ಅಖಂಡ ಕರ್ನಾಟಕ - ಒಂದು ಇಣುಕು ನೋಟ

ಅಖಂಡ ಕರ್ನಾಟಕ - ಒಂದು ಇಣುಕು ನೋಟ

ಬರಹ

ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು) ನಮ್ಮನ್ನು ಕಾಡುತ್ತಿದ್ದವು, ಇವೇನೂ ಹೊಸ ಸಮಸ್ಯೆಗಳಲ್ಲ ಎನ್ನುವ ಮಾತನ್ನು ನಿಮ್ಮ ಮುಂದಿಟ್ಟರೆ ನಂಬುತ್ತೀರಾ? ಪ್ರಾಯಶಃ ನಂಬಲಿಕ್ಕಿಲ್ಲ. ನೀವಷ್ಟೇ ಯಾಕೆ, ವಾರದ ಹಿಂದೆ ಯಾರಾದರೂ ಈ ರೀತಿ ನನಗೆ ಹೇಳಿದ್ದರೆ, ನಾನೂ ಸಹ ಅವರ ಮಾತನ್ನು ಸ್ವಲ್ಪ ಸಂದೇಹದಿಂದಲೇ ನೋಡುತ್ತಿದ್ದೆ. ಆದರೆ ಈಗ ನಂಬುತ್ತೀನಿ. ಕಾರಣ ಏನು ಅಂತ ಕುತೂಹಲವೇ? ಮುಂದೆ ಓದಿ.

ಮೊನ್ನೆ ಅಂತರ್ಜಾಲದಲ್ಲಿ, "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ"ದಲ್ಲಿ, ೧೯೪೨-೪೮ ರ ಅವಧಿಯಲ್ಲಿನ ಕನ್ನಡನಾಡಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪುಸ್ತಕವೊಂದರ ಕೆಲವು ಅಧ್ಯಾಯಗಳನ್ನು ಓದಿದೆ. ಓದಿ ಬಹಳ ಬೇಸರವಾಯಿತು. ಆ ಪುಸ್ತಕ ಪ್ರಕಟವಾಗಿದ್ದು ೧೯೪೬ ಅಲ್ಲಿ. ಅದರಲ್ಲಿ ಬರೆದಿರುವ ವಿಚಾರಗಳು ಅಂದಿನ ಕಾಲಕ್ಕೆ ಪ್ರಸ್ತುತವಾಗಿದ್ದವು. ಆದರೆ ಅದಾಗಿ ಅರವತ್ತು ವರ್ಷಗಳ ನಂತರ, "ಸುವರ್ಣ ಕರ್ನಾಟಕ" ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಾ, ಐವತ್ತರ ಹೊಸ್ತಿಲಿನಲ್ಲಿ ನಿಂತಿರುವ ಇಂದಿನ ದಿನದಲ್ಲಿ ಕೂಡಾ, ನಮ್ಮನ್ನು ಇನ್ನೂ ಅದೇ ರೀತಿಯ (ಆ ಪುಸ್ತಕದಲ್ಲಿ ಬರೆದಿರುವ) ಸಮಸ್ಯೆಗಳು ಕಾಡುತ್ತಿವೆಯಲ್ಲ ಎಂದು ವಿಷಾದವಾಗುತ್ತಿದೆ. ಅದೇ ಸ್ವಾಭಿಮಾನದ ಕೊರತೆ, "ನನ್ನ ತಾಯ್ನುಡಿ ಕನ್ನಡ, ನಾನೊಬ್ಬ ಕನ್ನಡಿಗ" ಎಂದು ಗುಂಪಿನಲ್ಲಿದ್ದಾಗ ತಲೆಯೆತ್ತಿ ಅಭಿಮಾನದಿಂದ ಹೇಳಿಕೊಳ್ಳಲಾಗದಂತಹ ಕೀಳರಿಮೆ, "ಕರ್ನಾಟಕ ಹೊತ್ತಿ ಉರಿದರೇನು, ಆ ಉರಿಯಲ್ಲೇ ನಮ್ಮ ಬೇಳೆ ಬೇಯಿಸಿಕೊಳ್ಳೋಣ" ಎನ್ನುವ ನಮ್ಮ ನೇತಾರರ ನಿರ್ಲಜ್ಜ ಮನೋಭಾವ, ಎಲ್ಲವೂ ಇಂದಿಗೂ ಹಾಗೇ ಇವೆ. ಇಂತಹ ಪುಸ್ತಕಗಳನ್ನು ಆಗಾಗ ಓದಿದರಾದರೂ, ನಮ್ಮನ್ನು ಯಾರೋ ಕೊಂಚ "ತಿವಿದಂತಾಗಿ", ಸ್ವಾಭಿಮಾನ, ಕೆಚ್ಚು ಮೂಡೀತೆಂದು ನನ್ನ ಅನಿಸಿಕೆ. ಹಾಗಾಗಿ ಆ ಪುಸ್ತಕದ ಕುರಿತು ಮತ್ತು ಅದನ್ನೋದಿ ನನ್ನಲ್ಲಿ ಮೂಡಿರುವ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಕಿರು ಪ್ರಯತ್ನ.

ಕನ್ನಡದ ಕಟ್ಟಾಳಾಗಿ, ಐದು ದಶಕಗಳ ಕಾಲ ಕನ್ನಡ ನಾಡು-ನುಡಿಗೆ ಅಪಾರ ಸೇವೆ ಸಲ್ಲಿಸಿದ ಅ.ನ.ಕೃ ಅವರ "ಅಖಂಡ ಕರ್ನಾಟಕ" ಎನ್ನುವ ಪುಸ್ತಕದ ಬಗ್ಗೆ ನಾನಿಲ್ಲಿ ಹೇಳಲು ಹೊರಟಿರುವುದು. ಸುಮಾರು ತೊಂಭತ್ತು ಪುಟಗಳ ಪುಟ್ಟ ಪುಸ್ತಿಕೆಯಿದು. ಅದರಲ್ಲಿನ "ಮುನ್ನುಡಿ" ಮತ್ತು ಮೊದಲ ನಾಲ್ಕು ಅಧ್ಯಾಯಗಳನ್ನಾದರೂ ("ಕನ್ನಡಿಗರ ಸ್ವಾಭಿಮಾನ", "ಕರ್ನಾಟಕಕ್ಕೆ ಬೇಕಾದುದೇನು?", "ಪ್ರಾಂತ್ಯ-ರಾಷ್ಟ್ರ" ಮತ್ತು "ಕಾಂಗ್ರೆಸ್ ಮತ್ತು ಕರ್ನಾಟಕ") ಬಿಡುವು ಮಾಡಿಕೊಂಡು, ಖಂಡಿತ ಒಮ್ಮೆ ಓದಿ. ಅ.ನ.ಕೃ ಅವರ ಬಿಡುಬೀಸಾದ ಶೈಲಿ ಥಟ್ಟನೆ ನಮ್ಮ ಮನಸ್ಸನ್ನು ಹಿಡಿದು ನಿಲ್ಲಿಸುತ್ತದೆ. ಯಾವುದೇ ಗಾಂಭೀರ್ಯ, ಪಾಂಡಿತ್ಯದ ಹಂಗಿಗೊಳಗಾಗದೆ, ಸರಳವಾಗಿ ಮನಮುಟ್ಟುವಂತೆ, ನಿರ್ಭಿಡೆಯಿಂದ ಬರೆದಿದ್ದಾರೆ. ಅದರಿಂದ ಆಯ್ದ ಕೆಲವು ಸಾಲುಗಳನ್ನು ಉದಾಹರಣೆಗಾಗಿ ಇಲ್ಲಿ ಬರೆಯುತ್ತಿದ್ದೀನಿ. ಒಂದು ಸೂಚನೆ. ಇಲ್ಲಿ ಬರುವ "ಕಾಂಗ್ರೆಸ್" ಎನ್ನುವುದನ್ನು ಈಗಿನ "ಕಾಂಗ್ರೆಸ್" ಪಕ್ಷಕ್ಕೆ ಅನ್ವಯಿಸಿ ಓದಿಕೊಳ್ಳಬೇಡಿ! ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಇದ್ದದ್ದು "ಕಾಂಗ್ರೆಸ್" ಎನ್ನುವ ಏಕಮಾತ್ರ ಪಕ್ಷ ಎನ್ನುವುದು ಮನಸ್ಸಿನಲ್ಲಿರಲಿ.

೧. ಮೈಸೂರಿನ ರಾಜಕಾರಣಪಟುಗಳಾದ ಕಾಂಗ್ರೆಸ್ಸಿನವರಿಗಾಗಲೀ, ಇತರ ಪಕ್ಷದ ನಾಯಕರಿಗಾಗಲೀ ಈ ಸಮಸ್ಯೆಗಳು ಬೇಕಿಲ್ಲ, ಅವರಿಗೆ ನಗರಸಭೆಯ ಹೊಲಸು ವ್ಯಾಪಾರವೇ ಸಾಕು. ಸ್ಥಾನಕ್ಕೆ ಬಡಿದಾಟ! ಸ್ವಪ್ರತಿಷ್ಠೆ ಬೆಳೆಸುವುದರ ಕಡೆ ಲಕ್ಷ್ಯ! ಸರ್ಕಾರದಲ್ಲಿ ಮದರಾಸಿನವರ ಕೈವಾಡ - ಕಾಂಗ್ರೆಸ್ಸಿನಲ್ಲಿ ಮದರಾಸು ವ್ಯಾಪಾರಿಗಳೊಬ್ಬರ ಮೇಲುಗೈ... (ಮುನ್ನುಡಿ)

೨. ಹೊರಗಿನವರು ಕನ್ನಡ ಸಾಹಿತಿ, ಕಲಾವಿದರನ್ನು ಮೆಚ್ಚುವವರೆಗೆ ಕನ್ನಡಿಗರೇ ಅವರ ಗುಣವನ್ನು ಕಂಡುಕೊಳ್ಳುವ ಹಾಗಿಲ್ಲ. ಫರ್ಗ್ಯೂಸನ್ ಸಾಹೇಬರು ಬೇಲೂರು, ಹಳೇಬೀಡುಗಳನ್ನು ಹೊಗಳಿದರೆ, ಆಗ ನಾವು ಹಾಸನ ಜಿಲ್ಲೆಯ ವಿವರವನ್ನು ಹುಡುಕುತ್ತೇವೆ... (ಕನ್ನಡಿಗರ ಸ್ವಾಭಿಮಾನ)

೩. ಕನ್ನಡ ನಾಡು ಬೆಳೆದರೆ, ಬಾಳಿದರೆ, ಬದುಕಿದರೆ, ಪುಷ್ಟವಾದರೆ ಭಾರತವೂ ಬದುಕುತ್ತದೆ. ಭಾರತ, ಕನ್ನಡ ನಾಡು ತಾಯಿಮಕ್ಕಳು ಇದ್ದಂತೆ. ಮಗಳು ಮುಂದೆಬಂದು ಕೀರ್ತಿಗೊಂಡರೆ ತವರುಮನೆ ಕೊರಗುತ್ತದೆಯೇ? ಕನ್ನಡ ದೇಶವನ್ನು ಬಿಟ್ಟು ಭಾರತದ ಸೇವೆಯನ್ನೇ ಮಾಡುತ್ತೇವೆಂದು ಹೊರಡುವವರು ಪುನರಾಲೋಚನೆ ಮಾಡಬೇಕಾಗಿ ಪ್ರಾರ್ಥಿಸುತ್ತೇನೆ... (ಕನ್ನಡಿಗರ ಸ್ವಾಭಿಮಾನ)

೪. ಬ್ರಾಹ್ಮಣ, ಲಿಂಗಾಯಿತ, ಕಮ್ಯೂನಿಸ್ಟ್, ಕಾಂಗ್ರೆಸ್ಸಿಗ ಮೊದಲಾದ ಎಲ್ಲ ಭೇದ ಭಾವಗಳನ್ನೂ ಬದಿಗೊತ್ತಿ ಒಮ್ಮನದಿಂದ ದುಡಿಯಬೇಕಾದ ಕಾಲ ಬಂದಿದೆ... (ಕರ್ನಾಟಕಕ್ಕೆ ಬೇಕಾದುದೇನು?)

೫. ಬಲಿಷ್ಠ ಆಂಧ್ರಕ್ಕೆ ಅನ್ವಯಿಸುವ ನೀತಿ ಸಹಾಯಶೂನ್ಯವಾದ ನಮ್ಮ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ - ನಮ್ಮ ದೌರ್ಭಾಗ್ಯ!... (ಪ್ರಾಂತ್ಯ-ರಾಷ್ಟ್ರ)

೬. ಕರ್ನಾಟಕದ ಹಿತವನ್ನು ವಿರ್‍ಓಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರಭಕ್ತನಾದರೂ ಅವನನ್ನು ಕನ್ನಡಿಗರು ನಿರಾಕರಿಸಬೇಕು. ಕರ್ನಾಟಕವನ್ನು ಕಾಪಾಡಿಕೊಳ್ಳಲಾಗದ ರಣಹೇಡಿ ಕನ್ನಡಿಗರು ಹಿಂದೂಸ್ಥಾನದ ಉದ್ಧಾರಕ್ಕೆ ಯಾವ ರೀತಿಯಲ್ಲಿಯೂ ನೆರವಾಗಲಾರರೆಂಬುದನ್ನು ಇಡೀ ಭಾರತವೇ ನೆನಪಿನಲ್ಲಿಡಬೇಕು... (ಕಾಂಗ್ರೆಸ್ ಮತ್ತು ಕರ್ನಾಟಕ)

೭. ಮಹಾರಾಷ್ಟ್ರದಿಂದ ಜನ ಬಂದು ಹೊಟ್ಟೆಪಾಡಿಗಾಗಿ ಕರ್ನಾಟಕವನ್ನು ಸೇರಿಕೊಂಡರು. ಹಾಗೇ ಆಂಧ್ರ, ಕೇರಳ, ತಮಿಳುನಾಡುಗಳಿಂದ ಬಂದರು. ಕರ್ನಾಟಕದಲ್ಲಿ ನೌಕರಿ ಮಾಡಿದರು, ವ್ಯಾಪಾರ ಮಾಡಿದರು. ಹೊಟ್ಟೆ ತುಂಬಿಕೊಂಡರು. ನಾವು ಇದಕ್ಕಾಗಿ ವಿಷಾದಿಸುವುದಿಲ್ಲ. ಕನ್ನಡತಾಯಿ ಈ ಜನಕ್ಕೆ ಅನ್ನವಿಟ್ಟಿದ್ದಾಳೆ. ಆದರೆ ಈ ಜನ ಕನ್ನಡತಾಯಿಗೆ ದ್ರೋಹವನ್ನೆಸಗಬಾರದು. ಕನ್ನಡಕ್ಕೆ ವಿರೋಧವಾದ ಯಾವ ಚಳವಳಿಯನ್ನೂ ಹೂಡಬಾರದು. ತಾವೂ ಕನ್ನಡಿಗರೆಂದು ಭಾವಿಸಿಕೊಂಡು ಕರ್ನಾಟಕದ ಉತ್ಕರ್ಷಕ್ಕೆ ದುಡಿಯಬೇಕು... (ಕಾಂಗ್ರೆಸ್ ಮತ್ತು ಕರ್ನಾಟಕ)

೮. ನನ್ನ ಈ ಮಾತುಗಳು ಹಲವರ ಮನಸ್ಸು ನೋಯಿಸುತ್ತದೆಂಬುದನ್ನು ಬಲ್ಲೆ. ಮಾನವರ ಮನಸ್ಸು ನೊಂದರೇನು - ಸತ್ಯಕ್ಕೆ ಪರಾಭವವಾಗದಿದ್ದರೆ ಸಾಕು... (ಮುನ್ನುಡಿ)

ಪೂರ್ಣ ಪುಸ್ತಕವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಓದಿ ಮುಗಿಸಿದ ನಂತರ ನನಗನ್ನಿಸಿದ್ದು: ನಾವು ಇಂತಹ ಸ್ಥಿತಿಯಲ್ಲಿರಲು ನಮ್ಮ ಅತಿಯಾದ ವಿನಯ, ಸಹನಶೀಲತೆ, ಸೌಜನ್ಯಗಳೇ ಕಾರಣವೇ? ಏನೇ ಆದರೂ, ಕನ್ನಡಿಗರು ಬೀದಿಗಿಳಿದು, ಹಠಕ್ಕೆ ಬಿದ್ದು, ಜಿದ್ದಾಜಿದ್ದಿ ಹೋರಾಟವನ್ನೇನೂ ನಡೆಸುವುದಿಲ್ಲ ಎನ್ನುವುದು ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ತಿಳಿದಿದೆಯೇ? ನೀವೇ ಯೋಚಿಸಿ. "ಎಸ್.ಎಫ್.ಎಂ"ನಂತಹ ರೇಡಿಯೋ ವಾಹಿನಿ ಏಕಾಏಕಿ ತನ್ನ ನಿಲುವನ್ನು ಬದಲಾಯಿಸಿಕೊಂಡರೂ ಕರ್ನಾಟಕದಲ್ಲೇ ತನ್ನ ಬಿಸಿನೆಸ್ಸನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗುತ್ತದೆ. ಅಷ್ಟೇ ಅಲ್ಲ, ಲಾಭವನ್ನೂ ಗಳಿಸುತ್ತದೆ. "ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೇ ಆದ್ಯತೆ ನೀಡಿ" ಎಂಬ ಕೂಗಿಗೆ ಮೊದಲು ಅಡ್ಡಗಾಲು ಹಾಕುವುದು ಕನ್ನಡೇತರ ಉದ್ಯಮಿಗಳಲ್ಲ; ಬದಲಾಗಿ ಅಪ್ಪಟ ಹದಿನಾರಾಣೆ ಕನ್ನಡಿಗರು! ತಮ್ಮ ಸ್ವಹಿತಕ್ಕಾಗಿ, ಬರಿದೇ ಲಾಭದ ದೃಷ್ಟಿಯಿಂದ, "ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ" ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಡುವ ಕನ್ನಡಿಗ ಉದ್ಯಮಿಗಳು. ಕನ್ನಡ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದಾಗಲೂ ಇಂಗ್ಲೀಷಿನಲ್ಲೇ ಮಾತನಾಡಿ ತಮ್ಮ "ಕನ್ನಡಾಭಿಮಾನ" ಮೆರೆಯುವ ನಮ್ಮ ಸಿನೆಮಾ ನಟ-ನಟಿಯರು, ಚಿಂತಕರು, ಸಾಹಿತಿಗಳು, ರಾಜಕೀಯ ನೇತಾರರು...ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಯಾಕೆ ಹೀಗೆ? ಎಲ್ಲಿ ಎಡವಿದ್ದೇವೆ? ಇಂಥವರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಖಂಡಿಸಲು ಸಾವಿರ-ಲಕ್ಷಗಟ್ಟಳೆ ಸಂಖ್ಯೆಯಲ್ಲಿ ನಾವೇಕೆ ಮುಂದಾಗುತ್ತಿಲ್ಲ? ಅನಕ್ಷರಸ್ಥರನ್ನು ಬದಿಗಿಡಿ, ಸಾಕ್ಷರರಾದ ನಾವಾದರೂ ಈ ಬಗ್ಗೆ ಏಕೆ ಹೆಚ್ಚು ಹೆಚ್ಚು ಆಲೋಚಿಸಬಾರದು? ಆಲೋಚನೆಗಳನ್ನು ಕೃತಿರೂಪಕ್ಕೇಕೆ ತರಬಾರದು?