ಎರಡು ಆಷಾಡ ಗೀತೆಗಳು

ಎರಡು ಆಷಾಡ ಗೀತೆಗಳು

ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾಲಿಸುವವರಿಗೆ), ಮತ್ತಲವರಿಗೆ ಅದೆ ಆಷಾಡದ ಅಮಾವಾಸೆಯಲ್ಲಿ ಗಂಡನ ಪೂಜೆಯಾಗಿ ಅವತರಿಸಿ (ಭೀಮನ ಅಮಾವಾಸೆ) ಕಟ್ಟುನಿಟ್ಟಿನ ವ್ರತವಾಗಿಬಿಡುತ್ತದೆ - ಮೊದಲ ಆಷಾಡದ ವಿರಹದ ನೋವನ್ನು ಮತ್ತೆಂದು ನೋಡದಿರಲು ಜೀವನವಿಡಿ ವ್ರತವಿಡಿದವರ ಹಾಗೆ. ಇಲ್ಲಿ ಆಷಾಡದ ಒಂದು ಮುಖವನ್ನು ಕೆಳಗಿನ ಎರಡು ಕವನಗಳ ಮೂಲಕ ತೋರುವ ಯತ್ನ.

ನಮ್ಮ ಸಂಪ್ರದಾಯದ ಮದುವೆಗಳಲ್ಲಿ ಒಂದು ಸರ್ವೆ ಸಾಧಾರಣ ಶಾಸ್ತ್ರ ಪದ್ದತಿ - ಆಷಾಡದಲಿ ನವ ದಂಪತಿಗಳನ್ನು ಬೇರ್ಪಡಿಸಿ ವಿರಹದ ರುಚಿ ತೋರಿಸುವ, ತನ್ಮೂಲಕ ಮನಸುಗಳನ್ನು ಹತ್ತಿರಕೆ ಬೆಸೆಯುವ ಹವಣಿಕೆಯ ಹುನ್ನಾರ. ಇದೀಗ ತಾನೆ ಒಟ್ಟಾದಂತೆ ಕಂಡ ಗಳಿಗೆಯಲ್ಲೆ ದೂರವಿರಬೇಕಾದ ಅನಿವಾರ್ಯತೆಯನ್ನು ಶಪಿಸುವ ದೂಷಿಸುವ ಜೋಡಿಗಳನ್ನು ಕಂಡೂ ನಗುವ ಮುಗುದೆ ಆಷಾಡ ಆದರೂ ಸಡಿಲ ಬಿಡದೆ ಬಿಗಿದ ಮನ ಹಾಗೆ ಹಿಡಿದು ಕಾಡುವ ಪರಿ, 'ಆಷಾಡದ ಮುಗುದೆ ಮನವೇಕೊ ಬಿಗಿದೆ' ಕವನದ ಸಾರಾಂಶ.

1. ಆಷಾಡದ ಮುಗುದೆ ಮನವೇಕೊ ಬಿಗಿದೆ...!
____________________________

ಮದುವೆ ಜೀವನದ ಘಟನ
ಬಾಳಿನ ಪೂರ ಪರ್ಯಟನ 
ಘಟಿಸಿದ ಪ್ರೀತಿಯ ಚಿಗುರು 
ವೃದ್ಧಿಸೆ ನಟಿಸುವರೆ ಒಗರು!

ಆಷಾಡಕೆ ಮಾಸದ ಪ್ರವರ 
ಜಿನುಗುತ ಜಿಟಿಪಿಟಿ ಪ್ರಖರ  
ಮಳೆಗೆ ಭಾವನೆಯ ಚಾದರ
ಹನಿಸಿಕೆ ವಿರಹಕಿಟ್ಟ ಸದರ!

ಎರಡು ಜೀವ ಬೆಸೆದರೂ 
ಹುಟ್ಟದು ಮನದಿ ಖದರು
ಎಬ್ಬಿಸಿ ಅಡ್ಡಗೋಡೆ ಹುಸಿ 
ಹುಟ್ಟು ಹಾಕುತ ಕಸಿವಿಸಿ!

ದೂರಕೆ ಕಳಿಸಿದ ಪ್ರೀತಿಗೆ 
ಕಳವಳಿಸಿ ಗೊತ್ತೆ ಪ್ರೇಮಕೆ?
ರಸಿಕತೆಗೆ ರಚ್ಚೆ ಪ್ರಣಯಕೆ
ವಿನೋದಿನಿ ಹಚ್ಚೆ ಬಯಕೆ!

ರಾತ್ರಿ ತಿಳಿಯಾಗಲೆ ಇಲ್ಲ 
ಕಷ್ಟತಮ ಅರಿತವನೆ ಬಲ್ಲ
ಜೊತೆಗೆ ಕಳೆದದ್ದೆ ಕ್ಷಣಿಕತೆ 
ಆಗಲೆ ಬರಬೇಕೆ ವಿರಹತೆ!

ಆಷಾಡದ ದೂರವಿಡುವ ಸಂಪ್ರದಾಯದ ಹಿನ್ನಲೆಯತ್ತ ನೋಟ ಹಾಯಿಸುತ್ತ ಅದು ಹೇಗೆ ಮುಂದಿನ ಭವಿಷ್ಯ ಜೀವನದ ಬುನಾದಿ ಹಾಕಿ, ಮಾನಸಿಕ ಪ್ರಬುದ್ದತೆಯನ್ನು ಹಿಗ್ಗಿಸಿ, ಸಾಂಸಾರಿಕ ಪ್ರಪಂಚದಲ್ಲಿ ಈಜಿ ಜಯಿಸುವ ಸಿದ್ದತೆಗೆ ಅಣಿಮಾಡಿಸುವುದೆಂಬ ವಿವರ  'ಕಳಚಿ ಆಷಾಡದ ಮುಖವಾಡ...'

2. ಕಳಚಿ ಆಷಾಡದ ಮುಖವಾಡ...!
______________________

ಪದರ ಕಳಚುತ ಪ್ರಣಯ 
ಶಿಖರ ಪ್ರೀತಿಯ ಸಮಯ 
ಅಂತರ ಕಾಡುತ ಜಿಗುಟಿ
ಮಾಡಿಸೆ ಮನಪ್ರೀತಿ ಗಟ್ಟಿ!

ಆಷಾಡೆ ಏನಲ್ಲ ಮುಗುದೆ 
ಸಂಕಟ ನೋವೆಲ್ಲ ತಿಳಿದೆ
ಹಚ್ಚುವ ಮನದ ಮತಾಪು
ಮಾಗಿಸಲೆ ಬಿಸಿ ಹುರುಪು!

ಕೈಯಿನಲಿರುವ ಸಂಪತ್ತು 
ಎದುರಿದ್ದರೆ ಸದಾ ಹೊತ್ತು 
ಬೆಲೆ ಗೊತ್ತಾಗದ ಸವಲತ್ತು 
ಮನದೂರವಿಕ್ಕೆ ಮಸಲತ್ತು!

ಬೇಕೆಲ್ಲರಿಗು ಸ್ವಂತಕೆ ತಾಣ
ತಾಣಕೊಪ್ಪೊತರ ಕಟ್ಟೋಣ
ಮಾಡುಮಹಲಿನ ನಿರ್ಮಾಣ

Comments

Submitted by nageshamysore Tue, 07/30/2013 - 16:56

ಸಂಪದಿಗರೆ, ಕಣ್ತಪ್ಪಿನಿಂದಾಗಿ ಕೊನೆಯ ಎರಡು ಪಂಕ್ತಿ ಪೂರ್ತಿ ಪ್ರಕಟವಾಗಿಲ್ಲ. ಅದನ್ನಿಲ್ಲಿ ಸೇರಿಸುತ್ತಿದ್ದೇನೆ. ಸಾಧ್ಯವಾಗುವುದಾದರೆ ಇದನ್ನು ಮೂಲ ಕವನದ ಜತೆಗೆ ಸೇರಿಸಲು ಸಂಪದ ನಿರ್ವಾಹಕರಿಗೆ ಪ್ರಾರ್ಥನೆ - ನಾಗೇಶ ಮೈಸೂರು

ಬೇಕೆಲ್ಲರಿಗು ಸ್ವಂತಕೆ ತಾಣ ತಾಣಕೊಪ್ಪೊತರ ಕಟ್ಟೋಣ ಮಾಡುಮಹಲಿನ ನಿರ್ಮಾಣ ಈದೂರ ತಾನೆ ಕೊಡೆ ತ್ರಾಣ!

ಕಾಲ ನಿರಂತರತೆ ಸದ್ಭಾವನೆ ತನುಮನ ಮಾಗಿ ಉದ್ಘಾಟನೆ ಮನಕಾಮನೆ ಜಯಿಸೆ ಬಾಳು ಹುಟ್ಟಿದವು ಆಷಾಡ ಗೀತೆಗಳು!

Submitted by nageshamysore Tue, 07/30/2013 - 16:58

In reply to by nageshamysore

ಯಾಕೊ ಸಾಲುಗಳು ಮತ್ತೆ ಮಿಶ್ರಣ...ಅದಕ್ಕೆ ಮರುಪ್ರಯತ್ನ ಬೇಕೆಲ್ಲರಿಗು ಸ್ವಂತಕೆ ತಾಣ, ತಾಣಕೊಪ್ಪೊತರ ಕಟ್ಟೋಣ, ಮಾಡುಮಹಲಿನ ನಿರ್ಮಾಣ, ಈದೂರ ತಾನೆ ಕೊಡೆ ತ್ರಾಣ! ಕಾಲ ನಿರಂತರತೆ ಸದ್ಭಾವನೆ, ತನುಮನ ಮಾಗಿ ಉದ್ಘಾಟನೆ, ಮನಕಾಮನೆ ಜಯಿಸೆ ಬಾಳು, ಹುಟ್ಟಿದವು ಆಷಾಡ ಗೀತೆಗಳು!
Submitted by gopinatha Tue, 07/30/2013 - 19:16

In reply to by nageshamysore

ನಾಗೇಶರೇ ನಮ್ಮ ಹಿಂದಿನವರ ಪದ್ಧತಿಗಳಿಗೆ ಅದರದ್ದೇ ಆದ ಒಂದು ಶಾಸ್ತ್ರವಿದೆ, ಈಗಿನವರು ಏನೇ ಹೇಳಲಿ ಆ ಶಾಸ್ತ್ರಕ್ಕೆ ವಿಜ್ಜಾನದ ಆದಾರವೂ ಇದೆ ಅಂತ ಗೊತ್ತಾಗುತ್ತದೆ. ಆಷಾಡದ ವಿರಹ, ಉದ್ದೇಶ ಹಾರೈಕೆಗಳನ್ನೊಳಗೊಂಡ ನಿಮ್ಮ ಕವನ ಅದೇ ಬಾವನೆಗಳ ಸಮ್ಮಿಲಿತವಾಗಿದೆ. ತುಂಬಾ ತುಂಬಾ ನನ್ನಿ
Submitted by nageshamysore Thu, 08/01/2013 - 01:13

In reply to by gopinatha

ಗೋಪಿನಾಥರೆ ನಿಮ್ಮ ಮಾತು ನಿಜ - ಸಂಪ್ರದಾಯದ ಎಷ್ಟೊ ಆಚರಣೆಗಳ ಆಳ ಹೊಕ್ಕು ನೋಡಿದರೆ ಮೂಲ ಸದುದ್ದೇಶ ಅರ್ಥಪೂರ್ಣವಾಗಿರುತ್ತದೆ ಮತ್ತು ಒಂದು ರೀತಿ ವೈಜ್ಞಾನಿಕ ಸಹ ( ಉದಾಹರಣೆಗೆ ಸಂಕ್ರಾಂತಿಗೆ ಎಳ್ಳು, ಬೆಲ್ಲ ಇತ್ಯಾದಿ ಕೊಬ್ಬಿನಂಶ ಹೆಚ್ಚಿರುವ ತಿಂಡಿ ಹಂಚಿ ತಿನ್ನುವ ಪರಿಪಾಠ - ಚಳಿಗಾಲದಲಿ ಬೆಚ್ಚಗಿರಿಸಲು ದೇಹಕ್ಕೆ ಹೆಚ್ಚು ಕೊಬ್ಬಿನ ಅಗತ್ಯವಿರುತ್ತದೆ, ಅದನ್ನು ಸಂಕ್ರಾಂತಿಯ ಮೂಲಕ ಸಂಪ್ರದಾಯಕವಾಗಿಸಿರುವ ಜಾಣತನ). ಆ ಸಂಪ್ರದಾಯದ ಜಾಣತನವನ್ನು ಆಷಾಡದಲ್ಲು ಹಿಡಿದಿಡುವ ಪ್ರಯತ್ನ ನಿಮಗೆ ಮೆಚ್ಚುಗೆಯಾದದ್ದಕ್ಕೆ ನನ್ನಿ :-)