ಪ್ಲಿಪ್ಕಾರ್ಟನ‌ ಸಾಹಸಗಾಥೆ

ಪ್ಲಿಪ್ಕಾರ್ಟನ‌ ಸಾಹಸಗಾಥೆ

                    ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅಂತರ್ಜಾಲವು ಒಂದು. ನಮ್ಮ ದೈನಂದಿನ  ಅಗತ್ಯಗಳಿಗೆ ನಾವು ಅಂತರ್ಜಾಲವನ್ನು ಅವಲಂಬಿಸಿದ್ದೇವೆ.ಇಂತಹ ಅಂತರ್ಜಾಲದೊಂದಿಗೆ ಬೆಳೆದು ಬಂದ ಮತ್ತೊಂದು ಪದವೆ ಇ-ಮಾರುಕಟ್ಟೆ ಅಥವಾ e-commerce. ಇಂತಹ ಸಾಧ್ಯತೆಯನ್ನು  ಭಾರತದಲ್ಲಿ ತೆರೆದಿಟ್ಟ ಕೀರ್ತಿ ಪ್ಲಿಪ್ಕಾರ್ಟಗೆ ಸಲ್ಲುತ್ತದೆ.  www.flipkart.com ಎಂಬುವುದು ಇಂದು ಎಲ್ಲರಿಗೂ ಗೊತ್ತಿರುವ ಜಾಲತಾಣ.ನಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ನೆರವಾಗುವ ತಾಣ, ಇದರ ಸ್ಥಾಪಕರು ನಮ್ಮ ನಿಮ್ಮಂತೆ ಇರುವ ಯುವಕರು.

             ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಎಂಬ ಚಂಢಿಗಡ ಮೂಲದ ಗೆಳೆಯರು ದಿಲ್ಲಿ  ಐ.ಐ.ಟಿ ಯಲ್ಲಿ ಸಹಪಾಠಿಗಳಾಗಿದ್ದರು.2005ರಲ್ಲಿ ಪದವಿ ವ್ಯಾಸಂಗದ ನಂತರ ಇಬ್ಬರ ದಾರಿ ಬೇರೆ ಬೇರೆಯಾಯಿತು. 18 ತಿಂಗಳ ನಂತರ ಇಬ್ಬರು ಮತ್ತೆ ಅಮೆರಿಕ ಮೂಲದ ಆನ್ಲೈನ್ ಮಾರಾಟ ಸಂಸ್ಥೆ ಅಮೆಜಾನ್ ನಲ್ಲಿ ಜೊತೆಯಾದರು. ಇಲ್ಲಿ ಕಂಡುಕೊಂಡ ಕೆಲವು ಸಂಗತಿಗಳು ಅವರನ್ನು ಹೊಸದಾದ ಕಾರ್ಯಗಳಿಗೆ ಪ್ರೇರೇಪಿಸಿತು.ಅ ಸಮಯದಲ್ಲಿ ಭಾರತದ ಅಂತರ್ಜಾಲ ವ್ಯವಸ್ಥೆ ಇಷ್ಟು ಮುಂದುವರಿದಿರಲಿಲ್ಲ. ಅನ್ಲೈನ್ ಮಾರುಕಟ್ಟೆಯ ಬಗ್ಗೆ ಜನರಿಗೆ ತಿಳುವಳಿಕೆ ಇರಲಿಲ್ಲ. ಪಾವತಿಗೆ ಬೇಕಾಗುವ ಡೆಬಿಟ್,ಕ್ರೆಡಿಟ್ ಕಾರ್ಡ್ ನ್ನು ಜನ ಹೊಂದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇದರ ಬಗೆಗೆ ಜನರಲ್ಲಿ  ನಂಬಿಕೆ ಇರಲಿಲ್ಲ. ಏಕೆಂದರೆ ಭಾರತದ ಜನ ವಸ್ತುವನ್ನು ಕೊಳ್ಳುವ ಮುನ್ನ ಹಲವಾರು ಬಾರಿ ಪರೀಕ್ಷಿಸಿ ನೊಡುವಂತಹ ಮನಸ್ಥಿತಿ ಉಳ್ಳವರು.

 

               ಇಂತಹ ಸಮಯದಲ್ಲಿ ಈ ರಂಗಕ್ಕೆ ಇಳಿಯಲು ನಿರ್ಧರಿಸಿದ ನಂತರ 2007 ರ ಸೆಪ್ಟೆಂಬರ್  5ರಂದು  “ಪ್ಲಿಪ್ಕಾರ್ಟ” ಎಂಬ ಕಂಪೆನಿಯನ್ನು ಆರಂಭಿಸಿದರು. ತಮ್ಮ ದುಡಿಮೆಯ ಹಣ 4 ಲಕ್ಷ ರೂಪಾಯಿಗಳನ್ನು ಆರಂಭಿಕ ಬಂಡವಾಳವನ್ನಾಗಿ ತೊಡಗಿಸಿದರು. ಬೆಂಗಳೂರಿನ ಕೋರಂಮಂಗಲದಲ್ಲಿರುವ ತಮ್ಮ ಮನೆಯಲ್ಲಿ 2 ಕಂಪ್ಯೂಟರ್ ಗಳನಿಟ್ಟು 2007 ಅಕ್ಟೋಬರ್ 15 ರಂದು  www.flipkart.com  ಎಂಬ ನಾಮದ ಜಾಲತಾಣ ಆರಂಭಿಸಿದರು. ಆರಂಭದ ದಿನಗಳಲ್ಲಿ ಕೇವಲ ಪುಸ್ತಕಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ಏಕೆಂದರೆ ಪುಸ್ತಕಗಳ ಸಾಗಣಿಕೆ ಸುಲಭ ಹಾಗು ಬೆಲೆ ಕಡಿಮೆ ಇರುವುದು. ಬೆಂಗಳೂರಿನ ಚರ್ಚ್ ರಸ್ತೆ ಯ ಗಂಗರಾಂ ಪುಸ್ತಕ ಮಳಿಗೆಯ ಎದುರು ನಿಂತು ಪುಸ್ತಕ ಖರೀದಿಸಿ ಹೊರಬರುವ ಗ್ರಾಹಕರಿಗೆ ತಮ್ಮ ಜಾಲತಾಣದ ಬುಕ್ ಮಾರ್ಕ್ ನೀಡಿ ಪ್ರಚಾರ ಆರಂಭಿಸಿದರು. ತಾಣ ಆರಂಭವಾದ 10 ದಿನದ ನಂತರ ಜಾನ್ ವುಡ್ ಬರೆದ  “ಲಿವಿಂಗ್ ಮೈಕ್ರೊಸಾಪ್ಟ್ ಟು ಛೆಂಜ್ ದ ವಲ್ಡ್” ಎಂಬ ಪುಸ್ತಕ ಖರೀದಿಸಿದ ಆಂಧ್ರಪ್ರದೇಶದ ವಿ.ವಿ.ಕೆ ಚಂದ್ರ ಎಂಬವರು ಪ್ರಥಮ ಗ್ರಾಹಕರಾದರು.

             ಆರಂಭದ ದಿನಗಳು ಕಷ್ಟಕರವಾಗಿದ್ದವು, ಕ್ಲಪ್ತ ಸಮಯದಲ್ಲಿ ವಸ್ತುಗಳನ್ನು ಸಾಗಿಸಲು ಸಾಗಾಣಿಕ  ಜಾಲ ನಿರ್ಮಿಬೇಕಿತ್ತು. ಹಣ ಪಾವತಿಗೆ ಬೇಕಾದ ಸುರಕ್ಷಾಮಾರ್ಗ ಬೇಕಿತ್ತು . ಆಕ್ಸಿಸ್ ಬ್ಯಾಂಕ್ ಈ ಸೇವೆಯನ್ನು ನೀಡಲು ಮುಂದೆ ಬಂತು. ಹೆಚ್ಚಿನ ಗ್ರಾಹಕರಲ್ಲಿ ಡೆಬಿಟ್ ಕ್ರೆಡಿಟ್ ಕಾರ್ಡ್ ಇರಲಿಲ್ಲ. ಇದ್ದರೂ ಕೂಡ ನಂಬಿಕೆಯ ಕೊರತೆ ಇತ್ತು. ಗ್ರಾಹಕರ ವಿಶ್ವಾಸ ಗಳಿಸುವುದು ಹಾಗು ಉಳಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ತಂದ “ಕ್ಯಾಶ್ ಅನ್ ಡೆಲಿವಲಿ” ವ್ಯವಸ್ಥೆ ಭಾರತದಲ್ಲಿ  ಪ್ರಥಮವಾಗಿತ್ತು.ಹಾಗೂ ಜನಮನ್ನಣೆಯನ್ನು ಗಳಿಸಿತ್ತು.ಪ್ರಾರಂಭವಾದ ಆರು ತಿಂಗಳ ನಂತರ ದೇಶದ ಮೂರು ನಗರಗಳಲ್ಲಿ ತನ್ನ ಸೇವೆಯನ್ನು  ಆರಂಭಿಸಿದರು. ಹಣ ಪಾವತಿಗೆ ತನ್ನದೇ ಆದ “ಪೇಜಿಪ್ಪಿ” (payzippy) ಎಂಬ ವ್ಯವಸ್ಥೆ  ಸ್ಥಾಪಿಸಿದರು.  2009 ರಲ್ಲಿ ಎಸೆಲ್  ಇಂಡಿಯಾ  ೧ ಮಿಲಿಯನ್  ಡಾಲರ್  2011 ರಲ್ಲಿ ಟೈಗರ್ ಗ್ಲೊಬಲ್  30 ಮಿಲಿಯನ್  ಡಾಲರ್ ಹಣ ಹೂಡಿಕೆ ಮಾಡಿದವು. ಐ.ಐ.ಟಿ ಕರಗ್ ಪುರದ ಪದವಿಧರ ಅಮೋದ್ ಮಾಳವಿಯ ಕಂಪನಿಯ ಮುಖ್ಯ ಸಾಗಣಿಕ ಅಧಿಕಾರಿಯದರು.

                ನಂತರದ ದಿನಗಳಲ್ಲಿ ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಟಿವಿ,ಗೃಹಪಯೋಗಿ  ವಸ್ತು ಮೊದಲಾದವುಗಳನ್ನು ಮಾರಾಟ ಮಾಡಲು ಶುರು ಮಾಡಿದರು. ದೇಶದೆಲ್ಲೆಡೆ ಸಂಗ್ರಹಣ ಗೊದಾಮು ಸ್ಥಾಪಿಸಿ ಗ್ರಾಹಕರಿಗೆ 2-3 ದಿನದಲ್ಲಿ ಬಯಸಿದ ವಸ್ತು ಸಿಗುವಂತೆ ಮಾಡಿದರು.ಇಂದು ಪ್ಲಿಪ್ಕಾರ್ಟ್  ಪುರುಷ ಮಹಿಳೆ,ಮಕ್ಕಳು, ಗೃಹಪಯೋಗಿ, ಆರೋಗ್ಯ ಮುಂತಾದ ವಿಭಾಗದಲ್ಲಿ ಮಾರಾಟ ಮಾಡುತ್ತಿದೆ. ತಾನು ಇಚ್ಚೆಪಟ್ಟ ವಸ್ತುವನ್ನು ಇತರ ವಸ್ತುಗಳೊಂದಿಗೆ ಹೋಲಿಕೆ ಮಾಡಲು, ಅದರ ಸದ್ಯದ ಸ್ಥಿತಿಗತಿ (ಟ್ರ್ಯಾಕ್)ತಿಳಿಯಲು ಸಾಧ್ಯವಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್,ನೆಟ್ ಬ್ಯಾಂಕಿಂಗ್,ಇ-ಗಿಫ್ಟ್ ವೋಚೆರ್ , ಕ್ಯಾಶ್ ಅನ್ ಡೆಲಿವರಿ ಮೊದಲಾದ ಸೇವೆ ಯನ್ನು ಒದಗಿಸುತ್ತಿದೆ. ಭವಿಷ್ಯದಲ್ಲಿ ಮೊಬೈಲ್ ಹಾಗೂ ಅಂತರ್ಜಾಲದ ಸಂಖ್ಯೆ ಹೆಚ್ಚಾಗುವ ಲಕ್ಷಣ ಇರುವುದರಿಂದ 2013ರಲ್ಲಿ ಮೊಬೈಲ್ ಅಪ್ಲಿಕೇಶನ್ ಆರಂಭಿಸಿತು. ಇನ್ನೊಂದು ಅನ್ಲೈನ್ ಸಂಸ್ಥೆ “ಮೈಂತ್ರ ” (www.myntra.com) ವನ್ನು 2014 ರಲ್ಲಿ  ಕೊಂಡು ಕೊಂಡಿದೆ .ಫ್ಲಿಪ್ಕಾರ್ಟ್ ತನ್ನ  ಅನ್ಲೈನ್ ಮಾರುಕಟ್ಟೆಯ ನಿಜವಾದ ಸಾಮರ್ಥ್ಯವನ್ನು  2014 ಅಕ್ಟೋಬರ್   6 ರಂದು ತೋರಿಸಿತ್ತು ಅಂದು ಕೇವಲ 10 ಗಂಟೆಯಲ್ಲಿ 650 ಕೋಟಿ ರೂ. ವಸ್ತುಗಳನ್ನು ಮಾರುವ ಮೂಲಕ ಎಲ್ಲರ ಗಮನ ಸೆಳೆಯಿತು. ಅಂತೆಯೇ ಮಾಲ್ ಗಳ ಸರ್ಕಾರದ  ಹಾಗೂ ವರ್ತಕರ ಕೆಂಗಣ್ಣಿಗೆ ಗುರಿಯಾಯಿತು.

                           ಗ್ರಾಹಕರಿಗೆ ಉತ್ತಮವಾದ ವಸ್ತುಗಳು ಸುಲಭವಾಗಿ  ಸಿಗಬೇಕೆಂದು ಆರಂಭ ವಾದ ತಾಣ ಇಂದು 33000 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದೆ. ಕೋಟ್ಯಾಂತರ ಗ್ರಾಹಕರಿಗೆ ಸೇವೆ ಯನ್ನು ನೀಡಿದೆ. ಭಾರತದ ನಂ.1 ಆನ್ಲೈನ್ ಮಾರುಕಟ್ಟೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾನು ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿತಿದೆ. ಉತ್ತಮ ತಾಂತ್ರಿಕತೆ ಹಾಗೂ ಗ್ರಾಹಕ ಸ್ನೇಹಿ ಜಾಲತಾಣ ದ ಸಹಾಯದಿಂದ ಸೋಲಿನಿಂದ ಎದ್ದು ಬಂದಿದೆ. 2015 ರಲ್ಲಿ   2846 ಕೊ. ರೂ ಆದಾಯ ಗಳಿಸಿದೆ. ಪ್ರತಿಸ್ಪರ್ಧಿ ಕಂಪನಿಗಳಾದ ಇಬೇ ,ಅಮಜಾನ್, ಜಂಗ್ಲಿ, ಹೊಂಮ್ಶಾಪ್18  ಗಳಿಂದ ಕಠಿನ ಸ್ಪರ್ಧೆ ಎದುರಿಸುತ್ತಿದೆ.ಚೀನಾದ ಅನ್ಲೈನ್ ದೈತ್ಯ “ಅಲಿಬಾಬ” ದೊಂದಿಗೆ ಮಾರುಕಟ್ಟೆ ಪೈಪೋಟಿ  ನಡೆಸಲು ಸಜ್ಜಾಗಿದೆ. ಭಾರತದಲ್ಲಿ ಅಂತರ್ಜಾಲಕೆ ಉತ್ತಮ ಭವಿಷ್ಯ ಇರುವುದರಿಂದ ಹಾಗೂ ಡಿಜಿಟಲ್ ಇಂಡಿಯಾಕೆ ಸಜ್ಜಾಗಿರುವುದು, ಕಂಪನಿಯ ಭವಿಷ್ಯ ಚೆನ್ನಾಗಿರುವ ಸೂಚನೆ ಇದೆ. ತನ್ನ ಘೋಷವಾಕ್ಯ. “Flipping thing into your Kart” ದೊಂದಿಗೆ ರಾರಾಜಿಸಲಿದೆ. 

 

                                                                                                                        -Tharanatha  S N

 

Comments

Submitted by ravindra n angadi Mon, 08/24/2015 - 10:39

ತಾರಾನಾಥರವರಿಗೆ ನಮಸ್ಕಾರಗಳು,
“ಪ್ಲಿಪ್ಕಾರ್ಟ”ನ ಮಾಹಿತಿ ನೀಡಿ ಅದರ ಬಗೆಗಿನ ವಿವರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

Submitted by smurthygr Mon, 08/24/2015 - 18:37

ಫ್ಲಿಪ್ಕಾರ್ಟ್ ಖರೀದಿಸಿರುವ ಮಿಂತ್ರಾ ದಲ್ಲಿ ಕೇವಲ ಮೊಬೈಲ್ appನಲ್ಲಿ ಮಾತ್ರ ವ್ಯವಹರಿಸುವಂತೆ ಮಾಡಿರುವುದು ಕಷ್ಟದ ವಿಷಯ. ಈಗ ಫ್ಲಿಪ್‌ಕಾರ್ಟ್‌ನಲ್ಲೂ ಅದೇ ರೀತಿ ಮಾಡುತ್ತಾರೆ ಅನ್ನುವ ಸುದ್ದಿಯಿದೆ. ಆ ರೀತಿ ಆದರೆ ಹಲವಾರು ತಾಣಗಳನ್ನು ಹುಡುಕಿ ಖರೀದಿಸುವ ನಮ್ಮಂತಹ ಹೆಚ್ಚಾಗಿ desktopಅನ್ನೇ ಬಳಸುವವರಿಗೆ ನಿರಾಸೆಯಾಗಲಿದೆ, ಅದು ವ್ಯವಹಾರಕ್ಕೂ ಹಾನಿ ಮಾಡುವ ಸಾಧ್ಯತೆಯಿದೆ.