ಗೌಜಿಯ ಅಲೆಯೊಳಗೆ ರಂಗ ನರಳಾಟ

ಗೌಜಿಯ ಅಲೆಯೊಳಗೆ ರಂಗ ನರಳಾಟ

“ಬಯಲಾಟಕ್ಕೆ ಬ್ಯಾಂಡ್ ಮತ್ತು ವಿಪರೀತ ಸುಡುಮದ್ದುಗಳು ಬೇಡ ಅಂತ ನಿರ್ಧರಿಸಿದ್ದೇವೆ. ನಮ್ಮ ಮನೆ ಸುತ್ತ ಜೇನುಗೂಡುಗಳಿವೆ. ಪಕ್ಷಿಸಂಕುಲಗಳಿವೆ. ಸುಡುಮದ್ದುಗಳ ಹೊಗೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ.” ಸೇವಾ ಬಯಲಾಟವೊಂದರಲ್ಲಿ ಸೇವಾಕರ್ತೃ ತೆಗೆದುಕೊಂಡ ನಿರ್ಧಾರವಿದು. ಯಕ್ಷಗಾನವೊಂದನ್ನೇ ಆವಾಹಿಸಿಕೊಂಡ ಮನಕ್ಕೆ ಸೇವಾಕರ್ತರ ಮಾತು ದಾಷ್ಟ್ರ್ಯದಂತೆ ಕಾಣಬಹುದು. ಪ್ರಸ್ತುತ ದಿನಮಾನಕ್ಕೆ ಇವರ ಮಾತು ಕನ್ನಡಿಯಂತೆ ತೋರುತ್ತದೆ.  

ಯಕ್ಷಗಾನ ಬಯಲಾಟಗಳಿಗೆ ಅದ್ದೂರಿತನ ಸ್ಪರ್ಶವಾಗುವುದು ಹೊಸತಲ್ಲ. ಸೇವಾಕರ್ತೃವಿನ ಆರ್ಥಿಕ ಬಲದ ಆಧಾರದಲ್ಲಿ ಗೌಜಿಯ ಬಲಾಬಲ. ಆಡಂಬರದ ವ್ಯವಸ್ಥೆ. ಲಕ್ಷ ರೂಪಾಯಿಗೂ ಮಿಕ್ಕಿದ ಸುಡುಮದ್ದುಗಳು, ವೈವಿಧ್ಯ ಬ್ಯಾಂಡುಗಳು, ರಂಗಾಲಂಕಾರಗಳು, ಜಾಹೀರಾತುಗಳು, ಕಟೌಟ್‍ಗಳು. ಪ್ರಚಾರಗಳು. ಮೃಷ್ಟಾನ್ನ ಭೋಜನದ ವ್ಯವಸ್ಥೆಗಳು. ಎಷ್ಟು ಮಂದಿ ‘ಉಂಡು ಹೋದರು’ ಎಂಬ ಲೆಕ್ಕಾಚಾರದಲ್ಲಿ ಯಶದ ಮೌಲ್ಯಮಾಪನ.  

    
ಪೋಷಕರಾಗಿ, ಸೇವಾಕರ್ತೃವಾಗಿ ಇರುವ ಲಕ್ಷ್ಮೀಪುತ್ರರಿಂದ ಯಕ್ಷಗಾನಕ್ಕೆ ಗೌರವ ಬಂದಿದೆ. ಹಿಂದೆ ರಾಜಾಶ್ರಯ ಎನ್ನುತ್ತಿದ್ದೇವಲ್ಲಾ, ಈ ಮೂಲಕ ಆಶ್ರಯ ಪಡೆಯುತ್ತಿದೆ. ಇವರ ವ್ಯಾಪ್ತಿಯ ಯಕ್ಷಗಾನೇತರರೂ ಒಲವು ಹೊಂದುತ್ತಿದ್ದಾರೆ. ಆರಾಧನಾ ಭಾವ ಮೂಡುತ್ತಿದೆ. ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತಿದೆ. ಪ್ರದರ್ಶನಗಳ ಸಂಖ್ಯೆ ವಿಸ್ತøತವಾಗುತ್ತಿದೆ. ತುಂಬಾ ಖುಷಿಯ ಮತ್ತು ಶ್ಲಾಘನೀಯ ವಿಚಾರ. ಆದರೆ ರಂಗ, ಅಭಿವ್ಯಕ್ತಿಯ ಸರ್ವಾಲಂಕಾರದತ್ತ ನೋಟ ಹರಿಸಿದರೆ ಖುಷಿಯ ಗಾಢತೆ ಕಡಿಮೆಯಾಗುತ್ತದೆ.
 
ಈಚೆಗೆ ಹವ್ಯಾಸಿ, ವೃತ್ತಿ ತಂಡಗಳ ಸಾಕಷ್ಟು ಆಟಗಳಲ್ಲಿ ಕಲಾವಿದನಾಗಿಯೂ, ಪ್ರೇಕ್ಷಕನಾಗಿಯೂ ಭಾಗವಹಿಸಿದ್ದೇನೆ. ಅದ್ದೂರಿಗೆ ಹೊಂದದ ರಂಗಕ್ರಿಯೆಗಳ ನರಳಾಟ ಅನುಭವಿಸಿದ್ದೇನೆ. ಭಾವಾಭಿವ್ಯಕ್ತಿಯು ಒದ್ದಾಟ  ಗಮನಿಸಿದ್ದೇನೆ. ಪಾತ್ರಗಳು ಅಸ್ತಿತ್ವವನ್ನು ಕಳೆದುಕೊಂಡು ಬರೇ ‘ವೇಷ’ವಾಗಿ ರಂಗದಲ್ಲಿ ಕಾಣಿಸುಕೊಳ್ಳುವುದನ್ನು ನೋಡಬಹುದು. ಹಿಮ್ಮೇಳದ ನಾದ ಮಾಧುರ್ಯಗಳ ಅಲೆಗಳು ಕರಗಿಹೋಗುತ್ತಿವೆ. ಇವೆಲ್ಲವನ್ನು ಒಪ್ಪಿಕೊಂಡು  ‘ನೋಡಿಯೂ ನೋಡದಂತಹ’ ಅನಿವಾರ್ಯದಲ್ಲಿ  ಮೇಳಗಳಿವೆ. ಮೇಳವು ಒಪ್ಪಿಕೊಂಡ ಮೇಲೆ ಕಲಾವಿದರಾದರೂ ಏನು ಮಾಡಬಹುದು?  

ಸುಡುಮದ್ದುಗಳು ರಾತ್ರಿಯಿಡೀ ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತಲೇ ಇರುತ್ತವೆ. ಪ್ರದರ್ಶನ ವೀಕ್ಷಿಸುವ ಪ್ರೇಕ್ಷಕನ ಚಿತ್ತವೂ ಅತ್ತಿತ್ತ...ಸುತ್ತಮುತ್ತ...!  ಮಹಿಷಾಸುರ, ಚಂಡ, ಮುಂಡ.. ಪಾತ್ರಗಳು ಸಭಾಮಧ್ಯದಿಂದ ಪ್ರವೇಶವಾಗುವುದು ಹೊಸತಲ್ಲ. ಅದಕ್ಕೂ ಆಧುನಿಕತೆಯನ್ನು ಬೆರೆಸಿ ‘ಇದು ಯಕ್ಷಗಾನ ಹೌದೋ, ಅಲ್ಲವೋ ಎಂದು ಕಲಾವಿದನೂ ಬೆರಗಾಗುವಷ್ಟು’ ಅಬ್ಬರದ ಪರಾಕಾಷ್ಠೆ.  ಪ್ರಶ್ನಿಸುವಂತಿಲ್ಲ, ಯಾಕೆ ಹೇಳಿ? ಸೇವಾಕರ್ತರ ಖುಷಿ ಅಲ್ವಾ!
 
“ಬ್ಯಾಂಡ್, ವಾಲಗಗಳ ನಾದಗಳ ಮಧ್ಯೆ ಪಾತ್ರಗಳ ಪ್ರವೇಶ, ನಿರ್ಗಮನ, ಯುದ್ಧದ ಸನ್ನಿವೇಶಗಳು ನಡೆದುಹೋಗುತ್ತದೆ. ಬ್ಯಾಂಡಿನ ಅಬ್ಬರದ ಸದ್ದಿನ ಮಧ್ಯೆ ಯಕ್ಷಗಾನದ ಚೆಂಡೆಯ ನುಡಿತಗಳು ಕಲಾವಿದನಿಗೆ ಅಸ್ಪಷ್ಟವಾಗುತ್ತದೆ. ಆತ ಯಾವ ಸದ್ದಿನ ತಾಳಕ್ಕೆ ಕುಣಿಯಬೇಕು? ಚೆಂಡೆಯ ನುಡಿಗಳಲ್ಲಿ ಲೆಕ್ಕಾಚಾರವಿದೆ. ಆವರಣವಿದೆ. ಸದ್ದಲ್ಲೂ ನಾದದಲೆಯಿದೆ. ಪಾತ್ರ ಸಂವೇದನೆಗಳಿವೆ. ಇವೆಲ್ಲವನ್ನೂ ಮರೆತು ಪಾತ್ರವೊಂದು ಹೇಗೆ ಪ್ರವೇಶ ಮಾಡಬೇಕು?”, ಬಯಲಾಟ ಮೇಳದ ಹಿರಿಯ ಕಲಾವಿದರೊಬ್ಬರ ಅನುಭವ.
    
ಇಂತಹುದೇ ವ್ಯವಸ್ಥೆಯಲ್ಲಿ ನಿತ್ಯ ತೊಡಗುವ ಸನ್ನಿವೇಶಗಳು ಬೆಳೆಯುತ್ತಾ ಹೋದಂತೆ ಕಲಾವಿದರು ತನಗರಿವಿಲ್ಲದೆ ಹೊಂದಿಕೊಳ್ಳುತ್ತಾರೆ. ತನ್ನ ಮನಸ್ಸು, ಅದರೊಳಗಿರುವ ಕಲೆ ಎಲ್ಲವೂ ಗೌಜಿಯ ನೆರಳಿಯಲ್ಲಿ ಬೆಳೆಯುತ್ತದೆ. ಮತ್ತೆಂದೂ ಕಳಚಿಕೊಳ್ಳಲಾಗದ ಒದ್ದಾಟ. ಹೀಗೆ ಬೆಳೆದ ಕಲಾವಿದರಲ್ಲಿ ಮುಂದೆ ಗೌಜಿ ಇಲ್ಲದ, ಸರಳ ಪ್ರದರ್ಶನಗಳಲ್ಲಿ ಪಾತ್ರ ವಹಿಸುವಾಗ ಉತ್ಸಾಹದ ಬದಲು ‘ಶುಷ್ಕಾಭಿವ್ಯಕ್ತಿ’ಯನ್ನು ಗಮನಿಸಿದ್ದೇನೆ. ಹಾಗೆಂತ ಎಲ್ಲರಲ್ಲೂ ಇದು ಬರಬೇಕಾಗಿಲ್ಲ. ಬರುವುದೂ ಇಲ್ಲ. ಕೆಲವರಲ್ಲಿ ಇದೆ. ಅವರಿಗೆ ಹೇಳಲು ಮುಜುಗರ. ಅಭಿಮಾನಿಗಳಿಗೆ ‘ಕಲಾವಿದನಿಗೆ ಎಲ್ಲಿ ಬೇಸರವಾಗುತ್ತೋ ಎನ್ನುವ ಗೌರವ.’ ಇದು ಗೌಜಿ ತಂದಿತ್ತ ಆಪತ್ತು.

ರಂಗಾಲಂಕಾರ ಕಣ್ಣಿಗೆ ಮುದ ನೀಡುವಷ್ಟು ಇರಲಿ. ‘ದೇವಿ ಮಹಾತ್ಮೆ’ಯಂತಹ ಪ್ರಸಂಗಗಳಲ್ಲಿ ಪಾತ್ರವೇ ಕಾಣದ ರೀತಿಯ ಅಲಂಕಾರದಿಂದ ಏನು ಪ್ರಯೋಜನ? ಸುಡುಮದ್ದನ್ನು ರಂಗದ ಹತ್ತಿರ ಉರಿಸುವುದಂದರಿಂದ ಉಂಟಾದ ದಟ್ಟ ಹೊಗೆಯು ಕಲಾವಿದರ ಶಾರೀರಕ್ಕೆ ತೊಂದರೆಯಾಗುತ್ತದೆ. ಪದ್ಯ ಹೇಳಲಾಗದೆ, ಅರ್ಥಹೇಳಲಾಗಿದೆ ಕಂಗೆಟ್ಟ ಉದಾಹರಣೆಗಳು ಎಷ್ಟಿಲ್ಲ? ವಿದ್ಯುತ್ ತಂದ ವಿಪತ್ತುಗಳಿಗೆ ಪ್ರೇಕ್ಷಕನಿಗಿಂತ ಕಲಾವಿದ ತೊಂದರೆಗೆ ಒಳಗಾಗುವುದು ಹೆಚ್ಚು.

    
ಊಟ, ತಿಂಡಿಗಳ ಆತಿಥ್ಯ. ಪ್ರಸಾದ ಸಂದರ್ಭದಲ್ಲಿ ಹಣ್ಣುಹಂಪಲುಗಳನ್ನು ನೀಡುವ ಸತ್‍ಸಂಪ್ರದಾಯವು ಉತ್ತಮ ಕಾರ್ಯ. ಮೇಳದ ಬಗೆಗಿನ ಶ್ರದ್ಧೆ, ವಿಶ್ವಾಸಗಳಿಗೆ ಸಲ್ಲುವ ಗೌರವ. ಸೇವಾಕರ್ತರ ಆರ್ಥಿಕ ಸಂಪತ್ತು ಒಂದು ದಿನದ ಮಟ್ಟಿಗಾದರೂ ನೂರಾರು, ಸಾವಿರಾರು ಮಂದಿಯ ಹೊಟ್ಟೆಯನ್ನು ತಂಪಾಗಿಸಿತು. ಬೇಕಾದರೆ ಅದಕ್ಕೆ ಇನ್ನೂ ‘ಗೌಜಿಯ ಸ್ಪರ್ಶ’ ನೀಡಲಿ. ಮೂರ್ನಾಲ್ಕು ಬಗೆಯ ಸಿಹಿಗಳನ್ನು ಪ್ಯಾಕೆಟ್ ಮಾಡಿ ಪ್ರೇಕ್ಷಕರಿಗೆ ಹಂಚುವ ಕೆಲಸವಾಗಲಿ. ಇದರಿಂದಾಗಿ ರಂಗಕ್ಕೆ ತೊಂದರೆಯಿಲ್ಲ. ಪರಿಸರಕ್ಕೂ ಕೂಡಾ.
    
 
ಆರ್ಥಿಕ ಗಟ್ಟಿತನ ಹೊಂದಿದ ಸೇವಾಕರ್ತರು ಹೀಗೇಕೆ ಮಾಡಬಾರದು? ಕಲಾವಿದರ ಪರಿಪೂರ್ಣ ತೊಡಗಿಸುವಿಕೆಯಿಂದ ಕಲೆಯೊಂದು ಸರ್ವಾಂಗ ಸುಂದರವಾಗಿ ಅನಾವರಣಗೊಳ್ಳುತ್ತದೆ. ‘ಲೆಕ್ಕ ಮಾಡದೆ’ ವ್ಯಯಿಸುವ ಐಟಂ ಪಟ್ಟಿಯಲ್ಲಿ ಕಲಾವಿದರೂ ಸೇರಿಕೊಳ್ಳಲಿ. ಲಕ್ಷಗಟ್ಟಲೆ ಮೊತ್ತದ ಸುಡುಮದ್ದುಗಳನ್ನು ನಿಲ್ಲಿಸಿ. ಇದರಿಂದ ‘ಸ್ಟೇಟಸ್’ ಹಾಳಾಗದು. ಪರಿಸರವನ್ನು ಉಳಿಸಿದÀ ಪುಣ್ಯ ಬರುತ್ತದೆ. ಇದಕ್ಕೆ ಬಳಕೆಯಾಗುವ ಮೊತ್ತವನ್ನು ಕಲಾವಿದರಿಗೆ ಸಮನಾಗಿ ಹಂಚಿ. ಉಡುಗೊರೆಗಳನ್ನೂ ನೀಡಿ. ಮೇಳದ ಎಲ್ಲಾ ಕಲಾವಿದರೂ ಶ್ರೀಮಂತರಲ್ಲ. ನೀವು ನೀಡುವ ಕೊಡುಗೆಗಳು ಅವರ ಬದುಕಿಗೆ ಉಪಯೋಗವಾಗುತ್ತದೆ. ಕಲಾವಿದರ ಆರೋಗ್ಯದತ್ತಲೂ ಗಮನ ನೀಡಬಹುದು. ಇಷ್ಟು ಮಾಡಿದಾಗ ಸಾರ್ವಜನಿಕವಾಗಿ ಎಲ್ಲೂ ಪ್ರಶಂಸೆ ಬಾರದು. ಆದರೆ ‘ಆಟ ಆಡಿಸಿದ ಸಾರ್ಥಕ ಮತ್ತು ಪುಣ್ಯ’ ಎರಡೂ ಪ್ರಾಪ್ತವಂತೂ ಖಂಡಿತ.
    
 
ರಂಗ ಅದ್ದೂರಿಯಾಗಬೇಕು. ರಂಗಾಭಿವ್ಯಕ್ತಿಗಳು ಸಂಪನ್ನವಾಗಬೇಕು. ಕಲಾವಿದ ಆರೋಗ್ಯವಾಗಿರಬೇಕು. ಇಂತಹ ಚಿತ್ತಸ್ಥಿತಿಗಳು ರೂಪು ಪಡೆಯಬೇಕಾದುದು ಕಾಲದ ಅನಿವಾರ್ಯ. ರಂಗಕ್ಕೆ ಒಗ್ಗದ ‘ವಿಪರೀತ’ ಬಾಹ್ಯ ಆಡಂಬರಗಳು ‘ಯಕ್ಷಗಾನದ ಹೆಸರಿನಲ್ಲಿ’ ಬೇಡ. ಈ ನಿರ್ಧಾರಗಳು ಕಲೆಗೆ ಕೊಡುವ ದೊಡ್ಡ ಕೊಡುಗೆ.

ಸಾಂದರ್ಭಿಕ ಚಿತ್ರ
(ಚಿತ್ರ : ಉದಯ ಕಂಬಾರ್, ನೀರ್ಚಾಲು)