ಅಯ್ಯನ ಕೆರೆಯ ನೀರಿನ ಪಾಠ

ಅಯ್ಯನ ಕೆರೆಯ ನೀರಿನ ಪಾಠ

"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ ರೂಪಾಯಿ ೨೧೧ ಕೋಟಿ ಬಿಡುಗಡೆ ಮಾಡಿದೆ" - ಇದು ೨೭ ಮಾರ್ಚ್ ೨೦೦೯ರಂದು ಕರ್ನಾಟಕದ ಹಲವು ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿ.

ಹತ್ತು ವರುಷಗಳ ನಂತರ, ೨೦೧೯ರ ಬೇಸಗೆಯಲ್ಲಿ ಪರಿಸ್ಥಿತಿ ಸುಧಾರಿಸಿದೆಯೇ? ಇಲ್ಲ. ಈಗಲೂ ಆ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಇನ್ನಷ್ಟು ಜಿಲ್ಲೆಗಳಲ್ಲಿ ನೀರಿಗೆ ತತ್ವಾರ. ಕುಡಿಯುವ ನೀರಿಗೆ ಹಾಹಾಕಾರ.

ಆ ದಿನ "ರಾಜ್ಯದ ೪೫ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ" ಎಂಬ ಸುದ್ದಿ ಓದುತ್ತಿದ್ದಂತೆ ೫ ವರುಷಗಳ ಮುಂಚಿನ ಒಂದಿನ ನೆನಪಾಯಿತು. ಅಂದು ೨೭ ಫೆಬ್ರವರಿ ೨೦೦೪. ಬಿಸಿಲು ಚುರುಕಾಗಿತ್ತು. ಬೆಳಗ್ಗೆ ೯ರ ಹೊತ್ತಿಗೆ ಕಡೂರು ಹತ್ತಿರದ ಬಿಳೇಕಲ್ಲು ಹಳ್ಳಿಗೆ ಹೋಗಿದ್ದಾಗ, ಹಳ್ಳಿಯ ಕೆಲವರು ಎತ್ತಿನ ಗಾಡಿಗಳಲ್ಲಿ ಬಟ್ಟೆ ಹೇರಿಕೊಂಡು ಹೊರಟಿದ್ದರು, "ಇದೇನು ಗುಳೇ ಹೊರಟಿದ್ದಾರಾ?" ಎಂದು ಕೇಳಿದೆ, ಶಾಲಾ ಮಾಸ್ಟರ್ ಪಾಂಡುರಂಗಪ್ಪನವರನ್ನು. "ಇಲ್ಲ ಸಾರ್, ಬಟ್ಟೆ ಒಗೀಲಿಕ್ಕೆ ಅಯ್ಯನ ಕೆರೆಗೆ ಹೊರಟಿದ್ದಾರೆ" ಎಂದರು.

"ಅಲ್ಲಿಂದ ಕಾಲುವೇಲಿ ನಿಮ್ ಹಳ್ಳಿಗೆ ನೀರು ಬರಾಕಿಲ್ವಾ?" ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ, "ಅಯ್ಯೋ, ಆ ಕಾಲ ಹೋಯ್ತು. ಕಾಲುವೇಲಿ ನೀರ್ ಬಿಡೋದು ಬಂದ್ ಮಾಡ್ಯಾರೆ. ಈಗ ಅಯ್ಯನ ಕೆರೆ ನೀರು ಏನಿದ್ರೂ ಜನರಿಗೆ ಬಟ್ಟೆ ಒಗೀಲಿಕ್ಕೆ ಮತ್ತು ಜಾನುವಾರುಗಳಿಗೆ ಕುಡೀಲಿಕ್ಕೆ ಮಾತ್ರ. ನಾನು ಹುಟ್ಟಿದ್ಮೇಲೆ ಹಿಂಗಾಗಿದ್ದು ಇದೇ ಮೊದಲು".

ಚಿಕ್ಕಮಗಳೂರಿನಿಂದ (ಕಡೂರಿನ ದಿಕ್ಕಿನಲ್ಲಿ) ೨೩ ಕಿಮೀ ದೂರದಲ್ಲಿದೆ ಬಿಳೇಕಲ್ಲು ಹಳ್ಳಿ. ಅಲ್ಲಿ ೪೫೦ ಮನೆಗಳು. ಹಳ್ಳಿಯ ಹಿರಿಯ ತಿಮ್ಮೇ ಗೌಡರಿಗೆ ಅಯ್ಯನಕೆರೆ ಹತ್ತಿರದಲ್ಲಿ ೬ ಎಕರೆ ಅಡಿಕೆ ತೋಟ. ತುಸು ದೂರದಲ್ಲಿ ಬೇರೆ ೧೬ ಎಕರೆ ಅಡಿಕೆ ತೋಟ. ಅವರ ಮಗ ಹೊನ್ನೇಗೌಡರಿಗೆ ತೋಟದ ಸ್ಠಿತಿ ಹೇಳ್ತಾ ಹೇಳ್ತಾ ಗಂಟಲು ಕಟ್ಟಿ ಬಂತು. "ಅಯ್ಯನ ಕೆರೆಯಿಂದ ಕಾಲುವೇಲಿ ನೀರು ಬರ್ತಿತ್ತು. ಹಿಂಗಾಗ್ತದೆ ಅಂತ ಯಾರಿಗೆ ಗೊತ್ತಿತ್ತು? ಒಂದೋ ತೋಟ ಉಳೀಬೇಕು, ಇಲ್ದಿದ್ರೆ ನಾವು ಹೋಗ್ಬೇಕು ಅಂತ ಹನ್ನೆರಡು ಬೋರ್ವೆಲ್ ಹೊಡೆಸಿದ್ವಿ. ಏಳು ಬೋರ್ವೆಲ್ನಾಗೆ ನೀರು ಸಿಕ್ತು. ಆದ್ರೆ ಕರೆಂಟೇ ಇರೋದಿಲ್ಲ. ನಾಲ್ಕು ಜನರೇಟರ್ ಇಟ್ಕೊಂಡು ಪಂಪ್ ನಡೆಸಿ ನೀರು ಹೊಡೀತಾ ಇದೀವಿ. ದಿನಕ್ಕೆ ೪೦೦೦ ರೂಪಾಯಿ ಡೀಸಿಲ್ಗೇ ಬೇಕು. ನಮ್ ಪರಿಸ್ಥಿತಿ ಕೇಳಬ್ಯಾಡ್ರಿ." ಬಿಳೇಕಲ್ಲು ಹಳ್ಳಿಯಲ್ಲಿ ಯಾರನ್ನು ಕೇಳಿದರೂ ಇಂತಹದೇ ಗೋಳಿನ ಕತೆಗಳು.

ಅಲ್ಲಿಂದ ನೇರವಾಗಿ ಅಯ್ಯನ ಕೆರೆಗೆ ಹೋದೆವು. ಅಲ್ಲಿ ಕಂಡದ್ದೇನು? ದಕ್ಷಿಣ ಭಾರತದ ಬೃಹತ್ ಕೆರೆಗಳಲ್ಲಿ ಒಂದಾದ ಅಯ್ಯನ ಕೆರೆ ಅಂದು ಪುಟ್ಟ ಈಜುಕೊಳದಂತಿತ್ತು. ಕಳೆದ ನೂರು ವರುಷಗಳಲ್ಲಿ ಭೀಕರ ಬರಗಾಲಗಳು ಬಂದಿದ್ದಾಗಲೂ ಈ ಕೆರೆಯಲ್ಲಿ ನೀರಾವರಿಗೂ ನೀರಿತ್ತು. ೩,೯೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ೪ ಕಾಲುವೆಗಳಿಂದ ನೀರುಣಿಸಲು ತೊಂದರೆ ಆದದ್ದು ಅಪರೂಪ. ಅಂತಹ ಅಯ್ಯನ ಕೆರೆಯಲ್ಲಿ ಅಂದು ಒಂದಾಳೆತ್ತರದ ನೀರು!

ಅಯ್ಯನ ಕೆರೆಯ ಏರಿ ಇಳಿದು ವಾಹನದಲ್ಲಿ ಸಖರಾಯಪಟ್ಟಣ ತಲಪಿದಾಗ ನಡು ಮಧ್ಯಾಹ್ನ ೧೨ ಗಂಟೆ. ವಾಹನದಲ್ಲಿದ್ದ ನಾವು ಯಾರೂ ಹಾದಿಯುದ್ದಕ್ಕೂ ಮಾತಾಡಲಿಲ್ಲ. ಹಾದಿಯ ಅಕ್ಕಪಕ್ಕದಲ್ಲಿ ನೀರಿನ ಪಸೆಯಿಲ್ಲದೆ ಬಣಗುಟ್ಟುವ ಅಡಿಕೆ ತೋಟಗಳನ್ನು ಕಂಡು ನಮ್ಮ ಬಾಯಿಯ ಪಸೆ ಒಣಗಿತ್ತು. ಸಖರಾಯಪಟ್ಟಣದಲ್ಲಿ ಹಲವು ಮನೆಗಳೆದುರು ನೀರು ಸಂಗ್ರಹಿಸಿಟ್ಟ ಪ್ಲಾಸ್ಟಿಕ್ ಟ್ಯಾಂಕ್ ಗಳು. ಅವುಗಳ ಮುಚ್ಚಳಕ್ಕೆ ಬೀಗ ಹಾಕಲಾಗಿತ್ತು. ಯಾಕೆಂದರೆ ಒಂದು ಕಾಲದಲ್ಲಿ ಭಾರೀ ನೀರಿದ್ದ ಆ ಊರಿನಲ್ಲಿ ಇಂದು ನೀರಿಟ್ಟುಕೊಂಡರೆ ಕಳ್ಳಕಾಕರ ಭಯ. "ಒಂದು ಟ್ಯಾಂಕರಿಗೆ ೧೭೫ ರೂಪಾಯಿ ಕೊಟ್ಟು ನೀರು ತರಿಸ್ತಿದ್ದಾರೆ" ಎಂದರು ಮುರಳಿ.

ಅಲ್ಲಿಂದ ನಾವು ಹೊರಟಾಗ, ವಕೀಲ ಎಸ್.ಎಲ್. ಬೋಜೇಗೌಡರೊಂದು ಮಾತು ಹೇಳಿದರು, "ಏನೇ ಹೇಳಿ. ನಮಗೆಲ್ಲ ನೀರಿಲ್ಲದೆ ಸಂಕಟವಾಗಿದೆ, ನಿಜ. ಆದರೆ ಈಗ ನಮಗೆ ನೀರಿನ ಬೆಲೆ ಗೊತ್ತಾಗಿದೆ. ಅಯ್ಯನ ಕೆರೆಯಿಂದ ಕಾಲುವೇಲಿ ತೋಟಗಳಿಗೆ ನೀರು ಬಿಡ್ತಿದ್ರು. ಅವರವರ ತೋಟಕ್ಕೆ ನೀರು ಕಟ್ಟಿಕೊಂಡ ಮೇಲೆ ಪಕ್ಕದವರಿಗೆ ಹೇಳಬೇಕಿತ್ತು,"ನಂದಾಯ್ತು, ಇನ್ನು ನೀನು ನೀರು ಕಟ್ಟಿಕೋ" ಅಂತ. ಆದ್ರೆ ಜನ ತಮ್ಮ ಪಾಡಿಗೆ ತಾವು ಹೊರಟು ಹೋಗ್ತಿದ್ರು. ಕಾಲುವೆ ನೀರು ರಾತ್ರಿಯಿಡೀ ಹಾಳಾಗಿ ಹೋಗ್ತಿತ್ತು. ಆಗ ಪೋಲು ಮಾಡಿದ ನೀರು ಈಗ ಬೇಕು ಅಂದ್ರೆ ಸಿಕ್ತದಾ?"

ಅಯ್ಯನ ಕೆರೆಯಂತಹ ಸಾವಿರಾರು ಕೆರೆಗಳು ನಮಗೆ ನೀರಿನ ಪಾಠ ಹೇಳುತ್ತಿವೆ. ಆದರೆ ನಾವು ಪಾಠ ಕಲಿಯುವುದು ಯಾವಾಗ?