ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ

ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ

ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ   

ಕತೆ : ಅಲೋಕ

“ಬೇಡಿ ಏಳಬೇಡಿ. ನಿಮಗೆ ಅಭ್ಯಂತರವಿಲ್ಲ ಅನ್ನುವ ಹಾಗಿದ್ದಲ್ಲಿ ಇಲ್ಲಿ ನಿಮ್ಮ ಜೊತೆ ಕುಳಿತು ಒಂದೆರಡು ಮಾತನಾಡಬಹುದೆ?“ ಆತ ನಗುತ್ತಿದ್ದ.

ನಾನು ಆಗಲಿ ಎನ್ನುವಂತೆ ತಲೆಹಾಕಿದೆ.

‘ಮತ್ತೆ ಹೇಗೆ ಸಾಗಿದೆ ಈ ಲೋಕದ ಜೀವನ . ಎಲ್ಲವೂ ಅನುಕೂಲಕರವಾಗಿದೆಯೆ ?”

ನಾನು ಏನೆಂದು ಹೇಳಲಿ ? .

“ಸರಿ ಇರದೇ ಏನು ಎಲ್ಲವೂ ಅನುಕೂಲಕರವಾಗಿದೆ “
ನಾನು ಕೃತಕನಗು ನಗುತ್ತ ಹೇಳಿದೆ

‘ನನಗೆ ಹಾಗೆನಿಸುತ್ತಿಲ್ಲ ನಿಮ್ಮಲ್ಲಿ ಆ ರೀತಿಯ ಯಾವುದೇ ಸಂತಸದ ಭಾವವಾಗಲಿ, ಲವಲವಿಕೆ ಆಗಲಿ ಕಾಣುತ್ತಿಲ್ಲ’

ಆತ ನುಡಿದ.

ನನಗೆ ಏನು ಉತ್ತರಿಸುವದೆಂದು ತಿಳಿಯದೆ ಮೌನವಹಿಸಿದೆ .

 

‘ಇಲ್ಲಿ ಯಾರಿಗೂ ಯಾವ ನಿರ್ಭಂದಗಳು ಇಲ್ಲ. ನೀವು ಬಯಸಬಹುದಾದ ಯಾವುದೇ ಆಹ್ಲಾದ,ಆಮೋಧ ಪ್ರಮೋದಗಳೆಲ್ಲ ಇಲ್ಲಿವೆ . ಹಾಗಿದ್ದರು ನಿಮ್ಮ ಈ ನಿರುತ್ಸಾಹಕ್ಕೆ ಕಾರಣವೇನು, ಯೋಚಿಸಿದ್ದೀರಾ ?” ಅವನು ಕೇಳಿದ

‘ಹೌದು ಇಲ್ಲಿ ಎಲ್ಲರೂ ಬಯಸುವ ಎಲ್ಲ ಸಂತಸಗಳು ಇವೆ. ಯಾವ ಕೊರತೆಯು ಇಲ್ಲ ಒಪ್ಪುತ್ತೇನೆ. ಆದರೂ… ಆದರೂ ಅದೇಕೊ ನನ್ನಲ್ಲಿ ಉತ್ಸಾಹ ಅರಳುತ್ತಿಲ್ಲ. ಇಲ್ಲಿರಬಹುದಾದ  ಯಾವುದೇ ಸುಖದಲ್ಲಿ ನನ್ನ ಮನ ಮಗ್ನವಾಗುತ್ತಿಲ್ಲ” ನಾನು ನಿಜ ನುಡಿದೆ.

‘ನೀವು ಯಾರದಾದರು ಜೊತೆ ಬೆರೆಯಬಹುದಿತ್ತು ಮಾತನಾಡಿಕೊಂಡು ಇರಬಹುದಿತ್ತು ” ಅವನು ಸೂಚಿಸಿದ.

‘ಅದೇಕೋ ಅದಕ್ಕೂ ಉತ್ಸಾಹ ಮೂಡಲಿಲ್ಲ. ಯಾರ ಜೊತೆ ಬೆರೆಯುವುದು, ಯಾರನ್ನು ಮಾತನಾಡಿಸುವುದು ಬೇಡವೆಂದು ಅನ್ನಿಸಿತು’ ನಾನು ಹೇಳಿದೆ ನನ್ನಲ್ಲಿ ಯಾವುದೇ ಉತ್ಸಾಹವಿರಲಿಲ್ಲ.

ಅದಕ್ಕವನು ನಗುತ್ತಲೆ ನುಡಿದ

‘ನೀವು ಇಲ್ಲಿ ಪ್ರವೇಶಿಸುವಾಗಲೆ ತಿಳಿಸಲಾಗಿತ್ತು. ನೀವು ಹೇಗೆ ಬೇಕಾದರು ಇರಬಹುದು ಆದರೆ ನಿಮ್ಮಿಂದ ಯಾರಿಗೇ ಆಗಲಿ ತೊಂದರೆ ಆಗಬಾರದು ಎಂದು. ನಿಮ್ಮಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಲ್ಲವೇ “  

ಆತ ಪ್ರಶ್ನಿಸಿದ

ನನಗೆ ಆಶ್ಚರ್ಯ ಮತ್ತು ಸ್ವಲ್ಪ ಇರುಸುಮುರುಸಾಯಿತು.

‘ಏನು ಬೇರೆಯವರಿಗೆ ತೊಂದರೆಯೆ ? ನಾನೇನು ಮಾಡಿದೆ . ಅಂತಹುದು ನಾನೇನು ಮಾಡಿದ ನೆನಪಿಲ್ಲ. ನನ್ನ ಪಾಡಿಗೆ ನಾನಿರುವೆ ,ಯಾರಿಗೂ ತ್ರಾಸಕೊಟ್ಟಿಲ್ಲವಲ್ಲ”

‘ಇಲ್ಲ ನೀವು ಸರಿಯಾಗಿ ಯೋಚಿಸುತ್ತಿಲ್ಲ. ನಾವು ಮೊದಲೆ ತಿಳಿಸಿದ್ದೆವು. ಸಂತಸ ಹಾಗು ಆನಂದವೆ ಈ ಲೋಕದ ಮುಖ್ಯವಾದ ಭಾವವೆಂದು. ನಿಮಗೆ ಗೊತ್ತೆ ಈ ಬೇಸರ ದುಃಖ ಅಥವ ನಿರುತ್ಸಾಹ ಎನ್ನುವ ಭಾವ ಇದೆಯಲ್ಲ ಅದೊಂದು ರೀತಿ ಖಾಯಿಲೆ ಇದ್ದಹಾಗೆ “

ನನಗೆ ಅರ್ಥವಾಗದೆ ನೋಡುತ್ತಿದ್ದೆ. ಆತ ಮತ್ತೆ ವಿವರಿಸಿದ

‘ನಿಮಗೆ ತಿಳಿಯದಿರುವುದೇನಿದೆ ,  ಭೂಮಿಯಲ್ಲಿ ಕೆಲವು ಸೋಂಕು ಖಾಯಿಲೆಗಳಿರುತ್ತವೆ ಅಲ್ಲವೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಹುದು. ಅದಕ್ಕೆ ಕಾರಣವಾಗಿ ಕೆಲವು ಸೂಕ್ಷ್ಮಜೀವಿಗಳಿರುತ್ತವೆ”

‘ವೈರಸ್ ..’ ನನಗೆ ನಾನೆ ಹೇಳಿಕೊಂಡೆ

‘ಹೌದು ಅದೇ ,  ಆ ಕಾರಣದಿಂದ ಖಾಯಿಲೆ  ಬಹಳ ಬೇಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತ ಹೋಗುತ್ತವೆ . ಆಗ ನಾವು ಎಚ್ಚರವಹಿಸಲೇ ಬೇಕಾಗುತ್ತದೆ ಅಲ್ಲವೆ ಅಂತಹ ಖಾಯಿಲೆ ಹರಡದಂತೆ “ ಅವನು ಹೇಳಿದ.

ನನಗೆ ಅರ್ಥವಾಗದಂತೆ ಅವನನ್ನು ನೋಡುತ್ತಿರುವಾಗ ಮತ್ತೆ ಹೇಳಿದ

‘ಈ ಬೇಸರ ದುಃಖ ನಿರುತ್ಸಾಹ ಇಂತಹ ಭಾವಗಳೆಲ್ಲ ಸೋಂಕು ಖಾಯಿಲೆಗಳ ರೀತಿ ಈ ಲೋಕದಲ್ಲಿ ಬಹಳ ಬೇಗ ಹರಡುವ  ಸಾಧ್ಯತೆಗಳಿವೆ. ಅಂತಹ ಭಾವ ಇಲ್ಲಿ ಬೇರೆಯವರಲ್ಲಿ ಭಯ ಸಹ ಹುಟ್ಟಿಸುತ್ತವೆ. ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಬೇರೆಯವರು ನಿಮ್ಮಿಂದ ದೂರ ಸರಿಯಲು ಯತ್ನಿಸುತ್ತಿದ್ದಾರೆ . ನೀವು ಅವರಿಂದ ಹೇಗೆ ವಿಮುಖರಾಗಿರಲು ಪ್ರಯತ್ನಿಸುವಿರೋ ಹಾಗೆ ಅವರು ಸಹ ನಿಮ್ಮಿಂದ ದೂರ ನಿಲ್ಲಲು ಪ್ರಯತ್ನಪಡುತ್ತ ಇದ್ದಾರೆ.  ನೀವು ನಂಬುವಿರೋ ಇಲ್ಲವೋ ತಿಳಿಯದು , ನನಗೂ ಸಹ ಈಗ ನಿಮ್ಮ ಜೊತೆ ಕುಳಿತು ಮಾತನಾಡುವುದು ಕಷ್ಟ ಅನ್ನಿಸುತ್ತಿದೆ “

ನಾನೀಗ ಬೆಚ್ಚಿಬಿದ್ದೆ . ಅಂದರೆ ನನ್ನ ದುಃಖ ಇಲ್ಲಿ ನನ್ನ ನನ್ನ ದುಃಖ ಮಾತ್ರ ಅಲ್ಲ.  ನನ್ನ ಬೇಸರ ಇಲ್ಲಿ ನನ್ನ ಬೇಸರ ಅಲ್ಲ . ಹಾಗೆ ಭಾವಿಸಿ ಸುಮ್ಮನಿರುವಂತಿಲ್ಲ ಅದು ಬೇರೆಯವರಿಗೂ ತೊಂದರೆ ಕೊಡುತ್ತಿದೆ .

ಅವನು ನಿಧಾನವಾಗಿ ಮಾತನಾಡುತ್ತ ಇದ್ದ. ನನಗೆ ಅರ್ಥವಾಗುವಂತೆ

‘ಈ ಭಾವವನ್ನು ಇಲ್ಲಿ ಹೀಗೆಯೆ ಬಹಳ ಕಾಲ ಬೆಳೆಯಗೊಡಲಾಗದು. ಅದು ಈ ಲೋಕದ ಅಸ್ತಿತ್ವವನ್ನೆ ಇಲ್ಲವಾಗಿಸಿ ಬಿಡಬಲ್ಲದು. ತೀರ ಹಾಗಾಗುವಾಗ ಅದಕ್ಕೆ ಕಾರಣವನ್ನು ಇಲ್ಲಿಂದ ದೂರ ಮಾಡಲೇ ಬೇಕಾಗುತ್ತೆ”

 

ನನಗೀಗ ಸ್ವಲ್ಪ ಭಯ ಅನ್ನಿಸಿತು

‘ಅಂದರೆ ಏನು ಮಾಡುವಿರಿ ? ಅಂತಹ ಅನಾಹುತಕ್ಕೆ ನಾನು ಕಾರಣ ಆಗುವೆನು ಎಂದೆ ?”

“ಹೌದು ತೀರ ಹಾಗಾದಾಗ ನಿಮ್ಮನ್ನು ಪುನಃ ಹಿಂದಿನ ಲೋಕಕ್ಕೆ ಕಳಿಸಬೇಕಾಗಬಹುದು”

 

ಹಿಂದಿನ ಲೋಕ ಎಂದರೆ ನಾನು ನರಕ ಎಂದು ಕರೆದ ಲೋಕ! .

‘ಅಂದರೆ ಈಗ ನನ್ನನ್ನು ಹಿಂದೆ ಕಳುಹಿಸಿಬಿಡುವಿರಾ ? “ ನಾನು ಕೊಂಚ ಆತಂಕದಲ್ಲಿದ್ದೆ

ಅವನು ಸಮಾದಾನವಾಗಿಯೆ ಉತ್ತರಿಸಿದ

‘ಇಲ್ಲ ಈಗ ಇನ್ನು ಅಂತಹ ಪರಿಸ್ಥಿತಿ ಬಂದಿಲ್ಲ. ಆದರೆ ಅದು ಹೀಗೆಯೆ ಮುಂದುವರೆದಲ್ಲಿ ಅಂತಹ ನಿರ್ಧಾರ ಅನಿವಾರ್ಯವಾಗಬಹುದು”

ನಾನು ಮೌನವಾಗಿ ಕುಳಿತೆ .

ಮುಂದುವರೆಯುವುದು........