ಅಲೋಕ (8) - ಮುಂದಿನ ಲೋಕಕ್ಕೆ ಪಯಣ

ಅಲೋಕ (8) - ಮುಂದಿನ ಲೋಕಕ್ಕೆ ಪಯಣ

ಅಲೋಕ (8) - ಮುಂದಿನ ಲೋಕಕ್ಕೆ ಪಯಣ

ಕತೆ : ಅಲೋಕ

 

ಮರುದಿನ ನನ್ನನ್ನು ಕರೆದ್ಯೋಯ್ಯಲು ಮತ್ತೊಬ್ಬ ವ್ಯಕ್ತಿ ಬಂದ. ನನಗೆ ಕುತೂಹಲ ಅನ್ನಿಸಿದ್ದು ಪ್ರತಿದಿನವೂ ಬೇರೆ ಬೇರೆ ವ್ಯಕ್ತಿಗಳು ಕಾಣಿಸುವರಲ್ಲ, ಇಲ್ಲಿರುವವರಿಗೆ ಹೆಸರುಗಳು ಇರುವುವೋ ಹೇಗೆ ಎಂದು . ಅವನು ಜೊತೆ ನಾನು ಒಂದು ಸ್ಥಳಕ್ಕೆ ಬಂದೆ. ನಂತರ ಆ ಜಾಗ ಗುರುತು ಹತ್ತಿತು. ನಾನು ಭೂಮಿಯಿಂದ ಬಂದಾಗ ಪ್ರವೇಶಿಸಿದ ಸ್ಥಳಕ್ಕೆ ಪುನಃ ಬಂದಿದ್ದೆ.

ಎದುರಿಗೆ ಕುಳಿತಿದ್ದ ವ್ಯಕ್ತಿ ಗೌರವಪೂರ್ವಕವಾಗಿಯೆ ಹೇಳಿದ

‘ನಿಮ್ಮ ಇಲ್ಲಿಯ ವಾಸ ಮುಗಿಯಿತು. ಎಲ್ಲವೂ ತೃಪ್ತಿಕರವಾಗಿತ್ತು. ಈಗ ನೀವು ಮುಂದಿನ ಪಯಣಕ್ಕೆ ಸಿದ್ದರಾಗಬೇಕಿದೆ”

ನನ್ನ ಮುಖದಲ್ಲಿ ನಗೆಯೊಂದು ಹರಡಿತು ‘ಸಿದ್ದ ಅಂದರೆ ಏನು. ನನಗೆ ಸೇರಿದ ವಸ್ತುಗಳನ್ನು ಒಂದು ಚೀಲಕ್ಕೆ ತುಂಬಿಕೊಳ್ಳಲು ಇಲ್ಲಿ ನನ್ನ ವಸ್ತು ಅಂತ ಯಾವುದು ಇರಲೇ ಇಲ್ಲ. ಹಾಗೆಯೆ ಮುಂದಿನ ಲೋಕ ಎಂದು ಇವರು ಹೇಳುತ್ತಿರುವುದು  ಯಾವ ಸ್ಥಳ ಎಂದು ನನಗೆ ಪೂರ್ಣವಾಗಿ ಅರಿವಿಲ್ಲ. ಹೀಗಿರುವಲ್ಲಿ ಸಿದ್ದನಾಗುವುದು ಎಂದರೇನು’

ಅವನ ಮುಖದಲ್ಲಿ ಸಹ ನಗು

‘ಸಿದ್ದತೆ ಎಂದರೆ ಈ ಲೋಕವನ್ನು ಬಿಟ್ಟುಹೋಗಲು ಮಾನಸಿಕವಾಗಿ ಸಿದ್ದರಾಗಿ ಎನ್ನುವ ಅರ್ಥದಲ್ಲಿ ಹೇಳಿದೆ. ಹಾಗೆಯೆ ಅಲ್ಲಿನ ಹೊಸ ಅನುಭವಕ್ಕೆ ತೆರೆದುಕೊಳ್ಳಲು ಸಿದ್ದರಾಗಿ ಎಂಭರ್ಥದಲ್ಲಿ ತಿಳಿಸಿದೆ” ಎಂದ ಆತ

 

ಹೊಸ ಅನುಭವ ಎಂದರೇನು , ಮತ್ತೆ ಹೊಸ ಕರ್ತವ್ಯಗಳು ನಿಗದಿಯಾಗಿದೆಯೆ?. ಯಾವುದನ್ನು ಯೋಚಿಸುವದರಿಂದ ಫಲವಿಲ್ಲ ಅನ್ನಿಸಿತು. ಹಾಗಾಗಿ ನಿಧಾನವಾಗಿ ಹೇಳಿದೆ  ‘ಸರಿ ಸಿದ್ದನಾಗಿರುವೆ “

‘ಒಳ್ಳೆಯದಾಗಲಿ ಹೋಗಿಬನ್ನಿ. ನಿಮ್ಮನ್ನು ಅಲ್ಲಿಯವರೆಗೂ ಕರೆದೋಯ್ದು ತಲುಪಿಸಲು ಇವರು ನಿಮ್ಮ ಜೊತೆ ಇರುತ್ತಾರೆ ‘

ನಾನು ಹಿಂದೆ ನೋಡಿದೆ. ನನ್ನನ್ನು ಅಲ್ಲಿಗೆ ಕರೆತಂದ ವ್ಯಕ್ತಿ ಅಲ್ಲಿಯೆ ನಿಂತಿದ್ದನು. ನಾನು ನನ್ನನ್ನು ಮಾತನಾಡಿಸಿದ ವ್ಯಕ್ತಿಗೆ ನನ್ನ ವಂದನೆ ಅರ್ಪಿಸಿ ಅಲ್ಲಿಂದ ಹೊರಟೆ.

 

ಬಹುಶಃ ಭೂಮಿಯ ಜನ ಯಮರಾಜ ಎಂದು ಕರೆಯುವ ವ್ಯಕ್ತಿ ಇವನೇ ಇರಬಹುದೆ ಅನ್ನಿಸಿತು. ಆದರೆ ಅವನು ಅಂತಹ ಭಯ ಹುಟ್ಟಿಸುವನಂತೆ ಇರಲಿಲ್ಲ. ನನಗೊಮ್ಮೆ ನಿಗೂಡವೆನಿಸುತ್ತ ಇತ್ತು.   ಇಷ್ಟೆಲ್ಲ ಅನುಭವಗಳಾಗುತ್ತಿವೆ ಇವೆಲ್ಲ ನಿಜವೋ ಅಥವ ಕನಸೋ ಆಗಿರಬಹುದೆ ಅಥವ ಎಲ್ಲವೂ ನನ್ನ ಕಲ್ಪನೆಯೂ ಆಗಿರಬಹುದಲ್ಲವೆ ಎನ್ನುವ ಯೋಚನೆ ಕಾಡಿತು

 

‘ಇಲ್ಲ ಇವೆಲ್ಲವೂ ನಿಜ. ನೀವು ಅನುಭವಿಸಿದ ಅನುಭವಗಳೆಲ್ಲ ನಿಜ ಅನುಭವ. ಹಾಗೆ ನೋಡಿದರೆ ಭೂಮಿಯಲ್ಲಿನ ನಿಮ್ಮ ಕೆಲವು ಅನುಭವಗಳು ಪೂರ್ತಿ ನಿಜವಲ್ಲ ‘ ಆತ ಒಮ್ಮೆಲೆ ನುಡಿದಾಗ ನಾನು ಚಕಿತನಾದೆ. ನಮ್ಮ ಆಲೋಚನೆ ಮತ್ತೊಬ್ಬರಿಗೆ ತಿಳಿಯುತ್ತಿದೆ ಅನ್ನುವಾಗ ಸ್ವಲ್ಪ ಸಂಕೋಚ ಆವರಿಸುತ್ತೆ. ನನಗೂ ಹಾಗೆ ಅನ್ನಿಸಿತು. ನಂತರ ಸರಿಯಾಯಿತು.

 

ನಾವೀಗ ಒಂದು ವಿಶ್ರಾಂತಿಯ ಕೊಠಡಿ ಪ್ರವೇಶಿಸಿದೆವು. ಅಲ್ಲಿದ್ದ ಆಸನ ಒಂದರಲ್ಲಿ ಕುಳಿತುಕೊಳ್ಳುವಂತೆ ನನಗೆ ತಿಳಿಸಿದ ಆತ,  ತಾನು ನನ್ನ ಎದುರಿಗೆ ಇದ್ದ ಮತ್ತೊಂದು ಆಸನದಲ್ಲಿ ಕುಳಿತ . ಲೋಕಾಭಿರಾಮ ಎನ್ನುವಂತೆ ಪ್ರಶ್ನಿಸಿದ

‘ಹೇಳಿ ಹೇಗಿತ್ತು ಇಲ್ಲಿನ ನಿಮ್ಮ ಅನುಭವ , ನಿಮಗೆ ಹೇಗೆನಿಸಿತು’

ನಾನು ನನ್ನ ಅಭಿಪ್ರಾಯಗಳನ್ನೆಲ್ಲ ತಿಳಿಸಿದೆ.”ನನಗೆ ಎಂದು ಸಹ ಅಲ್ಲಿ ಬೇಸರವಾಗಲಿಲ್ಲ, ಮೊದಲಿಗೆ ಹೊಂದಿಕೊಳ್ಳಲು ಕಷ್ಟವೆನಿಸಿದರು, ನಂತರ ಎಲ್ಲವೂ ಸಲಿಸಾಯಿತು’ ಎಂದೆಲ್ಲ ವಿವರಿಸಿದೆ. ಆತನು ಸಹ ಸಮಾದಾನವಾಗಿಯೆ ನನ್ನ ಮಾತುಗಳನ್ನೆಲ್ಲ ಕೇಳಿಸಿಕೊಂಡನು..

ಮತ್ತೆ ಕೇಳಿದೆ.

’ನನ್ನ ಕೆಲವು ಅನುಮಾನಗಳನ್ನು ಪರಿಹರಿಸಬಲ್ಲಿರಾ? ”

’ಕೇಳಿ ಪ್ರಯತ್ನಿಸೋಣ’  

’ನರಕವೆಂದರೆ ಸಾವಿರಾರು ಜನರು ಬರುವ ಲೋಕವೆಂದುಕೊಂಡಿದ್ದೆ, ಆದರೆ ಇಲ್ಲಿ ನನ್ನೊಬ್ಬನನ್ನು ಹೊರತು ಮತ್ಯಾರು ಕಾಣಿಸಲೇ ಇಲ್ಲವಲ್ಲ , ಏಕೆ ?”

ಅತನಿಗೆ ಸ್ವಲ್ಪ ಆಶ್ಚರ್ಯ

’ಏಕಿಲ್ಲ ಬಹಳ ಜನ ಇರುವರಲ್ಲ, ಮೊದಲ ದಿನ ನೀವು ಕಾಲು ಒತ್ತುವಾಗ ಸಾಲು ಸಾಲು ಜನ ಮಲಗಿದ್ದರು, ನೀವು ಕಂಡಿರಲ್ಲ. ಅವರ ಬಟ್ಟೆಗಳನ್ನು ಸಹ ಸ್ವಚ್ಛಮಾಡಿದಿರಿ’

’ಆದರೆ ಅವರೆಲ್ಲ ಪಿತೃಗಳಲ್ಲವೆ ? ಸುಖದಿಂದ ಮಂಚದ ಮೇಲೆ ಮಲಗಿದ್ದರು,  ಅವರ ಸೇವೆ ಮಾಡಿದೆನಲ್ಲ’ ನನಗೆ ಆಶ್ಚರ್ಯ

ಅವನು ಜೋರಾಗಿ ನಕ್ಕ

’ಮಂಚದ ಮೇಲೆ ಮಲಗಿದ್ದವರನ್ನೆಲ್ಲ ಸುಖಿಗಳು ಎಂದು ಏಕೆ ಭಾವಿಸುತ್ತಿದ್ದೀರಿ, ಅವರು ನಿಮ್ಮಂತೆಯೆ ಈ ಲೋಕದ ಅನುಭವಕ್ಕಾಗಿ ಬಂದವರಷ್ಟೆ’

ನನಗೆ ಈಗ ಸ್ವಲ್ಪ ಆಶ್ಚರ್ಯವಾಗಿತ್ತು.

’ಮತ್ತೆ ಆ ದಿನ ನನ್ನ ಎದುರಿಗೆ ಅಲುಗಾಡದೆ ಕಣ್ಣು ಮಿಟುಕಿಸದೆ  ದಿನಪೂರ್ತಿ ಕುಳಿತ ಪಿತೃ’

’ಹೌದು ಅವರು ಸಹ ನಿಮ್ಮಂತೆ ಅನುಭವಕ್ಕಾಗಿ ಬಂದವರೆ’ ನಾನೀಗ ಬೆರಗಾಗಿದ್ದೆ.

ಸ್ವಲ್ಪ ಕಾಲ ಮೌನವಾಗಿದ್ದೆ

ಮತ್ತೆ ಕೇಳಿದೆ

’ಸರಿ ಮತ್ತೆ ಹೇಳುವರಲ್ಲ, ನರಕದಲ್ಲಿ ಕಾಲು ಕತ್ತರಿಸುವರು, ಬೆಂಕಿಯಲ್ಲಿ ಬೇಯಿಸುವರು, ಕಾದ ಎಣ್ಣೆಯಲ್ಲಿ ಹಾಕುವರು , ಅದೆಲ್ಲ ಸುಳ್ಳು ಅಲ್ಲವೆ ?”

ಅವನು ಮೌನವಾಗಿದ್ದ . ನಂತರ ನುಡಿದ.

’ಸುಳ್ಳು ಅನ್ನಲಾಗದು,  ಕೆಲವರಿಗೆ  ಅಂತಹ ನೋವಿನ ಅನುಭವದ ಅಗತ್ಯವಿದ್ದಲ್ಲಿ,  ಆ ರೀತಿಯ ಅನುಭವ ಒದಗಿಸಲಾಗುತ್ತೆ’

ನನ್ನ ಎದೆಯೊಳಗೆ ಸಣ್ಣದೊಂದು ಕಂಪನ ಕಾಣಿಸಿತು.

ಈಗ ಅರ್ಥವಾಗುತ್ತಿತ್ತು, ನರಕವೆಂದರೆ ಎಲ್ಲರ ಅನುಭವವು ಒಂದೇ ಆಗಿರಬೇಕಿಲ್ಲ. ನನ್ನ ಅನುಭವವೇ ಇತರರ ಅನುಭವ ಆಗಿರಬೇಕಿಲ್ಲ.  

ಅವನು ನಿಧಾನವಾಗಿ ಕೇಳಿದ

’ಮತ್ತೆ ಏನೋ ಕೇಳಬೇಕೆಂದಿರುವಂತಿದೆ’

ಸ್ವಲ್ಪ ತಡೆದು ಕೇಳಿದೆ

’ಭೂಮಿಯಲ್ಲಿ ನಮ್ಮ ಪ್ರತಿಯೊಂದು ಅನುಭವ ಪಂಚೇಂದ್ರಿಯಗಳ ಮೂಲಕವಷ್ಟೆ ಆಗುತ್ತದೆ ಅಲ್ಲವೆ? ನಾನೀಗ ದೇಹ ತೊರೆದುಬಂದ ನಂತರವೂ ಸಹ ಇಲ್ಲಿ ವಿವಿಧ ಭಾವ, ಭಾವನೆಗಳ ಅನುಭವಾಗುತ್ತಿದೆ. ಹೇಗೆ ಸಾದ್ಯ?”

’ನಿಮ್ಮ ಅನುಭವಗಳೆಲ್ಲ ಪಂಚೇಂದ್ರಿಯಗಳ ಮೂಲಕವೇ ಆಗುತ್ತದೆ ಎಂದು ನೀವು ಏಕೆ ನಿರೀಕ್ಷಿಸುತ್ತೀರಿ? ಪಂಚೇಂದ್ರಿಯ ಅನ್ನುವುದು ಅನುಭವವನ್ನು ನಿಮಗೆ ತಲುಪಿಸುವ ಒಂದು ಮಾಧ್ಯಮ. ಬೇರೆ ಮಾಧ್ಯಮಗಳ ಮೂಲಕವೂ ಅದೇ ಕೆಲಸವಾಗಬಹುದಲ್ಲ ’

’ಹೇಗೆ ಸಾದ್ಯ ? ಪಂಚೇಂದ್ರಿಯಗಳಿಲ್ಲದೆ ನಮಗೆ ಬೆಳಕಿನ, ಭಾವದ,  ಸ್ಪರ್ಶದ ಅನುಭವಗಳು ಹೇಗೆ ಸಾದ್ಯ’

ಅವನು ನನ್ನನ್ನೆ ಸ್ವಲ್ಪಕಾಲ ದಿಟ್ಟಿಸುತ್ತಿದ್ದವನು ನುಡಿದ.

’ನಿಮಗೆ ಆಗಲೇ ಒಮ್ಮೆ ತಿಳಿಸಲಾಗಿದೆ. ಈ ಲೋಕದ ಎಲ್ಲ ಅನುಭವಗಳನ್ನು ನಿಮ್ಮ ಹಿಂದಿನ ಲೋಕದ ಭೂಮಿಯ ಅನುಭವದೊಡನೆ ಹೋಲಿಕೆ ಮಾಡಿ ನೋಡಬೇಡಿ ಎಂದು. ಮರೆಯುತ್ತೀರಿ. ಮತ್ತೆ ಅದೇ ತಪ್ಪು ಮಾಡುತ್ತೀರಿ’

ನಾನೀಗ ಮೌನವಾದೆ. ನಿಜ ಭೂಮಿಯ ಅನುಭವವೇ ಇಲ್ಲಿ ಸಹ ಆಗಬೇಕಿಲ್ಲ. ಅಲ್ಲಿ ಪಂಚೇಂದ್ರಿಯಗಳ ಮೂಲಕವೆ ಅನುಭವ ಸಾದ್ಯ ಎನ್ನುವದಾದರೆ , ಈ ಲೋಕದಲ್ಲಿ ಸಹ ಅದೇ ಸತ್ಯವೆಂದು ಏಕೆ ಭಾವಿಸಬೇಕು. ಈ ಲೋಕದಲ್ಲಿ ನನ್ನ ಅಸ್ತಿತ್ವ ಇದೆ ಅನ್ನುವದಾದರೆ ಇಲ್ಲಿಯ ಅನುಭವದ ಮಾಧ್ಯಮವೇ ಬೇರೆಯಾಗಿರಬಹುದಲ್ಲ.

 

’ನೀವು ಇಲ್ಲಿ ಈಗ  ಪೂರ್ಣತೆಯ ಹತ್ತಿರಕ್ಕೆ ಬಂದಿದ್ದೀರಿ. ಆದರೆ ಪರಿಪೂರ್ಣರಲ್ಲ ಅದಕ್ಕಾಗಿ ಈಗ ಹೊಸ ಲೋಕದತ್ತ ನಿಮ್ಮ ಪಯಣ’ ಅವನು ನುಡಿದ.

ನನಗೆ ಅರ್ಥವಾಗಲಿಲ್ಲ

’ಸರಿ, ಅಂದರೆ ಏನು ಅಲ್ಲಿ ನನಗಾಗಿ ಹೊಸ ಹೊಸ ಕರ್ತವ್ಯಗಳು ನಿಗದಿಯಾಗಿದೆಯೆ ?. ನನ್ನಲ್ಲಿ ಯಾವ ಭಾವದ ಕೊರತೆಗಾಗಿ ಅಲ್ಲಿಗೆ ಕಳಿಸಲಾಗುತ್ತಿದೆ, ಅಂತಹ ಒಂದು ಕೊರತೆಯನ್ನು ಇಲ್ಲಿಯೆ ನೀಗಿಸಲಾಗುವದಿಲ್ಲವೆ?”

’ಇಲ್ಲ ಅದು ನಮ್ಮ ಲೋಕದಲ್ಲಿ ಆಗುವದಿಲ್ಲ, ಅದಕ್ಕಾಗಿಯೆ ಮುಂದಿನ ಲೋಕದತ್ತ ಪಯಣ’

’ಸರಿ ಆಗಲಿ ,  ಆದರೆ ಯಾವ ಕೊರತೆಗಾಗಿ ಎಂದು ತಿಳಿಯಬಹುದೆ?”

ಅವನು ಸ್ವಲ್ಪ ಯೋಚಿಸಿ ಹೇಳಿದ

’ತರ್ಕ, ಪ್ರಶ್ನೆ …. ನಿಮ್ಮಲ್ಲಿ  ತರ್ಕಮಾಡುವ ಸ್ವಭಾವ ಉಳಿದಿದೆ, ಅಂತಹ ತರ್ಕದಿಂದ ನಿಮ್ಮಲ್ಲಿ ಪ್ರಶ್ನೆಗಳು ಉದ್ಬವವಾಗುತ್ತಲೆ ಇರುತ್ತದೆ. ಇದಕ್ಕೆ ಕಾರಣ  ನಿಮಗೆ ಅರ್ಥವಾಗುವ ಬಾಷೆಯಲ್ಲಿ ಹೇಳಬೇಕೆಂದರೆ ’ನಾನು’ ಎನ್ನುವ ಭಾವ. ಅಂತಹ ಭಾವ ನಿಮ್ಮಲ್ಲಿ ಇರುವ ತನಕ ಕೊನೆಯ ಸ್ಥಿತಿ ತಲುಪಲಾರಿರಿ. ಬಹುಶಃ ಇದಕ್ಕಿಂತ ಹೆಚ್ಚಿಗೆ ನಾನು ನಿಮಗೆ ತಿಳಿಸುವಂತಿಲ್ಲ’  

ಇನ್ನು ಅವನನ್ನು ಬಲವಂತಪಡಿಸುವಂತಿಲ್ಲ . ಆದರೆ ಈತ ಮಾತ್ರ ನನ್ನನ್ನು ಅದ್ಯಾವುದೋ ಮುಂದಿನ ಲೋಕವಂತೆ ಅಲ್ಲಿಗೆ ಕರೆದೊಯ್ಯುವ ಲಕ್ಷಣವೇ ಕಾಣಲಿಲ್ಲ. ಕಡೆಗೊಮ್ಮೆ ಕೇಳಿದೆ.

 

“ಸರಿ ನಾವು ಯಾವಾಗ ಪ್ರಯಾಣ ಪ್ರಾರಂಭಿಸುವುದು. ಅದು ಎಲ್ಲಿಗೂ ಹೋಗಬೇಕೆಂದು ತಿಳಿಸಿದಿರಿ’ ನಾನು ನುಡಿದೆ.

ಏನು ಪ್ರಯಾಣ   ಆರಂಭಿಸುವುದೇ ? . ಆಗಲೇ ಮುಗಿಯುತ್ತ ಬಂದಿತಲ್ಲ.   ನಾವು ತಲುಪಿ ಆಯಿತು ಎನ್ನುತ್ತ  , ಬನ್ನಿ ಹೋಗೋಣ ಅನ್ನುತ್ತ ಎದ್ದುನಿಂತ .

 

ನನಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ನಾನು ಅಂದುಕೊಂಡೆ ಬಹುಶಃ ನಾವು ಕುಳಿತಿರುವುದು ಕೋಣೆಯಾದರು , ಯಾವುದೋ ವಾಹನದಂತೆ ಕೆಲಸಮಾಡುತ್ತಿರಬಹುದು. ನಾವು ಪ್ರವೇಶಿಸಿದ ಬಾಗಿಲಿನಿಂದಲೇ ಪುನಃ ಹೊರಗೆ ಬಂದೆವು

ಮುಂದುವರೆಯುವುದು ...

Comments

Submitted by partha1059 Sun, 05/24/2015 - 21:38

ನಾಗೇಶ ಮೈಸೂರು ನಮಸ್ಕಾರ‌ ,
ನೀವು ಎತ್ತಿದ‌ ಪ್ರಶ್ನೆಯಾಗಲಿ ಅನುಮಾನವಾಗಲಿ ನನಗೂ ಪ್ರಾರಂಭದಲ್ಲಿಯೆ ಬಂದಿತು. ಈ ಬಾಗದಲ್ಲಿ ಅದಕ್ಕೆ ಉತ್ತರ‌ ಹುಡುಕಲು ಪ್ರಯತ್ನಿಸಿದ್ದೇನೆ. ನಾಗರಾಜರ‌ ಮೂಡ‌ ಸಹ‌ ನನಗೆ ಸಹಾಯ‌ ಮಾಡಿದೆ
ನಾವು ಯಾವುದನ್ನು ಆತ್ಮ‌ ಅನ್ನುತ್ತೇವೆ ಅಥವ‌ 'ಅದ್ಯಾವುದೋ' ಒಂದು ವಸ್ತು ಭೂಮಿಯಲ್ಲಿರುವಾಗ‌ ದೇಹದ‌ ಧಾರಣೆ ಮಾಡುತ್ತದೆ ಪಂಚೇಂದ್ರಿಯಗಳ‌ ಮೂಲಕ‌ ಅನುಭವ‌ ಹೊಂದುತ್ತದೆ ಅನ್ನುವದಾದರೆ, ಅಂತಹ‌ ವಸ್ತು (ಜೀವಾತ್ಮ‌ ?) , ಕಡೆಯದಾಗಿ ಪ್ರಕ್ಱುತಿಯಲ್ಲಿ ಲೀನವಾಗುವವರೆಗೂ ಅಂದರೆ ತನ್ನ ಪ್ರತ್ಯೇಕ‌ ಅಸ್ತಿತ್ವವನ್ನು ತೊರೆಯುವವರೆಗೂ, ಪರಲೋಕದಲ್ಲಿಯೂ ಅಲ್ಲಿಯದೇ ಆದ‌ ದೇಹ‌ (ಸೂಕ್ಷ್ಮದೇಹ‌ ?) ಧರಿಸುತ್ತದೆ ಅನ್ನುವುದು ಸತ್ಯವಿರಬಹುದು.
ಎಲ್ಲ‌ ಅನುಭವಗಳಿಗೂ ಪಂಚೇಂದ್ರಿಯಗಳು ಇಲ್ಲಿ ಮಾಧ್ಯಮ‌ ಅನ್ನುವದಾದರೆ,
ಅದು 'ಅಲ್ಲಿ' ಬೇರೆಯದೇ ಆದ‌ ಮಾದ್ಯಮದ‌ ಮೂಲಕ‌ ಸಹ‌ ಅಂತಹ‌ ಅನುಭವ‌ ಹೊಂದಲು ಸಾದ್ಯ‌ ಅಲ್ಲವೆ ?
ಅಷ್ಟಕ್ಕೂ ನಮ್ಮ‌ ಜ್ಜ್ನಾನವೆಲ್ಲವು ಪಂಚೇಂದ್ರಿಯಗಳ‌ ಮೂಲಕವೆ ಪಡೆದ‌ ಸೀಮಿತ‌ ಜ್ಜ್ನಾನ‌ , ನಮ್ಮ‌ ಅರಿವಿಗೆ ಮೀರಿದ‌ ಶಕ್ತಿ ವಸ್ತುಗಳು ಈ ಭ್ರಹ್ಮಾಂಡದಲ್ಲಿ ಅದೆಷ್ಟೋ ಅಲ್ಲವೇ ?
ಅದಕ್ಕಾಗಿ ಮೊದಲ‌ ಅಧ್ಯಾಯಗಳಲ್ಲಿಯೇ ಹೇಳುತ್ತ‌ ಬಂದಿರುವೆ,
ಅಲ್ಲಿಯ‌ ಅನುಭವವನ್ನು ಭೂಮಿಯ‌ ಅನುಭವ‌ ಅಥವ‌ ಮಾಧ್ಯಮಗಳ‌ ಹೋಲಿಕೆಯೊಡನೆ ಅರ್ಥಮಾಡಿಕೊಳ್ಳುವುದು ಬೇಡ‌ ಎಂದು :‍)
... ಮುಂದೆ ಮುಂದಿನ‌ ಲೋಕದಲ್ಲಿ ಹೋದಾಗಲು ನಾನು ಅದೇ ತಪ್ಪು ಮಾಡುತ್ತೇನೆ,
ನರಕಕ್ಕೆ ಭೂಮಿಯ‌ ಅನುಭವ‌ ಓಯ್ದಂತೆ,
ಸ್ವರ್ಗಕ್ಕೆ ನರಕದ‌ ಅನುಭವ‌ ಹೋಲಿಸಿ ತಪ್ಪು ಮಾಡುತ್ತೇನೆ ಅದೆ ಮುಂದಿನ‌ ಕತೆ
ನಿಮ್ಮ‌ ಪ್ರೋತ್ಸಾಹಕ್ಕೆ ವಂದನೆಗಳು
ಪಾರ್ಥಸಾರಥಿ

Submitted by nageshamysore Sun, 05/24/2015 - 23:50

In reply to by partha1059

ಪಾರ್ಥರೆ, ಅಲೌಕಿಕದ ವಿವರಣೆಗೆ ಹೊರಟಾಗ ಅದನ್ನು ನಮ್ಮ ಲೌಕಿಕದ ತಾರ್ಕಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವೆ ಅಸಾಧು ಎನ್ನುವ ನಿಮ್ಮ ಮಾತು ನಿಜವೆ. ಆದರೆ ಲೌಕಿಕ ಜಗದಲ್ಲಿರುವ ವ್ಯಕ್ತಿಯ ಆಲೋಚನೆಗಳು ಆ ಜಗದ ವ್ಯಾಪ್ತಿ ಮತ್ತು ಗುರುತ್ವಗಳಿಂದ ಹೊರಬಂದು ಸ್ವತಂತ್ರವಾಗಿ ವಿಮರ್ಶಿಸುವ, ಪ್ರತಿಕ್ರಿಯಿಸುವ ಸಾಧ್ಯತೆಗಳೂ ಅಷ್ಟೆ ಅಸಾಧು. ಆ ಲೌಕಿಕಾಲೌಕಿಕದ ನಡುವಿನ ತಾಕಲಾಟವೆ ಕಥೆಯ ಕುತೂಹಲಕ್ಕೆ ಮತ್ತಷ್ಟು ನೀರೆರೆದು ಪೋಷಿಸುವ ಸರಕೆಂದು ನನ್ನನಿಸಿಕೆ. ಆ ಚರ್ಯೆ ಮುಂದಿನ ಲೋಕದಲ್ಲೂ ಮುಂದುವರೆದರೆ (ಅಲೌಕಿಕ ಜಗಗಳ ನಡುವೆಯೆ ಆದರು) ಅದು ಸಹಜ ಪ್ರಕ್ರಿಯೆಯಂತೆ ಭಾಸವಾಗುತ್ತದೆ. ಅಂತಿಮವಾಗಿ ಸಂಪೂರ್ಣ ಮುಕ್ತನಾಗಲ್ಲದೆ ಸೂಕ್ಷ್ಮರೂಪಿ ಆತ್ಮ, ಪರಿಪೂರ್ಣವಾಗದು ಎನ್ನುವುದು ಸೂಕ್ತ ತರ್ಕವೆ ಹೌದು. ಒಟ್ಟಾರೆ ಈ ಕಥೆಯ ಮೂಲ ಕಲ್ಪನೆಯೆ ರೋಚಕ ವಸ್ತುವಾದ ಕಾರಣ, ಕುತೂಹಲ ಕಡೆಯವರೆಗೂ ಇರುವುದರಲ್ಲಿ ಅನುಮಾನವಿಲ್ಲ :-)

Submitted by kavinagaraj Mon, 05/25/2015 - 20:33

In reply to by partha1059

ಕೆಲವು ನಿಷ್ಕರ್ಷೆಗಳಿಗೆ ಬರುವಲ್ಲಿ ವೇದಗಳು ಸಹಾಯ ಮಾಡುತ್ತವೆ. ಸತ್ಯ ಅರಿಯುವಲ್ಲಿ ಪ್ರತ್ಯಕ್ಷ ಪ್ರಮಾಣ, ಅಧ್ಯಯನ, ಗುರುವಿನ ಮಾರ್ಗದರ್ಶನ ಸಹಕಾರ ನೀಡುತ್ತವೆ. ಅಧ್ಯಯನ ಮಾಡಿದ ಸಾಧಕರ ಮಾತುಗಳೂ ಸ್ವೀಕಾರಾರ್ಹ. ಸಂಪ್ರದಾಯದ ಹೆಸರಿನಲ್ಲಿ ದಾರಿ ತಪ್ಪಿಸುವ ಪಂಡಿತರುಗಳಿಂದಲೂ ಜಾಗೃತರಾಗಿರಬೇಕಾಗುತ್ತದೆ. ಕೊನೆಯಲ್ಲಿ ತೀರ್ಮಾನಿಸಬೇಕಾದವರು ಮಾತ್ರ ನಾವೇ ಆಗಿರುತ್ತೇವೆ. ಆ ತೀರ್ಮಾನ ಸರಿಯಾಗಿರಲೇಬೇಕಿಲ್ಲ. ಅದು ಇನ್ನೊಬ್ಬರ ಚಿಂತನ, ಮಂಥನ, ತರ್ಕಗಳಿಗೆ ಒಳಪಟ್ಟು ಮತ್ತಷ್ಟು ಸತ್ಯಕ್ಕೆ ಸಮೀಪ ಬರಲು ಸಾಧ್ಯವಿರುತ್ತದೆ. ಹೇಳಬೇಕೆನ್ನಿಸಿದ್ದರಿಂದ ಹೇಳಿದೆ. ನಿಮ್ಮ ಕಾಣದ ಲೋಕದ ಪಯಣ ಮುಂದುವರೆಯಲಿ. ನನಗೂ ಕುತೂಹಲವಿದೆ.

Submitted by partha1059 Tue, 05/26/2015 - 08:54

In reply to by kavinagaraj

ನಿಮ್ಮ ಮಾತು ನಿಜ. ಹಾಗಾಗಿ ಹೇಳಿರುವೆ ಇದು ನನ್ನ ಅನುಭವ ಎಲ್ಲರ ಅನುಭವ ಇದೇ ಆಗಿರಬೆರಕಿಲ್ಲ .
ವಂದನೆಗಳು ನಾಗರಾಜ ಸರ್