ಪವಿತ್ರವನಗಳ ಕಥನ

ಪವಿತ್ರವನಗಳ ಕಥನ

ರುದ್ರ ಗೌಡ ಅಡಿಕೆ ತೋಟಗಳು ಹಾಗೂ ಭತ್ತದ ಹೊಲಗಳ ನಡುವೆ ಮುನ್ನಡೆಯುತ್ತಿದ್ದರು. ಅವರ ಸೊಂಟಕ್ಕೆ ಕಟ್ಟಿದ್ದ ಮರದ ಕೊಕ್ಕೆಯಲ್ಲಿ ಹರಿತವಾದ ಕತ್ತಿ ನೇತಾಡುತ್ತಿತ್ತು. ಅವರೊಂದಿಗಿದ್ದ ತಂಡದ ಗುರಿ ಉತ್ತರಕನ್ನಡದ ಜಿಲ್ಲೆಯ ಹುಕ್ಲಿ ಹಳ್ಳಿಯ ಕಾಡಿನೊಳಗಿನ ಹುಲಿದೇವರ ತಾಣ ತಲಪುವುದು.

“ನಮ್ಮ ಹುಲಿದೇವರು ನಮ್ಮನ್ನು ಕಾಯುತ್ತಾರೆ. ಈ ದೇವರಿಗೆ ಎಷ್ಟು ವರ್ಷ ವಯಸ್ಸಾಯಿತೋ ಗೊತ್ತಿಲ್ಲ. ನಾವಂತೂ ಕಳೆದ ಒಂದು ನೂರು ವರುಷದಿಂದ ಹುಲಿ ದೇವರಿಗೆ ಪೂಜೆ ಮಾಡುತ್ತಲೇ ಇದ್ದೇವೆ” ಎನ್ನುತ್ತಾರೆ ರುದ್ರ ಗೌಡ.

ಕಾಡು ಹತ್ತಿರವಾಯಿತು. ಒಂದರ ಪಕ್ಕ ಇನ್ನೊಂದು ದಟ್ಟವಾಗಿ ಬೆಳೆದ ಮರಗಳು. ಅಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಂಡು ಓಡಾಡಬಾರದು. ಬರಿಗಾಲಿನಲ್ಲಿ ಕಾಡಿನೊಳಕ್ಕೆ ಹೋಗುತ್ತಿದ್ದಂತೆ ನಿಗೂಢ ಕಾಡುಲೋಕದ ಅನಾವರಣ. ನೆಲಕ್ಕೆ ಬಿದ್ದು ಒಣಗಿ ಕಪ್ಪಾದ ಎಲೆಗಳ ಮೆದುವಾದ ನೆಲಗಂಬಳಿ. ಒಂದಾದ ಮೇಲೊಂದರಂತೆ ಹಾಡುವ ಹಕ್ಕಿಗಳ ಗಾಢ ಕೂಗಿನ ಗಾನಲೋಕ. ಹಕ್ಕಿಗಳೊಂದಿಗೆ ಸ್ಪರ್ಧೆಗೆ ಬಿದ್ದಂತೆ ಚೀರಿಡುವ ಸಿಕಾಡಗಳ ಸದ್ದು. ತಮ್ಮ ಲಕ್ಷಗಟ್ಟಲೆ ಎಲೆಗಳ ಚಾವಣಿಯಿಂದ ಬಹುಪಾಲು ಸೂರ್ಯನ ಬೆಳಕಿಗೆ ತಡೆಯೊಡ್ಡುವ ೪೦ ಅಡಿ ಎತ್ತರದ ಮರಗಳು.

ಅಷ್ಟರಲ್ಲಿ ಎದುರಾಯಿತು ಇಳಿಜಾರು ನೆಲ. ಪಕ್ಕದಲ್ಲೇ ಬೃಹತ್ ಮರಗಳ ಬೇರುಗಳ ಮೇಲಿಂದ ಜಿಗಿದು ಓಡುತ್ತಿರುವ ನೀರಿನ ಝರಿ. ಅದರ ಪಕ್ಕದಲ್ಲೇ ಸುಮಾರು ಒಂದಡಿ ಎತ್ತರದ ಕಲ್ಲಿನ ಹುಲಿಯ ಮೂರ್ತಿ. ಸುತ್ತಲೂ ಗಿಡಗಂಟಿಗಳು. ಹುಲಿದೇವರ ಪದತಳದಲ್ಲಿ ಮಳೆನೀರಿನಲ್ಲಿ ನೆನೆದುನೆನೆದು ಕಪ್ಪಾದ ಎರಡು ತೆಂಗಿನಕಾಯಿಗಳು. ಪಕ್ಕದಲ್ಲಿ ಕಂಚಿನ ಹುಲಿದೇವರ ಮೂರ್ತಿ; ಅದಕ್ಕೆ ಉದ್ದಬಾಲ ಹಾಗೂ ಕಂಚಿನ ಪುಟ್ಟ ಆನೆಯ ತಲೆಯ ಮೇಲೆ ಎತ್ತಿ ಹಿಡಿದ ಪಂಜ.

“ಇದು ನಮ್ಮ ಹುಲಿದೇವರು” ಎನ್ನುತ್ತಾರೆ ತಗ್ಗಿದ ಸ್ವರದಲ್ಲಿ ರುದ್ರ ಗೌಡ. “ನಮಗೆ ಹುಲಿದೇವರಲ್ಲಿ ಅಗಾಧ ನಂಬಿಕೆ. ಹುಲಿದೇವರಿಗೆ ತೊಂದರೆ ಆಗಬಾರದೆಂದು ನಾವು ಇಲ್ಲಿ ಸುತ್ತಮುತ್ತಲಿನ ಕಾಡಿನಿಂದ ಏನನ್ನೂ ಒಯ್ಯುವುದಿಲ್ಲ. ಈ ನಿಯಮ ಮುರಿದರೆ ಹುಲಿದೇವರು ನಮ್ಮ ಹಳ್ಳಿಗೇ ಬರುತ್ತಾರೆ” ಎಂಬುದು ರುದ್ರಗೌಡರ ವಿವರಣೆ.

ರುದ್ರಗೌಡ ಮತ್ತು ಅವರ ಕರೆ ಒಕ್ಕಲಿಗರ ಸಮುದಾಯ ಪೂಜಿಸುವ ಹುಲಿದೇವರ ತಾಣ “ಕಾನು” (ಅಂದರೆ ಪವಿತ್ರವನ). ನಿರ್ದಿಷ್ಟ ದೇವದೇವತೆಗಳಿಗೆ ಮೀಸಲಾದ ಹಾಗೂ ಸ್ಥಳೀಯ ಸಮುದಾಯಗಳು ರಕ್ಷಿಸುವ ಕಾಡಿನ ಒಂದು ಭಾಗವೇ ಕಾನು. ಹೀಗೆ, ನಂಬಿಕೆಯ ಹೆಸರಿನಲ್ಲಿ ಕಾಡಿನ ಭಾಗಗಳನ್ನು ಸಂರಕ್ಷಿಸುವ ಪರಿಪಾಠ, ಪಶ್ಚಿಮಘಟ್ಟಗಳು ಹಾಗೂ ಭಾರತದ ಹಲವೆಡೆಗಳಲ್ಲಿ ಆಚರಣೆಯಲ್ಲಿದೆ.

ಇಂತಹ ಕಾನುಗಳು ಎರಡು ಮಿಲಿಯ ವರುಷಕ್ಕಿಂತಲೂ ಹಳೆಯವು ಎಂದು ನಂಬಲಾಗಿದೆ. ಇವಕ್ಕೆ ಕರ್ನಾಟಕದ ಕೊಡಗಿನಲ್ಲಿ ದೇವರಕಾಡು, ಕೇರಳದಲ್ಲಿ ಕಾವು ಮತ್ತು ಮಹಾರಾಷ್ಟ್ರದಲ್ಲಿ ದೇವರೈ ಎಂಬ ಹೆಸರು. ಅಲ್ಲಿ ಪ್ರಾಣಿ ಅಥವಾ ಮನುಷ್ಯನ ಆರಾಧನೆ: ಹುಲಿ, ಹಾವು, ಕಾಡುಕೋಣ, ದೇವರು ಅಥವಾ ದೇವಿ (ಅಯ್ಯಪ್ಪ ಹಾಗೂ ದುರ್ಗೆಯ ಸಹಿತ).

ಕೇರಳದ ಎರ್ನಾಕುಲಂ ಜಿಲ್ಲೆಯ ಇರಿಂಗೊಲೆ ಕಾವಿನಲ್ಲಿ ಮುಖ್ಯದೇವಿ ವನದುರ್ಗೆಯ ಜೊತೆಗೆ ಇತರ ಮರಗಳನ್ನು ಅಧೀನ-ದೇವತೆಗಳಾಗಿ ಪೂಜಿಸಲಾಗುತ್ತದೆ. “ಇಲ್ಲಿ ಯಾವುದೇ ಮರಮಟ್ಟುಗಳನ್ನು ಕಡಿಯಬಾರದು ಎಂಬುದು ನಿಯಮ. ಕೆಲವು ವರುಷಗಳ ಮುಂಚೆ, ಒಬ್ಬ ಅವನ ಜಮೀನಿನಲ್ಲಿ ಕೆಲವು ಮರಗಳನ್ನು ಕಡಿಸಿದ. ಅನಂತರ, ಅವರ ಕೃಷಿ ಹಾಳಾಯಿತು. ಅವನೂ ಬೇಗನೇ ಅನಾರೋಗ್ಯದಿಂದ ತೀರಿಕೊಂಡ” ಎಂದು ನೆನಪು ಮಾಡಿಕೊಳ್ಳುತ್ತಾರ ಅಲ್ಲಿನ ಮಣಿಕಂದನ್ ಪಿ.ಯು.

ಹಲವಾರು ಕಾನುಗಳ ಬಗ್ಗೆ ಇಂತಹ ದಂತಕತೆಗಳು ಚಾಲ್ತಿಯಲ್ಲಿವೆ. ಕೇರಳದ ಉತ್ತರ ಮಲಬಾರಿನಲ್ಲಿ ವರ್ಣರಂಜಿತ ಮತ್ತು ಆವೇಶಭರಿತ ಥೆಯ್ಯಂ ಆಚರಣೆ ವನದೇವರ ಸಂಕೇತ. ಇದಕ್ಕೆ ಆಧಾರ ಕಾಸರಗೋಡು, ಕಣ್ಣೂರು ಮತ್ತು ವೈನಾಡು ಜಿಲ್ಲೆಗಳ ಕಾವುಗಳ ಸುತ್ತಮುತ್ತಲಿನ ಹಳ್ಳಿಗರನ್ನು ಹರಸಲು ವನದೇವರು ವರುಷಕ್ಕೊಮ್ಮೆ ಬರುತ್ತಾರೆಂಬ ಪ್ರತೀತಿ. ಈ ನಂಬಿಕೆಯ ಆಳದಲ್ಲಿ ಕಾಡುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಕೃತಜ್ನತಾ ಭಾವವನ್ನು ಗುರುತಿಸಬಹುದು.

ಉತ್ತರಕನ್ನಡದ ನಿಲ್ಕುಂದ ಗ್ರಾಮದ ಕೃಷಿಕ ಸುಬ್ಬಣ್ಣ ಎಲ್. ಹೆಗ್ಡೆ. ಅವರ ಮನೆಯ ಪಕ್ಕದಲ್ಲಿರುವ ಚೌಡಿ ಕಾನನ್ನು ರಕ್ಷಿಸುವ ದೇವಿ ಚೌಡೇಶ್ವರಿ ಎನ್ನುತ್ತಾರೆ ಅವರು. ಇಂತಹ ಕಾನುಗಳು ಔಷಧೀಯ ಸಸ್ಯಗಳ ಖಜಾನೆಗಳು. ಸರ್ಪಗಂಧ (ಹಾವುಬೇರು ಗಿಡ, ರೌವೊಲ್ಫಿಯಾ ಸರ್ಪೆಂಟಿನಾ) ಮತ್ತು ಏಕನಾಯಕ ಇಂತಹ ಔಷಧೀಯ ಸಸ್ಯಗಳನ್ನು ಕಾನುಗಳಿಂದ ತೆಗೆದು ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಹುಕ್ಲಿಯ ಕರೆ ಒಕ್ಕಲಿಗರಲ್ಲಿಯೂ ಇದೇ ವಾಡಿಕೆ. ಅವರ ನಾಟಿವೈದ್ಯರಿಗೆ ಕಾನಿನಿಂದ ಔಷಧೀಯ ಸಸ್ಯ ತೆಗೆಯಲು ಅನುಮತಿ ಇದೆ.

“ನಮ್ಮ ಹಳ್ಳಿಯ ಕೊನೆಯ ಕೊಳ ಈ ಕಾನಿನಲ್ಲಿದೆ. ಉಳಿದ ಕೊಳಗಳನ್ನು ಇಲ್ಲಿಗೆ ಬಂದ ವಲಸಿಗರು ಅತಿಕ್ರಮಣ ಮಾಡಿದ್ದಾರೆ. ಆ ಕೊಳ ಉಳಿದರೆ ನಮ್ಮ ಬಾವಿ ಮತ್ತು ತೊರೆಗಳಲ್ಲಿ ನೀರು ಇರುತ್ತದೆ. ನಮ್ಮ ಅಡಿಕೆ ತೋಟ ಮತ್ತು ಭತ್ತದ ಗದ್ದೆಗಳಿಗೆ ನೀರಿಗೆ ಇವೇ ಆಧಾರ. ಹಾಗಾಗಿ, ಈ ಕಾನಿಗೆ ಯಾವುದೇ ತೊಂದರೆಯಾಗಲು ನಾವು ಬಿಡುವುದಿಲ್ಲ” ಎಂದು ಮಾಹಿತಿ ನೀಡುತ್ತಾರೆ ಸುಬ್ಬಣ್ಣ ಹೆಗ್ಡೆ.

ಅತ್ತ ಕೇರಳದ ಕೊಲ್ಲಂ ಜಿಲ್ಲೆಯ ಅಝೀಕಲ್ ಗ್ರಾಮದಲ್ಲಿಯೂ ಇದೇ ಕತೆ. ಅಲ್ಲಿ ಸುಮಾರು ಒಂದೆಕ್ರೆ ವಿಸ್ತೀರ್ಣದ ದೇವಕುಲನ್ಗರ ಕಾವನ್ನು ತಲೆತಲಾಂತರದಿಂದ ಸಂರಕ್ಷಿಸುತ್ತಿದೆ ಮೋಹನ ಪಿಳ್ಳೈ ಅವರ ಕುಟುಂಬ. ಅದರಲ್ಲಿವೆ ಎರಡು ಕೊಳಗಳು. ಆಳವಾದ ಕೊಳದಲ್ಲಿ ನೀರು ಯಾವತ್ತೂ ಬತ್ತುವುದಿಲ್ಲ.

ಪವಿತ್ರವನಗಳೆಂಬ ಪ್ರಕೃತಿಯ ಖಜಾನೆಗಳು
ಕಾನು ಅಥವಾ ಪವಿತ್ರವನಗಳು ಪೋಷಕಾಂಶಗಳ ಮರುಬಳಕೆ ಮತ್ತು ಮಣ್ಣಿನ ಸಂರಕ್ಷಣೆಗೆ ಸಹಾಯ ಮಾಡುತ್ತವೆ. ಜೊತೆಗೆ ಇವು ಜೀವವೈವಿಧ್ಯದ ಖಜಾನೆಗಳು. ಚೌಡಿ ಕಾನಿನ ಕೊಳದ ಪಕ್ಕದಲ್ಲಿ ಸೆಮೆಕಾರ್ಪಸ್ ಕತ್ಲೆಕಾನೆನ್ಸಿಸ್ ಎಂಬ ಸಸ್ಯದ ಸಸಿಯೊಂದು ಬೆಳೆಯುತ್ತಿದೆ; ಇಸವಿ ೨೦೦೦ದಲ್ಲಿ ಮೊದಲಬಾರಿ ಗುರುತಿಸಲಾದ, ತೀವ್ರ ಅಳಿವಿನಂಚಿನಲ್ಲಿರುವ ಈ ಸಸ್ಯದ ಕೇವಲ ೧೫೦ ಮರಗಳನ್ನು ಈ ವರೆಗೆ ಪತ್ತೆಹಚ್ಚಲಾಗಿದೆ.

ಕೇರಳದ ಒಂದು ಪವಿತ್ರವನದಲ್ಲಿ ಮರಗಳಿಗೆ ಹಬ್ಬುವ ಲೆಗ್ಯೂಮಿನ ಕುನ್ಸ್ಟೆಲೆರಿಯಾ ಕೇರಲೆನ್ಸಿಸ್ ಎಂಬ ಹೊಸ ಜೀನಸ್ ಮತ್ತು ಸ್ಪಿಷೀಸನ್ನು ಪತ್ತೆಹಚ್ಚಲಾಯಿತು. ತೀವ್ರ ಅಪಾಯದಂಚಿನಲ್ಲಿರುವ ಸೈಜಿಜಿಯಂ ಟ್ರಾವನ್ಕೊರಿಕಮ್ ಎಂಬ ಮರಗಳನ್ನೂ ಈಗ ಕೆಲವು ಕಾನುಗಳಲ್ಲಿ ಪತ್ತೆಹಚ್ಚಲಾಗಿದೆ.

ಕೊಡಗಿನಲ್ಲಿ ದೇವರಕಾಡುಗಳು ಅರಣ್ಯಪ್ರಾಣಿಗಳ ಉಳಿವಿನ ತಾಣಗಳಾಗಿವೆ. ತೀವ್ರ ಅಪಾಯದಂಚಿನಲ್ಲಿರುವ ಸಿಂಗಳೀಕಗಳ ಹಲವು ಕುಟುಂಬಗಳು ಕತ್ಲೆಕಾನಿನಲ್ಲಿವೆ. ದೊಡ್ಡ ಕಾನುಗಳು ಜೇನ್ನೊಣಗಳ ಆವಾಸಸ್ಥಾನಗಳು. ದೊಡ್ಡ ಏಷ್ಯನ್ ಜೇನ್ನೊಣಗಳು ಕೊಡಗಿನ ಆರ್ಥಿಕತೆಯ ಬೆನ್ನೆಲುಬಾದ ಕಾಫಿಗಿಡಗಳ ಪ್ರಧಾನ ಪರಾಗಸ್ಪರ್ಶ ಕೀಟಗಳು. ಚೌಡಿ ಕಾನಿನಲ್ಲಿ ಚಿರತೆ ಮತ್ತು ಕಾಳಿಂಗ ಸರ್ಪಗಳು ಕಾಣಸಿಗುವುದು ಸಾಮಾನ್ಯ. ಭಾರತೀಯ ಪ್ಯಾಂಗೋಲಿನ್ ಕೂಡ ಇಲ್ಲಿ ಕಾಣಸಿಕ್ಕಿತ್ತು ಎನ್ನುತ್ತಾರೆ ಸುಬ್ಬಣ್ಣ ಹೆಗ್ಡೆ.

ಪವಿತ್ರವನಗಳ ಅವನತಿ
ಪಶ್ಚಿಮಘಟ್ಟಗಳಲ್ಲಿ ಇರುವ ಪವಿತ್ರವನಗಳ ಸಮಗ್ರ ಅಧ್ಯಯನ ಇನ್ನೂ ಆಗಿಲ್ಲ. “ಅಲ್ಲಿರುವ ನೂರಾರು ಕಾನುಗಳ ದಾಖಲೀಕರಣ ಆಗಿಯೇ ಇಲ್ಲ. ಅವನ್ನೆಲ್ಲ ಅಧ್ಯಯನ ಮಾಡಲು ಒಬ್ಬನ ಜೀವಮಾನ ಬೇಕಾದೀತು” ಎನ್ನುತ್ತಾರೆ ಎಂ.ಡಿ. ಸುಭಾಷ ಚಂದ್ರನ್. ಅವರು, ಪವಿತ್ರವನಗಳನ್ನು ಅಧ್ಯಯನ ಮಾಡಿದ ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ  ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್ ಅದರ ವಿಜ್ನಾನಿ.

ಕೊಡಗು ಜಿಲ್ಲೆಯ ದಾಖಲೀಕರಿಸಿದ ದೇವರಕಾಡುಗಳ ಈಗಿನ ಸ್ಥಿತಿಗತಿಯನ್ನು ಸಂಶೋಧನಾಕಾರರು ಅಧ್ಯಯನ ಮಾಡಿದ್ದು ೨೦೧೪ರಲ್ಲಿ. ಅವರಿಗೆ ತಿಳಿದುಬಂದ ವಿಷಯಗಳು: ಹಲವು ದೇವರಕಾಡುಗಳ ವಿಸ್ತೀರ್ಣ ಕಡಿಮೆಯಾಗಿದೆ. ಸುಮಾರು ಶೇಕಡಾ ೩೦ರಷ್ಟು ದೇವರಕಾಡುಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಅಥವಾ ಅಲ್ಲಿ ಮರಗಳಿರಲಿಲ್ಲ.

ಕೇರಳದ ಫಾರೆಸ್ಟರ್ಸ್ ಸಂಸ್ಥೆ ಅಲ್ಲಿನ ಕಾವುಗಳ ಬಗ್ಗೆ ಅಧ್ಯಯನವೊಂದನ್ನು ಶುರು ಮಾಡಿದೆ. ಆರಂಭಿಕ ವರದಿಯ ಪ್ರಕಾರ ಅಲ್ಲಿನ ಆರು ಜಿಲ್ಲೆಗಳಲ್ಲಿರುವ ಕಾವುಗಳ ಸಂಖ್ಯೆ ೬,೮೯೭. ಉಳಿದ ಜಿಲ್ಲೆಗಳಲ್ಲಿ ದಾಖಲಾತಿ ನಡೆಯುತ್ತಿದೆ. “ಕುಟುಂಬಗಳ ಮಾಲೀಕತ್ವದ ಹಲವು ಕಾವುಗಳು ನಾಶವಾಗಲು ಕಾರಣಗಳು: ಹಳೆಯ ಸಾಂಸ್ಕೃತಿಕ ನಂಬಿಕೆಗಳಲ್ಲಿ ಈಗಿನ ತಲೆಮಾರಿನ ಯುವಜನರಿಗೆ ವಿಶ್ವಾಸ ಇಲ್ಲದಿರುವುದು ಮತ್ತು ಕಾವುಗಳ ಸಾಂಸ್ಕೃತಿಕ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳದ ಹೊರನಾಡಿಗರು ಕಾವುಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ವಲಸೆ ಬರುವುದು” ಎನ್ನುತ್ತಾರೆ ಸಿನು ಪಿ.ಎ., ಸಹಾಯಕ ಪ್ರಾಧ್ಯಾಪಕರು, ಕೇರಳ ಸೆಂಟ್ರಲ್ ವಿಶ್ವವಿದ್ಯಾಲಯ. ಪವಿತ್ರವನಗಳ ನಾಶಕ್ಕಾಗಿ ಕೇರಳದಲ್ಲಿ ಹೊಸ ಆಚರಣೆಗಳನ್ನೇ ಬಳಕೆಗೆ ತರಲಾಗಿದೆ ಎಂಬುದು ಆತಂಕದ ವಿಷಯ. ಉದಾಹರಣೆಗೆ, ಒಂದು ಮರವನ್ನು ಮಾತ್ರ ಕಾವಿನ ಪ್ರಾತಿನಿಧಿಕ ಮರವೆಂದು ಉಳಿಸಿ, ಉಳಿದ ಮರಗಳನ್ನು ಕಡಿಯುವುದು.

ಕೊಡಗು ಮತ್ತು ಮಹಾರಾಷ್ಟ್ರಗಳಲ್ಲಿ ಪವಿತ್ರವನಗಳ ಅವನತಿಗೆ ಬೇರೊಂದು ದಾರಿ. ಅಲ್ಲಿ ಕಾಡಿನೊಳಗಿನ ಹಲವು ಆರಾಧನಾ ಸ್ಥಳಗಳಲ್ಲಿ ದೇವಸ್ಥಾನಗಳನ್ನು ಕಟ್ಟಿ, ಅಲ್ಲಿಗೆ ರಸ್ತೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ವಾಹನಗಳ ಪಾರ್ಕಿಂಗಿಗಾಗಿಯೂ ವ್ಯವಸ್ಥೆ.

ಅದೇನಿದ್ದರೂ, ಕರೆ ಒಕ್ಕಲಿಗರಂತಹ ಕೆಲವು ಸಮುದಾಯಗಳು ತಮ್ಮ ನಂಬಿಕೆಗಳನ್ನು ಮುಂದುವರಿಸಿವೆ. ಅವರಿಗೆ ಪವಿತ್ರವನಗಳು ಹಾಗೂ ಅಲ್ಲಿರುವ ದೇವರುಗಳು ಎರಡೂ ಮುಖ್ಯ. ಇದುವೇ ಪವಿತ್ರವನಗಳ ಉಳಿವಿನ ಬಗ್ಗೆ ಭರವಸೆಗೆ ಕಾರಣ.
 
 

Comments