ನಮ್ಮ ಮಾಧ್ಯಮ ಶಿಕ್ಷಣ ಎಲ್ಲಿಗೆ ಹೊರಟಿದೆ?

ನಮ್ಮ ಮಾಧ್ಯಮ ಶಿಕ್ಷಣ ಎಲ್ಲಿಗೆ ಹೊರಟಿದೆ?

ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಅಲ್ಲಿಯ ಪ್ರತಿಷ್ಠಿತ ಖಾಸಗಿ ವಿವಿಯೊಂದರಲ್ಲಿ ಪಾಠಮಾಡುತ್ತಿರುವ ನನ್ನ  ವಿದ್ಯಾರ್ಥಿ ಭೇಟಿಯಾಗಿದ್ದರು. ಮಾತು ಮಾಧ್ಯಮ ಶಿಕ್ಷಣದ ಬಗ್ಗೆ ಹೊರಳಿತು. ಅವರದು ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಲಿಸುವ ದೊಡ್ಡ ವಿಭಾಗ. ಒಂದೊಂದು ತರಗತಿಯಲ್ಲೂ ನೂರಾರು ವಿದ್ಯಾರ್ಥಿಗಳು. ಎಲ್ಲರೂ ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿ ಹಣ ಕೊಟ್ಟು ಪತ್ರಿಕೋದ್ಯಮ ಶಿಕ್ಷಣಕ್ಕೆ ಸೇರಿದವರು. ಸಹಜವಾಗಿ ಅವರು ಶ್ರೀಮಂತರು, ಇಲ್ಲವಾದರೆ ಭಾರತದಲ್ಲಿ ಖಾಸಗಿ ವಿವಿಗೆ ಸೇರುವುದಾದರೂ ಹೇಗೆ? ಅವರಿಗೆ ಇದೊಂದು ಫ್ಯಾಷನ್. ಚಿಕ್ಕಂದಿನಿಂದ ಇಂಗ್ಲಿಷ್ ವಾತಾವರಣದಲ್ಲಿ ಬೆಳೆದವರಾದ್ದರಿಂದ ಅವರ ಆಡುಮಾತು ಇಂಗ್ಲಿಷ್. ಅವರು ಮಾಧ್ಯಮದ ಬಗ್ಗೆ ಬಹಳ ಪ್ರೀತಿಯೋ, ಕಾಳಜಿಯೋ ಇದ್ದು ಬಂದವರೇನಲ್ಲ. ಈಗಿನ ಕಾಲದಲ್ಲಿ ಜರ್ನಲಿಸಂ ಓದುವುದು ಪ್ರತಿಷ್ಠೆಯ ಪ್ರಶ್ನೆಯಾದ್ದರಿಂದ ಹೆಸರಿಗೆ ಅದು ಬೇಕು. ಆದರೆ ವಾಸ್ತವದಲ್ಲಿ ಅದನ್ನು ವೃತ್ತಿಯಾಗಿ ಸ್ವೀಕರಿಸುವ  ರೀತಿಯಲ್ಲಿ ಗಂಭೀರವಾಗಿ ಓದುವವರು ಅಲ್ಲಿ ವಿರಳ.  ಅಸೈನ್‍ಮೆಂಟ್ ಗಳನ್ನು ಕೊಟ್ಟರೆ ಇಂಟರ್‍ನೆಟ್‍ನಿಂದ ಭಟ್ಟಿ ಇಳಿಸಿದ ಉತ್ತರಗಳನ್ನು ಕಟ್ ಎಂಡ್ ಪೇಸ್ಟ್ ಮಾಡಿ ಬಿಸಾಕುತ್ತಾರೆ. ತಮ್ಮದೇ ಸೃಜನಶೀಲತೆ ತೋರುವಂತೆ ಬರೆಯುವವರು ಅಪರೂಪ. ಹೆಚ್ಚಿನವರು ತರಗತಿಗೂ ನಿಯತವಾಗಿ ಬರುವುದಿಲ್ಲ. ಅವರನ್ನು ಹುಡುಕಿಕೊಂಡು ಅಧ್ಯಾಪಕರುಗಳೇ ಓಡಾಡಬೇಕು. ಎಲ್ಲರೂ ಶ್ರೀಮಂತರ ಮಕ್ಕಳು- ಖಾಸಗಿ ವಿಶ್ವವಿದ್ಯಾಲಯ. ಹೀಗಾಗಿ  ಅಧ್ಯಾಪಕರಿಗಿಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಗೌರವ. ಯಾಕೆಂದರೆ ಅವರು ದುಡ್ಡುಕೊಟ್ಟು ಬಂದವರಲ್ಲವಾ? ಅವರ ರೀತಿ ನೀತಿಗಳು ಹೇಗೇ ಇರಲಿ ಅವರಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳೇ ಬರುತ್ತವೆ! ಯಾಕೆಂದರೆ ಇಂಗ್ಲಿಷ್‍ನಲ್ಲಿ ಸರಾಗವಾಗಿ ಏನೋ ಬರೆಯುವ ಸಾಧ್ಯತೆ ಒಂದು ಕಾರಣವಾದರೆ, ಅವರಿಗೆ ಕಡಿಮೆ ಅಂಕ ಬಂದರೆ ಶಿಕ್ಷಕರೇ ಫೇಲ್ ಆಗೋದು ಇನ್ನೊಂದು ಕಾರಣ! ಹೀಗಾಗಿ ಅವರು ಕಲಿಯಲಿ ಬಿಡಲಿ, ವಿದ್ಯಾರ್ಥಿಗಳಿಗೆ ಅಂಕಗಳಂತೂ ಕಂಡಾಪಟ್ಟೆ ಬರುತ್ತವೆ. ಇದರಿಂದ ಶಿಕ್ಷಕರೂ ಬಜಾವ್, ವಿದ್ಯಾರ್ಥಿಗಳು ಸೇಫ್!
   ಪ್ರತಿಷ್ಠಿತ ಖಾಸಗಿ ವಿವಿಯ ಈ ಪರಿಸ್ಥಿತಿಯ ಬಗ್ಗೆ ತಿಳಿದಾಗ ನನಗೆ ನೆನಪಾದುದು ಹತ್ತು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಕೇಳಿದ ಒಂದು ಪ್ರಶ್ನೆ. ‘ಸರ್ ಪತ್ರಿಕೋದ್ಯಮ ಕಲಿಯಲು ತೀರಾ ಶ್ರೀಮಂತರ ಮಕ್ಕಳೋ ದೊಡ್ಡ ಅಧಿಕಾರಿಗಳ ಮಕ್ಕಳೋ ಯಾಕೆ ಬರೋದಿಲ್ಲ? ನೋಡಿ ನಮ್ಮ ವಿಭಾಗದಲ್ಲಿ ಇರುವ ವಿದ್ಯಾರ್ಥಿಗಳೆಲ್ಲ ಹಳ್ಳಿ ಹೈದರ ಮಕ್ಕಳೇ. ಸ್ವಲ್ಪಮಟ್ಟಿಗೆ ಮಧ್ಯಮ ವರ್ಗದವರು ಆಥವಾ  ಆರ್ಥಿಕವಾಗಿ, ಸಾಮಾಜಿಕವಾಗಿ  ದುರ್ಬಲರಾಗಿರೋರೇ ಇಲ್ಲಿಗೆ ಬರುತ್ತಿರೋರು, ನೋಡಿ ಬೇರೆ ವಿಭಾಗಗಳಲ್ಲಿ ಇರುವಷ್ಟು ಕಾರುಗಳು-ಬೈಕುಗಳು ಕೂಡಾ ನಮ್ಮ ವಿಭಾಗದಲ್ಲಿಲ್ಲ. ಶ್ರೀಮಂತರ ಮಕ್ಕಳಿಗೋ ದೊಡ್ಡ ಅಧಿಕಾರಿಗಳ ಮಕ್ಕಳಿಗೋ ಪತ್ರಿಕೋದ್ಯಮ ವ್ಯಾಸಂಗವನ್ನು ಆಯ್ಕೆಮಾಡಿಕೊಳ್ಳಬೇಕೆಂದು ಯಾಕೆ ಅನಿಸುವುದಿಲ್ಲ?
   ಈ ಪ್ರಶ್ನೆಯನ್ನು ಆತ ಕೇಳಿದ್ದು ಹತ್ತು ವರ್ಷದ ಹಿಂದೆ- ಸಾಂಪ್ರದಾಯಿಕ ಸರ್ಕಾರಿ ಪ್ರಾಯೋಜಿತ ವಿವಿಯೊಂದರ ವಿದ್ಯಾರ್ಥಿಯಾಗಿ.  ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ನಿಜವೆಂದರೆ ಸರ್ಕಾರಿ ಕೃಪಾಪೋಷಿತ ವಿಶ್ವವಿದ್ಯಾಲಯಗಳಲ್ಲಿ  ಈಗ ಪತ್ರಿಕೋದ್ಯಮ ಓದಲು ಬರುತ್ತಿರುವವರು ಸಾಮಾನ್ಯವಾಗಿ ಅತ್ಯಂತ ಬಡವರು. ಪುಕ್ಕಟೆ ಹಾಸ್ಟೆಲ್ ವ್ಯವಸ್ಥೆ ಸಿಗದಿದ್ದರೆ ಓದಲಾಗದವರು ಎಂದರೆ ತಪ್ಪಲ್ಲ.          ಅಂದರೆ ದೆಹಲಿಯ ಖಾಸಗಿ ವಿವಿಯಲ್ಲಿ ಓದುವ ಪತ್ರಿಕೋದ್ಯಮ ಅಥವಾ ಮಾಧ್ಯಮ ವಿದ್ಯಾರ್ಥಿಗಳಿಗೂ ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಪೂರ್ವ ಪಶ್ವಿಮದಷ್ಟು ಅಂತರ. ನಿಜ. ಮಾಧ್ಯಮ ಅಧ್ಯಯನಕ್ಕೂ ಈಗ ಸಮಾಜದ ಅತ್ಯಂತ ಪ್ರತಿಷ್ಠಿತರ ಮಕ್ಕಳು, ದೊಡ್ಡ ದೊಡ್ಡ ಕಾರುಗಳಲ್ಲಿ ಬರುವವರು ಬರುತ್ತಿದ್ದಾರೆ. ಅಲ್ಲದೇ ಸಮಾಜದ ಕಟ್ಟಕಡೆಯ ಜನಗಳೂ ಈಗ ಪತ್ರಿಕೋದ್ಯಮ ತರಗತಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಈ ಎರಡೂ ಬೆಳವಣಿಗೆಗಳ ಲಾಭ ಮಾಧ್ಯಮಕ್ಕೆ ಆಗುತ್ತಿದೆಯೇ  ಅಥವಾ ಮಾಧ್ಯಮ ಶಿಕ್ಷಣವು ಜವಾಬ್ದಾರಿಯುತ ಪತ್ರಕರ್ತರನ್ನು ಸಮಾಜಕ್ಕೆ ನೀಡಲು ಇದು  ಅನುಕೂಲವಾಗುತ್ತಿದೆಯೇ ಎಂದು ಯೋಚಿಸಿದರೆ  ಉತ್ತರ ಬಹುತೇಕ ನಕಾರಾತ್ಮಕ ಎಂದು ವಿಷಾದದಿಂದ ಹೇಳಬೇಕಿದೆ.
ಯಾಕೆಂದರೆ ಅತ್ತ ಖಾಸಗಿ ವಿವಿಗಳಲ್ಲಿ ಲಕ್ಷ ಲಕ್ಷ ದುಡ್ಡು ಕೊಟ್ಟು ಪತ್ರಿಕೋದ್ಯಮ ಸೇರುತ್ತಿರುವವರಿಗಾಗಲೀ ಇತ್ತ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಕಲ್ಯಾಣ ರಾಜ್ಯದ ಸರ್ಕಾರ ಕೊಟ್ಟ ಸವಲತ್ತುಗಳನ್ನು ಬಳಸಿಕೊಂಡು  ಹೆಚ್ಚೂ ಕಡಿಮೆ ಉಚಿತವಾಗಿಯೇ ಶಿಕ್ಷಣಕ್ಕೆ ಸೇರಿಕೊಳ್ಳುವವರಿಗಾಗಲೀ ಪತ್ರಕರ್ತರಾಗಲೇ ಬೇಕೆಂಬ ಹಠ ಕಾಣುತ್ತಿಲ್ಲ. ‘ಇದಲ್ಲದಿದ್ದರೆ ಇನ್ನೊಂದು’ ಎಂಬ ಮನೋಭಾವದಲ್ಲಿರುವವರೇ ತರಗತಿಯಲ್ಲಿ ಹೆಚ್ಚಿರುತ್ತಾರೆ. ಸ್ವಂತ ಪ್ರತಿಭೆಯಿಲ್ಲದೇ   ಮಾಧ್ಯಮ ಕ್ಷೇತ್ರದಲ್ಲಿ ಬಹಳ ಕಾಲ ಉಳಿಯಲಾಗದು ಎಂಬುದು ಎಲ್ಲರೂ ಬಲ್ಲ ಸತ್ಯ.  ಒಬ್ಬ ವ್ಯಕ್ತಿ ತನ್ನ ಅಪ್ಪನದೋ ಮಾವನದೋ ಪ್ರಭಾವದ ಕಾರಣದಿಂದ ಪತ್ರಿಕಾಲಯದ ಒಳಗೆ ಸೇರಿಕೊಳ್ಳಬಹುದು, ಆದರೆ ಅಲ್ಲಿ ಉಳಿಯಲು ತನ್ನದಾದ ಪ್ರತಿಭೆ ಬೇಕೇಬೇಕು. ಅದಿಲ್ಲದವರಿಗೆ ಅವರು ಯಾವುದೇ ವಿವಿಯಿಂದ ಬಂದಿರಲಿ ಮಾಧ್ಯಮಗಳ ಬಾಗಿಲು ಮುಚ್ಚುತ್ತದೆ.
   ಬದಲಾಗುತ್ತಿರುವ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಮಾಧ್ಯಮ ಶಿಕ್ಷಣವೆಂಬುದು ಹೆಚ್ಚಾಗಿ ತಾಂತ್ರಿಕ ಶಿಕ್ಷಣವಾಗುತ್ತಾ ಇದೆ.  ವೆಬ್ ಡಿಸೈನಿಂಗ್, ಈವೆಂಟ್ ಮ್ಯಾನೇಜ್‍ಮೆಂಟ್, ಕಾರ್ಪೊರೇಟ್ ಕಮ್ಯುನಿಕೇಶನ್... ಹೀಗೆ ಮಾಧ್ಯಮ ಶಿಕ್ಷಣದ ಹರಹು ವಿಸ್ತಾರಗೊಳ್ಳುತ್ತಾ ಸಾಗಿದೆ. ತಂತ್ರಜ್ಞಾನವನ್ನು ಮೂರು ತಿಂಗಳಲ್ಲಿ ಕಲಿಯಬಹುದು. ಆದರೆ ಮಾಧ್ಯಮಕ್ಕೆ ಮೂಲತಃ ಬೇಕಾದ ಭಾಷೆಯನ್ನು, ಬರವಣಿಗೆಯ ಕಲೆಯನ್ನು ಅಷ್ಟು ಬೇಗ ಕಲಿಯಲಾಗದು. ಈಗಿನ ಸಂದರ್ಭದಲ್ಲಿ ಮಾಧ್ಯಮದ ತತ,್ವ ಸಿದ್ಧಾಂತ, ಕಾನೂನು, ನೈತಿಕ ಪ್ರಶ್ನೆಗಳು ಪತ್ರಿಕೋದ್ಯಮ ಶಿಕ್ಷಣದಲ್ಲಿ ನಗಣ್ಯವಾಗಿ, ಬರವಣಿಗೆಗಿಂತ ತಂತ್ರಜ್ಞಾನವೇ ಮೆರೆಯುತ್ತಿದೆ. ಅದು ಮಾಧ್ಯಮ ಶಿಕ್ಷಣದ ಪಲಾಯನವಾದದಂತೆಯೂ ಕಾಣುತ್ತಿದೆ. ಒಂದುಕಡೆ ಇಂಡಸ್ಟ್ರಿಯಲ್ಲೂ ಸಾರ್ವಜನಿಕವಾಗಿಯೂ ಮಾಧ್ಯಮ ಶಿಕ್ಷಣದ ಬಗ್ಗೆ  ಕೇವಲವಾಗಿ ಮಾತನಾಡುವುದನ್ನು ಕಾಣುತ್ತೇವೆ. ಮಾಧ್ಯಮದ ಆಯಕಟ್ಟಿನ ಜಾಗಗಳಲ್ಲಿರುವ ನಮ್ಮ ವಿದ್ಯಾರ್ಥಿಗಳೇ ಇಂದು ನೀವೇನು ಕಲಿಸುತ್ತೀರಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ.  ಮೆಡಿಕಲ್ಲು ಎಂಜಿನಿಯರಿಂಗುಗಳನ್ನೂ ಸೇರಿಸಿ  ಎಲ್ಲಾ ವೃತ್ತಿಪರ ಕೋರ್ಸುಗಳ ಬಗ್ಗೂ ಈ ಟೀಕೆ ಇದೆಯಾದರೂ ಮಾಧ್ಯಮಶಿಕ್ಷಣದ ವೈಫಲ್ಯ ದೊಡ್ಡದಾಗಿ ಕಾಣುವುದೇಕೆಂದರೆ ಈ ಶಿಕ್ಷಣದ ಫಲಾನುಭವಿಗಳೇ ಎಲ್ಲಾ ಮಾಧ್ಯಮಗಳಲ್ಲೂ ಇದ್ದಾರೆ. ಒಂದುಕಡೆ ಖಾಸಗಿ ಹಾಗೂ ಸರ್ಕಾರಿ ವಿವಿಗಳಲ್ಲಿ ಓದುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ನಡುವಿನ ಕಂದಕ ಹೆಚ್ಚುತ್ತಿರುವಂತೆಯೇ ಇನ್ನೊಂದು ಕಡೆ ಅವುಗಳಲ್ಲಿರುವ ವ್ಯವಸ್ಥೆ ಕೂಡ ಬಹಳ ವ್ಯತ್ಯಾಸ ಮಾಡುತ್ತಿವೆ. ಮೂಲತಃ ಇಲ್ಲಿಗೆ ಕಲಿಯಲು ಬರುತ್ತಿರುವ ಹೆಚ್ಛಿನವರಿಗೆ ಬದ್ಧತೆಯೇ ಕಾಣೆಯಾಗಿ ಪತ್ರಿಕೋದ್ಯಮ ಅಥವಾ ಮಾಧ್ಯಮ ಶಿಕ್ಷಣವೆಂಬುದು ಎಲ್ಲಿಗೆ ಹೊರಟಿದೆ ಎಂದು ಚರ್ಚಿಸುವುದು ಅಗತ್ಯ ಎನಿಸುತ್ತದೆ.