ಭೀಕರ ನೆರೆ ಪ್ರಕೋಪ: ಪ್ರಕೃತಿಯ ಪಾಠ

ಭೀಕರ ನೆರೆ ಪ್ರಕೋಪ: ಪ್ರಕೃತಿಯ ಪಾಠ

ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕೋಪದಿಂದ ತತ್ತರ; ನೂರಾರು ಜನರು ನೆರೆಗೆ ಬಲಿ; ಹಲವಾರು ದಿನಗಳು ದಿಕ್ಕೆಟ್ಟು ಹೋದ ಜನಜೀವನ. ಈ ಪ್ರದೇಶಗಳು ಸುರಕ್ಷಿತವಲ್ಲ ಎಂದು ಪ್ರಕೃತಿ ಎಚ್ಚರಿಸುತ್ತಲೇ ಇದೆ.
ನೆದರ್ಲ್ಯಾಂಡಿನ ರೊಟ್ಟೆರ್ಡ್ಯಾಂ ನಗರದ ಶೇಕಡಾ ೯೦ ಭಾಗ ಸಮುದ್ರಮಟ್ಟದಿಂದ ಕೆಳಗಿದೆ. ಅದಕ್ಕೆ ಹೋಲಿಸಿದಾಗ, ಚೆನ್ನೈ, ಮುಂಬೈ, ಮತ್ತು ಕೊಲ್ಕತಾ ನಗರಗಳು ಸಮುದ್ರಮಟ್ಟದಲ್ಲಿವೆ ಅಥವಾ ಅದಕ್ಕಿಂತ ಮೇಲ್ಮಟ್ಟದಲ್ಲಿವೆ. ಆದರೂ, ಈ ಮೂರು ಮಹಾನಗರಗಳಿಗಿಂತ ರೊಟ್ಟೆರ್ಡಾಂ ಹೆಚ್ಚು ಸುರಕ್ಷಿತ.
ಯಾಕೆ? ರೊಟ್ಟೆರ್ಡಾಂನ ಸಮುದ್ರ ತೀರದ ಉದ್ದಕ್ಕೂ ಸ್ಮಾರ್ಟ್ ಡೈಕುಗಳ ಮತ್ತು ಕಂಪ್ಯೂಟರ್ ನಿಯಂತ್ರಿತ ತೇಲಾಡುವ ಹಲಗೆಗಳ ಜಾಲವಿದೆ. ಛಲವಾದಿ ಡಚ್ ಜನರು ನಿರ್ಮಿಸಿದ ಈ ಸಾಧನಗಳು, ಬಂದರ್ ನಗರವಾದ ರೊಟ್ಟೆರ್ಡಾಂಗೆ ಸಮುದ್ರದ ಅಲೆಗಳು ನುಗ್ಗದಂತೆ ತಡೆಯುತ್ತವೆ. ಆದರೆ ಚೆನ್ನೈ, ಮುಂಬೈ ಅಥವಾ ಬೆಂಗಳೂರಿನಲ್ಲಿ ಎಡೆಬಿಡದೆ ಮಳೆ ಸುರಿದಾಗೆಲ್ಲ ಮಳೆನೀರು ಹೊರ ಹರಿಯುವ ತೋಡುಗಳ ಜಾಲ ಸೋಲುತ್ತದೆ; ಈ ನಗರಗಳ ಬಹುಭಾಗದಲ್ಲಿ ನೆರೆನೀರು ಏರುತ್ತದೆ. ೨೦೧೫ರ ನವೆಂಬರ್ ಕೊನೆಯ ಹಾಗೂ ಡಿಸೆಂಬರಿನ ಆರಂಭದ ದಿನಗಳಲ್ಲಿ ಚೆನ್ನೈಯ ಹಲವು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಿದ ಭಯಾನಕ ನೆನಪುಗಳಿನ್ನೂ ಹಸಿಹಸಿ. ಆಗಸ್ಟ್ ೨೦೧೮ರಲ್ಲಿ ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಆಕಾಶದಿಂದ ಅಪ್ಪಳಿಸಿದ ಶತಮಾನದ ಮಹಾಮಳೆ ಹುಟ್ಟಿಸಿದ ಹೆದರಿಕೆಯಿನ್ನೂ ಮಾಸಿಲ್ಲ.
ಹವಾಮಾನ ಬದಲಾವಣೆಯ ಬಹುಸರಕಾರಿ ಸಮಿತಿ ತನ್ನ ಮೊದಲ ವರದಿ ಸಲ್ಲಿಸಿ ೨೫ ವರುಷಗಳು ದಾಟಿವೆ. ವೈಜ್ನಾನಿಕ ವಿಶ್ಲೇಷಣೆಗಳ ಆಧಾರದಿಂದ ಆ ವರದಿಯಲ್ಲಿ ಖಚಿತವಾಗಿ ತಿಳಿಸಲಾಗಿತ್ತು: ಭೂಮಿಯ ಸರಾಸರಿ ಉಷ್ಣತೆ ಮತ್ತು ಸಮುದ್ರ ನೀರಿನ ಮಟ್ಟದ ಹೆಚ್ಚಳದ ಬಗ್ಗೆ. ಇದರಿಂದಾಗಿ ಈ ಶತಮಾನದಲ್ಲಿ ವಿಪರೀತ ಜಲ-ಸಂಬಂಧಿ ದುರ್ಘಟನೆಗಳು ನಡೆಯಲಿವೆ ಎಂದು ಆ ವರದಿ ಎಚ್ಚರಿಸಿತ್ತು. ಅನಂತರ, ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಹವಾಮಾನ ಬದಲಾವಣೆ ಬಗ್ಗೆ ವೈಜ್ನಾನಿಕ ಅಧ್ಯಯನಗಳನ್ನು ನಡೆಸಿ, ಅದೇ ಎಚ್ಚರಿಕೆಯನ್ನು ಪುನರುಚ್ಚರಿಸಿವೆ. ಇದರಿಂದಾಗಿ ಎಚ್ಚೆತ್ತುಕೊಂಡ ನೆದರ್ಲ್ಯಾಡ್, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕದ ಸರಕಾರಗಳು ಹವಾಮಾನದ ವಿನಾಶಕಾರಿ ಘಟನೆಗಳಿಂದ ತಮ್ಮ ನಾಗರಿಕರನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಆದರೆ ಭಾರತ ಸರಕಾರ ಹವಾಮಾನ ಬದಲಾವಣೆ ಬಗ್ಗೆ ಸೆಮಿನಾರು ಹಾಗೂ ಕಾರ್ಯಾಗಾರಗಳನ್ನು ನಡೆಸುವುದರಲ್ಲೇ ಮುಳುಗಿದೆ.
ಎಂತಹ ವಿಪರ್ಯಾಸ! ಮೂರ್ನಾಲ್ಕು ವರುಷಗಳ ಮುಂಚಿನ ವರೆಗೂ ಚೆನ್ನೈಯಲ್ಲಿ ಬೇಸಗೆಯಲ್ಲಿ ನೀರಿಗೆ ಹಾಹಾಕಾರ. ಅದರಿಂದಾಗಿಯೇ ಅಲ್ಲಿ ಮಳೆನೀರ ಕೊಯ್ಲಿನ ಬಗ್ಗೆ ವಿಶೇಷ ಮುತುವರ್ಜಿ. ಆದರೂ, ನವಂಬರ್ – ಡಿಸೆಂಬರ್ ೨೦೧೫ರಲ್ಲಿ ಅಬ್ಬರದ ಮಳೆ ಅಪ್ಪಳಿಸಿದಾಗ ಅಲ್ಲಿ ಅಲ್ಲೋಲಕಲ್ಲೋಲ. ಯಾಕೆಂದರೆ, ಅಲ್ಲಿನ ಒಟ್ಟಾರೆ ನೀರುನಿರ್ವಹಣಾ ವ್ಯವಸ್ಥೆ ಹದಗೆಟ್ಟಿತ್ತು; ಮಳೆನೀರ ತೋಡುಗಳು ಮುಚ್ಚಿದ್ದವು ಮತ್ತು ಮಳೆನೀರ ಕೊಯ್ಲಿನ ಸಂರಚನೆಗಳು ಮಹಾಮಳೆ ಎದುರಿಸಲು ಸೂಕ್ತವಾಗಿರಲಿಲ್ಲ. ಇಂತಹದೇ ಇನ್ನೊಂದು ಉದಾಹರಣೆ ಮೇಘಾಲಯದ ಚಿರಾಪುಂಜಿ. ದಶಕಗಳ ಮುಂಚೆ, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ನಗರವೆಂದು ಹೆಸರುವಾಸಿಯಾಗಿತ್ತು ಚಿರಾಪುಂಜಿ. ಇತ್ತೀಚೆಗಿನ ವರುಷಗಳಲ್ಲಿ ಬೇಸಗೆಯಲ್ಲಿ ಚಿರಾಪುಂಜಿಯಲ್ಲಿ ತೀವ್ರ ನೀರಿನ ಕೊರತೆ!
೧೫ ಆಗಸ್ಟ್ ೨೦೧೮ರಿಂದ ಮೂರು ದಿನ ಎಡೆಬಿಡದೆ ಸುರಿದ ಪ್ರಚಂಡ ಮಳೆಯಿಂದಾಗಿ ವ್ಯಾಪಕ ಪ್ರದೇಶದಲ್ಲಿ ನೆರೆ ನುಗ್ಗಿ, ಭೂಕುಸಿತಗಳಾಗಿ ಕೇರಳ ಮತ್ತು ಕರ್ನಾಟಕದ ಕೊಡಗು ತತ್ತರಿಸಿದವು. ಕೇರಳದಲ್ಲಿ ೩೮೭ ಜನರು ಮತ್ತು ಕೊಡಗಿನಲ್ಲಿ ೧೮ ಜನರು ಈ ಪ್ರಾಕೃತಿಕ ವಿಕೋಪಕ್ಕೆ ಬಲಿಯಾದರೆಂದು ಸರಕಾರಗಳು ದೃಢ ಪಡಿಸಿವೆ. ಕೇರಳದಲ್ಲಿ ೭,೦೦೦ಕ್ಕಿಂತ ಅಧಿಕ ಮನೆಗಳು ನಾಶವಾಗಿದ್ದು ೫೦,೦೦೦ ಮನೆಗಳಿಗೆ ಹಾನಿಯಾಗಿದೆ. ಕೊಡಗಿನಲ್ಲಿ ನಾಶವಾದ ಮನೆಗಳು ೧,೨೦೦. ಕೇರಳದಲ್ಲಿ ೧೨,೦೦೦ ಕಿಮೀ ರಸ್ತೆ/ ಹೆದ್ದಾರಿ ಹಾಗೂ ಕೊಡಗಿನಲ್ಲಿ ೨,೨೦೦ ಕಿಮೀ ರಸ್ತೆ ಮತ್ತು ೧೭೦ ಕಿಮೀ ಹೆದ್ದಾರಿಗೆ ಹಾನಿಯಾಗಿದೆ.
ಆದರೂ ನಾವು ಪಾಠ ಕಲಿತಿಲ್ಲ. ಅಧಿಕಾರಿಗಳು, ರಾಜಕಾರಣಿಗಳು, ಕಾಮಗಾರಿ ಪೂರೈಸುವ ಗುತ್ತಿಗೆದಾರರು, ಈ ಅನಾಹುತಗಳಿಗೆ ಒಬ್ಬರನ್ನೊಬ್ಬರು ದೂರುತ್ತಲೇ ಇದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಇಂತಹ, ಕೋಟಿಗಟ್ಟಲೆ ರೂಪಾಯಿ ಸರಕಾರದ ಅನುದಾನ ಪಡೆಯುವ ಮುಂಚೂಣಿ ಶೈಕ್ಷಣಿಕ ಸಂಸ್ಥೆಗಳೂ ಶಿಕ್ಷಣರಂಗದ ಉನ್ನತ ಸಾಧನೆಗಳಿಗಾಗಿ ದುಡಿಯುತ್ತವೆಯೇ ವಿನಃ ಜನಸಾಮಾನ್ಯರ ದೈನಂದಿನ ಬದುಕಿನ ಸಂಕಟಗಳನ್ನು ಪರಿಹರಿಸಲು ತುಡಿಯುತ್ತಿಲ್ಲ. ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ, ನೆದರ್ಲ್ಯಾಂಡಿನ ಯುನೆಸ್ಕೊ – ಐಎಚ್ಇ, ಯುಎಸ್ಎಯ ಕ್ಯಾಲಿಫೋರ್ನಿಯಾ ಯುನಿವರ್ಸಿಟಿ – ಇಂತಹ ಜಾಗತಿಕ ಮಟ್ಟದಲ್ಲಿ ಜನಪರ ಕಾರ್ಯಕ್ರಮಗಳಿಗಾಗಿ ಗುರುತಿಸಲ್ಪಟ್ಟ ವಿದ್ಯಾಸಂಸ್ಥೆಗಳಿಂದ ನಮ್ಮ ದೇಶದ ವಿಶ್ವವಿದ್ಯಾಲಯಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳು ಯಾಕೆ ಪಾಠ ಕಲಿಯಬಾರದು?
ನಮ್ಮ ದೇಶದ ಸಮುದ್ರ ತೀರದ ನಗರಗಳ ಆಡಳಿತ ಸಂಸ್ಥೆಗಳು ತಕ್ಷಣವೇ ಎಚ್ಚೆತ್ತು ಕೊಳ್ಳಬೇಕಾಗಿದೆ – ಸಮುದ್ರಗಳ ನೀರಿನ ಮಟ್ಟ ಇನ್ನಷ್ಟು ಏರಿ ಜಲಪ್ರಳಯ ಆಗುವ ಮುನ್ನ ಜನರ ಹಾಗೂ ಸೊತ್ತುಗಳ ರಕ್ಷಣೆಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತ ಗೊಳಿಸ ಬೇಕಾಗಿದೆ. ಹಾಗೆಯೇ ಬೆಂಕಿ ಬರಗಾಲದಲ್ಲಿ ಜನರನ್ನು ಕಂಗಾಲಾಗಿಸುವ ನೀರಿನ ಕೊರತೆ ಪರಿಹರಿಸಲಿಕ್ಕೂ ಸಜ್ಜಾಗ ಬೇಕಾಗಿದೆ. ಸಣ್ಣಸಣ್ಣ ಪಟ್ಟಣಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಕೆರೆ ಹಾಗೂ ಜಲಾಶಯಗಳ ಹೂಳೆತ್ತುವುದು, ಹನಿಹನಿ ಮಳೆನೀರನ್ನೂ ನೆಲದಾಳಕ್ಕಿಳಿಸಲಿಕ್ಕಾಗಿ ಮಳೆನೀರ ಕೊಯ್ಲಿನ ಸಂರಚನೆಗಳನ್ನು ನಿರ್ಮಿಸುವುದು – ಇವು ಕೈಗೆತ್ತಿಕೊಳ್ಳ ಬೇಕಾದ ತುರ್ತಿನ ಕಾಮಗಾರಿಗಳು. ಇದಕ್ಕಾಗಿ ನೀರು ನಿರ್ವಹಣಾ ಇಲಾಖೆ ಹಾಗೂ ಸಂಸ್ಥೆಗಳ ದಕ್ಷತೆ ಹಲವು ಪಟ್ಟು ಹೆಚ್ಚಬೇಕಾಗಿದೆ.
ಈಗಲಾದರೂ ನಾವು ಪಾಠ ಕಲಿಯಬೇಕಾಗಿದೆ. ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಮತ್ತು ಸರಕಾರಿ ಸಂಸ್ಥೆಗಳು ಪಾಕೃತಿಕ ಪ್ರಕೋಪಗಳ ಮುನ್ಸೂಚನೆ, ಅವುಗಳಿಂದಾಗುವ ಹಾನಿ ತಗ್ಗಿಸುವ ವಿಧಾನಗಳು, ನೀರು ನಿರ್ವಹಣೆಯ ತಂತ್ರಜ್ನಾನದ ಹಾಗೂ ಅನುಶೋಧನೆಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಬೇಕಾಗಿದೆ. ಪಾಶ್ಚಾತ್ಯ ದೇಶಗಳು ತಂತ್ರಜ್ನಾನ ಹಾಗೂ ಅನುಶೋಧನೆಗಳನ್ನು ಅಳವಡಿಸಿಕೊಂಡು, ಪ್ರಾಕೃತಿಕ ವಿಕೋಪಗಳಿಂದ ತಮ್ಮ ಪ್ರಜೆಗಳನ್ನು ರಕ್ಷಿಸಲು ಸಮರ್ಥವಾಗಿದ್ದರೆ, ಅದು ನಮ್ಮ ದೇಶದಲ್ಲಿಯೂ ಸಾಧ್ಯ, ಅಲ್ಲವೇ?
ಫೋಟೋ ೧: ಕೇರಳದ ಚೆಂಗನ್ನೂರಿನಲ್ಲಿ ಆಗಸ್ಟ್ ೨೦೧೮ರ ಜಲಪ್ರಳಯ. ಫೋಟೋ ಕೃಪೆ: ಹಿಂದೂ ದಿನಪತ್ರಿಕೆ,೨೦.೮.೨೦೧೮
ಫೋಟೋ ೨: ಮುಂಬೈಯಲ್ಲಿ ಆಗಸ್ಟ್ ೨೦೧೭ರ ನೆರೆ ಪ್ರಕೋಪ. ಫೋಟೋ ಕೃಪೆ: ವಿಕಿಪಿಡಿಯ