ಚುರುಮುರಿ

ಚುರುಮುರಿ

ಬೇಕಿರುವ ಸಾಮಗ್ರಿ

ಕಡಲೆ ಪುರಿ – ½ ಲೀಟರ್, ಕಾಂಗ್ರೆಸ್ ಕಡಲೇ ಬೀಜ – 50 ಗ್ರಾಂ, ಪೂರಿ (ಮಸಾಲೆ ಪುರಿಗೆ ಉಪಯೋಗಿಸುವಂತಹದ್ದು) – 6 ಅಥವಾ 7, ಖಾರಾ ಶೇವು (ಬಾಂಬೆ ಮಿಕ್ಸ್ಚರ್ – 50 ಗ್ರಾಂ, ಈರುಳ್ಳಿ – ½ ಗಡ್ಡೆ, ಟೊಮ್ಯಾಟೋ – ½, ಅನಾನಸು – 1 ಸ್ಲೈಸ್, ಕ್ಯಾರೆಟ್ – 1, ಸೌತೆ ಕಾಯಿ – 2 ಸ್ಲೈಸ್, ಕೊತ್ತಂಬರಿ ಸೊಪ್ಪು – 4 ಅಥವಾ 5 ಎಸಳು, ಹುಣಿಸೆ ಹಣ್ಣು – 1 ಸಣ್ಣ ನೆಲ್ಲಿ ಗಾತ್ರ, ಬೆಲ್ಲ – 1 ಸಣ್ಣ ನೆಲ್ಲಿ ಗಾತ್ರ, ಹಸಿ ಮೆಣಸಿನಕಾಯಿ – 4 ಅಥವಾ 5, ಉಪ್ಪು – ರುಚಿಗೆ ತಕ್ಕಂತೆ.

ತಯಾರಿಸುವ ವಿಧಾನ

ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ :
ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ ಹಾಕಿ. ಕೊನೆಯಲ್ಲಿ ಬೆಲ್ಲವನ್ನೂ ಹಾಕಿ ರಸ ತಯಾರಿಸಿಕೊಳ್ಳಿ. ಈರುಳ್ಳಿ, ಟೊಮ್ಯಾಟೋ, ಸೌತೆ ಕಾಯಿ, ಅನಾನಸು, ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.

ಈಗ ಪೂರಿಯನ್ನು ಪುಡಿ ಮಾಡಿ ಒಂದು ಅಗಲ ಬಾಯಿಯ ಪಾತ್ರೆಗೆ ಹಾಕಿ. ಅದಕ್ಕೆ ಕಡಲೇ ಬೀಜ, ಬಾಂಬೆ ಮಿಕ್ಸ್ಚರ್, ಹೆಚ್ಚಿದ ತರಕಾರಿಗಳನ್ನು ಮತ್ತು ಅನಾನಸನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಿಕ್ಸಿ ಮಾಡಿಕೊಂಡ ಹುಳಿ, ಸಿಹಿ, ಖಾರದ ರಸ ಎರಡು ಅಥವಾ ಮೂರು ಚಮಚಗಳಷ್ಟು ಹಾಕಿ ಚೆನ್ನಾಗಿ ಬೆರೆಸಿ. ಬೆರೆಸಿದ ಮಿಶ್ರಣಕ್ಕೆ ಕಡಲೆ ಪುರಿ ಹಾಕಿ ಪುನಃ ಚೆನ್ನಾಗಿ ಮಿಶ್ರ ಮಾಡಿ. ಕಡಲೆ ಪುರಿ ಬೆರೆಸಿದ ತಕ್ಷಣವೇ ತಿನ್ನಬೇಕು ಇಲ್ಲದಿದ್ದರೆ ಮೆತ್ತಗಾಗುತ್ತದೆ. ಮನೆಯಲ್ಲೇ ಮಾಡಿದ ರುಚಿ ಶುಚಿ ಚುರುಮುರಿ ಸವಿಯಲು ತಯಾರಾಗಿ.