ಗುಜರಿ ಕಹಾನಿ

ಗುಜರಿ ಕಹಾನಿ

ಸಾವಿಲ್ಲದ ಮನೆಯಿಂದ ಸಾಸುವೆ ತಾ ಎಂದಿದ್ದ ಬುದ್ಧ. ಅದರಂತೆ, ಗುಜರಿ ಸಾಮಾನಿಲ್ಲದ ಮನೆಯಿಂದ ಸಾಸುವೆ ತಾ ಎಂದು ಹೇಳಿದ್ದರೂ ನಡೆಯುತ್ತಿತ್ತು. ಏಕೆಂದರೆ, ಸಾಸುವೆ ಇಲ್ಲದ ಮನೆಯಿರಬಹುದು, ಆದರೆ ಗುಜರಿ ಸಾಮಾನಿಲ್ಲದ ಮನೆ ಖಂಡಿತ ಇರದು ಎಂದೇ ನನ್ನ ಖಚಿತ ನಂಬಿಕೆ. ನಾಳೆಗೆ ಉಪಯೋಗಕ್ಕೆ ಬರಬಹುದು ಎಂದು ನಾವು ನೆನ್ನೆಯೋ, ಅಥವಾ ಮೊನ್ನೆಯೋ ಅಥವಾ ಅದಕ್ಕೂ ಹಿಂದೆಯೋ ಅದೇನೋ ಸಾಮಾನನ್ನು ಎತ್ತಿಟ್ಟಿರುವುದು ನಮ್ಮೆಲ್ಲರ ಚಾಳಿ ಅಲ್ಲವೆ? ಆದರೆ ಅನೇಕ ವೇಳೆ ಏನು ಸಾಮಾನು ಎಲ್ಲಿಟ್ಟೀದ್ದೇವೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ. ಅಥವಾ " ಎಲ್ಲೋ ಇಟ್ಟಿದ್ದೆ" ಎಂದು ಹುಡುಕಾಡಿ, ಸಿಗದೆ , ಕೊನೆಗೆ ಅದನ್ನೇ ಅದನ್ನು "ನಾಳೆಗಾಗಿ" ಎಂಬ ಆಶಾಭಾವನೆಯಿಂದ "ನಿನ್ನೆ" ತೆಗೆದಿಟ್ಟಿದ್ದು ವ್ಯರ್ಥವೇ ಆಗುತ್ತದೆ.

ಇಂತಹ ಗುಜರಿ ಸಾಮಾನುಗಳ ಮೇಲೆ ಆಗಾಗ್ಗೆ ನಮ್ಮ ಕಣ್ಣು ಬೀಳುತ್ತಿದೆ. ಆಗಾಗ್ಗೆ ಎಂದರೆ , 2-3 ವರ್ಷಕ್ಕೊಮ್ಮೆ ಎಂದು ಧಾರಾಳಾವಾಗಿ ಹೇಳಬಹುದು. ಈ ಕಣ್ಣು ಬೀಳುವ ಉದ್ದೇಶ ಸ್ಟಾಕ್ ವೆರಿಫಿಕೇಷನ್ ಮಾಡಲು ಅಲ್ಲ. ಬದಲಿಗೆ ಇದ್ದಕ್ಕಿದ್ದಂತೆ ಮನೆ ಕ್ಲೀನ್ ಮಾಡುವ ಗೀಳು ಹತ್ತಿದ್ದರಿಂದ. ಆಗ ಸ್ಟೋರ್ ರೂಂ ಹೊಕ್ಕು ಅಥವಾ ಅಟ್ಟ ಹತ್ತಿ ಹೇಗೆ ನಿನ್ನೆ, ಮೊನ್ನೆಗಳಿಂದ ಸಂಗ್ರಹವಾಗಿದ್ದ ಸಾಮಾನುಗಳನ್ನು ಕೆಳಗಿಳಿಸಿ ಅಥವಾ ಹೊರತೆಗೆದು ಅದರ ಮೇಲೆ ಕಣ್ಣಾಡಿಸತೊಡಗುತ್ತೇವೆ. ನಮ್ಮ ಸಂಗ್ರಹ ನೋಡಿ ನಮಗೆ ಆಶ್ಚರ್ಯವಾಗಬಹುುದು. ಅಥವಾ ನಗು ಬರಬಹುದು. ಅಥವಾ ಎರಡೂ ಆಗಬಹುದು. ಏಕೆಂದರೆ, ಅನೇಕ ಐಟಂಗಳನ್ನು ಯಾವ ಘನ ಉದ್ದೇಶದಿಂದ ನಾವು ಹೀಗೆ ಜೋಪಾನವಾಗಿ ತೆಗೆದದಿರಿಸಿದ್ದೇವೆ ಎಂಬುದೇ ನಮಗೆ ಇನ್ ವೆಂಟರಿ ಸಮಯದದಲ್ಲಿ ಅರ್ಥವಾಗುವುದಿಲ್ಲ. ಹೆಂಡತಿ ಅದನ್ನು ತೆಗೆದಿರಿಸಿದ್ದರೆ ಗಂಡ ಅವಳ ಮೇಲೆ ಡೀಕಾಸ್ರ್ತ ಬಿಡುವುದು ಅಥವಾ ಗಂಡ ತೆಗೆದಿರಿಸಿದ್ದರೆ ಹೆಂಡತಿ ಗರಂ ಆಗಿ ಮಾತನಾಡುವುದು ಮಾಮೂಲು.

ಇತ್ತೀಚೆಗೆ ನಮ್ಮ ಮನೆಯಲ್ಲಿ ಹೀಗೊಂದು ಇನ್ ವೆಂಟರಿ ಅಥವಾ ಸ್ಟಾಕ್ ಚೆಕಿಂಗ್ ನಡೆದಾಗ ಹಲವಾರು ಅನಾವಶ್ಯಕ ಐಟಂಗಳು ಕಣ್ಣಿಗೆ ಬಿದ್ದವು. ಆದರೆ ಅದು ಅನಾವಶ್ಯಕ ಎಂದು ಆಗ ಅನ್ನಿಸಲಿಲ್ಲ. ಆದುದರಿಂದಲೇ ಅವು ಸ್ಟೋರ್ ರೂಂನಲ್ಲಿ ಜಾಗ ಪಡೆದುಕೊಂಡಿದ್ದವು. ಆದರೆ ಈಗ ? ಅವುಗಳನ್ನೇನು ಮಾಡುವುದು ಎಂಬ ಸಮಸ್ಯೆ ಈಗ ನಾವು ಎದುರಿಸಬೇಕಾಯಿತು. ಪುಣ್ಯಕ್ಕೆ ನಮ್ಮ ಮನೆಗೆಲಸದವಳಿಗೆ ಅವು ಅವಶ್ಯಕ ಎಂದೆನಿಸಿ ಅವುಗಳನ್ನು ಟೆಂಡರ್ ಗಳಲ್ಲಿ ಹೇಳುವ ಹಾಗೆ "as is where is condition” ಮೇಲೆ ಕೊಂಡೊಯ್ಯಲು ಮುಂದೆ ಬಂದಳು. ನಮಗೆ ನಿರಾಳವಾಯಿತು. ಆದರೆ ಹೀಗೆ ಮುಂದೊಮ್ಮೆ ದಾನ ಮಾಡಲು ಇವು ಬೇಕಾಗಿಬರುತ್ತವೆ ಎಂಬ ಉದ್ದೇಶ ಅಥವಾ vision ಇಟ್ಟುಕೊಂಡು ನಾವು ಅದನ್ನು ಕಾಪಾಡಿಕೊಂಡು ಬಂದಿರಲಿಲ್ಲ ಎಂಬ ಸಂಗತಿ ಈಗ ಗೋಚರವಾದಾಗ ನಮಗೆ ವಿಸ್ಮಯ.

ಹೀಗೆ ಸ್ಟಾಕ್ ವೆರಿಫಿಕೇಷನ್ ಆಗುವಾಗ ಹಲವಾರು ಪೆಟ್ಟಿಗೆಗಳು ಸಿಗುತ್ತವೆ ಎಂದುಕೊಳ್ಳಿ. ಯಾವ ಪೆಟ್ಟಿಗೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿರುವುದಿಲ್ಲ. ಆದುದರಿಂದ ಅದರಲ್ಲಿದ್ದ ಯಾವುದೇ ಐಟಂನ ಅಗತ್ಯ ನಮಗೆ ಬಿದ್ದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ಪೆಟ್ಟಿಗೆಗಳನ್ನು ತೆರೆಯದೆ " ಎಲ್ಲವನ್ನೂ ನೀನು ತೆಗೆದುಕೊಂಡು ಹೋಗು" ಎಂದು ನಮ್ಮ ಕೆಲಸದಾಕೆಗೆ ನಾವು ಹೇಳುವುದಿಲ್ಲ. ಅ ವುಗಳಲ್ಲಿ ಏ ನಿರಬಹುದು ಎಂದು ನೋಡುವ ಕುತೂಹಲ ನಮಗೆ. ನೋಡಿದ ಮೇಲೆ ಬೇಡಾದ ವಸ್ತುವಿಗೆ ಅಂಟುಕೊಂಡಿದ್ದ ನಮ್ಮ ಮೋಹ ನಮ್ಮೆದುರಿಗೆ ಬಿಚ್ಚಿಕೊಳ್ಳುತ್ತದೆ. ಆ ಮೋಹದಿಂದ ಮತ್ತೆ ಆವರಿಸಿಕೊಂಡು ಹೊರ ಅಧ್ಯಾಯ ಪ್ರಾರಂಭವಾಗುತ್ತದೆ. “ನಾಳೆಗೆ" ಎಂದು ಐಟಂಗಳ ಸಂಗ್ರಹಣೆ ಮತ್ತೆ " ಇಂದು" ಆರಂಭವಾಗುತ್ತದೆ. ಪುನರಪಿ ಕ್ಲಿಯರೆನ್ಸ್, ಪುನರಪಿ ಸಂಗ್ರಹಂ....
 
ಈ ಸ್ಟಾಕ್ ವೆರಿಫಿಕೇಷನ್ ಬಗ್ಗೆ ಬರೆಯುತ್ತಿರುವಾಗ ಶ್ರೀ ಶ್ರೀಗಳೊಬ್ಬರು ನೀಡಿದ ಉಪದೇಶ ನೆನಪಿಗೆ ಬಂದಿತು. ಅದರ ಪ್ರಕಾರ ನಮ್ಮ ಮನಸ್ಸು ಸಹ ಹೀಗೆ ಗುಜರಿ ಐಟಂಗಳನ್ನು ಸಂಗ್ರಹಿಸಿರುತ್ತದೆ - ಕೆಟ್ಟ ಘಟನೆಗಳು, ಬೇಡವಾದ ವಿಷಯಗಳು, ಅಹಿತಕರ ಆಲೋಚನೆಗಳು, ಇತ್ಯಾದಿ. ಆದುದರಿಂದ ಮನಸ್ಸನ್ನೂ ಒಮ್ಮೆ ಜಾಲಾಡಿ ಅಂತಹ ಬೇಡವಾದ ಐಟಂಹಳನ್ನು ಹೊರಹಾಕಿ. ಹ್ಞಾ! ಆ ಬೇಡವಾದ ಐಟಂಹಳನ್ನು ಕೆಲಸದಾಕೆಗೆ ಕೊಡಬೇಡಿ!
 
(ಚಿತ್ರ ಕೃಪೆ: ಗೂಗಲ್)