ಮಂಕುತಿಮ್ಮನ ಕಗ್ಗಕ್ಕೆ ಕೈಪಿಡಿಯ ಬೆಳಕು

ಮಂಕುತಿಮ್ಮನ ಕಗ್ಗಕ್ಕೆ ಕೈಪಿಡಿಯ ಬೆಳಕು

ಬರಹ

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)

ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ, ಇಲ್ಲವೇ ಉತ್ತಮ ಸಾಹಿತ್ಯ ಕೃತಿಯಾಗಿಯೋ, ಕಗ್ಗ ನಮ್ಮೆಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಸುಳಿದಾಡಿರುತ್ತದೆ. ನಾನು ಹಲವಾರು ಬಾರಿ ಸ್ವತಂತ್ರವಾಗಿ (ಬೇರೆ ಯಾವುದೇ ಸಹಾಯವಿಲ್ಲದೆ), ನಿಘಂಟನ್ನು ಪಕ್ಕದಲ್ಲಿಟ್ಟುಕೊಂಡು, "ಮಂಕುತಿಮ್ಮನ ಕಗ್ಗ"ವನ್ನು ಓದುವ ಪ್ರಯತ್ನ ಮಾಡಿದ್ದೆ. ಆದರೆ ಪ್ರತಿ ಬಾರಿಯೂ "ಯಾಕೋ ಇದರ ಸಂಪೂರ್ಣ ಭಾವ ನನ್ನ ಗ್ರಹಿಕೆಗೆ ಸಿಗುತ್ತಿಲ್ಲ" ಎನ್ನುವ ನಿರಾಶೆ ನನ್ನನ್ನು ಕಾಡುತ್ತಿತ್ತು. ನಿಮ್ಮಲ್ಲೂ ಎಷ್ಟೋ ಜನರಿಗೆ ಹೀಗೆ ಅನ್ನಿಸಿರಬಹುದು ಅಲ್ಲವೇ? ಎಷ್ಟೋ ಬಾರಿ ಕಗ್ಗದಿಂದ ಪದ್ಯವೊಂದನ್ನು ಅದರ ಪೂರ್ಣ ಭಾವಾರ್ಥ ತಿಳಿಯದೆಯೇ ಬಳಸುವಾಗ, ಮನಸ್ಸಿನ ಒಂದು ಮೂಲೆಯಲ್ಲಿ, "ಈ ಪದ್ಯ ನನಗೆ ನಿಜವಾಗಿಯೂ ಅರ್ಥವಾಗಿದ್ದಲ್ಲಿ ಇನ್ನೂ ಎಷ್ಟು ಚೆನ್ನಾಗಿರುತ್ತಿತ್ತು!" ಅನ್ನಿಸುವುದು ಸಹಜ. ಈಗ್ಗೆ ಏಳೆಂಟು ತಿಂಗಳಿಂದ "ಕಗ್ಗಕ್ಕೊಂದು ಕೈಪಿಡಿ"ಯೆಂಬ ಕೈಪಿಡಿಯ (ಗೈಡ್) ಬೆಳಕಿನಲ್ಲಿ "ತಿಮ್ಮಗುರು"ವನ್ನು ನೋಡುವ, ಸಾಧ್ಯವಾದಷ್ಟೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಬಹಳ ಉಪಯೋಗವಾಯಿತು ಎಂದು ನನಗನ್ನಿಸಿತು. ಕಗ್ಗವನ್ನು "ಓದಿದ ಸುಖ" ನನ್ನದಾಯಿತು. ಈ ಪುಸ್ತಕದ ಬಗ್ಗೆ ಪರಿಚಯ ಬರೆಯೋಣ; ಆಕಸ್ಮಾತ್ ನನಗೆ ಉಪಯೋಗವಾದಂತೆ ಇನ್ನೂ ಯಾರಿಗಾದರೂ ಆಗುವುದಾದಲ್ಲಿ ಆಗಲಿ ಅಂತ ಈ ಪ್ರಯತ್ನ.

ಡಿ.ವಿ.ಜಿ.ಯವರನ್ನು ಹತ್ತಿರದಿಂದ ಬಲ್ಲವರಾಗಿದ್ದ, ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ ಶ್ರೀ.ಡಿ.ಆರ್.ವೆಂಕಟರಮಣನ್ ಅವರು "ಕಗ್ಗಕ್ಕೊಂದು ಕೈಪಿಡಿ"ಯ ಕರ್ತೃ. ಪುಸ್ತಕದ ಮುನ್ನುಡಿಯಲ್ಲಿ ಶ್ರೀ.ನಿಟ್ಟೂರು ಶ್ರೀನಿವಾಸರಾವ್ ಅವರು ಬರೆದಿರುವಂತೆ, ಕಗ್ಗದ ಕೆಲವು ಪದ್ಯಗಳು ಮೇಲ್ನೋಟಕ್ಕೆ ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ ಎನ್ನುವಂತೆ ಕಂಡುಬಂದು ಓದುಗರಿಗೆ ಸ್ವಲ್ಪ ಗಲಿಬಿಲಿ ಉಂಟುಮಾಡುತ್ತದೆ. ಕೆಲವೊಮ್ಮೆ "ಮಂಕುತಿಮ್ಮನ ಕಗ್ಗ" ನಿರಾಶಾವಾದವನ್ನು ಪ್ರತಿಪಾದಿಸುತ್ತಿದೆಯೇ ಎನ್ನುವ ಪ್ರಶ್ನೆ ಕೂಡ ಮನಸ್ಸಿನಲ್ಲಿ ಏಳುತ್ತದೆ. ಆದರೆ ಡಿ.ವಿ.ಜಿ.ಯವರು ಜೀವನದ ಬಗ್ಗೆ ಸದಾ ಪಾಸಿಟಿವ್ ಧೋರಣೆಯನ್ನು ಹೊಂದಿದ್ದವರು. ಜೀವನವನ್ನು ಎದುರಿಸಿ, "ಈಸಬೇಕು, ಇದ್ದು ಜಯಿಸಬೇಕು" ಎನ್ನುವುದು ಡಿ.ವಿ.ಜಿ.ಯವರ ನಿಲುವಾಗಿತ್ತು; ಜೀವನದಿಂದ ವಿಮುಖರಾಗಿ ಓಡಿಹೋಗುವುದಲ್ಲ. ಇದನ್ನು ಯಾರಾದರೂ ಎಳೆ‍ಎಳೆಯಾಗಿ ಬಿಡಿಸಿ, ವಿವರವಾಗಿ ಹೇಳಿದರೆ ಹೇಗಿರುತ್ತದೆಯೋ ಹಾಗಿದೆ "ಕೈಪಿಡಿ"ಯ ಶೈಲಿ. ಇಲ್ಲಿ ಪ್ರತಿ ಪದ್ಯಕ್ಕೂ ಪದಶಃ ಅರ್ಥ ಹೇಳಿ ಸುಮ್ಮನಾಗುವ ಬದಲು, ಸಾಕಷ್ಟು ವಿವರವಾಗಿ ಪ್ರತಿ ಪದ್ಯದ ಭಾವರ್ಥ ಹೇಳಿದ್ದಾರೆ. ಪುಸ್ತಕದ ಕೊನೆಯಲ್ಲಿ (ಮತ್ತು ಅಲ್ಲಲ್ಲಿ) ಕಠಿಣ ಪದಗಳ ಅರ್ಥ ಕೂಡ ಲಭ್ಯವಿದೆ.

ಕೈಪಿಡಿಯ ಎರಡನೆಯ ಅಧ್ಯಾಯ "ನಿಸದವಾದೊಡೆ ನಮಿಸು" ಮತ್ತು ಮೂರನೆಯ ಅಧ್ಯಾಯ "ಪ್ರಶ್ನೆಗಳ ಹಾವಳಿ"ಯಲ್ಲಿ ವೆಂಕಟರಮಣನ್ ಅವರು ತಿಮ್ಮಗುರುವಿನ ತತ್ವದ, ಕೃತಿಯ ಮೂಲ ಆಶಯದ ಪೂರ್ಣ ಪರಿಚಯ ಮಾಡಿಕೊಟ್ಟು, ಆ ಮೂಲಕ ಮುಂದಿನ ಭಾಗಗಳ ಓದನ್ನು ಸುಗಮವಾಗಿಸುತ್ತಾರೆ. ಈ ಎರಡು ಅಧ್ಯಾಯಗಳಲ್ಲಿ ಕಗ್ಗದ ೧ ರಿಂದ ೪೨ ನೆಯ ಪದ್ಯಗಳನ್ನು ವಿವರಿಸಲಾಗಿದ್ದು, ಈ ವಿವರಣೆ ಕಗ್ಗದ ಬಗೆಗಿನ ನಮ್ಮೆಲ್ಲ ದ್ವಂದ್ವ, ಅನುಮಾನಗಳನ್ನು ತೊಡೆದುಹಾಕುತ್ತವೆ.

ಎಲ್ಲಕ್ಕಿಂತ ನನಗೆ ಬಹಳ ಮೆಚ್ಚುಗೆಯಾದದ್ದು "ಕೈಪಿಡಿ"ಯು ಡಿ.ವಿ.ಜಿ.ಯವರ ಇತರ ಕೃತಿಗಳ (ಕಗ್ಗವನ್ನು ಹೊರತುಪಡಿಸಿ) "ಝಲಕ್"ನ್ನು ಕೊಡುವ ರೀತಿ. ಅಗತ್ಯ ಅನಿಸಿದಾಗಲೆಲ್ಲ ವೆಂಕಟರಮಣನ್ ಅವರು ಡಿ.ವಿ.ಜಿ.ಯವರ "ಉಮರನ ಒಸಗೆ", "ಮ್ಯಾಕ್‌ಬೆಥ್ (ಅನುವಾದ)", "ಜೀವನಧರ್ಮ ಯೋಗ", "ದೇವರು" ಮುಂತಾದ ಪುಸ್ತಕಗಳಿಂದ ಪೂರಕ ಉದಾಹರಣೆಗಳನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ ಆ ಕೃತಿಗಳ, ಡಿ.ವಿ.ಜಿ.ಯವರ ವಿಚಾರಧಾರೆಯ ಹಕ್ಕಿನೋಟ ಸಿಕ್ಕಂತಹ ಅನುಭವವಾಗುತ್ತದೆ. ಕೇವಲ ಒಂದು ಉದಾಹರಣೆ ಕೊಡುವುದಾದಲ್ಲಿ:
"ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ|
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ?||
ಏಟಾಯ್ತೆ ಗೆಲುವಾಯ್ತೆಂದು ಕೇಳುವುದೇನು?|
ಆಟದೋಟವೆ ಲಾಭ - ಮಂಕುತಿಮ್ಮ||" (ಮಂಕುತಿಮ್ಮನ ಕಗ್ಗ - ೩೩೦)
ಈ ಪದ್ಯವನ್ನು ವಿವರಿಸುವಾಗ, ತಮ್ಮದೇ ಮಾತುಗಳಲ್ಲಿ ಅರ್ಥ ಹೇಳುವುದರ ಜತೆಗೆ ವೆಂಕಟರಮಣನ್ ಅವರು, ಅಷ್ಟೇ ಸುಂದರವಾಗಿ, ಡಿ.ವಿ.ಜಿ.ಯವರದ್ದೇ ಆದ "ಉಮರನ ಒಸಗೆ"ಯಿಂದ (ಉಮರ್ ಖಯ್ಯಾಂನ ಪದ್ಯಗಳ ಕನ್ನಡ ಅನುವಾದ) ಒಂದು ಪದ್ಯವನ್ನು ಉದಾಹರಿಸಿ, ವಿವರಿಸುತ್ತಾರೆ:
"ಆಡುವವನೆಸೆವಂತೆ ಬೀಳ್ವ ಚೆಂಡಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು?
ನಿನ್ನನಾರಿತ್ತಲೆಸೆದಿಹನೊ ಬಲ್ಲವನಾತನ್,
ಎಲ್ಲ ಬಲ್ಲವನವನು - ಬಲ್ಲನೆಲ್ಲವನು" (ಉಮರನ ಒಸಗೆ - ೫೫)
ಎಷ್ಟು ಸಮಯೋಚಿತವಾದ ಉದಾಹರಣೆ ಮತ್ತು ವಿವರಣೆ ಅಲ್ಲವೇ?

ಕೈಪಿಡಿಯ "ಅರಿಕೆ" ವಿಭಾಗದಲ್ಲಿ "ಮಂಕುತಿಮ್ಮನ ಕಗ್ಗ" ಎನ್ನುವ ಹೆಸರನ್ನೇಕೆ ಇಟ್ಟಿರಬಹುದು ಎನ್ನುವುದಕ್ಕೆ ಸೊಗಸಾದ ವಿವರಣೆಯಿದೆ. ಪುಸ್ತಕದ ಕೊನೆಯ "ಅನುಬಂಧ"ದಲ್ಲಿ, ಡಿ.ವಿ.ಜಿ.ಯವರು "ಹಿಂದೂ" ಪತ್ರಿಕೆಯ ನಿವೃತ್ತ ಉಪಸಂಪಾದಕರಾಗಿದ್ದ ಶ್ರೀ.ಎನ್.ರಘುನಾಥನ್ ಅವರಿಗೆ ಬರೆದಿದ್ದ ಅಪರೂಪದ ಪತ್ರವೊಂದನ್ನು ಕಾಣಬಹುದು. ಪ್ರಶಸ್ತಿ, ಹೆಸರು ಮತ್ತು ಮನ್ನಣೆಗಳ ಬಗ್ಗೆ ಡಿ.ವಿ.ಜಿ.ಯವರ ನಿಲುವನ್ನು ಈ ಪತ್ರ ಅತ್ಯಂತ ಸಮರ್ಥವಾಗಿ ಬಿಂಬಿಸುತ್ತದೆ. ಆ ಪತ್ರದ ವಿಚಾರದ ಬಗ್ಗೆ ನಾನಿಲ್ಲಿ ಬರೆದು ನಿಮ್ಮ ಕುತೂಹಲಕ್ಕೆ ಅಡ್ಡಿಪಡಿಸಲಾರೆ. ನೀವೇ ಓದಿ ನೋಡಿ!

ಒಟ್ಟಾರೆ "ಕೈಪಿಡಿ"ಯನ್ನು ಓದುವುದು, ಒಂದು ಪ್ರೌಢ ಉಪನ್ಯಾಸವನ್ನು ಕೇಳಿದಂತಹ ಅನುಭವ ನೀಡುತ್ತದೆ. ತಿಮ್ಮಗುರುವಿನ ವಿಶಾಲ ಜೀವನ ದರ್ಶನ ನಮ್ಮನ್ನು ಮೂಕರನ್ನಾಗಿಸುತ್ತದೆ. ನನಗಂತೂ ಈ ಪುಸ್ತಕ ಬಹಳ ಮುದನೀಡಿತು. "ಮಂಕುತಿಮ್ಮನ ಕಗ್ಗ"ದಲ್ಲಿ ತೀವ್ರ ಆಸಕ್ತಿ ನಿಮಗಿದ್ದು, ಇನ್ನೂ ಈ ಪುಸ್ತಕ (ಕೈಪಿಡಿ) ಓದಿಲ್ಲವಾದಲ್ಲಿ, ಒಮ್ಮೆ ಖಂಡಿತ ಪ್ರಯತ್ನಿಸಬಹುದು ಎಂದು ನನ್ನ ಅನಿಸಿಕೆ.