ಔಷಧೀಯ ಸಸ್ಯ -೯: ಜೇಷ್ಠಮಧು (ಅತಿಮಧುರ)

ಔಷಧೀಯ ಸಸ್ಯ -೯: ಜೇಷ್ಠಮಧು (ಅತಿಮಧುರ)

ಸಸ್ಯಶಾಸ್ತ್ರೀಯ ಹೆಸರು: Glycyrrhiza glabra
ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು
ಇಂಗ್ಲಿಷ್: Liquorice
ಹಿಂದಿ: ಜೇಷ್ಠಮಧ್, ಮೀಠಿಲಕಡಿ
ಕನ್ನಡ: ಜೇಷ್ಠಮಧು, ಅತಿಮಧುರ
ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸೆಗೆ ಬಳಸುತ್ತಿದ್ದ ಸಸ್ಯ ಜೇಷ್ಠಮಧು. ಸಿಹಿತಿಂಡಿಗಳ ತಯಾರಿಯಲ್ಲಿಯೂ ಇದರ ಬೇರು ಮತ್ತು ಗುಪ್ತಕಾಂಡಗಳ ಬಳಕೆ ಜನಜ್ನಿತ. ಇದರ ಹೆಸರೇ ಸೂಚಿಸುವಂತೆ ಇದರ ರುಚಿ ಸಿಹಿಸಿಹಿ – ಅತಿ ಮಧುರ.
ಬಹುವಾರ್ಷಿಕ ಸಸ್ಯವಾದ ಜೇಷ್ಠಮಧುವಿನ ಹೂಗಳು ನೇರಳೆ ಬಣ್ಣದವು. ಬೇರುಗಳಿಂದ ಇದರ ಸಸ್ಯಾಭಿವೃದ್ಧಿ. ಬೇರುತುಂಡುಗಳನ್ನು ನೆಟ್ಟು ೧೫ ತಿಂಗಳ ನಂತರ ಒಂದು ಚದರ ಮೀಟರ್ ಜಾಗದಿಂದ ೩೦೦ ಗ್ರಾಮ್ ಒಣ ಜೇಷ್ಠಮಧು ಪಡೆಯಲು ಸಾಧ್ಯ. ಬೇರುಗಳನ್ನು ಬಿಸಿಲು ಮತ್ತು ನೆರಳಿನಲ್ಲಿ ಹರಡಿ ಒಣಗಿಸಬೇಕು.
ಔಷಧೀಯ ಬಳಕೆ (ವಿವಿಧ ಮೂಲಗಳಿಂದ):
-ಕೆಮ್ಮು, ಗಂಟಲು ನೋವು ಗುಣವಾಗಲು ದಿನಕ್ಕೆ ೨-೩ ಸಲ ಜೇಷ್ಠಮಧುವಿನ ಕಷಾಯ ಸೇವನೆ ಸಹಕಾರಿ. ಅಥವಾ ಜೇನುತುಪ್ಪದೊಂದಿಗೆ ಒಂದು ಚಮಚ ಜೇಷ್ಠಮಧುವಿನ ಪುಡಿ ಸೇವಿಸಬಹುದು.
-ಸ್ವರ ಒಡೆದಿದ್ದರೆ ವಾಸಿ ಮಾಡಲು ಜೇನುತುಪ್ಪದೊಂದಿಗೆ ಇದರ ಪುಡಿಯ ಸೇವನೆ ಪರಿಣಾಮಕಾರಿ. ಅದಕ್ಕಾಗಿ ಬಾಯಿಗೆ ಹಾಕಿಕೊಂಡ ಪುಡಿ ಸ್ವಲ್ಪ ಹೊತ್ತು ಗಂಟಲಿನಲ್ಲೇ ಇರಿಸಿಕೊಳ್ಳಬೇಕು; ತಕ್ಷಣ ನುಂಗಬಾರದು.
-ಮಲಬದ್ಧತೆ ನಿವಾರಣೆಗೂ ಇದರ ಕಷಾಯ ಸೇವನೆ ಸಹಕಾರಿ.
-ಜ್ವರ ತಗ್ಗಿಸಲು ನಿಂಬೆಪಾನಕಕ್ಕೆ ಇದರ ಪುಡಿ ಬೆರೆಸಿ ಕುಡಿಯುವುದು ಉಪಯುಕ್ತ.
-ಹೊಟ್ಟೆನೋವು ಮತ್ತು ಹೊಟ್ಟೆಯುಬ್ಬರ ಶಮನಕ್ಕೆ ಇದರ ಕಷಾಯ ಸೇವನೆ ಪರಿಣಾಮಕಾರಿ.
ಕೆಮ್ಮಿನ ಔಷಧಿಗಳಲ್ಲಿ ಏನಿರುತ್ತದೆ ಎಂದು ಗಮನಿಸಿದ್ದೀರಾ? ಬಹುಪಾಲು ಅಂತಹ ಔಷಧಿಗಳಲ್ಲಿ ಜೇಷ್ಠಮಧು ಪ್ರಧಾನದ್ರವ್ಯ. ಇದರ ಕಷಾಯ ಆರೋಗ್ಯವರ್ಧಕ. ಜೇಷ್ಠಮಧು, ಹಿಪ್ಪಲಿ, ಸುಗಂಧಿಬೇರು, ಜೀರಿಗೆ, ಕರಿಮೆಣಸು, ಧನಿಯಾ ಇವನ್ನು ಸಮಪ್ರಮಾಣದಲ್ಲಿ ಸೇರಿಸಿ, ಜೊತೆಗೆ ಸ್ವಲ್ಪ ಏಲಕ್ಕಿ, ಜಾಪತ್ರೆ, ಒಣಶುಂಠಿ, ದಾಲ್ಚಿನ್ನಿ ಬೆರೆಸಿ, ಎಲ್ಲವನ್ನೂ ಪುಡಿ ಮಾಡಬೇಕು. ಒಂದು ಲೋಟ ನೀರಿಗೆ ಈ ಪುಡಿ ಒಂದು ಚಮಚ ಹಾಕಿ, ನಿಧಾನವಾಗಿ ಬಿಸಿ ಮಾಡಿದರೆ ರುಚಿಯಾದ ಹಾಗೂ ಆರೋಗ್ಯದಾಯಕ ಕಷಾಯ ತಯಾರು. ಈ ಕಷಾಯಕ್ಕೆ ಬೆಲ್ಲ ಮತ್ತು ಹಾಲು ಬೆರೆಸಬಹುದು.
- ಅಡ್ಡೂರು ಕೃಷ್ಣ ರಾವ್
ಚಿತ್ರಕೃಪೆ :By Raffi Kojian - http://Gardenology.org, CC BY-SA 3.0, https://commons.wikimedia.org/w/index.php?curid=12734915