ಕಗ್ಗ ದರ್ಶನ – 7 (2)

ಕಗ್ಗ ದರ್ಶನ – 7 (2)

ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ
ಲೋಕವೃತ್ತಿಯ ನಯವದಾತ್ಮ ನೀತಿಯದು
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ
ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ
ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರು. ನಮ್ಮ ಒಳಗೂ ನಮ್ಮ ಹೊರಗೂ ಕಲಹ ಯಾಕಾಗುತ್ತದೆ? “ಅದು ಬೇಕು, ಇದು ಬೇಕು” ಎಂದು ಹಪಹಪಿಸುತ್ತಾ ಇದ್ದರೆ, ಬೇಕಾದ್ದನ್ನು ದಕ್ಕಿಸಿಕೊಳ್ಳಲು ಜಿದ್ದಿಗೆ ಬಿದ್ದರೆ, ಅದರಿಂದಾಗಿಯೇ ಜಗಳ. ಈ ವರ್ತನೆಯಿಂದ ಶಾಂತಿ ಸಿಗದು.
ಮಾನಸಿಕ ಶಾಂತಿ ಬೇಕೆಂದಾದರೆ, “ಸಾಕು, ಸಾಕು” ಎಂಬ ವರ್ತನೆಯನ್ನು ರೂಢಿಸಿಕೊಳ್ಳಬೇಕು. ಇದ್ದುದರಲ್ಲೇ ಸುಖ ಕಂಡುಕೊಳ್ಳಬೇಕು. ನಮಗೆ ದಕ್ಕಿದ್ದೇ ನಮ್ಮ ಭಾಗ್ಯ ಎಂದು ನಂಬಬೇಕು. ಕಿಂಚಿತ್ ಚಿನ್ನವಿಲ್ಲದೆ ಬದುಕಲು ಸಾಧ್ಯವೇ? ನಮ್ಮದೇ ಕಾರು ಇಲ್ಲದೆ ಬದುಕಲಾದೀತೇ? ಸ್ವಂತ ಮನೆಯಿಲ್ಲದೆ ಜೀವಿಸಬಹುದೇ? ನೆಮ್ಮದಿಯ ಬದುಕಿಗೆ ಇದ್ಯಾವುದೂ ಅಗತ್ಯವಿಲ್ಲ. ಹಸಿವಾದಾಗ ತಿನ್ನಲು ಏನಾದರೂ ಸಿಕ್ಕರೆ, ಮಾಡಲಿಕ್ಕೆ ಯಾವುದಾದರೊಂದು ಕೆಲಸವಿದ್ದರೆ, ಅದುವೇ ನೆಮ್ಮದಿ. ಉಳಿದ ಯಾವುದೂ ಸುಖ ಜೀವನಕ್ಕೆ ಅಗತ್ಯವಿಲ್ಲ.
ಇಂತಹ ಸೂಕ್ಷ್ಮತೆಯಿಂದ ಬದುಕುವುದನ್ನು (ಲೋಕವೃತ್ತಿಯ ನಯ) ಪ್ರಪಂಚದ ವ್ಯವಹಾರಗಳನ್ನು ನಡೆಸುವುದನ್ನು ಕಲಿಯುವುದೇ ನಮ್ಮ ಆತ್ಮೋನ್ನತಿಗೆ ದಾರಿ. ಎಂತಹ ಸರಳ ಸೂತ್ರ! ಎಂತಹ ಉದಾತ್ತ ಹಾದಿ!
ಇದನ್ನು ಕಲಿಯಲು ಸಾಧ್ಯವೇ? ಯಾಕಾಗದು? “ಬೇಕು ಬೇಕು” ಎಂಬ ಪ್ರವೃತ್ತಿ ನಮ್ಮ ಹುಟ್ಟಿನೊಂದಿಗೆ ಬಂದದ್ದಲ್ಲ. ಅದು ನಾವು ಕ್ರಮೇಣ ಕಲಿತ ವರ್ತನೆ. ಅದನ್ನು ಕಲಿಯಲು ಸಾಧ್ಯ ಎಂದಾದರೆ, “ಸಾಕು ಸಾಕು” ಎಂಬುದನ್ನೂ ಕಲಿಯಲು ಸಾಧ್ಯ. ನಿಜವೇನೆಂದರೆ “ಸಾಕು ಸಾಕು” ಎನ್ನುವುದನ್ನು ನಾವು ಕಲಿತಿದ್ದೇವೆ (ಹೊಟ್ಟೆ ತುಂಬಿದ ಬಳಿಕ ಊಟದ ಬಟ್ಟಲಿಗೆ ಇನ್ನಷ್ಟು ಅನ್ನ ಹಾಕಿದರೆ, “ಸಾಕು ಸಾಕು” ಎನ್ನುವುದಿಲ್ಲವೇ?). ಆದರೆ, ಕ್ರಮೇಣ ಮರೆತಿದ್ದೇವೆ.
ಈ ಮರೆವಿನಿಂದ ನಮಗೆ ವ್ಯಾಕುಲತೆ ತಪ್ಪಿದ್ದಲ್ಲ. ಒಂದು ಮನೆ ಕಟ್ಟಿಸಿದ ನಂತರ, “ಸಾಕು” ಎಂದು ಭಾವಿಸುವುದಿಲ್ಲ. ನನ್ನ ಮಗನಿಗೊಂದು ಮನೆ, ಮಗಳಿಗಾಗಿ ಮತ್ತೊಂದು ಮನೆ ಎಂಬ ಸುಳಿಗೆ ಸಿಲುಕುತ್ತೇವೆ. ಮತ್ತೆ ಹೊರಬರಲಾಗದೆ ಚಡಪಡಿಸುತ್ತೇವೆ. ಇನ್ನಾದರೂ ಸಾಕುಸಾಕೆನ್ನುತ್ತಾ ಬದುಕಲು ನೆನಪಿರಲಿ.