ಕಾನೂನಿಗಿಂತ ಖಾನ್ ದೊಡ್ಡವನೇ ..?

ಕಾನೂನಿಗಿಂತ ಖಾನ್ ದೊಡ್ಡವನೇ ..?

ಕಾನೂನಿಗಿಂತ ಖಾನ್ ದೊಡ್ಡವನೇ ..?

 

ಒಂದು ಭಾನುವಾರ ನೀವು ಟಿ.ವಿ.ಮುಂದೆ ಕುಳಿತುಕೊಂಡಿದ್ದೀರೆಂದುಕೊಳ್ಳಿ. ನಿಮ್ಮ ಮುದ್ದಿನ ಮಗಳು ಓಡಿ ಬಂದು ಪಪ್ಪಾ ಪಕ್ಕದ ಬೇಕರಿಯಿಂದ ಐಸ್ ಕ್ರೀಮ್ ತಂದುಕೊಡಿಯೆಂದು ತೊದಲು ನುಡಿಯಿಂದ ಪೀಡಿಸುತ್ತಾಳೆ. ಮುಗ್ಧತೆಗೆ ಮನಸೋತು ನೀವು ಬೇಕರಿಯೆಡೆಗೆ ಹೆಜ್ಜೆ ಹಾಕುತ್ತೀರ. ಮಗಳಿಗೆ ವೆನಿಲ್ಲಾ ಫ್ಲೇವರ್ ಇಷ್ಟ, ತೆಗೆದುಕೊಂಡು ಬೇಕರಿಯಿಂದ ಮನೆ ರೋಡಿಗೆ ಕಾಲಿಟ್ಟಿರುತ್ತೀರಷ್ಟೇ...! ವೇಗವಾಗಿ ಬಂದ ಐಷಾರಾಮಿ ಕಾರೊಂದು ನಿಮ್ಮ ಮೇಲೆರಗುತ್ತದೆ. ಕಾರಿನ ಯಾವುದೋ ಒಂದು ಚಕ್ರ ನಿಮ್ಮ ಎಡ ಅಥವಾ ಬಲಕಾಲ ಮೇಲೆ ಹರಿಯುತ್ತದೆ. ನೀವು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಕೈಲಿದ್ದ ನಿಮ್ಮ ಮಗಳ ಇಷ್ಟದ ಐಸ್ ಕ್ರೀಮ್ ನಿಮ್ಮ ರಕ್ತದಲ್ಲಿ ತೋಯ್ದು ಕಾರಿನ ಇನ್ನೊಂದು ಟೈರಿನಡಿಯಲ್ಲಿರುತ್ತದ್ದೆ. ಕಾರಿನಲ್ಲಿದ್ದ ಶ್ರೀಮಂತ ಕೆಳಗಿಳಿದು ನೋಡಿ, ಕನಿಷ್ಠ ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನು ತೋರದೆ, ಕಾರನ್ನು ಅಲ್ಲೆ ಬಿಟ್ಟು ಬೇರೆ ಯಾವುದೋ ವಾಹನವೇರಿ ಪರಾರಿಯಾಗುತ್ತಾನೆ. ಯಾರೋ ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ನಿಮ್ಮ ಕಾಲನ್ನೆ ಕತ್ತರಿಸುತ್ತಾರೆ. ಇದ ತಿಳಿದ ನಿಮ್ಮ ಸಂಸ್ಥೆಯವರು ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಾರೆ. ಅಲ್ಲಿಗೆ ನಿಮ್ಮ ಭವಿಷ್ಯ ಹಳ್ಳ ಹಿಡಿಯುತ್ತದೆ. ಸರಿ, ಏನಾದರಾಗಲಿ ಕೊನೆಪಕ್ಷ ನ್ಯಾವಾದರು ಸಿಗುತ್ತದೇನೊ ಎಂದು ಕೋರ್ಟ್ ಮೆಟ್ಟಿಲೇರಿ ನ್ಯಾಯಕ್ಕಾಗಿ ಕಾದು ಕೂರುತ್ತೀರಿ.

           ಅತ್ತ ಆ ಶ್ರೀಮಂತ ರಾತ್ರಿ ಪಾರ್ಟಿಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದರೆ, ನೀವು ಮಾತ್ರ ವೀಲ್ ಛೇರ್ ಮೇಲೆ ಕುಳಿತು ಟಾಯ್ಲೆಟಿಗೆ ಹೋಗಲು ಬೇರೆಯವರನ್ನು ಆಶ್ರಯಿಸುತ್ತೀರಿ. ಅವನಲ್ಲಿ ಕ್ರಿಕೆಟ್, ಫುಟ್ಬಾಲ್ ಆಡಿಕೊಂಡು ಮಜಾ ಉಡಾಯಿಸುತ್ತಿದ್ದರೆ, ನೀವು ಮಾತ್ರ ನಿಮ್ಮ ಮಗಳನ್ನು ಪಾರ್ಕಿಗೆ ಕರೆದುಕೊಂಡು ಹೋಗಲಾರದೆ ನರಳುತ್ತೀರಿ. ಅವನು ಬ್ಯುಸಿನೆಸ್ಸ್ ನಲ್ಲಿ ಕೋಟಿ ಕೋಟಿ ಗಳಿಸುತ್ತಿದ್ದರೆ, ನೀವು ಇದ್ದ ಕೆಲಸ ಕಳೆದು ಕೊಂಡು ಸಂಸಾರ ಸರಿದೂಗಿಸಲು ಮೈತುಂಬಾ ಸಾಲ ಮಾಡಿಕೊಂಡು ನರಕಯಾತನೆ ಅನುಭವಿಸುತ್ತೀರಿ. ಆದರೂ ನ್ಯಾಯ ಸಿಗುವ ಭರವಸೆಯಲ್ಲಿ ವರ್ಷಾನುಗಟ್ಟಲೆ ಕೋರ್ಟ್ ಗೆ ವೀಲ್ ಛೇರ್ ನಲ್ಲೇ ಅಲೆಯುತ್ತೀರಿ. ಅತ್ತ ಕಡೆ ಶ್ರೀಮಂತ ತನ್ನ ಹಣ ಬಲ ಮತ್ತು ವರ್ಚಸ್ಸನ್ನು ಬಳಸಿ ವ್ಯಾಜ್ಯವನ್ನು ವರ್ಷಗಟ್ಟಲೆ ಎಳೆಯುವಂತೆ ಮಾಡುತ್ತಾನೆ. ಕೊನೆಗೊಂದು ದಿನ, ಹತ್ತು-ಹದಿನೈದು ವರ್ಷಗಳ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನ ಬರುತ್ತದೆ. ಈತನ್ಮದ್ಯೆ ಆ ಶ್ರೀಮಂತ ಕೆಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು, ಕೋಟಿಗಳಲ್ಲಿಗಳಸಿ ಸಾವಿರಗಳನ್ನು ಚೆಲ್ಲಿ ಸಮಾಜ ಸೇವಕನಾಗಿರುತ್ತಾನೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಶ್ರೀಮಂತನ ಪರ ವಕೀಲರು ಮತ್ತು ಬೆಂಬಲಿಗರು, ಶ್ರೀಮಂತನ ಸಾಮಾಜಿಕ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಮಾನವೀಯತೆಯ ನೆಲೆಯಲ್ಲಿ ಯಾವುದೇ ಶಿಕ್ಷೆ ನೀಡಬಾರದೆಂದು ಅರಚಲಾರಂಭಿಸುತ್ತಾರೆ. ಈಗ ಹೇಳಿ, ನಿಮ್ಮ ಕಳೆದು ಕೊಂಡಿರುವ ಕಾಲನ್ನು ಮತ್ತು ಕಳೆದು ಕೊಂಡಿರುವ ಭವಿಷ್ಯವನ್ನು ನೋಡಿ ಹೇಳಿ. ಆ ಶ್ರೀಮಂತನನ್ನು ಕ್ಷಮಿಸಬೇಕಾ...? ಮಾನವೀಯತೆ ತೋರಿಸಬೇಕಾ ? ಖಂಡಿತ ಇಲ್ಲಾ ಅಲ್ಲವೇ..ಅವನಿಗೆ ಘೋರ ಶಿಕ್ಷೆಯಾಗಬೇಕೆಂದು ರಕ್ತಕುದಿಯುತಿದೆಯಲ್ಲವೆ ? ಹಾಗಾದರೆ ಪ್ರಿಯ ಸಲ್ಮಾನ್ ಖಾನ್ ಅಭಿಮಾನಿಗಳೇ, ಸಲ್ಮಾನ್ ಖಾನ್ ನ 2002ರ ಗುದ್ದೋಡು ಪ್ರಕರಣಕ್ಕೆ ಶಿಕ್ಷೆಯಾಗಬಾರದೆಂದು ಯಾವ ಮುಖವನ್ನಿಟ್ಟು ಕೊಂಡು ಹೇಳುತ್ತಿದ್ದೀರಿ...? ಹೀಗೆ ಕೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ..?

         ಅದು 2002 ಸೆಪ್ಟೆಂಬರ್ 28ರ ಮಧ್ಯರಾತ್ರಿ, ಕಂಠ ಪೂರ್ತಿ ಕುಡಿದು ತನ್ನ ಟೊಯೋಟ ಲ್ಯಾಂಡ್ ಕ್ರೂಸರ್ ಚಲಾಯಿಸಿಕೊಂಡು ಬಂದ ಸಲ್ಮಾನ್ ಖಾನ್ ನಿಯಂತ್ರಣ ತಪ್ಪಿ ಮುಂಬೈನ ಸುಬರನ್ ಬೇಕರಿ ಮುಂದೆ ಫುಟ್ ಪಾತ್ ಮೇಲೆ ಮಲಗಿದ್ದ ಐದು ಜನ ನಿರಾಶ್ರಿತರ ಮೇಲೆ ತನ್ನ ಐಷರಾಮಿ ಕಾರನ್ನು ಹತ್ತಿಸುತ್ತಾನೆ. ಈ ಘಟನೆಯಲ್ಲಿ ನೂರುಲ್ಲ ಷರೀಫ್ ಎಂಬುವವರು ಪ್ರಾಣ ಕಳೆದುಕೊಂಡರೆ, ಖಲೀಮ್, ಅಬ್ದುಲ್ಲಾ, ಮುನ್ನಾ ಮತ್ತು ಮುಸ್ಲಿಂ ಶೇಕ್ ಎಂಬುವವರು ಗಂಭೀರವಾಗಿ ಗಾಯಗೊಳ್ಳುತ್ತಾರೆ. ನೂರುಲ್ಲಾ ಮೇಲೆ ಹತ್ತಿ ನಿಂತಿದ್ದ ತನ್ನ ಐಷಾರಾಮಿ ಕಾರಿಂದ ಇಳಿದ ಸಲ್ಮಾನ್ ಖಾನ್ ಎಂಬ ನಟ ಕಮ್ ಸಮಾಜ ಸೇವಕ, ಆಸ್ಪತ್ರೆಗೆ ಸೇರಿಸುವ ಸೌಜನ್ಯವನ್ನು ತೋರದೆ ಆಟೋ ಹತ್ತಿ ಘಟನಾ ಸ್ಥಳದಿಂದ ಓಡಿ ಹೋಗುತ್ತಾನೆ. ಇಂತಹವನನ್ನು ಮಾನವೀಯತೆ ನೆಲೆಗಟ್ಟಿನಲ್ಲಿ ಕ್ಷಮಿಸಬೇಕಾ? ಸ್ಥಳದಿಂದ ಪರಾರಿಯಾದ ಸಲ್ಮಾನ್ ಖಾನ್ ನನ್ನು ಮರುದಿನ ಪೋಲೀಸರು ಬಂಧಿಸುತ್ತಾರೆ. ಸಲ್ಮಾನ್ ಜಾಮೀನಿನ ಮೇಲೆ ಹೊರಬರುತ್ತಾನೆ. ವೈದ್ಯಕೀಯ ಪರೀಕ್ಷೆಗಳು ಸಲ್ಮಾನ್ ಕುಡಿದು ವಾಹನ ಓಡಿಸಿರುವುದನ್ನು ಸಾಬೀತುಪಡಿಸುತ್ತವೆ, ಸಲ್ಮಾನ್ ಮಾತ್ರ ಆಗಲು ನಾನವನಲ್ಲ ವಾದದ ಮೊರೆಹೋಗುತ್ತಾನೆ. 2002 ಅಕ್ಟೋಬರ್ 7ರಂದು ಜಾಮೀನು ನೀಡುವ ಮುನ್ನ ಬಾಂಬೆ ಹೈಕೋರ್ಟ್, ಅಪಘಾತದಲ್ಲಿ ಮಡಿದ ನೂರುಲ್ಲ ಕುಟುಂಬಕ್ಕೆ 10ಲಕ್ಷ ಮತ್ತು ಗಾಯಗೊಂಡಿರುವವರ ಕುಟುಂಬಕ್ಕೆ 9ಲಕ್ಷ, ಒಟ್ಟು 19ಲಕ್ಷಗಳನ್ನು ಪರಿಹಾರವಾಗಿ ನೀಡಬೇಕೆಂದು ಆಗ್ರಹಿಸುತ್ತದೆ.

            ಆದರೆ ಘಟನೆ ನಡೆದು ದಶಕಗಳೆ ಕಳೆದರು ಆ ಮೊತ್ತವಿನ್ನು ಬಲಿಪಶುಗಳ ಕೈ ಸೇರಿಲ್ಲ. ಎಂತಹ ದಾನ ಶೂರ ಸಲ್ಮಾನ್ ಅಲ್ಲವೇ. ಸಲ್ಮಾನ್ ನ ಬಾಡಿಗಾರ್ಡ್ ರವೀಂದ್ರ ಪಾಟೀಲ್, ಪ್ರತ್ಯಕ್ಷದರ್ಶಿ ರಾಮೇಸ್ರಿ ಪಾಂಡೆ ಮತ್ತು ಸಲ್ಮಾನ್ ಅಪಘಾತ ಮಾಡುವ ಮೊದಲು ಮದ್ಯ ಸೇವಿಸಿದ ಹೋಟೇಲ್ ನ ನೌಕರರನ್ನು ಸಾಕ್ಷಿಗಳನ್ನಾಗಿಸಿಕೊಂಡು ಕೇಸ್ ನ ವಿಚಾರಣೆ ಪ್ರಾರಂಭವಾಗುತ್ತದೆ. ಸಲ್ಮಾನ್ ಪರ ವಕೀಲರು ,ಆ ಐದು ಜನ ಫುಟ್ ಪಾತ್ ನಲ್ಲಿ ಮಲಗಿದ್ದೆ ದೊಡ್ಡ ತಪ್ಪು ಹಾಗಾಗಿ ಅಪಘಾತದಲ್ಲಿ ಸಲ್ಮಾನ್ ತಪ್ಪೇನು ಇಲ್ಲವೆಂಬ ಉತ್ತಂಡ ವಾದವನ್ನು ಮಂಡಿಸುತ್ತಾರೆ. ವಿಚಾರಣ ಅವಧಿ ಪೂರ್ತಿ ಸಲ್ಮಾನ್ ಕೂಡ ಅಸಂಬದ್ಧ ಹೇಳಿಕೆಗಳನ್ನೇ ನೀಡುತ್ತಾನೆ. ಪ್ರಬಲವಾದ ಸಾಕ್ಷಿಗಳಿದ್ದರು ತನ್ನ ಹಣ ಮತ್ತು ವರ್ಚಸ್ಸನ್ನು ಬಳಸಿದ ಸಲ್ಮಾನ್ ವಿಚಾರಣೆಯನ್ನು ದೀರ್ಘಾವದಿಗೆ ಎಳೆಯಲು ಸಫಲವಾಗುತ್ತಾನೆ. ಹದಿಮೂರು ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನಂತರ, ಮೇ ಆರು 2015ರಂದು ಮುಂಬೈನ ಸೆಷನ್ ಕೋರ್ಟ್, ಸಲ್ಮಾನ್ ಖಾನ್ ಅಪರಾಧಿಯೆಂದು ಪರಿಗಣಿಸಿ ಐದುವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸುತ್ತದೆ. ಆದರೆ ತೀರ್ಪಿನ ಮುನ್ಸೂಚನೆ ದೊರಕಿದ್ದ ಸಲ್ಮಾನ್ ಪರ ಚಾಲಾಕಿ ವಕೀಲರು ಎರಡು ದಿನಗಳ ಬೇಲ್ ಪಡೆದು ಸಲ್ಮಾನ್ ಖಾನ್ ಜೈಲಿಗೆ ಹೋಗುವುದನ್ನು ತಪ್ಪಿಸಿದ್ದಲ್ಲದೆ, ಅಂದೇ ಹೈ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ಆಗಲೇ ನೋಡಿ , ಇದುವರೆವಿಗೂ ಆಮೆ ಗತಿಯಲ್ಲಿ ಸಾಗುತ್ತಿದ್ದ ಕೇಸ್, ಇದ್ದಕ್ಕಿದ್ದಂತೆ ಚಿರತೆ ವೇಗ ಪಡೆದು ಕೊಳ್ಳುವುದು. ಒಂದು ಸಮೀಕ್ಷೆಯ ಪ್ರಕಾರ ೪೦೦೦ಕ್ಕೂ ಹೆಚ್ಚು ವಿಚಾರಣಾಧೀನ ನಿರಪರಾಧಿಗಳು ಭಾರತದ ಅನೇಕ ಜೈಲುಗಳಲ್ಲಿ ತಮ್ಮ ಕೇಸ್ ಗಳು ಕೋರ್ಟ್ ಮುಂದೆ ವಿಚಾರಣೆಗೆ ಬಂದರೆ ಸಾಕಪ್ಪ ಎಂದು ನರಳುತ್ತಿದ್ದಾರೆ. ಅಂತಹುದರಲ್ಲಿ ,ಎರಡೇ ದಿನದಲ್ಲಿ ಸಲ್ಮಾನ್ ಕೇಸ್ ಹೈ ಕೋರ್ಟ್ ಮುಂದೆ ವಿಚಾರಣೆಗೆ ಬರುತ್ತದೆಯೆಂದರೆ ಯಾವಮಟ್ಟಿಗಿನ ಲಾಭಿ ನಡೆದಿರಬಹುದು ನೀವೇ ಊಹಿಸಿಕೊಳ್ಳಿ.

            ಇನ್ನು ವಿಚಾರಣಾಧಿಕಾರಿಗಳ ಬೇಜವಾಬ್ದಾರಿ ಎಷ್ಟಿತ್ತೆಂದರೆ, ಘಟನಾ ಸಂಧರ್ಭದಲ್ಲಿ ಸಲ್ಮಾನ್ ಜೊತೆಗಿದ್ದ ನಟ ಕಮ್ ಗಾಯಕ ಕಮಲ್ ಖಾನ್ ರನ್ನು, ಹದಿಮೂರು ವರ್ಷಗಳ ಸುದೀರ್ಘ ವಿಚಾರಣೆಯಲ್ಲಿ ಒಂದು ಬಾರಿಯು ವಿಚಾರಣೆಗೆ ಒಳಪಡಿಸಿರುವುದಿಲ್ಲ. ಅಷ್ಟೇಕೆ, ಕನಿಷ್ಠ ಘಟನೆಯ ಬಗ್ಗೆ ಒಂದು ಹೇಳಿಕೆಯನ್ನು ಪಡೆದಿರುವುದಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಸಲ್ಮಾನ್ ಪರ ವಕೀಲರು , ಮುಂಬೈ ಹೈ ಕೋರ್ಟ್ ನಲ್ಲಿ, ಸೆಷನ್ ಕೋರ್ಟ್ ನ ಆದೇಶವನ್ನು ರದ್ದುಮಾಡಿ ಸಲ್ಮಾನ್ ಗೆ ಜಾಮೀನು ಕೊಡಬೇಕೆಂದು ವಾದವನ್ನು ಮಂಡಿಸುತ್ತಾರೆ. ಘಟನೆಯಲ್ಲಿ ಕಮಲ್ ಖಾನ್ ಹೇಳಿಕೆ ಪ್ರಮುಖವಾದ್ದರಿಂದ ನ್ಯಾಯಾಲಯ ಕೂಡ ಸಲ್ಮಾನ್ ಗೆ ಜಾಮೀನು ಕೊಟ್ಟು, ಕಮಲ್ ಖಾನ್ ವಿಚಾರಣೆ ನಡೆಸುವಂತೆ ಸೂಚಿಸುತ್ತದೆ. ಅಲ್ಲಿಗೆ ಸಂತ್ರಸ್ತರ ಹದಿಮೂರು ವರ್ಷಗಳ ಹೋರಾಟಕ್ಕೆ ಮತ್ತೆ ಸೋಲಾಗುತ್ತದೆ. ಸಧ್ಯಕ್ಕೆ ಮತ್ತೆ ಕೇಸ್ ಎಲ್ಲಿ ಪ್ರಾರಂಭವಾಗಿತ್ತೋ ಅಲ್ಲಿಗೆ ಬಂದು ನಿಂತಿದೆ. ವಿದೇಶದಲ್ಲಿ ನೆಲೆಸಿರುವ ಕಮಲ್ ಖಾನ್ ರ ವಿಚಾರಣೆಯಾಗಬೇಕಿದೆ. ಸಲ್ಮಾನ್ ತನ್ನ ಪ್ರಭಾವ ಬಳಸಿ ವಿಚಾರಣೆಯನ್ನು ದೀರ್ಘಗೊಳಿಸುವುದು ಖಚಿತ. ನ್ಯಾಯಕ್ಕಾಗಿ ಬಡಪಾಯಿಗಳು ಇನ್ನೆಷ್ಟು ದಿನ ಕೋರ್ಟ್ ಗೆ ಅಲೆಯಬೇಕೊ ದೇವರೆ ಬಲ್ಲ. ಈತನ್ಮದ್ಯೆ ನಮ್ಮ ಕೆಲ ನಟ-ನಟಿಯರು ಮತ್ತು ಸಲ್ಮಾನ್ ಅಭಿಮಾನಿಗಳೆಂದು ಹೇಳಿಕೊಳ್ಳುವ ಕೆಲ ಜನರು ಸಲ್ಮಾನ್ ಮಾಡುತ್ತಿರುವ ಸಮಾಜ ಸೇವೆಯನ್ನು ಗಮನದಲ್ಲಿಟ್ಟುಕೊಂಡು, ಮಾನವೀಯತೆಯ ನೆಲೆಯಲ್ಲಿ ಕ್ಷಮೆ ನೀಡಿ ಕೇಸ್ ನ್ನು ವಜಾ ಗೊಳಿಸುವಂತೆ ನ್ಯಾಯಾಲಯಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಅಲ್ಲಾ ಸ್ವಾಮಿ ನಿಮ್ಮ ಸಲ್ಮಾನ್ ನಿಜವಾಗಲು ಸಮಾಜ ಸೇವೆಮಾಡುತ್ತಿದ್ದರೆ ಸರ್ಕಾರ ಸೇವೆಯನ್ನು ಗುರುತಿಸಿ ಪ್ರಶಸ್ತಿಕೊಡಲಿ. ಆದರೆ ಮಾಡಿರುವ ತಪ್ಪನ್ನು ಒಪ್ಪಿಕೊಂಡು ಮೊದಲು ಶಿಕ್ಷೆ ಅನುಭವಿಸಲಿ. ಮಲಗಿದವರ ಮೇಲೆ ಕಾರು ಹತ್ತಿಸಿ, ಆಸ್ಪತ್ರೆಗೂ ಸೇರಿಸದೆ ಓಡಿಹೋದವನನ್ಯಾಕೆ ಕ್ಷಮಿಸಬೇಕು ಸ್ವಲ್ಪ ಹೇಳುವಿರಾ? ಕುಡಿದು ವಾಹನ ಚಾಲನೆ ಮಾಡಿ ಸಾವು-ನೋವುಗಳಿಗೆ ಕಾರಣವಾಗಿರುವುದು ಜಗತ್ತಿಗೆ ತಿಳಿದಿದ್ದರು, ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ, ತನ್ನ ಕಾರ್ ಡ್ರೈವರನ್ನು ಬಲಿಪಶು ಮಾಡಲು ಯತ್ನಿಸುತ್ತಿರುವ ಮಾನವೀಯತೆಯೆ ಇಲ್ಲದ ಮನುಷ್ಯನಿಗೆ ಮಾನವೀಯತೆ ತೋರಿಸಬೇಕಾ? ಘಟನೆಯ ಪ್ರತ್ಯಕ್ಷದರ್ಶಿ ತನ್ನ ಬಾಡಿಗಾರ್ಡ್ ತನ್ನ ವಿರುದ್ಧ ಸಾಕ್ಷಿ ಹೇಳಿದ ಎಂಬ ಒಂದೇ ಕಾರಣಕ್ಕೆ ಅವನ ಜೀವನವನ್ನೇ ಸ್ಮಶಾನ ಮಾಡಿದವನನ್ನು ಸುಮ್ಮನೆ ಬಿಟ್ಟು ಬಿಡಬೇಕಾ? ವಿಚಾರಣೆ ಸಂಧರ್ಭದಲ್ಲಿ ನ್ಯಾಯಲಯಕ್ಕೆ ಮತ್ತು ಕಾನೂನಿಗೆ ಅಗೌರವ ತೋರಿದವನಿಗೆ ಗೌರವ ಕೊಡಬೇಕಾ ? 2002ರಲ್ಲಿ ಕೃತ್ಯದ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿಕೊಂಡಾಗ , ಇದು ನನ್ನ ಮೂಲಕ ದೇವರು ಮಾಡಿಸಿದ್ದು ಎಂಬ ಬೇಜವಬ್ದಾರಿ ಹೇಳಿಕೆ ನೀಡಿದವನನ್ನು ಮನ್ನಿಸಬೇಕೆ? ಯಾವ ಸೀಮೆಯ ನ್ಯಾಯ ಸ್ವಾಮಿ ನಿಮ್ಮದು. ಇನ್ನು ಕೇವಲ ಸಲ್ಮಾನ್ ಖಾನ್ ನನ್ನು ಮೆಚ್ಚಿಸಲು ಫುಟ್ ಪಾತ್ ನಲ್ಲಿ ಮಲಗುವವರನ್ನು ನಾಯಿಗಳು ಎಂದ ಗಾಯಕ ಅಭಿಜಿತ್ ಮತ್ತು ಫುಟ್ ಪಾತ್ ನಲ್ಲಿ ಮಲಗುವುದು ಘೋರ ಅಪರಾಧವೆಂದ ಫರಾಹ್ ಖಾನ್ರಂತ ಅನೇಕ ವಿಕೃತ ಮನಸುಗಳ ಬಗ್ಗೆ ಮಾತನಾಡದಿರುವುದೆ ಒಳಿತು.

          ಇದೇ ತಿಂಗಳು ಸಲ್ಮಾನ್ ಕೇಸ್ ಜೊತೆ ಇನ್ನೊಂದು ಕೇಸ್ ನ ತೀರ್ಪು ಹೊರಬಿದ್ದಿದೆ. ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಎದುರಿಸುತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತರ ಕೇಸನ್ನು ಕರ್ನಾಟಕ ಹೈ ಕೋರ್ಟ್ ವಜಾಗೊಳಿಸಿದೆ. ಇಲ್ಲೂ ಕೂಡ ಸಲ್ಮಾನ್ ಕೇಸ್ ನಂತೆ ಜಯಲಲಿತ ವಿರುದ್ದ ಸಾಕಷ್ಟು ಪ್ರಬಲ ಸಾಕ್ಷಿಗಳಿದ್ದರು, ತೀರ್ಪು ಜಯಲಲಿತ ಪರ ಹೊರಬಿದ್ದಿರುವುದು ನ್ಯಾಯಾಂಗ ವ್ಯವಸ್ಥೆಯನ್ನೇ ಸಂಶಯದ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಸಧ್ಯದಲ್ಲೇ ಇವೆರೆಡು ಕೇಸ್ ಗಳು ಸುಪ್ರಿಂ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದಿಂದ, ಭಾರತೀಯರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ನಂಬಿಕೆಯನ್ನು ಎತ್ತಿ ಹಿಡಿಯುವಂತಹ ತೀರ್ಪು ಹೊರಬೀಳಲಿ. ಸರಿಯಾದ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸಂತ್ರಸ್ತರಿಗೆ ಆದಷ್ಟೂ ಬೇಗ ನ್ಯಾಯ ಸಿಗುವಂತಾಗಲಿ. ಆ ಮೂಲಕ ಭಾರತದ ಕಾನೂನು ,ಹಣವಂತರನ್ನು ಬೆಂಬಲಿಸುವ ಅಂಧಾ ಕಾನೂನ್ ಅಲ್ಲವೇ ಅಲ್ಲ ಎಂದು ಜಗಕೆ ಸಾರುವಂತಾಗಲಿ.

ಮೇರಾ ಭಾರತ್ ಮಹಾನ್.

-ಅರ್ಜುನ್ ದೇವಾಲದಕೆರೆ

Comments