(೧) ಕೈತೋಟ ನಿರ್ವಹಣೆ ಕಾರ್ಯಾಗಾರ

 ೨೯ ಜುಲೈ ೨೦೧೭ ರಂದು ಮಂಗಳೂರಿನ ಕರಂಗಲ್ಪಾಡಿಯಲ್ಲಿ ರಾಮಚಂದ್ರ ಭಟ್ ಅವರ ಟೆರೇಸ್ ಸಭಾಂಗಣದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಏರ್ಪಡಿಸಿದ್ದ ಕಾರ್ಯಾಗಾರ “ಕೈತೋಟ ನಿರ್ವಹಣೆ".
 
ಸಂಜೆ ೪.೩೦ರಿಂದ ೬.೩೦ ವರೆಗೆ ಜರಗಿದ ಈ ಕಾರ್ಯಾಗಾರದಲ್ಲಿ ಮೂವರು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಒದಗಣೆ ಮತ್ತು ಪ್ರಾತ್ಯಕ್ಷಿಕೆ. ಆರಂಭದಲ್ಲಿ ಮನೆಯ "ಕೊಳೆಯುವ ಕಸ”ವಾದ ತರಕಾರಿ ತ್ಯಾಜ್ಯ, ಹಣ್ಣಿನ ಸಿಪ್ಪೆಇತ್ಯಾದಿಗಳಿಂದ ಸುಲಭವಾಗಿ ಕಂಪೋಸ್ಟ್ ತಯಾರಿಸುವ ವಿಧಾನದ ಬಗ್ಗೆ ತಿಳಿಸಿ, ಬಳಿಕ ಅಲ್ಲೇ ತೋರಿಸಿಕೊಟ್ಟವರು ಅಶ್ವಿನಿ ಭಟ್. ಕೆಳಗಡೆ ಎರಡು - ಮೂರು ತೂತು ಮಾಡಿದ ಪ್ಲಾಸ್ಟಿಕ್ ಬಕೆಟಿನಲ್ಲಿ ದಿನದಿನವೂ ಅಂತಹ ಕಸ ಹಾಕುತ್ತಾ, ಮುಚ್ಚಳ ಮುಚ್ಚಿ ಇರಿಸಬೇಕೆಂದರು. ಅದಕ್ಕೆ ತಳದಲ್ಲಿ ಒಂದು ಹಿಡಿ ಸೆಗಣಿ ಅಥವಾ ಹಳೆಯ ಕಾಂಪೋಸ್ಟ್ ಬೆರೆಸಿದರೆ ತ್ಯಾಜ್ಯಗಳು ಬೇಗನೇ ಕೊಳೆಯುತ್ತವೆ ಎಂಬುದು ಅವರು ನೀಡಿದ ಸಲಹೆ. ಹೀಗೆ ಬಕೆಟಿನಲ್ಲಿ ಹಾಕಿಡುವ ಕಸ ಕೊಳೆಯುವಾಗ ಯಾವುದೇ ದುರ್ವಾಸನೆ ಬರುವುದಿಲ್ಲ ಮತ್ತು ಮೂರು ತಿಂಗಳಿನಲ್ಲಿ ಕಂಪೋಸ್ಟ್ ತಯಾರಾಗುತ್ತದೆ ಎಂದು ಮಾಹಿತಿ ನೀಡಿದರು.
 
ಅವರ ಪ್ರಾತ್ಯಕ್ಷಿತೆಯ ನಂತರ 'ಎರೆಹುಳ ಗೊಬ್ಬರ ತಯಾರಿ” ಬಗ್ಗೆ ತಿಳಿಸಿ ಕೊಟ್ಟವರು ಮೇರಿ ಮನೋಹರ್. ಕಳೆದ ೨೪ ವರುಷಗಳಿಂದ ತಮ್ಮ ಮನೆಯಲ್ಲಿ ಎರೆಹುಳ ಗೊಬ್ಬರ ತಯಾರಿಸುತ್ತಿರುವ ಮೇರಿ, ತಮ್ಮ ಅನುಭವವನ್ನು ನೆರೆದಿದ್ದವರೊಡನೆ ಹಂಚಿಕೊಂಡರು. ಎರೆಹುಳಗಳು ಎಂತಹ ಉಪಯುಕ್ತ ಜೀವಿಗಳು ಎಂಬುದನ್ನು ವಿವರಿಸಿದರು. ಮನೆಯ ಜೈವಿಕ ತ್ಯಾಜ್ಯವನ್ನೆಲ್ಲ ತೊಟ್ಟಿಯಲ್ಲಿ ಸಾಕುವ ಎರೆಹುಳಗಳಿಗೆ ಆಹಾರವಾಗಿ ಹಾಕಬಹುದೆಂಬುದು ಅವರ ಸಲಹೆ. ಗಡುಸಾದ ವಸ್ತುಗಳು ಅವುಗಳಿಗೆ ಆಹಾರವಲ್ಲ ಎಂಬ ಎಚ್ಚರಿಕೆ. ಇರುವೆ, ಇಲಿ ಹಾಗೂ ಹಕ್ಕಿಗಳಿಂದ ಎರೆಹುಳಗಳನ್ನು ರಕ್ಷಿಸುವ ಬಗ್ಗೆ ವಿವರಣೆ. ಸಭಿಕರ ಪ್ರಶ್ನೆಗಳಿಗೆ ಉತ್ತರುಸುವಾಗ, ಅವರ ದಶಕಗಳ ಅನುಭವದ ಝಳಕ್ ಸಿಗುತ್ತಿತ್ತು.
 
ಅನಂತರ “ಕಸಿಕಟ್ಟುವ” ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟವರು ಸರೋಜ ಪ್ರಕಾಶ್. ಒಂದೇ ಗಿಡದಲ್ಲಿ ಹಲವು ಬಣ್ಣದ ಹುಗಳನ್ನು ಅಥವಾ ಹಲವು ಜಾತಿಯ ಹಣ್ಣುಗಳನ್ನು ಕಸಿಕಟ್ಟಿ ಬೆಳೆಸಬಹುದು ಎಂಬುದಕ್ಕಾಗಿ ಅವರಿಗೆ ಇದರಲ್ಲಿ ಆಸಕ್ತಿ ಮೂಡಿತು. ಈಗ ಎರಡು ವರುಷಗಳಿಂದ, ಪ್ರತಿದಿನವೂ ಎರಡು ಗಂಟೆಗಳು ಕಸಿಕಟ್ಟುವುದರಲ್ಲಿ ಹಾಗೂ ಗಿಡಗಳ ಆರೈಕೆಯಲ್ಲಿ ತೊಡಗಿಸಿಕೊಂಡವರು. ಕಾರ್ಯಾಗಾರಕ್ಕೆ ಬಂದಿದ್ದ ಹಲವರು ತಂದಿದ್ದ ಗಿಡಗಳಿಗೆ ಕಸಿಕಟ್ಟಿ ತೋರಿಸಿದರು. ಅವುಗಳಲ್ಲಿ ವಿವಿಧ ಬಣ್ಣದ ಹೂಗಳು ಅರಳುವುದನ್ನು ಕಾಣುವಾಗ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು, ಅಲ್ಲವೇ?