ಕರ್ನಾಟಕದಲ್ಲಿ ಹೀಗೊಂದು ಬೀದಿ ನಾಟಕ‌ ‍‍

ಕರ್ನಾಟಕದಲ್ಲಿ ಹೀಗೊಂದು ಬೀದಿ ನಾಟಕ‌ ‍‍

ಬೀದಿ ನಾಟಕಗಳಿಗೆ ರಂಗಮಂಟಪಗಳೇಕೆ ಬೇಕು ? ಪಾತ್ರಗಳಿಗೆ ಮಣ್ಣನೆ ನೀಡಬಲ್ಲ ಪ್ರೇಕ್ಷಕರಿದ್ದರೆ ಸಾಲದೇ?.. ರಂಗಮಂಟಪಗಳು ಕೇವಲ ಪ್ರತಿಷ್ಟೆಯನ್ನು ತೋರ್ಪಡಿಸುವ ಉಡುಗೆಗಷ್ಟೇ... ಅದೂ ಈ ಅಧ್ಬುತ ನಾಟಕಕ್ಕೆ ಪ್ರೇಕ್ಷಕರು ಇಲ್ಲದೇ ಇರುತ್ತಾರೆಯೇ?. ಅಬ್ಬಾ! ಇಂತಹಾ ನಾಟಕವನ್ನು ನಾವು ಹಿಂದೆಂದೂ ನೋಡಿಲ್ಲಾ. ಹೌದು, ಮಹಾ ನಾಟಕಕ್ಕೆ ಈಗಾಗಲೇ ತೆರೆ ಬಿದ್ದು ಪ್ರೇಕ್ಷಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ. ಬಿಂದಾಸ್ ದುನಿಯಾದಲ್ಲಿ ಏನು ಬೇಕಾದರೂ ಆಗಬಹುದೆಂಬುದಕ್ಕೆ ಕರ್ನಾಟಕದ ರಾಜಕೀಯ ನಾಟಕ ಈಗಾಗಲೇ ಶಾಕ್ಷಿಯಾಗಿದೆ. ಕಾಂಗ್ರೆಸ್ - ಜನತಾದಳ ನೇತೃತ್ವದ ದೋಸ್ತಿ ಸರಕಾರ ಅತೃಪ್ತ ಶಾಸಕರ ಬೇ ಮನಸ್ಸಿನಿಂದಲೋ, ಅಧಿüಕಾರದ ಲಾಲಚಿಯಿಂದಲೋ, ಬೆಂಬಲ ಹಿಂಪಡೆಯುವ ಮೂಲಕ ವಿಶ್ವಾಸ ಮತದಲ್ಲಿ ಬೇಕಿದ್ದಷ್ಟು ಬೆಂಬಲವಿಲ್ಲದೇ ದೋಸ್ತಿ ಸರಕಾರ ಪತನಗೊಂಡಿದ್ದು ಕೆಲವರಿಗೆ ಬೇಸರ ತಂದಿದ್ದು ಇನ್ನು ಕೆಲವರಿಗೆ ಜೇನು ಹೀರಿದಂತಾಗಿದೆ. ಸರಕಾರಗಳೆಂಬುವುದು ಕೆಲ ನಯ-ನಾಜೂಕಿಲ್ಲದ ಶಾಸಕರಿಗೆ ಬೇಕಾದಾಗ ಉಡುವ, ಬೇಕಿಲ್ಲದಾಗ ತೆಗೆದು ಬಿಸಾಡುವ ಟೈಂಪಾಸ್ ಬಟ್ಟೆಗಳೇ ಹೊರತು ಅದು ಶಾಶ್ವತವಲ್ಲ. ನಮಗೆ ಹಾಯಾಗಿ ತಿರುಗಲು, ಬಿಂದಾಸಾಗಿ ಫೋಟೋ ಕ್ಲಿಕ್ಕಿಸಲು ಬೆಂಬಲಿಗರ ಒಂದು ಗುಂಪು ಇದ್ದರೆ ಸಾಕೆಂಬುವುದು ಈ ಟೈಂಪಾಸ್ ಶಾಸಕರು ಅಂದುಕೊಂಡಂತಿದೆ. ಒಟ್ಟಿನಲ್ಲಿ ತನ್ನ ಪಕ್ಷವನ್ನು ಗುರುತಿಸಿಕೊಂಡು ಓಟ್ ಹಾಕಿದವನ ಕೋಪಕ್ಕೆ ಕಂಟ್ರೋಲೇ ಇಲ್ಲದೇ ಚಡಪಡಿಸುತ್ತಿದ್ದಾನೆ.
ಈ ಬೀದಿ ನಾಟಕ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದರೆ ಇಷ್ಟೊಂದು ಟ್ವಿಸ್ಟ್ ಪಡೆಯುತ್ತಿರಲಿಲ್ಲ, ಮುಂಬೈಯ ಬೇನಾಮಿ ಫೈಸ್ಟಾರ್ ಹೋಟೇಲ್‍ಗಳು, ರೆಸಾರ್ಟ್‍ಗಳು ಪಕ್ಷಗಳ ಮೋಜಿನ ಕೇಂದ್ರವಾಯಿತು. ಕೆಲವು ಪಕ್ಷಗಳು ನಾವು ನಿಮಗಿಂತ ಕಮ್ಮಿಯಿಲ್ಲ ಎಂದುಕೊಂಡು ಅದಕ್ಕಿಂತಲೂ ಹೆಚ್ಚಿನ ಬೆಲೆಯ ಹೋಟೇಲ್‍ಗಳನ್ನು ಬುಕ್ ಮಾಡಿಕೊಂಡವು. ರೆಸಾರ್ಟ್‍ಗಳಿಗೆ ಬೇಕಾಬಿಟ್ಟಿ ಹಣ ಸಂದಾಯವಾದವು. ನಮ್ಮನ್ನೂ ಐಶಾರಾಮಿ ಹೋಟೇಲುಗಳಲ್ಲಿ ರೆಸಾರ್ಟ್‍ಗಳಲ್ಲಿ ಕೆಲವು ದಿನ ಕುಳ್ಳರಿಸಿ ಬಿಡಿ, ನಾವು ಹಾಯಾಗಿ , ಬಿಂದಾಸಾಗಿ ಕೆಲವು ದಿನ ಕಳೆಯುತ್ತೇವೆ! ಎಂದು ಇವೆಲ್ಲದರ ಅನುಭವವೂ ಇಲ್ಲದ ಕೆಲವು ಬಡಪಾಯಿ ಜನಗಳೂ ತಮ್ಮ ಬೇಡಿಕೆಗಳನ್ನು ಅಂದುಕೊಂಡಿದ್ದೂ ಉಂಟು, ಕೆಲವರಂತೂ ತಾವೊಂದು ಇಂತಹಾ ಐಶಾರಾಮಿ ಹೋಟೇಲ್ ಕಟ್ಟಲು ಸ್ಕೆಚ್ ರೆಡಿಮಾಡಿದ್ದಾರೆ. ನಮ್ಮ ಶಾಸಕರನ್ನು ಬೆದರಿಸಿ,ಗದರಿಸಿ ಕಿಡ್ನಾಪ್ ಮಾಡಿಬಿಟ್ಟಿದ್ದಾರೆ ಎಂದು ಪಕ್ಷಗಳು ಕಥೆ ಹೆಣೆದವು, ಕುದುರೆ ವ್ಯಾಪಾರದ ಗಿಮಿಕ್‍ಗಳೂ ಶುರುವಾದವು.. 'ನಮಗೆ ಇಲ್ಲಿ ಉಳುಮೆಗೆ ಎತ್ತುಗಳೇ ಕೊಳ್ಳುವ ತಾಕತ್ತಿಲ್ಲ. ಇವರು ಕುದುರೆ ಕೊಂಡುಕೊಂಡವರೆ'! ಎಂದು ರೈತರು ತಮ್ಮ ವ್ಯಥೆಗಳ ಹಾಸ್ಯಾಸ್ಪದ ನುಡಿಗಳನ್ನು ಶುರುವಿಟ್ಟುಕೊಂಡರು. ಮತ್ತೊಂದೆಡೆ ಉರುಳುತ್ತೋ, ಇಲ್ಲವೋ?, ವಿಶ್ವಾಸಮತ ಕುಮಾರ ಉಳಿಸುತ್ತಾನೋ? ಇಲ್ವೋ?.. ಭಾರೀ ಬೆಟ್ಟಿಂಗ್‍ಗಳು ನಡೆಯಲು ಶುರುವಿಟ್ಟುಕೊಂಡವು, ಅವನು ಬರ್ತಾನೆ, ಇವನು ಹೋಗ್ಬಿಟ್ಟ, ಒಟ್ಟನಲ್ಲಿ ಈ ನಾಟಕ ಬೀದಿ ಬೀದಿಗಳಲ್ಲಿ ಗುಯಿಗುಡಲು ಶುರುವಿಟ್ಟವು..
ಒಂದು ಕಡೆ ರಾಜ್ಯದ ಜನರು ಇದೆಲ್ಲವನ್ನು ನೋಡಿ ರೋಸಿ ಹೋಗಿದ್ದರೆ ಟಿ.ವಿ ನ್ಯೂಸ್ ಚಾನಲ್ಗಳು ಮಾತ್ರ ಹಾಲು ಕುಡಿದಂತೆ ಸಂತೋಷಗೊಂಡವು, ಈ ಮೂಕ ಮಾಧ್ಯಮಗಳು ಹೊಸ ಆವೇಶದಿಂದ ಗಂಟೆಗೊಂದು ಹಾಡುಕಟ್ಟಿಕೊಂಡು, ವಿಷಯ ಕಟ್ಟಿಕೊಂಡು ಕುಣಿದು ಕುಪ್ಪಳಿಸಿದವು. ಯಾರು ಬಿದ್ದರೂ, ಎದ್ದರೂ ನಮ್ಮ ಚಾನಲ್ ವೀಕ್ಷಕರು ಮಾತ್ರ ನಮ್ಮ ಬ್ರೇಕಿಂಗ್ ನ್ಯೂಸ್‍ಗಳಿಂದ ಫುಲ್ ಖುಷಿಯಾಗಬೇಕೆಂದು ಕೆಲವೊಂದು ಕಥೆಗಳನ್ನು, ಅನಿಸಿಕೆಗಳನ್ನು ಕಟ್ಟಿಕೊಂಡು ಬಿತ್ತರಿಸಲಾರಂಭಿಸಿತು. ಜನ ಹಿತದ ಕಾಳಜಿಯೇ ಇಲ್ಲದ ಮಾಧ್ಯಮಗಳಿಗೆ ಈ ಬೀದಿ ನಾಟಕಗಳು ಬೊಂಬಾಟ್- ಭೂರೀ ಭೋಜನಗಳಾಯಿತು, ಕೆಲವು ಮೀಡಿಯಾಗಳಂತೂ ಪ್ರತೀದಿನ ಈ ಡ್ರಾಮ ಹೀಗೇ ಮುಂದುವರಿಯಲಿ.. ನಾವು ಕೂಡ ಪ್ರತೀದಿನ ಈ ಡ್ರಾಮ ವನ್ನು ತೋರಿಸುತ್ತಾ ಇರುತ್ತೇವೆ, ನಮಗೆ ಕೆಲವು ದಿವಸಗಳ ವರೆಗೆ ತೋರಿಸಲು ವಿಷಯ ಸಿಕ್ಕಿದಂತಾಗುತ್ತದೆ' ಎಂದು ಮನಸ್ಸು ಪೂರ್ತಿಯಾಗಿ ಎಲ್ಲವನ್ನೂ ಇಡೀ ದಿನ ಹೆಡ್‍ಲೈನ್‍ಗಳಾಗಿ, ಬ್ರೀಕಿಂಗ್ ನ್ಯೂಸ್‍ಗಳಾಗಿ ತೋರಿಸಲು ಶುರಿವಿಟ್ಟುಕೊಂಡವು.
ಕೆಲವು ತಿಂಗಳುಗಳ ಮುಂಚೆ ಚುನಾವಣೆ ಮುಗಿದು ಜನರು ಒಂಚೂರು ಹಾಯಾಗಿ ನಿದ್ರಿಸಲು ಶುರುವಿಟ್ಟಾಗಲೆ ಈ ನಾಟಕ ತಂಡಗಳು ದಿನಕ್ಕೊಂದು ಶೀರ್ಷಿಕೆ ನೀಡಿ ಹಾಡುತ್ತಾ ಬಂದಿದೆ. ಅಂತೂ, ಇಂತೂ ಯಾವ ಪರಿಯಲ್ಲಾದರೂ ಯಡ್ಯೂರಪ್ಪ ತುರಾತುರಿಯಲ್ಲಿ ಮುಖ್ಯಮಂತ್ರಿಯಾಗುವುದರೊಂದಿಗೆ ಎಲ್ಲದಕ್ಕೂ ಇತಿಶ್ರೀ ಹಾಡಿಬಿಟ್ಟರು. ನನ್ನನ್ನು ಎದುರಿಸುವ ಗಂಡಸುತನ ಯಾರಿಗಿದೆ? ನಾನು ವಿಶ್ವಾಸಮತ ಜಯಿಸೇ ಜಯಿಸುತ್ತೇನೆ ಎಂದು ಅದಷ್ಟೂ ವೇಗವಾಗಿರುವ ಯಡ್ಯೂರಪ್ಪನವರನ್ನು ನೋಡಿ 'ಗಂಡೆಂದರೆ ಇವನ ಹಾಗೆ ಇರಬೇಕು' ಎಂದು ಶಹಬ್ಬಾಸ್‍ಗಿರಿ ನೀಡಿದ್ದೂ ಉಂಟು. ಬೆಳ್ಳಂಬೆಳಿಗ್ಗೆ ಎದ್ದವನೇ ನಾನು ಇವತ್ತು ಸಂಜೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಮಾಡುತ್ತೇನೆ ಎಂದಾಗ 'ಎಲಾ ಇವನಾ.. ರೋಪು ನೋಡ್ಲೇ.. ಎಂದು ಕೆಲವರು ಹಿಗ್ಗಾಮುಗ್ಗಾ ಬೈಯಲು ಶುರುವಿಟ್ಟುಕೊಂಡರು. ಅದ್ಯಾವ ಹುಮ್ಮಸ್ಸಿನಿಂದಲೋ ಕಿಲಾಡಿ ಯಡ್ಡಿ ಸಿ,ಎಂ ಆಗಿಯೇ ಬಿಟ್ಟ, ಅವನ ಚಾರಿತ್ಯ ಗೊತ್ತಿದ್ದ ಕೆಲವರು 'ಇವನು ಖಂಡಿತಾ ಹೆಚ್ಚು ಕಾಲ ನಿಲ್ಲೋಲ್ಲ' ಎಂದು ಸಮಯ ಎನಿಸಲು ಶುರುವಿಟ್ಟರು. ಈ ಮೊದಲು 3 ದಿನದ ಮಟ್ಟಿಗೆ ಸಿ.ಎಂ ಆಗಿ ಕುರ್ಚಿಯಿಂದ ಕೆಳಗಿಳಿದ ಪ್ರಸಂಗಗಳು ಹಲವರ ಕಣ್ಣ ಮುಂದೆ ಹಾಗೆಯೇ ಇದೆ. ಅಲ್ಲದೇ ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಗಿರಿ ತನಗೆ ನೀಡಿಲ್ಲ ಎಂದು ಮುನಿದ ಪ್ರಸಂಗಗಳೂ ಜನರ ಮನಸ್ಸಿನಲ್ಲಿ ಇದೆ. ಕೆಲವರಂತೂ 'ಕುಮಾರಣ್ಣ ಯಾರೊಂದಿಗೂ ಹೆಚ್ಚಿನ ಸಮಯ ಬಾಳದೇ ಡೈವೋರ್ಸ್ ಕೊಟ್ಟುಬಿಡುತ್ತಾನೆ' ಎಂದು ಈ ಬೀದಿ ನಾಟಕದಲ್ಲಿ ಒಂಚೂರು ಫ್ಯಾಮಿಲಿ ಸ್ಟೋರಿಗಳನ್ನು ಚಪ್ಪರಿಸಲು ಅಣುವಿಟ್ಟರು. ಒಟ್ಟಿನಲ್ಲಿ ಶಾಸಕರು ರಾಜೀನಾಮೆ ನೀಡಿ ತಮಗೆ ಮತ ಹಾಕಿದ ಮತದಾರರಿಗೆ ಮಾತ್ರ ವಂಚನೆ ಮಾಡಿದ್ದಾರೆ.
ಯಾರು ಹೊತ್ತುಕೊಂಡು ಹೋದರೋ, ತಾವೇ ಓಡಿ ಹೋದರೋ ಗೊತ್ತಿಲ್ಲ. ಜನರು ಮಾತ್ರ ಸಹನೆ ಕಳೆದುಕೊಂಡಿದ್ದಾರೆ. ಅತ್ರಪ್ತರು ತಮ್ಮ ಲಕ್, ಎಲ್ಲದಕ್ಕೂ ಡೋಂಟ್ ಕೇರ್ ಎಂಬಂತೆ ಹಾಯಾಗಿದ್ದಾರೆ. ಕೆಲವರಂತೂ ತಮ್ಮ ಶಾಸಕರು ಕಾಣೆಯಾಗಿದ್ದಾರೆ ಎಂದು ಬಿತ್ತಿಪತ್ರಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸ್ಪೀಕರ್ ರವರು ಎಲ್ಲಾ  ಅತೃಪ್ತ ಶಾಸಕರನ್ನು ಅನರ್ಹ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕುದುರೆಗಳನ್ನು ಕಟ್ಟಿ ಹಾಕಿರುವುದು ಜನರಿಗೆ ಸಂತಸ ತಂದಿದೆ. ಇಲ್ಲದಿದ್ದರೆ ಈ ಕುದುರೆಗಳು ಕಣ್ಣಿಗೆ ಕಾಣದಷ್ಟು ದೂರ ಓಡುತ್ತಿದ್ದವೋ ಏನೋ ? ಅನರ್ಹಗೊಳಿಸಿರುವುದರಿಂದ ಅದಷ್ಟು ವೇಗವಾಗಿ ತಮ್ಮ ಕ್ಷೇತ್ರಗಳಿಗೆ ಬಂದು ಕ್ಷಮೆ ಕೋರುವ ನಾಟಕೀಯ ಪ್ರಸಂಗಗಳು ಎದುರಾಗಬಹುದು. ಇಲ್ಲದಿದ್ದರೆ ಜನರೇ ಇವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಒಟ್ಟಾಗಿ ಇಷ್ಟು ದಿನ ತಮಗೆ ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸದೇ ಹಾಯಾಗಿ ರೆಸಾರ್ಟ್ ಜೀವನವನ್ನು ನಡೆಸಿದ ಶಾಸಕರು ಯಾವ ಮುಖಮಾಡಿ ಜನರೆದುರು ಪ್ರತ್ಯಕ್ಷರಾಗುತ್ತಾರೋ ಕಾದು ನೋಡಬೇಕಾಗಿದೆ. . ಕರ್ನಾಟಕ್ಕೆ ಮತ್ತೆ ನಾಟಕೀಯವಾಗಿ ಯಡ್ಯೂರಪ್ಪ ನವರ ಅಧಿಪತ್ಯ ಸಿಕ್ಕಿದೆ. ಕುದುರೆ ಓಡುತ್ತದೋ? ಎಡವಿ ಬೀಳುತ್ತದೋ ಗೊತ್ತಿಲ್ಲ, ಮೀಡಿಯಾ ಚಾನಲ್‍ಗಳು ಈಗ ಬಿದ್ದು ಬಿಡ್ತಾನೆ. ಮತ್ತೆ ಬೀಳ್ತಾನೆ ಎಂದು ಕಾಯುತ್ತಲೇ ಇದೆ. ಆದರೆ ಈ ಎಲ್ಲಾ ನಾಟಕಗಳನ್ನು ನೋಡಿ ಕುದುರೆ ಬಿದ್ದರೂ, ಎದ್ದರೂ ಜನರು ಮಾತ್ರ ನಗುವುದಂತೂ ಖಂಡಿತಾ. ರೆಸಾರ್ಟ್ ಮಸ್ತಿ ಜೀವನಕ್ಕೆ ತೆರೆ  ಬಿದ್ದಿದ್ದು, ಸುಪ್ರೀಂ ಕೋರ್ಟ್‍ಗಳಲ್ಲಿ ತಮ್ಮ ಬೀದಿ ನಾಟಕವನ್ನು ತೋರ್ಪಡಿಸಲು ಅತ್ರಪ್ತರು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ರಾಜಕೀಯ ವ್ಯಾಮೋಹಿಗಳಿಂದಾಗಿ ಈ ಸಮಾಜದ ಅಭಿವೃದ್ದಿಯನ್ನು ಆಶಿಸುವ ಜನರಿಗೆ ಘಾಸಿಮಾಡದಂತಿರಲಿ ಎಂಬುವುದು ನಾಡು, ನುಡಿಯನ್ನು ಪ್ರೀತಿಸುವ ಎಲ್ಲರ ಆಶಯ...