ಕರಿಬೇವು

ಕರಿಬೇವು

ಸಸ್ಯಶಾಸ್ತ್ರೀಯ ಹೆಸರು: ಮುರಯ ಕೊಯಿನಿನಿ
ಸಂಸ್ಕೃತ: ಗಿರಿ ನಿಂಬ
ಇಂಗ್ಲಿಷ್: ಕರ್ರಿ ಲೀಫ್ 
ಕನ್ನಡ: ಕರಿಬೇವು
 
ಭಾರತೀಯರ ಮನೆಗಳಲ್ಲಿ ಪಾರಂಪರಿಕ ಅಡುಗೆ ಪೂರ್ಣವಾಗ ಬೇಕಾದರೆ ಕರಿಬೇವಿನ ಎಲೆ ಬೇಕೇ ಬೇಕು. ಸಾರು, ಸಾಂಬಾರು, ಚಟ್ನಿ, ಪಲ್ಯ, ಗೊಜ್ಜು, ಮಜ್ಜಿಗೆ, ಉಪ್ಪಿಟ್ಟು, ಅವಲಕ್ಕಿ, ಪುಳಿಯೋಗರೆ ಇವಕ್ಕೆಲ್ಲ ರುಚಿ ಮತ್ತು ಪರಿಮಳಕ್ಕಾಗಿ ಕರಿಬೇವಿನೆಲೆ ಹಾಕಲೇ ಬೇಕು. ಇದರ ಚಟ್ನಿಪುಡಿ ಮತ್ತು ವಡೆ ಜನಪ್ರಿಯ. ಇದರಿಂದ ಮಾಡಿದ ಸಾರು ಮತ್ತು ಪಲ್ಯ ರುಚಿರುಚಿ. ಇದರ ತಂಬುಳಿ ಹಾಗೂ ಗೊಜ್ಜು ಘಮಘಮ. 
ಗಾಢಹಸುರು ಎಲೆಗಳ ಕರಿಬೇವಿನ ಗಿಡ ಎಲ್ಲಿದ್ದರೂ ಭಾರತೀಯರು ಗುರುತಿಸಬಲ್ಲರು. ಸಂಯುಕ್ತ ಎಲೆಗಳಿರುವ ಈ ಗಿಡ ಗೊಂಚಲುಗೊಂಚಲು ಹೂ ಬಿಡುತ್ತದೆ. ಒಂದೇ ಬೀಜವಿರುವ ಇದರ ಪುಟ್ಟ ಹಣ್ಣುಗಳ ಬಣ್ಣ ನಸುಗೆಂಪು. ಗಿಡ ನೆಟ್ಟು ೪—೫  ತಿಂಗಳಿನಲ್ಲೇ ಸೊಂಪಾಗಿ ಬೆಳೆಯುತ್ತದೆ. ಅನಂತರ ೨೫—೩೦ ವರುಷ ಮನೆಬಳಕೆಗಾಗಿ ಎರಡು ದಿನಗಳಿಗೊಮ್ಮೆ ಇದರಿಂದ ಎಲೆಗಳನ್ನು ತೆಗೆಯುತ್ತಲೇ ಇರಬಹುದು. ಒಂದು ಕರಿಬೇವಿನ ಗಿಡ ವರುಷಕ್ಕೆ ನೀಡುವ ಸೊಪ್ಪಿನ ಇಳುವರಿ ೧೫—೨೦ ಕಿಲೋಗ್ರಾಮ್. ಈ ಗಿಡಗಳಿಗೆ ವಾರಕ್ಕೊಮ್ಮೆ ನೀರೆರೆಯಬೇಕು. ತಾಯಿ ಸಸಿಯ ಬುಡದಲ್ಲಿ ಪ್ರತಿ ವರುಷ ಹತ್ತಾರು ಹೊಸ ಸಸಿಗಳು ಹುಟ್ಟುತ್ತವೆ. 
ನಮ್ಮ ಮನೆಮನೆಗಳಲ್ಲಿ ದಿನದಿನವೂ ಅಡುಗೆಗೆ ಬಳಕೆಯಾಗುವ ಕರಿಬೇವು ಔಷಧವಾಗಿಯೂ ಬಹಳ ಉಪಯುಕ್ತ. ಇದು ಹಲವಾರು ರಾಸಾಯನಿಕ ಸತ್ವಗಳ ಖಜಾನೆ. ವಿಜ್ನಾನಿಗಳು ಇದರಲ್ಲಿ ಹೊಸಹೊಸ ರಾಸಾಯನಿಕಗಳನ್ನು ಪತ್ತೆ ಮಾಡುತ್ತಲೇ ಇದ್ದಾರೆ. 
 
ಔಷಧೀಯ ಬಳಕೆಗಳು:
೧) ಜ್ವರ: ಜ್ವರದಿಂದ ಬಳಲುವವರಿಗೆ ಕರಿಬೇವಿನ ಎಲೆಗಳ ಕಷಾಯದ ಸೇವನೆ (ದಿನಕ್ಕೆ ಎರಡು-ಮೂರು ಬಾರಿ ತಲಾ ಒಂದು ಲೋಟ) ಶಮನಕಾರಿ.
೨) ಸಕ್ಕರೆ ಕಾಯಿಲೆ: ಪ್ರತಿದಿನ ಬೆಳಗ್ಗೆ ಆಹಾರ ಸೇವಿಸುವ ಮುನ್ನ ೧೦ — ೧೫ ಕರಿಬೇವಿನೆಲೆ ಜಗಿದು ರಸನುಂಗುವುದು ಹಿತಕಾರಿ.
೩) ಆಮಶಂಕೆ ಭೇದಿ ಗುಣ ಪಡಿಸಲು ಕರಿಬೇವಿನ ಎಲೆಯ ಕಷಾಯ ಸೇವನೆ (ದಿನಕ್ಕೆ ೨ — ೩ ಬಾರಿ ತಲಾ ಒಂದು ಲೋಟ) ಪರಿಣಾಮಕಾರಿ. 
೪) ಬೊಜ್ಜು: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ೧೦—೧೫ ಕರಿಬೇವಿನೆಲೆ ಜಗಿದು ತಿನ್ನುವುದು ಬೊಜ್ಜು ಕರಗಿಸಲು ಸಹಕಾರಿ. ಕರಿಬೇವಿನೆಲೆಗಳ ಸೇವನೆ ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. 
೫) ಆಮ್ಲಪಿತ್ತ (ಅಸಿಡಿಟಿ): ಇದರ ಶಮನಕ್ಕೆ ಕರಿಬೇವಿನ ತೊಗಟೆಯ ಪುಡಿ (ಒಂದು ಚಮಚ) ನೀರಿಗೆ ಬೆರಸಿ ದಿನನಿತ್ಯ ಕುಡಿಯುವುದು ಪ್ರಯೋಜನಕಾರಿ.
೬) ತಲೆಗೂದಲು ಉದುರುವುದು: ಇದನ್ನು ತಡೆಯಲು, ಕರಿಬೇವಿನ ಎಲೆಗಳ ಎಣ್ಣೆ ತಲೆಗೆ ಹಚ್ಚಿಕೊಂಡು, ಒಂದು ತಾಸಿನ ನಂತರ ಸ್ನಾನ ಮಾಡಬೇಕು (ವಾರದಲ್ಲಿ ಕನಿಷ್ಠ ಎರಡು ಸಲ). ಈ ಎಣ್ಣೆಯ ನಿತ್ಯ ಬಳಕೆಯಿಂದ ತಲೆಗೂದಲು ಕಪ್ಪಾಗಿ, ದಟ್ಟವಾಗಿ ಬೆಳೆಯುತ್ತದೆ.