ಏಳ್ನೀರಿನ ಏಳುಬೀಳು

ಏಳ್ನೀರಿನ ಏಳುಬೀಳು

ಬೆಳ್ತಂಗಡಿಯ ತಹಸೀಲ್ದಾರರು ಒಮ್ಮೆ ಕೇಳಿದರು. "ಏಳ್ನೀರಿಗೆ ಬರುತ್ತೀರಾ" ಅಂತ. "ಏನು ವಿಶೇಷ" ಅಂದೆ. "ಅದೊಂದು ತ್ರಿಶಂಕು ಸ್ವರ್ಗ" ಎಂದರು!
 
ಒಂದು ರೀತಿಯಲ್ಲಿ ಅದು ಸ್ವರ್ಗವೇ. ಎಲ್ಲಿ ನೋಡಿದರೂ ಹಸಿರಿನ ಕಣಿವೆಗಳು. ಜಾರಿ ಜಾರಿ ಬೀಳುವ ಜಲಧಾರೆಗಳು. ಘಟ್ಟಗಳ ಎತ್ತರ ಗೊತ್ತಾಗದೇ ಹಾದು, ಢಿಕ್ಕಿ ಹೊಡೆದು ಚಲ್ಲಾಪಿಲ್ಲಿಯಾಗಿ ಚದುರಿದ ಮೋಡಗಳು ಸೃಷ್ಟಿಸಿದ ಸುಂದರ ಲೋಕ. ಫಲವತ್ತಾದ ಬತ್ತದ ಗದ್ದೆ-ಅಡಿಕೆ ತೋಟ. ನಡುವೆ ಒಂದೊಂದು ಮನೆ. ಇಷ್ಟು ಬಿಟ್ಟರೆ ಕಾಡು- ಕಾಡು- ಕಾಡು. ಮಾಲಿನ್ಯದಿಂದ ಕಾಟ- ಜಗತ್ತಿನ ಜಂಜಾಟಗಳಿಂದ ದೂರವಿರುವ ಪ್ರಶಾಂತ ಪ್ರದೇಶ.
 
ಆದರೆ ಇದನ್ನೇ ಸ್ವರ್ಗವೆಂದರೆ ಅಲ್ಲಿಯ ಜನ ತಕ್ಷಣ ಪ್ರತಿಕ್ರಿಯಿಸುತ್ತಾರೆ- "ದೂರದ ಬೆಟ್ಟ ನುಣ್ಣಗೆ ಸ್ವಾಮೀ. ಬಿಟ್ಟು ಓಡಲು ಗತಿಯಿಲ್ಲ. ಅದಕ್ಕೇ ಇಲ್ಲಿ ಜನ ಬದುಕಿದ್ದಾರೆ. ಇಲ್ಲವಾದರೆ ಯಾರೂ ಇಲ್ಲಿರುತ್ತಿರಲಿಲ್ಲ!"
 
ಅದು ಏಳ್ನೀರು ಎಂಬ ಹಳ್ಳಿ. ಈ ಊರಿಗೆ ಏಳು ಕಡೆಯಿಂದ ನೀರು ಹರಿಯುವುದಂತೆ. ಅದಕ್ಕೇ ಏಳ್ನೀರು ಎಂದು ಹೆಸರಾದದ್ದು. ಇದು ಘಟ್ಟದ ಮೇಲಿನ ಊರು ಅಲ್ಲ, ಘಟ್ಟದ ಕೆಳಗಿನ ಊರು ಅಲ್ಲ. ಪಶ್ಚಿಮ ಘಟ್ಟಗಳ ಮಧ್ಯೆ ಹುಟ್ಟಿಕೊಂಡಿದ್ದು. ಭೌಗೋಳಿಕವಾಗಿ ಘಟ್ಟದ ಮೇಲೇ ಇದ್ದು ಚಿಕ್ಕಮಗಳೂರು ಜಿಲ್ಲೆಗೆ ಸೇರಬೇಕಾದ್ದು ನ್ಯಾಯವಾದರೂ ಈ ಭಾಗದಿಂದ ಹರಿವ ನೀರು ನೇತ್ರಾವತಿಗೆ ಹೋಗಿ ಸೇರುವುದರಿಂದ "ಗಡಿ" ನಿಗದಿ ಮಾಡುವಾಗ ದಕ್ಷಿಣ ಕನ್ನಡಕ್ಕೆ ಸೇರಿಕೊಂಡಿತು.
 
ಹೀಗಾಗಿ ಏಳ್ನೀರು ಬೆಳ್ತಂಗಡಿ ತಾಲೂಕಿಗೆ ಸೇರಿದ್ದು ಮಿತ್ತಬಾಗಿಲು ಮಂಡಳದ ಒಂದು ಅಂಗ. ಆದರೆ ಮಂಡಳದ ಕಾರ್ಯಾಲಯವಾದ ದಿಡುಪೆಯಿಂದ ಇಲ್ಲಿಗೆ ಹೋಗಬೇಕಾದರೆ 10 ಕಿಲೋಮೀಡರು ಘಟ್ಟ ಹತ್ತಬೇಕು. ಅಥವಾ ಬೆಳ್ತಂಗಡಿಯಿಂದ ಗುರುವಾಯನಕೆರೆ-ಕಾರ್ಕಳ-ಕುದುರೆಮುಖ ಮಾರ್ಗವಾಗಿ 90 ಕಿ.ಮೀ. ದೂರದ ಸಂಸೆಗೆ ಬಂದು ಮತ್ತೆ ಮೂರು ಕಿ.ಮೀ. ನಡೆಯಬೇಕು. ಮಳೆಗಾಲದಲ್ಲಂತೂ ಏಳ್ನೀರಿನ ಜನರಿಗೆ ಮಂಡಳ ಕಚೇರಿಗೆ ಹೋಗಲು "ಕೊಂಕಣಾ ಸುತ್ತಿ" ಹೋಗುವುದು ಅನಿವಾರ್ಯ!
 
ಏಳ್ನೀರು ಗ್ರಾಮದಲ್ಲಿ ಒಟ್ಟು ಇರುವ ಮನೆಗಳು ಬರೇ 27. ಜನಸಂಖ್ಯೆ ಸುಮಾರು 500 ಮಾತ್ರ. ಗೌಡರು, ಜೈನರು ಈ ಎರಡೇ ಪಂಗಡಗಳವರು ಇಲ್ಲಿರೋದು. ಇಲ್ಲಿ ಪ್ರಾಥಮಿಕ ಶಾಲೆಯಿದೆ. ಒಂದರಿಂದ ಏಳರವರೆಗೆ ಬರೇ 12 ಜನ ಮಕ್ಕಳಿದ್ದಾರೆ. ಒಬ್ಬರು ಶಿಕ್ಷಕರಿದ್ದು ಅವರು ನಾಲ್ಕು ಕಿ.ಮೀ. ದೂರದ ಸಂಸೆಯಲ್ಲಿ ಉಳಿದು, ಬುತ್ತಿಯೊಡನೆ ದಿನಾ ಶಾಲೆಗೆ ಬರಬೇಕು. ಕಾಡಿನ ನಡುವೆ ಗುಡ್ಡದ ಮೇಲೆ ಇರುವ ಶಾಲೆಯ ಹತ್ತಿರ ಕುಡಿಯಲು ಒಂದು ತೊಟ್ಟು ನೀರು ಕೊಡುವವರೂ ಯಾರೂ ಇಲ್ಲ. ಇಂಥಾ ಕೊಂಪೆಯಲ್ಲಿ ಕಲಿಸುವ ಕಷ್ಟದ ಬಗ್ಗೆ ಮಾತನಾಡುವಾಗ "ಹೊಟ್ಟೆ ಪಾಡಲ್ವ ಸಾರ್" ಎಂದು ಶಿಕ್ಷಕರು ವಿಷಾದದಿಂದ ನಕ್ಕರು.
 
ಈ ಮಳೆಗಾಲದಲ್ಲಿ ಬೆಳ್ತಂಗಡಿಯ ತಹಸೀಲ್ದಾರ ಚೆನ್ನಗಂಗಪ್ಪನವರು ಜಾರುತ್ತಾ ಬೀಳುತ್ತಾ ಈ ಹಳ್ಳಿ ತಲುಪಿದರು. ಇಲ್ಲಿಗೆ ಬಂದ ಮೊದಲ ತಹಸೀಲ್ದಾರರು ಅವರೇ. ಯಾಕೆಂದರೆ 180 ಕಿ.ಮೀ. ಜೀಪಿನಲ್ಲಿ ಹೋದರೂ ಕನಿಷ್ಠ ಎಂಟು ಕಿ.ಮೀ. ಏಳ್ನೀರಿಗೆ ಹೋದವರೆಲ್ಲ ನಡೆಯಲೇಬೇಕು. ವರ್ಷದಲ್ಲಿ ಆರು ತಿಂಗಳು ಈ ಊರು ಜಿಗಣಿಗಳ ರಾಜ್ಯ. ಹೀಗಾಗಿ ಏಳ್ನೀರಿಗೆ ನಡೆದುಕೊಂಡು ಹೋಗಲು ಈವರೆಗಿನ ತಹಸೀಲ್ದಾರರು ಧೈರ್ಯ ಮಾಡಿರಲಿಲ್ಲ. ಜನ ಮಾತ್ರ ಹೇಗೋ ಕಷ್ಟಪಟ್ಟು ಆಫೀಸು ಕೆಲಸಕ್ಕೆ ಬೆಳ್ತಂಗಡಿವರೆಗೆ ಬರುತ್ತಿದ್ದರು.
 
ಶಾಲೆ ಬಿಟ್ಟರೆ ಏಳ್ನೀರಿಗೆ ಬೇರಾವುದೇ ನಾಗರೀಕ ಸೌಲಭ್ಯ ದಕ್ಕಿಲ್ಲ. ಏನಾಗಬೇಕಾದರೂ ರಸ್ತೆ ಬೇಕು. ಬರೇ 500 ಜನರಿರುವ ಈ ಕೊಳ್ಳಕ್ಕೆ ರಸ್ತೆ ಮಾಡುವುದೂ ಸುಲಭವಲ್ಲ. ಮತ್ತು ರಸ್ತೆ ಮಾಡಿದರೆ ಈಗಲೇ ನಿಧಾನ ಮರೆಯಾಗುತ್ತಿರುವ ಇಲ್ಲಿಯ ದಟ್ಟ ಅಡವಿ ಮಾಯವಾದಿತೋ ಎಂಬ ಸಂಶಯ.
 
ಆದರೆ ಒಂದು ಹಿಡಿ ಉಪ್ಪು ಬೇಕಾದರೂ ಆರೆಂಟು ಕಿ.ಮೀ. ನಡೆಯಬೇಕಾದ, ಹುಷಾರಿಲ್ಲದಿದ್ದರೆ ಕಂಬಳಿಯಲ್ಲಿ ಕಟ್ಟಿ ಹೊರಬೇಕಾದ, ಈ ಜನರ ಕಷ್ಟ ಕಂಡರೆ ಮರುಕವಾಗುತ್ತದೆ. ಮೂಲತಃ ಸಂಪರ್ಕವೇ ಕಷ್ಟವಾದ ಬೆಳ್ತಂಗಡಿಗೆ ಈ ಊರನ್ನು ಸೇರಿಸಿದ್ದು ಅನ್ಯಾಯ. ಏಳ್ನೀರಿಗೆ ಅಧಿಕಾರಶಾಹಿ ಸ್ವಲ್ಪ ಸಹಾಯ ಮಾಡಬಹುದಾದರೆ ಈ ಊರನ್ನು ಸಂಸೆ ಮಂಡಳಕ್ಕೆ ಸೇರಿಸುವುದು ಯೋಗ್ಯವಾಗಿದೆ.
 
ಇಲ್ಲವಾದರೆ ಏಳ್ನೀರಿಗೆ ತ್ರಿಶಂಕು ಸ್ಥಿತಿಯೇ ಗತಿ.
 
(ಚಿತ್ರ ಕೃಪೆ: ಗೂಗಲ್)
(ಲೇಖನ ಬರೆದ ವರ್ಷ- 1991)