The Untold Story of ಕಶ್ಮೀರ್
"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "... ವಿನಮ್ರ ಸವಾಲೆಸೆದು ಬರೆಯಲು ಕೂತ ಮೇಲೆ, ಅದನ್ನು ಹಿಂದೆಗೆದ ದಿನ ಪೆನ್ನು ಕೆಳಗಿಡುತ್ತೇನೆನ್ನುವ ಅಕ್ಷರ ವ್ಯಾಮೋಹಿ ನಾನು. ಇದರರ್ಥ ದುಡ್ಡು ಕೊಟ್ಟೇ ಓದಿರಿ ಎಂದಾದ ಮೇಲೆ ಓದಿಸಬಲ್ಲ ಪುಸ್ತಕಗಳನ್ನೇ ಕೊಡುತ್ತೇನೆನ್ನುವ ಬದ್ಧತೆಯೂ ಲೇಖಕನಿಗೆ ಇರಬೇಕಲ್ಲವೇ..?
ಓದುವುದೇ ಬೇರೆ, ಬರೆಯುವುದೇ ಬೇರೆ. ಮೊದಲನೆಯದ್ದು ಪ್ಲೆಜರು, ಎರಡನೆಯದ್ದು ಪ್ರೆಶ್ಯರು. ಹಾಗಾಗಿ ಎರಡನೆಯದಕ್ಕೆ, ಬರಹಗಾರನ ಶ್ರಮಕ್ಕೂ ಒಂದು ಮೌಲ್ಯ ಇದ್ದೇ ಇರಬೇಕು ಎನ್ನುವುದರ ಅಖಂಡ ಬೆಂಬಲಿಗ ನಾನು." ಎಂದು ಹೇಳಿಕೊಂಡಿದ್ದಾರೆ.
ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್. ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ " ಕಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ. ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಶ್ಮೀರ್ ಕೃತಿ ಈ ತನಕ ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಯಲು ಮಾಡಿದೆ. ಕಶ್ಮೀರ ಭಾರತದ ಪಾಲಿಗೆ ಸ್ವರ್ಗ ಸದೃಶ ನಾಡಾಗಬೇಕಿತ್ತು. ದುರದೃಷ್ಟವಶಾತ್ ಅದು ಶಾಪಗ್ರಸ್ಥ ಭೂಮಿಯಾಗಿ ಪರಿಣಮಿಸಿದೆ. ಆಯಾ ಕಾಲದಲ್ಲಿ ಕಶ್ಮೀರ ವಿಷಯದಲ್ಲಿ ತೆಗೆದುಕೊಂಡ ಅವಿವೇಕದ ನಿರ್ಧಾರಗಳಿಂದ, ಇಂದಿಗೂ ನಾವು ಬೆಲೆ ತೆರುತ್ತಲೇ ಇದ್ದೇವೆ. ಭಾರತದಲ್ಲೇ ಹಿಂದೂಗಳು ಪರಕೀಯರಂತೆ, ಎರಡನೇ ದರ್ಜೆಯ ಪ್ರಜೆಗಳಂತೆ, ಅಸಹನೀಯವಾದ ಮತ್ತು ದುಸ್ತರ ಬದುಕನ್ನು ಬಾಳುತ್ತಿರುವುದು ದುರಂತ.
ದಿಲ್ಲಿ ಮತ್ತು ಕಶ್ಮೀರದ ನಾಯಕರ ಸಂಕುಚಿತ ಮತ್ತು ಮತೀಯ ಭಾವನೆಗಳಿಂದ, ಕಶ್ಮೀರ ನಮ್ಮ ಕೈತಪ್ಪಿ ಹೋಗುವಂಥ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಕಣಿವೆಯಲ್ಲಿ ನಿರಂತರ ಅಶಾಂತಿ ನೆಲೆಸಲು ಪ್ರತ್ಯೇಕತಾವಾದಿಗಳು ಆಡಿದ ಆಟ ಒಂದೆರಡಲ್ಲ.
ಈ ಎಲ್ಲಾ ವಿಷಯಗಳನ್ನು ಮೆಹಂದಳೆ ಅವರು ಈ ಕೃತಿಯಲ್ಲಿ ಐತಿಹಾಸಿಕ ಹಿನ್ನಲೆಯಿಂದ, ವಿಶ್ಲೇಷಣಾತ್ಮಕ ನೋಟದಿಂದ, ಚಿಕಿತ್ಸಕ ಬುದ್ಧಿಯಿಂದ ಪರಿಣಾಮಕಾರಿಯಾಗಿ ನಮ್ಮ ಮುಂದೆ ಇಟ್ಟಿದ್ದಾರೆ. ಯಾರಿಗೂ ಗೊತ್ತಾಗದೇ, ಅಲ್ಲಲ್ಲಿಯೇ ಹುದುಗಿಹೋದ, ಕಾಲಗರ್ಭ ಸೇರಬಹುದಾದ ಅನೇಕ ಭಯಾನಕ, ಐತಿಹಾಸಿಕ 'ಕಳೇಬರ'ಗಳನ್ನು ಅವರು ಬಹಿರಂಗಗೊಳಿಸಿದ್ದಾರೆ. ಕಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ. ಮೆಹೆಂದಳೆ ಅವರ ಪ್ರಯತ್ನ ಮತ್ತು ಕಾಳಜಿಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಶ್ಮೀರದ ಬಗ್ಗೆ ಹಲವಾರು ಪುಸ್ತಕಗಳು ಬಂದರೂ ಇನ್ನೂ ಅಲ್ಲಿ ಹುದುಗಿರುವ ಸತ್ಯ ಸಂಪೂರ್ಣವಾಗಿ ಹೊರ ಬಂದಿಲ್ಲ. ಮೆಹೆಂದಳೆಯವರು ಹಲವಾರು ಸತ್ಯಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಪ್ರತೀ ವಿಷಯಕ್ಕೆ ಅಂತರ್ಜಾಲದ ಲಿಂಕ್ ಕೊಟ್ಟು ಮೂಲ ಬರಹದತ್ತ ಕರೆದುಕೊಂಡುಹೋಗುತ್ತಾರೆ. ಪುಸ್ತಕದ ಬರಹಗಳ ನಡುವೆ ಉದ್ದುದ್ದದ ಅಂತರ್ಜಾಲ ಲಿಂಕ್ ಕೊಡುವ ಬದಲು ಕ್ಯೂಆರ್ ಕೋಡ್ ನೀಡಿದ್ದರೆ, ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ನೇರ ವಿಷಯಕ್ಕೆ ಹೋಗಬಹುದಾಗಿತ್ತು. ಆದರೂ ದಾಖಲೆಯಿಲ್ಲದೇ ಏನೂ ಬರೆದಿಲ್ಲ ಎಂಬುದು ಉತ್ತಮ ವಿಷಯ.
ಪುಸ್ತಕ ಓದುತ್ತಾ ಓದುತ್ತಾ ನಮ್ಮ ರಕ್ತ ಕುದಿಯುತ್ತಾ ಹೋಗುತ್ತದೆ. ಹಿಂದೆ ಆದ ಅನ್ಯಾಯ ಮತ್ತು ಈಗಲೂ ಆಗುತ್ತಿರುವ ಹಿಂಸಾಚಾರವು ಭೂಲೋಕದ ಸ್ವರ್ಗವಾಗಿರಬೇಕಿದ್ದ ಕಶ್ಮೀರವನ್ನು ಜೀವಂತ ನರಕವನ್ನಾಗಿಸಿದ್ದಾರೆ. ಇದರಲ್ಲಿ ಉಗ್ರಗಾಮಿಗಳ ಪಾಲು ಎಷ್ಟಿದೆಯೋ ಅಷ್ಟೇ ರಾಜಕಾರಣಿಗಳದ್ದೂ ಇದೆ. ತಮ್ಮ ರಾಜಕೀಯ ಬೇಳೆ ಬೇಯಿಸುವುದಕೋಸ್ಕರ ರಾಜಕಾರಣಿಗಳು ಯಾವ ಮಟ್ಟಕ್ಕೆ ಹೋಗಲೂ ಹೇಸರು. ಇದೇ ಕಾರಣದಿಂದ ಕಶ್ಮೀರ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.
೨೦೪ ಪುಟಗಳ ಪುಸ್ತಕದ ತುಂಬೆಲ್ಲಾ ಕಥೆಗೆ ಪೂರಕವಾದ ಚಿತ್ರಗಳಿವೆ. ಒಮ್ಮೆ ಓದಲು ಪುಸ್ತಕವನ್ನು ಹಿಡಿದುಕೊಂಡರೆ ಮುಗಿಯುವ ತನಕ ಕೆಳಗಿಡಲಾರಿರಿ. ಕೊನೆಗೆ ಲೇಖಕರು ಬರೆದ ಮಾತುಗಳು ಸದಾ ಕಾಲ ನೆನಪಿನಲ್ಲಿ ಉಳಿದೇ ಉಳಿಯುತ್ತವೆ. "..ಆದರೆ ಹಿಂದೂಗಳಿಗೆಂದಿಗೂ ಭಾರತ ಬಿಟ್ಟರೆ ಇನ್ನೊಂದು ಇಂಚು ಜಾಗ ಭೂಮಿಯ ಮೇಲೆ ಎಲ್ಲೂ ಇಲ್ಲ. ಈಗ ಉಳಿಸಿಕೊಂಡಿರೋ ಬದುಕಿದೀರಿ. ಇಲ್ಲ ಓಡುತ್ತಾ ಕೊನೆಗೆ ದಕ್ಷಿಣದತ್ತ ಇರುವ ವಿಶಾಲ ಸಮುದ್ರಕ್ಕೆ ಇಳಿಯುವುದರ ವಿನಃ ಬೇರೆ ದಾರಿ ಇರುವುದಿಲ್ಲ. ಇವೆಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಆದರೆ ಸ್ವತಃ ದೇವರಿಗೂ ದಿಗಿಲಿದೆ ಆ ಬಗ್ಗೆ."