ಕಗ್ಗ ದರ್ಶನ – 33 (2)

ಕಗ್ಗ ದರ್ಶನ – 33 (2)

ದೇವನುದ್ದೇಶವೇನಿಂದೆನಲು ನೀನಾರು?
ಆವಶ್ಯಕವೆ ನಿನ್ನನುಜ್ನೆಯಾತಂಗೆ?
ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ
ಸೇವಕಂಗೇತಕದು? – ಮರುಳ ಮುನಿಯ
ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪಿಗೆ (ಅನುಜ್ನೆ) ದೇವರಿಗೆ ಆವಶ್ಯಕವೇ? ಆ ಮಹಾಪ್ರಭುವಿನ ಮನಸ್ಸಿನಲ್ಲಿ ಏನಿರುವುದೋ, ಆತನಿಗೆ ಯಾವುದೇ ಕಾಯಕಕ್ಕೆ ಏನು ಕಾರಣಗಳು ಇವೆಯೋ, ಅವೆಲ್ಲ ಸೇವಕನಾದ ನಿನಗೆ ಯಾತಕ್ಕೆ? ಎಂದು ಮಾನ್ಯ ಡಿವಿಜಿಯವರು ಜಿಜ್ನಾಸೆ ಮಾಡುತ್ತಾರೆ.
ಸುನಾಮಿ, ಭೂಕಂಪ, ಬಿರುಗಾಳಿ, ಮಹಾನೆರೆ, ಅಗ್ನಿ ಪರ್ವತ ಸ್ಫೋಟ, ಮೇಘಸ್ಫೋಟ, ಭೀಕರ ಅಪಘಾತಗಳು ಇವನ್ನೆಲ್ಲ ಗಮನಿಸಿ. ಅದರಿಂದಾಗುವ ಸಾವುನೋವು, ಅನಾಹುತಗಳನ್ನು ಪರಿಗಣಿಸಿ. ೩೧.೧೦.೨೦೧೬ರಂದು ಇಟೆಲಿಯ ಭೂಕಂಪದಿಂದಾಗಿ ೧೫,೦೦೦ ಜನರು ಮನೆ ಕಳೆದುಕೊಂಡರು. ಈಗ ನಮ್ಮಲ್ಲಿ ಮೂಡುವ ಪ್ರಶ್ನೆ: ಇಷ್ಟೆಲ್ಲ ಸಾವುನೋವು ಉಂಟು ಮಾಡುವ ದೇವರ ಉದ್ದೇಶವೇನು? ಆದರೆ ಮೂಲಭೂತ ಪ್ರಶ್ನೆ: ಇದನ್ನು ಕೇಳಲು ನಾವು ಯಾರು? ಹೌದಲ್ಲ, ದೇವರಿಗೆ ದೇವರದ್ದೇ ಆದ ಲೆಕ್ಕಾಚಾರ ಇರಬಹುದು. ಉದಾಹರಣೆಗೆ ಈ ಭೂಮಿಯಲ್ಲಿ ಮನುಷ್ಯರ ಸಂಖ್ಯೆ ಮಿತಿ ಮೀರಿದಾಗ, ಅದನ್ನು ನಿಯಂತ್ರಿಸಲು ದೇವರು ಯಾವುದೋ ಕ್ರಮ ಕೈಗೊಳ್ಳಬಹುದು, ಅಲ್ಲವೇ? ಭೂಮಿಯ ಸಮತೋಲನದ ಮರುಸ್ಥಾಪನೆಗಾಗಿ ಸಾವುನೋವೂ ಅಗತ್ಯವಾದೀತು, ಅಲ್ಲವೇ?
ಈ ಭೂಮಿಯಲ್ಲಿದ್ದ ಡೈನಾಸಾರುಗಳು ಅಳಿದೇ ಹೋದವು. ಯಾಕೆ? ಅದು ದೇವರ ನಿರ್ಧಾರ ಎಂದಿರಲಿ. ಈ ಮುಂದಿನ “ಮನುಷ್ಯ” ನಿರ್ಧಾರ ಗಮನಿಸಿ. ಕೆಲವು ವರುಷಗಳ ಮುಂಚೆ, ಯುರೋಪಿನಲ್ಲಿ ಲಕ್ಷಗಟ್ಟಲೆ ದನಗಳನ್ನು ಕೊಲ್ಲಲಾಯ್ತು. ಯಾಕೆ? ಅವುಗಳಿಗೆ “ಹುಚ್ಚು ದನದ ಕಾಯಿಲೆ”ಯ ಸೋಂಕು ತಗಲಿದ್ದ ಕಾರಣ. ಇತ್ತೀಚೆಗೆ ಆಫ್ರಿಕಾದ ನೈಜೀರಿಯದಲ್ಲಿ ಸಾವಿರಾರು ಆನೆಗಳನ್ನು ಸರಕಾರದ ಆದೇಶದಂತೆ ಕೊಂದು ಹಾಕಲಾಯಿತು. ಯಾಕೆ? ಆನೆಗಳ ಸಂಖ್ಯೆ ಹೆಚ್ಚಾಯಿತೆಂದು. ಇದೇ ವರುಷ, ಬಿಹಾರದಲ್ಲಿ ಸರಕಾರದ ಆದೇಶದಂತೆ ನೂರಾರು ಕಾಡುಜಿಂಕೆಗಳನ್ನು ಗುಂಡಿಟ್ಟು ಕೊಲ್ಲಲಾಯಿತು. ಯಾಕೆ? ಅವುಗಳ ಸಂಖ್ಯೆ ಮಿತಿ ಮೀರಿತೆಂದು. ಇವು ಮೂರು ಮನುಷ್ಯ ನಿರ್ಧಾರಗಳು ಸರಿಯೇ?
ಹಾಗಾದರೆ, ಮನುಷ್ಯ ಎಂಬ ಪ್ರಾಣಿಯ ಸಂಖ್ಯೆ ನಿಯಂತ್ರಿಸಲಿಕ್ಕಾಗಿ ವಿಶ್ವನಿಯಾಮಕ ತನ್ನ ಕ್ರಮ ಜ್ಯಾರಿಗೊಳಿಸಿದಾಗ ಅದನ್ನು “ಭಗವಂತನ ನಿಯಮ” ಎಂದು ಸ್ವೀಕರಿಸಬೇಕಲ್ಲವೇ? ನಾವು ಕೇವಲ ಸೇವಕರು. ಆತನ ವಿಧಿವಿಧಾನಗಳನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ, ಅಲ್ಲವೇ?