ನಗೆ ಲೇಖನ

ನಗೆ ಲೇಖನ

ಹೆಂಡತಿಯ ಕಾಲು ಮುರಿಸಲು ಹೊರಟ ಭೂಪ
(ಡಾಕ್ಟರು, ಪತ್ನಿಯ ಕಾಲು ಮುರಿಯಬೇಕಂತೆ)
             ಆರ್ಥೋಪೆಡಿಕ್ ಡಾಕ್ಟರ್ ಪುರುಷೋತ್ತಮರ ಬಳಿ ಬಂದು ಮಾತನಾಡಿದರು ದಿಲೀಪ್.
       ದಿಲೀಪ್: ನನ್ ಹೆಸ್ರು ದಿಲೀಪ್, ನಾನು ನಿಮ್ಗೆ ಫೀಡ್ ಬ್ಯಾಕ್ ಕೊಡಕ್ ಬಂದಿದೀನಿ.
       ಡಾಕ್ಟರ್: ಏನ್ ಫೀಡ್ ಬ್ಯಾಕ್ ಕೊಡಕ್ ಬಂದಿದೀರಾ?        
       ದಿಲೀಪ್: ನಿಮ್ ಟ್ರೀಟ್ ಮೆಂಟ್ ನಿಂದ ನನ್ಗೆ ತುಂಬಾ ಉಪ್ಕಾರ ಆಯ್ತು. ನಿಮ್ಗೆ ನಾನ್ ಕೃತಜ್ಞತೆ ಅರ್ಪಿಸಕ್ ಬಂದಿದೀನಿ. ನಾನ್ ನಿಮ್ಗೆ ಚಿರರುಣಿಯಾಗಿರ್ತೀನಿ. ನಿಮ್ಮುನ್ನ ಈ ಜನ್ಮದಲ್ಲಿ ಮರೆಯಲ್ಲ. ಮುಂದಿನ್ ಜನ್ಮದಲ್ಲೂ ನೀವೇ ನನ್ಗೆ ಡಾಕ್ಟರಾಗಿ ಸಿಗ್ಬೇಕು. ನಾನ್ ನಿಮ್ಗೆ ಕಾಣಿಕೆ ನೀಡ್ಬೇಕು. ಅದೂ ತುಂಬಾ ದೊಡ್ ಕಾಣಿಕೆ.
                  ಏನ್ ಸಾರ್ ನನ್ನನ್ ಇಷ್ಟೊಂದ್ ಹೊಗುಳ್ತಾ ಇದೀರಾ, ನಾನ್ ನಿಮ್ಮನ್ ನೋಡೇ ಇಲ್ವಲ್ಲಾ, ನಾನ್ ಯಾವಾಗ ನಿಮ್ಗೆ ಟ್ರೀಟ್ ಮೆಂಟ್ ಕೊಟ್ಟೆ. ಸರ್ಯಾಗಿ ಜ್ಞಾಪ್ಸಿ.
                  ನಿಮ್ ಹತ್ರ ಟ್ರೀಟ್ ಮೆಂಟ್ ಗೆ ನನ್ ಹೆಂಡ್ತಿ ಬಂದಿದ್ದು, ನಾನಲ್ಲ. ಅವ್ಳ್ ಬಲ ಮೊಣಕಾಲ್ ಮೂಳೆ ನೋವ್ತಿತ್ತು. ನೀವು ಅವ್ಳ್ ಬಲ ಮೊಳಕಾಲ್ ಮೇಲೆ ಸುತ್ತಿಗೆಯಿಂದ ಜೋರಾಗಿ ಹೊಡುದ್ರಂತೆ. ಅದು ಮುರುದ್ ಹೋಗಿದೆ.
                   ಹಾಂ!
                   ತುಂಬಾ ಒಳ್ಳೇದಾಯ್ತು ಡಾಕ್ಟರ್. ತುಂಬಾ ಸಂತೋಷ. ನಿಮ್ಗೆ ಬೇಕಾದಷ್ಟು ದುಡ್ ಕೊಡ್ತೀನಿ. ಅವ್ಳು ನನ್ನ ಕಾಲ್ನಿಂದ ಒದೀತಿದ್ಲು. ಒದ್ದುಸ್ಕೊಂಡ್ ಒದ್ದುಸ್ಕೊಂಡ್, ನನ್ ಮೈ ಮೇಲೆ ತುಂಬಾ ಗಾಯಗಳಾಗಿವೆ. ಒಂದು ಮಾಗೋದ್ರೊಳ್ಗೆ ಇನ್ನೊಂದ್ ಬರ್ತಿತ್ತು. ಮಲ್ಟಿಪಲ್ ಗಾಯಗಳನ್ನೂ ಅನ್ಭವ್ಸಿದೀನಿ. ಅವೆಲ್ಲಾ ಇನ್ಫೆಕ್ಷನ್ನಾಗಿ ವಾಸೀನೇ ಆಗ್ತಿಲ್ಲ. ನನ್ಗೆ ಸ್ವಲ್ಪ ಶುಗರ್ ಇದೆ ಅನ್ಸುತ್ತೆ. ಆದ್ರೆ ನನ್ಗೆ ಶುಗರ್ ಗೆ ಸಲಹೆ ಬೇಡ.
                   ಮತ್ತೆ ಈಗ್ ಬಂದಿದ್ಯಾಕೆ, ನಿಮ್ ಹೆಂಡ್ತಿ ಕಾಲ್ ಸರಿ ಮಾಡ್ತೀನಿ.
                   ಬೇಡ ಡಾಕ್ಟರ್. ಆದ್ರೆ ತಮ್ಮಿಂದ ಇನ್ನೊಂದ್ ಉಪ್ಕಾರ ಆಗ್ಬೇಕಿತ್ತು. ನಾನು ಅವ್ಳನ್ನ ಮತ್ತೆ ನಿಮ್ಹತ್ರ ಕರ್ಕೊಂಡ್ ಬರ್ತೀನಿ.
                   ಉಪ್ಕಾರಾನಾ..., ಅಪ್ಕಾರಾನ ಉಪ್ಕಾರಾ ಅಂತಿದೀರಲ್ಲಾ, ಮತ್ತಿನ್ನೊಂದ್ ಉಪ್ಕಾರಾನಾ, ನನ್ಗೇನೂ ಅರ್ಥ ಆಗ್ತಿಲ್ಲ,ತಲೆ ಕೆಟ್ಟೋಗ್ತಿದೆ.ತಲೆ ಕೆಡಿಸ್ಬೇಡ್ರೀ ಮಾರಾಯ್ರೇ.
                   ಅವ್ಳಿಗೀಗ ಎಡ ಮೊಳ್ಕಾಲೂ ನೋವ್ತಾ ಇದೆ, ನನ್ನ ಒದ್ದೂ ಒದ್ದೂ. ನೀವು ಅದನ್ನೂ ಮುರುದ್ಬಿಡಿ.ನಾನ್ ನಿಮ್ ಉಪಕಾರ ಸ್ಮರಣೆ ಮಾಡ್ತಾ ಮತ್ತೆ ಏನಾದ್ರೂ ಕೆಲ್ಸ ಆಗ್ಬೇಕಿದ್ರೆ ನಿಮ್ ಹತ್ರಾನೇ ಬರ್ತೀನಿ.
                   ಹಾಂ! ನನ್ ಕೆಲ್ಸ ಕಾಲುನ್ ಮುರ್ಯೋದಲ್ಲ, ಜೋಡ್ಸೋದು, ಕರ್ಕೊಂಡ್ಬನ್ನಿ, ಎಡ್ಗಾಲನ್ ಮುರ್ಯೋದಿಲ್ಲ, ಡಯಾಗ್ನೋಸ್ ಮಾಡಿ ಮುಂದಿನ್ ಟ್ರೀಟ್ ಮೆಂಟ್ ಹೇಳ್ತೀನಿ. ಬಲ್ಗಾಲ್ ಮುರ್ದಿದ್ಯಲ್ಲಾ, ಅದ್ನೂ ಸರಿ ಮಾಡ್ತೀನಿ.
                   ಏನ್ ಡಾಕ್ಟರೇ, ಉಪ್ಕಾರ ಮಾಡಿ ಅಂದ್ರೇ, ಅಪ್ಕಾರ ಮಾಡ್ತೀನಿ ಅಂತೀರಲ್ಲಾ!
                   ನನ್ ಕೆಲ್ಸ ಮುರುದ್ ಮೂಳೆಗಳ್ನಾ ಜೋಡ್ಸೋದು. ಚೆನ್ನಾಗಿರೋ ಮೂಳೆಗಳ್ನಾ ಮುರ್ಯೋದಲ್ಲಾ, ಮಿಸ್ ಗೈಡ್ ಮಾಡ್ತೀರಾ?
                   ಈಗ್ ನೀವು ಬಲಗಾಲ್ ಮುರ್ದಿಲ್ವಾ, ಅದ್ಯಾಕ್ ಮುರುದ್ರಿ ಹಾಗಾದ್ರೆ..., ಅದಕ್ ನಾನ್ ಮಿಸ್ ಗೈಡ್ ಮಾಡಿದ್ನಾ..., ಕಾಂಪಂಸೇಷನ್ ಕೊಡ್ಲೇಬೇಕಲ್ವಾ, ಇನ್ನೊಂದ್ ಕಾಲ್ ಮುರೀರೀ...
                   ರೀ..., ಹೋಗ್ರೀ ನನ್ನುನ್ನೇನ್ ಕಟುಕ ಅಂದ್ಕೊಂಡಿದೀರಾ..., ಕುರಿ ಕಾಲ್ ಮುರ್ಯೋ ತರ ಮನುಷ್ಯುರ್ ಕಾಲ್ ಮುರ್ಯೋಕೇ, ನಿಮ್ ಹೆಂಡ್ತಿ ಏನ್ ಕುರೀನಾ, ಇಲ್ಲಾ ಹುಲೀನಾ, ಇಲ್ಲಾ ಹಾವಾ ಹಲ್ಮುರುದ್ ಕೂರ್ಸೋಕೇ, ಇಲ್ಲಾ ತೋಳಾನಾ, ಇಲ್ಲಾ ಚಿರ್ತೇನಾ, ಇಲ್ಲಾ ಬೇಟೇ ನಾಯೀನಾ?
                   ಅವ್ಳು ಕುರಿ ಅಂತೂ ಅಲ್ಲಾ, ಅವ್ಳೇನ್ ಸಾಧು ಪ್ರಾಣೀನಾ ಕರುಣೆ ತೋರ್ಸಕ್ಕೇ, ಇನ್ ಉಳ್ದಿದ್ ಯಾವ್ದೂ ಅಲ್ಲಾ ಡಾಕ್ಟರ್, ನೀವ್ ಹೇಳಿದ್ರಲ್ಲೀ, ಅವಕ್ಕಿನ ಜಾಸ್ತೀ  ಡಾಕ್ಟರ್ ಅವ್ಳೂ...ಈಗ್ಲಾದ್ರೂ ಗೊತ್ತಾಯ್ತಾ ಅವ್ಳು ನರಿ ಅಂತಾ. ನನ್ ಕಷ್ಟ ಏನೂ ಅಂತಾ. ಈಗ್ಲಾದ್ರೂ ಕರುಣೆ ತೋರ್ಸಿ, ಈ ಬಡಪಾಯಿ ಮೇಲೆ...ನಾನೇನ್ ಕಟುಕಾನಾ ಅಂದ್ರಲ್ಲಾ, ಹಾಗಾದ್ರೇ ಈಗ್ ಮುರ್ದಿರೋ ಒಂದ್ ಕಾಲ್ನಾ ಹೇಗ್ ಮುರುದ್ರೀ, ಆಗ್ ನೀವ್ ಕಟುಕ್ರಾಗಿದ್ರಾ, ನನ್ಗೆ ಕಾಂಪಂಸೇಷನ್ ಬೇಕೇ ಬೇಕು. ನ್ಯಾಯ ಬೇಕು, ನಿಮ್ ಹಾಸ್ಪಿಟಲ್ ಮುಂದೆ ಗಲಾಟೆ ಮಾಡ್ತೀನಿ.
                   ಆಯ್ತೂ ರೀ, ನಾನ್ ಮುರ್ದಿರೋ ಬಲ್ಗಾಲನ್ ಜೋಡುಸ್ಕೊಡ್ತೀನೀ..., ಅದೇ ಕಾಂಪಂಸೇಷನ್. ಕಾಂಪಂಸೇಷನ್ ಅಂತಾ ಇನ್ನೊಂದ್ ಕಾಲ್ ಮುರುದ್ರೇ ನನ್ ಜೈಲ್ಗ್ ಹಾಕ್ತಾರೇ...
                   ನಾನ್ ಹೇಳ್ತಿರೋದ್ ಉಲ್ಟಾ ಡಾಕ್ಟರ್, ನೀವ್ ಜೈಲ್ಗ್ ಹೋಗಲ್ಲಾ. ಉಲ್ಟಾ ಉಪ್ಯೋಗ ಆಗುತ್ತೆ. ನಾನ್ ನಿಮ್ಗ್ ಎಷ್ಟ್ ಬೇಕಾದ್ರೂ ದುಡ್ ಕೊಡ್ತೀನೀ...
                   ಟೇಬಲ್ ಮೇಲೆ ದುಡ್ ಸುರೀತಾರೆ.
                   ನನಗ್ ದುಡ್ ಬೇಡ್ರೀ, ನಾನ್ ಪೋಲೀಸ್ಗ್ ಫೋನ್ ಮಾಡ್ತೀನಿ. ನಿಮ್ಮುನ್ ಒಳಗ್ ಹಾಕುಸ್ತೀನಿ. ಝಣಝಣ ಕಾಂಚಾಣ ತೋರ್ಸಿ ನನ್ ಕೈಲಿ ಕೆಟ್ ಕೆಲ್ಸ ಮಾಡ್ಸಕ್ ನೋಡ್ತಿದೀರಾ, ನಿಮ್ಮಂತವ್ರನ್ನೆಲ್ಲಾ ಗಲ್ಲಿಗೇರಿಸ್ಬೇಕು.ನಿಮ್ ಹೆಂಡ್ತಿ ನಿಮ್ಮನ್ ಒದ್ರೆ ಪೋಲೀಸ್ ಸ್ಟೇಷನ್ಗ್ ಹೋಗಿ ನ್ಯಾಯ ಕೇಳ್ರೀ.ಕಂಪ್ಲೇಂಟ್ ಕೊಡಿ. ನಮ್ ತಲೆ ತಿಂತೀರಾ. ಒಳಗ್ ಹಾಕ್ಸಿ, ಎರಡು ದಿನ ಜೈಲಲ್ ಮುದ್ದೆ ಮುರುದ್ರೆ, ಎಲ್ಲಾ ಕೊಬ್ಬು ಇಳಿಯುತ್ತೆ. ಚಪಾತಿ ತಿಂದು ತಿಂದು ಆಯಿಲ್ ಜಾಸ್ತಿಯಾಗಿರುತ್ತೆ. ಕೊಲೆಸ್ಟೆರಾಲ್ ಜಾಸ್ತಿಯಾಗಿರುತ್ತೆ. ಅನ್ನ ತಿಂದು ತಲೆ ಜಾಸ್ತಿ ಓಡ್ತಾ ಇರುತ್ತೆ. ಮುದ್ದೆ ತಿಂದ್ರೆ ಎರ್ಡೂ ಇಳ್ಯುತ್ತೆ. ಆಮೇಲ್ ಮನೇಗ್ ಕರ್ಕೊಂಡ್ ಹೋಗಿ ಮುದ್ದೆ ಮುರ್ಸಿ, ಅನ್ನ  ಚಪಾತಿ ಕೊಡ್ಬೇಡಿ, ಎಲ್ಲಾ ಸರಿ ಹೋಗುತ್ತೆ. ಅದ್ ಬಿಟ್ಟೂ ನನ್ ಕೈಲಿ ಕ್ರೈಮ್ ಮಾಡುಸ್ತೀರಾ. ನಾನ್ ಎಮ್ ಬಿ ಬಿ ಎಸ್, ಎಮ್ ಡಿ ಮಾಡಿರೋದು ಜನ್ರ್ ಸೇವೆ ಮಾಡೋಕೇ. ನಿಮ್ ಹೆಂಡ್ತಿ ಕಾಲ್ಮುರ್ಯಕ್ಕಲ್ಲ. ನಿಮ್ಗೇ ಬುದ್ಧಿ ಇದೆ ಅಂದ್ಕೊಂಡಿದೀರಾ.
                   ಸಾರ್, ಸಾರ್ ಕೋಪ ಮಾಡ್ಕೋಬೇಡಿ. ನಾನು ನಿಮ್ ಎಲ್ಲಾ ಪ್ರಶ್ನೆಗಳ್ಗೂ ವನ್ ಬೈ ವನ್ ಉತ್ರ ಕೊಡ್ತೀನಿ. ಅವುಳ್ನ ಜೈಲ್ಗ್ ಹಾಕ್ಸಿ ಮನೇಗ್ ಕರ್ಕೊಂಡ್ ಬಂದ್ಮೇಲೆ, ಅವ್ಳು ಬಿಡ್ತಾಳಾ, ಸಿಟ್ಟಿರುತ್ತೆ, ಇನ್ನೂ ಜಾಸ್ತಿ ಒದೀತಾಳೆ. ಚಪಾತಿ ತಿನ್ಬೇಡ, ಅನ್ನ ತಿನ್ಬೇಡ, ನಿನ್ಗೆ ಕೊಬ್ ಜಾಸ್ತಿಯಾಗುತ್ತೆ, ಬರೀ ಮುದ್ದೆ ತಿನ್ನು ಅಂದ್ರೆ ಕೇಳ್ತಾಳಾ?ಅವುಳ್ದು ಚಂಡಿ ಕತೆ. ಉಲ್ಟಾ ಮಾಡ್ತಾಳೆ. “ ನಾನು ಇನ್ನೂ ಜಾಸ್ತಿ ಆಯಿಲ್ ಹಾಕ್ಕೊಂಡ್ ಚಪಾತಿ ತಿಂತೀನಿ, ಕೊಲೆಸ್ಟರಾಲ್ ಬೆಳುಸ್ಕೊಳ್ತೀನಿ.ಅನ್ನ ಜಾಸ್ತಿ ತಿಂದು ಇನ್ನೂ ತಲೆ ಬೆಳುಸ್ಕೊಳ್ತೀನಿ. ಇನ್ನೂ ತಲೆ ಉಪ್ಯೋಗ್ಸಿ ನಿಮ್ಗೆ ಚೆನ್ನಾಗ್ ಬುದ್ಧಿ ಕಲ್ಸಿ ದಾರೀಗ್ ತರ್ತೀನಿ. ನಿಮ್ ಕೊಬ್ಬನ್ನೆಲ್ಲಾ ಇಳುಸ್ತೀನಿ, ನನ್ ಕೊಬ್ ಇಳುಸ್ತೀರಾ.ಮನೆಯಿಂದ ಓಡುಸ್ಬಿಡ್ತೀನಿ ” ಅಂತಾಳೆ. ಅವ್ಳುನ್ನ ಜೈಲ್ಗ್ ಹಾಕ್ಸಿ ಅವ್ಳ್ ಕೊಬ್ ಇಳ್ಯುತ್ತೆ ಅಂತಾ ಅನ್ಕೊಂಡ್ರೆ ಅದು ನಮ್ ಪೆದ್ತನ ಆಗುತ್ತೆ. ಅದ್ ಸರ್ಯಾಗಲ್ಲಾ ಬಿಡಿ ಡಾಕ್ಟರ್.ಅವ್ಳನ್ ಜೈಲ್ಗ್ ಹಾಕ್ಸೋದಂತೂ ರೂಲ್ಡ್ ಔಟ್.
                   ಅವ್ರುಗ್ ಬುದ್ಧಿ ಕಲಿಸ್ಬೇಡಿ, ನಮ್ಮಂತಾ ಬಕ್ರಾಗಳ್ ಸಿಕ್ಕಿದೀವಲ್ಲಾ, ಇಲ್ ಬಂದ್ ತಲೆ ತಿನ್ನಿ. ನನ್ ಜೈಲ್ಗ್ ಹಾಕ್ಸಿ.
                   ಅದೆಲ್ಲಾ ಏನೂ ಇಲ್ಲಾ ಡಾಕ್ಟರೇ, ನಾನ್ ಹೇಳೋದೆಲ್ಲಾ ಸರ್ಯಾಗ್ ಕೇಳಿ. ನೀವು ಬಕ್ರಾನೂ ಆಗಲ್ಲಾ, ನಾನು ಬಕ್ರಾ ಗೆದ್ ಹುಲೀನೂ ಆಗಲ್ಲ.ಇಬ್ಬುರ್ ಸ್ನೇಹ ಮೂರನೇವ್ನಿಗೆ ನಷ್ಟ ಆಗುತ್ತೆ ಅಷ್ಟೇ. ನಾನ್ ಹೇಳೋದೆಲ್ಲಾ ಕೇಳಿ, ಆಮೇಲ್ ಮಾತಾಡಿ. ನಾನು ನಿಮ್ ಎಲ್ಲಾ ಮಾತ್ಗಳಿಗೆ ಇನ್ನೂ ಆನ್ಸರ್ರೇ ಮಾಡಿಲ್ಲ. ಮೊದಲು ನನ್ನನ್ನ್ ಮಾತಾಡಕ್ ಬಿಡಿ. ಎರಡ್ನೇ ಪಾಯಿಂಟ್ ಏನಪ್ಪಾ ಅಂದ್ರೇ, ನೀವು ಹೇಳಿದ್ರಿ, ನಾನು ಎಮ್ ಬಿ ಬಿ ಎಸ್ ಮಾಡಿರೋದು ಜನ್ರ ಸೇವೆ ಮಾಡಕ್ಕೆ ಅಂತಾ. ನಾನೂ ಅದನ್ನೇ ಮಾಡಿ ಅಂತಾ ಹೇಳ್ತಿರೋದು. ನಿಮ್ ವೃತ್ತಿಧರ್ಮ ಬಿಡ್ಬೇಡಿ. ನಿಮ್  ವೃತ್ತಿಧರ್ಮಕ್ ನಾನ್ ಅಡ್ಡಿ ಬರೋಲ್ಲ. ನನ್ನನೇನ್  ನೀವ್ ಕಿರಾತ್ಕ ಅಂದ್ಕೊಂಡಿದೀರಾ?ನನ್ನ ಹೆಂಡ್ತೀಗೆ ಕೆಡುಕು ಮಾಡ್ದಿದ್ರೆ ಅದು ಅವ್ಳಿಗ್ ಸೇವೆ ಮಾಡ್ದ್ ಹಂಗೆ. ಅವ್ಳ್ ಕಾಲ್ ಮುರುದ್ರೆ ನನ್ ಸೇವೆ ಮಾಡ್ದ್ ಹಂಗೆ. ಎರ್ಡೂ ಕಡೆ ನಿಮುಗ್ ಪುಣ್ಯ ಸಿಗುತ್ತೆ. ಶ್ರೀ ಕ್ರಿಷ್ಣಾ ಹೇಳಿಲ್ವೇ, “ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ” ನನ್ನ ಧ್ಯೇಯ ಎಂದು. ಅದ್ರಿಂದ ನನ್ನೇ ಕಾಪಾಡಿ. ನನ್ ಹೆಂಡ್ತಿ ದುಷ್ಟೆ, ನಾನು ಶಿಷ್ಟ. ಅವ್ಳು ರಾಂಗ್ ಸೈಡಲ್ಲಿದಾಳೆ.  ನಾನು ಕರೆಕ್ಟ್ ಪಾಥ್ ನಲ್ಲಿದೀನಿ.ಅವ್ಳಿಗ್ ಸ್ವಲ್ಪ ಬುದ್ಧಿ ಕಲ್ಸಿ ನನ್ ಪ್ರಾಣ ಉಳ್ಸಿ ಡಾಕ್ಟರೇ. ನಾನೇ ಪಾಸಿಟಿವ್ ಸೈಡಿದೀನಿ. ನೀವೂ ಒಬ್ಬ ಗಂಡಸರಾಗಿ,ಇನ್ನೊಂದು ಗಂಡಿನ ಕಷ್ಟ ಅರ್ಥ  ಮಾಡ್ಕೊಳ್ದಿದ್ರೆ, ಇನ್ನೇನ್ ಹೆಂಗುಸ್ರ್ ತಲೇಗ್ ಹೋಗುತ್ತಾ.ಅವ್ರು ಯಾವಾಗ್ಲೂ ಕಿರಾತಕಿಯರು. ನಾವು ಈ ಪ್ರಪಂಚ್ದಲ್ಲಿ ಗಂಡಸ್ರಾಗ್ ಹುಟ್ಟಿದ್ದೇ ತಪ್ಪಾ.ನಮ್ಗೂ ಪ್ರಾಣ, ರಕ್ತ, ಮಾಂಸ, ಹೃದಯ, ಆಸೆ ಆಕಾಂಕ್ಷೆಗಳು ಎಲ್ಲಾ ಇರುತ್ವೆ, ಅಲ್ವಾ ಡಾಕ್ಟರೇ. ಹೆಣ್ಣು ಪರಮ ಶಕ್ತಿ. ಆದಿಶಕ್ತಿ ದೇವಿಯು, ವಾಗೀಶ, ರಮೇಶ, ಉಮೇಶರನ್ ಕೂಡಾ ಆಳ್ತಾಳೆ.ಅಂದ್ಮೇಲೆ ಹೆಂಗ್ಸುರ್ದೇ ಅಲ್ವೇ ಮೇಲ್ ಗೈ.ಹೆಣ್ಣು ಸೊಸೈಟೀಲೀ ಪವರ್ಫುಲ್ ಸೆಕ್ಸ್,ಗಂಡು ವೀಕರ್ ಸೆಕ್ಸ್.ವೀಕ್ ಇರೋವ್ರೇ, ವೀಕರ್ ಸೆಕ್ಷನ್ ತೊಂದ್ರೇನಾ ಮನಸ್ಸಿಗ್ ಹಾಕ್ಕೊಂಡ್ ಪರಾಮರ್ಶಿಸ್ದಿದ್ರೆ ಹೇಗೆ? ಹೆಂಗಸ್ರೆಲ್ಲಾ ಮೀಟಿಂಗ್ ಮಾಡ್ಕೊಂಡು ತಮ್ ತಮ್ ಪ್ರಾಬ್ಲಮ್ಸ್ ಡಿಸ್ಕಸ್ ಮಾಡ್ಕೊಂತಾರೆ. ನಾವೂ ಪತ್ನಿ ಪೀಡಿತ ಪತಿಗಳ ಸಂಘ ಅಂತಾ ಯಾಕ್ ಮಾಡ್ಕೋಬಾರ್ದು. ಆಗ ನಾವೂ ನಮ್ ಕಷ್ಟಗಳ್ನೆಲ್ಲಾ ತೋಡ್ಕೋಬಹ್ದು.ಎಲ್ರೂ ಸೇರಿ ಮಾತಾಡಿ ಡಿಸಿಷನ್ಸ್ ತೊಗೊಳ್ಬಹ್ದು.ಸತ್ಯಾಗ್ರಹ ಮಾಡ್ಬಹ್ದು.ಸ್ವಲ್ಪಾನಾದ್ರೂ ನ್ಯಾಯ ಪಡ್ಕೋಬಹ್ದು. ಸ್ವಲ್ಪಾನಾದ್ರೂ ಸುಖ, ಶಾಂತಿ, ನೆಮ್ದಿ ಕಾಣ್ಬಹುದು. ಅದಕ್ಕೆಲ್ಲಾ ನಾನ್ ಆಮೇಲ್ ನಿಮ್ಹತ್ರ ಒಂದಿವ್ಸ ಬಂದ್ ಮಾತಾಡ್ತೀನಿ. ಈಗ್ ನಿಮುಗ್ ಸದ್ಯಕ್ಕೆ ತ್ರಿಬ್ಬಲ್ ಅಡ್ವಾಂಟೇಜ್. ಪುಣ್ಯಾನೂ  ಸಿಗುತ್ತೆ, ಕ್ರಿಷ್ಣನ ಉಪದೇಶಾನಾ ಪಾಲಿಸ್ದಂಗಾಗುತ್ತೆ,ಶ್ರೀ ಕ್ರಿಷ್ಣನಿಗೂ ಖುಷಿಯಾಗಿ ಕ್ರಿಷ್ಣ ಕಟಾಕ್ಷಾನೂ ಮತ್ತು ಲಕ್ಷೀ ಕಟಾಕ್ಷಾನೂ ಬೀಳುತ್ತೆ. ಯಾಕ್ ಹಿಂದೇಟ್ ಹಾಕ್ತೀರಾ ಡಾಕ್ಟರೇ, ನಿಮ್ ಕಾಲುಗ್ ಬೀಳ್ತೀನಿ. ಮೂರ್ನೇದಾಗಿ....
                    ಏನ್ರೀ, ತಿರುಗ್ಸಿ ಮರುಗ್ಸಿ ಮಾತಾಡ್ತಾ ಇದೀರಾ? ವ್ಯಾಖ್ಯಾನ, ಪ್ರವಚನ, ಹರಿಕತೆ, ಗಮಕ, ರಗಳೆ ಎಲ್ಲಾ ಹಾಸ್ಪಿಟಲ್ಗ್ ತಂದು, ಕ್ರಿಷ್ಣ ಮಹಾಭಾರತ್ದಲ್ಲಿ ಅರ್ಜುನಂಗೆ ರಥದ್ ಮೇಲ್ ಕೂತ್ಕೊಂಡು ಉಪ್ದೇಶ ಮಾಡ್ದಂಗೆ ನನ್ಗ್ ಉಪ್ದೇಶ ಮಾಡ್ತಿದೀರಾ? ಇದು ದ್ವಾಪರ ಯುಗಾನೂ ಅಲ್ಲ, ಮಹಾಭಾರತ ಯುದ್ಧ ಮೈದಾನಾನೂ ಅಲ್ಲ, ನೀವು ರಥದ್ ಮೇಲ್ ಕೂತಿರೋ ಸುದರ್ಶನ ಚಕ್ರ ಹಿಡ್ದಿರೋ, ಚಕ್ರಪಾಣೀನೂ ಅಲ್ಲ, ನಾನ್ ಉಪ್ದೇಶ ಕೇಳಕ್ ಕೂತಿರೋ ಬಿಲ್ಲು ವಿದ್ಯಾ ಕಪಟಿ ಧನಂಜಯಾನೂ ಅಲ್ಲ. ನನ್ ತಲೇಲ್ ಹುಳ ಬಿಡ್ತಾ ಇದೀರಾ. ಉಲ್ಟಾ ಪಲ್ಟಾ ಮಾತಾಡಿ, ಸುತ್ತಿ ಬಳ್ಸಿ, ನನ್ ಹೆಂಡ್ತಿ ಕಾಲ್ 
       ಮುರೀರಿ ಅಂತಾ ಆ ಪಾಯಿಂಟ್ಗೇ ಬರ್ತಿದೀರಾ? ನಿಮ್ಗೆ ಮಾತಾಡಕ್ ಟೈಮ್ ಕೊಟ್ಟಿದ್ದೇ ಜಾಸ್ತಿ ಆಯ್ತು. ನಾನೂ ಬೇರೆ ಪೇಶೆಂಟ್ಸನ್ನ ನೋಡ್ಬೇಕು. ಹೋಗ್ರೀ ಹೊರಕ್ಕೆ.
                   ಡಾಕ್ಟರೇ, ಡಾಕ್ಟರೇ, ನಾನ್ ಇನ್ನೂ ನಿಮ್ ಎಲ್ಲಾ ಮಾತ್ಗಳ್ಗೆ ಕ್ಲಾರಿಫಿಕೇಷನ್ ಕೊಟ್ಟೇ ಇಲ್ಲಾ, ಇಷ್ಟೊಂದ್ ಅರ್ಜೆಂಟ್ ಮಾಡಿದ್ರೇ ಹೆಂಗೆ ಡಾಕ್ಟರೇ, ಮನುಷ್ಯರ ಕಷ್ಟ ಕೇಳೋದ್ ನಿಮ್ ಕರ್ತವ್ಯ ಅಲ್ವೇ?ಈಗ್ ನಾನು ಕ್ರಿಷ್ಣ ಅಂದಿದ್ದಕ್ಕೆ, ಮಹಾಭಾರತದ್ ಮೈದಾನದ್ವರ್ಗೂ ಹೋದವ್ರ್ಯಾರು? ಸಮ್ಯ ಹಾಳ್ಮಾಡ್ತಿರೋರ್  ಯಾರು?ಮೂರ್ನೇದಾಗಿ ಅಂತಾ ಆಗ್ಲೇ ಶುರು ಮಾಡುದ್ನಲ್ಲಾ, ಆಗ್ ನೀವ್ ತಡುದ್ರಿ, ಅದ್ನ ಈಗ್ ಮುಂದ್ವರುಸ್ತೀನಿ ಕೇಳಿ. ನೀವ್ ಹೇಳುದ್ರಿ, ನಿಮ್ಮಂತವ್ರನ್ನೆಲ್ಲಾ ಗಲ್ಲೀಗೇರಿಸ್ಬೇಕು ಅಂತಾ. ನಿಮ್ ಹೆಂಡ್ತೀನೂ ನಿಮ್ಮನ್ ಒದ್ದಿದ್ರೇ, ನೀವೂ ಅವ್ರ್ ಕಾಲ್ ಮುರ್ಸಕ್ ಪ್ರಯತ್ನ ಪಡ್ತಿರ್ಲಿಲ್ವಾ? ನಿಮಗ್ ಹೆಂಗ್ ಗೊತ್ತಾಗುತ್ತೆ ಸಾರ್, ನನ್ ಕಷ್ಟ. ನೆರಳಲ್ ನಿಂತಿರೋರ್ಗೆ, ಬಿಸ್ಲಲ್ ನಿಂತಿರೋರ್ ಬೇಗೆ ಹೆಂಗ್ ಗೊತ್ತಾಗ್ಬೇಕು?
       ದಡ್ದಲ್ ನಿಂತಿರೋರ್ಗೆ ಪ್ರವಾಹದಲ್ ಸಿಲುಕಿರೋನ್ ಪಾಡು ಹೆಂಗೊತ್ತಾಗ್ಬೇಕು? ಪ್ರವಾಹದಲ್ ಕೊಚ್ಕೊಂಡ್ ಹೋಗ್ತಿರೋವುನ್ ನೋಡಿ ಹಾ... ಹಾ... ಹಾ... ಅಂತಾ ನಗಕ್ಕಾಗುತ್ತಾ ನೀವು? ಮರದ್ ಮೇಲೆ ಸಿಲುಕಿ ನೇತಾಡ್ತಾ ಇರೋವುನ್ ನಾನು, ನನ್ನ ನೋಡಿ ಗಹಗಹಿಸಕ್ಕಾಗುತ್ತಾ ನೀವು?ಕ್ಯಾನ್ಸರ್ ಬಂದವುನ್ ನೋಡಿ ಹಾ…ಹಾ...ಹಾ...ಇವ್ನಿಗೆ   ಕ್ಯಾನ್ಸರ್ ಬಂದಿದೆ ಅಂತಾ ಕುಣ್ದಾಡಕ್ಕಾಗುತ್ತಾ ನೀವು, ನೀವೂ ಮನುಷ್ಯರಲ್ವಾ? ಅಥವಾ ನನ್ ಹೆಂಡ್ತಿ ಒದೀತಿದಾಳೆ ಹಾ...ಹಾ...ಹಾ... ಅಂತಾ ಎರಡೂ ಕೈ ಎತ್ಕೊಂಡ್ ಕುಣಿಯಕ್ಕಾಗುತ್ತಾ? ಇಲ್ಲಾ ನನಗೆ ಕ್ಯಾನ್ಸರ್ ಬಂದಿದೆ, ನಾನ್ ಹೀಗೇ ನರುಳ್ತೀನಿ, ನಾನ್ ಸಲ್ಯೂಷನ್ ಹುಡ್ಕಲ್ಲಾ, ಹಾ...ಹಾ...ಹಾ...ಅಂತಾ ಎರ್ಡೂ ಕೈ ಮೇಲ್ಹಾಕಿ ಎಂಜಾಯ್ ಮಾಡ್ತೀರಾ? ಹಾ...ಹಾ...ಹಾ... ನಾನ್ ಸಾಯ್ತೀನಿ, ಮೆಡಿಸನ್ ಹುಡ್ಕಲ್ಲಾ ಅಂತಾ ಖುಷಿ ಖುಷಿಯಾಗಿರ್ತೀರಾ? ಈಗ್ ನೀವ್ ಹೇಳ್ತಾ ಇರೋದ್ ಹಾಗೇ ಇದೆ. ನನ್ನನ್ ಸುಮ್ನೆ ಅನ್ಭವ್ಸು, ಅನ್ಭವ್ಸು  ಅಂತಾ ಇದೀರಲ್ಲಾ. ನಾನ್ ನನ್ ಪ್ರಾಬ್ಲಮ್ಗೆ ಮೆಡಿಸನ್ ಹುಡುಕ್ಬೇಡ್ವಾ?ನನ್ ಜಾಗ್ದಲ್ಲಿದ್ದಿದ್ರೆ ನೀವೇನ್ ಮಾಡ್ತಿದ್ರೀ? ಹೋಗ್ಲಿ ಬಿಡಿ, ನಾನೇನ್ ಪಾಪ ಮಾಡಿದ್ನೋ ನಾನೇ ಅನುಭವಿಸ್ಬೇಕು. ದೇವುರ್ಗ್ಯಾಕ್ ಬೇಕು, ಮನುಷ್ಯನ್ ಕಷ್ಟ.
                   ಈಗ್ಲಾದ್ರೂ ಅರ್ಥ ಮಾಡ್ಕೊಂಡ್ರಲ್ಲಾ, ಈಗ್ಲಾದ್ರೂ ನನ್ ಬಿಡ್ತೀರಾ!
                   ಇಲ್ಲಾ ಡಾಕ್ಟರ್ ಈಗ್ಲೇ ಹೆಂಗ್ ತಪ್ಪುಸ್ಕೊಂತೀರಾ, ನಾನ್ ನಿಮ್ ಎಲ್ಲಾ ಮೂದಲಿಕೆಗಳ್ಗೆ ಉತ್ರ ಕೊಟ್ಟೇ ಇಲ್ಲಾ. ನಾಲ್ಕ್ನೇದಾಗಿ ನೀವು ಪೋಲೀಸ್ಗೆ ಫೋನ್ ಮಾಡ್ತೀನಿ ಅಂದ್ರಲ್ಲಾ, ಮಾಡಿದ್ರೇ ನಿಮ್ಗೇ ತೊಂದ್ರೆ. ನಾನು ಪೋಲೀಸ್ನವ್ರಿಗ್ ಹೇಳ್ತೀನಿ, ಈ ಡಾಕ್ಟರು ನನ್ ಹೆಂಡ್ತಿ ಬಲ್ಗಾಲ್ ಮುರ್ದಿದಾರೆ.ಅವ್ಳನ್ನ ಜೈಪೂರ್ ಗೆ ಕರ್ಕೊಂಡ್ ಹೋಗಿ ಟ್ರೀಟ್ ಮೆಂಟ್ ಮಾಡಿಸ್ಕೊಂಡ್ ಬರೋಕೆ ನನ್ಗೆ 25 ಲಕ್ಷ ಪರಿಹಾರ ಹಣ ಕೊಡ್ಸಿ, ನಾನು ಕಂಪ್ಲೇಂಟ್ ಫೈಲ್ ಮಾಡ್ತೀನಿ, ಕೇಸ್ ಫೈಲ್ ಮಾಡ್ತೀನಿ, ಕೋರ್ಟ್ ನಲ್ಲಿ ಫೈಟ್ ಮಾಡ್ತೀನಿ, ಅಂತಾ.
                   ಆಗ್ ನಾನ್ ಹೇಳ್ತೀನಿ, ನಾನೇ ಮುರ್ದಿರೋ ಬಲ್ಗಾಲನ್ ಜೋಡುಸ್ಕೊಡ್ತೀನಿ,25 ಲಕ್ಷ ಕೊಡಲ್ಲಾ ಅಂತಾ.
                   ಆಗ್ ನಾನ್ ಹೇಳ್ತೀನಿ, ಈ ಡಾಕ್ಟರ್ ಮೇಲೆ ನನ್ಗೆ ನಂಬಿಕೆ ಇಲ್ಲಾ, ಇವ್ರು ಕಾಲ್ ಕೂಡಿಸ್ಕೊಡ್ತೀನಿ ಅಂತಾ ಇನ್ನೂ ಅದ್ವಾನ  ಮಾಡಿದ್ರೆ ನಾನೇನ್ ಮಾಡ್ಲಿ, ಮೊಣ್ಕಾಲಿನ್, ಮೇಲಿನ್ ಮೂಳೇಲೂ ಬಿರುಕು ಮೂಡ್ಸಿದ್ರೆ  ಏನ್ ಮಾಡ್ಲಿ. ಮೊದ್ಲೇ
       ಡಯಾಗ್ನೋಸ್ ಮಾಡ್ತೀನಿ ಅಂತಾ ಸುತ್ತಿಗೆಯಿಂದ ಹೊಡ್ದು ಮೊಳ್ಕಾಲ್ ಮೂಳೆ ಮುರ್ದಿದಾರೆ. ಏನೋ ಮಾಡಕ್ ಹೋಗಿ ಏನೋ ಮಾಡಿದಾರೆ. ಈಗ್ ಮತ್ತೆ ಅದನ್ನೇ ಮಾಡಲ್ಲಾ ಅಂತಾ  ಏನ್ ಗ್ಯಾರಂಟಿ. ಜೋಡ್ಸಕ್ಕೆ ಅಂತಾ ಹೋಗಿ ಬಿರುಕು ದೊಡ್ಡು ದ್ ಮಾಡಿದ್ರೆ ಏನ್ ಮಾಡ್ಲಿ ಅಂತಾ.
                   ನೀವು ಜೈಪೂರ್ ಗೆ ಕರ್ಕೊಂಡ್ ಹೋಗೋಕೆ, ಟ್ರೀಟ್ ಮೆಂಟ್ ಗೆ, 25 ಲಕ್ಷ ಆಗಲ್ಲಾ ರೀ. ಒಂದು 2-3 ಲಕ್ಷ ಆಗ್ಬಹ್ದು. ಅದನ್ನ ನಾನ್ ಕೊಡ್ತೀನಿ, ಕರ್ಕೊಂಡ್ ಹೋಗಿ.
                   ಅಲ್ಲೀಗ್ ಕರ್ಕೊಂಡ್ ಹೋಗಕ್ಕಾಗುತ್ತೆ, ಟ್ರೀಟ್ ಮೆಂಟ್ ಕೊಡ್ಸಕ್ಕಾಗುತ್ತೆ, ಕರ್ಕೊಂಡ್ ಬರೋದ್ಬೇಡ್ವಾ? ನೀವ್ ಹೇಳಿದ್ದು ಜೈಪೂರ್ ಗೆ ಕರ್ಕೊಂಡ್ ಹೋಗಕ್ಕೆ, ಟ್ರೀಟ್ ಮೆಂಟ್ ಗೆ, 2-3 ಲಕ್ಷ ಆಗುತ್ತೆ ಅಂತಾ.ಹಾಗಾದ್ರೆ ವಾಪಸ್ ಕರ್ಕೊಂಡ್ ಬರೋದ್ ಬೇಡ್ವಾ?
                   ಎಲ್ಲಾದಕ್ಕೂ ಸೇರ್ಸೇ ಹೇಳಿದ್ದೂ ರೀ,2-3 ಲಕ್ಷದಲ್ಲಿ ಎಲ್ಲಾ ಆಗುತ್ತೆ, ವಾಪಸ್ಸೂ ಕರ್ಕೊಂಡ್ ಬರ್ಬಹ್ದು.
                   2-3 ಲಕ್ಷ ಸಾಲಲ್ಲಾ ಸಾರ್, ನಾವು ಏರ್ ಆಂಬುಲೆನ್ಸ್ ನಲ್ಲಿ ಹೋಗ್ಬೇಕು. ಸುಮಾರು ಒಂದು ವರ್ಷದ ಹಿಂದೆ, ಸುಮಲತಾರವ್ರು ಅಂಬರೀಶ್ ರನ್ನು ಏರ್ ಆಂಬುಲೆನ್ಸನಲ್ಲಿ  ಸಿಂಗಪೂರ್ ಗೆ ಕರ್ಕೊಂಡ್ ಹೋಗಿ ಟ್ರೀಟ್ ಮೆಂಟ್ ಕೊಡಿಸ್ಕೊಂಡ್ ಬಂದ್ರು.ಈಗ ಅಂಬರೀಶ್ ರವರು ಚೆನ್ನಾಗಿದಾರೆ. ಕಾಸಿಗೆ ತಕ್ಕಂತೆ ಕಜ್ಜಾಯ, ಕಾಸಿಗೆ ತಕ್ಕ ಟ್ರೀಟ್ ಮೆಂಟ್. ದುಡ್ಡು ಚೆಲ್ಲುದ್ರೇ ಅಲ್ವಾ ಸಾರ್ ಕೆಲ್ಸ ಆಗೋದು. ಜೈಪೂರ್ ಗೆ ಏರ್ ಆಂಬುಲೆನ್ಸ್ನಲ್ಲಿ ಹೋಗ್ ಬರೋದಕ್ಕೆ ಜಾಸ್ತಿ ಆಗುತ್ತೆ.
                   ಈಗ ಸಿದ್ದರಾಮಯ್ಯಾವ್ರ ಮಗನ್ನ ಬೆಲ್ಜಿಯಂಗೆ ಕರ್ಕೊಂಡ್ ಹೋದ್ರಲ್ಲಾ, ಅವರ್ ಮಗ ಸತ್ತೇ ಹೋದ್ರಲ್ರೀ. ಕಾಸಿಗೆ ತಕ್ಕ ಕಜ್ಜಾಯ ಸಿಗ್ಲೇ ಇಲ್ವಲ್ರೀ. ಕಾಸಿಗ್ ತಕ್ಕ ಟ್ರೀಟ್ ಮೆಂಟ್ ಸಿಕ್ಕಿಲ್ವಲ್ಲಾ....ದುಡ್ ಸುರುದ್ರೆ ಆರೋಗ್ಯ ಸಿಕ್ಬಿಡುತ್ತಾ. ಇಲ್ಲಿರೋ ಹಾಸ್ಪಿಟಲ್ ಗಳು, ಹಾಸ್ಪಿಟಲ್ ಗಳಲ್ವಾ, ಇಲ್ಲಿರೋರು ಡಾಕ್ಟರ್ ಗಳಲ್ವಾ. ಅಲ್ಲೂ ಫಾರಿನ್ ಕಂಟ್ರೀಸಲ್ಲೂ ಬೇಕಾದಷ್ಟ್ ಜನ ಸಾಯ್ತಾರೆ.
                   ಸಿದ್ದರಾಮಯ್ಯಾವ್ರ್ ಮಗನ್ಗೆ ವಾಸಿ ಆಗ್ದೇ ಇರೋ ಅಂತಾ ಯಾವ್ದೋ ಕಾಯ್ಲೆ ಆಗಿತ್ತು.  ಆಕ್ಸಿಡೆಂಟೋ ಏನೋ ಆಗಿತ್ತು.ಆದ್ರೆ ನನ್ ಹೆಂಡ್ತೀಗೆ ವಾಸಿ ಆಗ್ದೇ ಇರೋದೇನೂ ಆಗಿಲ್ಲ. ಚಿಕಿತ್ಸೆ ಕೊಡಿಸ್ಲೂಬಹ್ದು, ಫಲಿಸ್ಲೂಬಹ್ದು. ನೀವೇ ಹೇಳ್ತಿದೀರಲ್ಲಾ,ಮುರುದ್ ಕಾಲುನ್ನ ಸರಿ ಮಾಡ್ತೀನಿ ಅಂತಾ. ಸ್ಟಿಲ್ ದ ಬಾಲ್ ಈಸ್ ಇನ್ ಅವರ್ ಕೋರ್ಟ್. ನನ್ ಹೆಂಡ್ತಿ ಇನ್ನೂ ಬದ್ಕಿದಾಳೆ.ಔಟ್ ಆಫ್ ಕಂಟ್ರೋಲ್ ಆಗಿಲ್ಲ.ಇನ್ನೂ ನಮ್ ಕೈಯಲ್ಲೇ ಇದೆ.
                   ಈಗ್ ಏನ್ರೀ ನಿಮ್ ತಕರಾರು, ಏನ್ ಮಾಡ್ಬೇಕ್ ಹೇಳಿ.
                   ಇಪ್ಪತ್ತೈದ್ ಲಕ್ಷ ಕೊಡಿ, ಇಲ್ಲಾ ನಾನೇ ಪೋಲೀಸ್ರನ್ನ ಕರುಸ್ತೀನಿ.
                   ಜೈಪೂರ್ ನಲ್ಲಿ  ಟ್ರೀಟ್ ಮೆಂಟ್ ಕೊಡ್ಸೋಕೆ 25 ಲಕ್ಷ ಬೇಕಾಗಲ್ಲ. ನಾನು ಇನ್ನೆರಡ್ ಲಕ್ಷ ಜಾಸ್ತಿ ಕೊಡ್ತೀನಿ, ಅಂದ್ರೆ 5 ಲಕ್ಷ ಕೊಡ್ತೀನಿ, ಅಷ್ಟೇ. ಅದರ್ ಮೇಲೆ ಒಂದ್ ಪೈಸಾನೂ ಕೊಡಲ್ಲ. ಏನ್ಮಾಡ್ಕೊಂತೀರೋ ಮಾಡ್ಕೋ ಹೋಗಿ.
                   ಕೊಡಲ್ವಾ, ಹಾಗಾದ್ರೆ ಇನ್ನೊಂದ್ ಕೆಲ್ಸಾನಾರಾ ಮಾಡಿ. ನನ್ಗೆ 25 ಲಕ್ಷ ಮುಖ್ಯ ಅಲ್ಲ. ನನ್ ಹೆಂಡ್ತಿ, ಇನ್ನೊಂದ್ ಕಾಲನ್ನಾರಾ ಮುರೀರಿ.
                   ಏ(ಸ್ವಲ್ಪ ಜೋರಾಗಿ) ಅದೆಲ್ಲಾ ಆಗಲ್ಲಾ ಹೋಗ್ರೀ, ನನ್ ಜೀವ ಯಾಕ್ ತಿಂತೀರಾ, ಅದೆಲ್ಲಾ ನನ್ ಪ್ರೊಫೆಷನ್ನುಗ್ ವಿರುದ್ಧ. ನನ್ ಮನಸ್ಸು ಒಪ್ಪೋದಿಲ್ಲ.ಒಳ್ಳೇ ಆಸಾಮಿ ಗಂಟ್ ಬಿದ್ರಲ್ರೀ. ಈವತ್ತು ಯಾವ್ ಮಗ್ಲಲ್ ಎದ್ನೋ, ಎದ್ದಿದ್ ತಕ್ಷಣ ಯಾರ್ ಮುಖ ನೋಡಿದ್ನೋ. ಆ... ಜ್ಞಾಪಕ ಬಂತು. ನನ್ ಹೆಂಡ್ತಿ ಮುಖ ನೋಡ್ದೇ, ಅದಕ್ಕೇ ಹಿಂಗಾಯ್ತು.
                   ನೋಡುದ್ರಾ, ನೋಡುದ್ರಾ ನಿಮ್ಗೆ ಹೆಂಡ್ತಿ ಮುಖ ನೋಡೋಕೂ ಕಷ್ಟ ಆಗುತ್ತೆ. ಅವರ್ನ ನೆನೆಸ್ಕೊಂಡ್ರೇನೇ ವಾಕರಿಕೆ ಬರ್ತಿದೆ. ಇನ್ನ್ ನಾನು ಒದುಸ್ಕೊಳೋವ್ನು,ನನ್ ಫಜೀತಿ ಹೇಗಿರ್ಬೇಕು ಊಹಿಸ್ಕೊಳ್ಳಿ. ನಮ್ಮಂಥಾ ಪತ್ನಿಶೋಷಿತರಿಗೆ ನ್ಯಾಯ ಕೊಡಿ. ನನ್ ಜೀವ ಬಾಯಲ್ಲಿದೆ. ಯಾವಾಗ್ ಹಾರ್ಹೋಗುತ್ತೋ ಗೊತ್ತಿಲ್ಲ.
                   ರೀ ನನ್ ಹೆಂಡ್ತಿ ಮುಖ ನೆನುಸ್ಕೊಂಡ್ರೇ ನನ್ಗೇನ್ ವಾಕರ್ಕೆ ಬರ್ತಿಲ್ರೀ. ನಾನ್ ಹೇಳುದ್ನಾ ಹಾಗೆ. ಒಳ್ಳೆ ಆಸಾಮಿ ಸಿಕ್ಕಿದ್ರಿ ಈವತ್ತು. ಓ ಈವತ್ತು ನನ್ ಹೆಂಡ್ತಿ ಮುಖ ಬೇರೇ ನೋಡ್ದೇ, ಪ್ಲಸ್ ಒಂದ್ ಕಾಗೆ ಮುಟ್ಬಿಡ್ತು. ಅದಕ್ಕೇ ಹಿಂಗೆಲ್ಲಾ ಆಗ್ತಿರೋದು. ಯಾವ್ದೋ ಋಷಿ ಜೀವ ಒಂದ್ ಗಿಳೀಲಿತ್ತಂತೆ. ಇದ್ ಕಲಿಯುಗಾ ರೀ. ನಿಮ್ ಜೀವ ಯಾಕ್ರೀ ಬಾಯಲ್ಲಿರುತ್ತೆ.ಗಿಳಿ ಹತ್ರ ಹಾರ್ಹೋಗೋಕಾ, ನಿಮ್ ಜೀವ ನಿಮ್ ದೇಹ್ದಲ್ಲಿ ಎಲ್ಲಿರ್ಬೇಕೋ ಅಲ್ಲೇ ಇರುತ್ತೆ. ನೀವ್ ಏನೇನೋ ಯೋಚ್ನೆ ಮಾಡ್ಬೇಡಿ. ನನ್ ತಲೇನೂ ಕೆಡಿಸ್ಬೇಡಿ.
                   ಅಲ್ಲಾ ಡಾಕ್ಟರೇ, ಕಾಗೆ... ಏನ್ ಮಾಡುತ್ತೆ, ಅದು ಸಾದು ಪ್ರಾಣಿ. ಅದು ನಮ್ಮನ್ ನೋಡಿದ್ ತಕ್ಷಣ ಹೆದುರ್ಕೊಂಡ್ ಹಾರ್ಹೋಗುತ್ತೆ. ಅದೇನ್ ಹೆಂಡ್ತೀನಾ ಒದ್ಯೋಕೇ, ಅದೇನ್ ಧನಾನಾ ಒದ್ಯಕ್ಕೇ, ಅದ್ಯೇನ್ ತೊಂದ್ರೆ ಮಾಡ್ತು ನಿಮ್ಗೇ.ಅದ್ ಮುಟ್ಟಿದ್ದುಕ್ಕೇ ನೀವ್ ಚಿಂತಾಕ್ರಾಂತ್ರಾಗಿದೀರಾ. ನನ್ ಹೆಂಡ್ತೀಗೂ ಧನಕ್ಕೂ ಯಾವ್ ಡಿಫರೆಂಸ್ ಇಲ್ಲ. ಅವ್ಳ್ ಕೈಲಿ ಒದುಸ್ಕೊಂಡವ್ನಿಗೆ ಹೆಂಗಿರ್ಬೇಕ್ ಡಾಕ್ಟರೇ. ನಮ್ಮಂಥಾ ನತದೃಷ್ಟರ ಸ್ಥಿತಿ ಅಧೋಗತಿ. ಸುಸ್ಥಿತಿಯಲ್ಲಿರೋರ್ಗೆಲ್ಲಾ ದುಸ್ಥಿತೀನಲ್ಲಿರೋರ್ ಕಥೆಯೆಲ್ಲಾ ಹೆಂಗೊತ್ತಾಗುತ್ತೆ. ಡಾಕ್ಟರೇ ಸುಮ್ನೆ ಯಾಕ್ ಹಠ ಮಾಡ್ತೀರಾ? ನಾನ್ ನಿಮ್ಗೆ ಬೇಕಾದಷ್ಟು ಲಕ್ಷ್ಮೀದೇವಿ ಕೊಡ್ತೀನಿ. ನೀವ್ ನನ್ ದೇವಿಯಿಂದ ಮುಕ್ತಿ ಕೊಡ್ಸಿ. ಆಮೇಲೆ ನನ್ ಸ್ನೇಹಿತನನ್ನ ಕರ್ಕೊಂಡ್ ಬರ್ತೀನಿ. ಅವುನ್ ಹೆಂಡ್ತೀಗೂ, ಅವ್ನುನ್ ಒದ್ದೂ ಒದ್ದೂ ಕಾಲ್ ನೋವ್ ಬಂದಿದೆ. ಅವನ್ ಪತ್ನಿ ಅವನ್ ಒದ್ಯೋದಲ್ದೇ ಹೊಡೀತಾನೂ ಇದ್ಲು.ಅವುನ್ದು ಡಬಲ್ ಪ್ರಾಬ್ಲಮ್, ಡಾಕ್ಟರ್. ಬಲ್ಗಾಲಲ್ಲಿ ಒದೀತಾಳೆ, ಎಡ ಗೈಯಲ್ಲಿ ಹೊಡೀತಾಳೆ. ಹೊಡ್ದೂ ಹೊಡ್ದೂ ಕೈಯೂ ಬಾವು ಬಂದಿದೆ. ನಿಮ್ಗೆ ಡಬಲ್ ಪ್ರಾಫಿಟ್ ಡಾಕ್ಟರ್. ಅವ್ನೂ ಹೆಂಡ್ತೀಗೆ ಎರ್ಡನ್ನೂ ಮುರುಸ್ಬೇಕು ಅಂತಿದಾನೆ. ನೀವೂ ಬಾಗಿಲಿಗೆ ಬಂದಿರೋ ಲಕ್ಷ್ಮೀನ ಒದ್ರೇ, ನಿಮ್ ಭಾರ್ಯೆ ನಿಮ್ನ ಒದೀಬಹ್ದು. ಅದರ್ ಬದ್ಲು ಡಬ್ಬಲ್, ತ್ರಿಬ್ಬಲ್, ಫೋರ್ಬಲ್, ಫೈವ್ಬಲ್ ಸಿರಿದೇವೀನಾ ಮತ್ತು ಸಿಕ್ಸ್ಬಲ್ ಅದೃಷ್ಟಲಕ್ಷ್ಮೀನಾ ಸ್ವಾಗತ್ಸಿ. ಅವ್ರಿಂದ ಉಳಿದ ಲಕ್ಷ್ಮಿಯರು  ಅಂದ್ರೆ ಎಲ್ಲಾ ಅಷ್ಟ ಲಕ್ಷ್ಮಿಯರೂ ಅಂದ್ರೆ ದಾನ್ಯಲಕ್ಷ್ಮಿ, ಧನಲಕ್ಷ್ಮಿ, ಭಾಗ್ಯಲಕ್ಷ್ಮಿ, ಸಂತಾನ ಲಕ್ಷ್ಮಿ, ಬೆಂಡೇಕಾಯ್ ಲಕ್ಷ್ಮಿ, ಬಾಳೇಕಾಯ್ ಲಕ್ಷ್ಮಿ, ಮೆಣಸಿನಕಾಯ್ ಲಕ್ಷ್ಮಿ, ಹೀರೇಕಾಯ್ ಲಕ್ಷ್ಮಿ ಎಲ್ರೂ ಬರ್ತಾರೆ. ಯಾರ್ಗುಂಟು ಯಾರ್ಗಿಲ್ಲ. ದೇವ್ರು ಕೊಡ್ಬೇಕಾದ್ರೆ ಮಾಳಿಗೆ ಹರ್ಕೊಂಡ್ ಕೊಡ್ತಾನಂತೆ.... ಆಮೇಲೆ ನೀವು ಲಕ್ಷಾಧಿಪತಿಯಿಂದ ಕೋಟ್ಯಾಧಿಪತಿ ಆಗ್ಬಹ್ದು. ನಿಮ್ಗೆ ಸರಸ್ವತೀನೂ ಒಲ್ದಿದಾಳೆ.ನಿಮ್ದು ಮೆರಿಟ್ ಸೀಟ್. ಲಕ್ಷ್ಮಿ ಸರಸ್ವತಿ ಇಬ್ರೂ ಸೇರ್ಬಿಟ್ರೇ ಕೇಳ್ಬೇಕಾ. ಸ್ವರ್ಗಕ್ಕೆ ಮೂರೇ ಗೇಣು.ಆಗ ನೀವು ಸ್ವರ್ಗಕ್ಕೆ ಕಿಚ್ಚು ಹಚ್ಬಹ್ದು, ಸರ್ವಜ್ಞ ಹೇಳ್ದಂಗೇ, ಯಾಕಂದ್ರೆ ನಿಮ್ ಹೆಂಡ್ತೀನೂ ಪ್ರಸನ್ನರಾಗಿರ್ತಾರೆ.
                   ಸ್ವಲ್ಪ ನನ್ ಕಿವಿ ನೋಡ್ರಿ, ದಾಸವಾಳ ಹೂವೇನಾದ್ರೂ ಕಾಣ್ತಾ ಇದ್ಯಾ ನನ್ ಕಿವಿ ಮೇಲೆ?
                   ಇಲ್ವಲ್ಲಾ ಸಾರ್!
                   ಮತ್ಯಾಕ್ರಿ, ದುಬಾಯ್ ನಲ್ಲಿರೋ 108 ಅಂತಸ್ತಿನ್ ಬಿಲ್ಡಿಂಗ್ ಮೇಲ್ ಹತ್ತುಸ್ತಾ ಇದೀರಾ ನನ್ನನ್ನ?
                   ಏನಿಲ್ಲಾ ಸಾರ್, ನೀವ್ ದಾಸವಾಳ ಹೂವೂ ಮುಡ್ದಿಲ್ಲ, ಯಾವ್ ಹೂವೂ ಮುಡ್ದಿಲ್ಲ, ಮುಡ್ಸೋದೂ ಇಲ್ಲ, ನಿಮ್ಮನ್ ದಾಸಯ್ಯ ಖಂಡಿತ ಮಾಡಲ್ಲ ಡಾಕ್ಟರೇ, ನೀವ್ ಈ ಫ್ಲೋರಲ್ಲೇ ಇರಿ, ನಾನೇನ್ ನಿಮ್ಮನ್ನ ಏರೋಪ್ಲೇನ್ ಹತ್ಸಲ್ಲ.ಮಂಗಳ ಗ್ರಹಕ್ಕೂ ಹತ್ಸಲ್ಲ.ನೀವಿಲ್ಲೇ ಇರಿ. ನೀವೇನೇನೋ ಅನ್ಕೋಬೇಡಿ...ನನ್ನನ್ ಕಳುಸ್ಬಿಡಿ ಮೇಲುಕ್ಕೇ...
                   ಹೌದಾ, ಹಾಗಾದ್ರೆ ನನ್ ಮುಖ ಒಂಚೂರ್ ನೋಡಿ, ಹೇಗ್ ಕಾಣುಸ್ತಿದೆ....
                   ಯಾಕ್ ಸಾರ್, ಚೆನ್ನಾಗೇ ಇದ್ಯಲ್ಲಾ!
                   ಯಾಕೇ, ನಾಯಿ ತರ ಕಾಣ್ತಿಲ್ವಾ?
                   ಯಾಕ್ ಸಾರ್, ನಿಮ್ಗೇನ್ ಬಂದಿದೆ...ನಿಮ್ಮನ್ ನೀವ್ ನಾಯಿ ಅನ್ಕೊಳ್ತೀರಾ!ಕೋಟಿ ಜನ್ಮ ಆದ್ಮೇಲೆ ಮನುಷ್ಯ ಜನ್ಮ ಅಂತೇ, ಮತ್ಯಾಕ್ ಹಿಂದಕ್ ಹೋಗ್ತೀರಾ?
                   ಮತ್ಯಾಕ್ರೀ, ನನ್ ಕುತ್ಗೇಗ್ ಬೆಲ್ಟ್ ಹಾಕಿ ಹಗ್ಗ ಹಾಕಿ ಎಳೀತಾ ಇದೀರಾ, ನಾಯಿ ಬಿಸ್ಕತ್ ಹಾಕಿ, ಲಕ್ಷ್ಮೀ ,ಲಕ್ಷ್ಮೀ... ತಿನ್ನಿ ತಿನ್ನಿ ಅಂತಾ ಇದೀರಾ?
                    ಏ ಹೋಗೀ ಸಾರ್, ನೀವ್ ಏನ್ ಹಾಸ್ಯ ಮಾಡ್ತಿದೀರಾ, ನಾನ್ಯಾಕ್ ಸಾರ್ ನಿಮುಗ್ ಬಿಸ್ಕತ್ ಹಾಕ್ಲೀ,ಲಕ್ಷ್ಮೀನ ಬಿಸ್ಕತ್ತು ಬಿಸ್ಕತ್ತು ಅಂತೀರಲ್ಲಾ, ಶಿವ ಶಿವಾ, ಅಯ್ಯೋ ಅಂದ್ರೆ ಆರ್ತಿಂಗುಳ್ ಪಾಪ ಹಿಂದೇನೇ ಬರುತ್ತಲ್ಲಾ ಶಿವಾ, ಒಳ್ಳೇತನಕ್ಕೆ ಕಾಲ ಇಲ್ಲ ಬಿಡಿ. ನಾನ್ ಹೇಳೋ ಲಾಜಿಕ್ ಅರ್ಥ ಮಾಡ್ಕೊಳ್ಳಿ ಶಿವಾ, ಇಬ್ಬರ ಜಗಳ ಮೂರ್ನೇವ್ನಿಗೆ ಲಾಭ ಅಂತಾರೆ. ಆದ್ರೆ ಉಲ್ಟಾನೂ ನಿಜ ಶಿವಾ, ಇಬ್ಬರ ಸ್ನೇಹ ಮೂರ್ನೇವ್ನಿಗೆ ನಷ್ಟ.....ನಾವಿಬ್ರೂ ಒಂದಾದ್ರೆ, ನಮ್ಗೆ ಲಾಭ, ಮೂರ್ನೇವ್ರಿಗೆ ನಷ್ಟ, ದುಷ್ಟರ್ಗೆ ನಷ್ಟ ಆಗ್ಲಿ ಬಿಡಿ. ಅದು ದೇವ್ರು ಹೇಳಿರೋ ನೀತೀನೇ. ಪಾಪಿಗಳಿಗೆ ಶಿಕ್ಷೆ ಆಗ್ಲೇ ಬೇಕಲ್ವೇ. ಡಾಕ್ಟರೇ ನೀವು ಹಮ್ಮುರಾಬಿ ಕೋಡ್ ಓದಿಲ್ವೇ, ಸೋಷಿಯಲ್ ಸ್ಟಡೀಸ್ ನಲ್ಲಿ...”ಎ ಹ್ಯಾಂಡ್ ಫಾರ್ ಹ್ಯಾಂಡ್, ಎ ಲೆಗ್ ಫಾರ್ ಲೆಗ್, ಆನ್(an) ಐ ಫಾರ್ ಐ”. ಅಂತಾ. ನೀವ್ ಇಷ್ಟೊಂದ್ ಓದಿರೋರು....ನಿಮುಗ್ ನಮ್ಮಂಥಾ ಪಾಮರರಿಂದ ಉಪ್ದೇಶ ಬೇಕಾ?ನಾನೀಗ್ ಏನ್ ಕೇಳ್ತಿರೋದು, ಟಿಟ್ ಪಾರ್ ಟ್ಯಾಟ್, ಅಷ್ಟೇ ಅಲ್ವೇ?
 
                   ಇನ್ನೂ ವಿಚ್ವಿಚಿತ್ರ ರೂಲ್ಸ್ ಮಾಡೋ ರಾಜ್ರುಗಳಿದ್ದಾರೆ  ಪ್ರಪಂಚ್ದಲ್ಲಿ. ಈ ಕಥೆ ಎಲ್ಲಾ ನನ್ಮುಂದೆ ಹೇಳಿದ್ರೇ ಕೋಣನ್ ಮುಂದೆ ಕಿಂದ್ರಿ ಬಾರುಸ್ದಂಗಾಗುತ್ತೆ. ಸುಂಕ್ದವ್ರ್ ಮುಂದೆ ಸುಖದುಃಖ ಹೇಳ್ಕೊಂಡಂಗಾಗುತ್ತೆ. ಎಮ್ಮೆ ಮೇಲೆ ಮಳೆ ಹುಯ್ದಂಗಾಗುತ್ತೆ.ಕಿವುಡುರ್ ಮುಂದೆ ಕಚೇರಿ ಮಾಡ್ದಂಗಾಗುತ್ತೆ. ಕಣ್ಣಿಲ್ದವ್ರ್ ಮುಂದೆ ಡಾನ್ಸ್ ಮಾಡ್ದಂಗಾಗುತ್ತೆ. ಪಾಪಿಗಳ್ಗೆ ಶಿಕ್ಷೆ ಕೊಡ್ಸಕ್ಕೆ ಕೋರ್ಟ್, ಕಚೇರಿ,ಲಾಯರ್,ಜಡ್ಜ್, ಗವರ್ನ್ಮೆಂಟ್ ಎಲ್ಲಾ ಇವೆ.ನೀವು ರಾಂಗ್ ಸ್ಥಳಕ್ ಬಂದಿದೀರಾ.ಅಲ್ಲೇ ಕರ್ಕೊಂಡ್ ಹೋಗಿ ಅವ್ರ್ ಹತ್ರ ಎಲ್ಲಾ ಬುದ್ಧಿ ಹೇಳ್ಸಿ. ಕೇಳ್ಲಿಲ್ಲಾ ಅಂದ್ರೆ ಜೀವ್ನ ಪೂರ್ತಿ ಜೈಲಲ್ ಕೊಳೀಬೇಕಾಗುತ್ತೆ, ಅಂತಾ ಹೆದುರ್ಸಿ.ಆಗ್ ತೆಪ್ಪುಗ್  ಮನೇಗ್ ಬರ್ತಾರೆ.
                   ಹಾಗಾದ್ರೇ ನೀವ್ ಕೋಣಾನಾ..., ಸುಂಕ್ದವ್ರಾ...., ಎಮ್ಮೇನಾ..., ಕಿವುಡ್ರಾ..., ಕುರುಡ್ರಾ.....ಯಾಕ್ ಸಾರ್ ನಿಮ್ಮನ್ ನೀವ್ ಏನೇನೋ ಅನ್ಕೊಳ್ತೀರಾ, ಮನುಷ್ಯ ರೂಪ ಕೊಟ್ಟಿದಾನೆ ದೇವ್ರೂ, ಸ್ಫುರದ್ರೂಪ ಕೊಟ್ಟಿದಾನೇ... .ನೀವ್ ಹೇಳ್ದಂಗೆಲ್ಲಾ ಮಾಡಕ್ಕಾಗಲ್ಲಾ ಸಾರ್, ಇಷ್ಟೆಲ್ಲಾ ಅವ್ಮಾನ ಮಾಡ್ತೀರಾ, ಅವ್ರಿವ್ರ್ ಕೈಲಿ ಬುದ್ಧಿ ಹೇಳಿಸ್ತೀರಾ, ಮನೇಲ್ ನಡ್ದಿದ್ ಹೊರಗ್ಹೇಳಿದೀರಾ ಅಂತಾ ಚೆನ್ನಾಗಿ ಆಳುಗಳ ಕೈಲಿ ಹೊಡ್ಸಿ, ನಮ್ಮಮ್ಮನ್ ಮನೇಗ್ ಕಳುಸ್ಬಿಡ್ತಾಳೆ.
                   ನೀವ್ ಮನೆ ಅಳಿಯಾನಾ?
                   ಅಲ್ಲಾ, ನಾವಿಬ್ರೇ ಇರೋದು. ಮನೇನೂ ನನ್ ಹೆಸ್ರಲ್ಲೇ ಇರೋದು. ಅವ್ಳು ಡೌರಿ ತುಂಬಾ ತಂದಿರೋದ್ರಿಂದ ಅದ್ರ ಬಡ್ಡಿ ಎಲ್ಲಾ ನಂದೇ ತಾನೇ, ನೀವ್ ಸಂಬಳ ತಂದ್ರೆ  ನಾನ್ ಬಡ್ಡಿ ತರ್ತೀನಿ.ಮನೆ ನಿಮ್ದು, ಮನೆ ಕೆಲ್ಸ ನಂದು, ನೀವ್ ಕೂತಿರೋ ಕಡೇಗ್ ಮಾಡ್ ಹಾಕಲ್ವಾ, ನಾನೇನ್ ನಿಮ್ಗಿಂತಾ ಕಡ್ಮೆ, ಅಂತೆಲ್ಲಾ ತಕ್ರಾರ್ ತೆಗೀತಾಳೆ.ನನ್ಗಿನ ಅವ್ಳೇ ಜಾಸ್ತಿ ಅನ್ನೋ ತರ ಮಾತಾಡ್ತಾಳೆ.  ನಿಮ್ಮಮ್ಮನ್ ಮನೇಗ್ ಕಳುಸ್ಬಿಡ್ತೀನಿ ಅಂತೆಲ್ಲಾ ಸುಮ್ಸುಮ್ನೆ ಏನೇನೋ ಸೆಂಟೆಂನ್ಸ್ ಗಳ್ನ ಹೇಳ್ತಾಳೆ.ಅವ್ಳು ಹೇಳ್ತಾಳೆ, ಸ್ಕೂಟರ್ನ ಅವ್ಳೇ ಡ್ರೈವ್ ಮಾಡ್ತಾಳಂತೆ, ನಾನು ಮಗೂನ್ ಎತ್ಕೊಂಡು ಹಿಂದೆ ಕೂತ್ಕೋಬೇಕಂತೆ.ಮಗೂನಾ ನಾನ್ ಮಾತ್ರ ಹೆತ್ತಿರೋದಾ ಅಂತಾ ಕೇಳ್ತಾಳೆ.ನಮಗ್ ಮಾತ್ರ ತಾಳಿ ಕಟ್ತೀರಾ, ನಿಮ್ಗ್ ಮಾತ್ರ ತಾಳಿ ಬೇಡ್ವಾ, ನೀವೂ ಮಾಂಗಲ್ಯ ಕಟ್ಕೊಂಡ್ರೆ, ಯಾವ್ ಹೆಣ್ಣೂ ಕಣ್ಣೆತ್ ನೋಡಲ್ಲಾ ರೀ. ತಾಳಿ ಇಲ್ದೇಲೇ ಅದ್ಯಾವ್ ಧೈರ್ಯದ್ ಮೇಲ್ ತಿರುಗ್ತೀರಾ, ತಾಳಿ ಇಲ್ದೇ ಇದ್ರೆ ನಮ್ ಹಿಂದೆ ಮಾತ್ರಾನಾ ಗಂಡುಸುರ್ ಬೀಳೋದು. ನಿಮ್ ಹಿಂದೆ ಹೆಂಗಸ್ರು  ಬೀಳಲ್ವಾ?ನಿಮಿಗೊಂದ್ ನ್ಯಾಯಾನಾ, ನಮಿಗೊಂದ್ ನ್ಯಾಯಾನಾ? ಹೇಳಕ್ಕಾಚಾರಾನಾ ತಿನ್ನಕ್ ಬದ್ನೇಕಾಯಾ?ಗಂಡಸ್ರೂ ತಾಳಿ ಕಟ್ಕೋಬೇಕು ಅನ್ನೋ ವಿಚಾರ ನೀವು ಪ್ರಪಂಚದಲ್ ಹುಟ್ಹಾಕಿ.ಆ ಸಿಸ್ಟಮ್ನ ಕಾಮನ್ ಆಗೋ ಹಾಗ್ ಮಾಡಿ.ಅಂತೆಲ್ಲಾ ಮಾತಾಡ್ತಾಳೆ ಡಾಕ್ಟರೇ. ಹಾಗಾದ್ರೆ ನಾನ್ ತಾಳಿ ಕಟ್ಕೊಂಡ್ರೆ ನಿನಿಗ್ ಮೀಸೆ ಇಡ್ಲಾ ಅಂದೆ.ನಾನ್ ಮೀಸೆ ಇಟ್ಕೊಂಡ್ರೆ ನೀವ್ ಸೀರೆ ಉಟ್ಕೊಂತೀರಾ ಅಂದ್ಲು.ಆಯ್ತು ಅಂದ್ರೆ ನಾನ್ ಪ್ಯಾಂಟು ಶರ್ಟ್ ಹಾಕ್ಕೊಳ್ತೀನಿ ಅಂತಾ ಜಂಭ್ವಾಗ್ ಹೇಳ್ತಾಳೆ.ನನ್ಗೇ ಸಾಕಾಗಿ ಗಾಂಧೀಜಿಯ ಮಂಗನ್ ತರ ಆಗ್ಬಿಡ್ತೀನಿ.ಆ ಸಮ್ಯಕ್ಕೆ ಅದೇ ಬುದ್ಧಿವಂತಿಕೆ. ನಾನು ಗಾಂಧೀವಾದಿ, ಅದಕ್ಕೇ ನನ್ನ ಇಷ್ಟ್ ಗೋಳಾಡುಸ್ತಾಳೆ. ನಾನು ಇನ್ನೊಬ್ರ್ ಮನೆ ಹುಡ್ಗ, ಅಪ್ಪ, ಅಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ ನೆಂಟ್ರು ಎಲ್ಲಾರ್ನೂ ಬಿಟ್ಟು ಇವ್ಳುನ್ ನಂಬ್ಕೊಂಡ್ ಬಂದಿದೀನಿ ಅಂತಾ ಕಿಂಚಿತ್ತೂ ಕರುಣೆ, ದಯೆ ಏನೂ ಇಲ್ಲಾ ಡಾಕ್ಟರೇ, ನಾಯಿ ನೋಡ್ದಂಗ್ ನೋಡ್ತಾಳೆ ನನ್ನನ್ನಾ. ಇನ್ನೊಬ್ರ್ ಮನೆ ಗಂಡ್ಮಕ್ಳು ಬಿಟ್ಟಿ ಸಿಕ್ಕಿರ್ತಾರಲ್ಲಾ ಅದಕ್ಕೇ ಅವ್ರು ಅಡ್ವಾಂಟೇಜ್ ತೊಗೊಳೋದು.ನಾನ್ ಒಂದ್ ಬಡಪಾಯಿ ಗಂಡ್ಸು  ಅಂತಾ ಕೂಡಾ ಒಂಚೂರೂ ಕರುಣೆ ತೋರ್ಸಲ್ಲಾ ಡಾಕ್ಟರೇ. ನೀವ್ ನನ್ ಪೊಸಿಷನ್ನಲ್ಲಿದ್ದಿದ್ರೆ ಗೊತ್ತಾಗ್ತಿತ್ತು.(ಅಳುತ್ತಾ) ಅದಕ್ಕೇ ನನ್ನನ್ನ ಕಾಪಾಡಿದ ಪುಣ್ಯಾನೂ ಬರುತ್ತೆ, ಜೋಬೂ ತುಂಬುತ್ತೆ.ನೀವ್ 25 ಲಕ್ಷ ಕೊಡ್ಬೇಕಾಗಿಲ್ಲಾ. ನಿಮ್ಮ ಕಾಲಿಗ್ ಬೀಳ್ತೀನಿ ಡಾಕ್ಟರೇ, ನೀವೇ ದೇವ್ರು, ನನ್ ಜೀವ ಉಳ್ಸಿ ಸುಕೃತ ಪಡ್ಕೊಳ್ಳಿ. ನನ್ನ್ ಸ್ನೇಹಿತನನ್ನ ಈಗ್ಲೇ ಬೇಕಾದ್ರೆ ಕರ್ಕೊಂಡ್ ಬರ್ತೀನಿ.ಇಬ್ಬುರ್ ಜೊತೇಲೂ ಕಾಂಟ್ರಾಕ್ಟ್ ಮಾಡ್ಕೊಂಡ್ ಬಿಡಿ.
                   ಈವಾಗ್  ಹೇಗ್ ಕಾಣ್ತಿದೀನಿ ನಾನು ನಿಮ್ಗೆ.ಇಲಿ ತರ ಕಾಣ್ತಾ ಇದೀನಾ?
                   ಯಾಕ್ ಡಾಕ್ಟರೇ ನಿಮ್ಮನ್ ನೀವ್ ಇಲಿ ಹೆಗ್ಗಣ ಅಂತಾ ಎಲ್ಲಾ ಅನ್ಕೊಂತೀರಾ, ನೀವು ಹೆಬ್ಬಾವು ಅನ್ಕೊಳಿ.ನಾನು ನಿಮ್ಮನ್ ಹೆಬ್ಬಾವ್ ಮಾಡ್ತೀನಿ.
                   ನಾನ್ ಇಲಿ ತರ ಕಾಣ್ತಿಲ್ಲಾ ತಾನೇ....
                   ಇಲ್ಲಾ ಸಾರ್ ಎಷ್ಟ್ ಸಲ ಹೇಳ್ಬೇಕು...
                   ಒಂದಿಲಿ ಗಣೇಶ ಇರೋ ಜಾಗಕ್ ಬಂದು ತುಂಬಾ ಗಲಾಟೆ ಮಾಡ್ದಾಗ ಗಣೇಶ ಅದ್ರ ಬಾಲ ಹಿಡ್ದವ್ನು ಬಿಡ್ಲೇ ಇಲ್ವಂತೆ.ನಾನ್ ಇಲಿ ಹಾಗೆ ಕಾಣ್ದಿದ್ ಮೇಲೆ, ನನ್ ಯಾಕ್ರೀ ಇಲಿ ಮಾಡಿ ಬಾಲಾನ ಗಣೇಶನ್ ತರ ಹಿಡ್ಕೊಂಡು ಗಿರ ಗಿರ ತಿರುಗುಸ್ತಾ ಇದೀರಾ!
                   ಇಲ್ಲಾ ಸಾರ್, ನಾವು ನಿಮ್ಮನ್ನ ಹೆಬ್ಬಾವ್ ಮಾಡ್ತೀವಿ.
                   ಅದ್ ಹೆಂಗ್ರೀ, ಮನುಷ್ಯ ಹೆಬ್ಬಾವಾಗಕ್ ಸಾಧ್ಯ. ಬೇಡಪ್ಪಾ ನಾನ್ ಹೆಬ್ಬಾವಾಗ್ ಏನ್ ಮಾಡ್ಲಿ.ನನಗ್ ಮನುಷ್ಯ ರೂಪಾನೇ ಬೇಕು.
                   ಏ.... ನಿಮಗ್ ಅಷ್ಟೂ ಅರ್ಥ ಆಗಲ್ವಾ ಸಾರ್, ನಾನ್ ನಿಮ್ಗೆ “ಪತ್ನಿಯರಿಂದ ದುಃಖತಪ್ತ ಗಂಡಂದಿರ ಸಂಘ”ದಿಂದ ಇನ್ನಷ್ಟು ಬಿಸಿನೆಸ್ ಕೊಡುಸ್ತೀನಿ.  ನಂತರ ನೀವು ಟಾಟಾ....., ಬಿರ್ಲಾ....., ಅಂಬಾನಿ....., ಕೇರಳದ ರವಿ ಪಿಳ್ಳೈ....., ಇನ್ಫೋಸಿಸ್ ನಾರಾಯಣ್ ಮೂರ್ತಿ....., ಜಯಲಲಿತ....., ಲಕ್ಷ್ಮಿ ಮಿತ್ತಲ್.....,ಬ್ರಿಟನ್ ನಲ್ಲಿ ಭಾರತ ಮೂಲದ ಹಿಂದೂಜಾ ಬ್ರದರ್ಸ್.....ಅಮಿತಾಬಚ್ಚನ್...  ಎಲ್ಲಾ ಆಗಿ ಬೆಳೀಬಹ್ದು. ಆಮೇಲೆ ಡಾ.ದೇವಿ ಪ್ರಸಾದ್ ಶೆಟ್ಟಿ ತರ ಮನೆ ಮಾತಾಗ್ತೀರಾ. ಈಗ್ ಸದ್ಯಕ್ಕೆ ಇಬ್ರಿಗ್ ಸಹಾಯ ಮಾಡಿ. ಕಾಪಾಡಿದ ಪುಣ್ಯಾನೂ ಬರುತ್ತೆ, ಜೋಬೂ ತುಂಬುತ್ತೆ. 25 ಲಕ್ಷಾನೂ ಕೊಡ್ಬೇಕಾಗಿಲ್ಲ. ಇದು ನಿಮ್ ಕೈಯಲ್ಲ ಡಾಕ್ಟರೇ, ಕಾಲು ಅನ್ಕೊಳಿ.ಡಾಕ್ಟರೇ ನೀವೇ ಆ ವಿಷ್ಣು, ನಮ್ ಜೀವ ಉಳ್ಸಿ ಪುಣ್ಯ ಕಟ್ಕೊಳಿ. ಇಲ್ದಿದ್ರೆ ನಾವಿಬ್ರೂ ಹೋಗಿ ಬಾವೀಗ್ ಬೀಳ್ತೀವಿ.
                   ನಾನು  ಟಾಟಾ....., ಬಿರ್ಲಾ....., ಅಂಬಾನಿ....., ಕೇರಳದ ರವಿ ಪಿಳ್ಳೈ....., ಇನ್ಫೋಸಿಸ್ ನಾರಾಯಣ್ ಮೂರ್ತಿ....., ಜಯಲಲಿತ....., ಲಕ್ಷ್ಮಿ ಮಿತ್ತಲ್.....,ಬ್ರಿಟನ್ ನಲ್ಲಿ ಭಾರತ ಮೂಲದ ಹಿಂದೂಜಾ ಬ್ರದರ್ಸ್.....ಅಮಿತಾಬಚ್ಚನ್...   ಏನೂ ಆಗ್ಬೇಕಿಲ್ಲ. ನಾನ್ ಪೋಲೀಸ್ ಗೆ ಫೋನ್ ಮಾಡ್ತೀನಿ. ಆತ್ಮ ಹತ್ಯೆ ಮಾಡ್ಕೊಳೋದು ಮಹಾಪಾಪ, ತಪ್ಪು.
                   ಗೊತ್ತಲ್ಲಾ, ಪೋಲೀಸ್ ಬಂದ್ರೆ ನಿಮ್ಗೇ ಸಂಚ್ಕಾರ. 25 ಲಕ್ಷಾ.....
                   ನೋಡ್ರೀ, ನನ್ಗೆ ಇಂತಾ ಕೆಲ್ಸ ಮಾಡೋಕೆ ಸುತರಾಂ ಇಷ್ಟ ಇಲ್ಲ ಲೈಫಲ್ಲಿ. ನಾನೊಬ್ಬ ಆದರ್ಶವಾದಿ. ನನ್ ಬಾಳ್ಗೆ ಕಲ್ ಹಾಕ್ಬೇಡಿ. ನಿಮಿಗ್ ಒಳ್ಳೇದ್ ಮಾಡಕ್ ಹೋಗಿ ನನ್ ತಲೆ ಮೇಲ್ ಚಪ್ಪಡಿ ಎಳ್ಕೊಳ್ಲಾ.ನನ್ ಪ್ರಿನ್ಸಿಪಲ್ಸ್ ಗೆಲ್ಲಾ  ಎಳ್ಳು ಬೆಲ್ಲ ತರ್ಪಣ ಬಿಟ್ಬಿಡ್ಲಾ.
                   ನಿಮ್ ಪ್ರಿನ್ಸಿಪಲ್ಸ್ ಗೆಲ್ಲಾ ತರ್ಪಣ ಬಿಡೋದ್ ಬೇಡಾ, ಅದರ್ ಪ್ರಕಾರಾನೇ ಸಹಾಯ ಮಾಡಿ. ನಾನ್ ಇಷ್ಟೆಲ್ಲಾ ಕೇಳ್ಕೊಂಡ್ರೂ ನೀವ್ ಒಪ್ತಾ ಇಲ್ವಲ್ಲಾ ಡಾಕ್ಟರೇ, ನಾವಿನ್ನೇನ್ ಮಾಡೋದು. ನಾವು ನಿಮ್ಗೆ ಮಾಟ ಮಾಡುಸ್ಬಿಡ್ತೀವಿ. ನಿಮ್ಗೆ ಬದ್ಕಕ್ ಬಿಡಲ್ಲ.
                   ಎತ್ತುಗ್ ಜ್ವರ ಬಂದ್ರೆ ಎಮ್ಮೇಗ್ ಬರೆ ಎಳುದ್ರಂತೆ. ಕ್ಯಾನ್ಸರ್ ಬಂದವ್ನ್ ಬಿಟ್ಟು, ಪಕ್ದಲ್ಲಿದ್ದವ್ನಿಗ್ ಆಪರೇಷನ್ ಮಾಡುದ್ರಂತೆ. ಜಿಂಕೇನ್ ಹಿಡ್ಕಂಡಿರೋ ಚಿರ್ತೆ ತರ ಮಾಡ್ತಿದೀರಲ್ರೀ. ನಿಮ್ ಹೆಂಡ್ತೀರ್ಗೇ ಮಾಟ, ಮಂತ್ರ, ತಂತ್ರ ಎಲ್ಲಾ ಮಾಡಿಸ್ಕೊಂಡ್ ದಾರೀಗ್ ತಂದ್ಕೊಳ್ರೀ, ನಿಮ್ ಕಾಲುಗ್ ಬೀಳ್ತೀನಿ, ನನ್ ಬಿಟ್ಬಿಡ್ರೀ.
                   ನಮ್ ಹೆಂಡ್ತೀರ್ಗೆ ಮಾಟ ಮಾಡ್ಸುದ್ರೆ, ಅವ್ಳು ನನ್ನನ್ ಹದ್ದುಗಳ್ ತರ ಹಸಿ ಹಸೀನೇ ತಿನ್ಬಿಡ್ತಾಳೆ.
                   ಅಷ್ಟು ಭಯಾನಾ ಹೆಂಡ್ತಿ ಅಂದ್ರೆ. ಮತ್ ನನ್ನನ್ ನೋಡಿದ್ರೆ ಭಯ ಆಗಲ್ವಾ?
                   ನೀವೆಷ್ಟೇ ಆದ್ರೂ ಗಂಡಸರಲ್ವಾ ಸಾರ್, ವೀಕರ್ ಸೆಕ್ಸ್.ಆದಿಶಕ್ತಿ ದೇವಿಯ ನಾರಿ ಪ್ರದಾನ ಸಮಾಜ ಇದು. ಅವ್ರನ್ನ ಎದುರ್ಹಾಕ್ಕೊಳಕ್ಕಾಗುತ್ತಾ, ಸಾರ್.ಮೇಕೇನಾ, ಕುರೀನಾ, ಬೀದಿನಾಯೀನಾ ಎದ್ರಾಕ್ಕಂಬೌದು, ಹುಲೀನಾ, ಸಿಂಹಾನಾ,ನೀಲಿ ತಿಮಿಂಗಿಲಾನಾ ಎದುರ್ ಹಾಕ್ಕೊಳಕ್ಕಾಗುತ್ತಾ?
                   ಹಾಗಾದ್ರೇ ನಾನು ಬೀದಿನಾಯೀನಾ, ಮೇಕೇನಾ, ಕುರೀನಾ, ಆತರ ಕಾಣ್ತೀನಾ ನಾನು.
                   ಇಲ್ಲಾ ಸಾರ್ ಉಪಮಾಲಂಕಾರ, ರೂಪಕಾಲಂಕಾರ ಎಲ್ಲಾ ಕೊಟ್ಟೆ ಅಷ್ಟೇ. ನೀವು ಅಷ್ಟ್ ಒಳ್ಳೇವ್ರು, ಸಾದುಗಳು ಅಂತಾ ಹೇಳ್ದೇ ಅಷ್ಟೇ.  ನೀವ್ ಬೀದಿನಾಯಿ ಅಲ್ಲಾ ಸಾರ್.
                   ಹಾಗಾದ್ರೆ ಮನೆನಾಯಿ ಅಂತೀರಾ?
                   ಅಲ್ಲಾ ಸಾರ್, ನೀವ್ ನಾಯೀನೇ ಅಲ್ಲಾ,ಸಮಾಧಾನಾನಾ?
                   ಹಾಗಾದ್ರೆ ಮೇಕೆ, ಕುರೀನಾ?
                   ಇಲ್ಲಾ ಸಾರ್, ನೀವ್ ಏನೂ ಅಲ್ಲ.
                   ಅಯ್ಯೋ ನಾನ್ ಏನೂ ಅಲ್ವಾ, ನಾನ್ ಮನುಷ್ಯಾರೀ.
                   ಅಲ್ಲಾ ಅಂತ ಯಾರಂದ್ರೂ ಸ್ವಾಮೀ, (ತಲೆ ಚಚ್ಕೊಂತಾ) ಅಯ್ಯೋ, ನೀವ್ ಮನುಷ್ಯಾನೇ, ನೀವ್ ಮನುಷ್ಯಾನೇ, ನೀವ್ ಮನುಷ್ಯಾನೇ, ಸರೀನಾ ಸಾರ್?
                   ಆಯ್ತು ರೀ, ಈಗ್ ಹಾಲ್ ಕುಡೀಬೋದು. ನಾನು ಸಾದು ಪ್ರಾಣಿ ಅಂದ್ಮೇಲೆ ಕಾಲ್ಮುರೀರಿ ಅಂತಾ ಯಾಕ್ರೀ ಹೇಳ್ತೀರಾ?
                   ಈಗ್ ಪಾಯಿಂಟ್ಟುಗ್ ಬನ್ನಿ.ಈಗ್ ಹೇಳಿ, ಮಾಟ ಯಾರಿಗ್ ಮಾಡಿಸ್ಬೇಕು, ನಿಮ್ಗಾ, ನಮ್ ಹೆಂಡ್ತೀರ್ಗಾ?
                   ಯಾರ್ಗೂ ಮಾಡುಸ್ಬೇಡ್ರಿ. ಆಯ್ತು ರೀ ಆಯ್ತು, ನಾನು ಕುಂಭ ಕೋಣಂ ಮಾಡಕ್ ಒಪ್ಕೊಂತೀನಿ.  ನಿಮ್ ಹೆಂಡ್ತೀ ಕಾಲೂ ಮುರೀತೀನಿ. ನಿಮ್ ಸ್ನೇಹಿತರ್ ಕೆಲ್ಸಾನೂ ಮಾಡ್ಕೊಡ್ತೀನಿ. ನಿಮ್ ಫ್ರೆಂಡ್ ಫೋನ್ ನಂಬರ್ ಕೊಡಿ, ಈಗ್ಲೇ ಕರುಸ್ ಬಿಟ್ಟು ಡೀಲ್ ಮಾಡ್ಬಿಡ್ತೀನಿ.
                   ಹೌದಾ ಸಾರ್, ನೀವೊಪ್ಕೊಂಡ್ ಬಿಟ್ರಾ ಸಾರ್, ನನ್ನಷ್ಟ್ ಸುಖಿ ಪ್ರಪಂಚದಲ್ಲೇ ಯಾರೂ ಇಲ್ಲಾ ಸಾರ್. ಸ್ವರ್ಗ ಇಲ್ಲೇ ಕಾಣ್ತಿದೆ. ಕೈ ಎತ್ತುದ್ರೆ ಸಿಗುತ್ತೆ. ಅದ್ಯಾಕ್ ಬೇಕು, ಅದಕ್ ನಾನೇ ಬೆಂಕಿ ಹಚ್ಬಿಡ್ತೀನಿ. ನಾನೇ ರಾಜಕುಮಾರ  ಕನ್ನಡ ತಾಯಿಯ ಪ್ರೇಮದ ಕುವರ, ಅನೀತಿಯಳಿಸಿ ನ್ಯಾಯವನುಳಿಸಿ ಶಾಂತಿಯನುಳಿಸಲು ಬಂದ ಕಿಶೋರ.....ರಾಜ್ ಕುಮಾರ್. ದೇವ್ರಿದ್ದಾನೆ, ದೇವ್ರಿದ್ದಾನೆ, ದೇವ್ರಿದ್ದಾನೆ.....ತೊಗೊಳಿ ಡಾಕ್ಟರೇ ನಂಬರ್ 4204204200, ಹೆಸ್ರು ಅಜಯ್.
                   ನಾನ್ ಫೋನ್ ಮಾಡ್ತೀನಿ. ನಿಮ್ ಫೆಂಡ್ ಬರೋವರ್ಗೂ ಹೊರಗಡೆ ಕೂತಿರಿ. ಆಮೇಲೆ ಇಬ್ಬುರ್ನೂ ಒಳಗ್ ಕರೀತೀನಿ. ಬೇರೇ ಪೇಷೆಂಟ್ಸ್ ನೋಡ್ಬೇಕು.
                  
                   ದಿಲೀಪ್ ಹೊರಗೆ ಹೋದರು. 15 ನಿಮಿಷಗಳ ನಂತರ ಅಜಯ್ ಬಂದರು.ಬಾಗಿಲ ಬಳಿ ಹೋಗಿ ದಿಲೀಪ್ ಡಾಕ್ಟರರಿಗೆ ಮುಖ ತೋರಿಸಿದರು.
                   ಬಂದ್ರಾ ನಿಮ್ ಸ್ನೇಹಿತ್ರು.
                   ಬಂದ್ರು.
                   ಇನ್ ಹತ್ ನಿಮಿಷ ಕೂತ್ಕೊಳಿ, ಕರೀತೀನಿ.
 
 
                   ಡಾಕ್ಟರ್ ಒಳಗೆ ಹೋಗಿ 4204204200 ಗೆ ಫೋನ್ ಮಾಡಿ:ಮಿಸ್ಸಸ್ ಅಜಯ್ ರವರೇ?
                   ವೀಣ: ಯೇಸ್
                   ಡಾ|| :ಅಮ್ಮಾ, ನಿಮ್ ಬಲ್ಮೊಳ್ಕಾಲು ಮತ್ತು ಎಡ ಮೊಳಕೈ ನೋವು ಅಂತಾ ನಿಮ್ಮೆಜಮಾನ್ರು ನನ್ ಹತ್ರ ಅಪಾಯಿಂಟ್ ಮೆಂಟ್ ತೊಗೊಂಡಿದಾರೆ. ಅವ್ರು ಇಲ್ಲೇ ಇದಾರೆ. ನೀವು ತಕ್ಷಣ ಹೊರಟು ಬನ್ನಿ. ನಾನ್ ಡಾ||ಪುರುಷೋತ್ತಮ್ ಮಾತಾಡ್ತಿರೋದು. ನಿಮ್ ಯಜಮಾನ್ರ ಫ್ರೆಂಡ್ ದಿಲೀಪ್ ಮನೆ ನಂಬರ್ ಕೊಡ್ತೀರಾ?
                   ವೀಣಾ:ತಗೊಳ್ಳಿ 4214214210       
                   ಡಾ||  :ನಮ್ ಹಾಸ್ಪಿಟಲ್ ಗೊತ್ತಾ ತಾಯಿ?
                   ವೀಣಾ:ಗೊತ್ತು, ಬರ್ತೀನಿ.
 
                   ಡಾಕ್ಟರ್ ಈಗ 4214214210 ಗೆ ಫೋನ್ ಮಾಡಿ: ಮಿಸ್ಸಸ್ ದಿಲೀಪ್ ಮಾತಾಡ್ತಾ ಇದೀರಾ ಅಮ್ಮಾ.
                   ವಾಣಿ: ಹೌದು
                   ಡಾ||  :ನಾನ್ ಡಾಕ್ಟರ್ ಪುರುಷೋತ್ತಮ್ ಮಾತಾಡ್ತಿರೋದು.ನಿಮ್ ಯಜಮಾನ್ರು ನನ್ ಹತ್ರ ಅಪಾಯಿಂಟ್ ಮೆಂಟ್ ತೊಗೊಂಡಿದಾರೆ. ಇಲ್ಲೇ ಕುಂತಿದಾರೆ. ನಿಮ್ ಎಡ್ಗಾಲೂ ನೋವ್ತಾ ಇದ್ಯಂತಲ್ಲಾ, ಈಗ್ಲೇ ಹೊರಟ್ ಬನ್ನಿ.
                   ವಾಣಿ:ಆಯ್ತು ಡಾಕ್ಟರ್
      
                   ಹತ್ತು ನಿಮಿಷದ ನಂತರ ದಿಲೀಪ್ ಮತ್ತು ಅಜಯ್ ರನ್ನು ಒಳಗೆ ಕರೆದರು.
                   ದಿಲೀಪ್: ಇವ್ರು ಅಜಯ್ ಅಂತಾ, ನನ್ ಸ್ನೇಹಿತ್ರು.
                   ಡಾ||ಅಜಯ್ ಕಡೆ ನೋಡಿ: ತಮ್ ತೊಂದ್ರೆ ಏನು, ನನ್ನಿಂದೇನಾಗ್ಬೇಕು.
                   ಅಜಯ್: ಇವ್ರು ಎಲ್ಲಾ ಹೇಳಿದಾರಲ್ಲಾ
                   ಡಾ||   :ಆದ್ರೂ ಕರೆಕ್ಟಾಗಿ ನಿಮ್ ರಿಕ್ವಯರ್ಮೆಂಟ್ಸ್ ಏನಂತಾ ಸರ್ಯಾಗ್ ಒಂದ್ಸಲಿ ಎಕ್ಸ್ ಪ್ಲೇನ್ ಮಾಡಿ.
                   ಅಜಯ್: ನನ್ ಹೆಂಡ್ತಿ ಯಾವಾಗ್ಲೂ ಬಲ್ಗಾಲಿಂದ ಒದೀತಿದ್ಲು.ಒದ್ದೂ ಒದ್ದೂ ಅದು ನೋವು ಬಂದಿದೆ, ಮತ್ತೆ ಎಡ ಗೈಯಿಂದ ಹೊಡ್ದೂ ಹೊಡ್ದೂ ಅದೂ ನೋವ್ ಬಂದಿದೆ. ನಾನ್ ನಿಮ್ಗೆ ಎಷ್ಟು ಬೇಕಾದ್ರೂ ಕಾಂಚಾಣ ಕೊಡ್ತೀನಿ.ನನ್ ಹೆಂಡ್ತೀನ ಕರ್ಕೊಂಡ್ ಬರ್ತೀನಿ. ಅವ್ಳ್ ಬಲ್ಗಾಲನ್ನ , ಟೆಸ್ಟ್ ಮಾಡೋ ನೆಪ್ದಲ್ಲಿ ಸುತ್ತಿಗೆಯಿಂದ ಜೋರಾಗ್ ಹೊಡ್ದು ಮುರುದ್ ಬಿಡಿ. ಎಡ ಗೈ...
                   ಡಾ|| ಎದ್ದು ಹೊರಗೆ ಬಂದು ಮಿಸ್ಸಸ್ ದಿಲೀಪ್... ಮತ್ತು ಮಿಸ್ಸಸ್ ಅಜಯ್..., ಇಬ್ರೂ ಒಳಗ್ ಬನ್ನೀ.... ಎಂದು ಕರೆದರು. ವಾಣಿ, ವೀಣಾ ಮತ್ತು ಡಾಕ್ಟರ್ ಮೂರೂ ಜನ ಕನ್ಸಲ್ಟೇಷನ್ ರೂಮ್ ಒಳಗೆ ಬಂದರು.ಹೆಂಡತಿಯರನ್ನು ಕಂಡಾಕ್ಷಣ ಇಬ್ಬರೂ ಹೌಹಾರಿದರು.
                   ಡಾ|| :ವಾಣಿಯವ್ರೇ ನಿಮ್ ಯಜಮಾನ್ರು ನಿಮ್ ಮುರ್ದಿರೋ ಬಲ್ಗಾಲ್ನ ಸರಿ ಮಾಡ್ಸಕ್ ಬಂದಿಲ್ಲ. ನಿಮ್ ಎಡ್ಗಾಲ್ನೂ ಮುರೀಬೇಕಂತೆ. ಹಣ ಕೊಡ್ತಾರಂತೆ. ಮಿಸ್ಸಸ್ ಅಜಯ್, ನಿಮ್ ಯಜ್ಮಾನ್ರು ನಿಮ್ ಬಲ್ಗಾಲು ಮತ್ತು ಎಡ ಗೈ ಮುರ್ಸಕ್ಕೆ ಇಲ್ ಬಂದಿದಾರೆ. ಹಣ ಕೊಡ್ತಾರಂತೆ.
                   ದಿಲೀಪ್: ದೇವ್ರಿಲ್ಲಾ..., ದೇವ್ರಿಲ್ಲಾ..., ದೇವ್ರಿಲ್ಲಾ....
                   ಇಬ್ಬರೂ ನಾರೀಮಣಿಗಳು ಮುನಿದ ಮಾರಿಯರಾದರು, ಕೆಂಡಾಮಂಡಲರಾದರು.ಪತಿಗಳಿಗೆ ಶಿವ ತಾಂಡವವಾಡಿದಂತೆ ಭಾಸವಾಯಿತು, ಪರ್ವತಗಳು ನಡುಗಿದಂತಾಯಿತು, ಭೂಕಂಪವಾಗಿ ಕಾಲ್ಕೆಳಗೆ ಭೂಮಿ ಕುಸಿದಂತಾಯಿತು, ಸಮುದ್ರಗಳು ಭೋರ್ಗರೆದಂತೆ ಕಂಡವು. ಮೈಯೊಳಗೆ ಇಲಿಗಳು ಕಚಗುಳಿ ಇಟ್ಟಂತಾಯಿತು, ರತಿಕಾಮರು ನರ್ತನ ಗೈದಂತಾಯಿತು, ಪ್ಯಾಂಟ್ ನಲ್ಲಿ ಓತೀಕ್ಯಾತಗಳು ಓಡಾಡಿದವು, ಹಾವುಗಳು ಓಡಾಡಿದವು, ಶರ್ಟ್ ಒಳಗೆ ಇರುವೆಗಳು ಕಚ್ಚಿದವು. ಗಲ್ಲದ ಮೇಲೆ ಜೇನುಹುಳುಗಳು ಕಚ್ಚಿದವು. ಕಣ್ಣುಗಳು ಮಬ್ಬಾದವು. ಕಿವಿ ಕೇಳದಂತಾಯಿತು. ಪಂಚೇಂದ್ರಯಗಳು ಗ್ರಹಣ ಶಕ್ತಿಯನ್ನು ಕಲೆದುಕೊಂಡವು. ಇಬ್ಬರೂ ಯಾವುದೋ ಲೋಕಕ್ಕೆ ಹೋಗಿ ಆರನೇ ಸಂವೇದನೆಯಲ್ಲಿಗಡ ಗಡ ನಡುಗಿದರು. ದೇಹದ ಮೇಲಿನ ರೋಮಗಳು ಎದ್ದು ನೆಟ್ಟಗೆ ನಿಂತವು. ತಲೆಯ ರೋಮಗಳು ಸೂರನ್ನು ನೋಡಿದವು.ಮುಖಗಳು ವಿವರ್ಣವಾದವು.ಮೊಗದ ಮೇಲಿನ ನರಗಳು ಮುದುರಿ ಕೊಂಡವು. ಬೆಕ್ಕನ್ನು ಕಂಡ ಇಲಿ ಮರಿಗಳಂತಾದರು. ಹುಲಿಯನ್ನು ಕಂಡ ಕುರಿಯಂತಾದರು. ಕಪ್ಪೆಯನ್ನು ಕಂಡ ಹುಳುವಾದರು. ಹಾವನ್ನು ಕಂಡ ಕಪ್ಪೆಯಂತಾದರು. ಹದ್ದನ್ನು ಕಂಡ ಸರ್ಪದಂತಾದರು.ಭೂಮಿಯ ಮೇಲಿರುವ ಪ್ರಾಣಿಗಳನ್ನೆಲ್ಲಾ ತಿಂದು ತೇಗಿ ಬೇರೇ ಗ್ರಹಗಳ ಪ್ರಾಣಿಗಳನ್ನೂ ನೋಡುತ್ತಿರುವ  ಹೊಟ್ಟೆಬಾಕ ಕ್ರೂರಿ ಮನುಷ್ಯನನ್ನು ಕಂಡು ನಡುಗುವ ಅನ್ಯಗ್ರಹ ಪ್ರಾಣಿಗಳಂತಾದರು.
                   ಇಬ್ಬರೂ: ಡಾ.....ಡಾ....ಡಾ....ಡಾ....ಡಾ.....ಸುಸುಸುಳ್ಳು ಹೇ.....
                   ವಾಣಿ:ಡಾಕ್ಟರ್ ಸುಳ್ ಹೇಳ್ತಿದಾರಾ?ನೀವು ಸತ್ಯಹರಿಶ್ಚಂದ್ರನ್ ಮೊಮ್ಮಗಾನಾ,ವಿಶ್ವಾಮಿತ್ರ ನಿಮ್ ವ್ರತಾನ ಭಂಗ ಮಾಡ್ತಿದಾನಾ?
                   ವೀಣಾ: ಮನೇಗ್ ನಡೀರಿ, ಯಾರ್ ಸುಳ್ ಹೇಳ್ತಿದಾರೆ ಗೊತ್ತಾಗುತ್ತೆ. ಗ್ರಹ್ಚಾರ ನೋಡೋಣ, ಸರ್ಯಾಗ್ ಗೊತ್ತಾಗುತ್ತೆ.
                   ವಾಣಿ: ನಾನೂ ನಿತ್ಯ ಭವಿಷ್ಯ ನೋಡ್ತೀನಿ, ಅದ್ರಲ್ಲೇನಾದ್ರೂ ದೋಷ ಇದ್ರೆ ಬಿಡುಸ್ತೀನಿ.ಈವತ್ತು ಯಾವ್ ಮಗ್ಲಲ್ ಎದ್ದಿದ್ರೀ.
                   ದಿಲೀಪ್: ಈವತ್ ಎದ್ ತಕ್ಷಣ ನನ್ ಮುಖಾನೇ ನೋಡಿದ್ದೆ ಕನ್ನಡೀಲಿ.
                   ವಾಣಿ: ಹಾಗಾದ್ರೆ ನಿಮ್ ಮುಖಾನೇ ಅಪಶಕುನ ಆಯ್ತಾ....,ನನ್ ಮುಖ ನೋಡಿದ್ರೇ ಹಿಂಗಾಗ್ತಿರ್ಲಿಲ್ಲ...ನಡೀರಿ ಮನೇಗೆ, ಅಲ್ಲಿ ನನ್ ಮುಖ ನೋಡ್ತೀರಂತೆ.ಇಲ್ಲಿ ನಿಮ್ ಮುಖುದ್ ರಂಗೆಲ್ಲಾ ನೋಡಾಯ್ತು, ಅಲ್ಲಿ ನನ್ ಮೋರೆ ರಂಗ್ ನೋಡ್ತೀರಂತೆ.
                  
                   ಇಬ್ರೂ ಪತಿ ದೇವರುಗಳ ಶರ್ಟ್ ಕಾಲರ್ ಹಿಡ್ಕೊಂಡು ಮಾಡಿ ಮೇಲಿಂದ ಎಳಕೊಂಡು ಬಂದ್ರು.
                   ಮೆಟ್ಟಿಲಿಳಿಯುತ್ತಾ ದಿಲೀಪ್: ಎಲ್ಲೀಗೆಳ್ಕೊಂಡ್ ಹೋಗ್ತಿದೀಯೇ?
                   ವಾಣಿ: ಮಾವನ್ ಮನೇಗೇ..., ಅಟೆಂಪ್ಟ್ ಆಫ್ ಕಾಲು ಮುರಿತ ಅಂತಾ ಜೈಲ್ಗ್ ಹಾಕ್ಸಿ ಸನ್ಮಾನ ಮಾಡಿಸ್ಬೇಡ್ವೇ?
                   ದಿಲೀಪ್: ಬೇಡ ಕಣೇ ಮಾವುನ್ ಮನೆ ಸನ್ಮಾನ, ನಮ್ಮನೇಲೇ ನೀನು ದುರ್ಮಾನ ಕೊಟ್ರೇ ಅದೇ ಸಾಕು. ನೀನ್ ದಿನ್ನಾ ಕೊಡ್ತೀಯಲ್ಲಾ, ಅದೇ ದುರ್ಮಾನ ಸಾಕು
                   ವಾಣಿ: ನಾನು ದುರ್ಮಾನ ಮಾಡ್ತೀನಾ, ಈವತ್ತು ಸನ್ಮಾನ ಮಾಡ್ತೀನಿ ನಡೀರೀ...
                   ದಿಲೀಪ್: ಸನ್ಮಾನಾನೂ ಬೇಡಾ, ದುರ್ಮಾನಾನೂ ಬೇಡಾ ಯಾವ್ ಮಾನಾನೂ ಬೇಡಾ ಕಣೇ.
                   ವಾಣಿ: ಹೌದಾ, ಹಾಗಾದ್ರೇ ಬೀದೀಲೇ ಕೊಡ್ಲಾ ಮಾನಾನಾ?
 
                   ಎಲ್ಲರೂ ಕೆಳಗೆ ಬಂದರು.ಗಂಡಂದಿರು ಅವರವರ ಕಾರು ಹತ್ತಿದರು
                   ವಾಣಿ :ಇಳೀರಿ ಕೆಳಕ್ಕೆ.ಕಾರಲ್ ಕರ್ಕೊಂಡ್ ಹೋದ್ರೇ  ನಿಮ್ ಬುದ್ಧಿ ಎಲ್ರುಗೂ ಗೊತ್ತಾಗಲ್ಲ.ಬೀದೀಲಿ ಜುಟ್ ಹಿಡ್ಕೊಂಡು ಮನೇವರ್ಗೂ ಎಳ್ಕೊಂಡೋಗ್ತೀನಿ
                   ದಿಲೀಪ್: ಕಾರಲ್ಲೇ ಹೋಗೋಣ, ಒಳಗೆ ಎಷ್ಟ್ ಬೇಕಾದ್ರೂ  ಅವಮಾನ,ಸನ್ಮಾನ,ದುರ್ಮಾನ, ಮಾನ ಏನ್ಬೇಕಾದ್ರೂ ಮಾಡೇ.ಬೀದೀಲ್ ಏನೂ ಮಾಡ್ಬೇಡ ಕಣೇ...ನಿನ್ ಕಾಲಿಗ್ ಬೀಳ್ತೀನಿ....
                   ವಾಣಿ: ಸರಿ,ನಡೀರಿ ಕಾರಲ್ಲೇ ಹೋಗೋಣಾ, ಇದೊಂದ್ಸಲಿ ಕನ್ಸಿಡರೇಷನ್ ಕೊಡ್ತೀನಿ.
                  
                   ವೀಣಾ: ನೀವೇನ್ರೀ ಮಾಡ್ತೀರಾ, ಇಳೀತೀರಾ, ಇಲ್ಲಿ ಸುತ್ಮುತ್ತು ಇರೋ ಜನಾನಾ ಕರ್ದು “ಇವ್ರುದು ಜುಟ್ ಹಿಡ್ಕೊಂಡ್ ನಮ್ಮನೇವರ್ಗೂ ತಳ್ಕೊಂಡ್ ಬನ್ನಿ” ಅಂತಾ ಹೇಳ್ಲಾ ಅಥವಾ “ದಬ್ಕೊಂಡ್ ಬನ್ನಿ” ಅಂತಾ ಹೇಳ್ಲಾ?
                   ಅಜಯ್: ಬೇಡಾ ಕಣೇ ಅದೆಲ್ಲಾ, ನಾನ್ ಕಾರಲ್ ಎಲ್ಲಾ ವಿಚಾರ ಹೇಳ್ತೀನಿ ನಡ್ದಿದ್ದೇನು ಅಂತಾ.ಬೇಜಾರ್ ಮಾಡ್ಕೋಬೇಡ ಕಣೇ
                   ವೀಣಾ: ಎಲ್ಲಾ ಡಾಕ್ಟರೇ ಹೇಳುದ್ರಲ್ಲಾ ನಿಮ್ ಗಬ್ಬರ್ ಸಿಂಗ್ ಲೀಲೆ. ಇನ್ನೇನ್ ಹೇಳ್ತೀರ್ ನೀವು...
                   ಅಜಯ್: ನಿನ್ಗೆ ಮಿಸ್ ಅಂಡರ್ ಸ್ಟಾಂಡ್ ಆಗಿದೆ, ಕಣೇ. ನನ್ನಲ್ಲಿ ಸ್ವಲ್ಪ ನ್ಯಾಯ ಇದೆ.ಆಮೇಲ್ ಹೇಳ್ತೀನಿ. ಇದೊಂದ್ ಸಲಿ ಬಿಟ್ಬಿಡೆ.
                   ವೀಣಾ: ನಡೀರಿ, ಎಲ್ಲಾ ಕಾರಲ್ಲೇ ಬಿಡ್ತೀನಿ ಸರ್ಯಾಗಿ
 
                   ಕಾರಲ್ಲಿ ಹೋಗ್ತಾ ಅಜಯ್:ಇದು ನಂದಲ್ಲಾ ಕಣೇ ಪ್ಲಾನು, ದಿಲೀಪ್ದು.ನನ್ಗೆ ಬ್ರೇಯ್ನ್ ವಾಷ್ ಮಾಡ್ಬಿಟ್ಟ.ಬಿಡ್ಲೇ ಇಲ್ಲಾ ತುಂಬಾ ಎಳೆದ.ಮಂಗದ್ ಕುತ್ಗೇಗೆ ಹಗ್ಗ ಹಾಕಿ ಎಳ್ಕೊಂಡ್ ಬರೋ ತರ ಎಳ್ಕೊಂಡ್ ಬಂದ.
                   ವೀಣಾ: ಬ್ರೇಯ್ನ್ ವಾಷ್ ಮಾಡುಸ್ಕೊಳೋಕೇ ನೀವೇನ್ ಕೈದೀನಾ, ಹುಚ್ಚಾನಾ ಬುದ್ಧಿ ಇಲ್ಲಾ ನಿಮ್ಗೆ. ಅವ್ನು ತಲೆ ಬೋಳುಸ್ಕೋ, ಕಿವೀಲಿ ಹೂವಿಟ್ಕೋ,ನಾಮ ಇಟ್ಕೋ, ದಾಸಯ್ಯನ್ ತರ ಜಾಗಟೆ ಬಾರುಸ್ಕೊಂಡು ಬೀದೀಲ್ ಭಿಕ್ಷೆ ಬೇಡು ಅಂತಾನೆ. ನೀವ್ ಬೇಡ್ತೀರಾ.ಅವ್ನುಮಂಗ ಮಾಡುದ್ರೆ, ನೀವ್ ಆಗ್ಬಿಟ್ರಾ, ನಿಮ್ ಪೂರ್ವಜರು ಜ್ಞಾಪಕ ಬಂದು ನೀವೂ ಮಂಗಾನೇ ಅಂದ್ಕೊಂಡು ಮಂಗನ್ ಜೊತೆ ಮಂಗ ಆಗ್ಬಿಟ್ರಾ. ಆದ್ರೆ ಡಾಕ್ಟರು ಬಕಪಕ್ಷಿ ತರ ಬುದ್ಧಿವಂತಿಕೆಯಿಂದ ಮಂಗಗಳ್ನಾ ಆನೆ ಮಾಡ್ಬಿಟ್ಟು ಕೆಡ್ಡಾಗ್ ಬೀಳ್ಸುದ್ರು, ಅಲ್ವಾ. ಅವ್ನು ನಿಮ್ಮನ್ನ ಕುರಿ ಮಾಡ್ತಾನೆ, ಕೊಂದು ಹುರ್ಕೊಂಡ್ ತಿಂತಾನೆ, ನೀವ್ ಸುಮ್ನಿರ್ತೀರಾ, ಎಳೇ ಮಗೂನಾ, ಅವ್ನು ನಿಮ್ನ ಹುಚ್ಚ ಅಂತಾ ನಿಮ್ ಹಾನ್ಸ್ ಗ್ ಕರ್ಕೊಂಡ್ ಹೋಗ್ತಾನೆ, ನೀವ್ ಹೋಗ್ತೀರಾ,ನನ್ಗೆ ನಮ್ ಪಕ್ಕದ್ಮನೇವ್ರ್ ಜೊತೆ ದ್ವೇಷ ಇದೆ, ನೀನ್ ಬಂದು ಕೊಲೆ ಮಾಡು ಅಂತಾನೆ, ನೀವ್ ಹೋಗಿ ಕೊಲೆ ಮಾಡ್ತೀರಾ, ಅವ್ನು ನನ್ ಹೆಂಡ್ತಿ ಸಹಕರಿಸ್ತಾ ಇಲ್ಲ, ಮಗು ಆಗ್ತಾ ಇಲ್ಲ, ನೀನ್ ಬಂದ್ ಮಗು ಮಾಡು ಅಂದ್ರೆ ಮಾಡ್ತೀರಾ,ಅವ್ನು ನಮ್ಮನೆ ಪಕ್ಕ ಇರೋ ಬಾವೀಗೆ ನೀನ್ ಬೀಳು, ನಿಮ್ಮನೆ ಪಕ್ಕದ್ ಬಾವೀಗ್ ನಾನ್ ಬೀಳ್ತೀನಿ ಅಂತಾನೆ, ನೀವ್ ಬೀಳ್ತೀರಾ. ನೀನ್ ಬೀಳೋಗೋ ನಾನ್ಯಾಕ್ ಬೀಳ್ಲಿ, ಅಂತೀರೋ ಇಲ್ವೋ. ಬಾಯಲ್ಲಿ ಬೆರಳಿಟ್ರೇ ಕಚ್ಚಕ್ ಬರಲ್ವಾ. ಇನ್ನೂ ಸಾವ್ರ ಹೇಳ್ತಾನ್ರಿ ಅವ್ನು, ಸಮುದ್ರುಕ್ ದುಮ್ಕಿ ತಿಮಿಂಗ್ಲ ಹಿಡ್ಕೊಂಡ್ ಬಾ, ನಾನ್ ತಿನ್ಬೇಕು ಅಂತಾ. ನೀವ್ ತಿಮಿಂಗ್ಲಾನ್ ಸಾಯ್ಸಿ ತಂದು ಇಬ್ರೂ ತಿಂತೀರಾ? ಆಕ್ಟೋಪಸ್ ಹಿಡ್ಕೊಂಡ್ ಬಾ, ಪಲ್ಯ ಮಾಡ್ಕೊಂಡ್ ತಿನ್ನೋಣ ಅಂತಾನೆ, ನೀವ್ ಆಕ್ಟೋಪಸ್ ಕೈಲಿ ನಿಮ್ ರಕ್ತಾನಾ ಹೀರುಸ್ಕೊಂತಾರಾ? ಅದನ್ನ ನೀವ್ ಹಿಡ್ಕೊಳಕಾಗುತ್ತಾ, ಅದೇ ನಿಮ್ಮನ್  ಹಿಡ್ಕೊಳುತ್ತೆ.ಅಷ್ಟು ನಿಮುಗ್ ಗೊತ್ತಾಗಲ್ವಾ? ಮರಕ್ ಹತ್ತಿ ಮೇಲಿಂದ ದುಮ್ಕಿ ಅಂತೀನಿ, ದುಮುಕ್ತೀರಾ?ಹುಲಿ ಬೋನೊಳುಗ್ ನುಗ್ಗಿ ಅದ್ನ ಎಳ್ಕೊಂಬಂದು ಮೇಕೆ ತರ ಕತ್ರುಸಿ ಅಡ್ಗೆ ಮಾಡ್ರೀ ಅಂತೀನಿ, ಮಾಡ್ತೀರಾ?ಇನ್ನೂ ಗಂಟೆಗಟ್ಲೆ ಹೀಗೇ ಹೇಳ್ತಾನೇ ಇರ್ತೀನಿ, ನೀವ್ ಕೇಳ್ತೀರಾ?
                   ಅಜಯ್: ಸಾಕು ನಿಲ್ಸೇ, ನಿನ್ ಪುರಾಣಾನ....
                               ಹಮ್ ಬೇವಫಾ ಹರ್ ಗಿಜ್ ನ ಥೇ, ಪರ್ ಹಮ್ ವಫಾ ಕರ್ ನ ಸಕೆ.
                               ಹಮ್ ಕೋ ಮಿಲೀ ಇಸ್ ಕೀ ಸಜಾ, ಜೋ ಸಜಾ ಹಮ್ ಸಹ್ ನ ಸಕೇ
                               (ಅಳುತ್ತಾ)
                               ತಪ್ಪಾಯ್ತು ಕಣೇ, ಇನ್ಯಾವತ್ತೂ ಹಿಂಗೆಲ್ಲಾ ಮಾಡಲ್ಲಾ ಕಣೇ.
                   ವೀಣಾ: ನಾಯಿ ಬಾಲ ಡೊಂಕು, ನರಿಗಳು ನಾಟಕ ಮಾಡ್ದಾಗ ನಂಬ್ಬೇಕಾ, ಮೊಸಳೆ ಅತ್ತಾಗ ಕಣ್ಣೀರ್ ಒರುಸ್ಬೇಕಾ ಕ್ಷಮಿಸ್ಬೇಕಾ.... .ವಿಷ್ಣು ಜಯವಿಜಯರ್ನ ಕ್ಷಮ್ಸಿದ್ನಾ?ಮೂರ್ಜನ್ಮ ಭೂಮೀಲ್ ಕಳ್ದ್ ಬನ್ನಿ ಅಂತಾ ಕಳುಸ್ಲಿಲ್ವಾ, ಮನೇಗ್ ನಡೀರಿ, ನಿಮ್ಗೂ ಮೂರ್ಜನ್ಮ ತೋರುಸ್ತೀನಿ.
                   ಕಿವಿ ಹಿಂಡಿದ್ಲು.
                   ಅಜಯ್: ಅಯ್ಯೋ ಮೂರ್ನೇದ್ ಶುರುವಾಯ್ತಲ್ಲಾ ಕ್ರೂರ ಮೃಗದಾಟ
                   ವೀಣಾ:  ನಾನ್ ಕ್ರೂರಮೃಗಾನಾ, ಹಾಗಾದ್ರೆ ಇನ್ನೊಂದ್ ಸ್ವಲ್ಪ ತೋರಿಸ್ತೀನಿ, ಸಿಂಹಿಣಿ ಆಟಾನಾ
                   ಕಾರು ನಿಲ್ಸಿಉಗುರುಗಳನ್ನ ಸಿಂಹದ ತರ ತೋರ್ಸುದ್ಲು.
                   ಅಜಯ್ : ನಾನ್ ಇಳೀತೀನಿ ಕಾರಿಂದ, ಭಯ್ವಾಗುತ್ತೆ.
                   ವೀಣಾ : ಬೇಡ ಕುಂತ್ಕೊಳ್ರೀ, ನಾನ್ ತಮಾಷೆ ಮಾಡ್ದೆ ಅಷ್ಟೇ
                   ಅಜಯ್:  ಹೌದಾ
                   ವೀಣಾ : ನಂದು ಬಲ್ಗಾಲು, ಎಡಗೈ ಮುರುಸ್ತೀರಾ, ನಿಮ್ದು ನಾಲ್ಕೂ ಮುರುಸ್ತೀನಿ.ನಾನಲ್ಲಾ ರೀ, ಪೋಲೀಸ್ರ್ ಹತ್ರ.
                   ಅಜಯ್:  ಪೋಲೀಸ್ರ್ ಹತ್ರ ಹೋದ್ರೆ ನಾನೂ ಹೇಳ್ತೀನಿ.ಇವ್ಳು ನನ್ಗೆ ಒದೀತಾ ಇದ್ಲು, ಹೊಡೀತಾ ಇದ್ಲು ಅಂತಾ.
                   ವೀಣಾ :  ಆಗ್ ಅವ್ರ್ ಕೇಳ್ತಾರೆ, ನಮ್ಹತ್ರ ಬರ್ದೇ ಡಾಕ್ಟರ್ ಹತ್ರ ಯಾಕಪ್ಪಾ ಹೋದೆ ಅಂತಾ,ಆಮೇಲೆ ಒದ್ ಒಳಗ್ ಹಾಕ್ತಾರೆ.
                   ಅಜಯ್: ನಿನ್ನೂ ಒಳಗ್ ಹಾಕ್ತಾರೆ
                   ವೀಣಾ: ಅದ್ಕೇ ಮನೇಗೇ ನಡೀರೀ, ಅಲ್ಲೇ ಮಾಡ್ತೀನಿ ಹಬ್ಬ, ಮೂರ್ ಜನ್ಮದ್ದು.
                   ವೀಣಾ ಮನೆ ಕಡೇಗೆ ಕಾರು ತಿರುಗಿಸಿದ್ರು.
                   ವೀಣಾ: ವಿಷ್ಣು ಕೇಳಿದ್ನಂತೆ, ಮೂರ್ ಜನ್ಮ ನನ್ ಶತ್ರುಗಳಾಗ್ ಹುಟ್ತೀರೋ ಅಥ್ವಾ ಏಳು ಜನ್ಮ ನನ್ನ ಭಕ್ತರಾಗ್ ಹುಟ್ತೀರೋ ಅಂತಾ.ನಿಮ್ಗೇನಾಗ್ಬೇಕು, ಮೂರ್ಜನ್ಮ ಬೇಕೋ, ಏಳ್ ಜನ್ಮ ಬೇಕೋ?
                   ಅಜಯ್: ಅದಕ್ಕವ್ರೇನಂದ್ರಂತೆ ವಿಷ್ಣು ಹತ್ರ.
                   ವೀಣಾ: ನಾವು ಮೂರ್ಜನ್ಮ ಶತ್ರುಗಳಾಗಿದ್ದು ನಿನ್ ಹತ್ರ ಬಂದ್ಬಿಡ್ತೀವಿ, ಏಳ್ ಜನ್ಮ ಅಗ್ಲಿರಕ್ಕಾಗಲ್ಲ, ಅಂದ್ರಂತೆ.
                   ಅಜಯ್:ನನ್ಗೆ ನೀನು ಸಾದುವಾಗಿರೋ ಅಂತಾ ಏಳ್ ಜನ್ಮ ಬೇಕು ಕಣೇ.
                   ವೀಣಾ: ಮೂರ್ಜನ್ಮಾನೋ, ಏಳ್ಜನ್ಮಾನೋ ಮನೇಲ್ ಡಿಸೈಡ್ ಮಾಡ್ತೀನ್ ನಡೀರಿ.
                  
                   ಮನೇಗೆ ಬಂದು ವೀಣಾ:  ಪಿಚ್ಚರ್ ನೋಡ್ತೀರಾ, ಟಿವಿ ಹಾಕ್ಲಾ..., ಬೇಡ...., ನಾನೇ ಕ್ರಿಯೇಟ್ ಮಾಡ್ತೀನಿ ಪಿಚ್ಚರ್ನ. ಈಗ್ ನಿಮ್ ಕೈ ಕಾಲ್ ಮುರ್ದು ನಿಮ್ಮಮ್ಮನ್ ಮನೇಗೆ ಕಳಿಸ್ಬಿಡ್ತೀನಿ. ಅಲ್ಲಿಂದ ಆಸ್ತಿ ಭಾಗ ತರ್ಬೇಕು. ಇಲ್ಲಾ ಅಂದ್ರೆ ಮನೇಗ್ ಸೇರ್ಸಲ್ಲ. ನಮ್ಮನೇಲ್ ಮಾತ್ರ ಡೌರಿ ತೊಗೊಳೋಕಾಯ್ತಾ.
                   ಅಜಯ್:  ಆಯ್ತು ಕಣೇ, ನಾನ್ ಆಸ್ತಿ ಭಾಗ ತರ್ತೀನಿ. ಅಲ್ಲೀ ವರ್ಗೂ ನನ್ಗೆ ಮನೇಲ್ ಇರಕ್ ಬಿಡೇ. ನಿನ್ ಕಾಲಿಗ್  ಬೀಳ್ತೀನಿ. ಇದ್ ನಿನ್ ಕೈಯಲ್ಲ ಕಾಲು ಅನ್ಕೊಳೇ...
                   ವೀಣಾ:  ಅಯ್ಯೋ ಮಂಕೇ, ನಾನಿದೆಲ್ಲಾ ನಾಟ್ಕ ಮಾಡಿದ್ದಷ್ಟೇ, ನಂದೇ ತಪ್ಪು. ನಾನು ಇನ್ಮೇಲೆ ಬಲಗಾಲಲ್  ಒದ್ಯಲ್ಲ, ಎಡ ಗೈಯಲ್ ಹೊಡ್ಯಲ್ಲ. ನೀವೂ ನನ್ ಕೈ ಕಾಲ್ ಮುರ್ಸಕ್ಕೆ ಡಾಕ್ಟರ್ ಹತ್ರ ಹೋಗ್ಬೇಡಿ. ಆಯ್ತಾ.
                   ಅಜಯ್:  ಹಾಂ! ನೀನ್ ಸರ್ಯಾಗ್ಬಿಟ್ಯಾ , ಸಾರಿ ಕಣೇ, ಇನ್ಮೇಲ್ ಹಾಗೆಲ್ಲಾ ಮಾಡಲ್ಲ. ನಂದೇ ತಪ್ಪು.
                   ವೀಣಾ:  ಇಲ್ಲ, ನಂದೇ ತಪ್ಪು.ಶುರು ಮಾಡಿದ್ದು ನಾನೇ.
                   ಅಜಯ್:  ಇಲ್ಲ, ನಾನ್ ಗಂಡು, ನಾನ್ ತಗ್ಕೊಂಡು ಹೋಗ್ಬೇಕು, ಅಂತಾ ಅರ್ಥ ಮಾಡ್ಕೋಬೇಕಿಕ್ತ್ತು. ನಂದೇ ತಪ್ಪು.
                   ವೀಣಾ:  ಹಾಗಾದ್ರೆ, ಇನ್ಮೇಲೆ ಏನ್ಮಾಡ್ತೀನಿ ಗೊತ್ತಾ, ಬಲ್ ಗೈಲಿ ಹೊಡೀತೀನಿ, ಎಡಗಾಲಲ್ ಒದೀತೀನಿ.
                   ಅಜಯ್:  ಹಾಂ!
                   ವೀಣಾ: ತಮಾಷೇಗ್ ಹೇಳ್ದೇ  ರೀ.
                   ಇಬ್ರೂ ನಕ್ಕಿದ್ರು.
 
                   ಇತ್ತ ವಾಣಿ ದಿಲೀಪ್ ಕಾರಲ್ಲಿ ಹೋಗುತ್ತಿದ್ದರು.
                   ವಾಣಿ: ಏನ್ರೀ, ನನ್ ಎರಡನೇ ಕಾಲನ್ನ ಮುರುಸ್ತೀರಾ, ಹಣ ಕೊಡ್ತೀರಾ. ಇನ್ ಮೇಲೆ ಬೀರು ಕೀ ನನ್ ಸೊಂಟದಲ್ಲೇ ಇರುತ್ತೆ. ಒಂದ್ ಪೈಸ ಮುಟ್ಬೇಕಾದ್ರೆ ನನ್ ಕೇಳ್ಬೇಕು. ಇಲ್ಲ ಅಂದ್ರೆ ಸೊಂಟ ಮುರುದ್ಬಿಡ್ತೀನಿ. ನಿಮ್ಮಪ್ಪ ಅಮ್ಮನ್ ಕರ್ಸಿ ಕಂಪ್ಲೇಂಟ್ ಹೇಳ್ತೀನಿ. ನಿಮ್ಮಗಂದು ಇಲ್ಲಿ ಗಲಾಟೆ ಜಾಸ್ತಿ ಆಗಿದೆ, ಇಟ್ಕೊಳಕ್ಕಾಗಲ್ಲ. ಕರ್ಕೊಂಡ್ ಹೋಗಿ ನಿಮ್ಮನೇಗೆ ಅಂತಾ ಹೇಳ್ತೀನಿ.
                   ದಿಲೀಪ್: ನನ್ ಬಿಟ್ಬಿಡೇ, ನಮ್ಮಪ್ಪ ಅಮ್ಮನ್ ಕರುಸ್ಬೇಡ ಕಣೇ, ಅವ್ರು ನನ್ಗೆ ಬೈತಾರೆ, ಯಾಕೋ ಹೆಂಡ್ತಿ ಕಾಲ್ಮುರ್ಸಕ್ ಹೋಗಿದ್ದೆ ಅಂತಾ.ಎಲ್ಲಾರ್ನು ನಿನ್ ಕಡೇಗೇ ಹಾಕ್ಕೊಂಡ್ಬಿಟ್ಟಿದೀಯಾ, ನಮ್ ನೆಂಟ್ರೂ ಎಲ್ಲಾ ನಿನ್ ಕಡೇಗೇ ಮಾತಾಡ್ತಾರೆ. ಎಲ್ರೂ ಬೈತಾರೆ ಕಣೇ ನನ್ಗೆ.
                   ವಾಣಿ :ಬರ್ಲಿ ಎಲ್ರೂ, ಎಲ್ಲರ್ ಮಂದೇನೇ ಮುರೀತೀನಿ ನಿಮ್ ಕಾಲೂ ಕೈಯೆಲ್ಲಾ.ಕರ್ಕೊಂಡ್ ಹೋಗ್ರೀ ನಿಮ್ ಹುಡುಗನ್ನಾ, ನಿಮ್ಮನ್ಲೇ ಇಟ್ಕೊಳಿ, ನನಗ್ ಬೇಡ ಅಂತಾ ಹೇಳ್ತೀನಿ.
                   ದಿಲೀಪ್: ಆಗ ನೀನ್ಮಾಡೋದನ್ನ ಎಲ್ರೂ ವಿಡಿಯೋ ಮಾಡ್ಕೊಂತಾರೆ.ಆಗ್ ಎಲ್ರುಗೂ ಗೊತ್ತಾಗುತ್ತೆ, ನಿನ್ ಬಣ್ಮ ಏನು ಅಂತಾ.ನಮ್ಮುಂದೇನೇ ನಮ್ ಹುಡುಗುನ್, ಕಾಲ್ ಮುರೀತಿದಾಳೆ, ಇನ್ ನಮ್ ಹಿಂದೆ  ಎಷ್ಟ್ ಮಾಡ್ಬೋದು, ಇವ್ಳನ್ನ  ನೀನೇ ಡಾಕ್ಟರ್ ಹತ್ರ ಕರ್ಕೊಂಡ್ ಹೋಗಿ ಇನ್ನೊಂದ್ ಕಾಲೂ ಮುರ್ಸೋ, ನಾವೂ ಬರ್ತೀವಿ ನಿನ್ ಜೊತೆ, ಅಂತಾರೆ.
                   ವಾಣಿ: ಆಗ ನಿಮ್ಮನ್ನೆಲ್ಲಾ ಜೈಲ್ಗ್ ಹಾಕ್ತಾರೆ.
                   ದಿಲೀಪ್: ಆಗ ನಮ್ಮನ್ನೂ ಹಾಕ್ತಾರೆ, ವಿಡಿಯೋ ಇರುತ್ತಲ್ಲಾ, ನಿನ್ನುನ್ನೂ ಹಾಕ್ತಾರೆ.
                   ವಾಣಿ ಏನೂ ಮಾತಾಡದೇ ದುರುಗುಟ್ಟಿ ನೋಡಿದಳು.
                   ದಿಲೀಪ್: ಅಯ್ಯಯ್ಯೋ, ಅಕಟಕಟಾ, ನೀನು ಶಿವನ್ ತರ ಕಣ್ ಬಿಡ್ಬೇಡಾ ಕಣೇ ನಾನ್ ಕಾಮನ್ ತರ ಸುಟ್ಹೋಗ್ತೀನಿ.
                   ವಾಣಿ :ಸುಟ್ಹೋದ್ರೆ ಭಗೀರಥನ್ ತರ ಗಂಗಾವತರಣ ಮಾಡಿ ಮತ್ತೆ ಜೀವ ಕೊಡ್ತೀನಿ. ಮತ್ತೆ ಗೋಳಾಡುಸ್ತೀನಿ.
                   ದಿಲೀಪ್: ಮತ್ತೆ ಜೀವ ಕೊಡ್ತೀಯಾ, ಬೇಡ ಕಣೇ ಹೋದವನ್ನ ಹಾಗೇ ಬಿಟ್ಬಿಡು. ಮತ್ತೆ ಯಾಕ್ ಜೀವ ಕೊಟ್ ಗೋಳಾಡುಸ್ತೀಯಾ?
                               ದುನಿಯಾಂ ಬನಾನೆವಾಲೆ ಕ್ಯಾ ತೇರೆ ಮನ್ ಮೆ ಸಮಾಯೀ,
                              ಕಾಹೆ ಕೋ ದುನಿಯಾಂ ಬನಾಯೀ, ತೂನೆ ಕಾಹೆ ಕೋ ಔರತ್ ಬನಾಯೀ
                   ವಾಣಿ ಇರ್ರೀ ಬರೀ ನೀವೇ ಇರ್ರೀ ಗಂಡುಸ್ರು. ಆವಾಗ ಮಕ್ಳುನ್ ಸಾಕೋದ್ ಎಷ್ಟ್ ಕಷ್ಟ ಅಂತಾ ಗೊತ್ತಾಗುತ್ತೆ.   ಹಾಗಾದ್ರೆ ನಾನೂ ಹಾಡುದ್ರೇ ಹೆಂಗಿರುತ್ತೆ
                              ದುನಿಯಾಂ ಬನಾನೆವಾಲೆ ಕ್ಯಾ ತೇರೆ ಮನ್ ಮೆ ಸಮಾಯೀ,
                              ಕಾಹೆ ಕೋ ದುನಿಯಾಂ ಬನಾಯೀ, ತೂನೆ ಕಾಹೆ ಕೋ ಮರ್ದ್ ಬನಾಯೀ
                   ದಿಲೀಪ್ ಇರ್ರೇ ಬರೀ ನೀವೇ ಹೆಂಗುಸ್ರೇ ಇರೀ. ಆಗ ದುಡ್ಕೊಂಡ್ ಬರೋದ್ ಎಷ್ಟ್ ಕಷ್ಟ ಅಂತಾ ಗೊತ್ತಾಗುತ್ತೆ.
                   ವಾಣಿ: ಅದಕ್ಕೇ ರೀ, ಇಬ್ರೂ ಇರ್ಬೇಕು ಪ್ರಪಂಚದಲ್ಲಿ. ನೀವು ಮಕ್ಳುನ್ ನೋಡ್ಕೊಳಿ, ನಾನ್ ದುಡೀತೀನಿ.
                   ದಿಲೀಪ್: ಹಾಂ! ನೀನು... ದುಡೀತೀಯಾ, ನಾನು ಮಕ್ಳುನ್ ನೋಡ್ಕೋಬೇಕಾ, ದುಡೀದೇನೇ ನನ್ ಒದೀತಿದ್ದೆ, ಇನ್  ದುಡುದ್ರೇ, ಎರಡ್ ಕಾಲಲ್ಲೂ ಒಂದೇ ಸರಿ ಒದೀತೀಯಾ?
                   ವಾಣಿ: ಇಲ್ಲಾ ರೀ, ತಮಾಷೇಗ್ ಹೇಳ್ದೆ ಅಷ್ಟೇ. ನೀವೇ ದುಡೀರೀ, ನಾನೇ ಮಕ್ಕುಳ್ನ ನೋಡ್ಕೊಂತೀನಿ. ತಪ್ಪಾಯ್ತು ರೀ, ಸುಮ್ ಸುಮ್ನೆ ನಿಮ್ಮನ್ ರೇಗ್ಸೋಕೆ  ಇಷ್ಟೆಲ್ಲಾ ಮಾತಾಡ್ದೆ, ಅಷ್ಟೇ.ನಾನೇ ನಿಮ್ಮನ್ ಮೊದ್ಲು ಒದ್ದಿದ್ದು. ಅದ್ಕೇ ನೀವು ಡಾಕ್ಟರ್ ಹತ್ರ ಹೋದ್ರಿ, ನನ್ ಕಾಲ್ ಮುರ್ಸಕ್ಕೆ. ನಂದೇ ತಪ್ಪು ರೀ.ನನ್ನ ಕ್ಷಮಿಸ್ ಬಿಡ್ರೀ.
                   ದಿಲೀಪ್: ನೀನೂ...  ಕ್ಷ ಕ್ಷ ಕ್ಷ ಕ್ಷ ಮೆ ಕೇಳ್ತಾ ಇದೀಯಾ, ಈವತ್ತು ನಿಜವಾಗ್ಲೂ ಪ್ರಳಯ ಆಗುತ್ತೆ ಕಣೇ, ನಾನು ಕನಸ್ ಕಾಣ್ತಾ ಇಲ್ಲಾ ತಾನೇ. ಜಿಗುಟು ನೋಡೋಣಾ.
                   ವಾಣಿ: ನಾನು ಜಿಗುಟುದ್ರೇ ರಕ್ತ ಬರೋ ತರ ಜಿಗುಟ್ತೀನಿ. ಆಗ ನೀವು ಮತ್ತೆ ಡಾಕ್ಟರ್ ಹತ್ರ ಕರ್ಕೊಂಡೋದ್ರೇ, ನನ್ಗೆ ರಕ್ತ ಬರೋ ತರ ಜಿಗ್ಟಿದಾಳೆ, ಈ ಬಾರೀನಾದ್ರೂ ಇವ್ಳ ಎಡಗಾಲನ್ನೂ ಮುರೀರಿ. ನಿಮ್ಗೆ ನನ್ ಮೇಲೆ ಈಗ್ಲೂ ಕರುಣೆ ಬರಲ್ವಾ ಡಾಕ್ಟರೇ, ಅಂತಾ ಹೇಳುದ್ರೇ ಏನ್  ಮಾಡ್ಲಿ....
                   ದಿಲೀಪ್: ಅವೆಲ್ಲಾ ಬೇಡ ಕಣೇ, ಮತ್ತೆ ಜಗ್ಳ ಯಾಕೇ, ಮೆಲ್ಲುಗ್ ಜಿಗ್ಟೇ.
                   ವಾಣಿ: ಆಯ್ತೂ...
                   ಮೆಲ್ಲಗೆ ಜಿಗುಟಿದಳು.
                   ದಿಲೀಪ್ :ಹಾಂ, ಗೊತ್ತಾಯ್ತು. ನಾನ್ ಈಗ್ ಕನಸು ಕಾಣ್ತಾ ಇಲ್ಲಾ. ಇದು ನಿಜಾನೇ.
                   ಇಬ್ಬರೂ: ಹಾ ಹಾ ಹಾ ಹಾ ಹಾ ಹಾ.
Disclaimer(ಹಕ್ಕುತ್ಯಾಗ)
ಇದು ನಗೆಲೇಖನ ಮಾತ್ರ. ಬದುಕಿರುವ ಅಥವಾ ದೈವಾದೀನರಾಗಿರುವ ಯಾರಿಗೂ ಅನ್ವಯಿಸುವುದಿಲ್ಲ. ಯಾರಿಗಾದರೂ ಹೋಲಿಕೆ ಕಂಡು ಬಂದಲ್ಲಿ ಅದು ಕೇವಲ ಆಕಸ್ಮಕ ಮತ್ತು ಕಾಕತಾಳೀಯ.ಸರಸ್ವತಿಯ ಇಂಗಿತಕ್ಕನುಸಾರವಾಗಿ ನನ್ನ ಮನದಲ್ಲಿ ಹಾಸ್ಯ ಮಾತ್ರಕ್ಕಾಗಿ ಮೂಡಿ ಬಂದ ವಿಚಾರಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.ದಯಮಾಡಿ ಯಾರೂ ತಪ್ಪು ಗ್ರಹಿಕೆ ತಂದುಕೊಳ್ಳಬಾರದೆಂದು ವಿನಂತಿ.