ಬಿಳಿಮಣ್ಣಿನಲ್ಲಿ ಕಳಚೆಯ ಕೃಷಿಕರ ಜಲವಿಜ್ಞಾನ!

ಬಿಳಿಮಣ್ಣಿನಲ್ಲಿ ಕಳಚೆಯ ಕೃಷಿಕರ ಜಲವಿಜ್ಞಾನ!

ಉತ್ತರ ಕನ್ನಡದ ಕಾಳಿ ಕಣಿವೆಯಲ್ಲಿ ಕಳಚೆ ಎಂಬ ಊರು. ಸುತ್ತ ದಟ್ಟ ಕಾಡಿನ ಹಸಿರು ಕಳಸ, ಕಡಿದಾದ ಬೆಟ್ಟಗಳ ನಡುವಿನ ಕಣಿವೆ, ಗುಡ್ಡದ ಇಳಿಜಾರಿನಲ್ಲಿ ಕೃಷಿ ವಿಳಾಸ. “ಕಳಚೆಕಾಯಿ” ಊರಿಗೆ ಹೆಸರು ತಂದ ದೊಡ್ಡಗಾತ್ರದ ತೆಂಗಿನಕಾಯಿ ಇಲ್ಲಿನ ಮ್ಯಾಂಗನೀಸ್ ಮಣ್ಣಿನ ಫಲ. ಬಹುಶಃ ಈ ಗಾತ್ರದ ತೆಂಗು ಕುಮಟಾದ ಯಾಣ ಬಿಟ್ಟರೆ ಬೇರೆಲ್ಲೂ ಕಾಣಲಿಕ್ಕಿಲ್ಲ. ಅಡಿಕೆ, ಬಾಳೆ, ಕಾಳುಮೆಣಸು ಬೆಳೆಯುವ ಇಲ್ಲಿ ಕಾಡು ನೀರಿನ ಮೂಲ. ಗುಡ್ಡದಿಂದ ಅಸರಿ (ಒರತೆ) ಬರುವ ನೀರನ್ನು ಹೊಂಡ, ಕೆರೆಗಳಲ್ಲಿ ಶೇಖರಿಸಿ ನೀರಾವರಿಗೆ ಬಳಕೆ, ಪ್ರತಿ ತೋಟದ ಮೇಲ್ಭಾಗದ ಚಿಕ್ಕಪುಟ್ಟ ರಚನೆ ಗಮನಿಸಿದರೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕೆರೆಗಳಿವೆ. ಗುಡ್ಡದ ಅಂಚಿನ ಅಸರು ಜಲ ಹಿಡಿದು ಕೃಷಿಗೆ ಒದಗಿಸುವ ಜಲ ಪಾತ್ರೆಗಳವು. ಶತಮಾನಗಳಿಂದ ಕೃಷಿ ಬದುಕು ನಂಬಿದ ಇಡೀ ಗ್ರಾಮಕ್ಕೆ ಸರಕಾರಿ ಕೆರೆ ಇಲ್ಲ, ಎಲ್ಲವೂ ಸ್ವತಃ ಕೃಷಿಕರು ತೋಟದ ನಡುವೆ ರಚಿಸಿದ ಖಾಸಗಿ ಕೆರೆಗಳು! ಇವು ಊರಿನ ಜೀವಾಳ
 

ಕಳಚೆಯಲ್ಲಿ ಕೆರೆ ನಿರ್ವಹಣೆ, ನೀರು ಬಳಕೆ, ಹೂಳು ತೆಗೆಯುವ ಕಾರ್ಯಗಳನ್ನು ಹಳ್ಳಿಗರು ನಿಭಾಯಿಸುತ್ತಾರೆ. ಹೂಳು ತೆಗೆಯಲು ವಿಶ್ವಾಬ್ಯಾಂಕ್‌ ಸಹಾಯವಿಲ್ಲ. ಸಮುದಾಯ ನೇತೃತ್ವದ ತರಬೇತಿಗೆ ಹಣ ಖರ್ಚು ಮಾಡುವ ಪ್ರಮೇಯವಿಲ್ಲದೆ ಇಲ್ಲಿನ ಪರಿಸರ ಕೆರೆ ಉಳಿಸುವ ಅನನ್ಯ ಮಾದರಿ ಹೇಳಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಇಲ್ಲಿ ಅಂತರ್ಜಲವಿಲ್ಲ. ಮಳೆಗಾಲದಲ್ಲಿ ಕಾಡಿನಲ್ಲಿ ಇಂಗಿದ ನೀರು ಗುಡ್ಡದ ಒಳಗಡೆಯಿಂದ ಹನಿಹನಿಯಾಗಿ ಜಿನುಗಿ ನಿಧಾನಕ್ಕೆ ಇಳಿಜಾರಿಗುಂಟ ವರ್ಷವಿಡೀ ಅಸರುತ್ತದೆ. ಇವನ್ನು ಹಿಡಿಯಲು ಗುಡ್ಡದ ವಿವಿಧ ಎತ್ತರದ ಸೂಕ್ತ  ಎಲೆಯಲ್ಲಿ ಹೊಂಡ, ಕೆರೆ ನಿರ್ಮಾಣ. ಕಲ್ಲು ಹರಳುಮಿಶ್ರಿತ ಮಣ್ಣಿನಲ್ಲಿ ಕೆರೆದಂಡೆ ರೂಪಿಸಿ ನೀರು ನಿಲ್ಲಿಸುವುದು ಸುಲಭವಲ್ಲ. 4-5 ಅಡಿ ಅಗೆದರೆ ನೀರು ದೊರೆಯುತ್ತದೆ. ಅದನ್ನು ಕೆರೆಯಲ್ಲಿ ಶೇಖರಿಸಲು ಪ್ರಯತ್ನಿಸಿದರೆ ಇಳಿಜಾರಿನ ಕೆರೆದಂಡೆಯಲ್ಲಿ ನೀರು ಸೋಸಿ ನಾಪತ್ತೆ!ಇನ್ನು ಮಳೆಗಾಲದಲ್ಲಿ 3500ಮಿಲಿ ಮೀಟರ್‌ ಅಬ್ಬರದ ಮಳೆ, ಗುಡ್ಡದ ತುದಿಯಿಂದ ನೀರು ಹರಿಯುವಾಗ ಅಪಾರ ಮಣ್ಣು ಸವಕಳಿ. ಪರಿಣಾಮ ಕೆರೆಗೆ ಹೂಳು ಜಮಾ.
 

ಕಳಚೆಯಲ್ಲಿ ಕೆರೆ ಕಟ್ಟಿದವರು ಜಲಸಂರಕ್ಷಣೆಗೆ ಕಾಂಕ್ರೀಟ್ ಕಲ್ಪನೆಯ ಆಚೆಯ ದೇಸೀ ಮಾರ್ಗ ಸಾರಿದವರು. ಮಳೆಗಾಲ ಮುಗಿದು ನವೆಂಬರ್‌ ಬಂದಾಗ ಕೆರೆ ಹೂಳು ತೆಗೆಯುವುದು ಕಡ್ಡಾಯ ಮನೆಗೆ ಒಬ್ಬರಂತೆ ಬಂದು ಕೆರೆ ಸ್ವಚ್ಛಗೊಳಿಸುವ ಸಂಪೂರ್ಣ ಖಾಲಿ ಮಾಡುವರು. ಈಗ ಕೆರೆ ಬತ್ತಿ ಒಣಗುತ್ತದೆ. ಮೂರು ನಾಲ್ಕು ದಿನಗಳಲ್ಲಿ ಒಣಗಿದ ಬಳಿಕ ‘ಬಿಳಿಮಣ್ಣು ’ ಎಂಬ ಸ್ಥಳೀಯವಾಗಿ ದೊರಕುವ ಮಣ್ಣು ತಂದು ಗೋಡೆಗೆ ಕಾಂಕ್ರೀಟ್‌ ಲೇಪಿಸಿದಂತೆ ಕೆರೆಯ ದಂಡೆಯ ಒಳಪಾರ್ಶ್ವದಲ್ಲಿ ಸಾರಿಸುವರು. ಈಗ ಕೆರೆಯ ಒಳದಂಡೆ ಮನೆಯ ಮಣ್ಣಿನ ಗೋಡೆಯಂತೆ ಶಿಸ್ತು ಸ್ವರೂಪ. ದಂಡೆಯ ಬಿಳಿಮಣ್ಣು ಒಣಗಿದ ಬಳಿಕ ಕೆರೆ ತಳದಲ್ಲಿನ ತೂಬು ಮುಚ್ಚಿದರೆ ನಿಧಾನಕ್ಕೆ ಕೆರೆಯಲ್ಲಿ ನೀರು ಶೇಖರಣೆ. ಬಿಳಿಮಣ್ಣು ಲೇಪಿಸಿದ ಸರಳ ಕಾರಣಕ್ಕೆ ಇಳಿಜಾರಿನ ಕೆರೆದಂಡೆಯಲ್ಲಿ ನೀರು ಸೋರುವುದು ನಿಲ್ಲುತ್ತದೆ! ಮಣ್ಣಿನ ರಚನೆಗೆ ಬರೋಬ್ಬರಿ ಒಂದು ಬೇಸಿಗೆ ಭರ್ತಿ ನಿರ್ಮಾಣ ಗ್ಯಾರಂಟಿ! ಹೂಳು ತೆಗೆಯುವುದು, ಕಾಲುವೆ ದುರಸ್ತಿ, ಬಿಳಿಮಣ್ಣು ಲೇಪನ ಕಾರ್ಯಗಳನ್ನು ಪ್ರತಿವರ್ಷ  ತಪ್ಪದೆ ಮಾಡಬೇಕು. ಹೀಗಾಗಿ ನವೆಂಬರ್‌ ಎಂದರೆ ಕಳಚೆಯ ಕೃಷಿಕರಿಗೆ ಜಲಮಾಸ! ಹುಳಸೆಕಂಡಿ ಕೆರೆ, ಅಮಡೆ ಕೆರೆ, ಸಂಪಿಗೆ ಕಟ್ಟಿನ ಕೆರೆ, ಉಪ್ಪಾಳಿ ಕೆರೆ, ಶಶಿ ಕೆರೆ, ಅಬ್ಬಿಕೆರೆ, ದುಪ್ಪಾನ್ ಕೆರೆ, ಕೆರೆತೋಟದ ಕೆರೆ, ಮಾವಿನ ಕೆರೆ ಹೀಗೆ ಪ್ರತಿ ಕೆರೆಗೂ ಇಲ್ಲಿ ಹೆಸರುಗಳಿವೆ. ಕೆರೆ ಬಳಕೆದಾರರ ಪಟ್ಟಿಯಿದೆ. ಇದರಲ್ಲಿ ಹುಳಸೆಕಂಡಿ ಕೆರೆ ಗ್ರಾಮದ ಅತ್ಯಂತ ದೊಡ್ಡ ಕೆರೆ. ಇದನ್ನು 25-30 ಕೃಷಿಕ ಕುಟುಂಬಗಳು ನಿರ್ವಹಿಸಿ ಬಳಸುತ್ತವೆ. ಇನ್ನುಳಿದವನ್ನು 4-5 ಕೃಷಿ ಕುಟುಂಬಗಳು ಪರಸ್ಪರ ಸಹಕಾರಿದಿಂದ ಹೂಳು ತೆಗೆದು ಬಿಳಿಮಣ್ಣು ಸಾರಿಸುತ್ತ ಉಳಿಸಿಕೊಂಡಿವೆ. ಇಲ್ಲಿ ಇನ್ನೊಂದು ವಿಶೇಷ ಗಮನಿಸಬೇಕು. ಎಷ್ಟೋ ಸಂದರ್ಭದಲ್ಲಿ ಕೆರೆ ಇರುವ ಭೂಮಿಯ ಮಾಲಿಕನಿಗೆ ಆ ಕೆರೆಯ ನೀರು ದೊರೆಯುವುದು ತೀರ ಕಡಿಮೆ. ಇಳಿಜಾರುಗುಂಟೆ ನೀರು ಹರಿಯುವಾಗ ಅದು ಯಾರ ತೋಟಕ್ಕೆ ಹರಿಯುತ್ತದೋ ಅವರು ಬಳಸುವುದು ಸಹಜ. ಹಾಗಂತ ಕೆರೆ ತಮಗೆ ಉಪಯುಕ್ತವಿಲ್ಲವೆಂದು ಯಾವ ಕೃಷಿಕರೂ ಕೆರೆ ಒತ್ತುವರಿ ಮಾಡುವುದು, ತೋಟ ವಿಸ್ತರಿಸಿ ನಾಶ ಮಾಡುವುದಿಲ್ಲ, ತಕರಾರು ತೆಗೆಯುವುದಿಲ್ಲ! ಏಕೆಂದರೆ ಹಾಗೊಮ್ಮೆ ವ್ಯಾಜ್ಯ ಶುರುವಾದರೆ ಇವರ ತೋಟಕ್ಕೆ ನೀರು ನೀಡುವ ಮೇಲ್ಭಾಗದ ಇನ್ನೋಂದು ಕೆರೆಯ ಮಾಲಿಕ ಕೆರೆ ನೀರು ನೀಡಲು ನಿರಾಕರಿಸಬಹುದು! ಕೆರೆ ಕೆರೆಯ ನಡುವಿನ ಪರಸ್ಪರ ಸಂಬಂಧಗಳು
 
 ಅನ್ಯೋನ್ಯವಾಗಿರುವಂತೆಯೂ, ಅವು ಪರಸ್ಪರ ಕೃಷಿಕ ಕುಟಂಬಗಳನ್ನು ಜೋಡಿಸುವಂತೆಯೂ ಶತಮಾನಗಳ ಹಿಂದೆ ಕಳೆಚೆಯಲ್ಲಿ ಅದ್ಭುತ ಮಾದರಿ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಇಲ್ಲಿನ ಸುಮಾರು 140 ಮನೆಗಳ 350 ಎಕರೆ ಅಡಿಕೆ ತೋಟ ಈ ಕೆರೆ ಕಾಯುವ ಕೌತುಕದ ತಂತ್ರದಿಂದ ಹಸಿರಾಡುತ್ತಿದೆ. ಕೆರೆಯಲ್ಲಿ ನೀರು ತುಂಬಿದ ಬಳಿಕ ತೋಟಗಳಿಗೆ ಮಣ್ಣಿನ ಕಾಲುವೆಗಳ ಮೂಲಕ ನೀರು ಹರಿಸುವುದು ಹಿಂದಿನ ಪದ್ಧತಿ. ಆಗ ತೋಟಕ್ಕೆ ಹರಿಯುವ ನೀರಿಗಿಂತ ಕಾಲುವೆಯಲ್ಲಿ ಇಂಗುವ ನೀರು ಹರಿಸುವುದು ಹಿಂದಿನ ಪದ್ಧತಿ ಆಗ ತೋಟಕ್ಕೆ ಹರಿಯುವ ನೀರಿಗಿಂತ ಕಾಲುವೆಯಲ್ಲಿ ಇಂಗುವ ನೀರು ಜಾಸ್ತಿಯೆಂದು ಕ್ರಮೇಣ ಪೈಪ್‌ ಅಳವಡಿಕೆ ಆರಂಭವಾಯಿತು . ಇದರಿಂದ ತೋಟಗಳಿಗೆ ಬೇಗ ನೀರು ನೀಡುವುದು ಸಾಧ್ಯವಾಯಿತು. ಕ್ಷೇತ್ರ ವಿಸ್ತರಣೆಯಾಯಿತು. ಆದರೆ ಈಗ ಬೇಗ ತೋಟ ಒಣಗುತ್ತಿದೆ, ಕೆರೆ ಭರ್ತಿಗೆ ಸಾಕಷ್ಟು ಸಮಯ ಬೇಕಾಗುತ್ತಿದೆ. ನೀರು ಮಣ್ಣಿನ ಕಾಲುವೆಯಲ್ಲಿ ಹರಿದಾಗ ಅದು ಪ್ರದೇಶದ ಇಡೀ ಭೂಮಿ ತಂಪಾಗಿಸುವ ಕೆಲಸ ಮಾಡುತ್ತಿತ್ತು. ನಿಧಾನಕ್ಕೆ ನೀರು ಹರಿಯುವುದರಿಂದ ಕೃಷಿಗೂ ಅನುಕೂಲವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ದಟ್ಟಣೆಯೂ ಕಡಿಮೆಯಾಗಿರುವುದರಿಂದ ನೀರಿನ ಸಮಸ್ಯೆಗಳು ಊರನ್ನು ಕಾಡುತ್ತಿವೆ. ಕೆರೆ ಹೂಳು ತೆಗೆಯುವ ಕೆಲಸ ಈಗಲೂ ಸ್ವತಃ ಕೃಷಿಕರು ಮಾಡುತ್ತಾರೆ, ಆದರೆ ಪ್ರತಿವರ್ಷ ಬಿಳಿಮಣ್ಣು ಲೇಪನ ಕೆಲಸ ಸಮಸ್ಯೆಯಾಗಿದೆ. ಪರಿಣಾಮ ಈಗ ಕಾಂಕ್ರೀಟ್‌ ಲೇಪನ ಶುರುವಾಗಿದೆ. ದುಪ್ಪಲ್‌ಕೆರೆ, ಹುಣಸೆಕಂಡಿ ಕೆರೆ ಸೇರಿದಂತೆ ಕೆಲವು ಕೆರೆಗಳು ವಿವಿಧ ಇಲಾಖೆಗಳ ಸಹಕಾರದಿಂದ ಆಧುನೀಕರಣ ಗೊಂಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಭಾಗ್ವತ್ ಕಳಚೆ ಹೇಳುತ್ತಾರೆ. ಪರಿವರ್ತನೆ ಸಹಜ ನಿಯಮ, ಗುಡ್ಡದ ಇಳಿಜಾರಿನಲ್ಲಿ ಕೆರೆ ನಿರ್ಮಿಸಿ ಬಿಳಿಮಣ್ಣಿನ ಲೇಪನದಲ್ಲಿ ನೀರುಳಿಸಿ ಕೃಷಿ ಸಾಧ್ಯತೆಯನ್ನು ಕಳಚೆ ಸಾಕಾರಗೊಳಿಸಿದೆ. ಆದರೆ ಇಲ್ಲಿ ಈಗ ನೀರಷ್ಟೇ ಅಲ್ಲ ಊರು ಬದಲಾಗುತ್ತಿದೆ. ಮನೆಮನೆಗಳಿಂದ ಎಳೆಯ ತಲೆಮಾರು ನಗರಕ್ಕೆ ಓಡಿದೆ. ಯುವಕರು ಖಾಲಿಯಾಗಿದ್ದಾರೆ. ಬಿಳಿಮಣ್ಣು ಲೇಪಿಸಿ ಕೆರೆಗಳಲ್ಲಿ ಮತ್ತೆ ನೀರು ಉಳಿಸಬಹುದು, ಕೃಷಿ ಬೆಳಸಬಹುದು. ಆದರೆ ಊರ ಮಕ್ಕಳನ್ನು ಇಲ್ಲಿ ಉಳಿಸುವುದು ಹೇಗೆ? 
 
“ಬದುಕಿನ ಭರಾಟೆಯಲ್ಲಿ ಹಲವರು “ಮಿಸ್” ಮಾಡಿಕೊಂಡ ನೆಲಮೂಲ ವಿಚಾರಗಳ ಬಗೆಗಿನ  ಅಂಕಣ“.
ಆಕರ: ಅಡಿಕೆ ಪತ್ರಿಕೆ.
 
(ಚಿತ್ರ ಕೃಪೆ : ಗೂಗಲ್)