ಅಂದಿನ ಆಧುನಿಕ ಬಡಾವಣೆ

ಅಂದಿನ ಆಧುನಿಕ ಬಡಾವಣೆ

ನನ್ನೂರನ್ನು ನನ್ನೂರಿನ ಜನರನ್ನು ನೆನಪಿಸುತ್ತಾ ಕುಳಿತಾಗ ಇನ್ನೂ ಅನೇಕರು ಮನಸ್ಸಿನ ಪರದೆಯ ಮೇಲೆ ಬಂದು ಹೋಗುತ್ತಿರುತ್ತಾರೆ. ಒಂದೊಂದು ಮನೆಯ, ಮನೆ ಮಂದಿಯ ಬಗೆಗಿನ ಅನೇಕ ನೆನಪುಗಳಲ್ಲಿ ಕೆಲವೊಂದು ನೆನಪಾಗುತ್ತವೆ. ಹಲವು ನನ್ನ ವಯಸ್ಸಿನ ಕಾರಣದಿಂದ ಮರೆತು ಹೋಗುತ್ತಿರುವುದೂ ಇದೆ. ತಾರನಾಥರ ಅಂಗಡಿಯ ಎದುರಿನಲ್ಲಿ ನಾಗಮ್ಮ ಟೀಚರ್‍ರವರ ಮನೆ ಹಿತ್ತಿಲು ಇತ್ತು. ನಾಗಮ್ಮ ಟೀಚರ್‍ರವರು ಕಾಪಿಕಾಡು ಶಾಲೆಯಲ್ಲಿ ಟೀಚರಾಗಿ ಇದ್ದವರು. ಅವರ ಮಕ್ಕಳಲ್ಲಿ ಚಿಕ್ಕವರು ಆಗ ನಮ್ಮ ಶಾಲೆಗೆ ಬರುತ್ತಿದ್ದರು. ಲಲಿತಾ ಎನ್ನುವವಳು ನನ್ನ ಓರಗೆಯವಳಾಗಿದ್ದುದು ನೆನಪು. ಹಿರಿಯರಿಬ್ಬರು ಅಕ್ಕಂದಿರು ನಮ್ಮ ಮನೆಗೆ ಬರುತ್ತಿದ್ದರು. ನನ್ನ ಚಿಕ್ಕಪ್ಪನ ಶಿಷ್ಯೆಯರು. ಒಬ್ಬ ಅಣ್ಣ ಹಾಗೂ ಒಬ್ಬ ತಮ್ಮ ಇದ್ದರೆನ್ನುವುದು ನೆನಪು. ಅವರ ಮನೆಯ ದಕ್ಷಿಣ ದಿಕ್ಕಿಗೆ ರಸ್ತೆ ಬದಿಯಲ್ಲಿ ದೊಡ್ಡ ಆಲದ ಮರವಿತ್ತು. ಅದೊಂದು ಮಳೆಗಾಲದಲ್ಲಿ ಸಿಡಿಲು ಬಡಿದು ಆ ಮರದ ಗೆಲ್ಲುಗಳು ಸುಟ್ಟು ಹೋದುದು. ಮುಂದೆ ಮರ ನಿಧಾನವಾಗಿ ಸತ್ತು ಹೋದುದು ಪ್ರಕೃತಿಯ ಸಹಜ ವಿನಾಶದ ಒಂದು ಅನುಭವ ನನ್ನದು. ಅವರ ಹಿತ್ತಿಲಲ್ಲಿ ಉತ್ತರದ ಮೂಲೆಗೆ ದೊಡ್ಡ ತೋಡು ಇದ್ದು ಪಾೈಸರಗುಡ್ಡೆಯ ನೀರೆಲ್ಲಾ ಅದನ್ನು ತುಂಬುತ್ತಿತ್ತು. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ ತೋಡು ತುಂಬಿ ರಸ್ತೆಯಲ್ಲಿ ನೀರು ನಿಂತು ನಡೆಯಲು ಸಾಧ್ಯ ವಾಗುತ್ತಿರಲಿಲ್ಲವಾದರೂ ನಮಗೆ ಮಕ್ಕಳಿಗೆ ಆ ನೀರಲ್ಲಿ ಆಟವಾಡುತ್ತಾ ಒದ್ದೆಯಾಗಿ ಶಾಲೆಗೆ ಹೋಗುವುದೆಂದರೆ ಖುಷಿಯ ವಿಷಯ. ಅವರ ಹಿತ್ತಿಲ ಬೇಲಿಯಲ್ಲಿದ್ದ ಗಿಡವೊಂದರ ಎಲೆ ಮುರಿದರೆ ಹಾಲು ಬರುತ್ತಿತ್ತು. ಹಾಗೆಯೇ ಆ ಎಲೆಯ ತೊಟ್ಟು ಟೊಳ್ಳಾಗಿದ್ದು ಅದನ್ನು ಊದಿದಾಗ ಗಾಳಿಯ ಗುಳ್ಳೆಗಳು ಸಾಬೂನಿನ ಗುಳ್ಳೆಗಳಂತೆ ಮಿನುಗುತ್ತಿದ್ದವು, ಆ ಗಿಡ ಔಷಧಕ್ಕೂ ಬಳಕೆಯಾಗುತ್ತಿತ್ತು. ಅವರ ಹಿತ್ತಲಿಗೆ ತಾಗಿದಂತೆ ಕ್ರಿಶ್ಚಿಯನ್ನರ ಮನೆಯೊಂದು ಇದ್ದು, ಆ ಮನೆಯ ಯಜಮಾನರು ಮರದ ಪೀಠೋಪಕರಣಗಳನ್ನು ಮಾಡುತ್ತಿದ್ದರೆಂದು ನೆನಪು. ಆ ಮನೆಯ ಪಕ್ಕದಲ್ಲೊಂದು ಓಣಿ. ಈ ಓಣಿಯಿಂದ ಒಳಗೆ ಹೋದರೆ ಬಾಳೆಬೈಲು, ಆನೆಗುಂಡಿ, ಬಾಳಿಗ ಸ್ಟೋರ್ಸ್‍ಗಳ ಮೂಲಕ ಹೊರ ಬರುವುದಕ್ಕೆ ಸಾಧ್ಯವಾಗುತ್ತಿತ್ತು. ಹಾಗೆಯೇ ಇನ್ನೊಂದು ದಿಕ್ಕಿಗೆ ನಡೆದರೆ ಕಾಪಿಕಾಡು ಶಾಲೆಗೆ ಅಲ್ಲಿಂದ ಮುಂದೆ ಇರುವ ಓಣಿಗಳಲ್ಲಿ ಕೊಟ್ಟಾರ ಕ್ರಾಸ್‍ಗೆ ಬರಲೂ ಸಾಧ್ಯವಿತ್ತು. ಇವುಗಳ ಒಳಭಾಗದಲ್ಲಿ ಪೂರ್ವಕ್ಕೆ ಹೋದರೆ ಇಂದಿನ ಹೈವೇ (ಅಂದು ಇರಲಿಲ್ಲ) ಯ ಇನ್ನೊಂದು ಬದಿಯ ಗದ್ದೆಗಳನ್ನು ದಾಟಿ ಹೋದರೆ ಯೆಯ್ಯಾಡಿ, ಕೊಪ್ಪಲಕಾಡು, ಕೊಂಚಾಡಿಗಳಿಗೆ ಹೋಗಬಹುದಾಗಿತ್ತು. ಹೈವೇ ಅಂದರೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ನಾವು ಶಾಲಾ ಮಕ್ಕಳು ಕುತೂಹಲದಿಂದ ನೋಡಲು ಹೋಗುತ್ತಿದ್ದೆವು. ಅಂದಿನ ತಗ್ಗಿನ ಗದ್ದೆಗಳು, ತೆಂಗಿನ, ಬಾಳೆಗಳ ತೋಟಗಳೆಲ್ಲವೂ ನೆಲಸಮವಾಗಿ ಆ ಕಡೆಯ ಕದ್ರಿಗುಡ್ಡೆಯ ಎತ್ತರಕ್ಕೆ, ಈ ಕಡೆಯ ದಡ್ಡಲಕಾಡಿನ ಎತ್ತರಕ್ಕೆ ಮಣ್ಣು ತುಂಬಿ ಅಲ್ಲೊಂದು ಕೃಷಿ ಪ್ರದೇಶ ಇತ್ತೆನ್ನುವುದೇ ಇಂದು ಭಾವಿಸಲು ಸಾಧ್ಯವಿಲ್ಲದಂತೆ ನೆನಪು ಮಾಸಿಹೋಗುವಂತಾಗಿದೆ.
ನಾಗಮ್ಮ ಟೀಚರ್ ಮನೆಯ ಪಕ್ಕದ ಓಣಿಯಿಂದ ಒಳಕ್ಕೆ ಹೋದರೆ ಅಲ್ಲಿದ್ದ ಅನೇಕ ಮನೆಗಳ ಮಕ್ಕಳು ನಮ್ಮ ಕಾಪಿಕಾಡ್ ಶಾಲೆಯ ವಿದ್ಯಾರ್ಥಿಗಳು. ಅಲ್ಲಿ ನಮ್ಮ ಮುನಿಸಿಪಾಲಿಟಿಯ ಬಿಜೈ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿದ್ದ ಭಟ್ಟರೊಬ್ಬರು ಇದ್ದರು. ಹಾಗೆಯೇ ಈಗಾಗಲೇ ನೆನಪಿಸಿಕೊಂಡ ಶಿಕ್ಷಕಿಯಲ್ಲದೆ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದವರು ನಾನು ಶಿಕ್ಷಕಿಯಾಗಿ ಬಜ್ಪೆಗೆ ಹೋಗುವಾಗ ನನ್ನ ಸಹ ಪ್ರಯಾಣಿಕರಾಗಿ ಕಾವೂರು ಶಾಲೆಗೆ ಹೋಗುತ್ತಿದ್ದರು. ಅವರ ಮಗಳು ಮಮತಾ ನಮ್ಮ ಶಾಲೆಯ ವಿದ್ಯಾರ್ಥಿನಿ. ಇದೇ ಓಣಿಯಲ್ಲಿದ್ದ ಇನ್ನೊಂದು ಮನೆ ಲಿಯೋ, ಜಾನ್ ಎಂಬ ಅಣ್ಣ ತಮ್ಮಂದಿರು, ಅವರ ಮೂವರು ಸಹೋದರಿಯರು ಅವರ ಅಮ್ಮನೊಂದಿಗೆ ನೆಲೆಸಿದ್ದು ಇಂದಿಗೂ ಅಲ್ಲೇ ಅಣ್ಣ ತಮ್ಮಂದಿರು ಇದ್ದಾರೆ. ಕಿರಿಯ ಸಹೋದರಿಯರು ಶಿಕ್ಷಕಿಯರಾಗಿದ್ದುದರಿಂದ ಆಗಾಗ ಭೇಟಿಯಾಗುವ ಸಂದರ್ಭಗಳು ನನಗೆ ದೊರತರೆ ಹಳೆಯ ನೆನಪುಗಳು ಮೆಲುಕಾಡುತ್ತವೆ. ಅವರಿಬ್ಬರೂ ನಾವು ನಿಮ್ಮ ಮನೆಗೆ ಹಾಲು ತರುತ್ತಿದ್ದುದು ನೆನಪಿದೆಯಾ? ಎಂದು ಸಲುಗೆಯಿಂದ ಕೇಳಿದರೆ ನಿಮ್ಮಿಬ್ಬರಿಗಿಂತ ಹೆಚ್ಚು ಬಾರಿ ಬಂದವರು ಲಿಯೋ ಮತ್ತು ಜಾನ್ ಎಂದು ನಾನು ನೆನಪಿಸಿಕೊಳ್ಳುತ್ತಿದ್ದೆ. ಇವರಲ್ಲಿ ಒಬ್ಬರು ಆಕಾಶವಾಣಿಯಲ್ಲಿ ತಾಂತ್ರಿಕ ವಿಭಾಗದಲ್ಲಿದ್ದು ಅಲ್ಲಿ ನನಗೆ ಮಾತಿಗೆ ಸಿಗುತ್ತಿದ್ದರು. ದೊಡ್ಡವರ ಮಡದಿ ಲೀನಾ ಕೂಡ ಶಿಕ್ಷಕಿಯಾಗಿದ್ದು ಅವರು ಅಪ್ಪನ ಶಿಷ್ಯೆಯಾಗಿದ್ದುದರಿಂದ ಮತ್ತಷ್ಟು ಆತ್ಮೀಯತೆಯ ನೆನಪುಗಳ ವಿನಿಮಯವಾಗುತ್ತದೆ. ನಮ್ಮ ಮನೆಗೆ ಬರುತ್ತಿದ್ದ ಅಂಚೆಯ ಅಣ್ಣನಾಗಿದ್ದ ಮಹಾಲಿಂಗರು ಒಬ್ಬ ಒಳ್ಳೆಯ ಸಜ್ಜನ ವ್ಯಕ್ತಿ. ಆ ದಿನಗಳಲ್ಲೇ ಪಾೈಸರ ಗುಡ್ಡೆಯ ಬುಡದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಕೊಂಡು ಬಾಡಿಗೆಗೂ ನೀಡಿ ತುಂಬು ಸಂಸಾರವನ್ನು ನಿರ್ವಹಿಸಿದವರು. ಅವರ ಹಿರಿಯ ಮಗಳು ಜಯಂತಿ ಕಾಪಿಕಾಡು ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದುದರಿಂದ ಮಳೆಗಾಲದಲ್ಲಿ ಕುಂಟಲ ಹಣ್ಣನ್ನು ಕೊಯ್ಯಲು ಅವಳ ಮನೆಗೆ ಹೋಗುತ್ತಿದ್ದುದು ನೆನಪು. ಆಕೆ ಮುಂದೆ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಳು.
ಕಾಪಿಕಾಡಿನ ಈ ಅಡ್ಡರಸ್ತೆಯಲ್ಲಿ ಆಗ ಹೆಚ್ಚಿನ ಮನೆಗಳು ಇರಲಿಲ್ಲ. ಆದ್ದರಿಂದ ಅಲ್ಲಿ ಚಳಿಗಾಲ ಬೇಸಗೆ ಕಾಲಗಳಲ್ಲಿ ಬೇರೆ ಬೇರೆ ಮೇಳಗಳು ಬಂದು ಯಕ್ಷಗಾನ ಬಯಲಾಟ ಪ್ರದರ್ಶಿಸುತ್ತಿದ್ದುವು. ನಾನು ಮತ್ತು ಅಜ್ಜಿ ಅಲ್ಲಿಗೆ ಖಾಯಂ ವೀಕ್ಷಕರು. ಒಳ್ಳೆಯ ಕಲಾವಿದರಿದ್ದರೆ ಅಪ್ಪ ಅಮ್ಮನೂ ತಡರಾತ್ರಿ ಬಂದು ಸೇರುತ್ತಿದ್ದರು. ಮುಖ್ಯವಾದ ಮೇಳಗಳು ದೋಗ್ರ ಪೂಜಾರಿಗಳ ಮೇಳ ಹಾಗೂ ಕೊರಗಪ್ಪ ರೈಗಳ ಮೇಳ: ಇವುಗಳು ಪ್ರದರ್ಶಿಸುತ್ತಿದ್ದ ಆಟಗಳಲ್ಲಿ ಕೋಟಿ ಚೆನ್ನಯ ಮತ್ತು ದೇವಿ ಮಹಾತ್ಮೆ ಹೆಚ್ಚು ನೆನಪಿನಲ್ಲಿವೆ. ಉಯ್ಯಾಲೆಯಲ್ಲಿ ಕುಳಿತು ಶಂಭಾಸುರನಲ್ಲಿ ಶೃಂಗಾರದ ಮಾತು ಗಳನ್ನಾಡುವ ದೇವಿಯ ನೆನಪಿನೊಂದಿಗೆ, ಮಹಿಷಾಸುರ ವೇಷವು ಸಭೆಯ ನಡುವಿನಿಂದಲೇ ಅಬ್ಬರಿಸಿಕೊಂಡು, ಬೆಂಕಿಯನ್ನು ಕೈಯಲ್ಲಿ ಹಿಡಿದು, ಗಾಳಿಯಲ್ಲಿ ಆಡಿಸುತ್ತಾ ದೀವಟಿಗೆಯೊಂದಿಗೆ ಬಂದರೆ ಚಿಕ್ಕಮಕ್ಕಳೆಲ್ಲರೂ ಅಳುತ್ತಾ ಅಮ್ಮಂದಿರ ಸೆರಗಿನೊಳಗೆ ಅಡಗಿಕೊಳ್ಳುತ್ತಿದ್ದವು. ಆಗಾಗ ಎದ್ದು ಹೋಗಿ ಹುರಿಗಡಲೆ, ನೆಲಕಡಲೆ ತಂದು ಕಣ್ಣು ಕೂರುತ್ತಾ ಆಟ ನೋಡುವ ಗಮ್ಮತ್ತು ನಾನು ಬೆಳೆದಂತೆ ಇಲ್ಲವಾದುದು ನನ್ನೊಬ್ಬಳ ಕಾರಣವೇ ಅಥವಾ ಸಾಮಾಜಿಕ ಬದಲಾವಣೆಯೇ? ಎನ್ನುವ ಪ್ರಶ್ನೆಯೊಂದಿಗೆ ಊರಿನ ಹತ್ತು ಸಮಸ್ತರು ಸೇರಿ ಆಡಿಸುತ್ತಿದ್ದ ಆಟ ಮುಂದೆ ಶ್ರೀಮಂತರು ಆಡಿಸುವ ಆಟವಾಗಿ ಮಾರ್ಪಾಡುವಾಗ, ಬಯಲಿನಲ್ಲಿ ಎಲ್ಲರಿಗೂ ಮುಕ್ತವಾಗಿದ್ದ ಆಟ ಆಲಯ ದೊಳಗೆ (ಹಾಲ್‍ನೊಳಗೆ) ಟಿಕೆಟುಗಳ ಮೂಲಕ ನೋಡಬೇಕಾದಾಗ ಕಲೆ ಎನ್ನುವುದು ವಾಣಿಜ್ಯೀಕರಣಗೊಂಡ ಸಂಕ್ರಮಣ ಸ್ಥಿತಿಯು ಗೋಚರವಾಗುತ್ತದೆ.
ಈ ಪಾೈಸರಗುಡ್ಡೆಯ ರಸ್ತೆಯಲ್ಲಿನ ಖಾಲಿ ಜಾಗಗಳು ಮಾರಾಟಗೊಂಡು ಅಲ್ಲಿ ನಿಧಾನವಾಗಿ ಒಂದು ಬಡಾವಣೆಯೇ ನಿರ್ಮಾಣವಾಯಿತು. ಹಂಪನಕಟ್ಟೆಯಲ್ಲಿ ವಾಹನ ಗಳಿಗೆ ಸಂಬಂಧಪಟ್ಟ ಕಾರ್ಯನಿರ್ವಹಿಸುತ್ತಿದ್ದ  ಹೊಳ್ಳ ಎಂಡ್ ಸನ್ಸ್‍ನ ಮಾಲಕರಾದ ಹೊಳ್ಳರು ಇಲ್ಲಿ ಜಾಗ ಖರೀದಿಸಿ ಮನೆ ಮಾಡಿಕೊಂಡರು. ಅವರ ಮಕ್ಕಳೂ ನಮ್ಮ ಶಾಲೆಯ ವಿದ್ಯಾರ್ಥಿಗಳಾದರು. ಎಸ್. ನಾರಾಯಣರ ಮನೆ ಹಿತ್ತಿಲಿನ ಎದುರುಬದಿಯಲ್ಲಿದ್ದ ಬಂಗಲೆಯಂತಹ ದೊಡ್ಡ ಮನೆ ಖರೀದಿಸಿದವರು ವಕೀಲರಾದ ಕೈಂತಜೆ ಗೋವಿಂದ ಭಟ್ಟರೆಂದು ನೆನಪು. ಅವರ ಮಕ್ಕಳೂ ನಮ್ಮ ಕಾಪಿಕಾಡು ಶಾಲೆಗೇ ಸೇರಿದರು. ಅವರ ಮನೆಯಲ್ಲಿಯೇ ಇದ್ದ `ಶಾಂತಾ' ಎನ್ನುವವರು ಕೂಡಾ ವಕೀಲೆಯಾಗಿದ್ದರು. ಅವರು ಕಾಲ್ನಡಿಗೆಯಲ್ಲೇ ಹೆಚ್ಚಾಗಿ ಓಡಾಡುತ್ತಿದ್ದುದರಿಂದ ಅವರೊಂದಿಗೆ ಜತೆಯಾಗಿ ಓಡಾಡಿದ ನೆನಪುಗಳೊಂದಿಗೆ ಹೆಣ್ಣು ಮಕ್ಕಳು ವಕೀಲೆಯರಾಗಬಹುದು ಎಂಬುದಕ್ಕೆ ಸ್ಫೂರ್ತಿ ಯಾಗಿದ್ದರು. ಈ ಪಾೈಸರಗುಡ್ಡದ ನಡುವಿನ ರಸ್ತೆ ಅಗಲವಾಗಿ ಸುಂದರವಾಗಿತ್ತು. ಆದ್ದರಿಂದಲೇ ಕಾರುಗಳ ಓಡಾಟ ಸಾಧ್ಯವಿದ್ದುದರಿಂದ ಇಲ್ಲಿ ಜಾಗ ಕೊಂಡವರಲ್ಲಿ ಕಾರುಗಳು ಸಾಮಾನ್ಯವಾಗಿತ್ತು. ನಿಧಾನಕ್ಕೆ ಖಾಲಿ ಇದ್ದಲ್ಲೆಲ್ಲಾ ಹೊಸ ಹೊಸ ಮನೆಗಳು ನಿರ್ಮಾಣಗೊಂಡು ಈ ಪರಿಸರ ವಿದ್ಯಾವಂತರ ಮತ್ತು ಶ್ರೀಮಂತರ ಬಡಾವಣೆ ಎಂದು ಗುರುತಿಸಲ್ಪಟ್ಟಿತು. ಈ ಓಣಿ ರಸ್ತೆಯಾದ ಹಾಗೆ ಕಾಪಿಕಾಡಿನ ಯಾವ ಓಣಿಯೂ ಆ ಕಾಲಕ್ಕೆ ರಸ್ತೆಯಾಗಲಿಲ್ಲ. ನಡೆದುಕೊಂಡು ಅಥವಾ ಸೈಕಲ್ ಮಾತ್ರ ಹೋಗುವ ಮತ್ತು ಮಳೆನೀರು ಹರಿಯುವ ಓಣಿಗಳಲ್ಲಿ ಇಂದು ಕೆಲವು ರಿಕ್ಷಾ, ಕಾರುಗಳು ಓಡುವಂತಾಗಿ, ನೀರು ಹರಿಯುವುದಕ್ಕೆ ಚರಂಡಿ ನಿರ್ಮಾಣಗೊಂಡು ಒಳ್ಳೆಯ ದಾರಿಗಳಾಗಿವೆ. ಇತ್ತೀಚೆಗೆ ಬಿಜೈಯ ಎರಡು ತುದಿಗಳನ್ನು ಸೇರಿಸುವ ಮುಖ್ಯ ರಸ್ತೆಯಾಗಿ ಹಾಗೆಯೇ ಇನ್ನೊಂದು ಪ್ರಮುಖ ಬಡಾವಣೆಯಂತಾಗಿರುವುದು ಆನೆಗುಂಡಿ ರಸ್ತೆ. ಇದರ ಇಕ್ಕೆಡೆಗಳಲ್ಲಿ ಮೊದಲಿದ್ದ ಹಳೆಯ ಮನೆಗಳೊಂದಿಗೆ ಆಧುನಿಕ ಶೈಲಿಯ ಹೊಸ ಮನೆಗಳು, ಬಹು ಮಹಡಿಯ ಕಟ್ಟಡಗಳು ನಿರ್ಮಾಣಗೊಂಡು ಬಿಜೈ ಊರಿಗೆ ಆಧುನಿಕತೆ ಬಂದಂತೆ ಜನಸಂಖ್ಯೆಯೂ ಹೆಚ್ಚಿದೆ. ಈಗ ಕಾಪಿಕಾಡು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಇದ್ದ ಜಾಗದಲ್ಲಿ ಅಂದು ಕಚ್ಚಾ ರಸ್ತೆ ಇದ್ದಾಗ ರಸ್ತೆಯ ಬದಿಯಲ್ಲಿ ದೊಡ್ಡದಾದ ಬಂಡೆಗಳು ಇದ್ದುವು. ಅವುಗಳನ್ನು ಡೈನಮೈಟ್ ಇಟ್ಟು ಒಡೆಯುತ್ತಿದ್ದರು. ಹಾಗೆ ಕೆಲಸ ನಡೆಯುತ್ತಿದ್ದರೆ ರಸ್ತೆಯ ಎರಡೂ ದಿಕ್ಕುಗಳಲ್ಲಿ ಕೆಂಪು ಬಾವುಟಗಳನ್ನು ಹಿಡಿದುಕೊಂಡು ಕಾರ್ಮಿಕರು ನಿಂತು ದಾರಿಯಲ್ಲಿ ಯಾರೂ ನಡೆದಾಡದಂತೆ ಜಾಗೃತೆ ವಹಿಸುತ್ತಿದ್ದರು. ಇಟ್ಟಿರುವ ನಾಲ್ಕೈದು ಡೈನಮೈಟ್‍ಗಳು ಒಡೆದು ಕಲ್ಲು ಪುಡಿಪುಡಿಯಾಗಿ ರಸ್ತೆಗಿದ್ದ ಅಡ್ಡಿಗಳು ದೂರವಾಗಿ ಇಂದಿನ ಸುಂದರ ರಸ್ತೆ ರೂಪುಗೊಳ್ಳುವುದಕ್ಕೆ ಸಾಧ್ಯ ವಾಯಿತು. ಅಂದು ಸಾಮಾಜಿಕ ಕೆಲಸ ಕಾರ್ಯಗಳು ನಿಗದಿತ ವೇಳೆಯಲ್ಲಿ ಮುಗಿಯುತ್ತಿದ್ದ ಜವಾಬ್ದಾರಿಗಳನ್ನು ನೆನಪಿಸಿಕೊಂಡರೆ ಇಂದು ಆ ವೇಗದಲ್ಲಿ ನಮ್ಮ ಪ್ರಗತಿ ಸಾಧ್ಯವಾಗುವುದಿಲ್ಲ ಅನ್ನಿಸುತ್ತಿದೆ. ಆಗ ದೇಶ ಕಟ್ಟಬೇಕೆಂದಿದ್ದ ಹುಮ್ಮಸ್ಸಿನ ಕಾಲ. ಈಗ ಸ್ವಾತಂತ್ರ್ಯೋತ್ತರದ ಮೋಜಿನ ಕಾಲವಲ್ಲವೇ?