(೨) “ಕೈತೋಟ ಕ್ರಾಂತಿಯಾಗಲಿ” ಕಾರ್ಯಕ್ರಮ

೧೯ ಆಗಸ್ಟ್ ೨೦೧೭ರಂದು ಮಂಗಳೂರಿನ ಶರವು ದೇವಸ್ಥಾನ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಸಂಜೆ ೪.೩೦ಕ್ಕೆ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ ಕಾರ್ಯಕ್ರಮ “ಕೈತೋಟ ಕ್ರಾಂತಿಯಾಗಲಿ”.
 
ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದವರು ಮೂಡಬಿದ್ರೆ ಬಳಿಯ ತಾಕೊಡೆಯ ಎಡ್ವರ್ಡ್ ರೆಬೆಲ್ಲೋ. ಆರಂಭದಲ್ಲಿ ಅವರನ್ನು ಪ್ರದೀಪ್ ಸೂರಿ ಪರಿಚಯಿಸಿದರು. ಎಡ್ವರ್ಡರದು ತರಕಾರಿ ಹಾಗೂ ಹಣ್ಣುಗಳ ಕೃಷಿಯಲ್ಲಿ ನಾಲ್ಕು ದಶಕಗಳ ವ್ಯಾಪಕ ಅನುಭವ. ಅಪ್ಪಟ ಸಾವಯವ ಕೃಷಿಕರಾದ ಅವರು ಡಾ. ಎಂ.ಎಚ್. ಮರಿಗೌಡ ಪ್ರಶಸ್ತಿ ಮತ್ತು ಇತರ ಹಲವು ಪ್ರಶಸ್ತಿ ವಿಜೇತರು. ಎಲ್ಲಿಯೋ ಒಂದು ವಿಶೇಷ ಹಣ್ಣಿನ ತಳಿ ಇದೆಯೆಂದು ತಿಳಿದೊಡನೆ ಅಲ್ಲಿಗೆ ಹೋಗಿ ಅದನ್ನು ತಂದು, ನೆಟ್ಟು, ಪೋಷಿಸಿ, ತಮ್ಮಲ್ಲಿ ವಿವಿಧ್ಯಮಯ ಹಣ್ಣಿನ ಗಿಡಗಳ ಸಂಗ್ರಹ ಬೆಳೆಸಿಕೊಂಡವರು ಎಡ್ವರ್ಡ್. ಸ್ನೇಹಿತರ ಜಮೀನಿನಲ್ಲಿಯೂ ಅಪರೂಪದ ಗಿಡಗಳು ಇರಬೇಕೆನ್ನುವ ದೊಡ್ಡ ಮನಸ್ಸಿನವರು. ಹೀಗೆ ಗಿಡಗೆಳೆತನದಿಂದ ಹಲವಾರು ಜನರ ತೊಟಗಳಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಲೆಸಲು ಪ್ರೋತ್ಸಾಹ ಇತ್ತವರು. ಅಂದಿನ ಕಾರ್ಯಕ್ರಮದಲ್ಲಿ, ಬೀಜಗಳ ರಕ್ಷಣೆ, ಬೀಜ ಬಿತ್ತನೆ, ಸಸಿ ನೆಡುವಿಕೆ, ಗಿಡಬಳ್ಳಿಗಳ ಪೋಷಣೆ, ಗೊಬ್ಬರ ನೀಡಿಕೆ, ರೋಗ ಹಾಗೂ ಕೀಟ ನಿಯಂತ್ರಣ, ಫಸಲಿನ ಮಾರಾಟದ ಬಗ್ಗೆ ಮಾಹಿತಿ ನೀಡಿ, ಸಭಿಕರ ಪ್ರಶ್ನೆಗಳನ್ನು ಉತ್ತರಿಸಿದರು.
 
ಅನಂತರ, ಕಲ್ಲಡ್ಕ ಹತ್ತಿರದ ತಮ್ಮ ಜಮೀನಿನಲ್ಲಿ ದೇಸಿ ದನಗಳನ್ನು ಸಾಕುತ್ತಾ, ಸಹಜ ಕೃಷಿ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿರುವ ಸತೀಶ್ ಶೆಟ್ಟಿ ಅವರು “ಜೀವಾಮೃತ" ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟರು. ಗಿಡಮರಬಳ್ಳಿಗಳಿಗೆ ಸೂಕ್ತ ಪ್ರಮಾಣದಲ್ಲಿ ಜೀವಾಮೃತ ಹಾಕಿದರೆ, ಅವು ಹುಲುಸಾಗಿ ಬೆಳೆದು, ಉತ್ತಮ ಫಸಲು ನೀಡುತ್ತವೆ ಎಂದು ತಮ್ಮ ಅನುಭವ ಆಧಾರಿತ ಮಾಹಿತಿ ನೀಡಿದರು.