ಗುರೂ, ಸುಧಾರಿಸಿಕೊ ಒಂಚೂರು....

ಗುರೂ, ಸುಧಾರಿಸಿಕೊ ಒಂಚೂರು....

ಗುರೂ,ಸುಧಾರಿಸಿಕೊ ಒಂಚೂರು. ..

ಭಾರತ ಭವ್ಯ ಗುರುಪರಂಪರೆಯನ್ನು ಹೊಂದಿರುವ ದೇಶ.ವಸಿಷ್ಠ-ರಾಮ,ದ್ರೋಣ-ಅರ್ಜುನ,ರಾಮದಾಸ-ಶಿವಾಜಿ,ಪರಮಹಂಸ-ಸ್ವಾಮಿ ವಿವೇಕನಾಂದ ಹೀಗೆ ಜಗತ್ತಿಗೆ ಮಾದರಿಯಾಗುವಂತಹ ಗುರು ಶಿಷ್ಯರ ಉದಾಹರಣೆಗಳು ನಮ್ಮಲ್ಲಿವೆ.ಇತ್ತೀಚಿನ ದಿನಗಳಲ್ಲಿ ಈ ಸಂಬಂಧ ಸಡಿಲಗೊಂಡು ಯಾವುದೋ ತನ್ನದಲ್ಲದ ದಿಕ್ಕಿನತ್ತ ಸಾಗುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಲ್ಲೊಂದು ಇಲ್ಲೊಂದು 'ಕಪ್ಪುಕುರಿಗಳು' ಆಗಾಗ ಕಾಣಿಸಿಕೊಳ್ಳುತ್ತಿದೆ.ಗುರು ಎಂದೆನಿಸಿಕೊಳ್ಳುವವನು ಅಥವಾ ಎನಿಸಿಕೊಳ್ಳುವವಳು ತನ್ನ ಶಿಷ್ಯರ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ ಶಿಕ್ಷಣ-ಶಿಕ್ಷಕರ ಪ್ರತಿಷ್ಠೆಯನ್ನು ಮಂಕಾಗಿಸಿ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ.ತಾವು ಕೂಡ ಉಪ್ಪು ಹುಳಿ ಖಾರ ತಿನ್ನುವ ಸಾಮಾನ್ಯ ಮನುಷ್ಯರೆಂದು ತಮ್ಮನ್ನು ಭಾವಿಸಿರುವುದೇ ಇದಕ್ಕೆ ಕಾರಣ.ಸಮಾಜದ ಸಾವಿರಾರು ಕಣ್ಣುಗಳು ತನ್ನನ್ನು ನೋಡುತ್ತಿರುತ್ತವೆ ಎಂಬ ಸಾಮಾನ್ಯ ಪ್ರಜ್ಞೆಯನ್ನು ಅವರು ಕಳೆದುಕೊಂಡಿರುತ್ತಾರೆ.ಒಮ್ಮೆ ಶಿಕ್ಷಕ ವೃತ್ತಿಗೆ ಸೇರಿಕೊಂಡರೆ ಅವನು ಸಾಮಾನ್ಯರಂತೆ ಇರಲು ಸಾಧ್ಯವಿಲ್ಲ. ತನಗೆ ತಾನೆ ಕೆಲವು ದಿಗ್ಭಂಧನಗಳನ್ನು ಹಾಕಿಕೊಳ್ಳಬೇಕಾಗುತ್ತದೆ.ಹಿಂದೆ ಯೋಗಿಗಳು ಅಂತ ಯಾರನ್ನು ಕರೆಯುತ್ತಿದ್ದೆವೋ ಅಂತವರಷ್ಟು ಎತ್ತರಕ್ಕೆ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಬೇಕು.ಆಗ ಮಾತ್ರ ಶಿಕ್ಷಕರು ಆಧುನಿಕ ಕಾಲದ ಪ್ರಚೋಧನ ಶಕ್ತಿಗಳಿಂದ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.ಮನೆಯ ಸಮಸ್ಯೆಗಳನ್ನು ಶಾಲೆಗೆ ತರುವ ಶಿಕ್ಷಕರು ದೃಢಮನೋಬಲವನ್ನು ಹೊಂದಿರುವುದಿಲ್ಲ.ಬಹುತೇಕ ಸಮಸ್ಯೆಗಳಿಗೆ ಇಂತವರೆ ಕಾರಣರಾಗಿರುತ್ತಾರೆ.ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಯಾವತ್ತೂ ಪರಸ್ಪರ ಕಲಬೆರಕೆ ಮಾಡಬಾರದು.
ಇಂದು ಶಾಲೆಗಳು ಕಾರ್ಖಾನೆಗಳಾಗಿ ಬದಲಾಗಿವೆ.ಮಕ್ಕಳನ್ನು ಕಚ್ಚಾವಸ್ತುವನ್ನಾಗಿ ಪೋಷಕರು ಶಾಲೆಗೆ ಪೂರೈಸುತ್ತಾರೆ.ಅದರ ಜೊತೆ ಒಂದಷ್ಟು ಬಂಡವಾಳವನ್ನು ಹಾಕುತ್ತಾರೆ.ಮಕ್ಕಳನ್ನು ಸಿದ್ಧವಸ್ತುಗಳಾಗಿ ಮಾಡುವ ಜವಾಬ್ದಾರಿಯನ್ನು ಶಾಲೆಯವರಿಗೆ ವಹಿಸುತ್ತಾರೆ.ಇಲ್ಲಿ ಪಾಲಕ ಷೇರುದಾರನಂತೆ ವರ್ತಿಸುತ್ತಾನೆ.ಹೀಗಾಗಿ ಅಲ್ಲಿ ಬೋಧಿಸುವವರು ಕೂಡ ಮಕ್ಕಳನ್ನು 'ಸರಕು' ಎಂದೇ ಭಾವಿಸುತ್ತಾರೆ.ಇಂತಹ ಮನಸ್ಥಿತಿ ಇದ್ದಾಗ ಅಲ್ಲಿ ಮಗು ಮತ್ತು ಶಿಕ್ಷಕನ ನಡುವೆ ಯಾವುದೇ ಬಾಂಧವ್ಯ ಇರದು ಸಾಧ್ಯವಿಲ್ಲ.ಮಕ್ಕಳ ಮೇಲೆ ಹೆಚ್ಚುತ್ತಿರುವ ಶೋಷಣೆಯ ಮೂಲ ಇರುವುದೇ ಇಲ್ಲಿ.
ಅಪರಾಧಗಳು ವ್ಯಕ್ತಿಗತವಾಗಿರುತ್ತದೆ.ಆಯಾ ವ್ಯಕ್ತಿಯ ಮನಸ್ಥಿತಿ ಮತ್ತು ಪರಿಸರದ ಪ್ರಭಾವ ಅಪರಾಧಕ್ಕೆ ಕಾರಣವಾಗಿರುತ್ತದೆ.ಹಾಗಾಗಿ ಅದನ್ನು ಇಡಿಯ ಸಮುದಾಯದ ಮೇಲೆ ಹೊರಿಸುವುದು ಸರಿಯಾದುದಲ್ಲ.ಎಷ್ಟೋ ಬಾರಿ ಶಿಕ್ಷಕ ಯಾರದ್ದೋ ಹಿತಾಸಕ್ತಿಗೆ ಬಲಿಯಾದದ್ದು ಇದೆ.ಗಾಜಿನ ಮೇಲೆ ಕಲ್ಲು ಬಿದ್ದರು ಕಲ್ಲಿನ ಮೇಲೆ ಗಾಜು ಬಿದ್ದರು ಪುಡಿಯಾಗೋದು ಗಾಜೆ.ಹಾಗಾಗಿ ಶಿಕ್ಷಕ ತನ್ನ ಎಚ್ಚರಿಕೆಯಲ್ಲಿ ತಾನಿರಬೇಕು.ಒಮ್ಮೆ ಅವನು ಸಮಾಜದ ದೃಷ್ಟಿಯಲ್ಲಿ ಖಳನಾಯಕನಾದರೆ ಮತ್ತೆಂದಿಗೂ ಹೀರೊ ಆಗಲಾರ.ನೂರು ಬಣ್ಣಗಳನ್ನು ಒಂದು ಮಸಿ ನುಂಗಿತು ಅನ್ನೋ ಹಾಗೆ ಶಿಕ್ಷಕರು ಮಾಡಿದ ನೂರು ಒಳ್ಳೆಯ ಕಾರ್ಯಗಳನ್ನು ಒಂದು ಕೆಟ್ಟ ಕೆಲಸ ಕುಲಗೆಡಿಸಬಹುದು.ಹಾಗಾಗಿ ಶಿಕ್ಷಕರೇ, ಇಂದ್ರಿಯಗಳ ನಿಗ್ರಹ ಮಾಡೋದನ್ನು ಕಲಿಯಿರಿ.ನಿಮ್ಮ ಮಾನ ನಿಮ್ಮ ಕೈಯಲ್ಲಿದೆ.

-@ಯೆಸ್ಕೆ