ಅಲೋಕ (12) - ಬುದ್ಧಿವಾದ

ಅಲೋಕ (12) - ಬುದ್ಧಿವಾದ

ಅಲೋಕ (12) -  ಬುದ್ಧಿವಾದ

ಕತೆ : ಅಲೋಕ

 

ಅಲ್ಪ ಕಾಲದ ಮೌನದ ನಂತರ ಅವನು ಮತ್ತೆ ನುಡಿದ

‘ನೀವು ಮೂಲಭೂತ ವ್ಯೆತ್ಯಾಸವನ್ನೆ ಅರ್ಥಮಾಡಿಕೊಳ್ಳುತ್ತಿಲ್ಲ. ಪ್ರತೀ ಲೋಕಕ್ಕೂ ತನ್ನದೆ ಆದ ನಿಯಮಗಳಿವೆ . ನೀವು ಭೂಮಿಯಿಂದ ವೈತರಣೀ ಲೋಕಕ್ಕೆ ಬರುವಾಗ ಭೂಮಿಯ ಭಾವಗಳನ್ನು ತೊರೆದುಬಂದಿರಿ. ಹಾಗೆ ಈ ಲೋಕಕ್ಕೆ ಬರುವಾಗ ನೀವು ವೈತರಣಿಯ ಅನುಭವಗಳನ್ನೆಲ್ಲ ಹೊತ್ತು ತರಬಾರದು ಅದು ಅಲ್ಲಿಗೆ ಮುಗಿಯಿತು. ಅದನ್ನು ಅಲ್ಲಿಗೆ ಬಿಟ್ಟು ಈ ಲೋಕವನ್ನು ಅರ್ಥಮಾಡಿಕೊಳ್ಳುವ ಅರ್ಥಮಾಡಿಕೊಳ್ಳುವ ಪ್ರಯತ್ನಪಡಬೇಕು  ”

“ನೀವು ಮಾನವರ ಮನೋಧರ್ಮವೆ ಒಂದು ವಿಚಿತ್ರ “ ಅವನು ನಗುತ್ತ ಹೇಳಿದ ,

‘ನೀವು ಸದಾ ಪ್ರಕೃತಿಯ ವಿರುದ್ದವಾಗಿಯೆ ಇರುತ್ತೀರ . ಭೂಮಿಯಲ್ಲಿ ಪ್ರಧಾನವಾಗಿ ಇರುವುದು ಮಾಯಾ ಶಕ್ತಿಯ ಸ್ವರೂಪ, ಬಂಧನ ಸಂಬಂಧಗಳು ಆದರೆ ಆ ಸಂಬಂಧಗಳನ್ನು ಗೆಲ್ಲಬೇಕೆನ್ನುತ್ತೀರಿ, ಮಾಯೆಯನ್ನು ಗೆಲ್ಲಬೇಕೆನ್ನುತ್ತೀರಿ , ಆ ಶಕ್ತಿಗೆ ಶರಣಾಗಿ ಹೋಗುವದರಲ್ಲಿಯೆ ನಿಮ್ಮ ಸುಖ ಅಡಗಿದೆ ಎನ್ನುವುದು ಮರೆಯುತ್ತೀರಿ. ಈಗ ನೋಡಿ ಇಲ್ಲಿಯ ಪ್ರಧಾನ ಗುಣವೆ ಆನಂದ, ಸುಖ ಎನ್ನುವ ಭಾವವಗಳು ಆದರೆ ನಿಮ್ಮ ಮನಸ್ಸು ಅದಕ್ಕೆ ವಿರುದ್ದವಾಗಿಯೆ ವರ್ತಿಸುತ್ತದೆ’

ನನಗೀಗ ನನ್ನ ತಪ್ಪಿನ ಅರ್ಥವಾಗುತ್ತಿತ್ತು. ಅವನು ಮತ್ತಷ್ಟು ವಿಷದಪಡಿಸಲಿ ಎಂದು ಸುಮ್ಮನಿದ್ದೆ. ಅವನು ಮುಂದುವರೆಸಿದ್ದೆ.

‘ಈ ಲೋಕವನ್ನು ಸ್ವಲ್ಪ ಗಮನಿಸಿ. ಆನಂದ ಎಂಬುದು, ಸುಖ ಎಂಬುದು ಹಾಸಿಹೊದ್ದು ಮಲಗಿದೆ , ಪ್ರತಿ ಕಣದಲ್ಲಿಯೂ ತುಂಬಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಸುಖವನ್ನು ಆನಂದವನ್ನು ಗುರುತಿಸಿಕೊಂಡಿದ್ದಾರೆ.  ಕೆಲವರಿಗೆ ವಿಹಾರದಲ್ಲಿ ಸುಖ ಅನ್ನಿಸಬಹುದು. ಕೆಲವರಿಗೆ ಹೆಣ್ಣಿನ ಸಾಂಗತ್ಯದಲ್ಲಿ ಸುಖವಾದರೆ ಮತ್ತೆ ಕೆಲವರಿಗೆ ಅಹಾರಪಾನಗಳಲ್ಲಿ. ಮಧುಪಾನವೂ ಕೆಲವರಿಗೆ ಆನಂದದಾಯಕವೆನಿಸಬಹುದು. ಹೀಗೆ ವಿವಿಧ ಹಂತಗಳಲ್ಲಿ..

ಮತ್ತೆ ಕೆಲವರನ್ನು ಗಮನಿಸಿ ಮೌನವಾಗಿದ್ದರು ಸಹ ಮತ್ತೊಬ್ಬರು ಆನಂದವಾಗಿರುವದನ್ನು ನೋಡುತ್ತ ತಾವು ಸಂತಸವಾಗಿರುತ್ತಾರೆ. ಪ್ರತಿಯೊಬ್ಬರು ಆನಂದದ ವಿವಿಧ ಹಂತಗಳಲ್ಲಿದ್ದಾರೆ, ಅವರವರ ಅನುಭವಯೋಗ್ಯವೆನ್ನುವಂತೆ.

ಇಷ್ಟೆ ಅಲ್ಲ ನೀವು ಸಹ ನಿಮ್ಮದೆ ಆದ ಮಾರ್ಗದಲ್ಲಿ ನಿಮ್ಮ ಆನಂದ ಕಂಡುಕೊಳ್ಳಬಹುದು. ಇಲ್ಲಿ ಕೆಲವರ ಆನಂದ ದೀರ್ಘಕಾಲವಲ್ಲ. ಅವರದನ್ನು ಅನುಭವಿಸಿ ಮುಗಿಸಿದೊಡನೆ ಅಂತಹವರು ಮತ್ತೆ ಜನ್ಮಚಕ್ರಕ್ಕೆ ಸಿಕ್ಕಿಬಿಡುವ ಸಾದ್ಯತೆಗಳಿವೆ

ಆದರೆ ಇದೆಲ್ಲವನ್ನು ಮೀರಿದ ಆನಂದವಿದೆ ನೀವದನ್ನು ಹೃದಯಸ್ಥ ಮಾಡಿ ಅತ್ಮಾನುಸಂದಾನ ಮಾಡಿಕೊಳ್ಳಬಹುದು. ಆ ಆನಂದದಲ್ಲಿ ಸುಖದಲ್ಲಿ ವಿಶೇಷತೆ ಇದೆ. ಅದಕ್ಕೆ ಕಾಲಮಿತಿ ಎಂಬುದೇ ಇಲ್ಲ .  ನೀವದನ್ನು ಅನಂತಕಾಲದವರೆಗೂ ವಿಸ್ತರಿಸುತ್ತ ಹೋಗಬಹುದು. ಅದಕ್ಕೆ ಇಷ್ಟೇ ಎಂದು ಪ್ರಮಾಣದ ನಿಗದಿಯೂ ಇಲ್ಲ .  ಅದು ನಿಮ್ಮ ಶಕ್ತಿಯನ್ನು ಅನುಸರಿಸಿದೆ. ನಾವು ಇದನ್ನು ಅತಿ ಉನ್ನತ ಆನಂದವೆಂದು ಬಗೆಯುತ್ತೇವೆ. ಆದರೆ ಅದು ಎಲ್ಲರಿಗೂ ಸಾದ್ಯವಾಗದು. ಯಾರು ಹೇಳಿಕೊಡಲು ಆಗದು. ಅದನ್ನು ಸ್ವ-ಅನುಭವದಿಂದ ರೂಡಿಸಿಕೊಳ್ಳಬೇಕು”

ಅವನ್ನು ಇದ್ದಕ್ಕಿದಂತೆ ಮಾತು ನಿಲ್ಲಿಸಿದ. ಅಲ್ಲೊಂದು ಸುಂದರವಾದ  ಮೌನ ನೆಲೆಸಿತ್ತು. ಅವನು ಇಲ್ಲಿಯವರೆಗೂ ಆಡಿದ ಮಾತುಗಳು ನಿಧಾನವಾಗಿ ಎನ್ನುವಂತೆ ಒಂದೊಂದೆ ಪದ ಎನ್ನುವಂತೆ ನನ್ನ ಹೃದಯದಲ್ಲಿ ಇಳಿಯುತ್ತಿತ್ತು. ಅವನು ಎದ್ದು ನಿಂತು , ಅಲ್ಲಿಂದ  ಕಲ್ಲಿನ ಪಾವಟಿಗೆ ಹತ್ತುತ್ತ ಹೊರಟುಹೋದದ್ದು ಎಷ್ಟೋ ಹೊತ್ತಿನ ನಂತರ ನನಗೆ ತಿಳಿಯಿತು.

 

ಮುಂದುವರೆಯುವುದು……

ಮುಂದಿನ ಭಾಗದಲ್ಲಿ ಮುಕ್ತಾಯ .
 

 

Comments