ಒರ್ವಯಿರ್ವಗಳ್ಗಱಿಯದೆ ದೀರ್ಘಂ ಮಾೞ್ಪರ್‌ ಜನರ್‌

ಒರ್ವಯಿರ್ವಗಳ್ಗಱಿಯದೆ ದೀರ್ಘಂ ಮಾೞ್ಪರ್‌ ಜನರ್‌

ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್‌=ಒಬ್ಬೊಬ್ಬರು ಹಾಗೂ ಈರಿರ್ವರ್‌=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವುದಱಿಂದ ಸರಿ. ಸ್ವರವಿದ್ದಾಗ ರಕಾರ ಲೋಪವಾಗಿ ರಕಾರದ ಹಿಂದಿನ ಸ್ವರ ದೀರ್ಘವಾಗುವುದು ಕನ್ನಡಭಾಷಾಸ್ವಭಾವ. ಉದಾಹರಣೆಗೆ ಇರ್(ಎರಡು)+ಏೞು=ಈರೇೞು ಅಂದರೆ ಹದಿನಾಲ್ಕು, ಹಿರ್‌(ಹಿರಿ=ದೊಡ್ಡ)+ಆನೆ=ಹೇರಾನೆ ಆದರೆ ಹಿರ್‌+ಹುಲಿ=ಹೆಬ್ಬುಲಿ ಇಲ್ಲಿ ಎಕಾರ ದೀರ್ಘವಾಗಿಲ್ಲ. ಹಾಗೆಯೇ ಇರ್‌+ತಂಡ=ಇರ್ತಂಡ->ಇತ್ತಂಡ. ಇಲ್ಲೂ ಇ ದೀರ್ಘವಾಗಿಲ್ಲ. ಸ್ವರವಿದ್ದರೆ ಮಾತ್ರ ದೀರ್ಘ. 
ಹಿರ್(ಹೆಚ್ಚು)+ಅಳ(ವು)(ಅಳತೆ=ಪ್ರಮಾಣ)=ಹೇರಳ(ವು), ಹಿರ್+ಊರು=ಹೇರೂರು. ಈ ಎರಡಱಲ್ಲೂ ಅ ಮತ್ತು ಉ ಸ್ವರವಿರುವುದಱಿಂದ ದೀರ್ಘ. ಹಾಗಾಗಿ ಒರ್‌+ಒರ್ವರ್‌=ಓರೊರ್ವರ್‌, ಇರ್+ಇರ್ವರ್‌=ಈರಿರ್ವರ್‌
ಆದರೆ ಹಿರ್‌+ಮರ=ಹೆರ್ಮರ=ಹೆಮ್ಮರ, ಹಿರ್‌+ಪ(ಹ)ಲಸು=ಹೆಬ್ಬಲಸು. ಈ ಎರಡಱಲ್ಲೂ ವ್ಯಂಜನವಿರುವುದಱಿಂದ ದೀರ್ಘವಿಲ್ಲ.