ಬಾಳಿನ ಹಾರರ್ ಕತೆಯನ್ನು ಸೋಲಿಸಿದ ಹಾರರ್ ಕಾದಂಬರಿಕಾರನ ಕತೆಯಿದು.

ಬಾಳಿನ ಹಾರರ್ ಕತೆಯನ್ನು ಸೋಲಿಸಿದ ಹಾರರ್ ಕಾದಂಬರಿಕಾರನ ಕತೆಯಿದು.

ಇತ್ತೀಚೆಗೆ ಬಿಡುಗಡೆಯಾದ ’ಇಟ್’ ಎನ್ನುವ ಆಂಗ್ಲ ಸಿನಿಮಾದ ಬಗ್ಗೆ ನೀವು ಕೇಳಿರಬಹುದು.2017ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ವಿಶ್ವದಾದ್ಯಂತ ಭಯಂಕರ ಸದ್ದು ಮಾಡಿತ್ತು.ಬಿಡುಗಡೆಯಾದ ಮೊದಲ ವಾರದಲ್ಲೇ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ದುಡ್ಡು ಬಾಚಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ವರ್ಷದ ಮೊದಲ ಇಂಗ್ಲಿಷ್ ಹಾರರ್ ಚಿತ್ರವಿದು.ವರ್ಷದ ಅತಿಹೆಚ್ಚು ಗಳಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಸಿನಿಮಾ ಗಳಿಕೆಯ ವಿಷಯದಲ್ಲಿ ಸಾರ್ವಕಾಲಿಕವಾಗಿ ಹಾರರ್ ಸಿನಿಮಾಗಳ ಪಟ್ಟಿಯ ಐದನೇಯ ಸ್ಥಾನಕ್ಕೆ ನಿಂತಿದೆ.ಸಾಮಾನ್ಯವಾಗಿ ಹಾಸ್ಯಕ್ಕೋ,ಅಪಹಾಸ್ಯಕ್ಕೋ ಬಳಕೆಯಾಗುವ ಸರ್ಕಸ್ಸಿನ ಜೋಕರ್‌‍ನನ್ನು ‍ಅತಿಮಾನುಷ ಶಕ್ತಿಯುಳ್ಳ ವಿಲಕ್ಷಣ ವ್ಯಕ್ತಿತ್ವದಂತೆ ಬಳಸಿಕೊಂಡು ಭಯಹುಟ್ಟಿಸುವ,ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತ ಒಂದು ಅಸಹನೀಯ ಶಾಂತತೆಯ ನಡುವೆಯೇ ಏಕಾಏಕಿ ನೋಡುಗರನ್ನು ಬೆಚ್ಚಿಬೀಳಿಸಿ ಬೆನ್ನ ಹುರಿಯಾಳದಲ್ಲೊಂದು ನಡುಕ ಹುಟ್ಟಿಸುವ ಸಿನಿಮಾದ ವಿಭಿನ್ನ ಶೈಲಿಯ ಕಥಾವಸ್ತುವೇ ಈ ಸಿನಿಮಾದ ಅದ್ಭುತ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. 1986ರಲ್ಲಿ ರಚಿತವಾದ ಇದೇ ಹೆಸರಿನ ಕಾದಂಬರಿಯನ್ನು ಸಿನಿಮಾವನ್ನಾಗಿಸಿ ಗೆಲುವು ಕಾಣುವಲ್ಲಿ ನಿರ್ದೇಶಕ ಆಂಡಿ ಮಶ್ಚಿಯಾಟಿ ಯಶಸ್ವಿಯಾಗಿದ್ದಾರೆ.ತೀರ ಹೀಗೆ ಜೋಕರ್‍‌ನಂತಹ ಹಾಸ್ಯರಸ ಪ್ರಧಾನ ಪಾತ್ರದಲ್ಲಿಯೂ ಭಯಾನಕತೆಯನ್ನು ಮೂಡಿಸಬಹುದೆನ್ನುವ ವಿಕ್ಷಿಪ್ತ ಸೃಜನಶೀಲ ಪರಿಕಲ್ಪನೆಯನ್ನು ಕಟ್ಟಿಕೊಟ್ಟವರಾದರೂ ಯಾರೆಂದು ಹುಡುಕುತ್ತ ಹೊರಟಾಗ ಸಿಕ್ಕ ಅಂಗ್ಲ ಸಾಹಿತಿಯ ಹೆಸರು ಸ್ಟೀಫನ್ ಕಿಂಗ್.ಈಗಾಗಲೇ ಇಂಗ್ಲೀಷ್ ಸಾಹಿತ್ಯಲೋಕದಲ್ಲಿ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಸ್ಟೀಫನ್ ಕಿಂಗ್‌ನ ಬದುಕಿನ ಕತೆಯೂ ಯಾವುದೇ ರೋಚಕ ಸಿನಿಮಾದ ಕತೆಗಿಂತಲೂ ಕಡಿಮೆಯೇನಲ್ಲವೆಂದರೆ ಅತಿಶಯೋಕ್ತಿಯಾಗಲಾರದು.

ಅಮೇರಿಕಾದ ಪೋರ್ಟ್‍ಲ್ಯಾಂಡಿನಲ್ಲಿ ಜನಿಸಿದ ಸ್ಟೀಫನ್ನನದ್ದು ಮೂಲತ: ಬಡ ಕುಟುಂಬ.ಅಪ್ಪ ಕೂಲಿಕಾರ್ಮಿಕನಾಗಿದ್ದರೆ ಅಮ್ಮ ಮನೆಯೊಡತಿ.ಅವನ ಕುಟುಂಬವನ್ನು ಕಿತ್ತು ತಿನ್ನುತ್ತಿದ್ದ ಬಡತನದ ಬಾಧೆ ಹೇಗಿತ್ತೆಂದರೆ ಅದೊಮ್ಮೆ ಸಿಗರೇಟು ತರುತ್ತೇನೆಂದು ಮನೆಯಿಂದ ಹೊರಕ್ಕೆ ಹೋದ ಅವರ ತಂದೆ ಪುನ: ಹಿಂದಿರುಗಲೇ ಇಲ್ಲ.ಹಾಗೆ ಸುಳ್ಳು ಹೇಳಿ ಕುಟುಂಬದಿಂದ ಅಪ್ಪ ಹೊರನಡೆದಾಗ ಸ್ಟೀಫನ್‌ನ ಅಮ್ಮನಿಗೆ ಇಬ್ಬರು ಮಕ್ಕಳು.ಗಂಡನ ಅನಿರೀಕ್ಷಿತ ಮೋಸದಿಂದ ಕಂಗಾಲಾಗಿದ್ದ ಅವನ ಅಮ್ಮ ನೆಲ್ಲಿಗೆ ಆಸ್ತಿಯಾಗಿ ಉಳಿದುಕೊಂಡಿದ್ದು ಗಂಡ ಮಾಡಿಟ್ಟಿದ್ದ ಅಪರಿಮಿತ ಸಾಲ ಮಾತ್ರ.ಅಂಥಹ ಋಣಬಾಧೆಯಿಂದ ಮುಕ್ತಳಾಗಲು ಆಕೆಗೆ ಕಂಡಕಂಡಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು.ಬದುಕಿನ ಅವಶ್ಯಕತೆಗಳಿಗಾಗಿ ಕೈಗೆ ಸಿಕ್ಕ ಸಣ್ಣಪುಟ್ಟ ಅರೆಕಾಲಿಕ ಉದ್ಯೋಗಗಳನ್ನೇ ನೆಚ್ಚಿಕೊಂಡಿದ್ದ ನೆಲ್ಲಿ ,ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಮಾತ್ರ ಸಾಕಷ್ಟು ಎಚ್ಚರವಹಿಸಿದ್ದಳು.ಮಕ್ಕಳು ಶಿಕ್ಷಿತರಾಗಿ ಗಟ್ಟಿಮುಟ್ಟಾದ ಬದುಕು ಕಟ್ಟಿಕೊಳ್ಳಲಿ ಎನ್ನುವ ಆಶಾಭಾವ ಆಕೆಯದ್ದು.

ಆದರೆ ಆಕೆ ಅದೇನೇ ಕಷ್ಟಪಟ್ಟರೂ ಕೈಗೆ ಸಿಗುತ್ತಿದ್ದ ಸಣ್ಣ ಉತ್ಪನ್ನದಲ್ಲಿ ಮೂರು ಜನರ ಬದುಕಿನ ನಿರ್ವಹಣೆ ಸುಲಭಸಾಧ್ಯವಾಗಿರಲಿಲ್ಲ.ಹಾಗಾಗಿ ಬಾಲ್ಯದಲ್ಲಿಯೇ ಸ್ಟೀಫನ್ ಅರೆಕಾಲಿಕ ಉದ್ಯೋಗಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಯಿತು.ಅರೆಕಾಲಿಕ ಉದ್ಯೋಗ ಹುಡುಕುತ್ತ ಹೊರಟವನ ಕೈಗೆ ಸಿಕ್ಕ ಮೊದಲ ಉದ್ಯೋಗ ಸ್ಮಶಾನ ನಿರ್ವಹಣೆಯದ್ದು.ಅದಾಗಲೇ ಮನದ ತುಂಬೆಲ್ಲ ಕತೆಗಾರನಾಗಬೇಕೆನ್ನುವ ಅದಮ್ಯ ಆಸೆಯನ್ನು ತುಂಬಿಕೊಂಡಿದ್ದ ಸ್ಟೀಫನ್‌ನಿಗೆ ಮೊದಲ ಬಾರಿಗೆ ಸ್ಮಶಾನವೂ ಒಂದು ಅತ್ಯದ್ಭುತ ಕಥಾವಸ್ತುವಾಗಿ ಗೋಚರಿಸಿತ್ತು.ಶವಸಂಸ್ಕಾರಕ್ಕೆ ಬರುವ ಜನರಿಗೆ ಸರಿಯಾದ ಸ್ಥಳವನ್ನು ಸೂಚಿಸುತ್ತ,ಶವಪೆಟ್ಟಿಗೆಗಳನ್ನು ಹೂಳಲು ಗುಂಡಿಗಳಿಲ್ಲದ ಸಂದರ್ಭಗಳಲ್ಲಿ ಸ್ವತ: ತಾನೇ ನಿಂತು ಗುಂಡಿಗಳನ್ನು ಅಗೆಯುತ್ತಿದ್ದ ಸ್ಟೀಫನ್,ಅಂಥದ್ದೊಂದು ಸಂದರ್ಭದಲ್ಲಿ ತಾನೊಬ್ಬ ಪ್ರಸಿದ್ಧ ಹಾರರ್ ಕತೆಗಾರನೇ ಆಗಬೇಕು ಎಂದು ನಿರ್ಧರಿಸಿಬಿಟ್ಟಿದ್ದ.ಗುಂಡಿ ಅಗೆತದ ಕೆಲಸದಿಂದ ಪ್ರೇರಿತನಾಗಿ ಆತ ಬರೆದಿದ್ದ ,’ಹದಿವಯಸ್ಸಿನ ಶವಚೋರ’ಎಂಬ ಮೊದಲ ಕತೆ ಹಲವಾರು ಪತ್ರಿಕೆಗಳಿಂದ ಸಾರಾಸಗಟಾಗಿ ತಿರಸ್ಕರಿಸಲ್ಪಟ್ಟಿತ್ತು.

ಆದರೆ ಸ್ಟೀಫನ್ ಬಡಪೆಟ್ಟಿಗೆ ಬಗ್ಗುವ ಆಸಾಮಿಯಾಗಿರಲಿಲ್ಲ.ಪ್ರತಿದಿನವೂ ತನಗೆ ತೋಚಿದ್ದನ್ನು ಬರೆಯುತ್ತ,ಬರೆದುದ್ದನ್ನು ತಿದ್ದುತ್ತ ತನ್ನ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಸತತ ಪ್ರಯತ್ನ ಮಾಡುತ್ತಲೇ ಇರುತ್ತಿದ್ದ.ಪ್ರೌಢಶಾಲೆಯ ಶಿಕ್ಷಣ ಮುಗಿಸಿ ಪದವಿಗಾಗಿ ಅಮೇರಿಕಾದ ಮೇಯ್ನ್ ವಿಶ್ವವಿದ್ಯಾಲಯ ಸೇರಿಕೊಂಡಿದ್ದ ಸ್ಟೀಫನ್,ಕಾಲೇಜಿನ ವೃತ್ತಪತ್ರಿಕೆಗೆ ಸಣ್ಣಪುಟ್ಟ ಬರಹಗಳನ್ನು ಆಗಾಗ ಬರೆಯುತ್ತಿದ್ದ.ಆದರೆ ಬರವಣಿಗೆ ಆತ್ಮತೃಪ್ತಿಯನ್ನು ನೀಡುತ್ತಿತ್ತಾಗಲಿ,ಹೊಟ್ಟೆ ತುಂಬಿಸುತ್ತಿರಲಿಲ್ಲ.ಹೊಟ್ಟೆ ಬಟ್ಟೆ ಕಟ್ಟಿ ಅಮ್ಮ ತಿಂಗಳಿಗೊಮ್ಮೆ ಕಳುಹಿಸುತ್ತಿದ್ದ ಐದು ಡಾಲರುಗಳು ಸಹ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು.ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿಯೇ ಗ್ರಂಥಪಾಲಕನ ಅರೆಕಾಲಿಕ ಉದ್ಯೋಗವನ್ನು ಗಳಿಸಿಕೊಂಡ ಸ್ಟೀಫನ್‍ನಿಗೆ ಅವನ ಪ್ರೇಯಸಿ ತಬಿತಾ ಸಿಕ್ಕಿದ್ದು ಅದೇ ಗ್ರಂಥಾಲಯದಲ್ಲಿ.ಪದವಿ ಮುಗಿಯುತ್ತಿದ್ದಂತೆಯೇ ಆಕೆಯನ್ನೇ ವಿವಾಹವಾದ ಅವನು ಟ್ರೈಲರ್ ಪಾರ್ಕ್ ಎನ್ನುವ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸಲಾರಂಭಿಸಿದ್ದ.

ಭಯಂಕರ ಕಷ್ಟದ ದಿನಗಳವು.ಇಂಗ್ಲೀಷ್ ಭಾಷೆಯನ್ನೇ ಪ್ರಧಾನ ವಿಷಯವಾಗಿಸಿ ಕಲಾ ಪದವಿಯನ್ನು ಹೊಂದಿದ್ದರೂ ವಿದ್ಯಾರ್ಹತೆ ತಕ್ಕ ಕೆಲಸ ಸ್ಟೀಫನ್‌ನಿಗೆ ಸಿಕ್ಕಿರಲಿಲ್ಲ.ಪುನ: ಪುನ: ಅರೆಕಾಲಿಕ ಉದ್ಯೋಗ ಮಾಡುವುದು ಅವನ ಬದುಕಿನ ಅನಿವಾರ್ಯತೆಗಳಲ್ಲೊಂದಾಗಿ ಹೋಗಿತ್ತು.ನಗರದ ದೊಡ್ಡ ದೊಡ್ಡ ಧೋಬಿಖಾನೆಗಳಲ್ಲಿ ಆತ ಅಗಸನಾಗಿ ಕಾರ್ಯ ನಿರ್ವಹಿಸಿದ್ದ.ಪಂಚತಾರಾ ಹೋಟೆಲ್ಲುಗಳ ಮುಂದೆ ದ್ವಾರಪಾಲಕನಾಗಿ,ಪೆಟ್ರೋಲ್ ಬಂಕುಗಳಲ್ಲಿ ಸಿಗುವ ಪುಡಿಗಾಸಿಗೋಸ್ಕರ ಪೆಟ್ರೋಲ್ ಹಾಕುವ ಹುಡುಗನಾಗಿ ಸಹ ಸ್ಟೀಫನ್ ನಿರ್ವಹಿಸಿದ್ದನೆಂದರೆ ನೀವು ನಂಬಬೇಕು.ಹಾಗೆ ಆತ ಪೆಟ್ರೋಲ್ ಬಂಕುಗಳಲ್ಲಿ ಕೆಲಸ ಮಾಡುತ್ತಿದ್ದರೆ ಅವನ ಮಡದಿ ಬಬಿತಾ ಬೇಕರಿಯೊಂದರಲ್ಲಿ ದುಡಿಯುತ್ತಿದ್ದಳು.ದಂಪತಿಗಳು ಅದೆಂಥಹ ದುಸ್ಥಿತಿಯಲ್ಲಿದ್ದರೆಂದರೆ ಶುಲ್ಕ ಪಾವತಿಸಿಲ್ಲವೆನ್ನುವ ಕಾರಣಕ್ಕೆ ಪದೇ ಪದೇ ಮನೆಯ ವಿದ್ಯುತ್ ಸಂಪರ್ಕ,ದೂರವಾಣಿಯ ಸಂಪರ್ಕ ಕಡಿತಗೊಳ್ಳುವುದು ಅವರಿಗೆ ಸರ್ವೇ ಸಾಮಾನ್ಯವೆಂಬಂತಾಗಿ ಹೋಗಿತ್ತು.ಇವೆಲ್ಲ ಕಷ್ಟಗಳ ನಡುವೆಯೂ ಸ್ಟೀಫನ್ ಬರವಣಿಗೆಯನ್ನು ಮಾತ್ರ ನಿಲ್ಲಿಸಿರಲಿಲ್ಲ.

ಹಾಗೊಂದು ಶೋಚನೀಯ ಬದುಕು ಬದುಕುತ್ತಿದ್ದ ಸಂದರ್ಭದಲ್ಲಿ ಹ್ಯಾಂಬ್ಡನ್ ಅಕಾಡಮಿಯ ಶಾಲೆಯೊಂದರಲ್ಲಿ ಇಂಗ್ಲೀಷ್ ಶಿಕ್ಷಕನ ಕೆಲಸ ಸಂಪಾದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸ್ಟೀಫನ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ.ಶಿಕ್ಷಕನಾಗಿ ಬರುತ್ತಿದ್ದ ಆದಾಯ ತೀರ ಹೆಚ್ಚಲ್ಲದಿದ್ದರೂ ಅವನ ಕುಟುಂಬದ ಉದರ ನಿರ್ವಹಣೆಗೆ ಸಾಕೆನ್ನುವಷ್ಟು ಸಂಬಳ ಅವನಿಗಿತ್ತು.ಹೊಸದಾಗಿ ಕೆಲಸಕ್ಕೆ ಸೇರಿಕೊಂಡವನೆನ್ನುವ ಕಾರಣಕ್ಕೆ ಸ್ಟೀಫನ್‌ನನ್ನು ಕೊಂಚ ಹೆಚ್ಚೇ ಎನ್ನಿಸುವಷ್ಟು ದುಡಿಸುತ್ತಿತ್ತು ಶಾಲಾ ಮಂಡಳಿ.ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳ ಪುಸ್ತಕಗಳನ್ನು ಪರಿಶೀಲಿಸುವ ಹೆಚ್ಚಿನ ಜವಾಬ್ದಾರಿಯನ್ನು ಸ್ಟೀಫನ್‌ನಿಗೆ ವಹಿಸಲಾಗಿತ್ತು. ಶಾಲಾ ಅವಧಿ ಮುಗಿದ ನಂತರ ಪ್ರತಿದಿನವೂ ವಿದ್ಯಾರ್ಥಿಗಳ ನೋಟುಪುಸ್ತಕಗಳನ್ನು ಪರಿಶೀಲಿಸಿ,ಮರುದಿನದ ಪಾಠಕ್ಕಾಗಿ ಟಿಪ್ಪಣಿಗಳನ್ನು ತಯಾರಿಸಿಟ್ಟುಕೊಂಡು ಮನೆಗೆ ತೆರಳುವಷ್ಟರಲ್ಲಿ ಸಂಜೆ ಮುಗಿದು ರಾತ್ರಿಯಾಗಿರುತ್ತಿತ್ತು.ಕಡಿಮೆ ಬಾಡಿಗೆಯೆನ್ನುವ ಕಾರಣಕ್ಕೆ ವಾಸವಿದ್ದ ಟ್ತ್ರೈಲರ್ ಪಾರ್ಕ್ ಭಯಂಕರ ಜನದಟ್ಟಣೆಯಿದ್ದ ಗೌಜು ಗದ್ದಲಗಳ ಪ್ರದೇಶವಾಗಿತ್ತು.ಅದಾಗಲೇ ತನ್ನ ಮೊದಲ ಕಾದಂಬರಿಯನ್ನು ಬರೆಯಲಾರಂಭಿಸಿದ್ದ ಸ್ಟೀಫನ್‌ನಿಗೆ ‍ಇದ್ದಲ್ಲಿಯೇ ಪ್ರಶಾಂತವಾದ ಸ್ಥಳವೊಂದನ್ನು ಕಂಡುಕೊಳ್ಳುವ ಅನಿವಾರ್ಯತೆಯಿತ್ತು.ಹಾಗಾಗಿ ರಾತ್ರಿಯ ಹೊತ್ತು ನಿರ್ಜನವಾಗಿರುತ್ತಿದ್ದ ಮನೆಯ ತಾರಸಿಯ ಮೇಲೆ ಮುರುಕು ಟೇಬಲ್ಲೊಂದರಲ್ಲಿ ಕುಳಿತು ಸಣ್ಣದ್ದೊಂದು ದೀಪದ ಬೆಳಕಿನ ಸಹಾಯದಿಂದ ಆತ ಕತೆ ಬರೆಯುತ್ತಿದ್ದ.ಖಡ್ಡಾಯವಾಗಿ ದಿನಕ್ಕೆ ಎರಡು ಗಂಟೆಗಳ ಕಾಲ ಬರೆಯುವುದು ಅವನೇ ರೂಢಿಸಿಕೊಂಡಿದ್ದ ಅಲಿಖಿತ ನಿಯಮವಾಗಿತ್ತು.

ಬದುಕಿನ ಕಷ್ಟಕಾರ್ಪಣ್ಯಗಳನ್ನೆಲ್ಲ ಮೀರಿ ನಿಂತು ತನ್ನ ಮೊದಲ ಕಾದಂಬರಿಯನ್ನು ಬರೆಯುವ ಹೊತ್ತಿಗೆ ಅವನಿಗೆ ಮೂವತ್ತೊಂಬತ್ತು ವರ್ಷ ವಯಸ್ಸು.ಜೀವನದ ಕಾಠಿಣ್ಯಗಳೆಲ್ಲವನ್ನು ಮೆಟ್ಟಿನಿಂತು ಕಾದಂಬರಿಯನ್ನೇನೋ ಸ್ಟೀಫನ್ ಬರೆದ.ಆದರೆ ಬರೆದ ನಂತರ ಕಾದಂಬರಿಯ ಪ್ರಕಟಣೆ ಅವನ ಮುಂದಿದ್ದ ಬಹುದೊಡ್ಡ ಸವಾಲಾಗಿತ್ತು.ಮುಕ್ಕಾಲುಪಾಲು ಪ್ರಕಾಶಕರು ಹೊಸಬನ್ನೆನ್ನುವ ಕಾರಣಕ್ಕೆ ಅವನ ಕಾದಂಬರಿಯ ಒಂದೇ ಒಂದು ಪುಟವನ್ನು ಸಹ ಓದದೇ ವಾಪಸ್ಸು ಕೊಟ್ಟಿದ್ದರು.ಓದಿದ ಬೆರಳೆಣಿಕೆಯಷ್ಟು ಪ್ರಕಾಶಕರು ಪುಸ್ತಕವನ್ನು ಪ್ರಕಟಿಸಲು ನಿರಾಕರಿಸಿಬಿಟ್ಟಿದ್ದರು.ಒಬ್ಬ ಪ್ರಕಾಶಕನನಂತೂ ,’ಇದೆಂಥಹ ಬಾಲಿಶ ಕತೆ..!! ಇಂಥಹ ಕೆಟ್ಟ ಕಾದಂಬರಿಯನ್ನು ನಾನು ಓದಿಯೇ ಇರಲಿಲ್ಲ.ನೀನು ಕಾದಂಬರಿಗಳನ್ನು ಬರೆಯದಿರುವುದೇ ಲೇಸು’ಎಂದು ಮುಖಕ್ಕೆ ಹೊಡೆದಂತೆ ನುಡಿದುಬಿಟ್ಟಿದ್ದ.ಸ್ಟೀಫನ್ನನಿಗೆ ಸಿಡಿಲು ಬಡಿದ ಅನುಭವ.ಸ್ವಂತಕ್ಕೆ ದುಡ್ಡು ಹಾಕಿ ಪುಸ್ತಕ ಪ್ರಕಟಿಸಿಕೊಳ್ಳುವುದಂತೂ ಸ್ಟೀಫನ್ನನ ಪಾಲಿಗೆ ಅಸಾಧ್ಯದ ಮಾತಾಗಿತ್ತು. ಸರಿ ಸುಮಾರು ಮೂವತ್ತು ಪ್ರಕಾಶಕರಿಂದ ತಿರಸ್ಕೃತನಾಗಿ ಸ್ಟೀಫನ್ ಅದೆಷ್ಟು ಬೇಸತ್ತಿದ್ದನೆಂದರೆ ,ಒಮ್ಮೆ ನಿರಾಸೆಯಿಂದ ಮನೆಗೆ ಬಂದವನು ಕೋಪದಿಂದ ಕಾದಂಬರಿಯ ಪ್ರತಿಯನ್ನು ಕಸದ ಬುಟ್ಟಿಗೆ ತುರುಕಿಬಿಟ್ಟಿದ್ದ.ಆದರೆ ಸಂಜೆಯ ಹೊತ್ತಿಗೆ ಅವನ ಮಡದಿ ತಬಿತಾ ಅದನ್ನು ಕಸದ ಬುಟ್ಟಿಯಿಂದೆತ್ತಿ ಅವನೆದುರು ತಂದಿಟ್ಟಿದ್ದಳು. ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದ ಅವನಲ್ಲಿ ಹೊಸದೊಂದು ವಿಶ್ವಾಸ ತುಂಬುವ ಪ್ರಯತ್ನ ಮಾಡಿದಳು.ಅವಳ ಒತ್ತಾಯಕ್ಕೆ ಮಣಿದ ಸ್ಟೀಫನ್ ಕೊನೆಯ ಬಾರಿಗೆನ್ನುವಂತೆ ಪ್ರಕಾಶಕರೊಬ್ಬರಿಗೆ ಅದನ್ನು ಕಳುಹಿಸಿದ್ದ.ಅರೆಮನಸ್ಸಿನಿಂದಲೇ ಪ್ರಕಾಶಕರಿಗೆ ಪುಸ್ತಕ ಕಳುಹಿಸಿಕೊಟ್ಟಿದ್ದ ಅವನು ಪುಸ್ತಕದ ಪ್ರಸಂಗವನ್ನು ಮರೆತೂ ಬಿಟ್ಟಿದ್ದ.

ಆದು 1974ರ ಮಾರ್ಚ ತಿಂಗಳು.ಎಂದಿನಂತೆ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಸ್ಟೀಫನ್ನನಿಗೆ ಹೊತ್ತಲ್ಲದ ಹೊತ್ತಿನಲ್ಲಿ ಕರೆಯೊಂದು ಬಂದಿತ್ತು.ಒಮ್ಮೆಯೂ ಶಾಲೆಗೆ ಕರೆ ಮಾಡದ ಪತ್ನಿ ಮೊದಲ ಬಾರಿ ಕರೆ ಮಾಡಿದಾಗ ಸ್ಟೀಫನ್ ನಿಜಕ್ಕೂ ಗಾಬರಿಯಾಗಿದ್ದ.ಅವನ ಮನಸ್ಸು ಬೇಡವಾದ ಕೇಡನ್ನು ಶಂಕಿಸಿತ್ತು.ಅವಸರವರಸವಾಗಿ ಆಫೀಸಿನ ಕೋಣೆಗೆ ಓಡಿ ತರಾತುರಿಯಲ್ಲಿ ಫೋನಿನ ರಿಸೀವರ್ ಎತ್ತಿ ನಡುಗುವ ಧ್ವನಿಯಲ್ಲಿ ’ಹಲೋ’ಎಂದರೆ ಆ ಕಡೆಯಿಂದ ತಬಿತಾಳ ಕಿಲಕಿಲ ನಗು ಕೇಳಿಸಿತ್ತು.’ಸ್ಟೀಫನ್ ನಿನಗೊಂದು ಸಂತಸ ಸುದ್ದಿ.ನಿನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರಾಗಿರುವ ಬಿಲ್ ಥಾಮ್ಸನ್ ಒಪ್ಪಿಕೊಂಡಿದ್ದಾರೆ.ಗೌರವಧನವಾಗಿ ಎರಡೂವರೆ ಸಾವಿರ ಡಾಲರ್ ಕೊಡಲು ಸಹ ಒಪ್ಪಿಕೊಂಡಿದ್ದಾರೆ’ಎಂದು ಅಕ್ಷರಶ; ಕಿರುಚುತ್ತಿದ್ದ ತಬಿತಾಳ ಧ್ವನಿಯಲ್ಲಿ ಅಪರಿಮಿತ ಸಂತಸ ಪ್ರತಿಫಲಿಸುತ್ತಿತ್ತು.ತಬಿತಾಳ ಮಾತು ಅರ್ಥವಾಗದವನಂತೇ ಕ್ಷಣಕಾಲ ರಿಸಿವರ್ ಹಿಡಿದು ಸುಮ್ಮನೇ ನಿಂತಿದ್ದ ಸ್ಟೀಫನ್ ,ಮರುಕ್ಷಣವೇ ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ದ.ವರ್ಷಗಟ್ಟಲೇ ಪಟ್ಟ ಪರಿಶ್ರಮ ಫಲ ನೀಡಿದ ಕ್ಷಣಕ್ಕೆ ಕಟ್ಟೆಯೊಡೆದ ಸಂತಸಕ್ಕೆ ಧುಮ್ಮಿಕ್ಕಿದ ಆನಂದಭಾಷ್ಪವದು.ಹಾಗೆ ಅವನು ಬಿಕ್ಕುತ್ತಿದ್ದರೇ, ಫೋನಿನಲ್ಲಿ ’ನೀನು ಗೆದ್ದೆ ಸ್ಟೀಫನ್,ಕೊನೆಗೂ ಗೆದ್ದೆ’ಎಂದು ನುಡಿಯುತ್ತಿದ್ದ ತಬಿತಾಳ ಧ್ವನಿಯೂ ಗದ್ಗದ.

ಅತಿಂದ್ರಿಯ ಶಕ್ತಿಗಳುಳ್ಳ ಕಾಲೇಜಿನ ದುರ್ಬಲ ದೇಹದ ಕುರೂಪಿ ಕನ್ಯೆಯೊಬ್ಬಳು ತನ್ನನ್ನು ಅವಮಾನಿಸುವ ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕಥವಸ್ತುವುಳ್ಳ ಸ್ಟೀಫನ್ ಕಿಂಗ್‍ನ ಮೊದಲ ಕಾದಂಬರಿ ’ಕ್ಯಾರಿ’ ಗೆದ್ದಿತ್ತು. ಆಂಗ್ಲ ಹಾರರ್ ಸಾಹಿತ್ಯ ಪ್ರಕಾರದಲ್ಲಿ ಹೊಸದೊಬ್ಬ ಲೇಖಕನ ಉದಯವಾಗಿತ್ತು.ಬರೊಬ್ಬರಿ ಮೂವತ್ತು ಸಾವಿರ ಪ್ರತಿಗಳಷ್ಟು ಮಾರಾಟವಾದ ’ಕ್ಯಾರಿ’ ಸ್ಟೀಫನ್‍ನಿಗೆ ಕೈ ತುಂಬ ಹಣ, ಪ್ರಪಂಚದ ತುಂಬ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.1976ರಲ್ಲಿ ಕ್ಯಾರಿಯನ್ನು ಆಧರಿಸಿ ಇಂಗ್ಲೀಷ್ ಸಿನಿಮಾವೊಂದು ನಿರ್ಮಾಣವಾಯಿತು.ಅದ್ಭುತ ಯಶಸ್ಸು ಕಂಡ ಕ್ಯಾರಿ ಸಿನಿಮಾದ ಗೆಲುವು ಕಿಂಗ್‍ನ ಬದುಕಿನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿತು.ಮುಂದೆ ಆತ ಮುಟ್ಟಿದ್ದೆಲ್ಲವೂ ಚಿನ್ನವೇ. ನಂತರ ಪ್ರಕಟವಾದ ಆತನ ಬಹುತೇಕ ಕಾದಂಬರಿಗಳು ಭಾರಿ ಗೆಲುವು ಕಂಡವು.ಅವನ ಕಾದಂಬರಿಗಳನ್ನಾಧರಿಸಿ ಒಂದರ ಹಿಂದೊಂದರಂತೆ ಸಿನಿಮಾಗಳು ನಿರ್ಮಾಣವಾದವು.ಬರವಣಿಗೆಗಾಗಿ ಸಾಲುಸಾಲು ಪ್ರಶಸ್ತಿಗಳು ಅವನನ್ನು ಹುಡುಕಿಬಂದವು.ಇಂದಿಗೂ ಸ್ಟೀಫನ್ ಕಿಂಗ್‍ನ ಕಾದಂಬರಿಗಳೆಂದರೆ ಅಭಿಮಾನಿಗಳಿಗೆ ರಸದೌತಣ.ಆನಲೈನ್ ಪುಸ್ತಕ ಮಾರುಕಟ್ಟೆಯಲ್ಲಿ ಪುಸ್ತಕ ಬಿಡುಗಡೆಗೂ ಆರು ತಿಂಗಳುಗಳ ಮುನ್ನವೇ ಅವನ ಕೃತಿಗಳನ್ನು ಮುಂಗಡ ಕಾಯ್ದಿರಿಸುವಿಕೆಗಾಗಿ ಬಿಡಲಾಗುತ್ತದೆ ಮತ್ತು ಹಾಗೆ ಕಾಯ್ದಿರಿಸುವಿಕೆಯ ಪ್ರಕ್ರಿಯೆಯಲ್ಲಿ ಸಾವಿರಾರು ಪ್ರತಿಗಳಿಗೆ ಬೇಡಿಕೆಯಿರುತ್ತದೆಂದರೆ ಅವನ ಖ್ಯಾತಿ ಇನ್ನೆಂಥದ್ದಿರಬೇಕು ಊಹಿಸಿ

ವಿಶ್ವ ಸಾರಸ್ವತ ಲೋಕದಲ್ಲಿ ,’ಹಾರರ್ ಕತೆಗಳ ರಾಜ’ಎಂದೇ ಜನಪ್ರಿಯನಾಗಿರುವ ಕಿಂಗ್ ಆರವತ್ತು ಕಾದಂಬರಿಗಳನ್ನು ಸೇರಿದಂತೆ ಸುಮಾರು ಎಂಬತೈದು ಕೃತಿಗಳನ್ನು ರಚಿಸಿದ್ದಾನೆ.ಒಂದು ಕಾಲಕ್ಕೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ಕಿಂಗ್‍ ಪ್ರಸ್ತುತಕ್ಕೆ ನಲ್ವತ್ತು ಕೋಟಿ ಡಾಲರುಗಳಷ್ಟು ಆಸ್ತಿಗೆ ಒಡೆಯ.ಬದುಕಿನ ಕಷ್ಟಗಳಿಗೆ ಮರುಗುತ್ತ ,ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದರೆ,ತಿರಸ್ಕಾರ,ಅವಮಾನಗಳಿಗೆ ಸೋತು ಹೋಗಿದ್ದ ಮನಸ್ಸನ್ನು ಹಿಡಿದೆತ್ತಿ ನಿಲ್ಲಿಸಿದಿದ್ದರೆ ಸ್ಟೀಫನ್ ಕಿಂಗ್‍ ಎನ್ನುವ ಬರಹಗಾರ ಅರಳುವ ಮುನ್ನವೇ ಮರೆಯಾಗಿ ಹೋಗಿರುತ್ತಿದ್ದ.ಅದಕ್ಕೆ ಅವಕಾಶವನ್ನೀಯದ ಕಿಂಗ್‍ನ ಇಚ್ಛಾಶಕ್ತಿ ಅವನನ್ನು ವಿಶ್ವವಿಜಯಿಯನ್ನಾಗಿಸಿತು.’ಪ್ರತಿಭೆಯನ್ನುವುದು ಅಡುಗೆ ಉಪ್ಪಿನಂಥದ್ದು.ಪರಿಶ್ರಮವೆನ್ನುವ ಅಡುಗೆಯೊಂದಿಗೆ ಅದನ್ನು ಬೆರೆಸದಿದ್ದರೆ ಬದುಕಿನಲ್ಲಿ ಯಶಸ್ಸಿನ ರುಚಿಯನ್ನು ಕಾಣುವುದು ಅಸಾಧ್ಯ’ಎಂದು ನುಡಿಯುವ ಕಿಂಗ್‍ನ ಬದುಕಿನ ಯಶೋಗಾಥೆ,ಬದುಕಿನ ಸಣ್ಣಸಣ್ಣ ವೈಫಲ್ಯಗಳೆದುರು ಸೋತು ನಿರಾಶರಾಗಿ ಕೈಚೆಲ್ಲಿದ ಅದೆಷ್ಟೋ ಜನರಿಗೆ ಆಶಾಕಿರಣವಾಗಿ ಗೋಚರಿಸುವುದಂತೂ ಸತ್ಯ.

Comments

Submitted by karababu Sun, 11/05/2017 - 10:42

ಲೇಖನ ತುಂಬಾ ಇಷ್ಟವಾಯಿತು. ಹಾರರ್ ಕತೆ ಕಾದಂಬರಿಗಳ ಅಭಿಮಾನಿಯಲ್ಲದಿದ್ದರೂ, ಈ ಹಾರರ್ ಕತೆಗಾರ ಸ್ಟೀಫನ್ ಕಿಂಗ್ ಬಗ್ಗೆ ತುಂಬಾ ಅಭಿಮಾನ ಪಡುವಂತಾಯಿತು. ನಿಮ್ಮ ನಿರೂಪಣಾ ಶೈಲಿ ಬಹಳ ಮೆಚ್ಚುಗೆಯಾಯಿತು. ರಮೇಶ ಬಾಬು.