಮಯ ಹೋಗುವುದು ತಿಳಿಯುವುದಿಲ್ಲ. ಅಮೆರಿಕೆಯ ಪ್ರಸಿದ್ಧ ವಾಹನ ತಯಾರಕರಾದ ford, GM ಗಳ ಅಧಿಕಾರಿಗಳು ತಮ್ಮ ಕಂಪೆನಿಗಳನ್ನು ಉಳಿಸಲು ಸರಕಾರ ನೀಡಿದ ಹಣ ಪಡೆಯಲು ಕೈ ಚಾಚಿ ಬಂದಿದ್ದಾರೆ ಎನ್ನುವ ಸುದ್ದಿ ಕೇಳುತ್ತಲೇ ಪಕ್ಕದಲ್ಲಿ ಸುಡಾನ್ ದೇಶದ ಒಬ್ಬ ಬಡ ಮಹಿಳೆ ಭಿಕ್ಷೆ ಬೇಡುತ್ತಾ ಉರಿಬಿಸಿಲಿನಲ್ಲಿ ನಡೆಯುತ್ತಿರುತ್ತಾಳೆ. ಕಡು ಕಪ್ಪು ವರ್ಣದ ಈ ಅಸಹಾಯಕ ಸ್ತ್ರೀಗೂ, ಸೂಟು ಬೂಟಿನಲ್ಲಿ ಭಿಕ್ಷೆ ಬೇಡಲು ಬಂದ ಲಕ್ಷಾಂತರ ಡಾಲರ್ ಸಂಬಳ ಪಡೆಯುವ ಅಧಿಕಾರಿಗಳಿಗೂ ಇರುವ ವ್ಯತ್ಯಾಸ ಏನು ಯೋಚಿಸುತ್ತಾ ಇದ್ದಾಗ ಪ್ರತ್ಯಕ್ಷವಾಯಿತು ಒಂದು ಸುಂದರ ಮೊಗ. ಸೂರ್ಯನ ಬಂಗಾರದ ರಶ್ಮಿಗಳನ್ನು ನಾಚಿಸುವ ಮೈಬಣ್ಣದ ಪೋರಿ " batook " chewing gum ಬೇಕಾ ಎಂದು ಮುಗುಳ್ನಗುತ್ತಾ ಕಣ್ಣಿನಿಂದಲೇ ಕೇಳುತ್ತಾಳೆ. ೮ ಅಥವಾ ೯ ವಯಸ್ಸಿನ ಆಫ್ಘಾನಿಸ್ತಾನದ ಹುಡುಗಿ. ಈ ಎಳೆ ಪ್ರಾಯದಲ್ಲಿ ಶಾಲೆಯಲ್ಲೋ ಮನೆಯಲ್ಲೋ ಬೆಚ್ಚಗಿರುವುದು ಬಿಟ್ಟು ಹೊಟ್ಟೆ ಪಾಡಿಗಾಗಿ ಉರಿ ಬಿಸಿಲಿನಲ್ಲಿ ದುಡಿಯುವ ಸ್ಥಿತಿ ನೋಡಿ ಮರುಕ ತೋರುತ್ತದೆ. (shopping ಮತ್ತು gaming ಗಳೇ ತಮ್ಮ ಬದುಕು ಎಂದು ಮಜಾ ಉಡಾಯಿಸುವ ನನ್ನ ಸೋದರಿಯ ಮಕ್ಕಳು ಈ ಹುಡುಗಿಯ ಮುಂದೆ ಸೋತು ನಿಲ್ಲುತ್ತಾರೆ ನನ್ನ ಕಣ್ಣಿನಲ್ಲಿ).

ಆಫ್ಘನ್ನರು ಸ್ವಾಭಿಮಾನಿಗಳು. ಕಷ್ಟ ಸಹಿಷ್ಣುಗಳು. ಬಿಸಿಲಿನ ಬೇಗೆಯ, ಕಣಿವೆ ಕಂದಕ ತುಂಬಿದ ನಿಸರ್ಗದ ನಿಷ್ಠುರ ವಾತಾವರಣದಲ್ಲಿ ಬೆಳೆದ ಇವರಿಗೆ ದಣಿವು ಇಲ್ಲ ಎನ್ನುವಷ್ಟು ಲವಲವಿಕೆ. ಯುದ್ದ ಕಾರಣ ಆಫ್ಘಾನಿಸ್ತಾನ ತೊರೆದು ಬಂದ ಇವರಿಗೆ ಸೌದಿ ಆಶ್ರಯ ನೀಡಿತು. ಕಾದಾಡುವುದೇ ಕಾಯಕ ಎಂದುಕೊಂಡಿರುವ ಇವರಿಗೆ ಯುದ್ಧಗಳಿಂದ ಮೋಕ್ಷ ಯಾವಾಗ ಸಿಗುತ್ತದೋ ಎಂದು ಯೋಚಿಸುತ್ತಾ ಕೂತಾಗ ಹಳದಿ ಬಣ್ಣ ಹಸಿರು ಬಣ್ಣಕ್ಕೆ ದಾರಿ ಮಾಡಿಕೊಟ್ಟಿತು. ಕೂಡಲೇ ಮತ್ತೊಂದು ಕೆಂಬಣ್ಣ ಕಾಣುವ ಮೊದಲು ಕಾಲು ಕಿತ್ತೋಣ ಎಂದು accelerator ಅನ್ನು ಜೋರಾಗಿ ಒತ್ತಿ ಹಿಡಿದು high way ಸೇರಿಕೊಂಡೆ.

ಚಿತ್ರ ಸೌಜನ್ಯ
flickr.com
xollob58 ಅವರ ಚಿತ್ರ ಸಂಗ್ರಹ