ಜಲಜಾಗೃತಿಗಾಗಿ ಜಾತ್ರೆಗಳಲ್ಲಿ ಮಾಹಿತಿ

ಜಲಜಾಗೃತಿಗಾಗಿ ಜಾತ್ರೆಗಳಲ್ಲಿ ಮಾಹಿತಿ

ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದಿಗಳನ್ನು ಗಮನಿಸಿದ್ದೀರಾ?

ಇದರ ಬದಲಾಗಿ ಬೇರೇನಾದರೂ ಮಾಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಉದಾಹರಣೆಗೆ ಜನರಲ್ಲಿ ಜಲಜಾಗೃತಿ ಪಸರಿಸಬಹುದು. ಅದು ಹೇಗೆ? ಇಲ್ಲಿವೆ ಎರಡು ನಿದರ್ಶನಗಳು.

ಅಕ್ತೋಬರ್ ೨೦೦೩ರ ಒಂದು ದಿನ, ಮಂಗಳೂರಿನಿಂದ ೨೧ ಕಿಮೀ ದೂರದ ಬಿ.ಸಿ.ರೋಡ್ ಹತ್ತಿರದ ಜೋಡುಮಾರ್ಗದಲ್ಲಿ ಗೃಹಪ್ರವೇಶ ಸಮಾರಂಭ. ಪೂರ್ವಾಹ್ನ ಆಮಂತ್ರಿತರು, ಬಂಧುಗಳು ನೆರೆದಿದ್ದರು. ಅಲ್ಲಲ್ಲಿ ಕುಳಿತು ಮಾತಾಡುತ್ತಿದ್ದರು. ಅಷ್ತರಲ್ಲಿ ಅಲ್ಲಿ "ನೆಲ ಜಲ ಉಳಿಸುವ ನೂರಾರು ದಾರಿಗಳ" ವರ್ಣಪಾರದರ್ಶಿಕೆಗಳ ಪ್ರದರ್ಶನ ಆರಂಭವಾಯಿತು. ನಡೆಸಿಕೊಟ್ಟವರು "ನೆಲಜಲ ಉಳಿಸಿ" ಆಂದೋಲನದ ನೇತಾರ ’ಶ್ರೀ’ಪಡ್ರೆ.

ಗೃಹಪ್ರವೇಶ ಸಮಾರಂಭದಲ್ಲಿ "ನೆಲಜಲ ಉಳಿಸಿ" ಮಾಹಿತಿ ಕಾರ್ಯಕ್ರಮ ಈ ತನಕ ಕಂಡುಕೇಳಿರದ ಸಂಗತಿ ಅಲ್ಲವೇ? ಆದರೆ ಇದು ಇಂದಿನ ಅಗತ್ಯ ಎಂಬುದನ್ನು ಕಾರ್ಯಕ್ರಮದ ಬಳಿಕ ಅಲ್ಲಿ ಜರಗಿದ ಪ್ರಶ್ನೋತ್ತರವೇ ಸಾಬೀತು ಪಡಿಸಿತು. ಅಲ್ಲಿ  ಸೇರಿದ್ದ ೯೦೦ ಜನರಲ್ಲಿ ಪ್ರಶ್ನೆಗಳನ್ನು ಕೇಳಿ ಕೇಳಿ ವಿಷಯ ತಿಳಿದುಕೊಂಡವರು ಅನೇಕರು. ಅವರೆಲ್ಲರೂ ತಮ್ಮ ತಮ್ಮ ಜಮೀನಿನಲ್ಲಿ, ಮನೆಗಳಲ್ಲಿ ಜಲ ಮರುಪೂರಣ ಮಾಡಲು ಪಣ ತೊಟ್ಟರು.

ವಿನೂತನ ಜಲಜಾಗೃತಿ ಕಾರ್ಯಕ್ರಮ ಏರ್ಪಡಿಸಿದವರು ಮನೆಯೊಡೆಯರಾದ ದಂಪತಿ ಡಾ.ಸುಂದರೇಶ್ ಮತ್ತು ಡಾ. ಜಾನಕಿ. ಇಂತಹ ಐಡಿಯಾ ಹೇಗೆ ಹೊಳೆಯಿತೆಂಬ ಪ್ರಶ್ನೆಗೆ ಸುಂದರೇಶ್ ಅವರ ಉತ್ತರ: "ಇಂತಹ ಸಮಾರಂಭಗಳಲ್ಲಿ ನೂರಾರು ಜನರು ಒಂದೆಡೆ ಸೇರುತ್ತಾರೆ. ಆದರೆ ಊಟದ ತನಕ ಹಾಳುಹರಟೆಯಲ್ಲೇ ಅವರ ಹೊತ್ತು ಕಳೆಯುತ್ತದೆ. ಅದರ ಬದಲಾಗಿ ಉಪಯುಕ್ತ ವಿಷಯವೊಂದನ್ನು ಅತಿಥಿಗಳಿಗೆ ತಿಳಿಸುವ ವ್ಯವಸ್ಥೆ ಮಾಡೋಣ ಅನ್ನಿಸಿತು. ತಟಕ್ಕನೆ ನನಗೆ ನೆನಪಾದದ್ದು ನಾನು ನೋಡಿದ್ದ ಶ್ರೀಪಡ್ರೆಯವರ ನೀರಿನ ಷೋ."

ಹಳ್ಳಿಗಳ, ನಗರಗಳ ಮನೆಮನೆಗಳಲ್ಲಿ ಇಂತಹ ಹಲವಾರು ಸಮಾರಂಭಗಳು ಜರಗುತ್ತಿರುತ್ತವೆ. ಅಲ್ಲೆಲ್ಲ ಈ ಜರೂರು ವಿಷಯದ ಬಗ್ಗೆ ಜನರಿಗೆ ತಿಳಿಸಲು ಒಂದು ತಾಸಿನ ಕಾರ್ಯಕ್ರಮ ನಡೆಸಲು ಸಾಧ್ಯವಿದೆ. ಹೀಗೆ ಒಂದೇ ವರುಷದಲ್ಲಿ ಒಂದೂರಿನ ಅಥವಾ ಒಂದು ಹಳ್ಳಿಯ ಬಹುಪಾಲು ಜನರಲ್ಲಿ ಜಲಜಾಗೃತಿ ಪಸರಿಸಲು ಸಾಧ್ಯ.

ಅದೇ ರೀತಿಯಲ್ಲಿ ಊರಿನ ಜಾತ್ರೆಗಳು ಹಾಗೂ ಉತ್ಸವಗಳು ಜನರಲ್ಲಿ ಜಲಜಾಗೃತಿ ಪಸರಿಸಲು ಉತ್ತಮ ಅವಕಾಶಗಳು. ಇದಕ್ಕೊಂದು ಉದಾಹರಣೆ: ೨೦೦೩ರಲ್ಲಿ ದಕ್ಷಿಣಕನ್ನಡದ ಬೀಡಿನ ಮಜಲಿನ ಆದಿ ಪರಾಶಕ್ತಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ. ಕನ್ನಡನಾಡಿನಲ್ಲಿ ಜಲಜಾಗೃತಿಗೆ ಹೆಸರಾದ ಇಡ್ಕಿದು ಗ್ರಾಮದಲ್ಲಿ ನೆಲಜಲ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದ್ದು ಅಮೃತ ಸಿಂಚನ ರೈತರ ಸೇವಾ ಒಕ್ಕೂಟ. ಆ ಉತ್ಸವದ ಪೆಂಡಾಲಿನಲ್ಲಿ ಗ್ರಾಮದ ಜಲ ಮರುಪೂರಣದ ವ್ಯವಸ್ಠೆಗಳ ಬಗ್ಗೆ ಒಕ್ಕೂಟವು ಪ್ರದರ್ಶನ ನಡೆಸಿತು. ಅದಕ್ಕಾಗಿ ಗೊಂಬೆಮನೆಗಳು, ಪ್ಲಾಸ್ಟಿಕ್ ಪೈಪುಗಳು (ಕೊಳವೆಬಾವಿಗಳು) ಹಾಗೂ ರಿಬ್ಬನ್ (ತೋಡು, ರಸ್ತೆ)ಗಳಿಂದ ಮಾದರಿ ರಚಿಸಿದ್ದರು. ಚಾವಣಿ ನೀರಿನ ಸಂಗ್ರಹ - ಮರುಬಳಕೆ ಮತ್ತು ಜಲ ಮರುಪೂರಣದ ಅಗತ್ಯ - ಇದು ಆ ಪ್ರದರ್ಶನದ ಮುಖ್ಯ ಸಂದೇಶ. ಇಡ್ಕಿದು ಗ್ರಾಮದಲ್ಲಿ ಇನ್ನಷ್ಟು ಕುಟುಂಬಗಳು ಆಂದೋಲನದಲ್ಲಿ ಭಾಗವಹಿಸಲು ಈ ಪ್ರದರ್ಶನವು ಪ್ರೇರಣೆ ನೀಡಿತು.

ಜಲಜಾಗೃತಿ ಈಗ ತುರ್ತಾಗಿ ಆಗಬೇಕಾದ ಕೆಲಸ. ಒಂದೊಂದು ಊರಿನಲ್ಲಿ ಒಬ್ಬರು ಮುತುವರ್ಜಿ ವಹಿಸಿದರೂ ಸಾಕು - ಒಂದೆರಡು ವರುಷಗಳಲ್ಲಿ ಊರಿನ ಬಹುಪಾಲು ಜನರಲ್ಲಿ ಜಲಜಾಗೃತಿ ಪಸರಿಸಲು ಸಾಧ್ಯ. ಅದಕ್ಕಾಗಿ ಈಗ ಮಾಹಿತಿಗಂತೂ ಕೊರತೆಯಿಲ್ಲ. ನೀರಿನ ಮಿತಬಳಕೆ, ಮಳೆನೀರ ಕೊಯ್ಲು ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಹಲವು ಪುಸ್ತಕಗಳು ಲಭ್ಯ. ಹಲವರ ಅನುಭವಗಳೂ ಲಭ್ಯ. "ಇಂಡಿಯಾ ವಾಟರ್ ಪೋರ್ಟಲ್‍"ನಲ್ಲಿಯಂತೂ ಇದೆಲ್ಲ ಮಾಹಿತಿ ತುಂಬಿದೆ. ಇವನ್ನೆಲ್ಲ ಬಳಸಿ ಜಲಜಾಗೃತಿ ಪಸರಿಸೋಣ, ಬನ್ನಿ.