ಮಗು ಹುಟ್ಟೈತೆ ಕಣ್ಲಾ !

ಮಗು ಹುಟ್ಟೈತೆ ಕಣ್ಲಾ !

 

ಜುಲೈ ೨೩ ೨೦೧೩ ಸಂಜೆ ೪:೨೧

 

"ಯವ್ವಾ ನೋಯ್ತಿದೆ ... ಅಯ್ಯೋ ..." ಎಂಬ ಕೂಗಾಟ ಕೇಳಿಸಿತ್ತು ಗುಡಿಸಲ ಹೊರಗೆ ... ಸಿದ್ದ ಹೊರಗೆ ಶತಪಥ ತಿರುಗುತ್ತಿದ್ದ ... ಸಿದ್ದನ ಅಪ್ಪಯ್ಯ ದೊಡ್ಡಸಿದ್ದ ಮೂಲೆಯಲ್ಲಿ ಕುಂತು ನಿರಾಳವಾಗಿ ಕಿವಿಗೆ ಕಡ್ಡಿ ಹಾಕಿಕೊಂಡು ಕುಂತಿದ್ದ ... ಗುಡಿಸಲ ಒಳಗೆ ಬೀಡಿ ಸೇದಿದರೆ ಚೆಲ್ವಿ ಕಾಲು ಮುರೀತಿದ್ಲು ... ದೊಡ್ಡಸಿದ್ದನ ಒಂದು ಕಾಲದ ಆ ಚೆಲ್ವಿ ಹತ್ತು ಹೆತ್ತಾಕಿದ್ಲು ... ದೊಡ್ಡಸಿದ್ದನಿಗೂ ಶತಪಥ ತಿರುಗಿ ಸುಸ್ತಾಗಿತ್ತು. ಅದ್ಕೇ ಕುಂತಿದ್ದ ಅಂದೆ .. ಮಗು ಅತ್ತ ಶಬ್ದ ...

 

ಕರ್ಣ ಕಠೋರವಾಗಿ "ಕ್ವಾ ಕ್ವಾ ಕ್ವಾ" ಅನ್ನೋ ಶಬ್ದ ಕಿವಿಗೆ ಬಿದ್ಕೂಡ್ಲೇ ಚೆಲ್ವಿ ನುಡಿದಳು "ಗಂಡ್ ಮಗ ಹುಟ್ಟೈತೆ ಕಣ್ಲಾ ಸಿದ್ದ ... ಸಕ್ಕರೆ ಹಂಚ್ಲಾ ... ಹಂಗೇ ಮಗೂನ್ನ ನೋಡ್ಕೊಂಡು ಹೋಗ್ಲಾ ಗಾರೆ ಕೆಲ್ಸಕ್ಕೆ ... ಇನ್ನು ನಿನಗೇನು ಕೆಲ್ಸ ಇಲ್ಲಿ ... ಹಂಗೇ ಆ ಮೂದೇವಿ ನಿನ್ ಅಪ್ಪಯ್ಯನ್ನು ಎಳ್ಕೊಂಡ್ ಹೋಗು ... "

 

ಸೂಲಗಿತ್ತಿ ಹೊರಬಂದು ಗಂಡ ಮಗ ಆಗೈತೆ ಅನ್ನೋ ಹಳೇ ಬ್ರೇಕಿಂಗ್ ನ್ಯೂಸ್ ಕೊಟ್ಟಳು ... ಸಿದ್ದ "ಆಯ್ತು ಕಣವ್ವೋ ... ಅದ್ಸರೀ, ಅದೆಂಗೆ ಗಂಡ್ ಮಗ ಅಂದ್ಯವ್ವೋ?" ...

 

ಚೆಲ್ವಿ ನುಡಿದಳು "ಗಂಟಲು ಹರ್ಕೊಂಡ್ ಕಿರ್ಚ್ಕೊಳ್ತೈತೆ ಅದ್ಕೇ ಗಂಡು ಅಂದೆ ... ಹೆಣ್ ಮಗ ಅಂಗೆಲ್ಲ ಕಿರ್ಚಾಕ್ಕಿಲ್ಲ ... ಮೂದೇವಿ ನಿಂಗೆ ಅವೆಲ್ಲ ಅರ್ಥ ಆಗಂಗಿಲ್ಲ ..." ಅಂದ ...

 

ದೊಡ್ಡಸಿದ್ದ "ಹುಟ್ಟದಾಗ ಹೆಣ್ ಸುಮ್ಕಿರುತ್ತೆ ... ಮದ್ವೆ ಆದ ಮೇಲೆ ಗಂಡು ಸುಮ್ಕಾಕ್ತಾನೆ ಕಣ್ಲಾ" ಅಂತ ಒಂದು ಕ್ಷಣ ನಕ್ಕು ಇಪ್ಪತ್ತು ಸಾರಿ ಕೆಮ್ಮಿದ ...

 

"ಎಲಾ ಮೂದೇವಿ ಇನ್ನೂ ಇಲ್ ಕೂತ್ಕೊಂಡ್ ಏನ್ಲಾ ಕಿಸೀತಿದ್ಯ ... ಓಗಾಚೆ ... "

 

ಸಿದ್ದ-ಸುಬ್ಬಿ’ಯರಿಗೆ ಮೊದಲ ಕೂಸೇ ಆದರೂ ಎದ್ದು ಬಿದ್ದು ಕುಣಿಯೋ ಸಂಭ್ರಮವಂತೂ ಕಾಣಲಿಲ್ಲ ... ಮಗು ಹುಟ್ಟೈತೆ ಅಂತ ಸಂಭ್ರಮ ಪಡ್ತಾ ಕುಂತ್ರೆ, ಗಾರೆ ಕೆಲ್ಸದಿಂದ ಬರೋ ದುಡ್ಡು ಯಾರೆ ಕೊಡ್ತಾರೆ ?

 

-----

 

ಈಗ ಮಧ್ಯಮ ವರ್ಗದ ಅಳಲು ...

 

ದೊಡ್ಡ ಆಸ್ಪತ್ರೆಯ ವೈನಾದ ಕೋಣೆಯ ಹೊರಗೆ ಮಾಧವ ಶತಪಥ ತಿರುಗುತ್ತಿದ್ದ ... ಮಾಧವನ ಮಾವ ಶ್ರೀಪತಿರಾಯರು "ದಿನಕ್ಕೆ ಎಷ್ಟಂತೆ ರೂಮಿಗೆ? ಇನ್ಷೂರೆನ್ಸ್’ನವರು ಎಷ್ಟು ಕೊಡ್ತಾರೆ? ಅಪ್ಲೈ ಮಾಡಿ ಆಯ್ತಾ? ಇಲ್ಲಿ ಡಿಪಾಸಿಟ್ ಎಷ್ಟು?"

 

"ಮಾವಾ ... ಏನೂ ಯೋಚನೆ ಮಾಡಬೇಡಿ ... ಹೇಗೋ ಆಗುತ್ತೆ ... ನೀವು ಟೆನ್ಷನ್ ಮಾಡಿಕೊಂಡು ನಿಮಗೇನಾದ್ರೂ ಹೆಚ್ಚು ಕಮ್ಮಿ ಆದ್ರೆ ಕಷ್ಟ"

 

"ಏನು ಮಾಡೋದಪ್ಪ .. ಈ ವರ್ಷಾನೇ ನನಗೆ ಬೈ-ಪಾಸ್ ಆಗದೆ ಇದ್ದಿದ್ರೆ ಇನ್ಸೂರೆನ್ಸ್’ನ ತರಳೆ ಇರ್ತಿರ್ಲಿಲ್ಲ ... ಅದಕ್ಕೇ ಕಣಪ್ಪ ಹೇಳೋದು ದೊಡ್ಡವರನ್ನ ಹೇಳಿ ಕೇಳಿ ಕೆಲಸಗಳು ಮಾಡಿದರೆ, ಇಂಥಾ ಟೆನ್ಷನ್ ಈಗ ಇರ್ತಿರ್ಲಿಲ್ಲ"

 

"ಅಯ್ಯೋ ! ಏನು ಮಾವ ನೀವು ಹೇಳ್ತಿರೋದು? ದೊಡ್ಡವರನ್ನ ಹೇಳಿ ಕೇಳಿ ... ಅಯ್ಯೋ .. ನನಗೆ ಹಿಂಸೆ ಆಗ್ತಿದೆ ನಿಮ್ಮ ಮಾತು ..."

 

"ಹೌದಪ್ಪಾ ... ನನ್ನ ಒಂದು ಮಾತೂ ಕೇಳದೆ ಸೀದ ಆಸ್ಪತ್ರೆಗೆ ಸೇರಿಸಿ ಆಪರೇಷನ್ ಮಾಡಿಸಿಯೇಬಿಟ್ಟಿ ... ಈಗ ನೋಡು ..."

 

ಮಗುವಿನ ಸುಶ್ರಾವ್ಯ ಅಳುವಿನ ದನಿ ತೂರಿಬಂತು ... ತಕ್ಷಣ ತೂರಿ ಹೊರಬಂದಿದ್ದು ದಾದಿ ... "ಸಾರ್ ಅಮುಲ್ ಬೇಬಿಯಂತಹ ಗಂಡು ಮಗು ... ಇಂಥಾ ಚೆಂದದ ಮಗು ನನ್ ಸರ್ವೀಸ್’ನಲ್ಲೇ ನೋಡಿಲ್ಲ ಸಾರ್ ... ಮೂರು ದಿನದಿಂದ ನೋಡ್ಕೊಂಡಿದ್ದೀನಿ, ಕಾಫಿಗೆ ಒಂದು ನೂರು ಕೊಡಿ ..."

 

"ಅಲ್ಲಮ್ಮ, ನನ್ನ ಮಗಳು ಅಡ್ಮಿಟ್ ಆಗಿದ್ದೇ ನೆನ್ನೆ ! ಮೂರು ದಿನ ಅಂತೀಯಲ್ಲ? ಕಾಫಿಗೆ ನೂರು ಅನ್ನೋದಾದ್ರೆ ನಮ್ ಮನೆಗೆ ಬಾ, ನಾನೇ ಫಿಲ್ಟರ್ ಕಾಫಿ ಮಾಡಿ ಕೊಡ್ತೀನಿ, ಜೊತೆಗೆ ತಿಂಡೀನೂ ಕೊಡ್ತೀನಿ"

 

"ಮಾವ, ನೀವು ಸುಮ್ಮನಿರಿ ... ಆಗ್ಲಿ, ಮಗೂನ್ನ ನೋಡಬಹುದಾ?"

 

"ನಿಮ್ ಮಗು ನೀವು ನೋಡೋಕ್ಕೆ ನನ್ದೇನು ಅಡ್ಡಿ ಸಾರ್? .. ನನಗೆ ನೂರು, ಆ ಮುದುಕಿ ಸುಬ್ಬಮ್ಮಂಗೆ ಐವತ್ತು ಕೊಡಿ ... ಸ್ವಲ್ಪ ಒಳಗೆ ಕಿಲೀನ್ ಮಾಡಿ ಕರೀತೀನಿ " ... ಅಂದ್ರೆ ದುಡ್ಡು ಕೊಡೋವರೆಗೂ ಒಳಗೆ ಬಿಡಲ್ಲ ಅಂತಾಯ್ತು ...

 

ಮೆಲ್ಲ ಮೆಲ್ಲನೆ ಅಡಿಯಿಟ್ಟು ಒಳ ಹೋದ ಮಾಧವ ... ನೆಲದ ಮೇಲೆ ನೀರು ಚೆಲ್ಲಿತ್ತೋ ಏನೋ, ಬೀಳಲಿದ್ದ ... ಮಂಚದ ಹಿಡಿಯನ್ನು ಹಿಡಿದುಕೊಂಡು, ಸಾವರಿಸಿಕೊಂಡು, ಧಡ ಧಡ ಹೊರಬಂದವನೇ, ಅಲ್ಲೇ ಯಾರೋ ಸಿಬ್ಬಂದಿಯೊಂದಿಗೆ ಕೇಳಿದ "ಏನಮ್ಮ? ಆ ಸುಬ್ಬಮ್ಮ ಅನ್ನೋವ್ರನ್ನ ಕರೀತೀರಾ? ನೆಲ ಸರಿಯಾಗಿ ಒರೆಸಿಲ್ಲ ... ನನ್ ಹೆಂಡ್ತಿ ಏನಾದ್ರೂ ಬಿದ್ದು ಬಿಟ್ರೆ ಗತಿ ಏನು?"

 

"ನಮ್ ಸ್ಟಾಫ್’ನಲ್ಲಿ ಸುಬ್ಬಮ್ಮ ಅನ್ನೋ ಹಳೇ ಹೆಸರಿನೋವ್ರು ಯಾರೂ ಇಲ್ಲ ... ಒಂದು ಇಪ್ಪತ್ತು ಕೊಡಿ, ಮೇರಿ’ಗೆ ಹೇಳಿ ನೆಲ ಕ್ಲೀನ್ ಮಾಡಿಸ್ತೀನಿ"

 

ನಮ್ಮ ಮಧ್ಯಮವರ್ಗದ ಗೋಳು ಇಲ್ಲಿಗೆ ಸಾಕು

 

---------

 

ಅದೇ ಸಮಯಕ್ಕೆ, ನಗರದ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ...

 

ಕೋಣೆಯ ಹೊರಗೆ ಇದ್ದ ಸಣ್ಣ ರೂಮಿನಲ್ಲಿ ಕಿವಿಗೆ ಕಚ್ಚಿಕೊಂಡಿದ್ದ ಬ್ಲೂ-ಟೂಥ್’ನಲ್ಲಿ ಮಾತನಾಡುತ್ತ ಲ್ಯಾ-ಟಾಪ್’ನಲ್ಲಿ ಏನೋ ಕುಟ್ಟುತ್ತಿದ್ದ ಕಶ್ಯಪ್. "Not a problem Mr.Narang. I will make sure you will receive the delivery in 3 days from now. For any reason if I feel the consignment is not going to make it in 3 days, I will give you a call or shoot you an email. but I am sure there will be no delay " ಎಂದು ಹೇಳುತ್ತಿದ್ದ ...

 

ಅಷ್ಟರಲ್ಲಿ ಬಾಗಿಲ ಮೇಲೆ ಎರಡು ಬಾರಿ ಸಣ್ಣಗೆ ’ಟಕ್ ಟಕ್’ ಎಂಬ ಸದ್ದು. ಕಶ್ಯಪ್ ತಿರುಗಿ ನೋಡಿದ. ಶುಭ್ರ ವಸ್ತ್ರಧಾರಿ Patient Care Supervisor ನಿಂತಿದ್ದಳು. ಕಶ್ಯಪ್ ಒಂದು ನಿಮಿಷ ಎಂದು ಸನ್ನೆ ಮಾಡಿ Sorry Mr. Narang. I got to go. I will be on paternity leave from today. will reach out to you in 3 days. I will still be checking my emails every 1/2 hour. feel free to send me an email. ... Oh sure, Thanks for your wishes ..... nice talking to you. ಎಂದು ಫೋನ್ ಆಫ್ ಮಾಡಿದ ...

 

ನರ್ಸ್ ನುಡಿದರು sorry to disturb you Mr.Kashyap. I wanted to let you know that the Baby is born. Heartiest Congratulations ... He is an absolute angel. The lady is relaxing at this time. You may see her in 30 minutes. The patient care has sent you a link to your email. you may watch the live video to have a first look of your little one. We also have sent you few links for you to complete the paper work online. Thank you and congrats again

 

ಮಹಾ complicated ಆಗಿ ವಿಷಯವನ್ನು ಅರುಹಿ ಹೊರ ನೆಡೆದಿದ್ದರು sophisticated ಮಂದಿ.

 

ಕಶ್ಯಪ ಅತೀವ ಆನಂದ ಹೊಂದಿ ಕಿರು ನಗೆ ಸೂಸಿದ ... ಭಾವನೆಗಳ ಬಡತನವಿರುವ ಅತಿ ಶ್ರೀಮಂತ ಮನೆತನದ ಜನರಲ್ಲಿ ಒಬ್ಬ ಕಶ್ಯಪ.

 

ತನ್ನ ಫೋನನ್ನು ತೆಗೆದುಕೊಂಡು ತನ್ನ ತಂದೆಗೆ ಕರೆ ಮಾಡಿದ hi DaD ... the baby is born .... ಅತ್ತ ಕಡೆಯಿಂದ ತೂರಿಬಂದ ದನಿ "Congrats Son ... I will let your mom know too ... we will come over next month ...

 

ಉಸಿರು ಕಟ್ಟುತಿದೆ ... ಮುಂದಕ್ಕೆ ಹೋಗೋಣ

 

-----

ಮಧ್ಯಮವರ್ಗದ ಪ್ರತೀಕವಾದ ನನಗೆ ಯಾಕೋ ಹಿಂಸೆಯಾಯಿತು ... ಅಲ್ಲಿಂದ ಮತ್ತೊಂದು ಕ್ಷಣದಲ್ಲಿ ’ಸೈಂಟ್ ಮೇರಿ’ ಆಸ್ಪತ್ರೆಗೆ ತೆರೆಳಿದೆ ...

 

ಸೂಜಿ ಕೆಳಗೆ ಬಿದ್ದು ಸದ್ದಾದರೆ, ಬೀಳಿಸಿದವರು ಕೆಲಸ ಕಳೆದುಕೊಳ್ಳಬಹುದಾದಷ್ಟು ನಿಶಬ್ದತೆ ... ತಿಳಿ ನೀಲಿ ಪೋಲ್ಕಾ ಫ್ರಾಕ್ ತೊಟ್ಟು ಮಂಚದ ಮೇಲೆ ಹತ್ತು ಸುತ್ತು ಮಲ್ಲಿಗೆಯ ತೂಕದ ರಾಜಕುಮಾರಿ ಮಲಗಿದ್ದಳು. ಸಾಮಾನ್ಯವಾಗಿ ಏಳು ಸುತ್ತಿನ ಮಲ್ಲಿಗೆಗೆ ಹೋಲಿಸಲ್ಪಡುವ ರಾಜಕುಮಾರಿ ಗರ್ಭಿಣಿಯಾಗಿದ್ದರಿಂದ ಮೂರು ಸುತ್ತು ಜಾಸ್ತಿ ಇದ್ದಳು. ಅತಿ ಸರಳ ಉಡುಗೆ ತೊಟ್ಟ ರಾಜಕುಮಾರ, ಗದ್ದುಗೆಯಲ್ಲಿ ಕೂರಲು ನಿಂತವರ ಸಾಲಿಗೆ ಹೊಸ ಸೇರ್ಪಡೆಯನ್ನು ಎದುರುಗೊಳ್ಳಲು ಕಾತುರನಾಗಿದ್ದ.

 

ಮಗು mute’ನಲ್ಲಿ ಇದ್ದುದರಿಂದ ಹೊರಬಂದ ಕೂಡಲೆ ಬರೀ vibrate ಆಯಿತು ... ಮಗು ಅಳುವುದಕ್ಕೆ ಇನ್ನೂ ಸಮಯ ಇದ್ದುದರಿಂದ ಬರೀ ವೈಬ್ರೇಟ್ ಆಯಿತು ಅಷ್ಟೆ. ಟೈಮ್ ಟೇಬಲ್ ಪ್ರಕಾರ. ನಿಗದಿತ ಸಮಯಕ್ಕೆ ಕ್ಷೀಣ ದನಿಯಲ್ಲೊಮ್ಮೆ ಅತ್ತು ಅಮ್ಮನತ್ತ ತಿರುಗಿ ’ಹಾಯ್’ ಎಂದಿತು. ಅಷ್ಟು ಮಾತ್ರ ಅತ್ತಿದ್ದರಿಂದ ಮೊದಲ ಅಳು ರೆಕಾರ್ಡ್ ಆಗದ ಕಾರಣ, ಐ-ಪ್ಯಾಡ್ ಮೇಲೆ ಮಗುವಿನ ಅಳುವಿನ ಆಪ್ ಓಡಿಸಿ, ಅದನ್ನೇ ರೆಕಾರ್ಡ್ ಮಾಡಿದರು. ಹೊರಗೆ ಕಾದಿದ್ದ ರಾಜಕುಮಾರನ ಬಳಿ ಬಂದ ಆಸ್ಪತ್ರೆ ಉನ್ನತ ಅಧಿಕಾರಿ On behalf of the St.Mary's hospital, we wish you our Heartiest Congratulations Mr.William ಅಂದರು.

 

ಮಹಾರಾಣಿಯರೊಡನೆ ಅಪಾಯಿಂಟ್ಮೆಂಟ್ ತೆಗೆದುಕೊಂಡು ಖುದ್ದಾಗಿ ರಾಜಕುಮಾರನೇ ಮಾತನಾಡಿ ವಿಷಯವನ್ನು ಅರುಹಿದ. ರಾಜಮರ್ಯಾದೆಯಲ್ಲಿ ಶಿಸ್ತಾಗಿ ದಿರುಸು ಧರಿಸಿದ್ದ ದೂತನೊಬ್ಬ ಹೊರಗೆ ಕಾದಿದ್ದ ಜನತೆಗೆ ಸುದ್ದಿ ತಿಳಿಸಿದ. ರಾಜಕುಮಾರಿಯ ಹುಟ್ಟೂರಿನ ಚರ್ಚಿನಲ್ಲಿ ನಲವತ್ತೈದು ನಿಮಿಷಗಳ ಕಾಲ ಘಂಟೆಯ ನಿನಾದ ಮೊಳಗಿತ್ತು ...

 

ರಾಜಕುಮಾರಿಯ ಆಪ್ತಸಖಿಗೆ ಮಾತ್ರ ಮುಖದ ಮೇಲೆ ಕಂಡೂ ಕಾಣದಂತೆ ಚಿಂತೆಯ ಸಣ್ಣಗೆರೆಯೊಂದು ಮೂಡಿತ್ತು ... ರಾಜಕುಮಾರಿಯು ಮಗುವಿನ ಲಾಲನೆ ಪಾಲನೆಯಲ್ಲಿ ಮುಳುಗುವುದನ್ನು ಕಂಡು ಎಲ್ಲಿ ಆಕೆಯ ಪ್ರೀತಿಯ ನಾಯಿಮರಿಗೆ ಈರ್ಷೆ ಮೂಡುತ್ತದೋ ಏನೋ ಎಂದು !!!

 

ಇರಲಿ ...

 

ನಾಲ್ಕೂ ಮಕ್ಕಳು ಒಂದೇ ದಿನದಲ್ಲಿ, ಒಂದೇ ಘಳಿಗೆಯಲ್ಲಿ ಹುಟ್ಟಿಬಂದರೂ, ಅವರವರ ಜನ್ಮದಾತರ ಯೋಗ್ಯತಾನುಸಾರ ಭೂಮಿಯಲ್ಲಿ ತಮ್ಮ ಬರುವಿಕೆಯನ್ನು ಪ್ರಕಟಪಡಿಸಿದ್ದಾರೆ ... ಮುಂದೆ ತಾವು ಬೆಳೆದು ದೊಡ್ಡವರಾದಾಗ ಏನೇನಾಗಿರುತ್ತಾರೆ ಎಂಬೋದು ಅವರವರ ಪೂರ್ವಕರ್ಮಫಲಾನುಸಾರ ಆಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ ... ನೀವೇನಂತೀರಾ ?

 

Comments

Submitted by venkatb83 Fri, 07/26/2013 - 12:44

In reply to by kavinagaraj

"ಮಗು ಹುಟ್ಟೈತೆ ಅಂತ ಸಂಭ್ರಮ ಪಡ್ತಾ ಕುಂತ್ರೆ, ಗಾರೆ ಕೆಲ್ಸದಿಂದ ಬರೋ ದುಡ್ಡು ಯಾರೆ ಕೊಡ್ತಾರೆ ?" ಭಲ್ಲೆ ಅವರೇ ಒಂದು ಸಿನೆಮ ೩ ಕಥೆ - ೬ ಕಥೆ - ೯ ಕಥೆ - ೧೨ ಕಥೆ ನೋಡಿದ್ದೇ . ಇಲ್ಲಿ ಅದೇ ಅನುಭವ ಆಯ್ತು. ನಾ ಚಿಕ್ಕವನಾಗಿದ್ದಾಗ ಮಗು ಹುಟ್ಟುವ ಅದ್ಕೆ ಹೆಸರಿಡುವ ಸಂಭ್ರಮ ಹೇಳೋ ಆಗಿಲ್ಲ , ಆದ್ರೆ ಈಗೀಗ ಹೆರಿಗೆ ನೋವು ಶುರು ಆದ ಕೂಡಲೇ - ಗರ್ಬಿಣಿ ಆಗುವುದಕ್ಕಿಂತ ಮುಂಚೆಯೇ ಹುಟ್ಟುವ ಮಗುವಿಗೆ -ಆಪರೇಷನ್ನಿಗೆ(ಖಾಸಗಿ ಆಸ್ಪತ್ರೆಗಳು ಮೊದಲು ಹೇಳೋದೇ ಪ್ರಾಬ್ಲಮ್ ಇದೆ -ಆಗುತೆತ್ ಆಪರೇಶನ್ ಮಾಡಿ ಮಗು ತೆಗೆಯಬೇಕು) ಆರೈಕೆಗೆ ಹಣ ಹೊಂದಿಸಬೇಕು.. . -ಬಡ - ಮಧ್ಯಮ -ಶ್ರೀಮಂತ ವರ್ಗದ ಪೋಷಕರ ಮನದಾಳದ ಭಾವಗಳ -ಆ ಸನ್ನಿವೇಶಗಳನ್ನು ಅವರೆಲ್ಲರೂ ಅವರದೇ ರೀತಿಯಲ್ಲಿ ನಿಭಾಯಿಸುವ - ಅದಕ್ಕೆ ಪ್ರತಿ ಸ್ಪಂದಿಸುವ ಕುರಿತು ನೀವ್ ಬರೆದ ಶೈಲಿ ಸೂಪರ್ .. ಸುಬ್ಬ ಈಗ ಗಂಡು ಮಗುವಿನ ತಂದೆ ಆದ - ಅದ್ಕೆ ನಮಗೆಲ್ಲ ಪಾರ್ಟಿ ಕೊಡುವನೆ ? ಉಂಡಾಡಿ ಗುಂಡ ಸುಬ್ಬ ಮದ್ವೆ ಆಗಿದ್ದು ಯಾವಾಗ ? ನಮಗೂ ಹೇಳಿಲ್ಲ ..!! ನಮ್ಮ ಸುಬ್ಬನನ್ನು ನಿಮ್ಮೆಲ್ಲರ ಮುಂದೆ ಶೀಘ್ರದಲ್ಲಿ ಕರೆ ತರುವೆ .. ಶುಭವಾಗಲಿ \।
Submitted by bhalle Fri, 07/26/2013 - 18:37

In reply to by venkatb83

ಧನ್ಯವಾದಗಳು ಸಪ್ತಗಿರಿವಾಸಿಗಳೇ ... ನಾಲ್ಕು ಕಥೆಗಳ ’ಮಲ್ಟಿ ಸ್ಟಾರ್’ ಸಿನಿಮಾ ಖಂಡಿತ ಮಾಡಬಹುದು ... ನನ್ನ ಮೂಲ ಆಲೋಚನೆಯಲ್ಲಿ ಇಲ್ಲಿಂದ ಇಪ್ಪತ್ತೈದು ವರ್ಷಗಳ ನಂತರ ಈ ನಾಲ್ಕೂ ಮಕ್ಕಳು ಒಂದೆಡೆ ಸೇರಬಹುದಾದ ಸನ್ನಿವೇಶ ಊಹಿಸಿದ್ದೆ ... ಆದರೆ ರಾಜಮನೆತನದ ನೈಜ ಪಾತ್ರವೂ ಇದ್ದುದರಿಂದ, ಮತ್ತೊಬ್ಬರ ಭವಿಷ್ಯ ಬರೆಯಲು ನಾನ್ಯಾರು ಎಂದುಕೊಂಡು ಸುಮ್ಮನಾದೆ .... ಸುಬ್ಬನಿಗೆ ಮಗು ಆಯ್ತು ... ಮದುವೆ ಆಗಿದ್ದು ಯಾವಾಗ ಅಂತ ತಲೆಕೆಡಿಸಿಕೊಳ್ಳಬೇಡಿ they are mutually exclusive events :-))))))
Submitted by ಗಣೇಶ Mon, 07/29/2013 - 23:21

In reply to by bhalle

:) :) ಸೂಪರ್ ಭಲ್ಲೇಜಿ, ಸಿದ್ದನ ಮಗು "ಕರ್ಣ ಕಠೋರವಾಗಿ "ಕ್ವಾ ಕ್ವಾ ಕ್ವಾ" ಅನ್ನೋ ಶಬ್ದ..." ಮಾಧವನ ಮಗು "ಮಗುವಿನ ಸುಶ್ರಾವ್ಯ ಅಳುವಿನ ದನಿ ತೂರಿಬಂತು " ಲ್ಯಾಪ್ ಟಾಪ್ ಮಗುವಿನ ಸದ್ದೇ ಇಲ್ಲಾ!? ರಾಜ ಕುವರ "... ಐ-ಪ್ಯಾಡ್ ಮೇಲೆ ಮಗುವಿನ ಅಳುವಿನ ಆಪ್ ಓಡಿಸಿ, ಅದನ್ನೇ ರೆಕಾರ್ಡ್ ಮಾಡಿದರು." :) :) >>>ಮತ್ತೊಬ್ಬರ ಭವಿಷ್ಯ ಬರೆಯಲು ನಾನ್ಯಾರು ಎಂದುಕೊಂಡು ಸುಮ್ಮನಾದೆ .... ಅಲ್ಲಿ ಮಗು ಹುಟ್ಟಿದಾಗಲೇ ಇಲ್ಲಿ ಟಿವಿಯಲ್ಲಿ+ ಪತ್ರಿಕೆಯಲ್ಲಿ ಆ ಮಗುವಿನ ಭವಿಷ್ಯ ಎಲ್ಲಾ ಜ್ಯೋತಿಷಿಗಳು ಹೇಳಿ ಆಗಿದೆ. ಇನ್ನು ಮಗುವಿಗೆ ಏನೂ ಕೆಲಸವಿಲ್ಲ. :)
Submitted by bhalle Tue, 07/30/2013 - 02:16

In reply to by ಗಣೇಶ

ಮಗುವಿನ ಅಳುವಿನಲ್ಲೇ ಆ ಮಕ್ಕಳ ಹೆತ್ತವರ ಸ್ಟೇಟಸ್ ತಿಳಿಸುವ ವಿಧಾನ :-) ಭಾವನೆಗಳಿಗೆ ಸ್ಥಳವಿಲ್ಲ ಮನೆಯಲ್ಲಿ ಅತ್ತೇನು ಪ್ರಯೋಜನ ಎಂದು ಲ್ಯಾಪ್ಟಾಪ್ ಮಗುವನ್ನ ಅಳಿಸಲಿಲ್ಲ ... ತಾನು ಅಳದಿದ್ದರೆ ಬಡಿದು ಅಳಿಸಬೇಕಾಗುತ್ತದೆ,ಹಾಗಾದಲ್ಲಿ ರಾಜಮನೆತನದ ಮಗುವನ್ನ ಬಡಿದಳು ಎಂಬ ಅಪವಾದ ಆಕೆಗೆ ಬೇಡ ಎಂಬ ಮನೋಭಾವ ತಳೆದ ಆ ಮಗು ಸುಮ್ಮನೆ ಕೊಯ್ ಅಂದಿತು :-)
Submitted by gopinatha Sat, 07/27/2013 - 09:17

ವಾಹ್ ಭಲ್ಲೆಯವರೇ ನಿಜ ಮಕ್ಕಳು ಹುಟ್ಟುವ ನಿಜದಲ್ಲೇ ಎಷ್ಟು ವಿಷಯಗಳು ಅಡಗಿರುತ್ತವೆ ಆಫೀಸಿನಲ್ಲೊಮ್ಮೆ ಸರ್ದಾರ್ಜಿ ನನಗೆ ಮಗ ಹುಟ್ಟಿದ ಅಂತ ಎಲ್ಲಾ ಮರೆತು ಕೂಗಿದ್ದಕ್ಕೆ ನಿನ್ನಪ್ಪನೈಗೂ ಅವನಪ್ಪನಿಗೂ ಮಕ್ಕಳೇ ಹುಟ್ಟಿದ್ದು ಅಂತ ಬಾಸ್ ’ಗುಟುರು ಹಾಕಿದ್ದು ನೆನಪಿಗೆ ಬಂತು
Submitted by bhalle Mon, 07/29/2013 - 21:25

In reply to by gopinatha

ಧನ್ಯವಾದಗಳು ಗೋಪೀನಾಥರೇ ... ಹ ಹ ಹ ... ಹುಟ್ಟಿನಲ್ಲೇ ಇಷ್ಟು ವಿಷಯಗಳು ಅಡಗಿದ್ದು ಬೆಳೆದಂತೆ ಇನ್ನೂ ಕಾಂಪ್ಲಿಕೇಟೆಡ್ ಆಗುತ್ತೆ :-)
Submitted by nageshamysore Sat, 07/27/2013 - 10:01

ಒಂದೆ ಸೃಷ್ಟಿ, ಹತ್ತು ಹಲವು ವಿಭಿನ್ನ ದೃಷ್ಟಿ - ಚೆನ್ನಾದ 'ಜೀವಸೃಷ್ಟಿ ಘಟನಾಸಂಕರ' ಭಲ್ಲೆಯವರೆ :-)
Submitted by bhalle Mon, 07/29/2013 - 21:26

In reply to by nageshamysore

ಒಂದು ಸೃಷ್ಟಿಯಾದರೂ ಬೇರೆ ಬೇರೆ ಬ್ಯಾಚ್’ಗಳು ... ಕೆಲವು effective ಆಗುತ್ತವೆ ಹಲವು defective ಆಗುತ್ತವೆ ... ಇದು ಸೃಷ್ಟಿ ರಹಸ್ಯ ಅಲ್ಲವೇ ನಾಗೇಶರೇ? ...
Submitted by hariharapurasridhar Tue, 07/30/2013 - 08:07

In reply to by bhalle

ಅಬ್ಭಾ! ಸೊಗಸಾಗಿದೆ ನಿಮ್ಮ ತುಲನಾ ಕೌಶಲ. ನಮ್ಮೂರಲ್ಲಿ ಕಾಳಿ ಎಂಬಾಕೆ ಹೆರಿಗೆ ಮಾಡ್ತಿದ್ಲು. ಅವಳ ನೆನಪಾಯ್ತು.ಜೊತೆಗೇ ನಮ್ಮಮ್ಮ ನನ್ನ ಹೆತ್ತ ದಿನದ ಕಥೆ ಹೇಳ್ತಿದ್ರು ಅದೂ ನೆನಪಾಯ್ತು. ನಾನು ಭೂಮಿಗೆ ಬಂದ ದಿನ ಬೆಳಿಗ್ಗೆ ನಮ್ಮಮ್ಮ ಊರಮುಂದಿನ ಕೆರೆಗೆ ಹೋಗಿ ಬಟ್ಟೆ ಒಗೆದುಕೊಂದು ಬಂದು ,ಅಡಿಗೆ ಮಾಡಿ ಮನೆಯವರಿಗೆಲ್ಲಾ ಬಡಿಸಿ ಎಲ್ಲರ ಊಟವಾದಮೇಲೆ ತಾನು ಊಟಮಾದದೆ ನನ್ನನ್ನು ಹಡೆದ ಕಥೆ ಅವಳಬಾಯಿಂದ ಕೇಳುವಾಗ ನಾನು ಕಣ್ಣೀರಿಟ್ಟಿದ್ದೆ.ಇಂದಿನ ದಿನಗಳಲ್ಲಿ ಒಳ್ಳೆ ನಕ್ಷತ್ರ ತಿಥಿ ನೋಡಿ ಹೊಟ್ಟೆ ಕೊಯ್ದು ಮಗುವನ್ನು ಹೊರತೆಗೆಸುವ ಮೂರ್ಖರ ನೆನಪೂ ಆಯ್ತು.!!
Submitted by hariharapurasridhar Tue, 07/30/2013 - 08:07

In reply to by bhalle

ಅಬ್ಭಾ! ಸೊಗಸಾಗಿದೆ ನಿಮ್ಮ ತುಲನಾ ಕೌಶಲ. ನಮ್ಮೂರಲ್ಲಿ ಕಾಳಿ ಎಂಬಾಕೆ ಹೆರಿಗೆ ಮಾಡ್ತಿದ್ಲು. ಅವಳ ನೆನಪಾಯ್ತು.ಜೊತೆಗೇ ನಮ್ಮಮ್ಮ ನನ್ನ ಹೆತ್ತ ದಿನದ ಕಥೆ ಹೇಳ್ತಿದ್ರು ಅದೂ ನೆನಪಾಯ್ತು. ನಾನು ಭೂಮಿಗೆ ಬಂದ ದಿನ ಬೆಳಿಗ್ಗೆ ನಮ್ಮಮ್ಮ ಊರಮುಂದಿನ ಕೆರೆಗೆ ಹೋಗಿ ಬಟ್ಟೆ ಒಗೆದುಕೊಂದು ಬಂದು ,ಅಡಿಗೆ ಮಾಡಿ ಮನೆಯವರಿಗೆಲ್ಲಾ ಬಡಿಸಿ ಎಲ್ಲರ ಊಟವಾದಮೇಲೆ ತಾನು ಊಟಮಾದದೆ ನನ್ನನ್ನು ಹಡೆದ ಕಥೆ ಅವಳಬಾಯಿಂದ ಕೇಳುವಾಗ ನಾನು ಕಣ್ಣೀರಿಟ್ಟಿದ್ದೆ.ಇಂದಿನ ದಿನಗಳಲ್ಲಿ ಒಳ್ಳೆ ನಕ್ಷತ್ರ ತಿಥಿ ನೋಡಿ ಹೊಟ್ಟೆ ಕೊಯ್ದು ಮಗುವನ್ನು ಹೊರತೆಗೆಸುವ ಮೂರ್ಖರ ನೆನಪೂ ಆಯ್ತು.!!
Submitted by bhalle Tue, 07/30/2013 - 08:16

In reply to by hariharapurasridhar

ಧನ್ಯವಾದಗಳು ಶ್ರೀಧರರೇ ನಿಜ ... ತಿಥಿ ವಾರ ನೋಡುವವರು ಒಂದು ಪರಿಯಾದರೆ, ೧/೧/೨೦೦೦, ೮/೮/೦೮ ಇಂತಹ ದಿನಗಳಲ್ಲಿ ಬಲವಂತವಾಗಿ ಸಿಸೇರಿಯನ್ ಮಾಡಿಸಿಕೊಂಡು ಹೆತ್ತವರು ಇದ್ದಾರೆ :-)
Submitted by bhalle Tue, 07/30/2013 - 22:30

ಹಿರಿಯ ಸಂಪದಿಗರು ಮತ್ತು ಪ್ರಿಯಮಿತ್ರರಾದ ಮಧುಸೂದನ ಪೆಜತ್ತಾಯರು ಹೀಗೆನ್ನುತ್ತಾರೆ: -------------- ಭಲ್ಲೇ ಜೀ! ಹುಟ್ಟು ಒಂದು ವಿಸ್ಮಯ! ಅವರವರ ಕರ್ಮಾನುಸಾರ ಅವರಿಗೆ ಬರೆದ ಅಂತಸ್ತಿನಲ್ಲಿ ಮಗುವಿನ ಜನನ ಆಗುತ್ತದೆ. ರಾಜಕುಮಾರನ ಮಗುವಾಗಲೀ ಗಾರೆಕೆಲಸದವನ ಮಗುವಾಗಲೀ ಹುಟ್ಟುವಾಗ ಒಂದೇ ಮಾಡೆಲ್! ಯಾವ ಬದಲಾವಣೆಯೂ ಇಲ್ಲ. ಬೀದಿಯಲ್ಲಿ ಆಡುತ್ತಾ ಇದ್ದ ಚಂದ್ರಹಾಸ ಚಕ್ರವರ್ತಿ ಆದನಂತೆ! ಅರಸೊತ್ತಿಗೆಯಲ್ಲಿ ಹುಟ್ಟಿದವನೂ ಹೊಟ್ಟೆ ಪಾಡಿಗೆ ದುಡಿಯ ಬೇಕಾಗಬಹುದು. ಎಲ್ಲವೂ ಆ ವಿಧಾತನ ಇಚ್ಛೆ ಅಲ್ಲವೇ? ಈ ರೀತಿ ಮಿಡಿಯಿತು ನನ್ನ ಮನ. ಲೇಖನ ಇಷ್ಟ ಆಯಿತು. Yes! This is the irony of life. ಕಾಮೆಂಟ್ ಬ್ಲಾಗಿನಲ್ಲಿ ಏರಿಸಲು ಗೊತ್ತಾಗಲಿಲ್ಲ. ಕ್ಷಮಿಸಿ. ಪ್ರೀತಿಯಿಂದ ಪೆಜತ್ತಾಯ
Submitted by Vasant Kulkarni Tue, 08/06/2013 - 09:25

ಸುಂದರ ಲೇಖನ ಭಲ್ಲೆ ಅವರೆ, ತುಂಬಾ ಹಿಡಿಸಿತು. ಎಲ್ಲ ವರ್ಗಗಳ ತುಮುಲವನ್ನು ಚೆನ್ನಾಗಿ ಬಣ್ಣಿಸಿದ್ದೀರಿ.