ಜೀವ ವೈವಿಧ್ಯದ ಉಳಿವಿನ ಲೆಕ್ಕಾಚಾರ

ಜೀವ ವೈವಿಧ್ಯದ ಉಳಿವಿನ ಲೆಕ್ಕಾಚಾರ

ಇತ್ತೀಚಿಗೆ  ಪ್ರಕಟಿಸಿರುವ ಅಧಿಕೃತ ಅಂದಾಜಿನ  ಪ್ರಕಾರ  ಭಾರತದ  ಜನಸಂಖ್ಯೆ  2035ನೇ  ಇಸವಿಯಲ್ಲಿ  ಚೀನಾದ  ಜನಸಂಖ್ಯೆಗಿಂತ  ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ  2001ರಲ್ಲೇ 100 ಕೋಟಿ  ದಾಟಿದ್ದು  2035ರಲ್ಲಿ  ಭಾರತವು ಅತ್ಯಂತ ಜಾಸ್ತಿ  ಜನಸಂಖ್ಯೆಯ ದೇಶವಾಗಲಿದೆ . ಜಗತ್ತಿನ ಜನಸಂಖ್ಯೆಯೂ ಆತಂಕಕಾರಿಯಾಗಿ  ಹೆಚ್ಚುತ್ತಲಿದೆ.  ಈಗಲೇ  600 ಕೋಟಿಗಳಾಗಿರುವ  ಜಗತ್ತಿನ  ಒಟ್ಟಾರೆ  ಜನಸಂಖ್ಯೆ  2050 ರಲ್ಲಿ  900 ಕೋಟಿಗಳಾಗಲಿದೆ.

ಭೂಮಿಯಲ್ಲಿರುವ  ಲಕ್ಷಗಟ್ಟಲೆ ಜೀವಪ್ರಭೇದಗಳಲ್ಲಿ ಮಾನವ  ಒಂದು  ಪ್ರಭೇದ ಮತ್ತು  ಮಾನವರು  ಉಳಿಯಬೇಕಾದರೆ  ಭೂಮಿಯ  ಜೀವಜಾಲದ  ಪ್ರತಿಯೊಂದು  ಕೊಂಡಿಯೂ  ಉಳಿಯುವುದು   ಅಗತ್ಯ. ಆದರೆ ವರುಷ ವರುಷವೂ ಕೋಟಿಗಟಟ್ಟಲೆಯಲ್ಲಿ   ಏರುತ್ತಿರುವ ಜನಸಂಖ್ಯೆಯಿಂದಾಗಿ ಜೀವಜಾಲದ ಸೂಕ್ಷ್ಮ  ಕೊಂಡಿಗಳಲ್ಲೆ ತತ್ತರಿಸುತ್ತಿವೆ. ಆದ್ದರಿಂದ  ಭೂಮಿಯ ಜೀವ ವೈವಿಧ್ಯ   ಉಳಿಸಲಿಕ್ಕಾಗಿ  ವಿಶ್ವಸಂಸ್ಥೆಯು  ಒಂದು ಸನದು ರಚಿಸಿದೆ. ಕೆಲವೇ  ದೇಶಗಳ  ಹೊರತಾಗಿ   ಉಳಿದೆಲ್ಲ ದೇಶಗಳೂ   ಇದಕ್ಕೆ  ಸಹಿ ಮಾಡಿವೆ. ಆದರೆ,  ಅದರ  ಪ್ರಕಾರ ವಿವಿಧ ದೇಶಗಳ ಪ್ರಾಕೃತಿಕ  ಸಂಪನ್ಮೂಲಗಳ  ರಕ್ಷಣೆಗಾಗಿ  ಕೈಗೊಳ್ಳಬೇಕಾದ  ಕ್ರಮಗಳೆಲ್ಲ  ಕಾಗದದಲ್ಲೇ    ಉಳಿದಿದೆ.

ಇದರ ದುಷ್ಪರಿಣಾಮಗಳೇನು? ಭೂಮಿಯ ಜೀವವೈವಿಧ್ಯಕ್ಕೆ  ಘಾತಕ ಕ್ಷಿಪಣಿಯೇಟು  ಬೀಳುತ್ತಿದೆ.  ಇದಕ್ಕೆ ಮುಖ್ಯ  ಕಾರಣ  ಹೆಚ್ಚೆಚ್ಚು ಕೃಷಿ ಮಾಡಲಿಕ್ಕಾಗಿ  ಅರಣ್ಯಗಳ ನಾಶ.   ಈ ಬಗ್ಗೆ  ವಿಶ್ವ ಸಂಸ್ಥೆಯ  ಆಹಾರ ಮತ್ತು ಕೃಷಿ ಸಂಸ್ಥೆ ಹೀಗೆಂದಿದೆ : ಮುಂದಿನ 30 ವರುಷಗಳಲ್ಲಿ  ಅಭಿವೃದ್ಧಿ  ಹೊಂದುತ್ತಿರುವ  ದೇಶಗಳಲ್ಲಿ  ಹೆಚ್ಚುವರಿ  120 ಮಿಲಿಯ  ಹೆಕ್ಟೇರುಗಳಲ್ಲಿ  ಕೃಷಿ ಮಾಡಬೇಕಾಗುತ್ತದೆ.

ಆದರೆ  ಈ ದೇಶಗಳಲ್ಲೇ  ಅತ್ಯಧಿಕ  ಜೀವ ವೈವಿಧ್ಯ  ಇದೆ. ಹೆಚ್ಚುವರಿ ಭೂಮಿ  ಕೃಷಿಗೆ   ಒಳಪಟ್ಟಂತೆ  ಅಲ್ಲಿನ  ಜೀವ ವೈವಿಧ್ಯ  ಧ್ವಂಸವಾಗುತ್ತದೆ. ಕೇವಲ ಪಕ್ಷಿಗಳನ್ನೇ  ಪರಿಗಣಿಸಿದರೆ  ಮುಂದಿನ  50 ವರುಷಗಳಲ್ಲಿ  350 ಪಕ್ಷಿ ಪ್ರಭೇದಗಳು (ಅಂದರೆ  ಪ್ರಾಣಿಪಕ್ಷಿಗಳ  ಒಟ್ಟು  ಪ್ರಭೇದಗಳ  ಶೇಕಡಾ  3.5) ನಿರ್ನಾಮವಾಗಲಿದೆ  ಎಂದು   ಇಂಟರ್ ನ್ಯಾಷನಲ್ ಯೂನಿಯನ್  ಫಾರ್  ಕನ್ ಸರ್ ವೇಷನ್  ಆಫ್  ನೇಚರ್ ಅಂದಾಜು  ಮಾಡಿದೆ. ಜೀವ ವೈವಿಧ್ಯಕ್ಕೆ ಕೊಳ್ಳಿ   ಇಡುತ್ತಿರುವ  ಇನ್ನೊಂದು  ಬದಲಾವಣೆ  ಭೂಮಿಯ ಬಿಸಿಯೇರುವಿಕೆ. 2500 ವಿಜ್ಞಾನಿಗಳು  ಸದಸ್ಯರಾಗುವ  ಹವಾಮಾನ  ಬದಲಾವಣೆಯ  ಅಂತರ – ಸರಕಾರಿ ಆಯೋಗವು  2050ರಲ್ಲಿ  ಭೂಮಿಯ ಮೇಲ್ಮೈ   ಉಷ್ಣತೆ ಸರಾಸರಿ  2 ಡಿಗ್ರಿ  ಸೆಲ್ಸಿಯಸ್  ಜಾಸ್ತಿಯಾಗುತ್ತದೆಂದು   ಎಚ್ಚರಿಸಿದೆ.  ಇದರಿಂದಾಗಿ  ಉತ್ತರ ಮತ್ತು ದಕ್ಷಿಣ ಹಿಮಖಂಡಗಳೆಂಬ  ಮಂಜುಗಡ್ಡೆ  ಕರಗಿ  ಸಮುದ್ರದ ನೀರಿನ ಮಟ್ಟ  ಏರಿ, ತೀರದಲ್ಲಿರುವ ಅನೇಕ  ನಗರಗಳು ಮುಳುಗುವ ಭೀತಿಯಿದೆ.

ಈ ರೀತಿಯಲ್ಲಿ ಮಾನವ  ನಿರ್ಮಿತವಾದ  ಹಲವಾರು  ಕಾರಣಗಳಿಂದಾಗಿ   ವಿಭಿನ್ನ ಸಸ್ಯಜಾತಿಗಳು , ಪ್ರಾಣಿ  ಪಕ್ಷಿ ಪ್ರಭೇದಗಳು  ಅಳಿದು  ಹೋದರೆ ಹೋಗಲಿ, ನಮಗೇನು  ನಷ್ಟ?  ಎಂಬ ಭಾವನೆ ಸರಿಯಲ್ಲ.

ಯಾಕೆಂದರೆ ಭಾರತ  ಸೇರಿದಂತೆ   ಎಲ್ಲ  ಅಭಿವೃದ್ಧಿಶೀಲ  ದೇಶಗಳಲ್ಲಿಯೂ  ತಮ್ಮ ಆರೋಗ್ಯ  ರಕ್ಷಣೆಗಾಗಿ  ಬಹುಪಾಲು  ಜನರು ಪಾರಂಪರಿಕ ಔಷಧಿ ಅಥವಾ ಹಳ್ಳಿ ಮುದ್ದುಗಳನ್ನೇ  ಅವಲಂಬಿಸಿದ್ದಾರೆ.  ಈ  ಎಲ್ಲ  ಔಷಧಿಗಳಿಗೂ  ಮೂಲ ಕಾಡುಮೇಡುಗಳಲ್ಲಿರುವ  ಗಿಡಮೂಲಿಕೆಗಳು. ಮುಂದುವರಿದ   ದೇಶವಾದ ಯು ಎಸ್ ಎಯಲ್ಲಿ   ಏನಾಾಗುತ್ತಿದೆ? ಅಲ್ಲಿ  ಮಾರಾಟವಾಗುವ  ಒಟ್ಟು   ಔಷಧಿಗಳಲ್ಲಿ ಶೇಕಡಾ  25 ಸಸ್ಯಮೂಲದವು. ಶೇಕಡಾ 13 ಸೂಕ್ಷ್ಮಾಣುಜೀವಿ  ಮೂಲದವು  ಮತ್ತು ಶೇಕಡಾ 3 ಪ್ರಾಣಿ  ಮೂಲದವು.  ಅಂದರೆ  ಅಲ್ಲಿಯೂ ಶೇಕಡಾ  40 ಔಷಧಿಗಳು ಸಸ್ಯ ಹಾಗೂ ಪ್ರಾಣಿ  ಅಂಶಗಳಿಂದ ತಯಾರಿಸಲ್ಪಟ್ಟಿವೆ.

ಜೀವ ವೈವಿಧ್ಯದಲ್ಲಿ ಸಂಪನ್ನ ನಮ್ಮ ದೇಶ ಭಾರತ. ಭೂಮಿಯ  ಬೆಳೆಗಳಲ್ಲಿ  ಶೇಕಡಾ   ಏಳಕ್ಕೆ   ಭಾರತವೇ ಮೂಲ. (ಭತ್ತ, ಮಾವು,  ಕರಿಮೆಣಸು  ಇತ್ಯಾದಿ)  ಇಲ್ಲಿರುವ ಬೇರೆ ಬೇರೆ  ಹವಾಮಾನ ಹಾಗೂ ಭೂಪ್ರದೇಶಗಳು  ಸಾವಿರಾರು  ಸಸ್ಯ ಪ್ರಬೇಧಗಳ ಮೂಲ ಸ್ಥಾನಗಳು. ಆದರೆ  ಈ ಮೂಲಸ್ಥಾನಗಳ ನಾಶ  ಹಾಗೂ  ಪ್ರಾಕೃತಿಕ ಕಾಡುಗಳ ನಾಶವು  ಅಮೂಲ್ಯ  ಜೀವವೈವಿಧ್ಯದ ವಿನಾಶಕ್ಕೆ ಕಾರಣವಾಗುತ್ತಿದೆ.  

ಇದರಿಂದಾಗಿ  ಪಾರಂಪರಿಕ  ಕೃಷಿ ವ್ಯವಸ್ಥೆ ಧೂಳೀಪಟವಾಗುತ್ತಿದೆ. ಸ್ಥಳೀಯ  ಸಸ್ಯ  ತಳಿಗಳು ಹಾಗೂ  ಹೈನುತಳಿಗಳು   ಈ ಪಾರಂಪರಿಕ ಕೃಷಿ ವ್ಯವಸ್ಥೆಯ ಆಧಾರಸ್ತಂಭಗಳು. ಇವುಗಳನ್ನೇ ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ವಿದೇಶೀ ಸಸ್ಯ ಹಾಗೂ  ಪ್ರಾಣಿ ತಳಿಗಳು ನಮ್ಮ  ದೇಶದೊಳಕ್ಕೆ  ನುಗ್ಗಿ, ಹೆಚ್ಚೆಚ್ಚು  ಪ್ರದೇಶಗಳನ್ನು  ಆಕ್ರಮಿಸುತ್ತಿರುವಂತೆ , ಸ್ಥಳೀಯ ಸಸ್ಯ ತಳಿಗಳು ಹಾಗೂ ಹೈನುತಳಿಗಳು  ಅಳಿದುಹೋಗುತ್ತಿವೆ.  ಉದಾಹರಣೆಗೆ ಪಂಜಾಬ್ , ಹರಿಯಾಣ ಹಾಗೂ  ಉತ್ತರ ಪ್ರದೇಶಗಳಲ್ಲಿ  ಹಸಿರು  ಕ್ರಾಂತಿಯಿಂದಾಗಿ ಹಲವಾರು  ಸ್ಥಳೀಯ ಗೋಧಿ  ತಳಿಗಳು ಅಳಿದು ಹೋದವು. ಅದೇ ರೀತಿಯಲ್ಲಿ  ವ್ಯಾಪಕ ತಳಿ ಸಂಕರದಿಂದಾಗಿ ತೋಡ  ಎಮ್ಮೆಯಂತಹ  ಸ್ಥಳೀಯ  ಹೈನುತಳಿಗಳ   ಉಳಿವಿಗೆ  ಕುತ್ತು ಬಂದಿದೆ.

ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ರಾಷ್ಟ್ರೀಯ  ಜೀವವೈವಿಧ್ಯ ಕಾರ್ಯತಂತ್ರ ಮತ್ತು  ಕಾರ್ಯಯೋಜನಾ  ಸಮಿತಿಯು ಭಾರತದ ಜೀವವೈವಿಧ್ಯ ರಕ್ಷಣೆಗಾಗಿ  ಕೆಲವು ಪ್ರಮುಖ  ಕ್ರಮಗಳನ್ನು  ಸೂಚಿಸಿದೆ. ಅವು: ಕೆಲವು  ಭೂ ಪ್ರದೇಶಗಳನ್ನು  (ಉದಾಹರಣೆಗೆ ಪಶ್ಚಿಮ ಘಟ್ಟಟಗಳು) ಜೀವ ವೈವಿಧ್ಯ  ನಾಶಕ್ಕೆ  ಕಾರಣವಾಗುವ ಬೃಹತ್  ಅಭಿವೃದ್ಧಿ  ಯೋಜನೆಗಳನ್ನು  ನಿಷೇಧಿಸುವುದು. ಪರಿಸರ ರಕ್ಷಣೆಗಾಗಿ  ನಗರಗಳಲ್ಲಿ  ತೆರಿಗೆ ವಿಧಿಸುವುದು (ಯಾಕೆಂದರೆ  ಅರಣ್ಯಗಳಲ್ಲಿ  ಹುಟ್ಟುವ  ನದಿಗಳಿಂದಲೇ  ನಗರಗಳು  ನೀರು ಪಡೆಯುತ್ತವೆ ಮತ್ತು ಕಾಡುಗಳಿಂದಲೇ  ಸೌದೆ ಹಾಗೂ  ಮೋಪು  ಪಡೆಯುತ್ತವೆ) ಅದೇ  ರೀತಿಯಲ್ಲಿ, ಸಸ್ಯ ಮೂಲದ ಔಷಧಿಗಳು, ಸೌಂದರ್ಯ ಪ್ರಸಾಧನಗಳು  ಹಾಗೂ ಜೈವಿಕ ತಂತ್ರಜ್ಞಾನದ  ಉ ತ್ಪನ್ನಗಳ  ಮೇಲೆ  ತೆರಿಗೆ  ವಿಧಿಸುವುದು. ಪ್ರವಾಸಿಗಳಿಂದಲೂ  ತೆರಿಗೆ  ಸಂಗ್ರಹಿಸಬೇಕು (ಯಾಕೆಂದರೆ ಪ್ರಾಕೃತಿಕ ಪ್ರವಾಸಿ ತಾಣಗಳಿಂದಾಗಿ  ಅವರು  ಮನರಂಜನೆ ಪಡೆಯುತ್ತಾರೆ.)

ಒಮ್ಮೆ ಅಳಿದು ಹೋದರೆ ಪುನಃ ಸೃಷ್ಟಿಸಲಾಗದ ಜೀವ ಜಾತಿಗಳ ಸಂರಕ್ಷಣೆಗಾಗಿ  ಇವೆಲ್ಲ  ಕ್ರಮಗಳು  ಜ್ಯಾರಿ  ಆಗಬೇಕಾಗಿದ್ದು  ತೀರಾ  ಅಗತ್ಯ.  ಪ್ರತಿಯೊಬ್ಬರೂ   ಇವನ್ನು  ತಿಳಿದುಕೊಂಡು,  ಇವು ಕಾರ್ಯಗತವಾಗಲು  ತಮ್ಮಿಂದ  ಸಾಧ್ಯವಾದದ್ದನ್ನೆಲ್ಲ ಮಾಡಬೇಕಾಗಿದೆ. ನೆನಪಿರಲಿ, ಪ್ರಚಂಡ  ತಾಕತ್ತಿನ  ಡೈನಾಸರ್ ಗಳನ್ನೇ   ಈ ಪ್ರಕೃತಿ  ಕ್ಷಣಮಾತ್ರದಲ್ಲಿ  ಹೊಸಕಿ ಹಾಕಿತ್ತು. ಹಾಗಿರುವಾಗ  ಈ ಪ್ರಕೃತಿಗೆ  ಹುಲುಮಾನವ ಯಾವ ಲೆಕ್ಕ?

ನಾವು  ಉಳಿಯಬೇಕಾದರೆ  ಈ ಪ್ರಕೃತಿಯ ಪ್ರತಿಯೊಂದು ಜೀವ ಸಂಕುಲವನ್ನು  ಉಳಿಸಬೇಕಾಗಿದೆ. ಕೇವಲ ಲಾಭದ ಲೆಕ್ಕಾಚಾರದಿಂದ ವಿದೇಶಿ ತಳಿಗಳನ್ನೂ ಹೊಸ ಹೊಸ ತಳಿಗಳನ್ನೂ ಬೆಳೆಸುವ ಮುನ್ನ ತಮ್ಮ ಕುಟುಂಬದ ಮುಂದಿನ ತಲೆಮಾರುಗಳ  ಉಳಿವಿನ ಲೆಕ್ಕಾಚಾರವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅಲ್ಲವೇ?

ಫೋಟೋ: ಪುನರ್ಪುಳಿ (ಕೆಂಪು ಕೋಕಂ), ಲಕ್ಷ್ಮಣಫಲ, ನೀರುಸೇಬು (ವಾಟರ್ ಆಪಲ್) -ಹಸುರು ಮತ್ತು ಕೆಂಪು, ಹಳದಿ ಕೋಕಂ