ಗ್ರಾಮೀಣ ಮಹಿಳಾ ಅನುಶೋಧಕರು

ಗ್ರಾಮೀಣ ಮಹಿಳಾ ಅನುಶೋಧಕರು

ಅನುಶೋಧನೆಗಳ (ಇನ್ನೊವೇಶನ್ಸ್) ಪಟ್ಟಿ ನೋಡಿದರೆ ಗ್ರಾಮೀಣ ಅನುಶೋಧಕರ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ ಮಹಿಳಾ ಅನುಶೋಧಕರ ಸಾಧನೆ ಕಡಿಮೆಯೇನಲ್ಲ.
ಗುಜರಾತಿನ ಬಾಮನಿಯಾ ಗ್ರಾಮದ ಅರ್ಖಿಬೆನ್ ಮಿಥಾಬಾಯಿ ಅಂಥವರಲ್ಲಿ ಒಬ್ಬರು. ಜಾಗತಿಕ ಮಟ್ಟದಲ್ಲಿ ಅನುಶೋಧನೆಗಳ ದಾಖಲಾತಿ, ಪ್ರಚಾರ, ಪೇಟೆಂಟ್ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಗುಜರಾತಿನ ಅಹ್ಮದಾಬಾದಿನ “ಸೃಷ್ಟಿ”. ಇದು ಅರ್ಖಿಬೆನ್ ಅವರನ್ನು ಸಮುದಾಯದ ಪ್ರತಿನಿಧಿ ಎಂದು ಗೌರವಿಸಿದೆ. ತನ್ನ ಸಮುದಾಯದ ಜನರು ಸಸ್ಯಗಳ ಪೀಡೆಕೀಟಗಳ ನಿಯಂತ್ರಣಕ್ಕಾಗಿ ಬಳಸುವ ಗಿಡಮೂಲಿಕೆಗಳ ದ್ರಾವಣಗಳ ದಾಖಲೆ ಇರಿಸಿಕೊಳ್ಳುವುದೇ ಅರ್ತಿಬೆನ್ ಅವರ ಪರಿಣತಿ. ಆದ್ದರಿಂದಲೇ ಅವರಿಗೆ “ನಡೆದಾಡುವ ವಿಶ್ವಕೋಶ” ಎಂಬ ಹೆಸರು. ಪೀಡೆಕೀಟಗಳ ಹತೋಟಿಯಲ್ಲಿ ಅವರು ತಿಳಿಸುವ ದ್ರಾವಣಗಳು ಶೇಕಡಾ ೭೦-೮೦ ಪರಿಣಾಮಕಾರಿ.
ಅವರಂತೆಯೇ, ಅವರ ಸಮುದಾಯದಲ್ಲಿ ಇನ್ನೂ ಹಲವರು ಪೀಡೆಕೀಟಗಳ ಹತೋಟಿಗಾಗಿ ಗಿಡಮೂಲಿಕೆಗಳ ದ್ರಾವಣಗಳನ್ನು ಬಳಸುತ್ತಿದ್ದಾರೆ. ಅವನ್ನೆಲ್ಲ ಉಪಯೋಗಿಸಿ, “ಸೃಷ್ಟಿ ಫಲ ರಕ್ಷಕ್” ಇತ್ಯಾದಿ ಸಸ್ಯ ಪೀಡೆಕೀಟನಾಶಕ ದ್ರಾವಣಗಳನ್ನು ಸೃಷ್ಟಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ; ಇದರ ಮಾರಾಟದಿಂದ ಬಂದ ಲಾಭದಲ್ಲಿ ಒಂದಂಶವನ್ನು ಆ ಸಮುದಾಯಕ್ಕೆ ಪಾವತಿಸುತ್ತಿದೆ.
ಕಪುರಿಬೆನ್ ಸದಾರ್ಸಿಂಗ್ ಬರೈಯಾ ಗುಜರಾತಿನ ದಾಹೋದಿನವರು. ಹೈನಪಶುಗಳ ಹೊಟ್ಟೆಯುಬ್ಬರಿಕೆ ಗುಣಪಡಿಸಲು ಗಿಡಮೂಲಿಕೆಗಳ ಚಿಕಿತ್ಸಾ ದ್ರಾವಣದ ಅನುಶೋಧನೆ ಅವರ ಹೆಗ್ಗಳಿಕೆ.
ದನ ಹಾಗೂ ಇತರ ಹೈನಪಶುಗಳಲ್ಲಿ ಅತಿಯಾದ ಗ್ಯಾಸ್ ಶೇಖರಣೆಯಾಗಿ ಹೊಟ್ಟೆ ಉಬ್ಬರಿಸುತ್ತದೆ(ದೊಡ್ದದಾಗುತ್ತದೆ). ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಆ ಹೈನಪಶು ಸತ್ತೇ ಹೋಗಬಹುದು. ಮುಂಬೈ ಪಶುವೈದ್ಯಕೀಯ ಕಾಲೇಜಿನ ಮೂಲಕ ಕಪುರಿಬೆನ್ ಅವರ ಚಿಕಿತ್ಸಾ ದ್ರಾವಣವನ್ನು ಸಪ್ರಮಾಣಿಸಲು (ವ್ಯಾಲಿಡೇಷನ್) ಅಹ್ಮದಾಬಾದಿನ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನವು ಸಹಕರಿಸಿತು. ಇದರಿಂದಾಗಿ ಈ ದ್ರಾವಣ ಪರಿಣಾಮಕಾರಿ ಎಂಬುದು ಖಚಿತವಾಗಿದೆ. ಅನಂತರ, ಈ ದ್ರಾವಣವನ್ನು ಬ್ಲೊಟೊಮಿನ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಜಸ್ಥಾನದ ಸಿಕಾರಿನ ಸಂತೋಷ್ ಪಚಾರ್ ಅವರದ್ದಂತೂ ತರಕಾರಿ ಬೆಳೆಗಾರರಿಗೆ ಅತ್ಯುಪಯೋಗಿ ಅನುಶೋಧನೆ. ಕೃಷಿಯಲ್ಲಿ ತೊಡಗಿರುವ ಅವರು ತರಕಾರಿ, ಗೋಧಿ ಇತ್ಯಾದಿ ಬೆಳೆಗಳನ್ನು ಬೆಳೆಯುವವರು. ಕೆಲವು ವರುಷಗಳ ಮುಂಚೆ ಮನೆಬಳಕೆಗಾಗಿ ಅವರು ತಂದಿದ್ದ ಕ್ಯಾರೆಟುಗಳಲ್ಲಿ ಈ ವಿಶೇಷಗಳನ್ನು ಗಮನಿಸಿದರು: ಅವುಗಳ ಉದ್ದ ಮತ್ತು ಸಿಹಿ ಸಾಮಾನ್ಯ ಕ್ಯಾರೆಟುಗಳಿಗಿಂತ ಜಾಸ್ತಿ. ಜೊತೆಗೆ ಅವು ಮೃದು ಹಾಗೂ ಸಿಂಧೂರಿ (ಅರಿಶಿನ) ಬಣ್ಣದವು.
ಆದ್ದರಿಂದ ಆ ಕ್ಯಾರೆಟುಗಳನ್ನು ಮಣ್ಣಿನಲ್ಲಿ ನೆಟ್ಟು ಬೀಜ ಪಡೆದರು. ಮೊದಲ ಬೆಳೆಯ ಬೀಜಗಳನ್ನು ಬಿತ್ತಿ ಬೆಳೆಸಿ ಪುನಃ ಬೀಜ ಶೇಖರಿಸಿದರು. ಹೀಗೆ, ಐದು ಸಲ ಬೆಳೆಸಿ (ಐದು ವರುಷಗಳ ಅವಧಿಯಲ್ಲಿ) ಆ ಉತ್ತಮ ಗುಣಗಳನ್ನು ಸ್ಥಿರೀಕರಿಸಿದರು. ಅದಲ್ಲದೆ, ಆ ಕ್ಯಾರೆಟ್ ಬೆಳೆಗಳಿಗೆ ತಗಲಿದ ರೋಗ ಮತ್ತು ಕೀಟಗಳನ್ನು ನಿಯಂತ್ರಿಸಲು ಬೇವಿನೆಣ್ಣೆಯ ದ್ರಾವಣ ಬಳಸಿದ್ದರು.
ಅಂತಿಮವಾಗಿ, ಅವರು ಬೆಳೆಸಿದ ಕ್ಯಾರೆಟುಗಳ ಉದ್ದ ಸುಮಾರು ಒಂದೂವರೆ ಅಡಿ. ಈ ವಿಶೇಷ ತಳಿಯ ಇಳುವರಿ ಹೆಕ್ಟೇರಿಗೆ ೬೩೦ ಕ್ವಿಂಟಾಲ್. ಈ ಕ್ಯಾರೆಟಿನ ಬೇರುಗಳು (ಕೈಬೆರಳುಗಳಂತೆ) ಒಡೆದದ್ದು ಬಹಳ ಕಡಿಮೆ. ಜೊತೆಗೆ, ಈ ತಳಿ ಹಲವು ರೋಗಗಳಿಗೆ ನಿರೋಧಶಕ್ತಿ ಬೆಳೆಸಿಕೊಂಡಿತ್ತು. ಇದರ ಬೆಳವಣಿಗೆಯ ಅವಧಿ ೨.೫ರಿಂದ ೩ ತಿಂಗಳು. ಇದರ ಉತ್ತಮ ಗುಣಮಟ್ಟ ಹಾಗೂ ಸಿಹಿರುಚಿಯಿಂದಾಗಿ ಈ ಕ್ಯಾರೆಟುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಗ್ಯಾರಂಟಿ.
ಸಂತೋಷ್ ಪಚಾರ್ ಒಬ್ಬ ದಕ್ಷ ವಿಜ್ನಾನಿಯಂತೆ ಸಾಧನೆ ಮಾಡಿ ಅಭಿವೃದ್ಧಿ ಪಡಿಸಿದ ಈ ಕ್ಯಾರೆಟ್ ತಳಿಯ ವಿಶೇಷ ಗುಣಗಳನ್ನು ಬಿಕಾನೀರಿನ ಎಸ್.ಕೆ. ರಾಜಸ್ಥಾನ ಕೃಷಿ ವಿಶ್ವವಿದ್ಯಾಲಯವು ಪ್ರಯೋಗಗಳನ್ನು ನಡೆಸಿ ಖಚಿತಪಡಿಸಿದೆ.
ತಮ್ಮ ಎಲ್ಲ ಮಿತಿಗಳನ್ನೂ ಮೀರಿ, ಈ ಮೂವರು ಗ್ರಾಮೀಣ ಮಹಿಳಾ ಅನುಶೋಧಕರು ಜಗತ್ತಿನ ಯಾವುದೇ ಸಸ್ಯಶಾಸ್ತ್ರೀಯ ಅಥವಾ ಸಂಕರತಳಿ ವಿಜ್ನಾನಿಗಳಿಗೆ ಹಾಗೂ ಪಶುವೈದ್ಯರ ಸಾಧನೆಗಳನ್ನು ಸರಿಗಟ್ಟುವ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸೃಷ್ಟಿ ಸಂಸ್ಥೆಯ ಪ್ರಯತ್ನದಿಂದಾಗಿ, ಈ ಸಾಧಕಿಯರ ಸಾಧನೆಗಳು ದಾಖಲಾಗಿ, ಮನ್ನಣೆಗೆ ಪಾತ್ರವಾಗಿರುವುದು ಜಗತ್ತಿಗೆ ಒಂದು ಮಾದರಿ.
ಫೋಟೋ ಕೃಪೆ: www.sristiinnovations.com