ಅಲೋಕ (9) - ಸ್ವರ್ಗ

ಅಲೋಕ (9) - ಸ್ವರ್ಗ

ಅಲೋಕ (9) - ಸ್ವರ್ಗ

ಕತೆ : ಅಲೋಕ

ಹೊರಗೆ ಒಬ್ಬಾತ ನಿಂತಿದ್ದ. ನೋಡಲು ಇಷ್ಟು ದಿನ ನಾನು ಕಾಣುತ್ತಿದ್ದ ವೈತರಣಿ ಲೋಕದವರಂತೆ ಇರಲಿಲ್ಲ. ಧರಿಸಿದ್ದ  ದಿರಿಸೂ ಸಹ ಬೇರೆ ರೀತಿಯಿತ್ತು. ನನ್ನನ್ನು ನೋಡುವಾಗಲೆ ನಗುತ್ತ

‘ಬನ್ನಿ ಈ ಸುಂದರ ಲೋಕಕ್ಕೆ ಸ್ವಾಗತ “ ಎಂದು ಆತ್ಮೀಯವಾಗಿ ಸ್ವಾಗತಿಸಿದ.

ನಾನು ಸಹಜ ಎಂಬಂತೆ ಕೇಳಿದೆ

‘ಅಂದರೆ ಈ ಲೋಕ ಸ್ವರ್ಗಲೋಕವೇ?”

‘ಸ್ವರ್ಗ’  ಹಾಗೆ ಅನ್ನುತ್ತ ಮತ್ತೊಮ್ಮೆ ನಕ್ಕ ನಂತರ ಹೇಳಿದ.

‘ಖಂಡಿತ ಹಾಗೆ ಅಂದುಕೊಳ್ಳಬಹುದು’

ನನ್ನ ಜೊತೆ ವೈತರಣಿ ಲೋಕದಿಂದ ಬಂದಿದ್ದ ವ್ಯಕ್ತಿ ನನಗೆ ಶುಭಕೋರಿ ಪುನಃ ಅದೇ ಕೋಣೆಯೊಳಗೆ ಹಿಂದಿರುಗಿ ಹೊರಟುಹೋದ.

‘ಬನ್ನಿ...’ ನನ್ನನ್ನು ಸ್ವಾಗತಿಸಿದ ಆ ವ್ಯಕ್ತಿ ನುಡಿದ

“ಇದೊಂದು ಸ್ವತಂತ್ರಲೋಕ . ಇಲ್ಲಿ ನಿಮಗೆ ಯಾವ ನಿರ್ಭಂದಗಳು ಇಲ್ಲ . ನಿಮಗೆ ಬೇಕಾದಂತೆ ಎಲ್ಲಿಯಾದರು ವಿಹರಿಸಬಹುದು. ವಿಶ್ರಾಂತಿಪಡೆಯಬಹುದು. ಯಾರೊಡನೆ ಬೇಕಿದ್ದರು ಸಂಭಾಷಿಸುವ  ಅಥವ ಇರುವ ಸ್ವತಂತ್ರ ನಿಮಗಿದೆ. ಆದರೆ ನಿಮ್ಮಿಂದ ಬೇರೆ ಯಾರಿಗೂ ತೊಂದರೆಯಾಗುವಂತಿಲ್ಲ ಅಷ್ಟೆ’ ನಕ್ಕ ಆತ

‘ಸಂತಸವಾಯಿತು. ಇಲ್ಲಿ ನನಗೇ ಎಂದು ನಿಗದಿಯಾದ ಯಾವುದೇ ಕಾರ್ಯಗಳು ಇರುವುದೆ ?. ವಿಶ್ರಾಂತಿಗೆ ಎಂದು ನನಗೆ ನಿಗದಿಯಾದ ಸ್ಥಳವಿರುವುದೆ ?” ಕೇಳಿದೆ

ಆತ ಒಮ್ಮೆ ನನ್ನನ್ನು ಪರೀಕ್ಷಾತ್ಮಕವಾಗಿ ಎಂಬಂತೆ ನೋಡಿದ

‘ಇಲ್ಲ ಇಲ್ಲಿ ಯಾರಿಗೂ ಕರ್ತವ್ಯದ ನಿರ್ಭಂದವಿಲ್ಲ. ನಿಮಗೆ ಹೇಗೆ ಸಂತಸವೆನಿಸಿದರೆ ಹಾಗೆ ಇರಬಹುದು. ನಿಮಗೆ ಸುಂದರ , ಅಥವ ಅನುಕೂಲ ಎಂದು ತೋರಿದ ಜಾಗದಲ್ಲಿ ವಿಶ್ರಾಂತಿಪಡೆಯಬಹುದು. ಅಪೇಕ್ಷಿಸಿದಲ್ಲಿ ಮಧು ಸೇವಿಸಬಹುದು . ನನ್ನ ಜೊತೆ ಬನ್ನಿ ನಿಮಗೆ ಎಲ್ಲವನ್ನು ತೋರಿಸುತ್ತೇನೆ. ನಿಮಗೆ ಇರುವ ಯಾವುದೇ ಅನುಮಾನ ನನ್ನನ್ನು ಕೇಳಿ ತಿಳಿಯಬಹುದು’

ಆತನ ಜೊತೆ ಹೊರಟೆ. ವಿಹಾರ ಸ್ಥಳಗಳು ಮನಮೋಹಕ ಅನ್ನಿಸುವಂತ್ತಿದ್ದವು. ಎದುರಿಗೆ ಸಿಗುವ ಅಪರಿಚಿತರು ಸಹ ನನ್ನನ್ನು ಕಂಡು ಸ್ನೇಹದ ನಗು ಬೀರುತ್ತಿದ್ದರು. ಅಲ್ಲಲ್ಲಿ ಕೆಲವು ಕಡೆ ಗಂಡು ಹೆಣ್ಣುಗಳು ಸಹ ಜೊತೆಯಾಗಿ ನಗುತ್ತ ವಿಹರಿಸುವುದು ಕಾಣಿಸಿತು. ಇಲ್ಲಿ ಯಾರೇ ತೀರ ವಯಸ್ಸಾದವರು ಮತ್ತು ಮಕ್ಕಳು ಕಾಣಿಸುತ್ತಲೇ ಇಲ್ಲ . ಎಲ್ಲರೂ ಯೌವನಸ್ಥರಂತೆ ಗೋಚರಿಸುತ್ತಿದ್ದರು. ಅಲ್ಲಿಯೆ ಇದ್ದ ಕಲ್ಲಿನ ಕನ್ನಡಿಯಲ್ಲಿ ಗಮನಿಸಿದೆ . ನಾನು ಸಹ ಚಿಕ್ಕ ಯುವಕನಂತೆ ಕಾಣುತ್ತಿದ್ದೆ !!!  ನನಗೆ ತೀರ ಆಶ್ಚರ್ಯವಾಗಿತ್ತು.

ಆತ ಮತ್ತೆ ನುಡಿದ

‘ಇಲ್ಲಿ ಎಲ್ಲವೂ ಇದೆ. ನಿಮಗೆ ಬೇಕೆನಿಸುವದೆಲ್ಲ ಇದೆ . ನಿಮ್ಮಲ್ಲಿಯ ಕಲ್ಪನೆಗಳು ವಿಸ್ತಾರಗೊಂಡಂತೆ ಮತ್ತೂ ಸುಂದರ   ಸ್ಥಳಗಳನ್ನು ವೀಕ್ಷಿಸಬಹುದು. ನಿಮ್ಮದೇ ಆದ ಸ್ವರ್ಗವನ್ನು ನೀವು ಕಟ್ಟಿಕೊಳ್ಳಬಹುದು.  ನಿಮ್ಮನ್ನು ಮತ್ತೆ   ಬೇಟಿ ಆಗುತ್ತೇನೆ”  ಆತ ಎಲ್ಲಿಗೋ ಹೊರಟುಹೋದ, ಗಾಳಿಯಲ್ಲಿ ತೇಲಿಹೋದನೋ ಎಂಬಂತೆ.

 

Comments

Submitted by H A Patil Tue, 05/26/2015 - 19:46

ಪಾರ್ಥಸಾರಥಿಯವರಿಗೆ ವಂದನೆಗಳು
ಕಡೆಯ ದಿನ, ಮುಂದಿನಲೋಕಕ್ಕೆ ಪಯಣ ಮತ್ತು ಸ್ವರ್ಗ ಮೂರೂ ಭಾಗಗಳನ್ನು ಓದಿದೆ, ದೇಹ ತ್ಯಜಿಸಿದ ಆತ್ಮದ ಪಯಣವನ್ನು ಇಲ್ಲಿನ ನಂಬಿಕೆ ಆಚರಣೆಗಳ ಆಧಾರದ ಮೇಲೆ ಬಲು ಸೊಗಸಾಗಿ ಅರ್ಥಗರ್ಭಿತವಾಗಿ ನಿರೂಪಿಸಿದ್ದೀರಿ, ನಿಮ್ಮ ಬರಹ ಪರಲೋಕದ ಕುರಿತು ಗಹನವಾಗಿ ಚಿಂತಿಸುವಂತೆ ಮಾಡಿದೆ, ಓದಿ ಸಂತಸವಾಯಿತು ಧನ್ಯವಾದಗಳು.

Submitted by partha1059 Tue, 05/26/2015 - 21:37

In reply to by H A Patil

ಪಾಟೀಲರಿಗೆ ನಮಸ್ಕಾರ‌
ನರಕ‌ ಹಾಗು ಸ್ವರ್ಗದ‌ ಬಗ್ಗೆ ಕಲ್ಪನೆಯನ್ನು ವಿಸ್ತರಿಸಿದ್ದೇನೆ. ಹಾಗೆ ನಡುವೆ ಒಂದು ಮಾತು ಇದೆ ಇದು ನನ್ನ‌ ಅನುಭವವಷ್ಟೆ
ನನ್ನ‌ ಅನುಭವವೆ ಇತರರ‌ ಅನುಭವ‌ ಆಗಲಾರದು :‍)
ಅವರವರು ಅವರಿಗೆ ತೋರಿದ‌ ನರಕ‌ ಹಾಗು ಸ್ವರ್ಗ‌ ಸ್ಱುಷ್ಟಿಸ‌ ಬಹುದು
ನಿಮ್ಮನು ಚಿಂತಿಸುವಂತೆ ಮಾಡಿದ‌ ಕಾರ್ಯವಷ್ಟೆ ನನ್ನದು
ಪಾರ್ಥಸಾರಥಿ

Submitted by nageshamysore Wed, 05/27/2015 - 04:17

ಸ್ವರ್ಗಲೋಕದ ಸ್ಥಳಾಂತರದ ಯಾನದ ಚಿತ್ರಣ ಕುತೂಹಲಕರ ಸೂಕ್ಷ್ಮ ರೂಪಕ್ಕು ಭೌತಿಕ ಯಾನವಷ್ಟೆ ಗಮ್ಯಕ್ಕೆ ನಿಲುಕುವುದರಿಂದ ನೀವು ವಿವರಿಸಿದ ಒಂದು ರೀತಿಯ 'ಮಾನಸಿಕ ಯಾನ', ಅನುಭವ ಗಮ್ಯವಾಗುವುದಿಲ್ಲ. ಅಥವ ಭಾರ ರಹಿತ ಸ್ಥಿತಿಯಲ್ಲಿ ಅರಿವಿಗೆ ನಿಲುಕುವಷ್ಟು ಸಾಂದ್ರತೆ ಇರುವುದಿಲ್ಲವೇನೊ? ಇನ್ನು ನಿಮ್ಮ ಕಲ್ಪನೆಯ ಈ ಸ್ವರ್ಗಲೋಕದಲೇನಾಗುವುದೊ ಕಾದು ನೋಡೋಣ :-)