"for weddings and funerals"

"for weddings and funerals"

ಬರಹ

ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ  ಬಿಳಿ ಬಣ್ಣಕ್ಕೆ ತಿರುಗದಿದ್ದರೂ ನನ್ನ ಧರ್ಮ ಪತ್ನಿ ಮುಖ ಮಾತ್ರ ನಿಧಾನವಾಗಿ ಜೆಡ್ಡಾ ದ  ಕೆಂಪು ಸಮುದ್ರದಂತೆ ಬಣ್ಣಕ್ಕೆ ತಿರುಗಿಸುವಲ್ಲಿ ಯಶಸ್ವಿಯಾಯಿತು. " ನಾನು ಸೌದಿ ಬಿಟ್ಟು ಭಾರತಕ್ಕೆ ಹೋಗಲು ನಿರ್ಧರಿಸಿದ್ದೇನೆ." ಇದು ನಾನು ಹಾಕಿದ ಬಾಂಬ್. ಇದು ಬಾಂಬ್ ಆಗಲು ಹೇಗೆ ಸಾಧ್ಯ, ನಮ್ಮ ದೇಶಕ್ಕೆ ತಾನೇ ಮರಳಿ ಬರುತ್ತಿರುವುದು ಎಂದು ಕೇಳಿದಿರಾ? ಹೌದು, ಅನಿವಾಸಿಗಳು ಪರದೇಶ ಸಾಕಾದಾಗ ತಮ್ಮ ತವರಿಗೆ ಮರಳೋದು ಸಹಜ, ಆದರೆ ಪರದೇಶದ ಸುಖ ಉಂಡ, ಸಾಕಷ್ಟು ದೊಡ್ಡ ಸಂಬಳ ತೆಗೆದುಕೊಳ್ಳುವ ಜನಕ್ಕೆ ತಮ್ಮ ದೇಶಕ್ಕೆ ವಾಪಸಾಗೋದು ಒಂದು ದೊಡ್ಡ ಸಾಹಸವೇ. ಇಂದಿನ ಪತ್ರಿಕೆಯಲ್ಲಿ ಓದಿದೆ ಅಮೇರಿಕ, ಐರೊಪ್ಯ ರಾಷ್ಟ್ರಗಳಿಂದ ಭಾರತೀಯರಿಗೆ ಮರಳಿ ದೇಶಕ್ಕೆ ಬರಲು ಆಸೆಯಂತೆ ಆದರೆ ಇಲ್ಲಿನ ಟ್ರಾಫಿಕ್ಕು, ಲಂಚದ ಹಾವಳಿ, ಅಧಿಕಾರಿಗಳ ಅಸಡ್ಡೆ ಹೀಗೆ ಹತ್ತು ಹಲವು ಕಾರಣಗಳು ಅವರನ್ನು ಧೃತಿಗೆಡಿಸುತ್ತವಂತೆ. ಹೇಗಿದೆ ಲಾಜಿಕ್ಕು? ಇವರು ಬರಬೇಕೆಂದರೆ ನಮ್ಮ ದೇಶವನ್ನು ಚೊಕ್ಕ ಮಾಡಿ ತಳಿರು ತೋರಣ ಕಟ್ಟಿ, ರತ್ನಗಂಬಳಿ  ಹಾಸಿದರೆ ಬರುತ್ತಾರೆ ನಮ್ಮ ಶ್ರೀಮಂತ ಅನಿವಾಸಿಗಳು. ಇಂಥ ಷರತ್ತುಗಳನ್ನು ಇಟ್ಟುಕೊಂಡು ಯಾಕಾದರೂ ಬರುತ್ತಾರೋ, ಅಲ್ಲೇ ಇರಬಾರದೇ? ಸರಿ, ನನ್ನ ಮಾತನ್ನು ಕೇಳಿದ ಹೆಂಡತಿ ಗರ ಬಡಿದಂತೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ಹಠಾತ್ ಹೊಡೆತದಿಂದ ಮರಗಟ್ಟು ವ ಹಾಗೆ ಆಯಿತು ಮೇಡಂ ರ ಸ್ಥಿತಿ. ಆ ಅವಸ್ಥೆಯಲ್ಲೇ ಆಕೆಯನ್ನು ಬಿಟ್ಟುಒಳಗೊಳಗೇ ನಗುತ್ತಾ (sadistic?) ನಾನು, ಮಗ ಮನೆ ಬಿಟ್ಟೆವು. 

ಸಂಜೆ ಮುಂಬಯಿ ಯ ಚಾಟ್ ಫ್ರೆಂಡ್ ತುಂಬಾ ದಿನದ ನಂತರ ಸಿಕ್ಕರು. 

ವೀಣಾ : Hi ಅಬ್ದುಲ್, wassup?

ನಾನು: ಹಲೋ, ಚೆನ್ನಾಗಿದ್ದೇನೆ, you?

ವೀಣಾ: fine too. ಮತ್ತೇನು ವಿಶೇಷ? 

ನಾನು: ವಿಶೇಷ ಏನೂ ಇಲ್ಲ. mmmmm, i have decided to leave saudi arabia for good. ಭಾರತದಲ್ಲಿ settle ಆಗ್ತೀನಿ.

ವೀಣಾ: ವ್ಹಾಟ್? have you gone nuts? ತಮಾಷೆನಾ? ಸೌದಿ ಬಿಡಲು ಕಾರಣ?

ನಾನು: ತಮಾಷೆ? ನೋ, ತಮಾಷೆ ಅಲ್ಲ, ನಿಜ. ಮರುಭೂಮಿ ಸಾಕಾಗಿ ಹೋಯಿತು, ಇನ್ನು ಇರುವಷ್ಟು ಕಾಲ ಅಪ್ಪ, ಅಮ್ಮ, ತಮ್ಮ ತಂಗಿಯರೊಂದಿಗೆ ಕಳೆಯುವಾಸೆ. Besides, I miss all those weddings and funerals back home.

 

ವೀಣಾ: ತಂದೆ ತಾಯಿ ಜೊತೆ ಕಳೆಯೋಕೆ ಒಳ್ಳೆ ಕೆಲಸ ಬಿಟ್ಟು ಯಾರಾದರೂ ಬರುತ್ತಾರಾ? you are out of your wits.  

ನಾನು: ಓಹೋ, ತಂದೆ ತಾಯಿ ಜೊತೆ ಇರ್ತೀನಿ ಅಂದರೆ ನಾನು ಹುಚ್ಚನೋ? 

ವೀಣಾ: ಶ್ರೀಮತಿ ಏನ್ ಹೇಳ್ತಾರೆ? 

ನಾನು: she is scared. 

ವೀಣಾ: ಭಯ? ಯಾಕೆ?

ನಾನು: ಹೌದು, ಭಯ ಅವಳಿಗೆ. ಹೈಫನ್ ಗಳ (hyphen) ಭಯ. 

ವೀಣಾ: hyphen? ಅರ್ಥ ಆಗಲಿಲ್ಲ, ಅಬ್ದುಲ್. 

ನಾನು: ಅರ್ಥ ಏನೆಂದರೆ ಭಾರತಕ್ಕೆ ವಾಪಸಾದರೆ ಸಾಲಾಗಿ hyphen ಗಳು ನಿಂತಿರ್ತಾರೆ. father-in-law, mother-in-law, brother-in-law, sister-in-law. ಅರ್ಥ ಆಯಿತಾ ಈಗ ? ಫಾದರ್ರು, ಮದರ್ರು ಇವರುಗಳ ನಂತರ ಒಂದು ಗೆರೆ (-) ಕಾಣ್ತಾ ಇದ್ದೀಯಾ,  ಅದೇ ಹೈಫನ್ನು, ಒಂದು ರೀತಿಯ high fun. ಅದರ ಭಯ ಎಂದಾಗ ಗೊಳ್ಳೆಂದು ನಕ್ಕಳು ಆಕೆ.

 

ಈ ಹೈ ಫನ್ ಗಳ ಭಯ ಯಾಕೋ ಏನೋ ಮುತ್ತೈದೆಯರಿಗೆ? ಹೆಣ್ಣು ಬರೀ ಮಗಳು, ಪತ್ನಿ, ತಾಯಾದರೆ ಸಾಲದು, ಜೊತೆಗೇ ಆಕೆ diplomat  ಸಹ ಆಗಬೇಕು. ನೋಡಲಿಲ್ಲವೇ ನಮ್ಮ ಹಿಲರಿ ಕ್ಲಿಂಟನ್, ವಿಶ್ವದ ಟಾಪ್ ದಿಪ್ಲೋಮ್ಯಾಟ್. ಒಂದು ಕ್ಷಣ ಜರ್ಮನಿಯ ಬರ್ಲಿನ್ ನಗರದಲ್ಲಿ ಐತಿಹಾಸಿಕ ಬರ್ಲಿನ್ ಗೋಡೆ ಉರುಳಿದ ವಾರ್ಷಿಕೋತ್ಸವದಲ್ಲಿ ಪಾಲುಗೊಳ್ಳುತ್ತಾ ಇದ್ದಾರೆ, ಮತ್ತೊಂದು ಕ್ಷಣ ಅರಬ್ ಇಸ್ರೇಲಿಗಳ ಮಧ್ಯೆ ಮಹಾ ಗೋಡೆ ಎಬ್ಬಿಸುವ  ತರಾತುರಿಯಲ್ಲಿ ಪೆರ್ಶಿಯನ್ ಕೊಲ್ಲಿಯಲ್ಲಿ ಹಾಜರು.  ನನ್ನ ಪತ್ನಿ ಭಾರತ ತಲುಪಿ ಹಗ್ಗದ ಮೇಲೆ ನಡೆಯುವುದೂ, ನನ್ನನ್ನು ಲಾಗ ಹಾಕಿಸಿದ ಹಾಗೆ ಆಕೆಯೂ ಲಾಗ ಹಾಕುವುದನ್ನು ನೆನೆದು ಏನೋ ಒಂದು ರೀತಿಯ ಪುಳಕ.     

 ಸಂಜೆ ನಾನು ಮನೆಗೆ ಮರಳಿದಾಗ ಗೋಲಿಯಾಡಿ ತನ್ನೆಲ್ಲ ಗೋಲಿಗಳನ್ನು ಕಳಕೊಂಡ ಪೋರನ ಸಪ್ಪೆ ಮುಖದಂತೆ ಇತ್ತು ಮಡದಿಯ ಮುಖ. ಊಟದ ಸಮಯ ಮೆಲ್ಲನೆ ವಿಷಯ ಕೆದಕಿದಳು. ಆಕೆಗೆ ನಾನು ಭಾರತಕ್ಕೆ ಹೋಗಿ ನೆಲೆಸುವ ವಿಷಯ ಅಚ್ಚರಿ ತಂದಿತ್ತು. ನಾನೂ ಅಷ್ಟೇ, ಯಾವುದಾದರೂ ಹೊಸ ಹೊಸ fad ಗಳನ್ನು ಹಚ್ಚಿಕೊಂಡು ಇದ್ದುದರಿಂದ ಅವಳಿಗೆ ಅನ್ನಿಸಿರಬೇಕು ಇದೂ ಒಂದು ರೀತಿಯ fad ಇರಬಹುದು ಎಂದು. ಅಲ್ಲಾ, ಇದ್ದಕ್ಕಿದ್ದಂತೆ ಏಕೆ ತೀರ್ಮಾನಿಸಿದಿರಿ? ನಾನಂದೆ ಬದುಕಿನಲ್ಲಿ ಕೆಲವೊಮ್ಮೆ ತೀರ್ಮಾನಗಳನ್ನು spur of the moment ನಲ್ಲಿ ತೆಗೆದುಕೊಳ್ಳಬೇಕು. ಅಲ್ಲಾ ಕಣೆ ಚೆನ್ನಿ ಎಷ್ಟು ವರ್ಷ  ಅಂತ ಇಲ್ಲಿರೋದು, ನಾವಿಲ್ಲಿರುವಷ್ಟು ಸಮಯ ನಮ್ಮ ಬೇಡಿಕೆಗಳು ತೀರುವುದಿಲ್ಲ. one fine day ನಾನು ಎದ್ದಾಗ ನನಗೆ ವಯಸ್ಸುಎಪ್ಪತ್ತಾಗಿರುತ್ತದೆ ಮತ್ತು ಕೂತು ತೂಕಡಿಸುತ್ತಿರುವ ಒಂಟೆ ಬೆನ್ನಿಗೆ ನಾನೂ ಆತು ತೂಕಡಿಸುತ್ತಿರುತ್ತೇನೆ, ಅದಕ್ಕೆ ಆದಷ್ಟು ಬೇಗ ಜಾಗ ಖಾಲಿ ಮಾಡೋಣ ಎಂದೆ.                           

ಇಲ್ಲಿನ ಬದುಕನ್ನು ನಮಗಿಂತ ಹೆಚ್ಚು ಎಂಜಾಯ್ ಮಾಡೋದು ಹೆಂಗಳೆಯರು. ಬೆಳಗ್ಗೆ ಎದ್ದು ನಿದ್ದೆ ಕಣ್ಣಿನಲ್ಲಿ ಒಂದೆರಡು ಟೋಸ್ಟ್ ಗಳನ್ನು toaster ಗೆ ನುಗ್ಗಿಸಿ ಅದರೊಳಗೆ ತೋಚಿದ್ದನ್ನು ತುಂಬಿ  sandwich ಅಂತ ನಮ್ಮ ಕಡೆ ಎಸೆದು ನಮ್ಮನ್ನು ಹೊರಗಟ್ಟಿದ ಮೇಲೆ ಆಹಾ, ಶುರು ಮತ್ತೊಂದು ಕಂತಿನ beauty sleep.        

ಇನ್ನು ನನ್ನ ಕೆಲವು ಆಪ್ತ ಮಿತ್ರರಿಗೆ ಸೌದಿ ಬಿಡುವ ನನ್ನ ನಿರ್ಧಾರ ಸ್ವಲ್ಪ ವಿಚಿತ್ರವಾಗಿಯೇ ಕಂಡಿತು. ಅದೂ ಸೌದಿ ಬಿಡಲು ನಾನು ಕೊಟ್ಟ ಕಾರಣ; want to live with my parents.  ಇದು ಅವರಿಗೆ ಅರ್ಥವಾಗದ ಒಗಟು (ತಂದೆ ತಾಯಿ ಜೊತೆ ಇರೋದು ಒಗಟು!). ನೀನು ಹೇಗೂ ವರ್ಷ ವರ್ಷ ತಪ್ಪದೆ ಸಂಸಾರ ಸಮೇತ ಭಾರತಕ್ಕೆ ಹೋಗ್ತಾ ಇರುತ್ತೀಯ, ಅದೂ ಅಲ್ಲದೆ ನಿನ್ನ parents ಸಹ ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಇಲ್ಲಿಗೆ   ಬರುತ್ತಲೇ ಇರುತ್ತಾರೆ. ಅವರನ್ನು ಅಷ್ಟೊಂದು ಮಿಸ್ ಹೇಗೆ ಮಾಡಿಕೊಳ್ಳುತ್ತಿದ್ದೀಯ ಅಂತ ಅವರ ಅಂಬೋಣ. ನಾನಂದೆ ಅದೇನೋ ನನಗೆ ಗೊತ್ತಿಲ್ಲ, ತಂದೆ ತಾಯಿಯರ ಜೊತೆ ಅಲ್ಲಿನ ಮಳೆ, ಕೆಸರು, ಶೆಗಣಿ ವಾಸನೆ, ರಾಜಕೀಯ, ನನ್ನನ್ನು ಚಿಕ್ಕಂದಿನಿಂದ ಆಡಿಸಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಕಮಲಮ್ಮ, ಗಿರಿಜಮ್ಮ, ಇವರನ್ನೂ ಮಿಸ್ ಮಾಡುತ್ತಾ ಇದ್ದೇನೆ. ಹೀಗೆ ಸಾಗಿತು ನನ್ನ ವಾದದ ಸರಣಿ. 

ಸೋ, fasten your seat belt. ಬರುತ್ತಿದೆ ಒಂಟೆ ಸವಾರಿ ಭಾರತಕ್ಕೆ.