ಉಪ್ಪು ತಿಂದ ಮೇಲೆ . . . 3/3

ಉಪ್ಪು ತಿಂದ ಮೇಲೆ . . . 3/3

 ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .2/3: http://sampada.net/%E0%B2%89%E0%B2%AA%E0%B3%8D%E0%B2%AA%E0%B3%81-%E0%B2%A4%E0%B2%BF%E0%B2%82%E0%B2%A6-%E0%B2%AE%E0%B3%87%E0%B2%B2%E0%B3%86-23

ಮುಂದೆ:

   ಸಲೀಮನ ಹೆಂಡತಿ ಶಾಕಿರಾಬಾನು ಕಿರಣನಿಗೆ ಫೋನು ಮಾಡಿದ್ದಳು, "ಭಯ್ಯಾ, ಸಲೀಂ ಎಲ್ಲಿದಾರೆ? ಎರಡು ದಿನದಿಂದಾ ಫೋನು ಮಾಡಿಲ್ಲ. ಅವರ ಫೋನು ಸ್ವಿಚಾಫ್ ಆಗಿದೆ. ನಿಮಗೇನಾದರೂ ಗೊತ್ತಾ?" ಕಿರಣ, "ನಾನು ಮೊನ್ನೇನೇ ವಾಪಸು ಬಂದೆ. ಅವನು ಇನ್ನೂ ಏನೋ ಕೆಲಸ ಇದೆ. ಬರೋದು ಒಂದು ವಾರ ಆಗುತ್ತೆ ಅಂತ ಹೇಳಿದ್ದ. ಅದಕ್ಕೇ ನಾನು ಬಸ್ಸಿನಲ್ಲಿ ವಾಪಸ್ಸು ಬಂದುಬಿಟ್ಟೆ" ಅಂದ. ಆಕೆ, "ಅವರು ಬರೋದು ಎಷ್ಟು ದಿನ ಆದರೂ ದಿನಕ್ಕೆ ಎರಡು ಮೂರು ಸಲ ನನಗೆ ಫೋನು ಮಾಡುತ್ತಾರೆ. ಈಸಲ ಮಾಡಲಿಲ್ಲವಲ್ಲಾ, ಅದಕ್ಕೇ ಗಾಬರಿ ಆಗಿದೆ". "ಅವನದು ಎಂಥದೋ ಚೀಟಿ ವ್ಯವಹಾರ ಅಂತೆ. ತಲೆ ಕೆಡಿಸಿಕೊಂಡಿದ್ದ. ಅದಕ್ಕೇ ಫೋನು ಮಾಡಿಲ್ಲವೇನೋ. ನೀವು ಗಾಬರಿ ಮಾಡಿಕೊಳ್ಳಬೇಡಿ. ಫೋನು ಮಾಡ್ತಾನೆ ಬಿಡಿ" ಎಂದು ಸಮಾಧಾನ ಮಾಡಿದ.

     ಇದಾಗಿ ಎರಡು ದಿನಗಳು ಕಳೆದಿದ್ದವು. ಅಂದು ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಕಿರಣನ ಮನೆಯ ಮುಂದೆ ನಿಂತಿತ್ತು. 'ಕಿರಣ್ ಇದ್ದಾರಾ?' ಎಂದು ಕೇಳಿ ಬಾಗಿಲು ಬಡಿದವರಿಗೆ ಕಿರಣನೇ ಬಾಗಿಲು ತೆಗೆದ. ದಫೇದಾರ, "ಸಾಹೇಬ್ರು ಕರಿತಿದಾರೆ. ಬರಬೇಕಂತೆ" ಎಂದದ್ದಕ್ಕೆ ಕಾರಣ ವಿಚಾರಿಸಿದಾಗ, 'ನಂಗೊತ್ತಿಲ್ಲ' ಎಂಬ ಉತ್ತರ ಬಂತು. ಬೆಳಿಗ್ಗೆ ಬರುತ್ತೇನೆಂದರೂ ಕೇಳದೆ, "ಒಂದೈದು ನಿಮಿಷದ ಕೆಲಸ. ಏನೋ ಕೇಳಬೇಕಂತೆ. ಬಂದು ಹೋಗಿ ಸಾರ್" ಎಂದು ಬಲವಂತದಿಂದ ಕಿರಣನನ್ನು ಜೀಪಿನಲ್ಲಿ ಕೂರಿಸಿಕೊಂಡರು. ಪೋಲಿಸ್ ಠಾಣೆ ತಲುಪುತ್ತಿದ್ದಂತೆಯೇ ಅವರ ವರಸೆಯೇ ಬದಲಾಯಿತು. ಬನ್ನಿ ಸಾರ್, ಹೋಗಿ ಸಾರ್ ಅನ್ನುತ್ತಿದ್ದ ದಫೇದಾರ, ಕಿರಣನನ್ನು ಕತ್ತು ಹಿಡಿದು ಠಾಣೆಯ ಒಳಕ್ಕೆ ದೂಡಿದ ರಭಸಕ್ಕೆ ಅವನು ಗೋಡೆಗೆ ಡಿಕ್ಕಿ ಹೊಡೆದು ಬಿದ್ದಿದ್ದ. ಏನಾಗುತ್ತಿದೆ ಎಂದು ತಿಳಿಯದೆ ಅವನು ಕಕ್ಕಾಬಿಕ್ಕಿಯಾಗಿದ್ದಾಗಲೇ ಇನ್ನೊಬ್ಬ ಪೇದೆ ಜಾಡಿಸಿ ಅವನ ಬೆನ್ನಿಗೆ ಒದ್ದಿದ್ದ. ಸಬ್ಬಿನಿಸ್ಪೆಕ್ಟರ್ ರೌಂಡ್ಸಿಗೆ ಹೋಗಿದ್ದವರು ಇನ್ನೂ ಬಂದಿರದಿದ್ದರಿಂದ ಅವನನ್ನು ಸೆಲ್ಲಿನೊಳಗೆ ದೂಡಿ ಬೀಗ ಹಾಕಿದರು. ಕಿರಣನಿಗೆ ಏನೋ ಎಡವಟ್ಟಾಗಿದೆ, ತಾನು ಮಾಡಿದ ಕೆಲಸದ ಸುಳಿವು ಅವರಿಗೆ ಸಿಕ್ಕಿರಬಹುದೆಂದು ಅಂದುಕೊಂಡು ಗಾಬರಿಯಾಗಿ ಮುದುರಿ ಕುಳಿತು ಏನು ಹೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ.

     'ಆ ಬದ್ಮಾಶ್ ಇದ್ದನೇನ್ರೋ?' ಎನ್ನುತ್ತಲೇ ಒಳಬಂದಿದ್ದ ಸಬ್ಬಿನಿಸ್ಪೆಕ್ಟರರ ಧ್ವನಿ ಕೇಳಿಯೇ ಕಿರಣ ನಡುಗಿಬಿಟ್ಟಿದ್ದ. 'ಇನ್ನು ನನ್ನ ಕಥೆ ಮುಗಿಯಿತು' ಎಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದ, 'ಈ ಕುತ್ತಿನಿಂದ ಒಮ್ಮೆ ಹೊರಬಂದರೆ ಸಾಕು. ನಾನು ಇನ್ನು ಮುಂದೆ ಯಾವ ತಪ್ಪೂ ಮಾಡುವುದಿಲ್ಲ, ದೇವರೇ ಕಾಪಾಡು'. ಪಿ.ಸಿ. ಒಬ್ಬ ಸೆಲ್ಲಿನೊಳಗಿಂದ ಕಿರಣನ ಕುತ್ತಿಗೆ ಪಟ್ಟಿ ಹಿಡಿದು ದರದರ ಎಳೆದುತಂದು ನಿಲ್ಲಿಸಿದ. ತಲೆ ತಗ್ಗಿಸಿ ನಿಂತಿದ್ದ ಕಿರಣನ ಗದ್ದವನ್ನು ಲಾಠಿಯಿಂದ ಮೇಲಕ್ಕೆತ್ತುತ್ತಾ ಸಬ್ಬಿನಿಸ್ಪೆಕ್ಟರ್ ಗದರಿಸಿದ:

"ಮಗನೇ, ಸಲೀಮನಿಗೆ ಏನು ಮಾಡಿದೆ ಹೇಳು. ನಾನು ಬಾಯಿ ಬಿಡಿಸೋ ಮುಂಚೆಯೇ ನೀನೇ ಬಾಯಿ ಬಿಟ್ಟರೆ ಬದುಕಿಕೊಳ್ತೀಯ. ಬೊಗಳು."

"ಸಾರ್, ನಾನೇನೂ ಮಾಡಿಲ್ಲ ಸಾರ್. ಭಾನುವಾರ ನಾನೂ, ಸಲೀಂ ಬೆಂಗಳೂರಿಗೆ ಹೋಗಿದ್ದೆವು. ಅವತ್ತು ಸಂಜೆಗೇ ನಾನು ವಾಪಸು ಬಂದೆ. ಅವನು ಎಂಥದೋ ಚೀಟಿ ವ್ಯವಹಾರ ಅಂತ ಇನ್ನೂ ಒಂದು ವಾರ ಇರ್ತೀನಿ ಅಂತ ಹೇಳಿದ್ದ. ಅಷ್ಟೇ ನನಗೆ ಗೊತ್ತಿರೋದು ಸಾರ್."

     ರಪ್ಪನೆ ಬೀಸಿದ ಲಾಠಿಯಿಂದ ಬಿದ್ದ ಪೆಟ್ಟಿನಿಂದ ಅವನ ಎಡತೋಳು ಮುರಿದೇಹೋಯಿತು ಎನ್ನುವಂತೆ ಆಗಿ ನೋವಿನಿಂದ ಚೀರುತ್ತಾ ಕಿರಣ ಹೇಳಿದ,

"ಪ್ಲೀಸ್ ಹೊಡೀಬೇಡಿ ಸಾರ್. ನಾನು ಹೇಳ್ತಾ ಇರೋದು ನಿಜಾ ಸಾರ್".

"ಬೆಂಗಳೂರಿಗೆ ಎಷ್ಟು ಹೊತ್ತಿಗೆ ಹೋದಿರಿ? ಏನೇನು ಮಾಡಿದಿರಿ?"

"ಸಾರ್, ಬೆಳಿಗ್ಗೆ ಹತ್ತು ಅಥವ ಹತ್ತೂವರೆ ಹೊತ್ತಿಗೆ ಅಲ್ಲಿದ್ದಿವಿ ಸಾರ್. ಒಟ್ಟಿಗೇ ತಿಂಡಿ ತಿಂದೆವು. ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಮಧ್ಯಾಹ್ನ ಸಿಗ್ತೀನಿ ಅಂತ ಹೇಳಿ ಹೋದವನು, ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಹೋಟೆಲ್ ರೂಮ್ ಹತ್ತಿರ ಬಂದೆ. ಅವನು ಮಲಗಿದ್ದ. ಸ್ವಲ್ಪ ಹೊತ್ತು ಮಾತನಾಡುತ್ತಿದ್ದು, ಅವನಿಗೆ ಹೇಳಿ ನಾನು ವಾಪಸು ಬಂದೆ. ಇಷ್ಟೇ ಸಾರ್ ನಡೆದಿದ್ದು. ನಿಮ್ಮಾಣೆ ನಿಜ ಸಾರ್."

"ನನ್ನಾಣೆ ಅಂತೀಯಾ" ಅನ್ನುತ್ತಾ ಬಿದ್ದ ಬಲವಾದ ಮತ್ತೊಂದು ಲಾಠಿ ಏಟಿನ ಪೆಟ್ಟಿಗೆ ಅಳುತ್ತಾ ಕುಕ್ಕರಿಸಿದ ಕಿರಣ.

"ಹೋಟೆಲ್ ರೂಮ್ ಬುಕ್ ಮಾಡಿದ್ದವರು ಯಾರು?"

"ಸಲೀಮನೇ ಬುಕ್ ಮಾಡಿದ್ದ ಸಾರ್. ಅವನು ಇನ್ನೂ ಕೆಲವು ದಿವಸ ಅಲ್ಲೇ ಇರುತ್ತಿದ್ದನಲ್ಲಾ, ಅದಕ್ಕೆ."

"ಸಲೀಮ ಅಲ್ಲ, ಬುಕ್ ಮಾಡಿದ್ದು ನೀನು. ಅದು ಸರಿ ರಮೇಶ ಅಂತ ಸುಳ್ಳು ಹೆಸರಿನಲ್ಲಿ ಏಕೆ ಬುಕ್ ಮಾಡಿದ್ದೆ?"

"ನಾನು ಮಾಡಿಲ್ಲ ಸಾರ್. ಸಲೀಮನೇ ಮಾಡಿದಾನೆ. ಯಾಕೆ ಬೇರೆ ಹೆಸರಿನಲ್ಲಿ ಬುಕ್ ಮಾಡಿದ ಅಂತ ಅವನನ್ನೇ ಕೇಳಬೇಕು, ಸಾರ್."

     ಇದನ್ನು ಕೇಳಿದ ಸಬ್ಬಿನಿಸ್ಪೆಕ್ಟರ್ ಎದ್ದು ಬಂದವರೇ ರಪರಪನೆ ಕಿರಣನಿಗೆ ಬಾರಿಸತೊಡಗಿದರು. "ಬದ್ಮಾಶ್, ನೀನು ಸುಲಭಕ್ಕೆ ಬಾಯಿ ಬಿಡಲ್ಲ. ನಿನಗೆ ಹೇಗೆ ಬಾಯಿ ಬಿಡಿಸಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ. ರಮೇಶ ಅನ್ನೋ ಹೆಸರಿನಲ್ಲಿ ರೂಮು ಬುಕ್ ಮಾಡಿದರೂ ರಿಜಿಸ್ಟರಿನಲ್ಲಿ ಸೈನು ಮಾಡುವಾಗ ಕಿರಣ ಅಂತ ಮರೆತು ಸೈನು ಮಾಡಿದಾಗಲೇ ನೀನು ಸಿಕ್ಕಿಬಿದ್ದೆ ಬಿಡು" ಎಂದಾಗ ಕಿರಣನ ಜಂಘಾಬಲ ಉಡುಗಿಹೋಯಿತು. 'ಬೆಳಿಗ್ಗೆ ಹೊತ್ತಿಗೆ ಎಲ್ಲಾ ಸರಿಯಾಗಿ ಹೇಳಿಬಿಡು. ನಿನ್ನಪ್ಪನ್ನ ಕೊಂದ ಪಾಪೀನೂ ನೀನೇ ಅನ್ನೋದಕ್ಕೂ ನಮಗೆ ಸಾಕ್ಷಿ ಸಿಕ್ಕಿದೆ' ಎಂಬ ಮಾತಂತೂ ಅವನನ್ನು ಪಾತಾಳಕ್ಕೆ ದೂಡಿಬಿಟ್ಟಿತ್ತು.

     ಬಿದ್ದ ಪೆಟ್ಟಿನ ನೋವುಗಳಿಂದ ರಾತ್ರಿಯೆಲ್ಲಾ ನರಳುತ್ತಾ ಇದ್ದ ಕಿರಣನಿಗೆ ನರಕದರ್ಶನವಾದಂತಾಗಿತ್ತು. ಮೈಮೇಲೆ ಅಂಡರ್ ವೇರ್ ಬಿಟ್ಟರೆ ಬೇರೆ ಬಟ್ಟೆ ಉಳಿಸಿರಲಿಲ್ಲ. ಮರುದಿನ ಬೆಳಿಗ್ಗೆ ಎಂಟು ಗಂಟೆಯ ವೇಳೆಗೇ ಸಬ್ಬಿನಿಸ್ಪೆಕ್ಟರರ ಆಗಮನವಾಯಿತು. ಕಾಲಿನ ಪಾದದ ಗೆಣ್ಣುಗಳ ಮೇಲೆ ಹೊಡೆದಿದ್ದರಿಂದ ಪಾದ ಊರಿದರೇ ಪ್ರಾಣ ಹೋಗುವಂತಾಗಿದ್ದ ಕಿರಣನನ್ನು ತಂದು ಅವರ ಮುಂದೆ ನಿಲ್ಲಿಸಿದ್ದರು. ಅಲ್ಲೇ ಬೆಂಚಿನ ಮೇಲೆ ಕುಳಿತಿದ್ದ ಶಾಕಿರಾಬಾನು ಕಿರಣನನ್ನು ಕಂಡವಳೇ ರೋಷದಿಂದ ಚಪ್ಪಲಿಯಿಂದ ಹೊಡೆಯಲು ಧಾವಿಸುತ್ತಿದ್ದಂತೆಯೇ ಇಬ್ಬರು ಮಹಿಳಾ ಪೋಲಿಸರು ಆಕೆಯನ್ನು ತಡೆದು ಕೂರಿಸಿದ್ದರು. ಶಾಕಿರಾಬಾನು ಎಲ್ಲವನ್ನೂ ಹೇಳಿಬಿಟ್ಟಳು. 'ಅಪ್ಪನನ್ನೇ ಕೊಂದ ಹರಾಮಕೋರ್ ಸಾರ್ ಇವನು. ನನ್ನ ಗಂಡನನ್ನೂ ಬಲಿ ತೆಗೆದುಕೊಂಡುಬಿಟ್ಟ' ಎಂದು ಅತ್ತಳು. ಸಲೀಮನ ಮನೆಯಲ್ಲೇ ಎಲ್ಲಾ ಮಾತುಕತೆಗಳಾಗುತ್ತಿದ್ದು, ಶಾಕಿರಾಗೆ ಎಲ್ಲವೂ ತಿಳಿದಿತ್ತು. ಸಲೀಮನೂ ಅವಳಿಗೆ ಹೇಳಿದ್ದ. ಹೀಗಾಗಿ ಸಣ್ಣಸ್ವಾಮಿಯ ಕೊಲೆ ಮಾಡಿದವನು ಕಿರಣನೇ ಎಂಬುದು ಜಾಹಿರಾಗಿಬಿಟ್ಟಿತು. 'ಇನ್ನು ಸತ್ಯ ಹೇಳದಿದ್ದರೆ ಉಳಿಗಾಲವಿಲ್ಲ'ವೆಂದುಕೊಂಡ ಕಿರಣ ಅದನ್ನು ಒಪ್ಪಿಕೊಂಡ. 'ದೇವರಂಥ ತಂದೇನ ಕೊಂದುಬಿಟ್ಟೆ ಸಾರ್. ಆ ಸಲೀಮನ ಮಾತು ಕೇಳಿ ಹಾಳಾಗಿಬಿಟ್ಟೆ. ಅವನು ಅದನ್ನೇ ನೆಪ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಾ ಹಣ ಕೀಳುತ್ತಲೇ ಹೋದ ಸಾರ್. ಅವನು ಇದ್ದರೆ ತನ್ನ ತಂದೆಯ ಕೊಲೆ ಮಾಡಿದ್ದು ತಾನೇ ಎಂದು ಯಾವತ್ತಾದರೂ ಹೊರಬರುತ್ತೆ ಅಂತ ಅವನನ್ನೂ ಮುಗಿಸಿಬಿಟ್ಟೆ ಸಾರ್'- ಕಿರಣ ಹೇಳಿದ್ದನ್ನೆಲ್ಲಾ ಧ್ವನಿಮುದ್ರಣ ಮಾಡಿಕೊಂಡದ್ದಲ್ಲದೆ, ಲಿಖಿತ ಹೇಳಿಕೆ ಸಹ ಪಡೆದರು. ಕಿರಣ ಬೆಂಗಳೂರಿನ ಹೋಟೆಲಿನಲ್ಲಿ ಮದ್ಯದಲ್ಲಿ ವಿಷ ಬೆರೆಸಿ ಅವನ ಸಾವಿಗೆ ಕಾರಣನಾಗಿದ್ದ. ಸಲೀಮನ ಕಾರಿನಿಂದಾಗಿ ಮತ್ತು ಹೋಟೆಲಿನ ರಿಜಿಸ್ಟರಿನಲ್ಲಿ ಕಿರಣ ತನ್ನ ಸಹಿಯನ್ನೇ ಮರೆತು ಮಾಡಿದ್ದರಿಂದಾಗಿ ಪೋಲಿಸರು ಸಲೀಮನ ಮನೆ ಹುಡುಕಿಕೊಂಡು ಬಂದಿದ್ದರು. ಶಾಕಿರಾಬಾನು ಕೊಟ್ಟ ಮಾಹಿತಿ ಅದುವರೆಗ ಮುಚ್ಚಿದ್ದ ರಹಸ್ಯದ ತೆರೆಯನ್ನು ಸರಿಸಿತ್ತು. ಪ್ರಾಥಮಿಕ ವಿಚಾರಣೆ ನಂತರ ಹೆಚ್ಚಿನ ವಿಚಾರಣೆಗೆ ಬೆಂಗಳೂರು ಪೋಲಿಸರು ಕಿರಣನನ್ನು ಕರೆದೊಯ್ದರು. ಸ್ಥಳೀಯ ಠಾಣೆಯಲ್ಲಿ ಸಹ ಸಣ್ಣಸ್ವಾಮಿಯ ಕೊಲೆಯ ಕಡತ ಮತ್ತೆ ಧೂಳು ಕೊಡವಿಕೊಂಡು ಮೇಲೆ ಬಂದಿತ್ತು.

* * * *

ಕೊನೆಯಲ್ಲಿ ಒಂದು ಚೂರು ಕೊಸರು:

     ಇದು ಸತ್ಯಘಟನೆಗೆ ಕೊಟ್ಟಿರುವ ಕಥೆಯ ರೂಪ. ಹೆಸರು, ಸ್ಥಳಗಳನ್ನು ಬದಲಾಯಿಸಿರುವೆ. ಕಲ್ಪನೆಯ ಎಳೆಗಳನ್ನೂ ಮೂಲಕ್ಕೆ ಧಕ್ಕೆಯಾಗದಂತೆ ಸೇರಿಸಿರುವೆ. ಕಥೆಯ ಕಿರಣ ನನ್ನ ಅಧೀನ ನೌಕರನಾಗಿದ್ದ. ಅಮಾನತ್ತಿನಲ್ಲಿದ್ದ ಗ್ರಾಮಲೆಕ್ಕಿಗ ಕಿರಣನನ್ನು ಪುನರ್ನೇಮಿಸಿ ನಾನು ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕು ಕೇಂದ್ರದಿಂದ ಐದು ಕಿ.ಮೀ. ದೂರದ ಸ್ಥಳಕ್ಕೆ ನೇಮಿಸಿ ಆದೇಶ ಬಂದಿತ್ತು. ತಾಲ್ಲೂಕಿನ ಇನ್ನೊಂದು ಹೋಬಳಿಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳು ಹೆಚ್ಚಾಗಿ ಖಾಲಿಯಿದ್ದುದರಿಂದ ಅವನನ್ನು ಆ ಹೋಬಳಿಯ ಒಂದು ವೃತ್ತಕ್ಕೆ ನಿಯೋಜಿಸಿ ಛಾರ್ಜು ವಹಿಸಿಕೊಳ್ಳಲು ಆದೇಶಿಸಿದ್ದೆ ಮತ್ತು ಅದನ್ನು ಸ್ಥಿರೀಕರಿಸಲು ಜಿಲ್ಲಾಧಿಕಾರಿಯವರಿಗೆ ಬರೆದಿದ್ದೆ. ಆ ವೃತ್ತ ತಾಲ್ಲೂಕು ಕೇಂದ್ರದಿಂದ ಸುಮಾರು ೩೦ ಕಿ.ಮೀ. ದೂರದಲ್ಲಿತ್ತು. ಅಂದು ಮಧ್ಯಾಹ್ನವೇ ಜಿಲ್ಲಾ ಕೇಂದ್ರದಿಂದ ರಾಜ್ಯಮಟ್ಟದ ಪ್ರಭಾವಿ ರಾಜಕಾರಣಿಯವರು ದೂರವಾಣಿ ಮೂಲಕ ನನ್ನ ಕ್ರಮದ ಬಗ್ಗೆ ಆಕ್ಷೇಪಿಸಿ, ತಾವೇ ಅವನನ್ನು ಮೊದಲಿದ್ದ ಸ್ಥಳಕ್ಕೆ ಹಾಕಿಸಿದ್ದಾಗಿಯೂ, ಕೂಡಲೇ ಅವನನ್ನು ಅದೇ ಸ್ಥಳಕ್ಕೆ ಕೆಲಸಕ್ಕೆ ಹಾಕಬೇಕೆಂದೂ ಒಂದು ರೀತಿಯ ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದರು. ನಾನು, 'ಅವರ ಮಾತಿನಂತೆಯೇ ಆತನನ್ನು ಈಗಲೇ ಆ ಸ್ಥಳಕ್ಕೆ ಮತ್ತೆ ಹಾಕಿದರೆ ಆಡಳಿತದಲ್ಲಿ ಬಿಗಿ ಹೊರಟುಹೋಗುತ್ತದೆ, ಅಧೀನ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಲಿ. ಆಮೇಲೆ ತಮ್ಮ ಮಾತಿನಂತೆಯೇ ಅವನನ್ನು ಅದೇ ಸ್ಥಳಕ್ಕೆ ನಿಯೋಜಿಸುತ್ತೇನೆ' ಎಂದು ಅವರನ್ನು ಒಪ್ಪಿಸಿದ್ದೆ. ಮರುದಿನ ಸ್ಥಳೀಯ ಪುರಸಭೆ ಕೌನ್ಸಿಲರರು ಒಂದು ಹಿಂಡು ಜನರೊಂದಿಗೆ ನನ್ನ ಛೇಂಬರಿಗೆ ಬಂದು ಗ್ರಾಮಲೆಕ್ಕಿಗನನ್ನು ದೂರದ ಸ್ಥಳಕ್ಕೆ ಹಾಕಬಾರದೆಂದು ಗಲಾಟೆ ಮಾಡಿದ್ದರು. ಅವರೂ ಹಿರಿಯ ರಾಜಕಾರಣಿಯ ಕುಮ್ಮಕ್ಕಿನಿಂದಲೇ ಬಂದಿದ್ದವರೆಂದು ತಿಳಿಯಲು ಕಷ್ಟವೇನಿರಲಿಲ್ಲ. ಅವರನ್ನು ಗದರಿಸಿ ಕಳುಹಿಸಿದ್ದೆ. ಅವರು ಹೋದ ನಂತರ ಮತ್ತೆ ಆ ಹಿರಿಯ ರಾಜಕಾರಣಿಗೆ ಫೋನು ಮಾಡಿ, 'ಒಂದೆರಡು ತಿಂಗಳ ನಂತರ ಅವನನ್ನು ಮತ್ತೆ ಮೊದಲಿದ್ದ ಸ್ಥಳಕ್ಕೆ ಖಂಡಿತಾ ಹಾಕುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು' ಕೋರಿದ ಮೇಲೆ ಅವರು ಸುಮ್ಮನಾಗಿದ್ದರು. ಇದಾಗಿ ಒಂದೆರಡು ತಿಂಗಳ ನಂತರದಲ್ಲಿ ಸ್ನೇಹಿತನ ಕೊಲೆ ಮಾಡಿ ಸಿಕ್ಕಿಬಿದ್ದಿದ್ದ ಕಿರಣನಿಗೆ ಮೊದಲು ನೇಮಕವಾಗಿದ್ದ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶವಾಗಲೇ ಇಲ್ಲ. ನನಗೂ ತದನಂತರದ ಒಂದೆರಡು ತಿಂಗಳಲ್ಲಿ ಆ ತಾಲ್ಲೂಕಿನಿಂದ ಎತ್ತಂಗಡಿಯಾಗಿತ್ತು.

-ಕ.ವೆಂ.ನಾಗರಾಜ್.

 

Comments

Submitted by nageshamysore Fri, 04/25/2014 - 18:48

ಕವಿಗಳೇ ಎಂತಹ ಚಾಣಾಕ್ಷ್ಯ ಕೊಲೆಗಾರನೂ ಏನಾದರೂ ತಪ್ಪು ಮಾಡಿ ಸಿಕ್ಕಿಬೀಳುತ್ತಾನೆನ್ನುವುದು ಇಲ್ಲೂ ನಿಜವಾಯ್ತು. ಆದರೆ ಇದು ಬರಿಯ ಕಥೆಯಲ್ಲ, ಸತ್ಯ ಕಥೆ ಅನ್ನುವುದು ಮಾತ್ರ ಖೇದಕರ :-(

Submitted by kavinagaraj Sat, 04/26/2014 - 12:19

In reply to by nageshamysore

ನಿಜ, ನಾಗೇಶರೇ. ಅದಕ್ಕಾಗಿಯೇ 'ಉಪ್ಪು ತಿಂದ ಮೇಲೆ' ಎಂಬ ಶೀರ್ಷಿಕೆ ಕೊಟ್ಟದ್ದು. ನಿಜ ಕಥಾನಾಯಕನನ್ನು ಕಂಡರೆ ಕೊಲೆಗಾರನಂತೆ ಕಾಣುತ್ತಿರಲಿಲ್ಲ, ಒಬ್ಬ ಅಮಾಯಕನಂತೆ ತೋರುತ್ತಿದ್ದ!

Submitted by ಗಣೇಶ Mon, 04/28/2014 - 00:08

ಅಂತೂ ನೀರು ಕುಡಿದ.. ಜೈಲಲ್ಲೇ ಕುಳಿತು ರಾಜಕಾರಣಿ ಮೇಲೆ ಪ್ರಭಾವ ಬೀರಿ ತಮ್ಮನ್ನ ಎತ್ತಂಗಡಿ ಮಾಡಿಸಿರಬಹುದೇ?:)

Submitted by kavinagaraj Mon, 04/28/2014 - 14:20

In reply to by ಗಣೇಶ

ಧನ್ಯವಾದ, ಗಣೇಶರೇ. ಪಾಪ, ನನ್ನ ವರ್ಗಾವನೆಯಲ್ಲಿ ಕಿರಣನ ಪಾತ್ರವಿರಲಿಲ್ಲ. ಅವನದೇ ಅವನಿಗೆ ಸಾಕಾಗಿತ್ತು. ತನ್ನ ಮಾತು ಕೇಳದ ಅಧಿಕಾರಿಗಳನ್ನು ರಾಜಕಾರಣಿಗಳು ಇಷ್ಟಪಡುವುದಿಲ್ಲ. ಹಾಗಾಗಿ ನನ್ನ ವರ್ಗಾವಣೆಯಾಗಿತ್ತು!

Submitted by H A Patil Mon, 04/28/2014 - 11:31

ಕವಿ ನಾಗರಾಜ ರವರಿಗೆ ವಂದನೆಗಳು
ಉಪ್ಪು ತಿಂದ ಮೇಲೆ ತಾವು ಬರೆದ ಕಥೆ ತುಂಬಾ ರೋಚಕವಾಗಿದೆ ಜೊತೆಗೆ ವಾಸ್ತವಿಕತೆಯನ್ನು ಬಿಂಬಿಸುವಂತಹುದು. ಕಥಾ ನಿರೂಪಣೆ ಓದುಗನ ಆಸಕ್ತಿಯನ್ನು ಉದ್ದೀಪಿಸುವಂತಿದೆ. ನಿಮ್ಮ ನೈಜ ಅನುಭವಗಳನ್ನು ದಾಖಲಿಸುವಾಗ ನಿಮ್ಮ ಬರವಣಿಗೆಗೆ ಒಂದು ವಿಶೇಷತೆ ಮತ್ತು ಗಹನತೆ ಬರುತ್ತದೆ. ಕಣ್ಣಿನ ಆಪರೇಶನ್ ನಿಮಿತ್ತ ಒಂದೂವರೆ ತಿಂಗಳಿಂದ ಸಂಪದಕ್ಕೆ ಬರಲಾಗಿರಲಿಲ್ಲ, ಉತ್ತಮ ಕಥಾನಕ ನೀಡಿದ್ದೀರಿ ಧನ್ಯವಾದಗಳು.

Submitted by H A Patil Mon, 04/28/2014 - 11:31

ಕವಿ ನಾಗರಾಜ ರವರಿಗೆ ವಂದನೆಗಳು
ಉಪ್ಪು ತಿಂದ ಮೇಲೆ ತಾವು ಬರೆದ ಕಥೆ ತುಂಬಾ ರೋಚಕವಾಗಿದೆ ಜೊತೆಗೆ ವಾಸ್ತವಿಕತೆಯನ್ನು ಬಿಂಬಿಸುವಂತಹುದು. ಕಥಾ ನಿರೂಪಣೆ ಓದುಗನ ಆಸಕ್ತಿಯನ್ನು ಉದ್ದೀಪಿಸುವಂತಿದೆ. ನಿಮ್ಮ ನೈಜ ಅನುಭವಗಳನ್ನು ದಾಖಲಿಸುವಾಗ ನಿಮ್ಮ ಬರವಣಿಗೆಗೆ ಒಂದು ವಿಶೇಷತೆ ಮತ್ತು ಗಹನತೆ ಬರುತ್ತದೆ. ಕಣ್ಣಿನ ಆಪರೇಶನ್ ನಿಮಿತ್ತ ಒಂದೂವರೆ ತಿಂಗಳಿಂದ ಸಂಪದಕ್ಕೆ ಬರಲಾಗಿರಲಿಲ್ಲ, ಉತ್ತಮ ಕಥಾನಕ ನೀಡಿದ್ದೀರಿ ಧನ್ಯವಾದಗಳು.