ಒಂದು ಅನುಭವ

ಒಂದು ಅನುಭವ

ಒಂದು ಅನುಭವ. ..

ನಾನು ಮತ್ತು ನನ್ನ ನಾಲ್ವರು ಗೆಳೆಯರು ಉತ್ತರ ಕರ್ನಾಟಕದ ಒಂದು ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು.ಉತ್ತರ ಕರ್ನಾಟಕ ಮೈದಾನ ಪ್ರದೇಶ. ದೃಷ್ಟಿ ಹಾಯಿಸಿದಷ್ಟು ದೂರ ಸಮತಟ್ಟಾದ ಭೂಮಿ.ಸ್ವಲ್ಪ ಎತ್ತರದಿಂದ ನೋಡಿದರೆ ರಸ್ತೆಗಳು ನೆಲದ ಮೇಲೆ ಗೆರೆ ಎಳೆದಂತೆ ಭಾಸವಾಗುತ್ತದೆ.ಕಾಲವನ್ನು ತಡೆಯೋರು ಯಾರು ಇಲ್ಲ ಅಂತಾರೆ.ಇಲ್ಲಿ ಗಾಳಿಯನ್ನು ತಡೆಯಲು ಏನು ಇಲ್ಲ.ಅಲ್ಲೊಂದು ಇಲ್ಲೊಂದು ಬೆಟ್ಟಗಳಿದ್ದರು ವಾಯುವಿನ ಪ್ರತಾಪದೆದುರು ಅದು ಕುಬ್ಜವಾಗಿದೆ.ಹಾಗೆ ರಸ್ತೆಯಲ್ಲಿ ಮುಂದೆ ಸಾಗಬೇಕಾದರೆ ಒಂದು ಸೈಕಲ್ ರಸ್ತೆಯ ಪಕ್ಕದಲ್ಲಿ ಅಂಗಾತ ಬಿದ್ದುಕೊಂಡಿತ್ತು.ಅದನ್ನು ನೋಡಿದಾಕ್ಷಣ ನನ್ನ ಗೆಳೆಯನೊಬ್ಬನಿಗೆ ತನ್ನ ಅಂತರಾಳದಲ್ಲಿ ಅಡಗಿದ್ದ ಪರೋಪಕಾರಿ ಪ್ರಜ್ಞೆ ಜಾಗೃತವಾಯಿತು.ಗಾಳಿಗೆ ಬಿದ್ದಿರಬೇಕೆಂದು ಅಂದುಕೊಂಡು ತಕ್ಷಣ ಅವನು ಸೈಕಲ್ ಅನ್ನು ಎತ್ತಿ ಬಿಗಿಯಾಗಿ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ.ಅ ಕೆಲಸ ಮುಗಿಸಿ ಮುಂದೆ ಸಾಗಿದೆವು.ಸ್ವಲ್ಪ ದೂರ ಹೋಗಿದ್ದೆವಷ್ಟೆ ದೊಪ್ಪ್ ಅಂತ ಬಿದ್ದ ಸದ್ದಾಯಿತು.ಹಿಂದೆ ತಿರುಗಿ ನೋಡಿದರೆ ಸೈಕಲ್ ಮತ್ತೆ ರಸ್ತೆಯನ್ನು ತಬ್ಬಿ ಮಲಗಿತ್ತು.ಸ್ವಲ್ಪ ದೂರದಲ್ಲಿ ಯಾರೋ ಒಬ್ಬರು ಏರಿದ ಧ್ವನಿಯಲ್ಲಿ ಮಾತಾನಾಡುತ್ತ ಬರುವುದು ನಮಗೆ ಗೋಚರಿಸಿತು.ಹತ್ತಿರ ಬಂದಾಗ ಗೊತ್ತಾಯಿತು ಅವರು ಸೈಕಲಿನ ಯಜಮಾನರೆಂದು.ಬಂದವರೆ,'ಜಗ್ಗಿ ತಿಳ್ಕಂಡಿರಂಗೆ ಕಾಣಿಸ್ತಿರಾ..ದಡ್ ಕೋಡಿ ಕೆಲ್ಸ ಮಾಡಿರಲ್ಲ..ನಿಮ್ ಶಾನೆ ತನ ತೋರ್ಸಾಕೆ ನನ್ ಸೈಕಲೇ ಬೇಕಿತ್ತಾ..? ಅವನ್ ಅಮ್ಮನ್ ಹವಾ ಬೀಸಿ ಬೀಳುತ್ತೆ ಅನ್ಕೊಂಡು ಸೈಕಲ್ ಮಕ್ಕಾಸಿ ಹೋಗಿದ್ರೆ...ಎಬ್ಕೆಸಿ ಮತ್ತೆ ಬೀಳ್ಸಂಗ್ ಮಾಡಿದ್ರಲ್ಲ...ಹ್ಯಾಂಡ್ಲ ಬೆಂಡಾದ್ರೆ ರೊಕ್ಕ ಕಟ್ತೀರಾ..? ಅಂತ ದಬಾಯಿಸಿದ್ರು.ಸುಮಾರು ಹತ್ತು ನಿಮಿಷ ಅವರೊಬ್ರೆ ಮಾತಾಡಿದ್ರು.ಅವರು ಹೇಳಿದ ಕೆಲವು ಪದಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವು ಹಳೆಗನ್ನಡಕ್ಕಿಂತಲು ಕಠಿಣವಾಗಿತ್ತು.ಕೊನೆಗೆ ಪರೋಪಕಾರ ಮಾಡಿದ ತಪ್ಪಿಗೆ ಅವರ ಕ್ಷಮೆ ಕೇಳಿ ಅಲ್ಲಿಂದ ಹೊರಡುವಷ್ಟರಲ್ಲಿ ನನ್ನ ಗೆಳೆಯನ ಬೆವರಿಳಿದು ಹೋಗಿತ್ತು.ಗಾಳಿಗೆ ಸೈಕಲ್ ಬಿದ್ದಿದೆ ಅನ್ಕೊಂಡು ಅವನು ಅದನ್ನು ಮೇಲೆತ್ತಿದ್ದ ಆದರೆ ಅವರು ಅದೇ ಕಾರಣಕ್ಕಾಗಿ ಸೈಕಲನ್ನು ಮಲಗಿಸಿದ್ರು.ಹೀಗೆ ಕೆಲವೊಮ್ಮೆ ನಮ್ಮ ಪರೋಪಕಾರಿ ಪ್ರಜ್ಞೆ ಅಪಾಯಕಾರಿಯಾಗುತ್ತೆ ಅನ್ನುವ ಸತ್ಯ ಈ ಘಟನೆಯಿಂದ ನನ್ನ ಅನುಭವಕ್ಕೆ ಬಂತು.

-@ಯೆಸ್ಕೆ

Comments