ಕಗ್ಗ ದರ್ಶನ - 40(1)

ಕಗ್ಗ ದರ್ಶನ - 40(1)

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೋಸದಾಟವೊ ದೈವ - ಮಂಕುತಿಮ್ಮ

ದೈವ ನಮ್ಮೊಡನೆ ಮೋಸದಾಟ ಆಡುತ್ತಿದೆ ಎಂದು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆ ಮೋಸದಾಟದ ಮೊದಲ ಹಂತ ಆಶೆಯ ಬಲೆಯನ್ನು ಬೀಸಿ, ನಿನ್ನನ್ನು ತನ್ನೆಡೆಗೆ ಸೆಳೆದುಕೊಳ್ಳುವುದು. ಈ ಸೆಳೆತದಿಂದ ನೀನು ತೊಂದರೆ (ಘಾಸಿ) ಪಡುತ್ತಾ, ಸಂಕಟದಿಂದ ಬಾಯಿ ಬಿಡುವಾಗ ನಿನ್ನನ್ನು ಓರೆನೋಟದಿಂದ ನೋಡುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ದೈವ ನಿನ್ನ ಮೈಸವರಿ ನಿನ್ನನ್ನು ಸಮಾಧಾನ ಪಡಿಸುವ ನಾಟಕ ಮಾಡುತ್ತದೆ; ಜೊತೆಜೊತೆಯಲ್ಲೇ ನಿನ್ನ ಕಾಲನ್ನು ಎಡವಿಸಿ, ನೀನು ಕೆಳಕ್ಕೆ ಬಿದ್ದಾಗ ಗುಟ್ಟಿನಲ್ಲಿ ನಗುತ್ತದೆ ದೈವ.

ನಿಮ್ಮ ಹಣಕ್ಕೆ ವಾರ್ಷಿಕ ಶೇಕಡಾ ೧೮ರಿಂದ ೨೫ ಬಡ್ಡಿ ಪಾವತಿಸುತ್ತೇವೆಂದು ಜಾಹೀರಾತು ನೀಡಿ ಜನರನ್ನು ಸೆಳೆದದ್ದು ಶರವಣಂ ಫೈನಾನ್ಸ್ ಇತ್ಯಾದಿ ಬ್ಲೇಡ್ ಕಂಪೆನಿಗಳು. ಕೊನೆಗೆ, ಅವು ಕಾಣದಂತೆ ಮಾಯವಾದವು. ಆದರೆ ಜನರು ಪಾಠ ಕಲಿಯಲಿಲ್ಲ. ಅಧಿಕ ಬಡ್ಡಿ ಕೊಡುತ್ತೇವೆಂದು ಮಹಾರಾಷ್ಟ್ರ ಅಪೆಕ್ಸ್ ಇತ್ಯಾದಿ ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪೆನೆಗಳು ಆಮಿಷ ತೋರಿಸಿದವು. ಸಾವಿರಾರು ಜನರು ಅಲ್ಲಿ ಠೇವಣಿಯಿಟ್ಟು ಕೈಸುಟ್ಟುಕೊಂಡರು. ಆದರೂ ಜನರು ಪಾಠ ಕಲಿಯಲಿಲ್ಲ. ಅನಂತರ, ಮೋಸದಾಟದಲ್ಲಿ ಪ್ಲಾಂಟೇಷನ್ ಕಂಪೆನಿಗಳ ಸರದಿ. ೬೨೫ ಪ್ಲಾಂಟೇಷನ್ ಕಂಪೆನಿಗಳು, ಪತ್ರಿಕೆ ಹಾಗೂ ಟಿವಿ ಜಾಹೀರಾತು ಮೂಲಕ ಇಪ್ಪತ್ತು ವರುಷಗಳಲ್ಲಿ ಠೇವಣಿ ಹಣ ಹಲವು ಪಟ್ಟು ವೃದ್ಧಿಯಾಗುವ ಕನಸು ಬಿತ್ತಿದವು. ಕೊನೆಗೆ ಸುಪ್ರೀಂ ಕೋರ್ಟ್ ಅವುಗಳ ಮೋಸದಾಟಕ್ಕೆ ಕಡಿವಾಣ ಹಾಕಿದಾಗ ಲಕ್ಷಗಟ್ಟಲೆ ಜನರು ರೂ.೨೫,೦೦೦ ಕೋಟಿ ಕಳೆದುಕೊಂಡಾಗಿತ್ತು. ಇತ್ತೀಚೆಗಿನ ಇಂಥ ಮೋಸದಾಟ ಕರ್ನಾಟಕದ ಕಲಘಟಗಿಯ ಹರ್ಷ ಎಂಟರ್-ಟೈನ್-ಮೆಂಟ್ ಪ್ರೈ.ಲಿ. ಕಂಪೆನಿಯದ್ದು. ಅದರ ಮಾಲೀಕ ಸತ್ಯಬೋಧ ಖಾಸ್ನೀಸ್ ಮತ್ತು ಆತನ ಇಬ್ಬರು ಸೋದರರು ಸಾರ್ವಜನಿಕರಿಂದ ಸಂಗ್ರಹಿಸಿದ್ದು ಸಾವಿರಾರು ಕೋಟಿ ರೂಪಾಯಿ. ಕೊನೆಗೆ ೯ ಎಪ್ರಿಲ್ ೨೦೧೭ರಂದು ಅವರು ಪರಾರಿಯಾದರು (೩೦ ಮೇ ೨೦೧೭ರಂದು ಅವರ ಬಂಧನವಾಗಿದೆ.)

ಉದ್ಯೋಗದ ಆಕಾಂಕ್ಷಿಗಳೂ ಹಾಗೆಯೇ ಸುಲಭದಲ್ಲಿ ಮೋಸದಾಟಕ್ಕೆ ಬಲಿಯಾಗುತ್ತಾರೆ. ಯಾವುದೋ ನಕಲಿ ನೇಮಕಾತಿ ಪತ್ರಕ್ಕಾಗಿ ಹಿಂದೆಮುಂದೆ ಯೋಚಿಸದೆ ರೂಪಾಯಿ ಒಂದು ಲಕ್ಷದಿಂದ ರೂ.೨೫ ಲಕ್ಷ ಪಾವತಿಸಿ, ಕೊನೆಗೆ ಉದ್ಯೋಗ ಸಿಗದೆ, ಹಣವನ್ನೂ ಕಳಕೊಂಡು ಹಣೆ ಚಚ್ಚಿಕೊಳ್ಳುತ್ತಾರೆ. ಗಲ್ಫ್ ದೇಶಗಳಲ್ಲಿ ಉದ್ಯೋಗದ್ದು ಇನ್ನೊಂದು ಕತೆ. ಅಲ್ಲಿ ಒಳ್ಳೆಯ ಉದ್ಯೋಗ ಕೊಡಿಸುತ್ತೇವೆಂಬ ಏಜೆಂಟರ ಮಾತನ್ನು ನಂಬಿ, ಅಲ್ಲಿಗೆ ಹೋಗಿದ್ದ ದಕ್ಷಿಣ ಕನ್ನಡದ ನಾಲ್ವರು ಮರುಭೂಮಿಯಲ್ಲಿ ಕುರಿ ಕಾಯುವ ಕೆಲಸ ಮಾಡಬೇಕಾದದ್ದು ಇತ್ತೀಚೆಗಿನ ಪ್ರಕರಣ. ಅವರ ಪಾಸ್-ಪೋರ್ಟ್ ಮಾಲೀಕನ ವಶದಲ್ಲಿದ್ದ ಕಾರಣ ಅವರು ಅಸಹಾಯಕರು. ಅಂತೂ ಮೇ ೨೦೧೭ರಲ್ಲಿ ವಾಪಾಸು ಬಂದು ನಿಟ್ಟುಸಿರು ಬಿಡುತ್ತಿದ್ದಾರೆ. ದೈವದ ಮೋಸದಾಟದ ಬಗ್ಗೆ ಸದಾ ಜಾಗೃತರಾಗಿದ್ದು, ಅದಕ್ಕೆ ಬಲಿಯಾಗದಿರಲು ಪ್ರಯತ್ನಿಸಬೇಕು, ಅಲ್ಲವೇ?