ನೀನಾರಿಗಾದೆಯೋ ಹಳೆಯ ಫೋನೇ....

ನೀನಾರಿಗಾದೆಯೋ ಹಳೆಯ ಫೋನೇ....

ಸೆಲ್ ಫೋನ್ ಅಲಿಯಾಸ್ ಮೊಬೈಲ್ ಗೆ ಹಿರಿಯನಾದ ಲ್ಯಾಂಡ್ ಲೈನ್ ಟೆಲಿಫೋನ್ ಮಾಡುವ ಆಶೀರ್ವಾದಗಳು.
 
ನೀನು ಕ್ಷೇಮದಿಂದಲೂ, ಲವಲವಿಕೆಯಿಂದಲೂ ಎಲ್ಲರ ಬಳಿ ಇದ್ದೀಯ ಎಂದು ನನಗೆ ತಿಳಿದೇ ಇದೆ. ಆದರೆ ನಾನು ಸೀನಿಯರ್ ಸಿಟಿಜಿನ್ ತರಹ ಮನೆಯಲ್ಲಿ ಒಂದು ಮೂಲೆಯಲ್ಲಿದ್ದು, ಅಕ್ಷರಶಃ ಮೂಲೆಗುಂಪಾಗುವುದನ್ನು ನೀನು ಗಮನಿಸಿದ್ದೀಯೋ ಇಲ್ಲವೊ ತಿಳಿಯದು. ಆದರೆ ಅದೇ ವಾಸ್ತವ ಸಂಗತಿ. ನೀನು ಪದೇ ಪದೇ ರಿಂಗ್ ಮಾಡುತ್ತಲೇ ಇರುತ್ತೀ. ಆದರೆ ನಾನು ಆಗೊಮ್ಮೆ ಈಗೊಮ್ಮೆ ಸದ್ದು ಮಾಡಿದರೆ ಇಡೀ ಮನೆಯೇ ಚಕಿತಗೊಳ್ಳುತ್ತದೆ . ಏಕೆಂದರೆ ನನ್ನ ಸದ್ದು ಅನಿರೀಕ್ಷಿತ. ಆಗ ಮಾತ್ರ ನನ್ನ ಇರುವಿಕೆ ಮನೆಯ ಸದಸ್ಯರಿಗೆಲ್ಲಾ ತಿಳಿಯುತ್ತದೆ . ಏಕೆಂದರೆ ಎಲ್ಲರ ಸೇವೆಯನ್ನು ನೀನೇ ಮಾಡುತ್ತಿದ್ದೀಯ.
 
ನಾನೊಮ್ಮೆ ಮನೆಯ ಹೆಮ್ಮೆಯ ವಸ್ತುವಾಗಿದ್ದೆ ಎಂದರೆ ನೀನು ನಂಬಲೇಬೇಕು . ಆಗ ಅದೆಷ್ಟೇ ಕಷ್ಟವಾಗಿದ್ದರೂ ಸಹ ಹೊರ ಜಗತ್ತಿನ ಸಂಪರ್ಕ ನನ್ನಿಂದ ಮಾತ್ರ ಸಧ್ಯವಾಗಿತ್ತು . ಆದರೆ ಈಗ ನಾನು ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ . ನನ್ನ ರಿಂಗ್ ಟೋನ್ ಆಕಾಶವಾಣಿಯ ಸಿಗ್ನೇಚರ್ ಟ್ಯೂನ್ ನಂತೆ ಕೇಳುವವರೇ ಇಲ್ಲವಾಗಿದೆ. ನಾನು ಬೇಕು ಬೇಡದ ವಸ್ತುವಾಗಿದ್ದೇನೆ. ಈ ದಿನಗಳಲ್ಲಿ ಮನೆಯ ಎಲ್ಲ ಹಿರಿಯ ಸದಸ್ಯರ ಪರಿಸ್ಥಿಯೂ ಇದೇ ಅಲ್ಲವೇ ?
 
ಅದಕ್ಕೇ ನಾನೇ ಹೊಣೆ. ಏಕೆಂದರೆ ನಾನು ವೈರಿನಿಂದ ಬಿಗಿದುಕೊಂಡು ಮನೆ ಮೂಲೆಯಲ್ಲಿ ಮೂರುಕಾಲಿನ ಸ್ಟೂಲ್ ಮೇಲೆ 24 ಬೈ 7 ಕುಳಿತಿರಬೇಕು . ಆದರೆ ನೀನು? ಕೊಂಡುಯ್ಯುವಂತೆ ನಿನ್ನನ್ನು ಕೊಂಡೊಯ್ಯಬಹುದು. ನಿನಗೆ ವೈರೇ ಬೇಡ. ಕನೆಕ್ಷನ್ ಪಡೆಯಲು. ಈಗಿನ ಯುವತಿ/ ಯುವಕರು ಬೇಕಿದ್ದರೆ ಅನ್ನ ನೀರು, ಶಾ ರುಕ್ ಖಾನ್ , ಕತ್ರಿನಾ ಕೈಫ್ ಬಿಟ್ಟು ಇರಬಲ್ಲರು ಆದರೆ ನೀನು ಬೇಕೇಬೇಕು. ನೀನಿಲ್ಲದೆ ಜೀವನವೇ ಇಲ್ಲ. ಮೊನ್ನೆಯ ವರದಿಯ ಪ್ರಕಾರ ಬಿಹಾರದ ಮಹಿಳೆಯೊಬ್ಬಳು ತನ್ನ ಮಗುವನ್ನೇ ಮಾರಿದಳಂತೆ ಮೊಬೈಲ್ ಕೊಳ್ಳಲು. ಮಗುವಿಗಿಂತ ಮೊಬೈಲ್ ಹೆಚ್ಚು ಪ್ರಿಯ.
 
ಆದರೆ ಮೈ ಡಿಯರ್ ಮೊಬೈಲ್, ನನ್ನನ್ನು ಪಡೆದುಕೊಳ್ಳಲು ಅವರ ಅಪ್ಪ ಅಮ್ಮಂದಿರು ಅದೆಷ್ಟು ಸಾಹಸ ಮಾಡಿದ್ದರು ಎಂದು ಅವರಿಗೆ ಗೊತ್ತೇ ಇಲ್ಲ. ಈಗ ನಿನ್ನ ಪಡೆಯಲು ಹಣ ಇದ್ದರೆ ಸಾಕು. ಆದರೆ ಒಂದಾನೊಂದು ಕಾಲದಲ್ಲಿ ಹಣವಂತರು ಸಹ ತನ್ನ ಪಡೆಯಲು ವರ್ಷಗಟ್ಟಲೆ ಕಾಯಬೇಕಿತ್ತು . ಘನ ಸರ್ಕಾರ ಕೃಪೆ ತೋರಿ ಮಂಜೂರು ಮಾಡಿದರೆ ನೆಮ್ಮದಿಯ ನಿಟ್ಟುಸಿರು ಬಿಡಬಹುದಿತ್ತು.
 
ಮಂಜೂರಾಗಿ ನಾನು ಮನೆಗೆ ಬಂದರೆ ಅದೇನು ಸಂಭ್ರಮ! ಸಿನಿಮಾ ತಾರೆಯರೇ ಮನೆಗೆ ಬಂದಳೇನೋ ಎಂಬ ಸಂತಸ. ಮೊದಲ ಬಾರಿಗೆ ನನ್ನ ರಿಂಗ್ ಟೋನ್ ಕೇಳಿದಾಗ ಎಲ್ಲರ ಮುಖದಲ್ಲಿ ನಗೆಹೊನಲು - ಲೇಬರ್ ರೂಂನಿಂದ ಆಗಷ್ಟೇ ಜನಿಸಿದ ಮಗುವಿನ ಚೀರಾಟ ಕೇಳಿ ಬಂದಾಗ ಆಗುವಷ್ಟೇ ಹರ್ಷ. ನಂತರ ಪ್ರತಿ ಬಾರಿ ನಾನು ಸದ್ದು ಮಾಡಿದಾಗಲೆಲ್ಲಾ ಮನೆಮಂದಿಯೆಲ್ಲಾ 'ಕಾಲ್ ನನಗಿರಬಹುದು' ‘ಕಾಲ್ ನನಗಿರಬಹುದು' ಎಂದು ನನ್ನ ಬಳಿ ಧಾವಿಸಿ ಬರುತ್ತಿದ್ದರು. ನಾನೊಬ್ಬ ಬೀದಿ ನಲ್ಲಿಯಂತೆ ಎಲ್ಲರಿಗೂ ಬೇಕಾದವನಾಗಿದ್ದೆ. ಆದರೆ ಈಗ ಎಲ್ಲರ ಬಳಿ ನೀನೇ. ಅವರವರ ಮೊಬೈಲ್ ಅವರವರಿಗೆ, ಅವರದ್ದೇ ಕಾಲ್. ಎಲ್ಲ ಪ್ರೈವೇಟ್ . ಖಾಸಗಿಯಾಗಿ ಮಾತನಾಡಬೇಕೆಂದರೆ ಹೊರಗೆ ಬಂದೋ, ಬಾಲ್ಕನಿಗೆ ಹೋಗಿಯೋ ಗುಸುಗುಸು ಮಾತನಾಡಬಹುದು. ಇಂತಹ ಸೈಲಭ್ಯ ನಾನೆಲ್ಲಿ ಕೊಟ್ಟೇನು ? ಅದಕ್ಕೇ ನಾನು ಈಗ ಮೂಲೆಗುಂಪು.
 
ನಾನೇನು ಬದಲಾಗಿಲ್ಲ ಎಂದು ತಿಳಿಯಬೇಡ. ಮೊದಲು ನನ್ನಿಂದ ಕಾಲ್ ಮಾಡಲು ನಂಬರ್ ತಿರುಗಿಸುವ ಡಯಲ್ ಇತ್ತು. ನಂತರ ಡಿಜಿಟಲ್ ಆದಾಗ ಸಂಪರ್ಕಕ್ರಾಂತಿಯೇ ಆದಂತಾಯಿತು. ಕಾಲ್ ಮಾಡಲು ಬಟನ್ ಒತ್ತುವ ಸೌಲಭ್ಯ ನಂತರ ಕ್ರಾಂತಿಯ 2 ನೇ ಹೆಜ್ಜೆ - ಕಾರ್ಡ್ ಲೆಸ್ ಪೋನ್. ಬರೀ ರಿಸೀವರ್ ಹಿಡಿದು ಮನೆಯಲ್ಲೇ ಸುತ್ತುತ್ತಾ ಮಾತನಾಡಬಹುದಿತ್ತು. ಆದರೆ ಈಗಿನ ಮೊಬೈಲ್ ಯುಗದಲ್ಲಿ ಇಂದಿನ ಯುವಕರು ಅದೆಲ್ಲ ಕೇಳಿದರೆ ಬಿದ್ದು ಬಿದ್ದು ನಗಬಹುದು. ಅದರೆ ಟೆಲಿಪೋನ್ ಇತಿಹಾಸದ ಆ ಪುಟಗಳನ್ನು ಅಳಿಸಿಹಾಕಲು ಸಾಧ್ಯವೆ ?
 
ನಿನ್ನ ಕಂಡರೆ ನನಗೆ ಅಸೂಯೆ. ನಿನ್ನ ಮಾಲೀಕನಿಗೆ ನಿನ್ನ ಮೇಲೆ ಅದೆಷ್ಟು ಪ್ರೀತಿ, ಮಮತೆ. ನಿನ್ನ ಬಿಟ್ಟಿರಲಾರರು. ಅಂತಹ ಗಾಢ ಸಂಬಂಧ. ಪುರೋಹಿತರು ಮಂತ್ರ ಮರೆಯಬಹುದು . ಆದರೆ ನೀನಾದರೆ ? ಸಕಲಕಲಾ ವಲ್ಲಭ . ನೀನಿದ್ದರೆ ವಾಚ್ ಬೇಡ. ಏಕೆಂದರೆ ನೀನೇ ಟೈಂ ತೋರಿಸುತ್ತೀಯ – ಅವರು ಸಮಯಪಾಲಕರಲ್ಲದಿದ್ದರೂ ; ನೀನು ಕ್ಯಾಮರಾ ಸಹ ಹೊಂದಿದ್ದೀಯ . ಎಲ್ಲೆಂದರೆ ಅಲ್ಲಿ ಫೊಟೊ ಕ್ಲಿಕ್ಕಿಸಬಹುದು ; ಕತ್ತಲಲ್ಲಿ ಜಾಗ ಹುಡುಕಲು ನಿನ್ನ ಬಳಿ ಟಾರ್ಚ್ ಇದೆ , ತಡಕಾಡಬೇಕಾಗಿಲ್ಲ. ನೀನು ರೇಡಿಯೋ ಸಹ, ಹಾಡು ಕೇಳಬಹುದು. ಟೇಪ್ ರೆಕಾರ್ಡರ್ ನಂತೆ ನಿನ್ನ ಬಳಸಬಹುದು. ನೀನಿದ್ದರೆ ಕ್ಯಾಲ್ಕುಲೇಟರ್ ಬೇಕಾಗದು. ಬೇಜಾರು ಕಳೆಯಲು ನಿನ್ನ ಮಡಿಲಲ್ಲಿ ತುಂಬಿರುವ ಗೇಮ್ಸ್ ಆಡುತ್ತಾ ಕಾಲಹರಣ ಮಾಡಬಹುದು. ಹಸಿವಾದರೆ ನಿನ್ನಿಂದಲೇ ತಿಂಡಿಗೆ ಆರ್ಡರ್ ಕಳಿಸಬಹುದು; ದುಡ್ಡು ಬೇರೆ ಲೆಕ್ಕಕ್ಕೆ ಜಮಾ ಮಾಡಬಹುದದು; ಸಿನಿಮಾ / ರೈಲು/ಬಸ್ ಟಿಕೆಟ್ ಬುಕ್ ಮಾಡಬಹುದು; ತರಕಾರಿ ಕೊಳ್ಳಬಹುದು. ಒಮ್ಮೆ 3-4 ಜನರೊಡನೆ ಮಾತನಾಡುತ್ತಾ ವಾಗ್ವಾದ ನಡೆಸಬಹುದು. ದುಡ್ಡಿಗಾಗಿ ಬೆದರಿಕೆ ಸಹ ಹಾಕಬಹುದು ! ರೈತ ತಾನು ಮಾರುವ ಸರಕಿಗೆ ಒಳ್ಳೆ ಗಿರಾಕಿ ಹುಡುಕಬಹುದು.
 
ಆದರೆ ನಾನು ?
 
ಆದುದರಿಂದಲೇ ಈಗ ನಾನು ಯಾರಿಗೂ ಬೇಡ. ನೀನು ಎಲ್ಲರ ಬಳಿ ಕಲಾಯಿ ಹಾಕುವವನು, ತರಕಾರಿ ಮಾರುವವನು, ಪೂಜೆ ಮಾಡಿಸುವ ಪುರೋಹಿತ, ಬಸ್ ಕಂಡಕ್ಟರ್ , ಹೀಗೆ ಎಲ್ಲರೂ ನಿನ್ನ ಮೊರೆ ಹೋಗಿದ್ದಾರೆ. ಅಷ್ಟೇಕೆ , ಪೌರಕಾರ್ಮಿಕರುು ಪೊರಕೆ ಬದಿಗಿಟ್ಟು ನಿನ್ನ ಕೈ ಹಿಡಿದದು ಪಕ್ಕದ ರಸ್ತೆಯ ತಮ್ಮ ಸ್ನೇಹಿತರ ಜತೆ ಕುಶಲೋಪರಿ ವಿನಿಮಯ ಮಾಡಿಕೊಳ್ಳುವ ದಿನಗಳಿವು. ನಮ್ಮ ಮನೆಗೆ ಬರುವ ಮನೆಗೆಲಸದವಳು ನಿನ್ನ ಹಿಡಿದು ಮಾತನಾಡುತ್ತಲೇ ಮನೆಗೆ ಬರುವುದನ್ನು ನಾನು ನೋಡುತ್ತಲೇ ಇರುತ್ತೇನೆ. ಅವಳು ಬಾರದ ದಿನ ಆಬ್ಸೆಂಟ್ ಹೇಳಲು ಅವಳು ಮನೆಯೊಡತಿಯ ಮೊಬೈಲಿಗೇ ಫೋನ್ ಮಾಡುತ್ತಾಳೆ. ಅಪ್ಪಿ ತಪ್ಪಿ ಸಹ ನನ್ನ ಮುಖಾಂತರ ವಿಷಯ ತಿಳಿಸಳು.
 
ನೀನಾರಿಗಾದೆಯೋ ಲ್ಯಾಂಡ್ ಲೈನ್ ಎನ್ನುವೆಯಾ? ಆಗಲಿ. ಮುಂದೊಮ್ಮೆ ನಿನಗೆ ಇದೇ ಗತಿ ಬರಬಹುದು. ಲ್ಯಾಂಡ್ ಲೈನ್ ಗೊಂದು ಕಾಲ, ಮೊಬೈಲ್ ಗೊಂದು ಕಾಲ? ಅಲ್ಲಿಯವರೆಗೂ ನಿನ್ನದೇ ಸಾಮ್ರಾಜ್ಯ. ನನ್ನ ಗತಕಾಲದ ವೈಭವದ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಾನು ಸದ್ದಿಲ್ಲದೆ ದಿನಗಳನ್ನು ನೂಕುತ್ತೇನೆ .
 
 
 
(ಚಿತ್ರ ಕೃಪೆ : ಗೂಗಲ್ )